Sep 22, 2011

ಜಪಾನಿನಾನುಭವ - ೧ : ಶಿನ್ ಕಾನ್ ಸೆನ್ ಬುಲೆಟ್ ಟ್ರೈನಿನಲ್ಲಿ ಪ್ರಯಾಣ

ಕಳೆದ ಏಪ್ರಿಲ್ 23 ರಿಂದ ಜೂನ್ 6 ರ ವರೆಗೆ ನಾನು ಜಪಾನ್ ಪ್ರವಾಸದಲ್ಲಿದ್ದೆ. ಅಲ್ಲಿನ ಕೆಲ ಅನುಭವಗಗಳಿಗೆ ಅಕ್ಷರ ರೂಪ ಕೊಟ್ಟು ಇಲ್ಲಿಡುವ ಪ್ರಯತ್ನ.

ಜಪಾನಿನಲ್ಲಿ ಬುಲೆಟ್ ರೈಲು ಬಹಳ ಪ್ರಸಿದ್ದಿ. ಅವನ್ನು ಶಿನ್ ಕಾನ್ ಸೆನ್ ಎಂದು ಕರೆಯುತ್ತಾರೆ. ಅದರಲ್ಲಿ ಪ್ರಯಾಣ ಮಾಡಲು ಮನಸ್ಸು ತವಕಿಸುತ್ತಿತ್ತು. ಆದರೆ ಪ್ರಯಾಣ ದುಬಾರಿಯೂ ಹೌದು ಹಾಗು ತೀರ ಹತ್ತಿರದ ಸ್ಥಳಗಳಿಗೆ ಬುಲೆಟ್ ಟ್ರೈನುಗಳ ಸಂಪರ್ಕವಿರುದಿಲ್ಲ. ಈ ಕಾರಣಕ್ಕಾಗಿ ಬುಲೆಟ್ ರೈಲಿನಲ್ಲಿ ಪ್ರಯಾಣಿಸಿದಂತಾಗಬೇಕು, ಹತ್ತಿರದ ಪ್ರಯಾಣವೂ ಆಗಬೇಕು(ವೆಚ್ಚ ಕಡಿಮೆ ಮಾಡಲು) ಹಾಗು ಹೋದ ಸ್ಥಳದಲ್ಲಿ ಏನಾದರೂ ನೋಡುವಂತಿರಬೇಕು ಎಂಬ ಉದ್ದೇಶವನ್ನಿಟ್ಟುಕೊಂಡು ಹುಡುಕಿದಾಗ ತೋಚಿದ್ದೇ ಓಡಾವರದ ಕೋಟೆ (Odawara Castle). ನನ್ನ ಆತ್ಮೀಯ ಸಹೋದ್ಯೋಗಿಯ ಸಹಾಯದಿಂದ ಟ್ರೈನುಗಳ ವಿವರ, ಮಾರ್ಗಗಳು ಮುಂತಾದ ಟಿಪ್ಪಣಿಗಳನ್ನು ಬರೆದುಕೊಂಡು ಹೊರಟುನಿಂತೆ.

ನಾನಿದ್ದ ಇಸೋಗೋಯಿಂದ ಹಿಗಾಶಿ-ಕನಗವ, ಅಲ್ಲಿಂದ ಶಿನ್-ಯೋಕೋಹಾಮ ತನಕ ಎಲೆಕ್ಟ್ರಿಕ್ ಟ್ರೈನ್ (ಕೆಯಿನ್-ತೊಹೊಕು ನೆಗಿಷಿ ಲೈನ್ ಮತ್ತು ಜೆಆರ್ ಯೋಕೋಹಾಮ ಲೈನ್ )ನಲ್ಲಿ ಹೋಗಿ ಅಲ್ಲಿಂದ ಶಿನ್ ಕಾನ್ ಸೆನ್ ಕೊಡಾಮ 807 ಎಂಬ ಬುಲೆಟ್ ಟ್ರೈನ್ ನಲ್ಲಿ ಓಡಾವರ ತಲುಪಿದೆ.

