Dec 31, 2009

ಡಾ||ವಿಷ್ಣು ಎಂದರೆ ಆ ಭಗವಂತನಿಗೂ ಪ್ರಿಯ...!


"ನಾನು ಸಾಧ್ಯವಾದ ಮಟ್ಟಿಗೆ ಕಡಿಮೆ ಸುಳ್ಳು ಹೇಳೋದನ್ನ, ಹೆಣ್ಣಿಗೆ-ಮಣ್ಣಿಗೆ ಗೌರವ ಕೊಡೋದನ್ನ, ಸಾಧ್ಯವಾದ ಮಟ್ಟಿಗೆ ಬೇರೆಯವರ ನೋವುಗಳಿಗೆ ಸ್ಪಂದಿಸೋದನ್ನ ಕಲಿತದ್ದು ಅವರು ಅಭಿನಯಿಸಿದ ಚಿತ್ರಗಳಿಂದಲೇ. ನನ್ನ ಬಹುಪಾಲು ಒಳ್ಳೆಯತನಗಳಿಗೆ ಅವರ ಚಿತ್ರಗಳು, ಅವರ ಅಭಿನಯವೇ ಪ್ರೇರಣೆ, ಸ್ಫೂರ್ತಿ"


ಹೀಗಂತ ಹೇಳುವವರು ಸಾಕಷ್ಟು ಜನ ಇದ್ದಾರೆ. ಪ್ರತ್ಯಕ್ಷ ಆಚರಣೆಯಲ್ಲಿ ಇಟ್ಟುಕೊಂಡಿರುವವರೂ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಇದು ಖಂಡಿತ ಅತಿಶಯೋಕ್ತಿಯಲ್ಲ, ವಾಸ್ತವ. ಆದರೆ ಅವರಿಗೆ ಯಾವುದೇ ಪ್ರಚಾರ, ಶಹಬ್ಬಾಸ್ ಗಿರಿ ಇವ್ಯಾವುದೂ ಬೇಕಿಲ್ಲ ಅಷ್ಟೇ...!

ಅವರು ಮಾಡುವ, ಕ್ಷಮಿಸಿ, ಮಾಡುತ್ತಿದ್ದ ಪಾತ್ರಗಳು ಹಾಗು ಆ ಪಾತ್ರಗಳ ಅವರ ಅಭಿನಯ ಎಂಥವರ ಹೃದಯವನ್ನೂ ಮುಟ್ಟದೇ ಇರಲು ಸಾಧ್ಯವೇ ಇರಲಿಲ್ಲ. ಚಿತ್ರದಲ್ಲಿ ಅವರ ಕಣ್ಣಿನಲ್ಲಿ ನೀರು ಬರುತ್ತಿದ್ದರೆ ನೋಡುವವರ ಕಣ್ಣಿನಲ್ಲೂ ಅತ್ಯಂತ ಸಹಜವಾಗಿಯೇ ನೀರು ಬರುತ್ತಿತ್ತು, ಬರುವಂತೆ ಮಾಡುತ್ತಿತ್ತು ಅವರ ಮನೋಜ್ಞ ಅಭಿನಯ.


ಕನ್ನಡ ಚಿತ್ರರಂಗ ಕಂಡ ಅತ್ಯಂತ ಸಜ್ಜನ ಸ್ವಭಾವದ, ಉತ್ತಮ ಚಾರಿತ್ರ್ಯವಿದ್ದಂತಹ, ಸಮಾಜದ ಬಗೆಗೆ ಕಾಳಜಿ ಇದ್ದಂತಹ, ಅತ್ಯುತ್ತಮ ನಟನಾ ಕೌಶಲವಿದ್ದಂತಹ, ವೈಯಕ್ತಿಕ ಜೀವನದಲ್ಲೂ ಉತ್ತಮ ನಡವಳಿಕೆ ಹೊಂದಿದ್ದಂತಹ, ವಿವಾದಾತೀತ ನಾಯಕ ನಟ, ಕರ್ನಾಟಕದ ಸುಪುತ್ರ ಕನ್ನಡ ಚಿತ್ರರಂಗದ ಸಾಹಸಸಿಂಹ, ಕೋಟಿಗೊಬ್ಬ, ಡಾವಿಷ್ಣುವರ್ಧನ್ ಆಲಿಯಾಸ್ ಸಂಪತ್ ಕುಮಾರ್.....!

ಅವರ ಯಾವ ಚಿತ್ರವೂ ಯಾರ ಮನಸ್ಸಿನ ಮೇಲು ನಕಾರಾತ್ಮಕವಾಗಿ ಪರಿಣಾಮ ಬೀರಲು ಸಾಧ್ಯವಿರಲಿಲ್ಲ. ಆ ರೀತಿಯಲ್ಲಿ ಅವರ ಪಾತ್ರದ ಆಯ್ಕೆ, ಅವರ ಅಭಿನಯವಿರುತ್ತಿತ್ತು.

ಅವರ 'ವೀರಪ್ಪನಾಯ್ಕ' ಚಿತ್ರದ ಅಭಿನಯ ನೋಡುವವರಲ್ಲಿ ದೇಶಭಕ್ತಿಯ ಜಾಗೃತಿಯನ್ನು ಉಂಟುಮಾಡುತ್ತದೆ, ಅವರ 'ಸೂರ್ಯವಂಶ' ಚಿತ್ರ 'ನಮಗೆ ದ್ರೋಹ ಮಾಡಿದವರಿಗೂ ನಾವು ಒಳ್ಳೆಯದೇ ಬಯಸಬೇಕು' ಎಂದು ಆಶಿಸುವಂತೆ ಮಾಡುತ್ತದೆ, ಅವರ 'ಕರ್ಣ' ಚಿತ್ರವಂತೂ ಅದ್ಭುತ ಪ್ರೇರಣೆ ನೀಡುತ್ತದೆ. ಉತ್ತಮ ಸಾಮಾಜಿಕ ಕಳಕಳಿಯೊಂದಿಗೆ ನಿರ್ಮಾಣವಾದ ಅವರ 'ಸಿರಿವಂತ' ಚಿತ್ರ ನೋಡುವವರನ್ನು ಸಮಾಜಕ್ಕೆ ಆಸ್ತಿಯನ್ನಾಗಿ ಮಾಡುವತ್ತ ಪ್ರಾಮಾಣಿಕ ಪ್ರಯತ್ನ ಮಾಡುತ್ತದೆ. ಅತ್ಯಂತ ಹೆಚ್ಚು ಉತ್ತಮ ಚಿತ್ರಗಳಲ್ಲಿ ನಟಿಸಿದವರಲ್ಲಿ ರಾಜಕುಮಾರ್ ಅವರನ್ನು ಹೊರತು ಪಡಿಸಿದರೆ, ನಂತರದ ಸ್ಥಾನ ನಮ್ಮ ವಿಷ್ಣುವರ್ಧನ್. ಆದರೆ ಚಿತ್ರ ನೋಡುವವರ ಸಾಮಾಜಿಕ ಶಿಕ್ಷಣದ ಕಳಕಳಿ ಹೊತ್ತ ಅತ್ಯಂತ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ ನಟರಲ್ಲಿ ವಿಷ್ಣುವರ್ಧನ್ ರವರೇ ಮೊದಲಿಗರು.


ಅಂತಹ ಅದ್ಭುತ ನಾಯಕ ನಟ ಇಂದು ನಮ್ಮನ್ನೆಲ್ಲ ಅಗಲಿದ್ದಾರೆ. ಒಳ್ಳೆಯವರನ್ನ ಕಂಡರೆ ಆ ಭಗವಂತನಿಗೂ ಪ್ರಿಯ. ಆ ಕಾರಣಕ್ಕಾಗಿಯೇ ನಮ್ಮ ವಿಷ್ಣುವನ್ನು ಸಾಕಷ್ಟು ಬೇಗ ಭಗವಂತ ತನ್ನ ಬಳಿಗೆ ಕರೆದೊಯ್ದಿದ್ದಾನೆ.


ದೇಶದ ಉತ್ತಮ ಪ್ರಜೆಯನ್ನ, ಸಮಾಜದ ಒಳ್ಳೆಯ ವ್ಯಕ್ತಿಯನ್ನ, ಚಿತ್ರರಂಗದ ಅದ್ಭುತ ನಟನನ್ನ, ನಮ್ಮೆಲ್ಲರ ಆಸ್ತಿಯನ್ನ ನಾವು ಕಳೆದುಕೊಂಡಿದ್ದೇವೆ.

ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸೋಣ.

ಇಂತಹ ಸಮಯವನ್ನೂ ಸ್ವಾರ್ಥಕ್ಕಾಗಿ ಬಳಸಿಕೊಳ್ಳುವ, ಸಮಾಜದಲ್ಲಿ ಶಾಂತಿಯನ್ನು ಕದಡುವ ರಾಜಕೀಯ 'ನಾಯಿ'ಗಳಿಗೂ ಆ ಭಗವಂತ ಒಳ್ಳೆ ಬುದ್ಧಿ ಕೊಡಲಿ ಎಂದು ಆ ದೇವರಲ್ಲಿ ಪ್ರಾರ್ಥಿಸೋಣ. .
ಸಾವು ಕಟ್ಟಿಟ್ಟ ಬುತ್ತಿಯಾದರೂ ಎದುರಿಸುವುದು ಅಷ್ಟು ಸುಲಭವಲ್ಲ.
ಹರೇ ರಾಮ ...
---

Nov 26, 2009

ಭಾಷಾಭಿಮಾನ 'ದೇಶಾಭಿಮಾನ'ಕ್ಕೆ ಸ್ಪೂರ್ತಿಯಲ್ಲವೇ?


'ನಾನು ಮುಂಬೈನವ ಎಂಬುದಕ್ಕಿಂತ ಮೊದಲು ನಾನು ಭಾರತೀಯ' ಎಂದು ಯಾರಾದರೂ ಹೇಳಿದರೆ, ಹೇಳಿದವನು ಬಹುಶಃ ದೇಶಕ್ಕೊಸ್ಕರವೇ ಹುಟ್ಟಿದವನಿರಬೇಕು, ದೇಶಸೇವೆಯಲ್ಲೇ ಸದಾ ಮುಳುಗಿರುವವನಿರಬೇಕು, ದೇಶವಾಸಿಗಳೆಂದರೆ ಎಲ್ಲಿಲ್ಲದ ಅಭಿಮಾನವನ್ನು ಇಟ್ಟುಕೊಂಡಿರುವವನಿರಬೇಕು ಎಂದೆಲ್ಲ ಕೆಲವರಿಗೆ ಅನಿಸಬಹುದು. ಅಥವಾ ಅವನೊಬ್ಬ 'ಸೇನಾಯೋಧ' ಎಂದೂ ಕೆಲವರಿಗೆ ಅನಿಸುವ ಸಾಧ್ಯತೆಗಳಿವೆ!.

ಆದರೆ ಮೇಲಿನ ಹೇಳಿಕೆ ನೀಡಿದವ ಆ ಪರಿ ಮೂರ್ಖನಲ್ಲ ಬಿಡಿ!

ಸಚಿನ್ ತೆಂಡೂಲ್ಕರ್, ಹೆಸರು ಕೇಳಿದರೆ ಇಡೀ ಕ್ರೀಡಾ ಜಗತ್ತು ಕಾತುರವಾಗುತ್ತದೆ. ಜನ ಅವನ ಆಟಕ್ಕೋಸ್ಕರ ಮುಗಿಮುಗಿದು ಬಿಳುತ್ತಾರೆ. 'ವಿಶ್ವ ದಾಖಲೆ'ಗಳ ಸರದಾರ ಎಂದು ಕೊಂಡಾಡುತ್ತಾರೆ. ಮನೆಯಲ್ಲೆಲ್ಲ ಅವನ ಫೋಟೋಗಳನ್ನಿಟ್ಟು ಪೂಜಿಸುತ್ತಾರೆ. ಅಭಿಮಾನದಿಂದ ಬೀಗುತ್ತಾರೆ. 'ನಮ್ಮ ಸಚಿನ್' ಎಂದು ಮನೆಮಗನ ಹುಟ್ಟಿದಬ್ಬದಂತೆ ಅವನ ಹುಟ್ಟಿದಬ್ಬವನ್ನು ಸಂಭ್ರಮದಿಂದ ಆಚರಿಸುವವರಿದ್ದಾರೆ. ಅವನ ಆಟದ ವಿಷಯದಲ್ಲಿ ಅವನು ವಿಶ್ವಶ್ರೇಷ್ಠ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಈ ಮಾತ್ರಕ್ಕೆ ಅವನನ್ನು ದೇಶದ ಮಹಾನ್ ವ್ಯಕ್ತಿಯಂತೆ, ದೇಶಕ್ಕೆ ಸಿಕ್ಕಾಪಟ್ಟೆ ಕೊಡುಗೆ ನೀಡಿದವನಂತೆ, ಮಹಾನ್ 'ದೇಶಭಕ್ತ'ನಂತೆ ಬಿಂಬಿಸುವುದು ಎಷ್ಟು ಸರಿ?

ಸಚಿನ್ ತೆಂಡೂಲ್ಕರ್ ನ ಮೇಲಿನ ಹೇಳಿಕೆಯ ಕುರಿತು ಯಥಾ ಪ್ರಕಾರ ಸ್ವಘೋಷಿತ ಭಾಷಾಭಿಮಾನಿಗಳು ತಮ್ಮ ಎಂದಿನ ದುರಭಿಮಾನವನ್ನು ಪ್ರದರ್ಶಿಸುತ್ತಿರುವುದು, ಪುಕ್ಕಟೆ ಪ್ರಚಾರವನ್ನು ಪಡೆಯುತ್ತಾ ಸಮಾಜದ ಸ್ವಾಸ್ಥ್ಯವನ್ನು ಹಾಳುಮಾಡುತ್ತಿರುವುದು ದುರದೃಷ್ಟವೇ ಸರಿ.

