Nov 5, 2012

ಬೆಂಗಳೂರಿನ ಪೋಲೀಸರ 'ಸೈಡ್'ಆದಾಯ....


ಮೊನ್ನೆ ಜಯನಗರದ 36 ನೆಯ ಅಡ್ಡರಸ್ತೆಯಲ್ಲಿರುವ  ಒಂದು ಚುರುಮುರಿ ಗಾಡಿಯಲ್ಲಿ ನಾನು ಚುರುಮುರಿ ತಿಂದು ಇನ್ನೇನು ಹೊರಡುವವನಿದ್ದೆ. ಆಗ ತಾನೇ ಪಲ್ಸರ್ ಬೈಕ್ ನಲ್ಲಿ ಬಂದ ಪೋಲಿಸಿನವರಿಬ್ಬರು ಸ್ವಲ್ಪ ದೂರದಲ್ಲಿ ತಮ್ಮ ಬೈಕನ್ನು ನಿಲ್ಲಿಸಿದರು. ನಾನೂ ಕುತೂಹಲದಿಂದ ಅತ್ತ ನೋಡಿದೆ. ನೋಡುತ್ತಲೇ ಚುರುಮುರಿ ಗಾಡಿಯವನು ಅತ್ಯಂತ ಸಹಜವಾಗಿಯೇ ಹೋಗಿ ಹಣ ಕೊಟ್ಟು ಬಂದ. ನಾನೂ ಎಷ್ಟು ಎಂದು ಕೇಳಿದ್ದಕ್ಕೆ 3೦ ಎಂದು ಉತ್ತರಿಸಿದ.

ನಾನೂ ಕಳೆದೆರಡು ವರ್ಷಗಳಿಂದ ಗಮನಿಸುತ್ತಿದ್ದೇನೆ, ರಸ್ತೆ ಬದಿಯಲ್ಲಿರುವ ಸಣ್ಣ ಪುಟ್ಟ ಗಾಡಿಗಳನ್ನು ಇಟ್ಟುಕೊಂಡಿರುವವರು ಪ್ರತಿದಿನ ಪೋಲೀಸಿನವರಿಗೆ ಇಂತಿಷ್ಟು ಎಂದು ಕೊಡಬೇಕು. ಇದು 3೦ ರಿಂದ 1೦೦ ರ ವರೆಗೂ ಇರುತ್ತದೆ. ಸಾಮಾನ್ಯ ಪೇದೆ ಯಾದರೆ 3೦-4೦, ಸ್ವಲ್ಪ ಹೆಚ್ಚಿನ ಮಟ್ಟದ ಅಧಿಕಾರಿಯಾದರೆ ಇದು 1೦೦ ರ ವರೆಗೂ ತಲುಪುತ್ತದೆ.  ಕನಿಷ್ಠ 2೦ ಗಾಡಿಗಳು ಎಂದರೂ 300 ರಿಂದ 3000 ವರೆಗೆ. ತಿಂಗಳಿಗೆ ಹತ್ತಾರು ಸಾವಿರಗಳು...!

ಆದರೆ ಪ್ರಶ್ನೆಯಿರುವುದು ವ್ಯಾಪಾರಿಗಳು ಗಾಡಿಗಳನ್ನು ಇಟ್ಟುಕೊಳ್ಳುವುದು ತಪ್ಪೋ ಅಥವಾ ಪೋಲಿಸಿನವರ ವಸೂಲಿ ಸರಿಯೋ ಎಂದು. ಇಷ್ಟೆಲ್ಲಾ 'ಸೈಡ್' ಆದಾಯಗಳಿರುವ ಪೋಲೀಸಿನವರಿಗೆ ಸಂಬಳ ಎನ್ನುವುದು ನಿಜವಾಗಿಯೂ ಅವಶ್ಯಕತೆಯಿದೆಯಾ? 'ವಸೂಲಿ'ಯನ್ನೇ ಕಾನೂನುಬಧ್ಧವಾಗಿಸಿ ಪೋಲೀಸಿನವರಿಗೆ ಸಂಬಳವನ್ನೇ ನಿಲ್ಲಿಸಿದರೆ ಸರ್ಕಾರ ಅವರಿಗೆ ಕೊಡುವ ಸಂಬಳವನ್ನು ಬೇರೆ ಯಾವುದಾದರೂ ಒಳ್ಳೆಯ ಕೆಲಸಗಳಿಗೆ ವಿನಿಯೋಗಿಸಬಹುದು ಎಂಬ ಅಭಿಪ್ರಾಯ ಬರುವುದು ಸಹಜವೇ.

ಬಹುಶಃ  ಇಲ್ಲಿ ಯಾರೊಬ್ಬರಿಗೂ ನಷ್ಟವಿಲ್ಲದಿರಬಹುದು. ಯಾಕೆಂದರೆ ಗಾಡಿಯವನಿಗೆ ಪೋಲೀಸರ ಕಿರಿಕಿರಿಗಿಂತ ದಿನಕ್ಕೆ ಇಂತಿಷ್ಟು ಅಂತ ಕೊಡುವುದು ಸುಲಭವೆನಿಸರಲೂ ಉಂಟು. ಹಾಗಿದ್ದಲ್ಲಿ ಇಂತಿಂತ ಗಾಡಿಗಳಿಗೆ ಇಷ್ಟಿಷ್ಟು ಎಂದು 
ನಿಗದಿಮಾಡುವುದೇ ಲೇಸೆಂದೆನಿಸುತ್ತದೆ. ಆಗ ಗಾಡಿಯವನಿಗೆ ಸ್ವಲ್ಪ ಅನುಕೂಲವಾಗುತ್ತದೆ.


ಯಾರಾದರೂ ಸಂಬಂಧ ಪಟ್ಟವರು ತಮ್ಮ 'ಪಾಲಿನ' ಬಗ್ಗೆ ಯೋಚಿಸದೆ ಇದರ ಬಗ್ಗೆ ಗಮನ ಹರಿಸುವುದೊಳಿತು  ಎಂದೆನಿಸುತ್ತದೆ.