Aug 26, 2019

ಯುವಾ ಬ್ರಿಗೇಡಿನ '5th Pillar' - ಭಾಗ ೧

ದಿನ (ಆಗಸ್ಟ್ ೧೦) ಒಂದು ಅತ್ಯದ್ಭುತ ಕಾರ್ಯಕ್ರಮದ ಭಾಗಿಯಾಗಿದ್ದು ನನ್ನ ಅದೃಷ್ಟವೇ ಸರಿ! ಇದರ ಹೆಸರು ಫಿಫ್ತ್ ಪಿಲ್ಲರ್ (5th Pillar)! ಇದನ್ನು ಆಯೋಜಿಸಿದ್ದು ಯುವ ಬ್ರಿಗೇಡ್.  ನನಗೆ ಕಾರ್ಯಕ್ರಮದ ಬಗ್ಗೆ ತಿಳಿದಾಗ, ಇದರ ಬಗ್ಗೆ ನಿಜಕ್ಕೂ ನನಗೆ ಗೊತ್ತಿರಲಿಲ್ಲ.  ಸುಮಾರು 15 ವರ್ಷಗಳಿಂದ ಹಿಂದೆ 2004 ರಲ್ಲಿ ನಾವು ಚಕ್ರವರ್ತಿಯವರ ಕಾರ್ಯಕ್ರಮವನ್ನು ನಮ್ಮ ಕಾಲೇಜಿನಲ್ಲಿ ಆಯೋಜಿಸಿದ್ದೆವು.  ಅದಕ್ಕೂ ಮೊದಲೇ ನಮ್ಮೂರು ಮತ್ತೂರಿನಲ್ಲೂ ಸಾಕಷ್ಟು ಕಾರ್ಯಕ್ರಮ ನಡೆದಿತ್ತು. ಆಗಿನಿಂದಲೂ ಅಭಿಮಾನವಿರುವ ನನಗೆ, ಚಕ್ರವರ್ತಿಯವರು ಇರುತ್ತಾರೆ ಎಂಬ ಒಂದೇ ಕಾರಣಕ್ಕೆ ನಾನು ಹೋಗಿದ್ದು. ಅಷ್ಟರ ಮಟ್ಟಿಗೆ ನಾನು ಅನಪೇಕ್ಷಿತನೇ !

ಇದೊಂದು ಅದ್ಭುತ ಐಡಿಯಾ! ನಮ್ಮಲ್ಲಿ ಎಷ್ಟೋ ಜನರಿಗೆ, ಏನೋ ಸಾಧಿಸಬೇಕು ಅನ್ನುವ ಹುಮ್ಮಸ್ಸು, ಮನಸ್ಸು ಇರುತ್ತದೆ, ಆದರೆ ಅದಕ್ಕೆ ಒಂದು ಗುರಿ ಹಾಗು ಗುರು ಸಿಗುವುದು ಕಷ್ಟ! ವೇದಿಕೆ, ಸ್ಟಾರ್ಟ್ ಅಪ್  ಸಾಧಕರನ್ನು ಕರೆ ತಂದು, ಅವರ ಅನುಭವವನ್ನು ಎಳೆಯ ಮನಸ್ಸುಗಳಿಗೆ ಹುರಿದುಂಬಿಸುವ ಕಾರ್ಯಕ್ರಮ ಇದು (Business Conclave). ಇಲ್ಲಿ ಇದ್ದವರೆಲ್ಲಾ ಏನಾದರೂ ಸಾಧಿಸಬೇಕು ಅನ್ನುವ ಮನಸ್ಸನ್ನು ಹೊಂದಿದ್ದ ಯುವಕ ಯುವತಿಯರೇ

ಉದ್ಘಾಟನೆಗೆ ಪಬ್ಲಿಕ್ ಟಿವಿ ರಂಗನಾಥ್ ಬಂದಿದ್ರು. ಅವರು ತಮ್ಮ ಅನುಭವ ಬುತ್ತಿ ಬಿಚ್ಚಿ, ನಿಮಗೆ ಒಂದು Passionಒಂದು Cohesive Team ಮತ್ತು ಅವಶ್ಯಕ-ಅನವಶ್ಯಕ ಖರ್ಚುಗಳ ನಡುವಿನ ವ್ಯತ್ಯಾಸ ತಿಳಿದಿರಬೇಕು ಅನ್ನುವುದನ್ನು ಉದಾಹರಣೆ ಸಹಿತ ವಿವರಿಸಿದರುಒಂದು ಟಿವಿ ಚಾನೆಲ್ ಶುರು ಮಾಡಲು 60-70 ಕೋಟಿ ಖರ್ಚಾಗುತ್ತಿದ್ದ ಕಾಲದಲ್ಲಿ ಪಬ್ಲಿಕ್ ಟಿವಿ ಶುರುಮಾಡಿದಾಗ ಹಾಕಿದ ಬಂಡವಾಳ 7 ಕೋಟಿ !

ಅದಾಗಲೇ ಬಳಸಿದ ಆದರೆ ಉಪಯೋಗಿಸಲು ಯೋಗ್ಯವಾದ ಕ್ಯಾಮೆರಾ ಸಹಿತ ಬಹುತೇಕ ಎಲ್ಲ ಉಪಯುಕ್ತವಾದ ವಸ್ತುಗಳನ್ನು ದೇಶಾದ್ಯಂತ ಸಂಚರಿಸಿ, ಸಂಗ್ರಹಿಸಿ, ಕಟ್ಟಿದ ಪಬ್ಲಿಕ್ ಟಿವಿಯ ಕಥೆ ಒಂದು ಪ್ರೇರಣೆಯೇ ಸರಿ. ಇವರು ಕೂರುವ ಕುರ್ಚಿ ಕೂಡ ಸೆಕೆಂಡ್ ಹ್ಯಾಂಡ್! ಒಂದು ಕಿವಿ ಮಾತು ಹೇಳಿದ ಅವರು ದಯವಿಟ್ಟು ನಿಜ ಹೇಳಿ, ಗಡಿಯಾರ ನೋಡಿ ದುಡಿಯುವುದನ್ನು ಬಿಡಿ, ಕೆಲಸ ಮುಗಿಯುವ ವರೆಗೆ ದುಡಿಯಿರಿ! ಹಾಗೆಯೇ ನಿಮಗೇನಾದರೂ ನಿಮ್ಮ ಮನಸ್ಸಿನಲ್ಲಿರುವುದನ್ನು ಹೇಳಿಕೊಳ್ಳಲು ಕಿವಿಗಳು ಸಿಗದಿದ್ರೆ, ನಾನು ಯಾವಾಗಲೂ ಸಿದ್ಧ ಅಂತ ಭರವಸೆ ಕೊಟ್ರು!

ನಂತರ ಚಾರ್ಟರ್ ಅಕೌಂಟೆಂಟ್ ಮೋಹನ್ ಕುಮಾರ್ ಮಾತನಾಡಿ, ಸ್ಟಾರ್ಟ್ ಅಪ್  ಬಗ್ಗೆ ಮೊದಲ ದಿನವೇ ಎವಲ್ಯೂಯೇಷನ್ ಮಾಡುವುದು ತಪ್ಪು, ಮಾರ್ಕೆಟ್ ಬಗ್ಗೆ ಗಮನವಿರಲಿ, ಡೆವಲಪಿಂಗ್ ದೇಶಗಳಲ್ಲಿ ಬೇಡಿಕೆ ಜಾಸ್ತಿ, ಹಾಗಾಗಿ ದೇಶಗಳ ಮಾರ್ಕೆಟ್, ಕನ್ಸೂಮರ್ ಸೈಕೊಲಾಜಿ ನೋಡುವುದನ್ನು ಬೆಳಸಿಕೊಳ್ಳಿ ಅನ್ನುವ ಸಲಹೆ ಕೊಟ್ಟರು.  