'ನಮ್ಮ ಗ್ರಾಮ', 'ನಮ್ಮ ಊರು', 'ನಮ್ಮ ಜಿಲ್ಲೆ', 'ನಮ್ಮ ಭಾಷೆ' ಎಂಬ ಅಭಿಮಾನವಿಲ್ಲದಿರುವವರಿಗೆ 'ನಮ್ಮ ದೇಶ' ಎಂಬ 'ಅಭಿಮಾನ' ಎಲ್ಲಿಂದ ಸಿಗುತ್ತದೆ, ಅದೂ ತಕ್ಷಣಕ್ಕೆ! ಎಂಬುದೇ ನನ್ನ ಪ್ರಶ್ನೆ. ಅಂದ ಮಾತ್ರಕ್ಕೆ ಭಾಷಾಭಿಮಾನದ ಹೆಸರಿನಲ್ಲಿ ಗೂಂಡಾಗಿರಿ ಮಾಡುವವರೆಲ್ಲರಿಗೂ ದೇಶಾಭಿಮಾನವಿದೆಯೆಂದಲ್ಲ. ಭಾಷೆಯ ಹೆಸರಿನಲ್ಲಿ ತಮ್ಮ ಸ್ವಾರ್ಥವನ್ನು ಈಡೇರಿಸಿಕೊಳ್ಳುವವರನ್ನು ಖಂಡಿತ ಶಿಕ್ಷಿಸಬೇಕು. ಅದರಲ್ಲಿ ಎರಡು ಮಾತಿಲ್ಲ. ಆದರೆ 'ನಮ್ಮ ಭಾಷೆ', 'ನಮ್ಮ ರಾಜ್ಯ' ಎಂಬ ಅಭಿಮಾನವಿಲ್ಲದಿರುವವನ 'ನಮ್ಮ ದೇಶ' ಎಂಬ ಅಭಿಮಾನದ ಹಿಂದಿನ ನಿಷ್ಠೆಯನ್ನು ಹೇಗೆ ತಾನೇ ನಂಬಲಾದೀತು?

ಭಾಷಾಭಿಮಾನದ, ಸ್ವರಾಜ್ಯಾಭಿಮಾನದ ಹೊರತಾಗಿ ದೇಶಾಭಿಮಾನ ಎಂದಿಗಾದರೂ ಪರಿಪೂರ್ಣತೆಯನ್ನು ಹೊಂದಲು ಸಾಧ್ಯವೇ? ಅಆಇಈ ಕಲಿಯದವನು ಕವನ ಬರೆಯಲು ಸಾಧ್ಯವೇ? ತನಗೆ ತಾನು ಪ್ರಾಮಾಣಿಕನಾಗದವನು ದೇಶಕ್ಕೆ ಹೇಗೆ ತಾನೇ ಪ್ರಾಮಾಣಿಕನಾದಾನು? ತನ್ನೂರಿಗೇ ಆಸ್ತಿಯಾಗದವ ದೇಶಕ್ಕೆ ಆಸ್ತಿಯಾದಾನೆ?

ಅಂದ ಮಾತ್ರಕ್ಕೆ ಸಚಿನ್ ರವರಿಗೆ ಭಾಷಾಭಿಮಾನದ, ಸ್ವರಾಜ್ಯಾಭಿಮಾನಗಳು ಇಲ್ಲವೆಂದಲ್ಲ. ಉಳಿದವರಿಗಿಂತ ಹೆಚ್ಚಿರಲೂಬಹುದು. ಆದರೆ ಭಾಷೆ, ರಾಜ್ಯದ ಮೇಲಿನ ಶ್ರದ್ಧಾ-ಭಕ್ತಿ-ಅಭಿಮಾನಗಳು ದೇಶಾಭಿಮಾನಕ್ಕೆ ಸ್ಫೂರ್ತಿಯಾಗಿ ಮಾರ್ಪಡುತ್ತವೆ. ಆದರೆ ಭಾಷಾಭಿಮಾನದ ಹೆಸರಿನಲ್ಲಿ ನಡೆಯುವ ಎಲ್ಲವನ್ನು ಒಪ್ಪಲು ಸಾಧ್ಯವಿಲ್ಲ. ದೇಶದ ಹಿತಕ್ಕೆ ಧಕ್ಕೆಯಾಗದಂತೆ, ದೇಶದ ಸಮಗ್ರತೆಗೆ ಚ್ಯುತಿಯಾಗದಂತೆ ಭಾಷಾಭಿಮಾನದ ಆಚರಣೆ ಖಂಡಿತ ಅವಶ್ಯವಿದೆ. ಅನಿವಾರ್ಯವೂ ಹೌದು.

Nov 8, 2009

ನಗರದ ಐಟಿ ಕಂಪೆನಿ 'ಕೆ ಪಿ ಐ ಟಿ ಕಮ್ಮಿನ್ಸ್'ನ ಸಾಮಾಜಿಕ ಕಳಕಳಿ


ನಗರದ ಕೆಲವು ಐಟಿ ಕಂಪನಿಗಳು ಉತ್ತರ ಕರ್ನಾಟಕದ ನೆರೆ ಪರಿಹಾರಕ್ಕಾಗಿ ತಮ್ಮದೇ ಆದ ಕೊಡುಗೆ ನೀಡುತ್ತಿರುವುದು ಅತ್ಯಂತ ಹರ್ಷದಾಯಕ. ಉತ್ತಮ ಸಾಮಾಜಿಕ ಕಳಕಳಿಯೊಂದಿಗೆ ಹಲವರ ನೋವುಗಳಿಗೆ ಹಾಗೂ ಪ್ರಕೃತಿ ವಿಕೋಪಗಳಿಗೆ ಸ್ಪಂದಿಸುತ್ತಿರುವ ನಮ್ಮ ದೇಶದ ಹೆಮ್ಮೆಯ ಕಂಪನಿಗಳ ಸಾಲಿಗೆ ಸೇರುವ ನಗರದ 'ಕೆಪಿಐಟಿ ಕಮಿನ್ಸ್' ಎಂಬ ಕಂಪನಿ ನೆರೆ ಪರಿಹಾರಕ್ಕಾಗಿ ತನ್ನ ಉದ್ಯೋಗಿಗಳಿಗೆ ಸಹಾಯ ಮಾಡಲು ಸೂಚಿಸಿದೆ.

ಉದ್ಯೋಗಿಗಳಿಂದ ಹಣವನ್ನು ಸಂಗ್ರಹಿಸಿ 'ಯೂತ್ ಫಾರ್ ಸೇವಾ' ಎಂಬ ಸಂಸ್ಥೆಯ ಮೂಲಕ ತನ್ನ ಕರ್ತವ್ಯವನ್ನು ನಿರ್ವಹಿಸಲು ಕಂಪನಿ ನಿರ್ಧರಿಸಿದೆ. ಈಗಾಗಲೇ ಸಂಗ್ರಹ ಕಾರ್ಯ ಆರಂಭವಾಗಿದೆ. ಸುಮಾರು 8000 ಉದ್ಯೋಗಿಗಳಿರುವ ಸಂಸ್ಥೆಯಲ್ಲಿ ಎಲ್ಲರೂ ತಮ್ಮ ತಮ್ಮ ಪಾಲಿನ ಕರ್ತವ್ಯವನ್ನು ಕಡ್ಡಾಯವಾಗಿ ನಿರ್ವಹಿಸಲಿದ್ದಾರೆ.

ಕಂಪನಿ ಈ ತರಹದ ಇನ್ನು ಕೆಲವು ಉತ್ತಮ ಕಾರ್ಯಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದೆ. ಈ ಕಾರಣಕ್ಕಾಗಿಯೇ ಕಂಪನಿ 'ವಿ - ಕೇರ್' ಎಂಬ ಉದ್ಯೋಗಿಗಳ ತಂಡವನ್ನು ಕಟ್ಟಿದೆ. ಈಗ್ಗೆ ಕೆಲವು ದಿನಗಳ ಹಿಂದೆ ನಗರದ ವೈಟ್ ಫೀಲ್ಡ್ ನಲ್ಲಿರುವ ಒಂದು ಸರ್ಕಾರಿ ಶಾಲೆಯನ್ನು ದತ್ತು ತೆಗೆದುಕೊಂಡು ಅಲ್ಲಿರುವ ಮಕ್ಕಳಿಗೆ ಮಧ್ಯಾಹ್ನದ ಭೋಜನದ ವ್ಯವಸ್ಥೆಯನ್ನು ಕಲ್ಪಿಸಲು 'ಅಕ್ಷಯ ಪಾತ್ರೆ' ಯೋಜನೆಯಡಿ ಕೈ ಜೋಡಿಸಿತ್ತು. ಈ ಕಾರಣಕ್ಕಾಗಿ ತನ್ನ ಉದ್ಯೋಗಿಗಳಿಂದ ಸಂಗ್ರಹಿಸಲ್ಪಟ್ಟ ಸುಮಾರು 3 ಲಕ್ಷ ರು.ಗಳನ್ನು ಯೋಜನೆಯಲ್ಲಿ ತೊಡಗಿಸಿದೆ.

'ಸಮರ್ಥನಂ ಟ್ರಸ್ಟ್' ಎಂಬ ಅಂಧ ಮಕ್ಕಳ ಬದುಕಿನಲ್ಲಿ ಹರ್ಷವನ್ನು ತುಂಬುವ ಸಂಸ್ಥೆಯೊಂದಿಗೆ ಕೈ ಜೋಡಿಸಿರುವ 'ಕೆಪಿಐಟಿ ಕಮಿನ್ಸ್', ಬದುಕಿನಲ್ಲಿ ಸಾರ್ಥಕತೆಯನ್ನು ಕಂಡುಕೊಳ್ಳುವ ಇಚ್ಛೆಯುಳ್ಳ ತನ್ನ ಉದ್ಯೋಗಿಗಳಿಗೆ ಉತ್ತಮ ಅವಕಾಶವನ್ನು ನೀಡಿದೆ.

ಯಾರ ನೋವಿಗೂ ಸ್ಪಂದಿಸದಿರುವ, ಆಧುನೀಕತೆಯ ಅಮಲಿನಲ್ಲಿ, ಶ್ರೀಮಂತಿಕೆಯ ಅಟ್ಟಹಾಸದಲ್ಲಿ ಮಾನವೀಯತೆಯನ್ನೇ ಮರೆಯುವ ಹಲವಾರು ಸ್ವಾರ್ಥ ವಿದೇಶೀ ಕಂಪನಿಗಳ ಮಧ್ಯೆ, ಪ್ರಚಾರಕ್ಕಾಗಿ ಟಿವಿಗಳಿಗೆ, ದಿನಪತ್ರಿಕೆಗಳಿಗೆ, ಪೋಸು ನೀಡುತ್ತ ಸಹಾಯಮಾಡುವ ಡೋಂಗಿಗಳ ಮಧ್ಯೆ, 'ಕೆಪಿಐಟಿ ಕಮಿನ್ಸ್' ಕಂಪನಿ ಎಲೆಮರೆಕಾಯಿಯಂತೆ ತನ್ನ ಕೈಂಕರ್ಯದಲ್ಲಿ ತೊಡಗಿದೆ.

ಹೀಗೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ತನ್ನ ಸಾಮಾಜಿಕ ಬದ್ದತೆಯನ್ನು ಪ್ರದರ್ಶಿಸುತ್ತ ಆ ಮೂಲಕ ಇನ್ನಿತರ ಐಟಿ ಕಂಪೆನಿಗಳಿಗೆ ಉತ್ತಮ ಮೇಲ್ಪಂಕ್ತಿಯನ್ನು ಹಾಕಿಕೊಟ್ಟಿದೆ ನಮ್ಮ 'ಕೆ ಪಿ ಐ ಟಿ ಕಮಿನ್ಸ್'.

Oct 13, 2009

ಇದೂ ಕೂಡ ಭಾರತದಲ್ಲಿ ಮಾತ್ರ ನಡೆಯಲು ಸಾಧ್ಯ

ಕೆಲವರಿಗೆ ಭಾರತದಲ್ಲಿನ ಭ್ರಷ್ಟಾಚಾರ, ಬಡತನ, ಜಾತಿ ವ್ಯವಸ್ಥೆ, ಅನಾಗರೀಕತನದ ಬಗೆಗೆ ಬರೆದು ಕಡೆಯಲ್ಲಿ ತಮ್ಮ ಬರಹವನ್ನು, 'ಇವೆಲ್ಲ ಭಾರತದಲ್ಲಿ ಮಾತ್ರ ನಡೆಯಲು ಸಾಧ್ಯ' ಎಂದು ಮುಗಿಸುವುದು ಚಟ ಹಾಗು ಅದೇ ಅವರಿಗೆ ಹೆಮ್ಮೆಯ ವಿಷಯ ಕೂಡ. ಆದರೆ ಜಗತ್ತಿನ ಬೇರೆಲ್ಲಿಯೂ ನಡೆಯದ, ಭಾರತದಲ್ಲಿ ಮಾತ್ರ ಸಾಧ್ಯವಾಗುವ ಒಳ್ಳೆಯ ಕೆಲಸಗಳು ಲೆಕ್ಕವಿಲ್ಲದಷ್ಟಿವೆ ಎಂಬುದು ಭಾರತೀಯರಿಗಿಂತ ಉಳಿದವರಿಗೇ ಹೆಚ್ಚಾಗಿ ಹಾಗು ಖಚಿತವಾಗಿ ಗೊತ್ತು.

ರಾಜ್ಯದಲ್ಲಿನ ನೆರೆ ಪರಿಹಾರಕ್ಕೋಸ್ಕರ ನಡೆಯುತ್ತಿರುವ ಪಾದಯಾತ್ರೆಗಳು ಹಾಗೂ ತತ್ಸಂಭದದ ಚಟುವಟಿಕೆಗಳ ಕುರಿತು, ಮೊನ್ನೆ ನಮ್ಮ ಸ್ನೇಹಿತರ ಜತೆಗೆ ಅಮೆರಿಕಾದಿಂದ ಬಂದಂತಹ ವ್ಯಕ್ತಿಯೊಬ್ಬರು ಅತ್ಯಂತ ಹರ್ಷದಿಂದ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದಾಗ ನಮ್ಮ ದೇಶದ ಬಗೆಗೆ ಅತೀವ ಹೆಮ್ಮೆಯಾಯಿತು.

'ನಮ್ಮ ದೇಶದಲ್ಲೂ ಹಿಂದೊಮ್ಮೆ ಪ್ರಕೃತಿ ವಿಕೋಪ ಸಂಭವಿಸಿದಾಗ ಸಹಾಯ ಕೇಳಲು ಬಂದ ಯುವತಿಯನ್ನು ಅನುಚಿತ ವರ್ತನೆಯಿಂದ ಬರ್ಬರವಾಗಿ ಕೊಲೆ ಮಾಡಿದ್ದರು. ಆ ಸಮಯದಲ್ಲಿ ಆ ಬಗ್ಗೆ ಅಳುವವರಿರಲಿ, ಚಿಂತಿಸುವವರೂ ಇರಲಿಲ್ಲ. ಅತಿಯಾದ ಅಧುನೀಕತೆ ಹಾಗು ಶ್ರೀಮಂತಿಕೆಗೊಸ್ಕರ ಮಾನವೀಯತೆಯನ್ನೇ ಬಲಿ ಕೊಡುತ್ತಿದ್ದೇವೆ ನಾವು. ನಮ್ಮಲ್ಲಿ ಕೆಲವೇ ಕೆಲವು ಜನ ಅತಿ ಹೆಚ್ಚಿನ ಹಣ ಕೊಡಬಹುದು. ಆದರೆ ಹಣ ನೀಡುವವರ, ಅದನ್ನು ತನ್ನ ಕರ್ತವ್ಯ ಎಂಬಂತೆ ಅರ್ಥೈಸಿಕೊಳ್ಳುವವರ ಸಂಖ್ಯೆ ಅಧಿಕ. ಚಪ್ಪಲಿ ಹೊಲಿಯುವವನು ಕೂಡ ತನ್ನದೇ ಆದ ಸಹಾಯ ಮಾಡುತ್ತಾನೆ. ಉಳಿದ ಎಲ್ಲ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಮಾತ್ರ ಮಾನವೀಯತೆಗೆ ಕೊರತೆಯಿಲ್ಲ. ರಿಯಲಿ ಐ ಲೈಕ್ ಯುವರ್ ಇಂಡಿಯಾ' ಎಂದಾಗ ಭಾರತ ನಿಜವಾಗಿ ಅತ್ಯಂತ ಪುಜನೀಯವಾಗಿ ಕಂಡಿತು.