ಬುಲೆಟ್ ರೈಲಿಗೆ ಇದು ಕಡಿಮೆ ಅಂತರವಾದ್ದರಿಂದ ಸಾಧಾರಣ ವೇಗದಲ್ಲಿ ಚಲಿಸುತ್ತದೆ. ಸರಿಸುಮಾರು ೬೦ ಕಿಲೋಮೀಟರು ಗಳಿರುವ ಶಿನ್-ಯೋಕೋಹಾಮದಿಂದ ಓಡಾವರಕ್ಕೆ ೧೪ ನಿಮಿಷಗಳಲ್ಲಿ ತಲುಪಿದೆ! ಪ್ರಯಾಣ ಮಾಡಿದ್ದೆ ಗೊತ್ತಾಗಲಿಲ್ಲ. ಬೇರೆ ರೈಲುಗಳಲ್ಲಿ ಆಗುವ ವೈಬ್ರೆಶನ್ ಬುಲೆಟ್ ಟ್ರೈನಿನಲ್ಲಿ ಇರದ ಕಾರಣ ರೈಲು ಚಲಿಸುತ್ತಿರುವುದೇ ಅನುಭವಕ್ಕೆ ಬಾರದು. ಕಿಟಕಿಯಿಂದ ಹೊರಗೆ ನೋಡಿದಾಗ ಮಾತ್ರ ರೈಲಿನ ವೇಗ ತಿಳಿಯುತ್ತದೆ.


ನಾನು ಓಡಾವರದಲ್ಲಿ ಇಳಿದು ಓಡಾಡುವ ಶಿನ್ ಕಾನ್ ಸೆನ್ ಬುಲೆಟ್ ಟ್ರೈನುಗಳನ್ನು ಕೆಲಕಾಲ ನೋಡಿ ಹೋಗುವ ಎಂದು ಕೂತ ಮರುಕ್ಷಣವೇ ಒಂದು ಟ್ರೇನು ಓಡಾವರದಲ್ಲಿ ನಿಲ್ಲಿಸದೆ ಹೋಯಿತು. ಕೇವಲ ೧ ಸೆಕೆಂಡುಗಳಲ್ಲಿ ಟ್ರೇನು ಮಾಯ..! ನಾನು ಟ್ರೈನನ್ನು ನೋಡಿದ್ದು ಕನಸಾ ಎಂಬ ಮಟ್ಟಿಗೆ ವೇಗದಲ್ಲಿ ಚಲಿಸಿ ಕಣ್ಮರೆಯಾಯಿತು.!

ಓಡಾವರದಲ್ಲಿ ಕೆಲ ಹೊತ್ತು ಹೋಗುವ-ಬರುವ ಬುಲೆಟ್ ಟ್ರೈನುಗಳ ಫೋಟೋಗಳು ಹಾಗು ವೀಡಿಯೊಗಳನ್ನ ಫೇಸ್ ಬುಕ್ಕಿಗಾಗಿ ತೆಗೆದುಕೊಂಡು ಅಲ್ಲಿಂದ ಓಡಾವರದಕೋಟೆಯನ್ನ (Odawara Castle) ಹುಡುಕಿಕೊಂಡು ಹೊರಟೆ.


ಒಟ್ಟಿನಲ್ಲಿ ಶಿನ್ ಕಾನ್ ಸೆನ್ ಟ್ರೈನಿನಲ್ಲಿ ಪ್ರಯಾಣ ಮಾಡಬೇಕೆಂಬ ಆಸೆ ಈಡೇರಿತ್ತು. ಆದರೆ ಇನ್ನು ಹೆಚ್ಚಿನ ವೇಗದ ಬುಲೆಟ್ ಟ್ರೈನಾದ 'ಹಯಬುಸ' ದಲ್ಲಿ ಯಾವಾಗ ಪ್ರಯಾಣ ಮಾಡುವೆನೋ... ಎಂಬ ಆಸೆ ಹುಟ್ಟಿತ್ತು.

