Jan 25, 2011

ಸರಾಗವಾಗಲ್ಲದಿದ್ದರೂ ಸಾಂಗವಾಗಿ ಮುಗಿದ 'ಸಾಂಗತಾ ಯಜ್ಞ'

ನಮ್ಮ ನಂಬಿಕೆಗಳು, ಶ್ರದ್ಧೆಗಳು, ಯಾವುದೇ ವಿಷಯದ ಕುರಿತಾದಿರಬಹುದು, ನಮಗೆ ಸಮಾಧಾನಪಡಿಸುವಂತಿದ್ದರೆ ಹಾಗು ಒಳ್ಳೆಯ ಚಿಂತನೆ ಮಾಡುವ ರೀತಿಯಲ್ಲಿ ಪ್ರೇರೇಪಿಸುವಂತಿದ್ದರೆ ಆ ನಂಬಿಕೆಗೆ 'ಸರಿಯೋ? ತಪ್ಪೋ?' ಎನ್ನುವ ತರ್ಕ ಬೇಕಿಲ್ಲ ಎಂಬುದು ನನ್ನ ಇತ್ತೀಚೆಗಿನ ಅನಿಸಿಕೆ.

ಇದೇ ವಿಷಯಕ್ಕೆ ಸಂಬಂಧಿಸಿದ್ದು 'ದೇವರು' ಎಂಬ 'ಅನುಭವ'.



ನಾನು ಉದ್ದೇಶಪೂರ್ವಕವಾಗಿಯೇ 'ದೇವರು' ಎನ್ನುವುದನ್ನು 'ಅನುಭವ' ಎಂದು ಕರೆದಿದ್ದೇನೆ. ಆದರೆ ಇದು 'ಪ್ರತ್ಯಕ್ಷ'ವಾಗುವ ಅನುಭವವಲ್ಲ. ನಂಬಿಕೆಯ ಕಾರಣದಿಂದ ಉಂಟಾಗುವ ಅನುಭವ. ನಂಬಿಕೆಯ ನಂತರವಷ್ಟೇ ಅನುಭವದ ಅನುಭವ ಸಾಧ್ಯ ಎನ್ನುವುದು ಮತ್ತೇನೂ ಹೇಳಬೇಕಾಗಿಲ್ಲ.

ಡಿಸೆಂಬರ್ 15 ಮತ್ತು 16 ಹೊಸಹಳ್ಳಿಯಲ್ಲೂ ಹಾಗು 17 ರಿಂದ 19 ರ ವರೆಗೆ ಮತ್ತೂರಿನಲ್ಲೂ ನಡೆದ 'ತೇರಾಕೋಟಿ ರಾಮನಾಮತಾರಕದ ಸಾಂಗತಾಯಜ್ಞ' ಹತ್ತು ಹಲವು ವಿಶೇಷ, ಪರಿಣಾಮ, ಪ್ರೇರಣೆಗಳೊಂದಿಗೆ ಮುಕ್ತಾಯಗೊಂಡದ್ದು ಈಗ ಇತಿಹಾಸ. ಯಜ್ಞದಲ್ಲಿ ಭಾಗವಹಿಸಿದವರು, ಆ ನಂತರದ ಹಾಗು ಆ ಮೊದಲ ಕೆಲವು ಸನ್ನಿವೇಶಗಳನ್ನು ನೋಡಿದಾಗ ನನಗನ್ನಿಸಿದ್ದು ಮೇಲಿನದು.


ಹೆಬ್ಬಳ್ಳಿಯ ಶ್ರೀ ದತ್ತಾವಧೂತ ಮಹಾರಾಜರ ಉಪಸ್ಥಿತಿಯಲ್ಲಿ ನಡೆದ ೫ ದಿನಗಳ ಕಾರ್ಯಕ್ರಮದಲ್ಲಿ ಭಾಗವಹಿಸಿದವರು ೨ ಸಾವಿರಕ್ಕೂ ಹೆಚ್ಚು ಮಂದಿ. ಮೊದಲೆರಡು ದಿನ ಹೊಸಹಳ್ಳಿಯಲ್ಲಿಯೂ ಹಾಗು ನಂತರದ ೩ ದಿನ ಮತ್ತೂರಿನಲ್ಲಿಯೂ ನಡೆದ ಹಲವಾರು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಬಹುತೇಕ ಬಂದವರೆಲ್ಲರೂ ಭಾಗವಹಿಸಿದುದು ಕಂಡುಬಂತು. ದತ್ತಾವಧೂತರ ಪ್ರವಚನಗಳಿಗೆ ಹದಿಹರೆಯದವರೆನ್ನದೆ ಎಲ್ಲರೂ ದೌಡಾಯಿಸುತ್ತಿದ್ದುದು ಕೆಲವರಿಗೆ ಆಶ್ಚರ್ಯ ಹಾಗು ಮತ್ತೆ ಕೆಲವರಿಗೆ 'ದಾರಿ ತಪ್ಪುತ್ತಿರುವ ಯುವಕರು' ಎಂದೆನಿಸಿದುದೂ ಉಂಟು.


