Apr 24, 2012

ವಿಚಾರವಾದಿಗಳಿಗೇ ವಿಚಾರಕ್ಕೆ ಬರ....


ನಾನು ಸಾಕಷ್ಟು ದಿನಗಳಿಂದ ಪತ್ರಿಕೆಗಳನ್ನ ಗಮನಿಸಿದ್ದೇನೆ. ಸುದ್ದಿ ಮಾಧ್ಯಮಗಳನ್ನ ನೋಡಿದ್ದೇನೆ. ಅದು ಕಟ್ಟಡ ಉದ್ಘಾಟನೆ ಕಾರ್ಯಕ್ರಮವಾಗಿರಲಿ, ಗೌರವ ಸಮರ್ಪಣೆಯ ಕಾರ್ಯಕ್ರಮವಾಗಿರಲಿ, ವಿಚಾರ ವೇದಿಕೆಯ ಕಾರ್ಯಕ್ರಮವಾಗಿರಲಿ, ಅನೌಪಚಾರಿಕ ಕಾರ್ಯಕ್ರಮವಾಗಿರಲಿ, ಸ್ನೇಹಿತರ ಭೇಟಿಯ ಕಾರ್ಯಕ್ರಮವಾಗಿರಲಿ, ವಿಚಾರ ಸಂಕಿರಣವಾಗಿರಲಿ,  ಮಾಧ್ಯಮದವರು ಯಾರಾದರೂ ಇದ್ದರೆ ಸಾಕು ಇವರು ಮಾತಾಡುವುದು ಮಾತ್ರ ಒಂದೇ ವಿಷಯ.

ಮೊನ್ನೆ ದಲಿತ ಸಂಘರ್ಷ ಸಮಿತಿ ಹಮ್ಮಿಕೊಂಡಿದ್ದ ಡಾ.ಅಂಬೇಡ್ಕರ್ ರವರ 121ನೆಯ ಜನ್ಮದಿನದ ಕಾರ್ಯಕ್ರಮವೊಂದರಲ್ಲಿ ಕರ್ನಾಟಕ ದ  ವಿಶ್ವ ವಿಖ್ಯಾತ  ವಿಚಾರ(ವಿಲ್ಲದ)ವಾದಿ ಪ್ರೊ. ಜಿ.ಕೆ.ಗೋವಿಂದರಾವ್ ರವರು ರವಿಶಂಕರ್ ಗುರೂಜಿಯವರ ಬಗ್ಗೆ ಸಿಕ್ಕಾಪಟ್ಟೆ ಮಾತಾಡಿ ಸುಸ್ತಾದದ್ದು ಅಂತರ್ಜಾಲದಲ್ಲೂ ಹರಿದಾಡಿತು. ಅವರು ಪ್ರೊಫೆಸರ್ ಅಲ್ವಾ, ತುಂಬಾ ಬುದ್ದಿವಂತರು. ಓದುಗರ ಪ್ರಕ್ರಿಯೆಗಳನ್ನ ನೋಡಲು ಕೂಡ ಹೋಗುವುದಿಲ್ಲ..!

ಕಳೆದ ಜನವರಿಯಲ್ಲಿ ನಡೆದ ಪುಸ್ತಕ ಬಿಡುಗಡೆ ಕಾರ್ಯಕ್ರಮವೊಂದರಲ್ಲಿ ಬರಗೂರು ರಾಮಚಂದ್ರಪ್ಪನವರು, ಸಾಹಿತಿ ಮರುಳಸಿದ್ದಪ್ಪನವರು, ಭೈರಪ್ಪನವರ ಹಾಗು ಸಂಶೋಧಕ ಚಿದಾನಂದಮೂರ್ತಿಯವರ ವಿರುಧ್ಧ ಮಾತಾಡಿದ್ದರು.