ಸದಾನಂದ ಮಯ್ಯ ಓದಿದ್ದು ಇಂಜಿನಿಯರಿಂಗ್, ಆದರೆ ಮಾಡಿದ್ದು ಹೋಟೆಲ್ ಬಿಸಿನೆಸ್. ಒಳ್ಳೆಯ ಕ್ರಿಕೆಟ್ ಆಟಗಾರ, ಜಿ ಆರ್ ವಿಶ್ವನಾಥ್ ಜೊತೆ ಆಡುತ್ತಿದ್ದವರು. ಅವರು ತಿಳಿಸಿದ  ABCD ನಿಜಕ್ಕೂ ಶ್ಲಾಘನೀಯ. A - Attitude, B - Belief, C - Confidence,  D - Dream. 

1976 ರಲ್ಲಿ ಸರ್ಕಾರ ದೋಸೆಗೆ ಇಷ್ಟೇ ದರ ವಿಧಿಸಬೇಕು ಅನ್ನುವ ಕಾನೂನು ತಂದಿತು. ಅದಕ್ಕೆ MTR  ವಿರೋಧಮಾಡಿ ಹೋಟೆಲ್ ಮುಚ್ಚಿದರು. ಆಗ ಶುರು ಮಾಡಿದ್ದೇ MTR Retail ಅಂಗಡಿ. ಅಲ್ಲಿ ಮೊದಲೇ ಸಿದ್ಧಪಡಿಸಿದ ಪ್ಯಾಕೇಜ್ ಫುಡ್ ಮಾರಲು ಶುರುಮಾಡಿದರು. ಹೀಗಾಗಿ  ರಿಟೇಲ್ ಅಂಗಡಿಗಳು (outlets) ಶುರು ಆದ್ವು. ವಾಷಿಂಗ್ ಮಷೀನ್ ಭಾರತಕ್ಕೆ ಬಂದ ಹೊಸದರಲ್ಲಿ, ಪಂಜಾಬ್ ನಲ್ಲಿ ಒಬ್ಬ ಇದನ್ನು ಲಸ್ಸಿ ಮಾಡುವ ಯಂತ್ರವಾಗಿ ಮಾರಿದ್ದನ್ನು ಮಯ್ಯ ನೆನಪಿಸಿ, ಹೊಸ ಹೊಸ ಆಲೋಚನೆಯೊಂದಿಗೆ ಮಾರ್ಕೆಟಿಂಗ್ ಮಾಡಬೇಕು ಅನ್ನುವ ಸಲಹೆ ನೀಡಿದರು.

1998ರಲ್ಲಿ ಮಯ್ಯ ಅವರಿಗೆ ಒಂದು ದೂರವಾಣಿ ಕರೆ ಬಂತು ದೆಹಲಿಯಿಂದ. ಮಯ್ಯ ದೆಹಲಿ ತಲಪಿದ್ದು ರಾತ್ರಿ 8.30ಕ್ಕೆ, ದೂರವಾಣಿ ಕರೆ ಮಾಡಿದ್ದವರು ಆಗಿನ ರಕ್ಷಣಾ ಸಚಿವ ಜಾರ್ಜ್ ಫರ್ನಾoಡೀಸ್!! ಮಯ್ಯ ಅವರು ತಲಪಿದ್ದು ಪ್ರಧಾನ ಮಂತ್ರಿ ಅಟಲ್ ಜಿ ಅವರ ಮನೆಗೆ! ಅಲ್ಲಿಗೆ ಅಬ್ದುಲ್ ಕಲಾಂ ಕೂಡ ಬಂದಾಗಿತ್ತು! ಅವರು ಪ್ರಸ್ತಾಪಿಸಿದ್ದು, ಸೈನಿಕರು ಹೊತ್ತು ಒಯ್ಯುವ ಒಂದು ದಿನದ ಬ್ಯಾಗ್ ಬಗ್ಗೆ! ಬ್ಯಾಗ್ ನಲ್ಲಿ ಒಂದು ದಿನಕ್ಕೆ ಬೇಕಾಗುವ ಊಟ, ನೀರು, ಕಾಫಿ, ಟೀ, ಹಾಲು ಇರುತ್ತದೆ. ಅದರ ತೂಕ 27 ಕೆಜಿ, ಅದನ್ನು 10 ಕೆಜಿ  ಇಳಿಸಿಕೊಡಬೇಕು ಅಂದರೆ 17ಕೆಜಿಗೆ ಅನ್ನುವ ಮಹತ್ವದ ವಿಚಾರ! ಇದಕ್ಕೆ ಕೊಟ್ಟ ಅವಧಿ ಹದಿನೈದು ದಿನ. ಮಯ್ಯ ಬ್ಯಾಗ್ ತೂಕವನ್ನು 27 ಕೆಜಿ ಇಂದ 11 ಕೆಜಿ ಗೆ ಇಳಿಸಿದರು! ಇದಕ್ಕೆ MTR ಗ್ರೀನ್ ಬ್ಯಾಗ್ ಅನ್ನುವ ನಾಮಕರಣ ಮಾಡಿದರು. ಹೀಗೆ ಅವರ ಸಾಫ್ಟಿ ಐಸ್ ಕ್ರೀಮ್ ಅನುಭವ ಕೂಡ ಹಂಚಿಕೊಂಡ್ರು. 

ಲೆಫ್ಟಿನೆಂಟ್ ಕೆಪಿ ನಾಗೇಶ್ - ಈತ ಯುನಿಕ್ ಡೆಟೆಕ್ಟಿವ್ ಮತ್ತು ಸೆಕ್ಯುರಿಟೀಸ್ ಶುರು ಮಾಡಿ ಯಶಸ್ಸು ಕಂಡವರು. ಇವರು ಹೇಳಿದ ವೇದ ವಾಕ್ಯ, ‘ನೀವು  ಸ್ಟಾರ್ಟ್ ಅಪ್ ಶುರು ಮಾಡಿದರೆ, ದುಡುಕು, ಸಿಡುಕು, ಕೆಡಕು ದೂರವಿಡಿ’, Attitude  decides  the  Altitude  of  the  person  ಅಂದ್ರು. ಈತ ಸೆಕ್ಯುರಿಟೀಸ್ ಉದ್ಯಮವನ್ನು ಇನ್ನೂರು ಕೋಟಿಗೆ ಬೆಳಿಸಿದ್ದಾರೆ! ಗ್ರಾಮದ ಹಿನ್ನಲೆ ಇಂದ ಬಂದ ಇವರು, ಗ್ರಾಮೀಣ ಪ್ರತಿಭೆಗಳಿಗೆ ಅವಕಾಶ ಕಲ್ಪಿಸುವ ಕಾರ್ಯ ಮಾಡುತ್ತಲಿದ್ದಾರೆ.