ನೆರೆ ಪರಿಹಾರದಡಿಯಲ್ಲಿ ಸರ್ಕಾರ ಖುದ್ದಾಗಿ ಬೀದಿಗಿಳಿದಿದೆ. ವಿರೋಧ ಪಕ್ಷಗಳೂ ತಮ್ಮ ಎಂದಿನ ಕೆಸರೆರಚಾಟದ ಚಾಳಿಯನ್ನು ಬಿಟ್ಟು ತಾವು ಯಾರಿಗೂ ಕಡಿಮೆಯಿಲ್ಲ ಎಂಬಂತೆ ಸಂಗ್ರಹ ಕಾರ್ಯದಲ್ಲಿ ತೊಡಗಿವೆ. ಶ್ರೀಸಾಮಾನ್ಯನಿಂದ ಹಿಡಿದು ಸಂಘ-ಸಂಸ್ಥೆಗಳು, ಕೈಗಾರಿಕೋದ್ಯಮಿಗಳು, ಸಣ್ಣಪುಟ್ಟ ವ್ಯಾಪಾರಿಗಳು, ಹಾಲು ಮಾರುವವರು, ಕಸ ಗುಡಿಸುವವರು, ಪತ್ರಿಕೆ ಹಾಕುವವರು, ತರಕಾರಿ ಮಾಡುವವರು, ವಾಹನ ಚಾಲಕರಾದಿಯಾಗಿ ಎಲ್ಲರು ಕೈ ಪರಿಹಾರ ಕಾರ್ಯದಲ್ಲಿ ಕೈ ಜೋಡಿಸಿದ್ದಾರೆ. ಶಾಲೆಗೆ ಹೋಗುವ ವಿದ್ಯಾರ್ಥಿ-ವಿದ್ಯಾರ್ಥಿನಿಯರು ತಮ್ಮ ಪಾಕೆಟ್ ಮನಿಯನ್ನು ಅರ್ಪಿಸಿದ್ದಾರೆ. ಮಠಾಧಿಪತಿಗಳೂ ತಮ್ಮ ಕರ್ತವ್ಯವೆಂಬಂತೆ ಅಕ್ಷರಶಃ ರಸ್ತೆಗಿಳಿದಿದ್ದಾರೆ. ಇಡೀ ರಾಜ್ಯ ಒಕ್ಕೊರಲಿನಿಂದ ಸ್ಪಂದಿಸುತ್ತಿದೆ. ಹೇಳಿ, ಈ ರೀತಿಯ ಮಾನವೀಯತೆಯ ಮೈವೆತ್ತರೂಪ ಭಾರತದಲ್ಲಲ್ಲದೆ ಮತ್ತೆಲ್ಲಿ ಕಾಣಸಿಗುತ್ತದೆ?

ಭಾರತ ಸ್ಮರಣೀಯ ಮಾತ್ರವಲ್ಲ ಪೂಜನೀಯ ಕೂಡ.

ವಂದೇಮಾತರಂ

Sep 30, 2009

ಭಯೋತ್ಪಾದನೆ ವಿರುದ್ಧ ಯಾರ ಹೋರಾಟ ಅತಿಮುಖ್ಯ?

ಭಯೋತ್ಪಾದನೆಯಂಥ ಬೃಹತ್ ಸಮಸ್ಯೆಗಳನ್ನ ಎದುರಿಸುತ್ತಿರುವ, ಭಯೋತ್ಪಾದನೆಯ ಕಾರಣದಿಂದ ಪ್ರತಿದಿನವೂ ಮಾನವಬಲಿ ಕೊಡುತ್ತಿರುವ, ಹೀಗಾಗಿಯೂ ಸ್ವಾರ್ಥಕ್ಕೋಸ್ಕರ ಭಯೋತ್ಪಾದನೆಯ ವಿರುದ್ಧವೇ ಮೌನ ತಳೆದಿರುವ ಹಲವಾರು ರಾಜಕೀಯ ನಾಯಕರನ್ನು ಹೊಂದಿರುವ ಏಕೈಕ ರಾಷ್ಟ್ರ ಭಾರತ!

ಈಗ್ಗೆ ಕೆಲ ದಿನಗಳ ಹಿಂದೆ, ಅಮೆರಿಕದ ತಪಾಸಣಾ ಅಧಿಕಾರಿಗಳು ವಿಮಾನ ನಿಲ್ದಾಣದಲ್ಲಿ ಹಿಂದಿ ಚಿತ್ರರಂಗದ ಮೇರು ನಟ ಶಾರುಖ್ ಖಾನ್‌ರವರ ಜತೆ ನಡೆದುಕೊಂಡ ರೀತಿ ಎಂಥಹವನಿಗೂ ರೋಷ ಉಕ್ಕಿಸುವಂಥದ್ದು. ಹೀಗೆಯೇ ನಮ್ಮ ಹೆಮ್ಮೆಯ ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂರವರ ವಿಷಯದಲ್ಲಿ ಹೆಚ್ಚು ಕಮ್ಮಿ ಹೀಗೆಯೇ ನಡೆದುಕೊಂಡಿದ್ದರು ಅಮೆರಿಕದ ತಪಾಸಣಾ ಅಧಿಕಾರಿಗಳು. ಆದರೆ ಕಲಾಂರವರ ಸೌಜನ್ಯತೆಯಿಂದ ಶಾರುಖ್‌ ರೋಷಾವೇಷದಿಂದ ಶಾರುಖ್ ಮಾತ್ರ ತುಂಬ ಸುದ್ದಿಯಾದರು, ಅದು ಬಿಡಿ!

ಇವರೆಲ್ಲ ಪ್ರಸಿದ್ಧ ವ್ಯಕ್ತಿಗಳಾದ ಕಾರಣಕ್ಕೆ ಸಾಕಷ್ಟು ಮಂದಿಗೆ ಈ ಎಲ್ಲ ವಿಷಯ ತಿಳಿಯಿತು. ಹೀಗೆಯೇ ಬಹುತೇಕ ಎಲ್ಲ ಮುಸ್ಲಿಮರಿಗೂ ಇದೇ ರೀತಿಯ ಮರ್ಯಾದೆಯೇ ಸಿಕ್ಕುತ್ತದೆ ಎಂಬುದನ್ನು ಊಹಿಸುವುದಕ್ಕೆ ಬಹಳ ಬುದ್ಧಿ ಏನೂ ಬೇಕಾಗೋದಿಲ್ಲ! ಈ ಎಲ್ಲದಕ್ಕೂ ಕಾರಣ, ಎಲ್ಲರಿಗೂ ತಿಳಿದಿರುವಂತೆ, ಭಯೋತ್ಪಾದನೆಯಲ್ಲಿ ತೊಡಗಿರುವವರಲ್ಲಿ ಶೇ.90% ರಷ್ಟು ಮಂದಿ ಇಸ್ಲಾಂ ಧರ್ಮಕ್ಕೆ ಸೇರಿದುದು!

ಹಾಗಾದರೆ ಭಯೋತ್ಪಾದನೆಯ ವಿರುದ್ಧ ಯಾರು ಹೆಚ್ಚು ಹೋರಾಡಬೇಕು?
ಎಲ್ಲರೂ ಒಟ್ಟಾಗಿ ಹೋರಾಡಬೇಕು ಎಂಬುದು ಖಂಡಿತ ಒಪ್ಪಿಕೊಳ್ಳುವ ಮಾತೇ. ಆದರೆ ಒಬ್ಬ ಸಾಮಾನ್ಯ ವ್ಯಕ್ತಿಯಲ್ಲಿನ ಭಯೋತ್ಪಾದನೆ ಕುರಿತಾದ ಭಯ ಯಾವ ರೀತಿ ಅಭಿವ್ಯಕ್ತವಾಗುತ್ತದೆ?
ಕೆಲ ದಿನಗಳ ಹಿಂದೆ ದಿನಪತ್ರಿಕೆಯೊಂದರಲ್ಲಿ ಪ್ರಕಟವಾದ ಓದುಗರ ಪತ್ರದಲ್ಲಿ ಈ ಕೆಳಕಂಡಂತೆ ಇತ್ತು.

ಗೌರವಾನ್ವಿತ ಪ್ರಧಾನಮಂತ್ರಿಯವರಲ್ಲಿ ನನ್ನದೊಂದು ಬಿನ್ನಹ.
ದಯವಿಟ್ಟು ಭಯೋತ್ಪಾದನೆ ವಿರುದ್ಧ ಅತ್ಯುಗ್ರವಾಗಿ ಹೋರಾಡಿ ಸಮಸ್ಯೆಯನ್ನು ಬುಡ ಸಮೇತ ಕಿತ್ತುಹಾಕಿ. ದಾರಿ ತಪ್ಪುತ್ತಿರುವ ಮುಸ್ಲಿಮರನ್ನು ಕಂಡುಹಿಡಿದು ಸರಿಯಾದ ಮಾರ್ಗದರ್ಶನದ ಮೂಲಕ ಅವರೆಲ್ಲರಿಗೂ ಉತ್ತಮ ಜೀವನ ರೂಪಿಸಿಕೊಳ್ಳಲು ಅವಕಾಶ ಕೊಡಿ ಹಾಗೂ ದಾರಿ ತಪ್ಪಿಸುತ್ತಿರುವ, ಇಸ್ಲಾಂ ಧರ್ಮಕ್ಕೆ ಮಸಿ ಬಳಿಯುತ್ತಿರುವ ವ್ಯಕ್ತಿ ಹಾಗೂ ಸಂಘಟನೆಗಳನ್ನು ಪತ್ತೆ ಹಚ್ಚಿ ಅವರನ್ನು ನೇಣಿಗೆ ಹಾಕಿ. ನಮ್ಮನ್ನು ಹಾಗೂ ಇಸ್ಲಾಮನ್ನು ಸಮಾಜ ಅನುಮಾನದಿಂದ ನೋಡುವುದರಿಂದ ತಪ್ಪಿಸಿ.

ಇಂತಿ,
ಅಬ್ದುಲ್ ಖಲೀಲ್, ಕುಮಾರಸ್ವಾಮಿ ಲೇ ಔಟ್

ಇದರಿಂದ ಗೊತ್ತಾಗುತ್ತದೆ ಭಯೋತ್ಪಾದನೆ ಎಂಬುದು ಯಾವ ಧರ್ಮಕ್ಕೆ ಹೆಚ್ಚಾಗಿ ಮಾರಕ ಹಾಗೂ ನಿಜವಾದ ಮುಸ್ಲಿಮರಿಗೆ ಯಾವ ರೀತಿಯ ಮುಜುಗರವನ್ನುಂಟುಮಾಡುತ್ತಿದೆ ಎಂದು.

ಕೆಲ ವರ್ಷಗಳ ಹಿಂದೆ ಹಿರಿಯರೊಬ್ಬರು ಹೇಳಿದ್ದರು, ಮುಸ್ಲಿಮರಲ್ಲಿ ಹೆಚ್ಚಿರುವ ಅಶಿಕ್ಷತೆ ಅವರನ್ನು ಭಯೋತ್ಪಾದನೆಗೆ ಆಕರ್ಷಿಸುವಂತೆ ಮಾಡುತ್ತದೆ ಎಂದು. ಆದರೆ ಇತ್ತೀಚಿನ ದಿನಗಳಲ್ಲಿ ವಿದ್ಯಾವಂತರೇ ಭಯೋತ್ಪಾದನೆಯಲ್ಲಿ ತೊಡಗಿರುವುದು ಕಾಣಬರುತ್ತಿದೆ!

ಹಾಗಾದರೆ ಏನು ಮಾಡಬಹುದು?

ಪ್ರತಿಯೊಬ್ಬ ಭಾರತೀಯನಲ್ಲೂ ದೇಶದ ಕುರಿತಾದ ನಿಷ್ಠೆಯನ್ನು ಬೆಳೆಸುವ ಸಲುವಾಗಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಪ್ರತಿಯೊಂದು ಮದರಸಾದಿಂದ ಹಾಗೂ ಪ್ರತಿಯೊಂದು ಶಾಲಾ-ಕಾಲೇಜಿನಿಂದ ಹೊರಬರುವ ಪ್ರತಿಯೊಬ್ಬ ವ್ಯಕ್ತಿಯೂ ಈ ದೇಶದ ಪರವಾಗಿ ಪ್ರಾಣಾರ್ಪಣೆಗೈಯಲು ತಯಾರಿರುವ ರೀತಿಯಲ್ಲಿ ಅವರನ್ನು ಶಿಕ್ಷಿತರನ್ನಾಗಿಸಬೇಕು. ಧಾರ್ಮಿಕ ದ್ವೇಷವನ್ನು ಬೋಧಿಸುತ್ತಿರುವ ಮದರಸಾಗಳನ್ನು, ಶಿಕ್ಷಣಸಂಸ್ಥೆಗಳನ್ನು ಮುಚ್ಚಬೇಕು. ಪ್ರತಿಯೊಬ್ಬರ ಹೃದಯದಲ್ಲೂ ಭಾರತ ಪೂಜನೀಯವಾಗಬೇಕು. ಭಯೋತ್ಪಾದನೆಯಡಿಯಲ್ಲಿ ಬಂಧಿಸಲಾದವರಲ್ಲಿ ಆರೋಪ ಸಾಬೀತಾದ ಪ್ರತಿಯೊಬ್ಬರಿಗೂ ಮರುಕ್ಷಣವೇ ಮರಣದಂಡನೆ ವಿಧಿಸಬೇಕು. ಇಲ್ಲವಾದಲ್ಲಿ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ ಮೂಲಕವೇ ಅವರನ್ನು ನೇಣಿಗೇರಿಸಬೇಕು.ಪ್ರತಿಯೊಬ್ಬನೂ ಅನ್ಯ ಧರ್ಮದವರ ಪೂಜನೀಯವಾದವುಗಳನ್ನು ಗೌರವಿಸಬೇಕು ಹಾಗೂ ಸಾಧ್ಯವಾದರೆ ತಾನೂ ಪೂಜಿಸಬೇಕು. ಈ ನಿಟ್ಟಿನಲ್ಲಿ ಗೋವಧೆಯ ವಿರುದ್ಧದ ಕಾನೂನಿನ ಜಾರಿಗೋಸ್ಕರ ಭಾರತೀಯ ಮುಸ್ಲಿಮ್ ಮಂಚ್ ನಡೆಸುತ್ತಿರುವ ಕಾರ್ಯಾಚರಣೆ ನಿಜಕ್ಕೂ ಶ್ಲಾಘನೀಯ. ಭಯೋತ್ಪಾದನೆಯ ವಿರುದ್ಧ ಇಡೀ ಇಸ್ಲಾಂ ಧರ್ಮ ಎದ್ದು ನಿಲ್ಲಲಿ. ಭಾಯೋತ್ಪಾದನೆಯ ಹುಟ್ಟಡಗಿಸುವಲ್ಲಿ ಪ್ರತಿಯೊಬ್ಬ ಮುಸ್ಲಿಮನೂ ವೀರ ಸೇನಾನಿಯಂತೆ ತನ್ನ ಕೊಡುಗೆಯನ್ನು ನೀಡಲಿ.