ಜಪಾನಿನ ರೈಲುಗಳಲ್ಲಿ ಯಾರು ಜೋರಾಗಿ ಮಾತಾಡುವುದಿಲ್ಲ. ನಾವು ಮಾತಾಡಿದರೆ ನಮ್ಮ ಮಾತು ಮಾತ್ರ ಕೇಳುತ್ತದೆ ಇಡೀ ನಮ್ಮ ಭೋಗಿಗೆ. ಇದೆಲ್ಲ ನೋಡಿ, ಜಪಾನಿನ ಟ್ರೈನುಗಳು ನೋಡಲು ಅಥವಾ ಒಮ್ಮೆ ಪ್ರಯಾಣಿಸಲು ಚೆಂದ. ಆದರೆ ನಮ್ಮ ದೇಶದ ರೈಲುಗಳಲ್ಲಿ ಸಿಗುವಷ್ಟು ಆನಂದ ಅಲ್ಲಿ ಸಿಗುವುದಿಲ್ಲ ಎಂಬುದು ಮಾತ್ರ ಖಾತರಿಯಾಯಿತು.

Sep 12, 2011

ಶಿವಮೊಗ್ಗ : ಪ್ರತಿಷ್ಟಿತ ಹಿಂದೂಮಹಾಸಭಾ ಗಣಪತಿ ವಿಸರ್ಜನೆ

ಮೊನ್ನೆ ಭಾನುವಾರ ದಿನಾಂಕ ೧೧-೦೯-೨೦೧೧ ರಂದು ಶಿವಮೊಗ್ಗದ ಪ್ರತಿಷ್ಟಿತ ಹಿಂದೂ ಮಹಾಸಭಾದವತಿಯಿಂದ ಪ್ರತಿಷ್ಟಾಪಿಸಿದ ಗಣಪತಿಯ ವಿಸರ್ಜನಾ ಮಹೋತ್ಸವ ಸುಮಾರು ೧೦, ೦೦೦ ಜನರ ಸಮ್ಮುಖದಲ್ಲಿ , ಸುಮಾರು ೨೦೦೦ ಕ್ಕೂ ಹೆಚ್ಚು ಪೋಲೀಸರ ಬಿಗಿ ಬಂದೋಬಸ್ತ್ ನಲ್ಲಿ, ಅತ್ಯಂತ ವೈಭವೋಪೇತವಾಗಿ ಹಾಗು ಅತ್ಯಂತ ಶಾತಿಯುತವಾಗಿ ನೆರವೇರಿತು. ಭಾನುವಾರ ಬೆಳಿಗ್ಗೆ ಸುಮಾರು ೧೧ ರ ವೇಳೆಗೆ ಪ್ರಾರಂಭವಾದ ಮೆರವಣಿಗೆಗೆ ಹಲವಾರು ಜಾನಪದ ಕಲಾವಿದರ, ಚಂಡಿ ಮೇಳದವರ ಉಪಸ್ಥಿತಿ, ನೆರೆದಿದ್ದ ಭಕ್ತ ಸಮೂಹವನ್ನು ಸದಾ ಉತ್ಸಾಹದಲ್ಲಿರುವಂತೆ ಹುರಿದುಂಬಿಸುತ್ತಿತ್ತು.