ನಂತರದ ಸರತಿ ಸತ್ಯಶಂಕರ್ ಭಟ್, ಅಲಿಯಾಸ್ ಬಿಂದು (Bindu Soda) ಭಟ್ಟದ್ದು! ಇವರು ಹುಟ್ಟಿದ್ದು ಪುತ್ತೂರಿನ ಬಳಿಯ ಹಳ್ಳಿಯಲ್ಲಿ. ಇವರದು ತುಂಬಿದ ಬ್ರಾಹ್ಮಣ ಮಡಿವಂತ ಕುಟುಂಬ. ಒಟ್ಟು ಒಂಬತ್ತು ಮಕ್ಕಳು. ಇವರ ಅಣ್ಣಂದಿರು ಓದಿ ಕೆಲಸವಿಲ್ಲದೆ ಅಲೆಯುತ್ತಿದ್ದದ್ದನ್ನು ನೋಡಿ, ತಂದೆಯವರು ಇವರ ಓದನ್ನು SSLC ಗೆ ನಿಲ್ಲಿಸಿದರು. ಈತ ಮನೆಯವರ ಮಾತಿಗೆ ವಿರುದ್ಧವಾಗಿ, ಆಟೋ ಇಟ್ಟರು. ಅದನ್ನು ಮಾರಿ ಅಂಬಾಸಿಡಾರ್ ಕಾರ್ ಇಟ್ರು, ಆಟೋಮೊಬೈಲ್ ಸ್ಪೇರ್ ಪಾರ್ಟ್ಸ್ ಅಂಗಡಿ ಇಟ್ರು, ನಂತರ ಆಟೋಮೊಬೈಲ್ ಫೈನಾನ್ಸ್ ಕಂಪನಿ ತೆರೆದರು.  ಎಲ್ಲದರಲ್ಲೂ ಯಶಸ್ವಿ ಆದ್ರು

ಆದರೆ ಗ್ರಾಮದ ಯುವಕರಿಗೆ ಕೆಲಸ ಕೊಡುವ, ಅವರನ್ನು ಅಲ್ಲಿಯೇ ಉಳಿಸಿಕೊಳ್ಳುವ ಕೆಲಸ ಮಾಡಬೇಕೆಂಬ ಮಹದಾಸೆ ಇಂದ, ಅವರ ತೋಟದಲ್ಲಿ ಇದ್ದ ಸಿಹಿನೀರಿನ್ನುಬಾಟಲ್ ಮಾಡಿ ಮಾರುವ ಕಾರ್ಯಕ್ಕೆ ಅಡಿ ಇಟ್ಟರು, ನಂತರದ ಅವಿಷ್ಕಾರವೇ ಬಿಂದು ಸೋಡಾ!! ಇದು ಯಾವ ಮಟ್ಟದ ಸಂಚಲನ ಉಂಟು ಮಾಡಿತೆಂದರೆ, ಇವರ ಉದ್ಯಮ ಐದು ಕೋಟಿ ತಲಪಿದಾಗ, ಕೋಕಾಕೋಲಾ ಕಂಪನಿಯವರು ಐವತ್ತು ಕೋಟಿ ಕೊಟ್ಟು ಕೊಂಡುಕೊಳ್ಳಲು ಬಂದ್ರೂ, ೫೦೦ ಕೋಟಿ ಉದ್ಯಮವನ್ನಾಗಿ ಮಾಡುತ್ತೇನೆಯೇ ಹೊರತು ಮಾರುವುದಿಲ್ಲ ಎಂದು ಅದನ್ನು ಮಾರಲಿಲ್ಲ! ಈಗ ಉದ್ಯಮ 500 ಕೋಟಿಯನ್ನೂ ಮೀರಿ ತಲುಪಿದೆ. ಬೇರೆ ಬೇರೆ ದೇಶಕ್ಕೂ ಬಿಂದು ಸೋಡಾ ರಫ್ತಾಗುತ್ತಿದೆ! ಇವರು ಒಂದುಸಾವಿರ ಜನಕ್ಕೆ ಹಳ್ಳಿಯಲ್ಲಿ ಕೆಲಸ ಕೊಟ್ಟಿದ್ದಾರೆ! ಇವರ ಆಟೋಮೊಬೈಲ್ ಫೈನಾನ್ಸ್ ಕೂಡ 200 ಕೋಟಿ ತಲಪಿದೆ!


ಮುಂದುವರೆಯುವುದು...


Aug 11, 2019

ಚಾರ್ ಧಾಮ್ ಪ್ರವಾಸ - ಗಂಗೋತ್ರಿ

ಯಮುನೋತ್ರಿಯ ಪ್ರಯಾಣದ ಅತಿಯಾದ ಸುಸ್ತು, ಕುದುರೆ ಪ್ರಯಾಣದ ನೋವುಗಳನ್ನು ಹೊತ್ತು ಮಲಗಿದ್ದರಿಂದ ಒಳ್ಳೆಯ ನಿದ್ದೆಯೂ ಬಂದಿತ್ತು.

ಇನ್ನು ನಮ್ಮ ಮುಂದಿನ ಪ್ರಯಾಣ ಗಂಗೋತ್ರಿಯಾಗಿತ್ತು.  ಬರ್ಕೊಟ್ ನಿಂದ ಯಮುನೋತ್ರಿಗೆ  ಪ್ರಯಾಣಿಸಬೇಕಿತ್ತು. ಸಾಕಷ್ಟು ಪ್ರಯಾಣ ಮಾಡಿ ಮಾರನೇ ದಿನ ಸಂಜೆಯ ಹೊತ್ತಿಗೆ ಮನೇರಿ ಎಂಬ ಜಾಗವನ್ನು ತಲುಪಬೇಕಿತ್ತು. ಅಲ್ಲಿ ನಮ್ಮ ತಂಗುವ ವ್ಯವಸ್ಥೆಯಾಗಿತ್ತು. ಉತ್ತರಕಾಶಿ ಎಂಬ ಜಾಗವನ್ನು ಹಾದು ಹೋಗಬೇಕಿತ್ತು. ಅಲ್ಲಿ ಕಾಶಿ ವಿಶ್ವನಾಥನ ದೇವಸ್ಥಾನದ ರೀತಿಯಲ್ಲೇ ವಿಶ್ವನಾಥನ ದೇವಸ್ಥಾನವಿತ್ತು. ದೇವರ ದರ್ಶನ ನಮ್ಮ ಯೋಜನೆಯಾಗಿತ್ತು. ಕಾಕತಾಳೀಯವಾಗಿ ನನ್ನ ಹುಟ್ಟಿದ ದಿನ ಅವತ್ತೇ ಆಗಿತ್ತು.

ಆದರೆ ದುರದೃಷ್ಟವಶಾತ್ ನಮ್ಮ ಕಾರಿನ ಚಾಲಕ ಅಷ್ಟೊತ್ತಿಗೆ ವಕ್ರನಾಗಿದ್ದ. ಕಾರಣ ಇಂದಿಗೂ ತಿಳಿದಿಲ್ಲ. ಕಾರಿನ ವೇಗವನ್ನು ಅತಿಗೊಳಿಸಿದ್ದ. ಎಷ್ಟು ಸಲ ಕೇಳಿದರೂ ಕೆಲ ಕಡೆಗಳಲ್ಲಿ ನಿಲ್ಲಿಸುತ್ತಿರಲಿಲ್ಲ. ಎಷ್ಟು ಸಲ ನಿಧಾನವಾಗಿ ಓಡಿಸಿ ಎಂದು ವಿನಂತಿಸಿಕೊಂಡರೂ ಉಪಯೋಗವಾಗಿರಲಿಲ್ಲ. ಭಾಷೆಯ ಸಮಸ್ಯೆಯೂ ನಮಗಿತ್ತು. ಆತ B.Sc ಮಾಡಿದ್ದರೂ ಲವಲೇಶದಷ್ಟು ಸಹ ಇಂಗ್ಲಿಷ್ ಬರುತ್ತಿರಲಿಲ್ಲ. ನಮ್ಮ ಕ್ಯಾ-ಕಹಾ-ಯಹಾ-ವಹಾ ಹಿಂದಿ ಸಾಲುತ್ತಿರಲಿಲ್ಲ ಅವನೊಂದಿಗೆ  ವ್ಯವಹರಿಸಲು.