Sep 19, 2009

ಉನ್ನತ ಶಿಕ್ಷಣ ಸಚಿವರ ಶ್ಲಾಘನೀಯ ಯೋಜನೆ

ಉನ್ನತ ಶಿಕ್ಷಣ ಸಚಿವರಾದಂತಹ ಅರವಿಂದ ಲಿಂಬಾವಳಿಯವರು ಶಿಕ್ಷಕರ ವರ್ಗಾವಣೆಯ ವಿಷಯದಲ್ಲಿ ತೆಗೆದುಕೊಂಡಿರುವ ಯೋಜನೆಯ ನಿರ್ಧಾರದ ಬಗ್ಗೆ ಮೊನ್ನೆ ಭೇಟಿಯಾದ ಹಿರಿಯರೊಬ್ಬರು ತಿಳಿಸಿದಾಗ ಆಶ್ಚರ್ಯ ಹಾಗೂ ಸಂತೋಷ ಎರಡೂ ಒಟ್ಟಿಗೆ ಅಟ್ಟಿಸಿಕೊಂಡು ಬಂದವು!

ಮಾನ್ಯ ಸಚಿವರು ಶಿಕ್ಷಕರ ವರ್ಗಾವಣೆಯಲ್ಲಿ ನಡೆಯುವ ಅಕ್ರಮ, ಅವ್ಯವಹಾರಗಳನ್ನು ತಡೆಯುವ ನಿಟ್ಟಿನಲ್ಲಿ ಕೌನ್ಸೆಲಿಂಗ್ ಮೂಲಕ ವರ್ಗಾವಣೆ ಅವಶ್ಯವಿರುವ ಶಿಕ್ಷಕರನ್ನು ಸಂದರ್ಶನ ಮಾಡಿ, ಅವರು ಇಚ್ಚಿಸಿದ ಸ್ಥಳಗಳಲ್ಲಿ ವರ್ಗಾವಣೆ ಮಾಡುವುದು ಮತ್ತು ನಿಜವಾಗಿಯೂ ಶಿಕ್ಷಕರ ಕೊರತೆಯಿದ್ದರೆ ತಕ್ಷಣವೇ ಕೆಲಸ ಆಗುವಂತೆ ಮಾಡುವತ್ತ ಸಾಗಿರುವುದು ಖಂಡಿತ ಅತ್ಯಂತ ಶ್ಲಾಘನೀಯವಾದುದು.

ಈವರೆಗೆ ತಮ್ಮ ಪ್ರಭಾವದಿಂದ ಹಾಗೂ ತಮ್ಮ ಹಣಬಲದಿಂದ ವರ್ಗಾವಣೆಯನ್ನು ಮಾಡಿಸಿಕೊಳ್ಳುತ್ತಿದ್ದ ಪ್ರಭಾವಿಗಳು ಹಾಗೂ ಶ್ರೀಮಂತರ ನಡುವೆ, ವರ್ಗಾವಣೆಗೋಸ್ಕರ ವಿಧಾನಸೌಧಕ್ಕೆ ಅಲೆಯುವ, ಹೊಟ್ಟೆಬಾಕ ದಲ್ಲಾಳಿಗಳ ಜೇಬು ತುಂಬಿಸುವ ಮಧ್ಯಮ ವರ್ಗದವರ ನಾಯಿಪಾಡಿಗಿನ್ನು ಬಿಡುಗಡೆಯ ಸೂಚನೆ.

ಹಾಗೆಯೇ ತಮ್ಮ ಅಸಹಾಯಕತೆಯನ್ನು ವಿದ್ಯಾರ್ಥಿಗಳ ಮೇಲೆ ಪ್ರದರ್ಶಿಸುವ ಹಾಗೂ ಉದಾಸೀನತೆಯಿಂದ ಕೆಲಸ ನಿರ್ವಹಿಸುವ ಶಿಕ್ಷಕರ ಕಿರಿಕಿರಿಯ ಕಾಟ ವಿದ್ಯಾರ್ಥಿಗಳಿಗೂ ತಪ್ಪುತ್ತದೆ. ಹಾಗೂ ಫಲಾನುಭವಿ ಶಿಕ್ಷಕರಿಂದ ಇನ್ನೂ ಹೆಚ್ಚಿನ ಪ್ರಾಮಾಣಿಕ ಕರ್ತವ್ಯವನ್ನು ಅಪೇಕ್ಷಿಸಬಹುದು.

ಸಚಿವರ ಈ ಉತ್ತಮ ಯೋಜನೆಯ ಅನುಷ್ಠಾನದ ಹಿಂದೆ ಇನ್ನೂ ಹೆಚ್ಚಿನ ಪ್ರಾಮಾಣಿಕತೆಯನ್ನು ಅಪೇಕ್ಷಿಸುತ್ತ ಈ ಯೋಜನೆಯು ಧೀರ್ಘಕಾಲ ದೊರಕುವಂತಾಗಲಿ ಎಂದು ಹಾರೈಸುತ್ತೇನೆ.

Aug 31, 2009

ಜಿನ್ನಾ 'ಭಜನೆ'ಯಿಂದ ಬಿಜೆಪಿ ವಿ'ಭಜನೆ'ಯತ್ತ?

ಬಿಜೆಪಿಯ ಹಿರಿಯರು ಅಂತ ಕರೆಸಿಕೊಂಡವರು ತಿಳಿದೇ ಹೀಗೆ ನಡೆದುಕೊಳ್ಳುತ್ತಿದ್ದಾರೋ ಇಲ್ಲವೊ ಗೊತ್ತಿಲ್ಲ. ತಾವು ಒಂದು ರಾಷ್ಟ್ರೀಯ ಪಕ್ಷದ ಜವಾಬ್ದಾರಿಯನ್ನು ಹೊತ್ತಿದ್ದೇವೆ ಎಂಬುದನ್ನು ಮರೆತು ಸ್ವಾರ್ಥದ ಸುಳಿಯಲ್ಲಿ ಸಿಕ್ಕಿ ಒದ್ದಾಡುತ್ತಿದ್ದಾರೆ.

ಈಗ ಪ್ರಸ್ತುತ ಸುದ್ದಿಯಲ್ಲಿರುವ ಜಿನ್ನಾ ಭಜನೆಗೆ ಬಲಿಯಾದ ಜಸ್ವಂತ್ ಸಿಂಗ್, ತಾವೊಬ್ಬ ಸೇನಾನಿಯಾಗಿದ್ದರು ಎಂಬುದನ್ನು ಮರೆತು ನಡೆದುಕೊಳ್ಳುತ್ತಿದ್ದಾರೆ. ಉಚ್ಚಾಟನೆಯಾದದ್ದಕ್ಕೆ ಪಕ್ಷದ ಆಂತರಿಕ ವಿಷಯಗಳನ್ನ, ವಿವಾದಗಳನ್ನು ಹುಟ್ಟಿಸುವ ವಿಷಯಗಳನ್ನ ಮಾಧ್ಯಮಗಳ ಮುಂದೆ ಬೊಂಬಡಿಸುತ್ತ 'ಪ್ರತೀಕಾರ'ದ ಪೋಸು ಕೊಡುತ್ತಿದ್ದಾರೆ!

ಆರೋಗ್ಯಕರವಾಗಿ ಬಗೆಹರಿಸಿಕೊಳ್ಳಬಹುದಾದಂತಹ ವಿಷಯಗಳನ್ನ ಸಮಸ್ಯೆಗಳನ್ನಾಗಿ ಪರಿವರ್ತಿಸುತ್ತ ತಮ್ಮ 'ಸ್ವಾರ್ಥ'ದ ಬೇಳೆಯನ್ನು ಬೇಯಿಸಿಕೊಳ್ಳುತ್ತಿರುವ ಬಿಜೆಪಿಯಲ್ಲಿ 'ಗುಂಪುಗಾರಿಕಾದಾರ'ರಿಗೆ ಲಗಾಮು ಹಾಕುವವರು ಯಾರು?

ಬೆಜೆಪಿಯ ಪ್ರತಿಯೊಂದು ಗೆಲುವಿನ ಹಿಂದೆ ಎಷ್ಟು ನಿಸ್ವಾರ್ಥ ಸ್ವಯಂಸೇವಕರ ಶ್ರಮ ಇರುತ್ತದೆ ಎಂದು ಯಾವ ನಾಯಕನಾದರೂ ಅರ್ಥಮಾಡಿಕೊಳ್ಳುತ್ತಾರಾ? ಬಿಜೆಪಿಗೆ ಮತ ಹಾಕುವುದನ್ನು ದೇಶದ ಕೆಲಸ ಅಂತ ಭಾವಿಸಿರುವವರೆಷ್ಟೋ ಮಂದಿ! ಬಿಜೆಪಿ ಅಧಿಕಾರಕ್ಕೆ ಬಂದರೆ ನಮ್ಮ ದೇಶ ಪರಮ ವೈಭವದ ಸ್ಥಿತಿ ತಲುಪುವುದು ಸಲೀಸು ಎಂದು ಸಿಕ್ಕಾಪಟ್ಟೆ ನಂಬಿರುವ ಮೂರ್ಖರು ಅಸಂಖ್ಯರು! ತಮ್ಮ ದೇಶಭಕ್ತಿಯ ಅಭಿವ್ಯಕ್ತತೆಯಡಿಯಲ್ಲಿ 'ಬಿಜೆಪಿಗೆ ಮತ'ವನ್ನು ಸೇರಿಸಿರುವ ಭಾರತದ ಪ್ರಜೆಗಳಿಗೆಲ್ಲ ಈಗ ಬಿದ್ದಿದೆ ಕೆರದಾಗಿನ ಏಟು!

ಇಷ್ಟು ದಿನ ಬಿಜೆಪಿಯನ್ನು ನಿಸ್ವಾರ್ಥದಿಂದ, ದೇಶಕ್ಕೋಸ್ಕರ ಬೆಂಬಲಿಸುತ್ತಿದ್ದವರಿಗೆ ಮನದಲ್ಲಿ ಎದ್ದಿರುವ ಉತ್ತರಕಾನದ ಪ್ರಶ್ನೆ 'ನಾವು ಯಾಕೆ ಬಿಜೆಪಿಯನ್ನು ಬೆಂಬಲಿಸುತ್ತಿದ್ದೆವು?' ಎಂದು. ಹಾಗೆಯೇ ಅವರೆಲ್ಲರಿಗೂ ಕಾಡುತ್ತಿರುವ ಹಾಗು ದುಃಖಿಸುತ್ತಿರುವ ಪ್ರಶ್ನೆ 'ಇನ್ಮೇಲೆ ನಮ್ಮ ದೇಶವನ್ನು ರಾಜಕೀಯವಾಗಿ ಔನ್ನತ್ಯಕ್ಕೇರಿಸಲು ಯಾರನ್ನು ನಂಬಬೇಕು?'

ಹಿಂದೆ ನನ್ನೊಬ್ಬ ಪರಿಚಿತರೊಬ್ಬರ ಜತೆ ಮಾತಾಡುತ್ತಿರುವಾಗ ಬಂದ ಮಾತು 'ಬಿಜೆಪಿಯಲ್ಲಿರುವ ಹಲವಾರು ಮಂದಿ ಆರೆಸ್ಸೆಸ್ ಹಿನ್ನೆಲೆಯುಳ್ಳವರಾಗಿರುವರಿಂದ ಅವರ ದೇಶದೆಡೆಗಿನ ಬದ್ಧತೆಯನ್ನು ನಂಬಿ ನಮ್ಮ ದೇಶವನ್ನು ಜಗತ್ತಿನ ಪ್ರಬಲ ರಾಷ್ಟ್ರವನ್ನಾಗಿಸುವುದರಲ್ಲಿ ನಾವು ಪ್ರಮುಖ ಪಾತ್ರ ವಹಿಸಬೇಕು' ಎಂದು. ಆದರೆ ಈಗ ಬರಿ ಕಳ್ಳ-ಕಾಕರು, ದರೋಡೆಕೋರರು ತುಂಬಿರುವ ಬಿಜೆಪಿಯ ಶಾಸಕ, ಸಂಸದರ ಶೇ.೯೦ರಷ್ಟು ಮಂದಿಗೆ ಎರಡಂಕಿ ಕೋಟಿರುಪಾಯಿಯ ಕೆಳಗಿದ್ದಂತಿಲ್ಲ!

ಆದರೆ ಒಂದಂತೂ ನಿಜ. ಬಿಜೆಪಿ ಈ ಸಂದರ್ಭವನ್ನು ನಾಂದಿಯನ್ನಾಗಿಸಿಕೊಂಡು ಆಮೂಲಾಗ್ರ ಬದಲಾವಣೆಯೊಂದಿಗೆ ಪೂರ್ಣಪ್ರಮಾಣದ ಪ್ರಾಮಾಣಿಕ 'ದೇಶಭಕ್ತಿ'ಯ ಉದ್ದೀಪನದೊಂದಿಗೆ ಎದ್ದು ಬರದಿದ್ದರೆ ದೇಶದ ಉಜ್ವಲ ಭವಿಷ್ಯವನ್ನು ಎದಿರುಕಾಣುತ್ತಿರುವ ನಮ್ಮಂತಹ ಅಸಂಖ್ಯಾತ ಪ್ರಜೆಗಳ ಕನಸು ನನಸಾಗುವುದು ಯಾವಾಗ?