ನಮ್ಮ ರಾಜ್ಯದ ಸಾಹಿತಿ ಮರುಳಸಿದ್ದಪ್ಪನವರು, ಪ್ರೊಫೆಸರ್ ಜಿ.ಕೆ.ಗೋವಿಂದರಾವ್, ಡಾ.ಯು. ಆರ್. ಅನಂತಮೂರ್ತಿ, ಡಾ.ಬರಗೂರು ರಾಮಚಂದ್ರಪ್ಪ, ಸಾಹಿತಿ ಚಂದ್ರಶೇಖರ ಪಾಟೀಲರು ಇನ್ನು ಮುಂತಾದ ಅಸಾಧಾರಣ ಪ್ರತಿಭೆಗಳು ಯಾವ ಕಾರ್ಯಕ್ರಮಗಳಲ್ಲಾಗಲೀ , ಯಾವ ವೇದಿಕೆಗಳಲ್ಲಾಗಲೀ ಮಾತನಾಡುವುದು ಮಾತ್ರ ಸಂಘಪರಿವಾರದ ವಿರುದ್ಧ, ಇಲ್ಲವೇ ಮಠಮಂದಿರಗಳ ಬಗ್ಗೆ, ಇಲ್ಲವೇ ಸಾಧುಸಂತರ ವಿರುದ್ಧ ಇಲ್ಲವೇ ಭೈರಪ್ಪನವರ ವಿರುದ್ಧ, ಇಲ್ಲವೇ ಸಂಶೋಧಕ ಚಿದಾನನದಮೂರ್ತಿಯವರ ವಿರುದ್ಧ. ಒಟ್ಟಿನಲ್ಲಿ ಹಿಂದೂಸಮಾಜದ ವಿರುದ್ಧ.

ಯಾವ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದೇವೆ. ಶ್ರೋತೃಗಳು ಯಾರು ಎಂಬ ಅರಿವೂ ಇಲ್ಲದೆ ಎಲ್ಲಿ ಹೋದರೂ ತಮ್ಮ ಅಸೂಯೆಯನ್ನು ಹೊರಹಾಕುವ ಈ ವಿಚಾರವಾದಿಗಳಿಗೇ ವಿಚಾರಕ್ಕೆ ಬರ ಬಂದಿದೆ ಎಂದರೆ ಯಾರಿಗೆ ತಾನೇ ಪಾಪ ಎನಿಸುವುದಿಲ್ಲ?

ಇದನ್ನೇ ಹೊಟ್ಟೆಪಾಡನ್ನಾಗಿ ಮಾಡಿಕೊಂಡಂತಿರುವ ಇವರ ಮನಸ್ಸಿಗೆ ಕವಿದಿರುವ ದ್ವೇಷದ, ಅಸೂಯೆಯ ಕಾರ್ಮೋಡ ಆದಷ್ಟು ಬೇಗ ಸರಿದು ಪ್ರಾಮಾಣಿಕರಾಗಲಿ ಎಂದು ಆ ದೇವರನ್ನು ರಾಜ್ಯದ ಜನರ ಪರವಾಗಿ ಪ್ರಾರ್ಥಿಸುವೆ.

Apr 15, 2012

ಜಪಾನಿನಾನುಭವ-೩ : ನಮ್ ದೇಶ ವಾಸಿ ಮಾರಾಯ...

ಸಾಕಷ್ಟು ಜನ ಹೊರದೇಶಗಳಿಗೆ ಹೋಗಿ ಬಂದಾಗ ನಮ್ಮ ದೇಶದ ಜೊತೆ ತಾವು ಹೋದ ದೇಶವನ್ನು ತುಲನೆ ಮಾಡಿ ನಮ್ಮ ದೇಶದಲ್ಲಿ ಏನೇನು ಕೊರತೆ ಇದೆ ಎಂಬುದನ್ನ ನಮ್ಮ ದೇಶ ಎಷ್ಟು ಹಿಂದಿದೆ ಎಂಬರ್ಥದಲ್ಲಿ ಬರೀತಾರೆ. ಅದರಲ್ಲಿ ಒಳ್ಳೆ ನಮ್ಮ ದೇಶ ಇನ್ನೂ ಯಾಕೆ ಹೀಗಿದೆ ಎಂಬ ಕೊರಗಿನಿಂದಲೂ ಬರೆಯುವರಿದ್ದಾರೆ. ನಾನು ಈ ಸಲ ಸ್ವಲ್ಪ ವಿಭಿನ್ನವಾಗಿ ‘ಬರೆದುಕೊಳ್ಳೋಣ’ ಎಂದು ಅಂದುಕೊಂಡಿದ್ದೆ.