ಆಸಾಮಿ ದೇವಸ್ಥಾನದಲ್ಲಿ ನಿಲ್ಲಿಸಲೇ ಇಲ್ಲ. ದೇವಸ್ಥಾನವನ್ನು ತೋರಿಸಿ ಮುಂದೆ ಹೊರಟ. ಇನ್ನು ಮಧ್ಯಾಹ್ನವಾಗಿದ್ದರಿಂದ ನಾವು ತಂಗುವ ಜಾಗಕ್ಕೆ ಕರೆದುಕೊಂಡು ಹೋಗಿ ಸ್ವಲ್ಪ ವಿಶ್ರಾಂತಿಯ ನಂತರ ಕರೆದುಕೊಂಡು ಬರುತ್ತಾನೇನೋ ಎಂದು ಸುಮ್ಮನಾದೆವು. ಆಮೇಲೆ ನೋಡಿದರೆ 18 ಕಿಮೀ ಆಯಿತು ಮತ್ತೆ ಹೋಗಲು ಆಗುವುದಿಲ್ಲ ಎಂದುಬಿಟ್ಟ! Itinerary ನಲ್ಲಿತ್ತಲ್ಲ ಅಂದರೂ ಮೊದಲೇ ಹೇಳಬೇಕಿತ್ತು ಎಂದು ಖಂಡತುಂಡವಾಗಿ ಹೇಳಿದ. ನಮಗೆ ಕಾರನ್ನು ಕೊಡಿಸಿದ ವ್ಯಕ್ತಿಯ ಮೂಲಕವೂ ಹೇಳಿಸಲು ಪ್ರಯತ್ನಿಸಿದೆ. ಅವನೂ ಯಾಕೋ ಸಹಾಯ ಮಾಡಲಿಲ್ಲ. ಮಾರನೇ ದಿನ ಗಂಗೋತ್ರಿಯಿಂದ  ಹೊರಡುವಾಗ ಹೋಗಿ ಬನ್ನಿ ಎಂದ. ನಾವೂ ಸುಮ್ಮನಾದೆವು.


ಮನೇರಿ ತಲುಪಿದಾಗ ಸುಮಾರು 2 ಗಂಟೆಯಾಗಿತ್ತು. ಸ್ವಲ್ಪ ಹೊತ್ತು ಮಲಗಿದೆವು. ಪಕ್ಕದಲ್ಲೇ ಗಂಗಾ ನದಿ ಹರಿಯುತ್ತಿತ್ತು. ಎದ್ದ ನಂತರ ನಾನು, ಅಮ್ಮ ಗಂಗೆಯ ಹತ್ತಿರ ಹೋಗಿ ಸ್ವಲ್ಪ ಹೊತ್ತು ಕಾಲ ಕಳೆದು ಬರುವ ಎಂದು ಹೊರಟೆವು. ಗಂಗೆಯನ್ನು ಸ್ಪರ್ಶಿಸಲು ಅಕ್ಷರಶಃ ಹಿಮವನ್ನು ಮುಟ್ಟಿದ ಅನುಭವ! ಆಗುವುದಾದರೆ ಸ್ನಾನವನ್ನೇ ಮಾಡುವ ಎಂದು ಯೋಚಿಸಿದ್ದೆ. ಆ ಚಳಿಯನ್ನು ಮುಟ್ಟಿದೊಡನೆ ಸಾಧ್ಯವೇ ಇಲ್ಲ ಎಂದೆನಿಸಿತ್ತು. ಕೆಲ ಫೋಟೋಗಳನ್ನು ತೆಗೆದು ಅಲ್ಲೇ ಇದ್ದ ಒಂದು ಪುಟ್ಟ ಆಶ್ರಮ ಒಂದಕ್ಕೆ ಭೇಟಿ ಕೊಟ್ಟು ದೇವರ ದರ್ಶನ ಮಾಡಿ ನಮ್ಮ ಬಿಡಾರಕ್ಕೆ ಬಂದೆವು.

ಮಾರನೇ ದಿನ ಬೆಳಿಗ್ಗೆ 6 ರ ಸುಮಾರಿಗೆ ಗಂಗೋತ್ರಿಯ ಕಡೆಗೆ ಹೊರಟು 8.45 ರ ಹೊತ್ತಿಗೆ ಗಂಗೋತ್ರಿಯನ್ನು ತಲುಪಿದೆವು. ಬರೀ 60-70ಕೀಮೀಗಳಾದರೂ ಪ್ರಯಾಣ ಸಾಕಷ್ಟು ಸಮಯ ತೆಗೆದುಕೊಂಡಿತ್ತು. ದಾರಿಯೂ ಸಹ ಅಷ್ಟೇನೂ ಸುಗಮವಾಗಿರಲಿಲ್ಲ. ಅತ್ತ ಪ್ರಪಾತ ಇತ್ತ ಕೊರೆದ ಬಂಡೆ-ಬೆಟ್ಟಗಳು. ಸಹಜವಾಗಿಯೇ ದೇವರ ಸ್ಮರಣೆ ನಡೆದೇ ಇತ್ತು.

ಗಾಡಿಗಳು ನಿಲ್ಲಿಸುವ ಸ್ಥಳದಿಂದ ದೇವಸ್ಥಾನ ಸುಮಾರು ಅರ್ಧ ಕೀಮೀ ದೂರವಿದ್ದುದರಿಂದ ತಲುಪಿದ ತಕ್ಷಣ ಅಪ್ಪನಿಗೆ ವೀಲ್ ಚೇರ್ ಅನ್ನು ಪಡೆದು, ನಾನು-ಅಮ್ಮ ನಡೆಯಲು ಶುರು ಮಾಡಿದೆವು. ಸುಮಾರು ದೂರದಲ್ಲಿ ವೀಲ್ ಚೇರ್ ಗೆ ಸರ್ಕಾರಿ ಶುಲ್ಕ 50 ರೂಪಾಯಿಯನ್ನು ಕಟ್ಟಲು ಸ್ವಲ್ಪ ಬೇಗ ನಡೆದುಕೊಂಡು ಹೋಗಿ ಸರತಿಯಲ್ಲಿ ನಿಂತೆ. ವೀಲ್ ಚೇರ್ ಅನ್ನು ತಳ್ಳುತ್ತಿದ್ದ ವ್ಯಕ್ತಿ, ಅಪ್ಪ ಇಬ್ಬರೂ ನನ್ನ ಜೊತೆ ಇದ್ದರು. ಶುಲ್ಕ ಕಟ್ಟಿ ತಿರುಗಿದರೆ ಅಮ್ಮ ಕಾಣಿಸಲೇ ಇಲ್ಲ ..!