Jul 18, 2009

ಎಂ.ಪಿ.ಪ್ರಕಾಶ್ ರವರ ವಿಭಿನ್ನತೆಯೇ ಅವರ ವಿಶೇಷತೆ

ಕಳೆದ ಭಾನುವಾರದ ಪತ್ರಿಕೆಗಳನ್ನ ಓದಿಮುಗಿಸಿದಾಗ (ಪೂರ್ತಿ ಏನಲ್ಲ!) ಒಂದು ತರಹದ ವಿಶೇಷ ಅನುಭವವಿತ್ತು. ಮನಸ್ಸಿನ ಯಾವುದೋ ಒಂದು ಮೂಲೆಯಲ್ಲಿ ಖುಷಿಯಡಗಿತ್ತು. ಇ ಅವ್ಯಕ್ತ ಖುಷಿಗೆ ಕಾರಣವೇನು ಎಂದು ಮನಸ್ಸನ್ನು ತಡಕಾಡಿದಾಗ ಸಿಕ್ಕ ಉತ್ತರ, ಮಾಜಿ ಉಪಮುಖ್ಯಮಂತ್ರಿಯವರಾದ ಎಂ.ಪಿ.ಪ್ರಕಾಶ್ ರವರ ೭೦ನೇ ವರ್ಷದ ಜನ್ಮದಿನೋತ್ಸವದ ಆಚರಣೆಯ ಸ್ಥಳ ಹಾಗು ರೀತಿ!

ಸಾಮಾನ್ಯವಾಗಿ ರಾಜಕೀಯ ಪ್ರವೃತ್ತಿಯಲ್ಲಿ ಇರುವವರು ಮಾಡುವ ಕೆಲವೇ ಕೆಲವು ಒಳ್ಳೆಯ ಕೆಲಸಗಳನ್ನೂ ಸ್ವಾರ್ಥ ಪ್ರಚಾರಕ್ಕೊಸ್ಕರವೇ ಮಾಡುತ್ತಾರೆ ಎಂಬ ಧೃಢ ವಿಶ್ವಾಸ ಜನತೆಯಲ್ಲಿದೆ! ಎಂ.ಪಿ.ಪ್ರಕಾಶ್ ರದ್ದು ಹಾಗಾಗಿರದಿದ್ದಲ್ಲಿ ತುಂಬಾ ಒಳ್ಳೆಯದು.

ಆದರೆ, ಒಂದು ವೇಳೆ ಪ್ರಕಾಶ್ ರದ್ದು ಡೋನ್ಗಿತನದ ಆಚರಣೆಯೇ ಆಗಿದ್ದರೂ ಕಾರಾಗೃಹದ ಕೈದಿಯ ಸ್ಥಾನದಲ್ಲಿ ಇರುವವರಿಗೆ ಅದರ ಉದ್ದೇಶದ ಅಗತ್ಯವಿಲ್ಲ. ಅವರಿಗೆ ದೊರಕಿದ ವಿಶೇಷ ವಾತಾವರಣ, ಸಂಗೀತದ ಕಾರ್ಯಕ್ರಮ ಮತ್ತು ಭೂರಿ ಭೋಜನ ಖಂಡಿತ ಅವರಿಗೆಲ್ಲ ಸಂತೋಷವನ್ನುಂಟುಮಾಡಿರುವುದರಲ್ಲಿ ಯಾವ ಅನುಮಾನವೂ ಇಲ್ಲ. ಈ ಎಲ್ಲಕ್ಕೂ ಕಾರಣಕರ್ತರಾದ ಪ್ರಕಾಶ್ ರವರಿಗೆ ನನ್ನ ಕೃತಜ್ಞತೆಗಳು.

ಈ ಘಟನೆಗಳು ಪ್ರಕಾಶ್ ರವರ ಸಹೋದ್ಯೋಗಿಗಳಿಗೆ ಅಸೂಯೆಯನ್ನು ಉಂಟುಮಾಡಿರಲೂ ಸಾಕು. ಸ್ವಾರ್ಥ ಲೋಕದಲ್ಲೇ ದಿನವೆಲ್ಲ ಕಳೆಯುವ ರಾಜಕೀಯ ವ್ಯಕ್ತಿಗಳಲ್ಲಿ ಪ್ರಕಾಶ್ ರವರು ವಿಭಿನ್ನ, ವಿಶೇಷ!

ಪ್ರಕಾಶ್ ರವರ ಈ ಸೃಜನಶೀಲ ವ್ಯಕ್ತಿತ್ವದ ಹಿಂದೆ ಇನ್ನು ಹೆಚ್ಚಿನ ಪ್ರಾಮಾಣಿಕತೆ ಅರಳಲಿ. ಅವರ ವೈಚಾರಿಕತೆ ಹಾಗು ಬದ್ಧತೆಗಳು ಸಮಾಜಕ್ಕೆ ಅರ್ಪಿತವಾಗಲಿ.

ಅಂದ ಹಾಗೆ, ಪ್ರಕಾಶ್ ರವರಿಗೆ ಹುಟ್ಟುಹಬ್ಬದ ಶುಭಾಶಯಗಳು.

Jul 15, 2009

ಸಂಸ್ಕೃತದ ಜ್ಞಾನ ಎಲ್ಲ ವರ್ಗಗಳಿಗೂ ಲಭಿಸುವಂತಾಗಲಿ

ಬೆಂಗಳೂರಿನಲ್ಲಿ ನಡೆದ ೫ನೆ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭ 'ಸಂಸ್ಕೃತ ವಿವಿ ಬೇಡ' ಎನ್ನುವ ಕುರಿತಾದ ಕಾಮಿಡಿಗಳನ್ನು ಮಾಡಲಿಕ್ಕೆ ಮೀಸಲಾದಂತಿತ್ತು!

ಕನ್ನಡ ಭಾಷೆಯ ಅಭಿವೃದ್ಧಿಗಾಗಿ ಏನು ಮಾಡಬೇಕು ಎಂದು ಚಿಂತಿಸುವುದನ್ನು ಬಿಟ್ಟು ನಕಾರಾತ್ಮಕ ಧೋರಣೆಯಡಿ ಸಂಸ್ಕೃತ ವಿವಿ ಬೇಡ ಅಂತ ಹೇಳಲಿಕ್ಕೆಂದು ಕೆಲ ಸಾಹಿತಿಗಳ ನಡುವೆ ಸ್ಪರ್ಧೆ ಏರ್ಪಟ್ಟಿರುವುದು ಸಾಹಿತಿಗಳ ಬೌದ್ಧಿಕ ಡೋಂಗಿತನದ ಪರಮಾವಧಿಯಾಗಿದೆ.

ಕಿ.ರಂ.ನಾಗರಾಜ್ ರವರು ತಮ್ಮನ್ನು ತಾವು ಏನೆಂದು ಬಿಂಬಿಸಲು ಪ್ರಯತ್ನಿಸುತ್ತಿದ್ದಾರೆ ಎಂಬುದನ್ನು ತಿಳಿಯಲಾಗಲಿಲ್ಲ. ಅವರೇ ಹೇಳಿದ ಹಾಗೆ ಭಾಷೆಯನ್ನು ತಿಳಿಯಲು ಪಂಡಿತರ ಅವಶ್ಯವಿರುವಂತಹ, ಸೀಮಿತ ವಲಯ ಮಾತ್ರ ಓದುತ್ತಿರುವಂತಹ ಅತ್ಯಂತ ಪ್ರಾಚೀನ ಭಾಷೆಯಾದ ಸಂಸ್ಕೃತವನ್ನು ಬರೇ ಉಳಿಸುವುದಕ್ಕಷ್ಟೇ ಅಲ್ಲದೆ ಸಮಾಜದ ಎಲ್ಲ ವಲಯ ಹಾಗು ವರ್ಗಗಳಿಗೂ ತಲುಪುವಂತೆ ಬೆಳೆಸಲು ಒಂದು ವಿಶ್ವವಿದ್ಯಾಲಯ ಅತ್ಯಂತ ಪುಉರಕ ಎಂದು ಒಬ್ಬ ಸಾಹಿತಿಗೆ ಅನಿಸದಿರುವುದೇ ಆಶ್ಚರ್ಯ! ಅಂಥಾದರಲ್ಲಿ ತಮ್ಮ ಅಸಮ್ಮತಿಯನ್ನು ಒಂದು ವೇದಿಕೆಯ ಮೇಲೆ ಹರಿಯಬಿಟ್ಟಿರುವುದು ಅವರಿಗೆ ಶೋಭೆಯೇ?

ನಮ್ಮ ದೇಶಕ್ಕೆ ಸಾಂಸ್ಕೃತಿಕ ಹಾಗು ಭಾಷಾ ಕ್ಷೇತ್ರದಲ್ಲಿ ಜಗತ್ತಿನಲ್ಲೇ ವಿಶೇಷ ಸ್ಥಾನವಿರುವುದರ ಹಿಂದೆ ಸಂಸ್ಕೃತದ ಪಾತ್ರ ಅತ್ಯಂತ ಹಿರಿದು ಎಂಬುದನ್ನು ಯಾರಾದರೂ ಅಲ್ಲಗೆಳೆಯಲು ಸಾಧ್ಯವೇ?

ನಾನು ಮತ್ತೂರಿನವ (ಸಂಸ್ಕೃತ ಗ್ರಾಮ ಎಂಬ ಹೆಸರೂ ಇದೆ) ಎಂದರೆ 'ನಿಮಗೆ ಸಂಸ್ಕೃತ ಬರುತ್ತೆ ಅಲ್ವಾ?' ಎಂದು ಕೇಳದವರೇ ಇಲ್ಲ! ಕೇಳಿ ಅವ್ಯಕ್ತ ಹೆಮ್ಮೆಯನ್ನು ಅನುಭವಿಸಿದವರೇ ಇಲ್ಲ! ಈ ಹೆಮ್ಮೆ ನನಗೆ ಸಂಸ್ಕೃತ ಬರುತ್ತೋ ಬರಲ್ವೋ ಎಂಬುದಕ್ಕಲ್ಲ. ಸಂಸ್ಕೃತಕ್ಕೆ ವಿಶೇಷ ಸ್ಥಾನ ನೀಡಿ, ಶಾಲಾ ಪಠ್ಯವನ್ನಾಗಿ ಮಾಡಿ, ಹೆಚ್ಚಾಗಿ ಬಳಸುವ ಗ್ರಾಮ ನಮ್ಮ ಭಾರತದಲ್ಲಿದೆ ಎಂಬ ಹೆಮ್ಮೆ ಅದು!

ಸಂಸ್ಕೃತ ವಿವಿಯ ಕಾರಣದಿಂದ ಆ ಭಾಷೆಯಲ್ಲಿ ಅನನ್ಯ ಜ್ಞಾನ ಭಂಡಾರ ಶ್ರೀಯುತ ನಾಗರಾಜ್ ರ ಸಮೇತ ಸಮಾಜದ ಎಲ್ಲ ವಲಯ ಹಾಗು ವರ್ಗಗಳಿಗೂ ಲಭಿಸುವಂತಾಗಲಿ.

May 24, 2009

ಪರಾಭವಗೊಂಡ ಬಿಜೆಪಿಗೆ ಇನ್ನಾದರೂ ಜ್ಞಾನೋದಯವಾದೀತೇ?

ಅಂತೂ ಇಂತೂ ಚುನಾವಣೆಯ ಯುದ್ಧ ಮುಗಿದು, ಹೊಸ ವೇಷದಲ್ಲಿ ಹಳೆ ಸರ್ಕಾರ ಮತ್ತೊಮ್ಮೆ ಅಧಿಕಾರದ ಚುಕ್ಕಾಣಿ ಹಿಡಿದು ಆಡಳಿತಕ್ಕೆ ನಿಂತಿದೆ. 'ಸಂಪುಟ ರಚನೆ' ಎಂಬ ದೊಂಬರಾಟದಲ್ಲಿ ಮುಳುಗಿದೆ. ಪರಾಭವಗೊಂಡಿರುವ ಬಿಜೆಪಿಯಲ್ಲಂತೂ 'ಆತ್ಮಾವಲೋಕನ' ಎಂಬುದಡಿ ಮತ್ತದೇ ಕಾಲ ಹರಣದ ಹಾಗೂ ಕೆಸರೆರಚಾಟದ ಕಾರ್ಯಕ್ರಮ!

ಈ ಸಲದ ಚುನಾವಣೆ ರಾಜಕೀಯ ಪಕ್ಷಗಳಿಗೆ ಬುದ್ಧಿ ಕಲಿಸಿದೆಯೂ ಇಲ್ಲವೊ ಗೊತ್ತಿಲ್ಲ. ಆದರೆ ಮತದಾರನಿಗೆ 'ಬುದ್ಧಿ' ಕಲಿಸುವ 'ಬುದ್ಧಿ' ಬಂದಿದೆ ಎಂಬುದನ್ನ ಸಾಬೀತು ಮಾಡಿದೆ.

ಚುನಾವಣೆಯಲ್ಲಿ ಒಂದು ಪಕ್ಷ ಸೋತರೆ ಇದರರ್ಥ ಜನತೆಗೆ ಆ ಪಕ್ಷ ಬೇಕಾಗಿಲ್ಲ ಎಂಬುದಕ್ಕಿಂತ, ಆ ಪಕ್ಷ ತನ್ನ ಆಡಳಿತದಲ್ಲಿ ಜನತೆಗೆ ಮೋಸ ಮಾಡಿದೆ ಎಂದು ಕರೆದರೇನೇ ಹೆಚ್ಚು ಸಮಂಜಸ.

ಅತ್ಯಂತ ಹೆಚ್ಚಿನ ಸಾಮರ್ಥ್ಯ ಇದ್ದಂತಹ, ಹೆಚ್ಚಿನ ವಿದ್ಯಾವಂತರು (ಮತ ಹಾಕದವರು ಎಂದು ಓದಿಕೊಳ್ಳಬಹುದು) ಸಹಜವಾಗಿಯೇ ಅಪೇಕ್ಷೆ ಪಡುವಂತಹ, ಕಿಂಚಿತ್ತಾದರೂ ರಾಷ್ಟ್ರೀಯ ಬದ್ದತೆಯ ಧೋರಣೆ ಹೊಂದಿರುವ ಭಾರತೀಯ ಜನತಾ ಪಕ್ಷ ಮೊನ್ನೆಯ ಚುನಾವಣೆಯಲ್ಲಿ ನೆಲಕಚ್ಚಿದ್ದು ಆಶ್ಚರ್ಯವೋ? ಸಹಜವೋ? ಮೊನ್ನೆ ೨೩ ರ ವಿಜಯ ಕರ್ನಾಟಕದಲ್ಲಿ ಪತ್ರಕರ್ತ ಪ್ರತಾಪ್ ಸಿಂಹ ಮೇಲಿನ ಪ್ರಶ್ನೆಗೆ ಉತ್ತರ ಹುಡುಕುವ ಪ್ರಯತ್ನ ಮಾಡಿದ್ದಾರೆ. ಓದಿದವನಾವನೂ ಒಪ್ಪದಿರಲು ಸಾಧ್ಯವಿಲ್ಲ. ಯಾವ ಬಿಜೆಪಿಯವನೂ ಓದಿರಲಿಕ್ಕೂ ಇಲ್ಲ!

