Apr 27, 2009

ಮತಚಲಾವಣೆ ಮಾಡದಿರುವವರನ್ನು ಕೇಳುವವರಾರು?

ರಾಜಕಾರಣಿಗಳ ಭ್ರಷ್ಟತೆಯ ಬಗ್ಗೆ, ಅವರ ನಡವಳಿಕೆಯ ಬಗ್ಗೆ, ಅವರ ಕಾರ್ಯಗಳ ಬಗ್ಗೆ, ಅವರು ಲೂಟಿಗೈದ ರಾಷ್ಟ್ರದ ಹಣದ ಬಗ್ಗೆ, ಅವರ ವೈಯಕ್ತಿಕ ವಿಷಯಗಳ ಬಗೆಗೂ ಮಾತನಾಡುವುದು ಸುಲಭ, ಸರಿ ಹಾಗು ಅವಶ್ಯ ಎನ್ನುವವರೂ ಇದ್ದಾರೆ. ಏಕೆಂದರೆ ಸಾರ್ವಜನಿಕ ಜೀವನ(!)ದಲ್ಲಿರುವವರ ಅದರಲ್ಲೂ ಜನಪ್ರತಿನಿಧಿಗಳ ಬಗ್ಗೆ ಮಾತನಾಡುವ ಹಾಗೂ ಪ್ರಶ್ನಿಸುವ ಹಕ್ಕು ಪ್ರಜೆಗಳಿಗಿರುವುದು ನಿಜ.

ಆದರೆ, ಈ ದೇಶದ ಪ್ರತಿಯೊಬ್ಬ ಪ್ರಜೆಯ ಮುಖ್ಯ ಕರ್ತವ್ಯವಾದ ಮತಚಲಾವಣೆಯೊಂದಿಗೆ ಇರುವ ಕೊಳ್ಳೆಬಾಕರಲ್ಲೇ ಕಡಿಮೆ ಕೊಳ್ಳೆಹೊಡೆಯುವವರನ್ನ, ರಾಜ್ಯವನ್ನು ಲೂಟಿಮಾಡಿಕೊಂಡೆ ಅಲ್ಪ-ಸ್ವಲ್ಪ ರಾಜ್ಯದ ಕೆಲಸ ಮಾಡುವವರನ್ನ, ಇದ್ದುದರಲ್ಲೇ ಸ್ವಲ್ಪ ಉತ್ತಮ ಚಾರಿತ್ರ್ಯ ಹೊಂದಿದವರನ್ನ, ಇದ್ದುದರಲ್ಲೇ ರಾಜ್ಯದ-ರಾಷ್ಟ್ರದ ಕುರಿತಾಗಿ ಕಿಂಚಿತ್ ಕಾಳಜಿಯಿರುವವರನ್ನ ಆಯ್ಕೆ ಮಾಡುವ ಕಾರ್ಯದಲ್ಲಿ ಪಾಲ್ಗೊಳ್ಳದ ಪ್ರಜೆ(!)ಗಳನ್ನು ಪ್ರಶ್ನಿಸುವವರು ಯಾರು?

ಮತಚಲಾವಣೆಯ ಕುರಿತಾಗಿ ಹಲವರಿಗೆ ಅಸಡ್ಡೆಯ ಭಾವನೆಯಿರುವ ವಿಷಯದಲ್ಲಿ ಭ್ರಷ್ಟ, ಹೊಟ್ಟೆಬಾಕ ರಾಜಕಾರಣಿಗಳ ಪಾತ್ರ ಎಷ್ಟು ಹಿರಿದೋ, ಮತಚಲಾಯಿಸದ ಪ್ರಜ್ಞಾವಂತ ಪ್ರಜೆಗಳ ಪಾತ್ರವೂ ಅಷ್ಟೇ ಹಿರಿದು.

ಜಗತ್ತಿನ ಬೃಹತ್ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಮತದಾನ ಶೇ.೫೦ ರಿಂದ ಶೇ.೬೦ ಎನ್ನುವ ವಿಷಯ ಯಾರ ಮನಸ್ಸನ್ನೂ ಆವರಿಸಿದಿರುವವರ ಮಟ್ಟಿಗೆ ನಮ್ಮ ದೇಶದಲ್ಲಿ ಪ್ರಜೆಗಳ ಸಂಖ್ಯೆ ಹಾಗು ವ್ಯಕ್ತಿಗಳ ಸಂಖ್ಯೆಗಳ ನಡುವೆ ಸ್ಪರ್ಧೆ ಏರ್ಪಟ್ಟಿದೆ!

ಈ ರಾಷ್ಟ್ರ ಹಾಗು ಈ ರಾಷ್ಟ್ರದ ಪ್ರಜೆಗಳ ನಡುವೆ ಪವಿತ್ರವಾದ ಹಾಗು ಅಚಲವಾದ ಭಾವನಾತ್ಮಕ ಸಂಬಂಧ ಬೆಳೆಯುವುದು ಹಾಗು ಬೆಳೆಸುವುದೇ ಎಲ್ಲ ರಾಷ್ಟ್ರೀಯ ಸಮಸ್ಯೆಗಳಿಗೆ ಏಕಮೇವ ಪರಿಹಾರ ಎಂದು ಎಲ್ಲರಿಗೂ ಅರ್ಥವಾಗುವುದು ಯಾವಾಗ?

1 comment:

  1. Good article.....
    It would be really good if reader understands the purpose of this article and try to implement in their life...

    ReplyDelete