ಒಂದು ದಿನ ಶಿಬುಯದಿಂದ ಯೋಕೋಹಾಮಕ್ಕೆ ಮಿನಾತೋ ಮಿರೈ ಲೈನ್ ರೈಲು ಹತ್ತಿದೆ. ರೈಲು ಹೊರಟ ವೇಗಕ್ಕೆ ನನ್ನ ಪಕ್ಕದಲ್ಲಿದ್ದ, ಸುಮಾರು ಆರೇಳು ವರ್ಷದ ಹುಡುಗ ಕೆಳಗೆ ಬಿದ್ದ. ನಾನು ಅವನನ್ನು ನನ್ನ ತೋಳನ್ನು ಬಳಸಿ ತಕ್ಷಣ ಎತ್ತಿ ನಿಲ್ಲಿಸಿದೆ. ಆ ಕಾರಣಕ್ಕೆ ಪಕ್ಕದಲ್ಲಿದ್ದವರೆಲ್ಲ ಎಷ್ಟು ಆಶ್ಚರ್ಯದಿಂದ ನೋಡಿದರು ಎಂದರೆ, ನಾನು ಮಾಡಿದ್ದು ಸರಿನೋ, ತಪ್ಪೋ ಎಂಬನುಮಾನ ಮೂಡುವ ಮಟ್ಟಿಗೆ, ಅವರ ದೃಷ್ಟಿ ಇತ್ತು. ಜಪಾನೀಯರು ಇದನ್ನು ಹೇಗೆ ಸ್ವೀಕಾರ ಮಾಡಿದರು ಎಂಬುದೇ ಗೊತ್ತಾಗಲಿಲ್ಲ. ಇದೆಲ್ಲ ನಮ್ಮ ದೇಶದಲ್ಲಿ ಅದೆಷ್ಟು ಸಹಜ, ಇಲ್ಲಿ ...?

ಇತ್ತೀಚಿಗೆ ಡಿಸ್ನಿಸೀಗೆ ಹೋದಾಗ ನಾವು ಸ್ನೇಹಿತರು ತುಂಬಾ ಮುದ್ದಾದ ಮಗುವನ್ನ ನೋಡಿದತಕ್ಷಣ ಅದನ್ನ ಮುಟ್ಟಿ, ಕೆನ್ನೆಯನ್ನು ಕೈನಲ್ಲಿ ಮುದ್ದಿಸಿ, ಮಾತನಾಡಿಸಲು ಪ್ರಯತ್ನಿಸಿದೆವು. ಆಗ ಮಗು ಅಮ್ಮನ ಬಳಿ ಓಡಿ ಹೋಯಿತು. ಮಗುವಿನ ಪೋಷಕರಿಗೆ ಎಷ್ಟು ಆಶ್ಚರ್ಯದ ಖುಷಿ ಎಂದರೆ ಅವರ ಜೀವನದಲ್ಲಿ ನಾವೇ ಮೊದಲು ಅನ್ಸುತೆ ಅವರ ಮಗುವನ್ನು ಮೂರನೇ ವ್ಯಕ್ತಿಯಾಗಿ ಮುದ್ದಿಸಿದ್ದು, ರೀತಿಯಲ್ಲಿತ್ತು ಅವರ ಆಶ್ಚರ್ಯ.

ಅದಾದ ಕೆಲವೇ ದಿನಗಳಲ್ಲಿ ಇಸ್ಕಾನ್ ಜಪಾನ್ ರಾಮನವಮಿ ಉತ್ಸವಕ್ಕೆಂದು ಫುನಬೋರಿ ಎಂಬಲ್ಲಿಗೆ ಹೋಗಿದ್ದೆ. ಬರುವಾಗ ನಾನು ಇಳಿಯುವ ಸ್ಟೇಷನ್ ಬಂದೊಡನೆ, ಸ್ವಲ್ಪ ಜನರ ದಟ್ಟಣೆ ಇದ್ದಿದ್ದರಿಂದ ಎಲ್ಲರೂ ಆತುರದಿಂದ ಇಳಿಯಲು ಪ್ರಾರಂಭಿಸಿದರು. ಆಗ ಒಬ್ಬರು ತಮ್ಮ ಛತ್ರಿಯನ್ನು ರೈಲಿನಲ್ಲಿ ಬೀಳಿಸಿಕೊಂಡರು. ಯಾರು ಬೀಳಿಸಿಕೊಂಡರು ಎಂಬುದನ್ನು ನೋಡಿದವರು ಕೂಡ ಅದನ್ನು ಕೊಡುವ ಪ್ರಯತ್ನ ಮಾಡದಿದ್ದುದನ್ನು ಮೂಕನಾಗಿ ನೋಡುತ್ತಾ ನಾನು ಮುಂದಿನ ಹೆಜ್ಜೆ ಹಾಕಿದೆ. ನಮ್ಮ ದೇಶದಲ್ಲಿ ತಾವೇ ತೆಗೆದುಕೊಂಡು ಹೋಗುವವರಿದ್ದರೂ ಯಾರ ವಸ್ತು ಎಂದು ಗೊತ್ತಾದರೆ ಅವರಿಗೆ ತಲುಪಿಸುವ ಜನರೇ ಹೆಚ್ಚು.