ನನ್ನ ಪ್ರಶ್ನೆಯೇನಂದರೆ, ಮಾಧ್ಯಮದವರನ್ನು ಸರಿಯಾಗಿ ಬಳಸಿಕೊಳ್ಳಲು ಬಾರದ, ರಾಷ್ಟ್ರೀಯ ಸುದ್ಧಿವಾಹಿನಿಗಳ ಜತೆಗೆ ಉತ್ತಮ ಸಂಬಂಧವಿರಿಸಿಕೊಳ್ಳಲು ಬಾರದ ಒಂದು ಪಕ್ಷವನ್ನ'ರಾಷ್ಟ್ರೀಯ ಪಕ್ಷ' ಎಂದು ಕೆರಯಬಹುದಾ? ಅಂತ!

ಭಯೋತ್ಪಾದನೆಯಂಥ ಅತಿ ಮುಖ್ಯವಾದ ಹಾಗೂ ಮಹತ್ವವಾದ ವಿಷಯವನ್ನೇ ಚುನಾವಣೆಯಲ್ಲಿ ಸರಿಯಾಗಿ ಬಳಸಿಕೊಳ್ಳಲು ಸಾಧ್ಯವಾಗದ ಬಿಜೆಪಿಗೆ ಇನ್ಯಾವ ವಿಷಯವನ್ನು ಬಳಸಿಕೊಳ್ಳಲು ಆಗುತ್ತದೆ? ತಾನು ಮಾತ್ರ ಸಮಗ್ರ ಭಾರತದ ಕಲ್ಪನೆಯನ್ನಿಟ್ಟುಕೊಂಡು ಅದನ್ನು ಜನತೆಗೆ ನೀಡುವಲ್ಲಿ ಶಕ್ತರಾಗದ ಬಿಜೆಪಿ ಹೇಗೆ ತಾನೇ ಗೆಲುವಿನ ಕನಸು ಕಂಡಿತು? ಶಿಸ್ತಿಗೆ ಹೆಸರಾಗಿದ್ದಂತಹ ಪಕ್ಷ ಅದನ್ನೇ ಕಳೆದುಕೊಳ್ಳುವತ್ತ ಸಾಗಿರುವಾಗ ತನ್ನ ಸ್ಥಾನವನ್ನು ಹೇಗೆ ತಾನೇ ಭದ್ರಪಡಿಸಿಕೊಂಡೀತು? ಬಿಜೆಪಿಗೆ ನೀಡುವ ಬೆಂಬಲವನ್ನು 'ದೇಶದ ಕೆಲಸ' ಎಂದೇ ನಂಬಿರುವ ಲಕ್ಷಾಂತರ ಪ್ರಜೆಗಳಲ್ಲಿ ಯಾವ ನಂಬಿಕೆಯನ್ನುಳಿಸಿದೆ ಬಿಜೆಪಿ? ಮತದಾನ ಮಾಡದ ವಿದ್ಯಾವಂತರನ್ನ ಆಕರ್ಷಿಸಲು ಅಸಮರ್ಥರಾದ ಬಿಜೆಪಿಗೆ ಜ್ಞಾನೋದಯ ಯಾವಾಗ?


ಇನ್ನಾದರೂ ಭಾರತೀಯ ಜನತಾ ಪಕ್ಷ ಎಚ್ಚೆತ್ತುಕೊಳ್ಳದಿದ್ದರೆ ದೇಶಕ್ಕೂ ನಷ್ಟ, ಜನತೆಗೂ ದ್ರೋಹ, ಪಕ್ಷದ ಅಸ್ತಿತ್ವಕ್ಕೂ ಧಕ್ಕೆ, ಪ್ರತಾಪ್ ಸಿಂಹ ಹೇಳಿದ ಹಾಗೆ, ೨೦೧೪ ರ ಚುನಾವಣೆಯ ನಂತರವೂ 'ಆತ್ಮಾವಲೋಕನ' ದ ಬಿಜೆಪಿಗೆ ಕಟ್ಟಿಟ್ಟ ಬುತ್ತಿ!

Apr 27, 2009

ಮತಚಲಾವಣೆ ಮಾಡದಿರುವವರನ್ನು ಕೇಳುವವರಾರು?

ರಾಜಕಾರಣಿಗಳ ಭ್ರಷ್ಟತೆಯ ಬಗ್ಗೆ, ಅವರ ನಡವಳಿಕೆಯ ಬಗ್ಗೆ, ಅವರ ಕಾರ್ಯಗಳ ಬಗ್ಗೆ, ಅವರು ಲೂಟಿಗೈದ ರಾಷ್ಟ್ರದ ಹಣದ ಬಗ್ಗೆ, ಅವರ ವೈಯಕ್ತಿಕ ವಿಷಯಗಳ ಬಗೆಗೂ ಮಾತನಾಡುವುದು ಸುಲಭ, ಸರಿ ಹಾಗು ಅವಶ್ಯ ಎನ್ನುವವರೂ ಇದ್ದಾರೆ. ಏಕೆಂದರೆ ಸಾರ್ವಜನಿಕ ಜೀವನ(!)ದಲ್ಲಿರುವವರ ಅದರಲ್ಲೂ ಜನಪ್ರತಿನಿಧಿಗಳ ಬಗ್ಗೆ ಮಾತನಾಡುವ ಹಾಗೂ ಪ್ರಶ್ನಿಸುವ ಹಕ್ಕು ಪ್ರಜೆಗಳಿಗಿರುವುದು ನಿಜ.

ಆದರೆ, ಈ ದೇಶದ ಪ್ರತಿಯೊಬ್ಬ ಪ್ರಜೆಯ ಮುಖ್ಯ ಕರ್ತವ್ಯವಾದ ಮತಚಲಾವಣೆಯೊಂದಿಗೆ ಇರುವ ಕೊಳ್ಳೆಬಾಕರಲ್ಲೇ ಕಡಿಮೆ ಕೊಳ್ಳೆಹೊಡೆಯುವವರನ್ನ, ರಾಜ್ಯವನ್ನು ಲೂಟಿಮಾಡಿಕೊಂಡೆ ಅಲ್ಪ-ಸ್ವಲ್ಪ ರಾಜ್ಯದ ಕೆಲಸ ಮಾಡುವವರನ್ನ, ಇದ್ದುದರಲ್ಲೇ ಸ್ವಲ್ಪ ಉತ್ತಮ ಚಾರಿತ್ರ್ಯ ಹೊಂದಿದವರನ್ನ, ಇದ್ದುದರಲ್ಲೇ ರಾಜ್ಯದ-ರಾಷ್ಟ್ರದ ಕುರಿತಾಗಿ ಕಿಂಚಿತ್ ಕಾಳಜಿಯಿರುವವರನ್ನ ಆಯ್ಕೆ ಮಾಡುವ ಕಾರ್ಯದಲ್ಲಿ ಪಾಲ್ಗೊಳ್ಳದ ಪ್ರಜೆ(!)ಗಳನ್ನು ಪ್ರಶ್ನಿಸುವವರು ಯಾರು?

ಮತಚಲಾವಣೆಯ ಕುರಿತಾಗಿ ಹಲವರಿಗೆ ಅಸಡ್ಡೆಯ ಭಾವನೆಯಿರುವ ವಿಷಯದಲ್ಲಿ ಭ್ರಷ್ಟ, ಹೊಟ್ಟೆಬಾಕ ರಾಜಕಾರಣಿಗಳ ಪಾತ್ರ ಎಷ್ಟು ಹಿರಿದೋ, ಮತಚಲಾಯಿಸದ ಪ್ರಜ್ಞಾವಂತ ಪ್ರಜೆಗಳ ಪಾತ್ರವೂ ಅಷ್ಟೇ ಹಿರಿದು.

ಜಗತ್ತಿನ ಬೃಹತ್ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಮತದಾನ ಶೇ.೫೦ ರಿಂದ ಶೇ.೬೦ ಎನ್ನುವ ವಿಷಯ ಯಾರ ಮನಸ್ಸನ್ನೂ ಆವರಿಸಿದಿರುವವರ ಮಟ್ಟಿಗೆ ನಮ್ಮ ದೇಶದಲ್ಲಿ ಪ್ರಜೆಗಳ ಸಂಖ್ಯೆ ಹಾಗು ವ್ಯಕ್ತಿಗಳ ಸಂಖ್ಯೆಗಳ ನಡುವೆ ಸ್ಪರ್ಧೆ ಏರ್ಪಟ್ಟಿದೆ!

ಈ ರಾಷ್ಟ್ರ ಹಾಗು ಈ ರಾಷ್ಟ್ರದ ಪ್ರಜೆಗಳ ನಡುವೆ ಪವಿತ್ರವಾದ ಹಾಗು ಅಚಲವಾದ ಭಾವನಾತ್ಮಕ ಸಂಬಂಧ ಬೆಳೆಯುವುದು ಹಾಗು ಬೆಳೆಸುವುದೇ ಎಲ್ಲ ರಾಷ್ಟ್ರೀಯ ಸಮಸ್ಯೆಗಳಿಗೆ ಏಕಮೇವ ಪರಿಹಾರ ಎಂದು ಎಲ್ಲರಿಗೂ ಅರ್ಥವಾಗುವುದು ಯಾವಾಗ?

Apr 5, 2009

ರಾಜ್ಯ ರಾಜಕಾರಣ - ರಾಜ್ಯದ ಮಾನ ಹರಣ

ಯಾವೊಬ್ಬ ರಾಜಕಾರಣಿಗಾದರೂ ನಾಚಿಕೆ-ಮಾನ-ಮರ್ಯಾದೆಗಳೇನಾದರೂ ಇದ್ದಿದ್ದರೆ ನಮ್ಮ ರಾಜ್ಯದಲ್ಲಿ ಇ ಮಟ್ಟದ ಹೊಲಸು ರಾಜಕಾರಣ ಇರುತ್ತಿರಲಿಲ್ಲ! ಇಂದಿದ್ದ ಪಕ್ಷದಲ್ಲಿ ನಾಳೆ ಇರುವುದಿಲ್ಲ! ಇದೂ ಒಂದು ಜೀವನವಾ? ಎಲ್ಲರಿಗೂ ಬಂಗಾರಪ್ಪನವರೇ ಆದರ್ಶವಾದರೆ ರಾಜ್ಯದ ಗತಿ?

ಭಾರತೀಯ ಜನತಾ ಪಕ್ಷ ಈ ಸಲ ಅಧಿಕಾರದ ಚುಕ್ಕಾಣಿ ಹಿಡಿಯುವ ಸಾಧ್ಯತೆ ಇದೆ ಎಂಬ ಕನಸು ಕಂಡವರೆಲ್ಲರೂ ತಮ್ಮ ಸಂಸಾರ ಸಮೇತ ಹೊರಟಿದ್ದೆ ಹರಟಿದ್ದು! ಒಂದು ಕಾಲದಲ್ಲಿ 'ಜಾತ್ಯಾತೀತವಾದ' ಎಂಬ ಜಾತೀವಾದದ ಬಗ್ಗೆ ಗಂಟೆಗಟ್ಟಲೆ ಭಾಷಣ ಬಿಗಿಯುತ್ತಿದ್ದ, ಬಿಜೆಪಿಯನ್ನ 'ಕೋಮುವಾದಿ' ಎಂದು ಬಣ್ಣಿಸುತ್ತಿದ್ದ 'ಸೆಕ್ಯುಲರ್ ಲೀಡರ್'ಗಳು ಈಗ ಅದೇ ಪಕ್ಷದ ಹಿಂದೆ ಅಧಿಕಾರದ ಜೊಲ್ಲು ಸುರಿಸುತ್ತ ಯಾವ ಅಳುಕೂ ಇಲ್ಲದೆ ಹೋಗುತ್ತಿದ್ದಾರೆ, ಛೆ! ಒಬ್ಬರಿಗಾದರೂ ನಿಯತ್ತು ಅನ್ನೋದು ಇದೆಯಾ?

'ರಾಷ್ಟ್ರೀಯ ಚಾರಿತ್ರ್ಯ'ವನ್ನು ತನ್ನ ಸಿದ್ಧಾಂತದ ಆಧಾರ ಎಂದೇ ಬಿಂಬಿಸಿರುವ ಬಿಜೆಪಿ ಕೂಡ, 'ರಾಷ್ಟ್ರೀಯತೆ'ಯನ್ನೇ ಅನುಮಾನದಿಂದ ನೋಡುವವರನ್ನೆಲ್ಲಾ ಆಲಿಂಗಿಸಿ, 'ಅಧಿಕಾರವೇ ತನ್ನ ಅನಿವಾರ್ಯತೆ' ಎಂಬ ಪರಿಸ್ಥಿತಿಯನ್ನು ನಿರ್ಮಾಣ ಮಾಡಿಕೊಂಡಿದೆ. ತನ್ನ ಸಿದ್ದಾಂತದ ಜತೆಗೆ ಪರೋಕ್ಷವಾಗಿ 'ರಾಜೀ' ಮಾಡಿಕೊಳ್ಳುವತ್ತ ಸಾಗಿದೆ.

Mar 22, 2009

ಪಕ್ಷಾತೀತ ಸ್ಥಾನಕ್ಕೆ 'ಪಕ್ಷ ನಿಷ್ಠ' ವ್ಯಕ್ತಿ!

ಇಡೀ ದೇಶಕ್ಕೆ ದೇಶವೇ ಅನುಮಾನ ಪಡುತ್ತಿರುವ ನವೀನ್ ಚಾವ್ಲಾರವರನ್ನು ದೇಶದ ಅತ್ಯಂತ ಮುಖ್ಯವಾದ, ಸಂವಿಧಾನದ ಗೌರವಗಳನ್ನು ಎತ್ತಿ ಹಿಡಿಯುವ ಅತ್ಯಂತ ಜವಾಬ್ದಾರಿಯುತವಾದ ಹುದ್ದೆಯಾದಂತಹ 'ಮುಖ್ಯ ಚುನಾವಣಾ ಆಯುಕ್ತ'ರ ಸ್ಥಾನಕ್ಕೆ ಹಲವಾರು ಪ್ರತಿರೋಧಗಳ ಹಾಗು ಅದಕ್ಕಿಂತ ಹೆಚ್ಚಾಗಿ ಅವರ ವಿರುದ್ಧದ ಆಪಾದನೆಗಳ ನಡುವೆಯೂ ಅವರನ್ನೇ ಸುಉಚಿಸಿರುವುದು ಕಾಂಗ್ರೆಸ್ಸಿನ ಸ್ವಾರ್ಥ ರಾಜಕಾರಣಕ್ಕೆ ಉತ್ತಮ ನಿದರ್ಶನವಾಗಿದೆ.

ಯಾರು ಆಪಾದನೆ ಮಾಡಿದರೇನು? ಅವುಗಳನ್ನು ದೇಶದ ಮುಂದೆ ಸುಳ್ಳೆಂದು ಸಾಬೀತು ಪಡಿಸಿದ ನಂತರ ಅವರನ್ನು ಮುಖ್ಯ ಚುನಾವಣಾ ಆಯುಕ್ತರ ಸ್ಥಾನಕ್ಕೆ ಸೂಚಿಸುವುದು ಕೇಂದ್ರ ಸರ್ಕಾರದ ಕರ್ತವ್ಯ ಹಾಗು ತನ್ನ ಘನತೆಗೆ ತಕ್ಕ ಗೌರವ.