ಅಮ್ಮನ ಮೊಬೈಲ್ ಇದ್ದ ಬ್ಯಾಗ್ ನನ್ನ ಬಳಿಯೇ ಇತ್ತು. ಕ್ಷಣ ಮಾತ್ರದಲ್ಲಿ ಕಂಗಾಲಾದೆ. ಆ ಚಳಿಯಲ್ಲೂ ದೇಹವೆಲ್ಲ ಬೆವರಿತು. ಗಾಡಿ ನಿಲ್ಲಿಸಿದ ಜಾಗಕ್ಕೆ 'ಅಮ್ಮಾ ಅಮ್ಮಾ ' ಎಂದು ಕೂಗಿಕೊಂಡು ಓಡಿದೆ. ಅಲ್ಲಿಂದ ವಾಪಸ್ ದೇವಸ್ಥಾನದ ಬಳಿಗೂ ಓಡಿದೆ. ಎಲ್ಲೂ ಕಾಣಿಸಲಿಲ್ಲ. ನಾನು ಕೂಗುತ್ತಿದ್ದ ರೀತಿಯನ್ನು ನೋಡಿ ಯಾರಿಗೂ ಮರುಕವೇ ಆಗುತ್ತಿರಲಿಲ್ಲವೇನೋ ಎನಿಸುತ್ತಿತ್ತು. ಪೋಲೀಸಿನವರ ಹತ್ತಿರ ಹೋಗಿ ಬೇಡಿದೆ, ಆದರೂ ಸಮಾಧಾನಕರವಾಗಿ ಉತ್ತರಿಸಲಿಲ್ಲ. ಮಹಿಳಾ ಶೌಚಗೃಹದ ಹೊರಗೆ ನಿಂತು ನನ್ನ ಮೊಬೈಲಿನಲ್ಲಿದ್ದ ಅಮ್ಮನ ಫೋಟೋ ತೋರಿಸಿ ಒಳಗಿರಬಹುದಾ ಎಂದು ಕೇಳುತ್ತಿದ್ದೆ. ದುಃಖ ಜಾಸ್ತಿಯಾಯಿತು. ಅಳು ಬರುತ್ತಿತ್ತು. ಏನು ಮಾಡುವುದು ಎಂದೇ ತೋಚುತ್ತಿರಲಿಲ್ಲ. ಸಮಾಧಾನದ ಅವಶ್ಯಕತೆ ಇದ್ದರಿಂದ ಅಕ್ಕನಿಗೆ ಫೋನಾಯಿಸಿದೆ. ಅಪ್ಪನನ್ನು ದೇವಸ್ಥಾನದ ಸ್ವಲ್ಪ ಹತ್ತಿರದಲ್ಲೇ ಬಿಡಲು ಹೇಳಿ ಇನ್ನೊಂದು ರೌಂಡು ಹುಡುಕೊಕೊಂಡು ಬರಲು ಹೊರಟೆ. ಅಷ್ಟರಲ್ಲೇ ಅಮ್ಮ ಇನ್ನೊಬ್ಬರ ಮೊಬೈಲ್ ನಲ್ಲಿ ಫೋನ್ ಮಾಡಿದಾಗ ಸ್ವರ್ಗವೇ ಧರೆಗಿಳಿದಂತೆ ಸಮಾಧಾನವಾಗಿತ್ತು. ನಾವು ದೇವಸ್ಥಾನದ ಒಳಗೆ ಹೋಗಿರಬಹುದೆಂದು ಒಬ್ಬರೇ ಮುಂದೆ ಬಂದುಬಿಟ್ಟಿದ್ದರು. ಸದ್ಯ ಎಂದು ಒಂದೆಡೆ ಕೂತು ಸಮಾಧಾನಿಸಿಕೊಂಡು ದೇವಸ್ಥಾನಕ್ಕೆ ಹೊರಟೆವು.

ದೇವರ ದರ್ಶನಕ್ಕೆ ಸರತಿ ಸಿಕ್ಕಾಪಟ್ಟೆ ಇದ್ದುದರಿಂದ ಗಂಗಾ ಸ್ನಾನಕ್ಕೆ ಅಣಿಯಾದೆವು. ಮೊದಲು ಗಂಗೆಯ ಸ್ಪರ್ಶ ಮಾಡುವ ಎಂದು ಹೋದರೆ ಕೈ ಮರಗಟ್ಟಿಸುವಂತಹ ಚಳಿ..!  ಈ ಪಾಟಿ ಛಳಿಯ ನೀರಿನಲ್ಲಿ ಸ್ನಾನ ಹೇಗೆ ಎಂಬ ಪ್ರಶ್ನೆ ಬಂತು. ಸ್ನಾನ ಸಾಧ್ಯವೇ ಇಲ್ಲ ಎಂದು ಅಮ್ಮ ಪ್ರೋಕ್ಷಣೆ ಮಾಡಿಕೊಂಡು ಬಂದರು. ಆದರೆ ಅಪ್ಪ ಸ್ನಾನ ಮಾಡಿಯೇ ತೀರುತ್ತೇನೆ ಎಂದು ಹೊರಟರು. ಅಕ್ಷರಶಃ ನಡುಗುತ್ತ ಮಾತನಾಡಲೂ ಆಗದೆ ಸ್ನಾನ ಮಾಡಿಕೊಂಡು ಬಂದರು. ಅಪ್ಪನೇ ಮಾಡಿದಮೇಲೆ  ನಾನು ಹೇಗೆ ಸುಮ್ಮನಾಗುವುದು..! ತಾಯಿ ಗಂಗೆಗೆ ನಮಸ್ಕರಿಸಿ ಭಕ್ತಿಯಿಂದ ನಾನೂ ಪುಣ್ಯಸ್ನಾನ ಮುಗಿಸಿ ಬಂದೆ. ಗಂಗೆಯ ಪುಣ್ಯಸ್ನಾನದ ನಂತರ ಒಂದು ತರಹದ ಧನ್ಯತಾ ಭಾವ ನಮ್ಮನ್ನು ಆವರಿಸಿದ್ದು ನಿಜ. 

ಅಪ್ಪ - ಅಮ್ಮ ಇಬ್ಬರೂ ಎರಡು ಕಿಲೋಮೀಟರ್ ನಷ್ಟಿದ್ದ ಸರತಿಯನ್ನು ನೋಡಿ ದೂರದಿಂದಲೇ ಕೈ ಮುಗಿದರು. ಗಂಗೆ ಯಮುನೆ ಸರಸ್ವತಿಯರ ದರ್ಶನಕ್ಕೆ ನಾನೊಬ್ಬನೇ ಹೋಗಿ ಅಲ್ಲಿದ್ದ ಎಲ್ಲ ದೇವಸ್ಥಾನಗಳಿಗೆ ನಮಸ್ಕಾರ ಮಾಡಿ, ಭಕ್ತಿ ಕಾಣಿಕೆಯನ್ನಿತ್ತು ವಾಪಸ್ ಬಂದೆ.


ಕೆಲ ಹೊತ್ತಿನಲ್ಲೇ ಕೊಂಚ ಬಿಸಿಲು ಬಂದು ಚಳಿಯು ಕಡಿಮೆಯಾಗಿ ಮುದ ನೀಡಿತು. ಸಣ್ಣ ಪುಟ್ಟ ಶಾಪಿಂಗ್ ಮಾಡಿ ವೀಲ್ ಚೇರ್ ಹುಡುಗನಿಗೆ ಕೊಂಚ ಕಾದು ನಮ್ಮ ಕಾರು ನಿಲ್ಲಿಸಿದ್ದ ಜಾಗಕ್ಕೆ ಬಂದು ಕಾರಿನವನಿಗೆ ಫೋನಾಯಿಸಿ ಗಂಗೋತ್ರಿಯಿಂದ ಹೊರಟು ಮನೇರಿಯ ನಮ್ಮ ಅದೇ ಬಿಡಾರಕ್ಕೆ ಬಂದಾಗ ಸಂಜೆ 5 ರ ಸುಮಾರು. 

