Oct 13, 2009

ಇದೂ ಕೂಡ ಭಾರತದಲ್ಲಿ ಮಾತ್ರ ನಡೆಯಲು ಸಾಧ್ಯ

ಕೆಲವರಿಗೆ ಭಾರತದಲ್ಲಿನ ಭ್ರಷ್ಟಾಚಾರ, ಬಡತನ, ಜಾತಿ ವ್ಯವಸ್ಥೆ, ಅನಾಗರೀಕತನದ ಬಗೆಗೆ ಬರೆದು ಕಡೆಯಲ್ಲಿ ತಮ್ಮ ಬರಹವನ್ನು, 'ಇವೆಲ್ಲ ಭಾರತದಲ್ಲಿ ಮಾತ್ರ ನಡೆಯಲು ಸಾಧ್ಯ' ಎಂದು ಮುಗಿಸುವುದು ಚಟ ಹಾಗು ಅದೇ ಅವರಿಗೆ ಹೆಮ್ಮೆಯ ವಿಷಯ ಕೂಡ. ಆದರೆ ಜಗತ್ತಿನ ಬೇರೆಲ್ಲಿಯೂ ನಡೆಯದ, ಭಾರತದಲ್ಲಿ ಮಾತ್ರ ಸಾಧ್ಯವಾಗುವ ಒಳ್ಳೆಯ ಕೆಲಸಗಳು ಲೆಕ್ಕವಿಲ್ಲದಷ್ಟಿವೆ ಎಂಬುದು ಭಾರತೀಯರಿಗಿಂತ ಉಳಿದವರಿಗೇ ಹೆಚ್ಚಾಗಿ ಹಾಗು ಖಚಿತವಾಗಿ ಗೊತ್ತು.

ರಾಜ್ಯದಲ್ಲಿನ ನೆರೆ ಪರಿಹಾರಕ್ಕೋಸ್ಕರ ನಡೆಯುತ್ತಿರುವ ಪಾದಯಾತ್ರೆಗಳು ಹಾಗೂ ತತ್ಸಂಭದದ ಚಟುವಟಿಕೆಗಳ ಕುರಿತು, ಮೊನ್ನೆ ನಮ್ಮ ಸ್ನೇಹಿತರ ಜತೆಗೆ ಅಮೆರಿಕಾದಿಂದ ಬಂದಂತಹ ವ್ಯಕ್ತಿಯೊಬ್ಬರು ಅತ್ಯಂತ ಹರ್ಷದಿಂದ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದಾಗ ನಮ್ಮ ದೇಶದ ಬಗೆಗೆ ಅತೀವ ಹೆಮ್ಮೆಯಾಯಿತು.

'ನಮ್ಮ ದೇಶದಲ್ಲೂ ಹಿಂದೊಮ್ಮೆ ಪ್ರಕೃತಿ ವಿಕೋಪ ಸಂಭವಿಸಿದಾಗ ಸಹಾಯ ಕೇಳಲು ಬಂದ ಯುವತಿಯನ್ನು ಅನುಚಿತ ವರ್ತನೆಯಿಂದ ಬರ್ಬರವಾಗಿ ಕೊಲೆ ಮಾಡಿದ್ದರು. ಆ ಸಮಯದಲ್ಲಿ ಆ ಬಗ್ಗೆ ಅಳುವವರಿರಲಿ, ಚಿಂತಿಸುವವರೂ ಇರಲಿಲ್ಲ. ಅತಿಯಾದ ಅಧುನೀಕತೆ ಹಾಗು ಶ್ರೀಮಂತಿಕೆಗೊಸ್ಕರ ಮಾನವೀಯತೆಯನ್ನೇ ಬಲಿ ಕೊಡುತ್ತಿದ್ದೇವೆ ನಾವು. ನಮ್ಮಲ್ಲಿ ಕೆಲವೇ ಕೆಲವು ಜನ ಅತಿ ಹೆಚ್ಚಿನ ಹಣ ಕೊಡಬಹುದು. ಆದರೆ ಹಣ ನೀಡುವವರ, ಅದನ್ನು ತನ್ನ ಕರ್ತವ್ಯ ಎಂಬಂತೆ ಅರ್ಥೈಸಿಕೊಳ್ಳುವವರ ಸಂಖ್ಯೆ ಅಧಿಕ. ಚಪ್ಪಲಿ ಹೊಲಿಯುವವನು ಕೂಡ ತನ್ನದೇ ಆದ ಸಹಾಯ ಮಾಡುತ್ತಾನೆ. ಉಳಿದ ಎಲ್ಲ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಮಾತ್ರ ಮಾನವೀಯತೆಗೆ ಕೊರತೆಯಿಲ್ಲ. ರಿಯಲಿ ಐ ಲೈಕ್ ಯುವರ್ ಇಂಡಿಯಾ' ಎಂದಾಗ ಭಾರತ ನಿಜವಾಗಿ ಅತ್ಯಂತ ಪುಜನೀಯವಾಗಿ ಕಂಡಿತು.