ನವೀನ್ ಚಾವ್ಲಾರವರು ಕಾಂಗ್ರೆಸ್ ಪಕ್ಷದ ಪರವಾಗಿ ವರ್ತಿಸುತ್ತಿರುವುದು ಹಾಗೂ ವರ್ತಿಸಿರುವುದಕ್ಕೆ ಹಲವಾರು ದಾಖಲೆಗಳು ಇರುವಾಗಲೂ, ಅವುಗಳ ಬಗೆಗೆ ಪತ್ರಿಕೆಗಳಲ್ಲಿ ಬಂದ ನಂತರವೂ, ಈ ವಿಷಯವಾಗಿ ಯಾವುದೇ ತನಿಖೆಗಳಿಲ್ಲದೆ ಕೇಂದ್ರ ಸರ್ಕಾರ ಅತ್ಯಂತ ರಾಜಾರೋಷವಾಗಿಯೇ 'ನವೀನ್ ಚಾವ್ಲಾರವರೆ ಮುಂದಿನ ಚುನಾವಣಾ ಆಯುಕ್ತ' ಎಂದು ಘೋಷಿಸಿರುವುದು ಭಾರತದ ಸಂವಿಧಾನಕ್ಕೆ ಮಾಡಿದ ಅಪಚಾರವಲ್ಲದೆ ಮತ್ತೇನು?

ಅತ್ಯಂತ ಜವಾಬ್ದಾರಿಯುತವಾಗಿ ಹಾಗೂ ಪಕ್ಷಾತೀತವಾಗಿ ಕೆಲಸ ನಿರ್ವಹಿಸಬೇಕಾದಂತಹ ನವೀನ್ ಚಾವ್ಲಾರವರು ಆಗಲೇ ಒಂದು ಪಕ್ಷದ ಪರವಾಗಿ ಕೆಲಸ ಮಾಡುತ್ತಿರುವುದು 'ದಾಖಲೆ'ಗಳಿಂದ ತೋರಿಸಲ್ಪಟ್ಟಿರುವುದು ದೇಶದ ಘನತೆಗೇ ಅಗೌರವ!

ಬರೇ ಕಾಂಗ್ರೆಸ್ ಪಕ್ಷಕ್ಕೆ ನಿಷ್ಠರಾಗಿದ್ದರು ಎಂಬ ಒಂದೇ ಕಾರಣಕ್ಕೆ ಪ್ರತಿಭಾ ಪಾಟೀಲ್ ಎಂಬವರು ರಾಷ್ಟ್ರಪತಿಯಾಗಿರುವಾಗ, ಹುದ್ದೆಗಳಲ್ಲಿ ಕುಖ್ಯಾತಿ ಪಡೆದರೂ ಬಡ್ತಿ ಪಡೆಯುವುದರಲ್ಲಿ ಆಶ್ಚರ್ಯವಿದೆಯಾ?

Mar 8, 2009

ಎಲ್ಲ ಮಾಧ್ಯಮದವರಿಗೆ ಬೇಕು ನೈತಿಕತೆ ಮತ್ತು ರಾಷ್ಟ್ರೀಯತೆ


ರಾಷ್ಟ್ರೀಯ ಸುದ್ಧಿವಾಹಿನಿಗಳ ಬಹುತೇಕ ಚಂದಾದಾರರಿಗೆ ಹುತಾತ್ಮನಾದ ಉನ್ನಿಕೃಷ್ಣನ್ ಗೊತ್ತಿಲ್ಲದಿದ್ದರೂ 'ಪ್ರಮೋದ್ ಮುತಾಲಿಕ್ ' ಗೊತ್ತೇಯಿರುತ್ತಾರೆ. ಆ ಮಟ್ಟದಲ್ಲಿ ಸುದ್ದಿಯಾಗಿದ್ದಾರೆ, ರಾಷ್ಟ್ರೀಯ ಮಟ್ಟದಲ್ಲಿ ಪುಕ್ಕಟೆ ಪ್ರಚಾರ ಗಿಟ್ಟಿಸಿದ್ದಾರೆ ಪ್ರಮೋದ್ ಮುತಾಲಿಕ್!

ಮಂಗಳೂರಿನಲ್ಲಿ ಪಬ್ ದಾಳಿ ನಡೆಯುತ್ತಿದೆ ಎಂದು ತಿಳಿದ ಮರುಕ್ಷಣದಲ್ಲೇ ತಮ್ಮ ಸಕಲ ಸಿದ್ದತೆಗಳೊಂದಿಗೆ ಧಾವಿಸಿದ ಪತ್ರಕರ್ತರು, ಮಾಧ್ಯಮದವರು ತಮ್ಮ 'ಬಿಜೆಪಿ ವಿರೋಧೀ' ನಿಲುವಿನ ಸಮರ್ಥನೆಗೆ ಉತ್ತಮ ವಿಷಯ ಸಿಕ್ಕಿತು ಎಂಬ ವಿಕೃತ ಸಂತೋಷದಿಂದ ದಾಳಿಯನ್ನು ರಾಷ್ಟ್ರೀಯ ಸುದ್ದಿಯನ್ನಾಗಿಸಿದರು. ಮುತಾಲಿಕ್ ಗೆ ಅತ್ಯಂತ ಅಬ್ಬರದ ಪ್ರಚಾರ ನೀಡಿ ಅವರನ್ನು ರಾಷ್ಟ್ರಮಟ್ಟದಲ್ಲಿ ಸುದ್ದಿಯನ್ನಾಗಿಸಿದರು. ಹಾಗು ವಿವಾದವನ್ನು ಅಂತರರಾಷ್ಟ್ರೀಯ ಮಟ್ಟಕ್ಕೂ ತೆಗೆದುಕೊಂಡು ಹೋಗುವ ಅತ್ಯಂತ ಪ್ರಾಮಾಣಿಕ ಪ್ರಯತ್ನವನ್ನೂ ಮಾಡಿದರು!

ಈ ರೀತಿಯಲ್ಲಿ ನಮ್ಮ ದೇಶದ ಪತ್ರಿಕಾ ಹಾಗೂ ದೃಶ್ಯ ಮಾಧ್ಯಮಗಳು ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸುತ್ತಿದ್ದಾರೆ. ಕೇವಲ ಹತ್ತನೇ ತರಗತಿಯವರೆಗೆ ಓದಿದ ಸಾಮನ್ಯ ವಿದ್ಯಾರ್ಥಿಯೂ ಕೂಡ ಯಾವುದೇ ಪತ್ರಿಕೆಯನ್ನ ವಿಶೇಷವಾಗಿ ರಾಷ್ಟ್ರೀಯ ಮಟ್ಟದ ಪತ್ರಿಕೆಯನ್ನ ಓದಿದ ತಕ್ಷಣವೇ ಹೇಳಬಲ್ಲ, ಪತ್ರಿಕೆ ಯಾವ ಪಕ್ಷದ ಪ್ರತಿನಿಧಿ ಎಂದು!

ವರದಿ ನಿಡುವ ಮೊದಲು ತಾನು ನೀಡುವ ವರದಿ ಸಮಾಜಕ್ಕೆ ಹಿತಕಾರಿಯೋ ಅಲ್ಲವೋ ಎಂದು ಯೋಚಿಸುವ ಅಥವಾ ಪೂರ್ಣ ಸತ್ಯವನ್ನೇ ತನ್ನ ನಿಲುವಾಗಿಸಿಕೊಂಡ ಪ್ರಾಮಾಣಿಕ ಪತ್ರಕರ್ತರ ಅವಶ್ಯಕತೆ ಈ ಸಮಾಜಕ್ಕೆ ಖಂಡಿತ ಇದೆ. ತಾನು ಬರೆಯುವ ಲೇಖನದ ಹಿಂದೆ ಉತ್ತಮ ಸಮಾಜ ನಿರ್ಮಾಣದ ಉದ್ದೇಶವಿಲ್ಲದ ಪತ್ರಕರ್ತ ಹೇಗೆ ತಾನೇ ದೇಶದ ಆಸ್ತಿಯಾಗುತ್ತಾನೆ?

ತನ್ನ ವೃತ್ತಿಯಲ್ಲಿ ನೈತಿಕತೆ ಹಾಗೂ ಪ್ರಾಮಾಣಿಕ, ಉಜ್ವಲ ರಾಷ್ಟ್ರೀಯತೆಯ ಅಭಿವ್ಯಕ್ತಿಯಿಂದ ಮಾತ್ರ ಪತ್ರಕರ್ತರು ಸುಧ್ರುಢ ರಾಷ್ಟ್ರ ನಿರ್ಮಾಣದ ಮಹತ್ಕಾರ್ಯದಲ್ಲಿ ತಮ್ಮದೇ ಆದ ಕೊಡುಗೆಯನ್ನು ನೀಡಲು ಸಾಧ್ಯ.

ರಾಷ್ಟ್ರದ ಸತ್ಪ್ರಜೆಯಾಗದ ಹೊರತು ಸತ್ಪತ್ರಕರ್ತನಾಗಲು ಸಾಧ್ಯವಿಲ್ಲ.

Feb 26, 2009

'ವಿರಾಟ್ ಹಿಂದೂ ಸಮಾಜೋತ್ಸವ'ದ ಪರಿಣಾಮಗಳು.

ಈ ಸಮಾಜದಲ್ಲಿ ಕೆಲವು ಜನ, ಸಣ್ಣ ಸಣ್ಣ ಗುಂಪುಗಳನ್ನು ಕಟ್ಟಿಕೊಂಡು, ಆ ಮುಖಾಂತರ ಕೆಲವು ವಿಚಾರಗಳನ್ನ, ಕೆಲವು ಸಂಘಟನೆಗಳನ್ನ ಹಾಗೂ ಕೆಲವು ಸಮುದಾಯಗಳನ್ನ ವಿರೋಧಿಸುವ ತಮ್ಮ ಜೀವನದ 'ಒನ್ ಪಾಯಿಂಟ್' ಕಾರ್ಯಕ್ರಮದಡಿಯಲ್ಲಿ ಕೆಲಸ ಮಾಡುತ್ತಿದ್ದಾರೆ.

ಎರಡು ವರ್ಷಗಳ ಹಿಂದೆ, ಬಹುತೇಕ ರಾಜ್ಯದ ಎಲ್ಲ ತಾಲ್ಲೂಕು ಕೇಂದ್ರಗಳಲ್ಲೂ ಸಂಘಪರಿವಾರದ ಕಡೆಯಿಂದ ನಡೆದ 'ವಿರಾಟ್ ಹಿಂದೂ ಸಮಾಜೋತ್ಸವ'ದ ವಿರುದ್ಧವೂ ಅತ್ಯಂತ ಸಹಜವಾಗಿಯೇ ಕೆಲವು ಜನ ಪ್ರತಿಭಟನೆ ಮಾಡಿದ್ದುವು. ಆ ಮೂಲಕ ತಮ್ಮ 'ಪ್ರತಿಭಟನಾ ಹಕ್ಕ'ನ್ನು ಚಲಾಯಿಸಿದ್ದವು. ಆದರೆ ಇ ಕಾರ್ಯಕ್ರಮಗಳ ಕಾರಣದಿಂದ ಸಮಾಜದಲ್ಲುಂಟಾದ ಪರಿಣಾಮಗಳ ಕುರಿತು, ಯಾವ ಪ್ರತಿಭಟನಾಕಾರರಾಗಲೀ , ವಿಚಾರವಾದಿಗಲಾಗಲೀ ಚಿಂತನೆ ನಡೆಸುವ ಪ್ರಯತ್ನ ಮಾಡಲಿಲ್ಲ. ಸಮಾಜಕ್ಕೆ ಒಳಿತನ್ನು ಮಾಡುವ ಮನಸ್ಸಾಗಲೀ ಅಥವಾ ಒಳಿತು ಮಾಡುವವರ ಬಗೆಗೆ ಸಹ್ಯವಾಗಲೀ ಇದ್ದಂತಿಲ್ಲ!

ನಡೆದ ಎಲ್ಲ 'ಹಿಂದೂ ಸಮಾಜೋತ್ಸವ'ಗಳಲ್ಲಿ ಅತ್ಯಂತ ಮಹತ್ವದ ವಿಷಯವಾಗಿ ಅಸ್ಪೃಶ್ಯತೆಯನ್ನು ವಿರೋಧಿಸಲಾಯಿತು. ಸಮಾಜದಲ್ಲಿನ ನೂರಾರು ಮಠಾಧೀಷರನ್ನು ಒಂದೇ ವೇದಿಕೆಯಡಿ ಕರೆತಂದು, ಸಮಾಜದ ಎಲ್ಲ ಸಮುದಾಯಗಳಿಗೆ ಕರೆ ನೀಡಿಸಲಾಯಿತು. ಈ ಕಾರಣದಿಂದ 'ಹಿಂದೂ ಸಮಾಜ'ದ ಮೇಲೆ ನಂಬಿಕೆ ಇರುವ ಲಕ್ಷಾಂತರ ಮಂದಿಗೆ ಅಸ್ಪೃಶ್ಯತೆಯನ್ನು ದೂರಗೊಳಿಸುವ ಧೈರ್ಯ ಬಂತು. ಈ ಪರಿಣಾಮಗಳು ಸಾಕಷ್ಟು ಪ್ರಮಾಣದಲ್ಲಿ ಅಕ್ಷರಶಃ ಸಮಾಜದಲ್ಲಿ ಆಚರಣೆಗೆ ಬಂತು.

ಮೆಲ್ವರ್ಗವೆಂಬ ವರ್ಗಕ್ಕೆ ಸೇರಿದ ಯುವಕನೊಬ್ಬ ಬೆಂಗಳೂರಿನಲ್ಲಿ ಮನೆಯೊಂದನ್ನು ಬಾಡಿಗೆಗೆ ಹುಡುಕುತ್ತಿದ್ದ. ಆದರೆ ಸಿಗುತ್ತಿದ್ದ ಎಲ್ಲ ಮನೆಯಅ ಸುತ್ತ-ಮುತ್ತ ತನ್ನ ಸಮುದಾಯದವರಿಲ್ಲ ಎಂಬ ಒಂದೇ ಕಾರಣಕ್ಕೆ ಆ ಎಲ್ಲ ಮನೆಗಳನ್ನು ತಿರಸ್ಕರಿಸಿದ್ದ. ಆದರೆ, 'ವಿರಾಟ್ ಹಿಂದೂ ಸಮಾಜೋತ್ಸವ'ದ ನಂತರ ಅದೇ ಯುವಕ ತಾನೆ ಸ್ವಯಂ ಪ್ರೇರಿತನಾಗಿ ತಾನು ತಿರಸ್ಕರಿಸಿದ ಮನೆಗಳಲ್ಲೊಂದನ್ನು ಆಯ್ಕೆ ಮಾಡಿಕೊಂಡು ಜೀವನ ನಡೆಸುತ್ತಿದ್ದಾನೆ.