ಸಂಜೆ ಬಂದ ನಂತರ ಅಲ್ಲೇ ಪಕ್ಕದಲ್ಲಿ ಸೇವಾಭಾರತಿಯ ಶಾಲೆಗೆ ಭೇಟಿ ನೀಡಿ ಅಲ್ಲಿದ ಹಿರಿಯರು, ಪ್ರಾಂಶುಪಾಲರು, ಸಹಾಯಕರನ್ನ ಪರಿಚಯಿಸಿಕೊಂಡು, ನನ್ನ ಹಿಂದಿಯನ್ನೂ, ಸಂಸ್ಕೃತವನ್ನೂ, ನನ್ನ ಹಿನ್ನೆಲೆಯನ್ನೂ ಪರಿಚಯಿಸಿಕೊಂಡು ಬಂದೆ. ಬೆಳಿಗ್ಗೆ ಗಂಗೋತ್ರಿಗೆ ಹೊರಡುವಾಗಲೇ ಗಮನಿಸಿದ್ದೆ ಅಲ್ಲಿದ್ದ ಶಾಲೆಯನ್ನು. ಉತ್ತರಾಂಚಲ್ ದೈವೀ ಆಪದಾ ಪೀಡಿತ್ ಸಹಾಯತಾ ಸಮಿತಿಯ ಶಾಲೆಯಾಗಿತ್ತು ಅದು. ಶಾಲೆಯ ಪಕ್ಕದಲ್ಲೇ ವಿದ್ಯಾರ್ಥಿ ನಿಲಯವೂ ಇತ್ತು. ಪಕ್ಕದಲ್ಲೇ ಗಂಗೆಯೂ ಹರಿಯುತ್ತಿದ್ದಳು. ಅಲ್ಲೇ ಶಾಖೆಯೂ ನಡೆಯುತ್ತಿತ್ತು.  ಪ್ರಾರ್ಥನೆಯ ಅವಕಾಶವೂ ನನಗೆ ಸಿಕ್ಕಿತು.

ಒಟ್ಟಿನಲ್ಲಿ ಯಮುನೋತ್ರಿಯ ತ್ರಾಸದಾಯಕ ದರ್ಶನದ ನಂತರ ಅಪ್ಪ-ಅಮ್ಮ ಇಬ್ಬರಿಗೂ ಸ್ವಲ್ಪ ಸಮಾಧಾನ ಕೊಟ್ಟ ಗಂಗೋತ್ರಿ. 

Jul 19, 2019

ಪ್ರೇರಣಾದಾಯಿ ಕಥೆಗಳು : ೧

ಬಹಳ ದಿನಗಳಿಂದ ಅನ್ನಿಸಿತ್ತು, ಒಳ್ಳೆಯ ಕಥೆಗಳನ್ನು ಓದಿದಾಗ ಅಥವಾ ಅದನ್ನು ಕೇಳಿದಾಗ ಅವುಗಳನ್ನು ನನ್ನ ಬ್ಲಾಗಿನಲ್ಲಿ ದಾಖಲಿಸಬೇಕು ಎಂದು. ಆದರೆ ಆಗಿರಲಿಲ್ಲ. ಇವತ್ತು ಓದಿದ  ಅದ್ಭುತವಾದ ಒಂದು ಕಥೆ ಕಣ್ಣಿನಂಚಿನಲ್ಲಿ ನೀರನ್ನು ತುಂಬಿಸಿದಾಗ ಇನ್ನು ತಡೆಯಲಾಗಲಿಲ್ಲ. ದಾಖಲಿಸಿಯೇ ಬಿಡಬೇಕು ಎಂದು ಕೂತೇಬಿಟ್ಟೆ. ಯಥಾವತ್ತಾಗಿ ಇಟ್ಟಿದ್ದೇನೆ. ಮೂಲ ಲೇಖಕರಿಗೆ ನನ್ನ ಪ್ರಣಾಮಗಳು.

--------------------------------------------------------------------------------------------------------------------------

ತಿರುಪತಿ ತಿಮ್ಮಪ್ಪಗೆ ಉದ್ಯಮಿ ಹಾಗು ರಾಜಕಾರಣಿಯೊಬ್ಬರು 40 ಕೋಟಿ ರೂ. ಮೌಲ್ಯದ ವಜ್ರ ಖಚಿತ ಬಂಗಾರದ ಕಿರೀಟವನ್ನು ಅರ್ಪಿಸಿದ್ದರು. ಮತ್ತೋರ್ವ ಉದ್ಯಮಿ ಹಾಗು ರಾಜಕಾರಣಿಯೊಬ್ಬರು ಶಬರಿಮಲೈ ಅಯ್ಯಪ್ಪಸ್ವಾಮಿ ದೇಗುಲಕ್ಕೆ 10 ಕೋಟಿ ಮೌಲ್ಯದ ಚಿನ್ನದ ಮೆಟ್ಟಿಲುಗಳನ್ನುಮಾಡಿಸಿಕೊಟ್ಟರು. ನಮ್ಮೂರ ಉದ್ಯಮಿ ಹಾಗು ಹಾಗು ರಾಜಕಾರಣಿಯೊಬ್ಬರು ಊರ ದೇವತೆಯ ದೇಗುಲದ ಬಾಗಿಲುಗಳಿಗೆ 50 ಲಕ್ಷ ರೂ. ಮೌಲ್ಯದ ಬೆಳ್ಳಿಯ ಹೊದಿಕೆ ಸಮರ್ಪಿಸಿದರು.

     ಮೇಲಿನ ಮೂರೂ ಘಟನೆಗಳನ್ನು ನಾನು ವರದಿ ಮಾಡಿದ್ದೆ. ಹೀಗೆ ಸುದ್ದಿಗಳನ್ನು ಬರೆಯುವಾಗ ದೇಣಿಗೆ ನೀಡಿದವರ ಕುರಿತುಎಂಥ ದಾನಿಗಳಪ್ಪಎಂಬ ಅಭಿಮಾನದ ಭಾವನೆ ಮೂಡಿತಾದರೂ ಮತ್ತೊಂದು ಕಡೆ ಮನಸ್ಸು ಹೇಳುತ್ತಿತ್ತುಇವರುಗಳಿಗೆ ಇದು ಯಾವ ಲೆಕ್ಕಎಂದು. ಆದರೂ ಉಳ್ಳವರು ಎಲ್ಲರೂ ಇಷ್ಟೊಂದು ದೇಣಿಗೆ ನೀಡುವರೇ ಎಂಬ ಪ್ರಶ್ನೆ ಮೂಡಿ ಮೇಲಿನವರ ಬಗ್ಗೆ ಹೆಮ್ಮೆ ಎನ್ನಿಸುತ್ತಿತ್ತು.

      ಆದರೆ ಇನ್ನೊಂದು ಘಟನೆ ನನಗೆ ಮೇಲಿನ ಮೂರೂ ಘಟನೆಗಳನ್ನು ಮರೆಯುವಂತೆ ಮಾಡಿತ್ತು. ಮೇಲ್ಕಾಣಿಸಿದ ದಾನಿಗಳಿಗಿಂತ 1 ಸಾವಿರ ರೂ. ಬಹುಮಾನ ನೀಡಿದ್ದ ಹೈಸ್ಕೂಲ್‍ನ ಮೇಡಂ ತುಂಬಾ ದೊಡ್ಡವರು ಎನ್ನಿಸಿದರು. ಅವರ ಸ್ವಾಭಿಮಾನ, ಮಾತಿಗೆ ತಪ್ಪದ ನಡತೆ ಹಾಗೂ ತಮ್ಮ ವಿದ್ಯಾರ್ಥಿಗಳ ಮೇಲೆ ಅವರು ಇಟ್ಟಿದ್ದ ನಂಬಿಕೆ, ಮೇಡಂ ಅವರ ವ್ಯಕ್ತಿತ್ವವನ್ನು ಮೇಲೆ ಕಾಣಿಸಿದ ಮಹನೀಯರುಗಿಂತಲೂ ಎತ್ತರಕ್ಕೆ ಒಯ್ದಿತ್ತು.