ಬಹುಪಾಲು ಜಪಾನಿಯರ ಒಂದು ದಿನ ಇನ್ನೊಂದು ದಿನಕ್ಕಿಂತ ಭಿನ್ನವಾಗಿರುವುದಿಲ್ಲ. ಒಬ್ಬರಿಗೊಬ್ಬರು ಅಗತ್ಯಕ್ಕಿಂತ ಹೆಚ್ಚಿನ ಮಾತಿಲ್ಲ, ಅದಕ್ಕೆ ಜಗಳವಿಲ್ಲ, ಆಹಾರದಲ್ಲಿ, ಮಾಂಸಾಹಾರದಲ್ಲಿ, ಬಿಟ್ಟರೆ ಇನ್ಯಾವುದರಲ್ಲೂ ನಮ್ಮ ದೇಶದ ತರಹ ವಿವಿಧತೆಯಿಲ್ಲ. ನಮ್ಮ ದೇಶದಲ್ಲೋ, ಹೆಜ್ಜೆ ಹೆಜ್ಜೆಗೆ ವಿವಿಧ ರೀತಿಯ ಜನ, ಆಹಾರ, ನೆಲ, ಜಲ. ಒಂದರಿಂದ ಇನ್ನೊಂದು ಉತ್ಕೃಷ್ಟ. ಅದಿಲ್ಲಿ ಅಲಭ್ಯ. ಆದರೆ ಇತ್ತೀಚಿನ ಮಕ್ಕಳು ರೈಲಿನಲ್ಲಿ, ಬೀದಿಯಲ್ಲಿ ಮಾತನಾಡಲು 'ಧೈರ್ಯ' ಮಾಡಿರುವುದು ಉತ್ತಮ ಸಂಕೇತ.

ಬೆಳಗ್ಗೆ ಗಂಟೆಗೇ ರೈಲುಗಳ ಓಡಾಟ ಶುರುವಾಗುತ್ತದೆ. ಸಮಯದಲ್ಲಿ ರೈಲು ಹತ್ತಿದರೆ ಸಾಕಷ್ಟು ಜನರೇ ಇರುತ್ತಾರೆ. ಅವರನ್ನು ನೋಡಿದರೆ ಆಫೀಸಿನಿಂದ ಬರುತ್ತಿದ್ದಾರೋ ಅಥವಾ ಹೋಗುತ್ತಿದ್ದಾರೋ ಗೊತ್ತಾಗುವುದಿಲ್ಲ. ಅಂದ ಮಾತ್ರಕ್ಕೆ ಆಫೀಸಿನಲ್ಲಿ ತುಂಬ ಹೊತ್ತು ಕೆಲಸ ಮಾಡುವವರೆಲ್ಲರೂ ಅಸಾಧಾರಣ ಕೆಲಸಗಾರರು ಎಂದೇನಲ್ಲ.

ಒಂದಂತೂ ನಿಜ. ಕೆಲವು ಸಂಘಟನೆಗಳ ಸಹವಾಸದ ಕಾರಣಕ್ಕೆ ನಮ್ಮ ದೇಶದ ಬಗೆಗೆ ಸಾಕಷ್ಟು ಹೆಮ್ಮೆ, ಪ್ರೀತಿ, ಭಕ್ತಿ, ನಿಷ್ಠೆಗಳು ಕಿಂಚಿತ್ ದೊರಕಿದರೂ ಹೊರದೇಶಕ್ಕೆ ಒಮ್ಮೆ ಹೋಗಿ, ಒಬ್ಬಂಟಿಯಾಗಿ ಇದ್ದು ಬಂದರೆ ಭಾವ ಇನ್ನೂ ಗಟ್ಟಿಯಾಗುತ್ತದೆ. ನಮ್ಮ ದೇಶ ಎಂತಹ 'ಉತ್ಕೃಷ್ಟ ಸ್ವರ್ಗ' ಎಂದು ಕೆಲವು ಜನರಿಗಂತೂ ಅರಿವಾಗಿಯೇ ಆಗುತ್ತದೆ.