ಮೆರವಣಿಗೆ ಸಾಗುವ ಮಾರ್ಗದಲ್ಲಿ ಎಲ್ಲಿ ನೋಡಿದರೂ ಅಲ್ಲಿ ತಳಿರು ತೋರಣಗಳು, ಕೇಸರಿ ಧ್ವಜಗಳು ಕಣ್ಣಿಗೆ ತಂಪನ್ನೆರೆಯುತ್ತಿತ್ತು. ಭಾರತ ಮಾತಾಕಿ ಜೈ, ವಂದೇ ಮಾತರಂ, ಕಟ್ಟುವೆವು ಕಟ್ಟುವೆವು ರಾಮ ಮಂದಿರ ಕಟ್ಟುವೆವು, ಭಾರತ ಮಾತೆಯ ಸಿಂಧೂರ ಕಾಶ್ಮೀರ ಕಾಶ್ಮೀರ ಎಂಬ ಘೋಷಣೆಗಳು ಹೆಚ್ಚಾಗಿ ಕೇಳಿಸುತ್ತಿದ್ದವು. ಸಾಕಷ್ಟು ಕಡೆ ವೀರ ಸಾವರ್ಕರ್, ಚಂದ್ರಶೇಖರ್ ಆಜಾದ್ ಮುಂತಾದ ಪ್ರಾತಃ ಸ್ಮರಣೀಯ ಕ್ರಾಂತಿಕಾರರ ಭಾಚಿತ್ರಗಳು ಕಾಣಿಸುತ್ತಿದ್ದವು.



ನೆರೆದಿದ್ದ ಭಕ್ತ ಸಮೂಹಕ್ಕೆ ಅಲ್ಲಲ್ಲಿ ನೀರು, ಪಾನಕ, ಲಘು ಉಪಹಾರದ ವ್ಯವಸ್ಥೆಯಿತ್ತು. ಮೆರವಣಿಗೆಯಲ್ಲಿ ಭಾಗವಹಿಸಿದ್ದ ಹಲಾವರು ಮಹಿಳೆಯರು ದೇಶಭಕ್ತಿ ಗೀತೆ - ಭಜನೆಗಳನ್ನು ಹಾಡುತ್ತ ಮೆರವಣಿಗೆಗೆ ಶ್ರದ್ಧೆ ತುಂಬುತ್ತಿದ್ದುದು ಕಂಡು ಬಂತು. ಈ ನಡುವೆ ಕೆಲ ಕಾಲ ಮಳೆ ಬಂದು ಅಡ್ಡಿಪಡಿಸಲೆತ್ನಿಸಿದರೂ ಜನರ ಉತ್ಸಾಹ ನೋಡಿ ನಂತರ ಸುಮ್ಮನಾಯಿತು.

ನಗರದ ಗಾಂಧೀ ಬಜಾರ್ , ಶಿವಪ್ಪನಾಯಕ ವೃತ್ತ, ಗೋಪಿ ವೃತ್ತ, ಶಿವಮೂರ್ತಿ ವೃತ್ತ, ಜೈಲ್ ವೃತ್ತ, ಮಹಾವೀರ್ ವೃತ್ತ ಹಾಗು ಕಾನ್ವೆಂಟ್ ವೃತ್ತಗಳ ಮೂಲಕ ಸಾಗಿದ ಮೆರವಣಿಗೆ ರಾತ್ರಿ ಸುಮಾರು ೧೧ ಗಂಟೆಯ ಸುಮಾರಿಗೆ ಮುಕ್ತಾಯವಾಗಿ ಮೂರ್ತಿಯನ್ನು ತುಂಗಾ ನದಿಯಲ್ಲಿ ವಿಸರ್ಜಿಸಲಾಯಿತು.



ಧಾರ್ಮಿಕ ವಿಷಯ ಅತ್ಯಂತ ಸೂಕ್ಷ್ಮ ಹಾಗು ಅವರವರ ನಂಬಿಕೆಗೆ ಬಿಟ್ಟ ವಿಷಯ. ಬೇರೆಯವರ ಶ್ರದ್ಧಾ-ನಂಬಿಕೆಗಳ ವಿರುಧ್ಧ ದುಷ್ಟ ಕೃತ್ಯಗಳನ್ನು ಎಸಗುವವರ ಪುಂಡರಿಗೆ ಇದನ್ನು ಅರ್ಥ ಮಾಡಿಸಲು ಇಂತಹ ಸಾಮಾಜಿಕ ಜಾಗೃತಿಯ ಕಾರ್ಯಕ್ರಮಗಳು ಅವಶ್ಯವೂ ಹೌದು, ಅನಿವಾರ್ಯವೂ ಹೌದು.