     ಅದು ದಾವಣಗೆರೆಯ ಸೇಂಟ್ ಜಾನ್ಸ್ ಹೈಸ್ಕೂಲ್. ಅಲ್ಲಿ ಗಣಿತ ವಿಷಯ ಭೋಧಿಸುತ್ತಿದ್ದ ಮೇಡಂ ಅವರು ಬಡ ಕುಟುಂಬಕ್ಕೆ ಸೇರಿದ ಪ್ರತಿಭಾನ್ವಿತ ಶಿಕ್ಷಕಿ. ಶಾಲೆಯ ವೇತನದಿಂದಲೇ ಜೀವನ ನಿರ್ವಹಿಸುವ ಸ್ಥಿತಿ ಅವರದ್ದು. ತಮ್ಮ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಸಲುವಾಗಿ ಮತ್ತು ತಾನು ಹೇಗೆ ಗಣಿತವನ್ನು ವಿದ್ಯಾರ್ಥಿಗಳಿಗೆ ಅರ್ಥ ಮಾಡಿಸಿದ್ದೇನೆ ಎಂಬುದನ್ನು ಓರೆಗೆ ಹಚ್ಚುವ ಸಲುವಾಗಿ ಉತ್ಸಾಹದಿಂದ ತಮ್ಮ ವಿದ್ಯಾರ್ಥಿಗಳಿಗೆ ಒಂದು ವಾಗ್ದಾನ ಮಾಡಿದರು. “ಎಸ್ಸೆಸ್ಸೆಲ್ಸಿಯಲ್ಲಿ ಗಣಿತ ವಿಷಯದಲ್ಲಿ 100ಕ್ಕೆ 100 ಅಂಕ ಗಳಿಸಿದವರಿಗೆ 1 ಸಾವಿರ ರೂ. ಬಹುಮಾನ ನೀಡುತ್ತೇನೆಎಂದು ಹೇಳಿದ್ದರು.

     ಫಲಿತಾಂಶ ಪ್ರಕಟವಾಯಿತು. ನನ್ನ ಮಗನೂ ಸೇರಿದಂತೆ ನಾಲ್ಕು ಜನರು ಗಣಿತದಲ್ಲಿ 100 ಕ್ಕೆ 100 ಅಂಕ ಗಳಿಸಿದ್ದರು. ತನ್ನ ವಿದ್ಯಾರ್ಥಿಗಳ ಸಾಧನೆ ಕಂಡು ಮೇಡಂ ಅವರು ತಮ್ಮ ಸ್ವಂತ ಮಕ್ಕಳೇ ಸಾಧನೆ ಮಾಡಿದ್ದಾರೇನೊ ಎಂಬಂತೆ ಹಿಗ್ಗಿ ಹೋಗಿದ್ದರು. ಮಕ್ಕಳ ಸಾಧನೆಯನ್ನು ಸಹೋದ್ಯೋಗಿಗಳು ಹಾಗೂ ಬಂಧು-ಮಿತ್ರರಲ್ಲಿ ಹೇಳಿಕೊಂಡು ಹೆಮ್ಮೆಯಿಂದ ಬೀಗಿದ್ದರು. ಅಂದು ವಿದ್ಯಾರ್ಥಿಗಳು ಮಾಸ್ಕರ್ಡ್ ಪಡೆದುಕೊಳ್ಳಲು ಶಾಲೆಗೆ ಹೋದಾಗ ಅವರಿಗೆ ಸಿಹಿ ತಿನ್ನಿಸಿ 100 ಕ್ಕೆ 100 ಅಂಕ ಪಡೆದಿದ್ದ ನಾಲ್ವರಿಗೂ ತಲಾ 1000 ರೂ ಇದ್ದ ಕವರ್ ನೀಡಿ ವಿಶ್ ಮಾಡಿ ಕಳುಹಿಸಿದರು.

     ಮನೆಗೆ ಬಂದವ ತಮ್ಮ ಮೇಡಂ ನೀಡಿದ್ದ ಕವರನ್ನು ಹೆಮ್ಮೆಯಿಂದ ತೆರೆದು ಅದರಲ್ಲಿದ್ದ 1000 ರೂಗಳನ್ನು ನನಗೆ ಹಾಗೂ ಪತ್ನಿಗೆ ತೋರಿಸುತ್ತಾ ಸಾವಿರ ರೂ. ಸಂಪೂರ್ಣವಾಗಿ ತನಗೇ ಸೇರಿದ್ದೆಂದು, ತಮ್ಮ ಗಣಿತದ ಟೀಚರ್ ನೀಡಿರುವ ಬಹುಮಾನ ಇದು ಎಂದೂ ತಿಳಿಸಿದನು. 1000 ರೂ. ಹಣವನ್ನು ನಮ್ಮೆದುರೇ ಎಣಿಸಿದನು. ಅದರಲ್ಲಿ 100 4 ನೋಟುಗಳು, 50 4 ನೋಟುಗಳಿದ್ದವು. ಉಳಿದವು 20, 10 ಹಾಗು 5 ರೂ.ಗಳ ನೋಟುಗಳಾಗಿದ್ದವುನನ್ನ ಮಗ ಹೆಮ್ಮೆಯಿಂದ ಹಣ ಎಣಿಸುತ್ತಿದ್ದರೆ ನನ್ನಲ್ಲಿ ಮಾತ್ರ ಆತಂಕ ಮನೆ ಮಾಡಿತ್ತು. ಅರಿವಿಲ್ಲದಂತೆಯೇ ಕಣ್ಣಾಳೆಗಳು ಒದ್ದೆಯಾದವು. ಮಗನಿಂದ ಹಾಗೆ ಹಣವನ್ನು ಪಡೆದುಕೊಂಡೆ. ನೋಟುಗಳಿಂದ ಜೀರಿಗೆಯ ವಾಸನೆ ಬರುತ್ತಿತ್ತು. ಆಗಂತೂ ನನಗೆ ದುಃಖ ತಡೆಯಲಾಗಲಿಲ್ಲ. ಖಂಡಿತವಾಗಿಯೂ ಹಣವನ್ನು ಮೇಡಂ ಅವರು ಕಷ್ಟಪಟ್ಟು ಸಂಗ್ರಹಿಸಿಟ್ಟಿದ್ದರು ಎಂಬುದು ನಿಶ್ಚಿತವಾಗಿತ್ತು.

    ಶಾಲಾ ಆಡಳಿತ ಮಂಡಳಿ ಆರ್ಥಿಕ ಮುಗ್ಗಟ್ಟಿನಿಂದ ನಾಲ್ಕೈದು ತಿಂಗಳಿನಿಂದ ಸಿಬ್ಬಂದಿಗೆ ವೇತನವನ್ನೇ ನೀಡಿರಲಿಲ್ಲ. ಆಡಳಿತಮಂಡಳಿಯ ಅನೇಕರು ನನಗೆ ಆತ್ಮೀಯರು ಆಗಿದ್ದರಿಂದ ಅಲ್ಲಿನ ಆಗುಹೋಗುಗಳ ಬಗ್ಗೆ ನನಗೆ ತಿಳಿದಿತ್ತು.