ನೆರೆ ಪರಿಹಾರದಡಿಯಲ್ಲಿ ಸರ್ಕಾರ ಖುದ್ದಾಗಿ ಬೀದಿಗಿಳಿದಿದೆ. ವಿರೋಧ ಪಕ್ಷಗಳೂ ತಮ್ಮ ಎಂದಿನ ಕೆಸರೆರಚಾಟದ ಚಾಳಿಯನ್ನು ಬಿಟ್ಟು ತಾವು ಯಾರಿಗೂ ಕಡಿಮೆಯಿಲ್ಲ ಎಂಬಂತೆ ಸಂಗ್ರಹ ಕಾರ್ಯದಲ್ಲಿ ತೊಡಗಿವೆ. ಶ್ರೀಸಾಮಾನ್ಯನಿಂದ ಹಿಡಿದು ಸಂಘ-ಸಂಸ್ಥೆಗಳು, ಕೈಗಾರಿಕೋದ್ಯಮಿಗಳು, ಸಣ್ಣಪುಟ್ಟ ವ್ಯಾಪಾರಿಗಳು, ಹಾಲು ಮಾರುವವರು, ಕಸ ಗುಡಿಸುವವರು, ಪತ್ರಿಕೆ ಹಾಕುವವರು, ತರಕಾರಿ ಮಾಡುವವರು, ವಾಹನ ಚಾಲಕರಾದಿಯಾಗಿ ಎಲ್ಲರು ಕೈ ಪರಿಹಾರ ಕಾರ್ಯದಲ್ಲಿ ಕೈ ಜೋಡಿಸಿದ್ದಾರೆ. ಶಾಲೆಗೆ ಹೋಗುವ ವಿದ್ಯಾರ್ಥಿ-ವಿದ್ಯಾರ್ಥಿನಿಯರು ತಮ್ಮ ಪಾಕೆಟ್ ಮನಿಯನ್ನು ಅರ್ಪಿಸಿದ್ದಾರೆ. ಮಠಾಧಿಪತಿಗಳೂ ತಮ್ಮ ಕರ್ತವ್ಯವೆಂಬಂತೆ ಅಕ್ಷರಶಃ ರಸ್ತೆಗಿಳಿದಿದ್ದಾರೆ. ಇಡೀ ರಾಜ್ಯ ಒಕ್ಕೊರಲಿನಿಂದ ಸ್ಪಂದಿಸುತ್ತಿದೆ. ಹೇಳಿ, ಈ ರೀತಿಯ ಮಾನವೀಯತೆಯ ಮೈವೆತ್ತರೂಪ ಭಾರತದಲ್ಲಲ್ಲದೆ ಮತ್ತೆಲ್ಲಿ ಕಾಣಸಿಗುತ್ತದೆ?

ಭಾರತ ಸ್ಮರಣೀಯ ಮಾತ್ರವಲ್ಲ ಪೂಜನೀಯ ಕೂಡ.

ವಂದೇಮಾತರಂ

No comments:

Post a Comment