ಬೆಂಗಳೂರು ನಗರದ ಪ್ರಮುಖ ಬಡಾವಣೆಯೊಂದರಲ್ಲಿ ವೈದಿಕ ಪರಂಪರೆಯಲ್ಲಿ ಬೆಳೆದ ಕುಟುಂಬವೊಂದು ತಿಂಗಳಲ್ಲಿ ಒಮ್ಮೆ, ತಮ್ಮನ್ನು ಯಾರು ದಲಿತರು ಎಂದು ಕರೆದುಕೊಳ್ಳುತ್ತಾರೋ ಅವರಂತಹವರಲ್ಲಿ ಒಬ್ಬರನ್ನು ಮನೆಗೆ ಕರೆದು ಭೋಜನವನ್ನು ಉಣಬಡಿಸುವ ಸಂಪ್ರದಾಯವನ್ನು ಪ್ರಾರಂಭಿಸುವ ಮಟ್ಟಿಗೆ 'ವಿರಾಟ್ ಹಿಂದೂ ಸಮಾಜೋತ್ಸವ' ಪರಿಣಾಮ ನೀಡಿದೆ!

ನಮ್ಮೂರಿನಲ್ಲಿ 'ಶೂದ್ರರ ಬೀದಿ', 'ಹೊಲೆಯರ ಬೀದಿ' ಎಂದು ಕರೆಯುತ್ತಿದ್ದ ಶಾಲಾ-ಕಾಲೇಜಿನ ಮಕ್ಕಳು 'ವಿರಾಟ್ ಹಿಂದೂ ಸಮಾಜೋತ್ಸವ'ದ ನಂತರ ಅವೆಲ್ಲವನ್ನೂ 'ರೈತರ ಬೀದಿ' ಎನ್ನಲು ಪ್ರಾರಂಭಿಸಿದ್ದಾರೆ. ಅಕಸ್ಮಾತ್ ತಮ್ಮ ತಂದೆ-ತಾಯಿ ಬಾಯಿ ತಪ್ಪಿ ಹೇಳಿದರೂ ಮಕ್ಕಳು ಅವರಿಗೆ 'ಬುದ್ಧಿ' ಹೇಳುತ್ತಾರೆ!

ತಾನು ಕೆಳವರ್ಗಕ್ಕೆ ಸೇರಿದವ ಎಂಬ ಒಂದೇ ಕಾರಣಕ್ಕೆ ಬೇರೆ ಜನರ ಜತೆ ಬೆರೆಯದಿದ್ದ ಒಬ್ಬ ಪ್ರಾಥಮಿಕ ಶಾಲಾ ವಿದ್ಯಾರ್ಥಿ 'ವಿರಾಟ್ ಹಿಂದೂ ಸಮಾಜೋತ್ಸವ'ದ ನಂತರ ತನ್ನ ಕೀಳರಿಮೆಯನ್ನು ಬಿಟ್ಟು, ಎಲ್ಲರ ಜತೆ ಮುಕ್ತ ಮನಸ್ಸಿನಿಂದ ಬೆರೆತು ಆಟವಾಡುತ್ತಿದ್ದಾನೆ!

ಈ ಎಲ್ಲ ಸತ್ಪರಿಣಾಮಗಳನ್ನು ಮುಕ್ತ ಮನಸ್ಸಿನಿಂದ ಸ್ವಾಗತಿಸುವ ತಾಕತ್ತು, ಪ್ರಾಮಾಣಿಕತೆ, ಸಮಾಜದ ಬಗೆಗೆ ನಿಷ್ಥೆಯಂತಹ ಗುಣಗಳು ತಥಾಕಥಿತ ಬುದ್ಧಿಜೀವಿಗಳಿಗೆ, ಪ್ರಗತಿಪರರಿಗೆ, ವಿಚಾರವಾದಿಗಳಿಗೆ, ಜಾತ್ಯಾತೀತವಾದಿಗಳಿಗಿದೆಯೇ?

Feb 20, 2009

ಬಿಜೆಪಿಗೆ 'ವೈಯಕ್ತಿಕ ಚಾರಿತ್ರ್ಯ'ದ ಕೊರತೆ

ದೇಶದ ಔನ್ನತ್ಯದ ಬಗೆಗೆ ಕಿಂಚಿತ್ತಾದರೂ ಕಳಕಳಿಯಿದ್ದರೆ, ದೇಶದ ಹಿತದೃಷ್ಟಿಯಿಂದ ಬಿಜೆಪಿಯ ಪ್ರತಿಯೊಬ್ಬ ಕಾರ್ಯಕರ್ತನೂ ತನ್ನ ವೈಯಕ್ತಿಕ ಚಾರಿತ್ರ್ಯದ ವಿಷಯದಲ್ಲಿ ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಇದೆ.

ಪ್ರಸ್ತುತ ರಾಜಕೀಯ ವ್ಯವಸ್ಥೆಯಲ್ಲಿ ಹಾಗು ಇರುವ ಹಲವಾರು ಪಕ್ಷಗಳಲ್ಲಿ, 'ರಾಷ್ಟ್ರೀಯ ಚಾರಿತ್ರ್ಯ'ದ ಕುರಿತಾಗಿ ಸಾಸಿವೆಕಾಳಿನಷ್ಟಾದರೂ ವಿಶ್ವಾಸ ಮೂಡಿಸಿರುವ ಬಿಜೆಪಿ, ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಅಧಿಕಾರದ ಚುಕ್ಕಾಣಿ ಹಿಡಿಯಲು ಸಾಧ್ಯವಾಗಿದೆ. ಆದರೆ ಬಿಜೆಪಿ ತನ್ನ ಅಭ್ಯರ್ಥಿಗಳಲ್ಲಿ, ತನ್ನ ಕಾರ್ಯಕರ್ತರಲ್ಲಿ ಉತ್ತಮ ಚಾರಿತ್ರ್ಯ ನಿರ್ಮಾಣ ಮಾಡುವಲ್ಲಿ ವಿಫಲವಾಗಿದೆ.

ಈಗಾಗಲೇ 'ದುಷ್ಶಾಸಕ' ಎಂದೇ ಪ್ರಸಿದ್ಧಿಯಾಗಿರುವ, ಶಾಸಕರ ಸ್ಥಾನಮಾನವನ್ನು ಮೂರು ಕಾಸಿಗೆ ಹರಾಜು ಹಾಕಿರುವ, ಬಿಜೆಪಿ ಶಾಸಕ ಸಂಪಂಗಿಯ ಹಗರಣ, ಸಮಾಜದಲ್ಲಿ ಶಾಸಕರಾದಿಯಾಗಿ ಪ್ರತಿಯೊಬ್ಬ ಮತದಾರನಿಗೂ ಎಚ್ಚರಿಕೆಯ ಸೂಚನೆ ನೀಡಿದೆ.

ಈ ಹಗರಣದಿಂದ ಪಾಠ ಕಲಿತು, ತುತ್ತತುದಿಯ ಕಾರ್ಯಕರ್ತನಿಂದ ಹಿಡಿದು ಪ್ರತಿಯೊಬ್ಬ ಅಧಿಕಾರಸ್ಥರವರೆಗಿನ ಎಲ್ಲರಲ್ಲೂ ಉತ್ತಮ 'ವೈಯಕ್ತಿಕ ಚಾರಿತ್ರ್ಯ'ದ ನಿರ್ಮಾಣಕ್ಕೆ ಪ್ರಥಮ ಆದ್ಯತೆ ನೀಡಿ ಹಾಗು ಆ ನಂತರ ಉತ್ತಮ 'ರಾಷ್ಟ್ರೀಯ ಚಾರಿತ್ರ್ಯ'ದ ನಿರ್ಮಾಣದ ಮುಖಾಂತರ, ಬಿಜೆಪಿ ಹಾಗು ಇತರ ಎಲ್ಲ ಪಕ್ಷಗಳೂ ತಮ್ಮ ಬಲವರ್ಧನೆಯ ಕಾರ್ಯದಲ್ಲಿ ತೊಡಗಬೇಕು. ಆಗ ಮಾತ್ರ ಪ್ರತಿಯೊಬ್ಬ ರಾಜಕೀಯ ವ್ಯಕಿಯೂ ಭವ್ಯ ಭಾರತದ ನಿರ್ಮಾಣದಲ್ಲಿ ತನ್ನದೇ ಆದ ಕೊಡುಗೆಯನ್ನು ನೀಡಲು ಸಾಧ್ಯ.

ಉತ್ತಮ 'ವೈಯಕ್ತಿಕ ಚಾರಿತ್ರ್ಯ'ದ ಅನುಪಸ್ಥಿತಿಯಲ್ಲಿ 'ರಾಷ್ಟ್ರೀಯ ಚಾರಿತ್ರ್ಯ' ಪೂರ್ಣ ಸದುದ್ದೇಶದಿಂದ ಕೂಡಿರುವುದಿಲ್ಲ.

Feb 11, 2009

ನರೇಂದ್ರ ಮೋದಿಯಂತಹ ವ್ಯಕ್ತಿ ಬಿಜೆಪಿಗೇ ಆದರ್ಶವಾಗಲಿಲ್ಲವಲ್ಲ!

ದೇಶದ ಅತ್ಯುತ್ತಮ ಮುಖ್ಯಮಂತ್ರಿ ಎಂದು ತಮ್ಮ ವಿರೋಧಿ ಸಮೂಹದಿಂದಲೇ ಸೈ ಎನಿಸಿಕೊಂಡ ನರೇಂದ್ರ ಮೋದಿಯವರು ಬಿಜೆಪಿಯ ಮುಖ್ಯಮತ್ರಿಯಾಗಿದ್ದರೂ, ಅವರಲ್ಲಿರುವಂತಹ ರಾಜ್ಯದ ಅಭಿವೃದ್ಧಿಯ ಕುರಿತಾದ ಕನಸುಗಳು ಹಾಗು ಅವುಗಳನ್ನು ಆಚರಣೆಗೆ ತರುವಲ್ಲಿರುವನತಹ ನಿಷ್ಠೆ ದೇಶದ ಇನ್ಯಾವ ಮುಖ್ಯಮಂತ್ರಿಗೂ ಇಲ್ಲದಿರುವುದು, ಅದರಲ್ಲೂ ಯಾವ ಬಿಜೆಪಿಯ ಮುಖ್ಯಮಂತ್ರಿಗೂ ಇಲ್ಲದಿರುವುದು ದುರದೃಷ್ಟಕರ!

ರಾಜ್ಯದ ಅಭಿವೃದ್ಧಿಗೆ ನಿಮ್ಮ ಸರ್ಕಾರ ಏನು ಮಾಡಿದೆ, ಆಶ್ವಾಸನೆಗಳನ್ನು ಹೊರತುಪಡಿಸಿ ಎಂದು ಮೋದಿಯವರನ್ನು ಕೇಳಿದರೆ, ಕನಿಷ್ಠ ೪ ಗಂಟೆಗಳ ಕಾಲ ನಿರರ್ಗಳ ವರದಿಯನ್ನು ನೀಡುತ್ತಾರೆ, ಅಗತ್ಯ ದಾಖಲೆಗಳ ಸಮೇತ. ಆದರೆ ಇನ್ಯಾವುದೇ ಬಿಜೆಪಿಯ ಮುಖ್ಯಮಂತ್ರಿಗಳನ್ನೇ ಕೇಳಿದರೂ ಅರ್ಧ ಗಂಟೆ ದಾಟುವುದಿಲ್ಲ, ಆಶ್ವಾಸನೆಗಳ ಸಮೇತ!

ನರೇಂದ್ರ ಮೋದಿಯವರನ್ನು ಹೊರತುಪಡಿಸಿ ಉಳಿದೆಲ್ಲ ಮುಖ್ಯಮಂತ್ರಿಗಳು ಮುಂದಿನ ಚುನಾವಣೆಗಳನ್ನು ಮನದಲ್ಲಿರಿಸಿಕೊಂಡು ಜನಾಕರ್ಷಣೆಯ ಕಾರ್ಯಕ್ರಮಗಳಿಗೆ ಒತ್ತು ನಿದುತ್ತಿದ್ದಾರೆಯೇ ಹೊರತು, ಅಭಿವೃದ್ಧಿಯ ಕನಸೂ ಯಾರಿಗೂ ಇಲ್ಲ.

ನರೇಂದ್ರ ಮೋದಿಯವರ ಕಛೇರಿಯಲ್ಲಿ ವಿಲೇವಾರಿಯಾಗದ ಕಡತಗಳು ಇದ್ದರೆ, ಬೇರೆಡೆ ಓಡಾಡಲಾಗದ ರೀತಿಯಲ್ಲಿ ಬರೇ ವಿಲೇವಾರಿಯಾಗದ ಕಡತಗಳಿಂದಲೇ ಕಛೇರಿಗಳು ತುಂಬಿರುತ್ತದೆ.

ಹಿಂದಿನ ಸರ್ಕಾರ ಗಬ್ಬೆಬ್ಬಿಸಿ ಹೋದುದನ್ನು ಸರಿಪಡಿಸಿ ಅಭಿವೃದ್ಧಿಯ ದಿಕ್ಕಿನಲ್ಲಿ ಸಾಗುವುದು ಕೊಂಚ ಸಮಯ ಹಿಡಿಯುತ್ತಾದರೂ, ಬರೇ ರಾಜ್ಯವನ್ನಾಳುವ ದೃಷ್ಟಿಕೋನ ಬಿಟ್ಟು ರಾಜ್ಯದ ಅಭಿವೃದ್ಧಿಯೆಡೆಗಿನ ಬಗೆಗೆ ತಮ್ಮ ನಿಷ್ಥೆ ತೋರಿಸುವಲ್ಲಿ ಉಳಿದ ಎಲ್ಲರು ವಿಫಲರಾಗಿದ್ದಾರೆ. ಬರೇ ಎರಡು ಜತೆ ಜುಬ್ಬಾ-ಪೈಜಾಮಗಳನ್ನುಇಟ್ಟುಕೊಂಡು ಜೀವನ ಸಾಗಿಸುವ ಜಾರ್ಜ್ ಫರ್ನಾಂಡಿಸ್ ರವರು, ನಿಮಿಷಕ್ಕೆರಡು ಸೂಟುಗಳನ್ನು ತೊಟ್ಟು ಕ್ಯಾಮೆರಾಗಳಿಗೆ ಪೋಸು ಕೊಡುವ ಇನ್ಯಾವ ಎನ್ ಡಿಎ ಯ ಇತರರಿಗೆ ಆದರ್ಶವಾಗುವುದೇ ಇಲ್ಲ!