     ಮಗನಿಂದ 1000 ರೂ.ಗಳನ್ನು ಪಡೆದು ನನ್ನ ಬಳಿಯಿದ್ದ 500 ಎರಡು ನೋಟುಗಳನ್ನು ಅವನಿಗೆ ಕೊಟ್ಟೆ. ಅವನಿಗೆ ಏನೂ ತಿಳಿಸದೆ ನೇರವಾಗಿ ಹಣ್ಣಿನ ಅಂಗಡಿಗೆ ಹೋಗಿ ಒಂದಷ್ಟು ಹಣ್ಣು ಖರೀದಿಸಿ ಮೇಡಂ ಅವರ ಮನೆಗೆ ಬಂದೆ. ಮೊದಲಿಗೆ ಹಣ್ಣುಗಳನ್ನು ನೀಡಿ ನನ್ನ ಮಗ ಸೇರಿದಂತೆ ನಾಲ್ವರು 100 ಕ್ಕೆ 100 ಅಂಕ ಗಳಿಸಲು ಕಾರಣರಾಗಿದ್ದಕ್ಕೆ ಅಭಿನಂದಿಸಿದೆ. ಅವರ ಕಣ್ಣುಗಳು ಮಿಂಚಿದವು. “ಸರ್, ಇನ್ನೂ ಮೂವರು ವಿದ್ಯಾರ್ಥಿಗಳು ತಲಾ 99 ಹಾಗು ಐವರು ವಿದ್ಯಾರ್ಥಿಗಳು ತಲಾ 98 ಅಂಕಗಳಿಸಿದ್ದಾರೆ, ಛೇಇನ್ನು ಒಂದೆರಡು ಅಂಕ ಗಳಿಸಿದ್ದರೆಎಂದರು. ಅವರ ಧ್ವನಿಯಲ್ಲಿ ವಿದ್ಯಾರ್ಥಿಗಳ ಬಗ್ಗೆಯೂ ಹೆಮ್ಮೆ ಇದ್ದುದು ತಿಳಿಯುತ್ತಿತ್ತು. ನಾನು ಅವರನ್ನು ಮತ್ತೆ ಅಭಿನಂದಿಸುತ್ತಾ ಅವರು ನೀಡಿದ್ದ 1000 ರೂಗಳ ಜೊತೆಗೆ ನನ್ನದೂ 1000 ರೂ. ಸೇರಿಸಿ 2000 ರೂಗಳಿದ್ದ ಕವರನ್ನು ಅವರಿಗೆ ನೀಡಲು ಮುಂದಾದೆ. ನೀವು ಉತ್ತಮವಾಗಿ ಪಾಠ ಮಾಡಿದ್ದಕ್ಕೆ ನನ್ನ ಮಗ 100 ಕ್ಕೆ 100 ಅಂಕ ಗಳಿಸಿದ್ದಾನೆ. ಇದು ನಿಮ್ಮ ಶಿಷ್ಯ ನಿಮಗೆ ನೀಡುತ್ತಿರುವ ಚಿಕ್ಕ ಗುರು ಕಾಣಿಕೆ ಎಂದು ಸ್ವೀಕರಿಸಿ ಎಂಬುದಾಗಿ ಪರಿಪರಿಯಾಗಿ ಬೇಡಿದರೂ ಅವರು ಒಪ್ಪಲಿಲ್ಲ. ನೀವು ತಂದಿರುವ ಹಣ್ಣುಗಳನ್ನು ಸಂತೋಷದಿಂದ ಸ್ವೀಕರಿಸಿದ್ದೇನೆ. ನನ್ನ ಆತ್ಮ ತೃಪ್ತಿಗೆ ನನ್ನ ವಿದ್ಯಾರ್ಥಿಗಳಿಗೆ ನಾನು ಬಹುಮಾನವಾಗಿ ನೀಡಿರುವ ಹಣವನ್ನು ನೀವು ಹಿಂದಿರುಗಿಸುವ ಪ್ರಯತ್ನ ಮಾಡಬೇಡಿ ಎನ್ನುತ್ತಲೇ ಆತ್ಮೀಯವಾಗಿ ಬೀಳ್ಕೊಟ್ಟರು. ಹೀಗೆ ಹೇಳುವಾಗಆಡಳಿತ ಮಂಡಳಿ ನಮಗೆ ವೇತನ ನೀಡಿಲ್ಲ ಎಂಬ ಆತಂಕ ನಿಮಗಿರುವುದು ನನಗೆ ಗೊತ್ತು. ಸರ್ ನಮಗೆ ಅತ್ಯಂತ ಸರಳವಾದ ಜೀವನದ ಅನುಭವ ಇದೆ. ಕಷ್ಟಪಟ್ಟು, ಇಷ್ಟಪಟ್ಟು ವಿದ್ಯಾರ್ಥಿಗಳಿಗಾಗಿ, ಶಾಲೆಗಾಗಿ ದುಡಿಯುತ್ತಿದ್ದೇವೆ. ಭಗವಂತ ನಮ್ಮ ಕೈ ಬಿಡುವುದಿಲ್ಲಎಂದರು.

    ಇಂದೂ 1000 ರೂ. ಹಣ ನಮ್ಮ ಬಳಿ ಇದೆ. ಅದನ್ನು ನೋಡಿದಾಗೊಮ್ಮೆ ನನಗನ್ನಿಸುತ್ತದೆ, ಚಿನ್ನದ ಕಿರೀಟ, ಬಂಗಾರದ ಮೆಟ್ಟಿಲು ಹಾಗೂ ಬೆಳ್ಳಿಯ ಬಾಗಿಲುಗಳನ್ನು ದೇಣಿಗೆ ನೀಡಿದ ಮಹನೀಯರುಗಳಿಗಿಂತ ನಮ್ಮ ಮೇಡಂ ಒಂದು ತೂಕ ಹೆಚ್ಚು ಎಂದು, ನೀವೇನಂತೀರಾ?

     40 ಕೋಟಿಯ ಚಿನ್ನದ ಕಿರೀಟ ನೀಡಿದರು ಜೈಲಿಗೆ ಹೋಗಿ ಬಂದರು. 10 ಕೋಟಿಯ ಬಂಗಾರದ ಮೆಟ್ಟಿಲು ಮಾಡಿಸಿಕೊಟ್ಟಿದ್ದರು ದೇಶವನ್ನೇ ಬಿಟ್ಟು ಓಡಿ ಹೋದರು. ಆದರೆ ನಮ್ಮ ಶಿಕ್ಷಕಿ ನಿರ್ಮಲಾ ಮೇಡಂ ಇನ್ನೂ ಅದೇ ಶಾಲೆಯಲ್ಲೇ ನೂರಾರು, ಸಾವಿರಾರು ವಿದ್ಯಾರ್ಥಿಗಳ ಹೆಮ್ಮೆಯ ಶಿಕ್ಷಕಿಯಾಗಿ ಗೌರವಿಸಲ್ಪಡುತ್ತಿದ್ದಾರೆ, ಪೂಜಿಸಲ್ಪಡುತ್ತಿದ್ದಾರೆ.

--------------------------------------------------------------------------------------------------------------------------

ಮೇಲಿನ ಕಥೆಯನ್ನು ಓದಿದ ಮೇಲೆ ಯಾರು ತಾನೇ ಭಾವುಕರಾಗುವುದಿಲ್ಲ ಹೇಳಿ ?