ಪ್ರತಿದಿನದ ಮುಖ್ಯ ಕಾರ್ಯಕ್ರಮಗಳಾದ ರಾಮತಾರಕ ಹೋಮ ಹಾಗು ದತ್ತಾವಧೂತರ ಪ್ರವಚನಗಳಿಗೆ ಜನರು ಕಾದು ಕುಳಿತ್ತಿದ್ದ ಹಾಗೆ ಅನ್ನಿಸುತ್ತಿತ್ತು. ಹೋಮದ ಪೂರ್ಣಾಹುತಿಯವರೆಗೂ ಜನರು ಮಂತ್ರಗಳನ್ನು ಕೇಳುತ್ತಾ ಅಲುಗಾಡದೆ ಕುಳಿತು ಭಾಗವಹಿಸುತ್ತಿದ್ದುದು ಸಾಮಾನ್ಯವಾಗಿತ್ತು. ಹಿಂದೆ ಕಲಿತು ಈಗ ಮರೆತು 'ದಾರಿ ಬಿಟ್ಟಿದ್ದ'ವರಲ್ಲಿ ಕೆಲವರು, ಸಂಪಾದನೆಗೋಸ್ಕರವಲ್ಲದಿದ್ದರೂ ಜತೆಗೆ ಜತೆಯಾಗುವುದಕ್ಕೆ ಕಲಿತ ಮಂತ್ರಗಳನ್ನು ನೆನಪಿಸಿಕೊಳ್ಳುವ ಪ್ರಯತ್ನದಲ್ಲಿದ್ದಾರೆ.

ಧಾರ್ಮಿಕ ಕಾರ್ಯಕ್ರಮದ ವಿಶೇಷ ವಾತಾವರಣದಲ್ಲಿ ಶಾಲೆಗೇ ಇನ್ನೂ ಸೇರದ ಮಕ್ಕಳಾದಿಯಾಗಿ ಎಲ್ಲರ ಕೈಯಲ್ಲಿ ಜಪಮಾಲೆ, ಬಾಯಲ್ಲಿ ರಾಮಜಪ ವನ್ನು ನೋಡುತ್ತಿದ್ದ ಪೋಷಕರಲ್ಲಿ ಸಂತೋಷಪಟ್ಟವರು ಹಾಗು ಭಯಪಟ್ಟವರೂ ಸೇರಿದ್ದಾರೆ. ಆದರೆ ಆ ಸಮಯದಲ್ಲಿ ಇಡೀ ಊರು ರಾಮನಾಮದಲೆಯಲ್ಲಿ ಮುಳುಗಿದ್ದುದು ಮಾತ್ರ ಸತ್ಯ.


ಪ್ರಸ್ತುತ ಈ ಮಟ್ಟದ ಆಧುನಿಕತೆಯ ಅಬ್ಬರದಲ್ಲಿ, 'ಕಾಂಕ್ರೀಟ್ ರಸ್ತೆಗಳ' ಮೇಲೆ ಹಳ್ಳಿಗಳನ್ನು 'ಕಟ್ಟುತ್ತಿರುವಾಗ' ಒಂದು ಸಂಪೂರ್ಣ ಧಾರ್ಮಿಕ ವಾತಾವರಣವನ್ನು ಸೃಷ್ಟಿಸಿ ಜನರನ್ನು ಅದರಲ್ಲಿ ತಲ್ಲೀನರನ್ನಾಗಿಸಿದುದು ವಿಶೇಷವೇ.

Jan 18, 2011

ಪ್ರಪ್ರಥಮ 'ವಿಶ್ವ ಸಂಕೇತಿ ಸಮ್ಮೇಳನ'



ಪ್ರಪ್ರಥಮ 'ವಿಶ್ವ ಸಂಕೇತಿ ಸಮ್ಮೇಳನ' ಅದ್ಧೂರಿಯಾಗಿ ಹಾಗು ಅನೇಕ ವಿಶೇಷತೆಗಳೊಡನೆ ನೆರವೇರಿದೆ. ಸಂಸ್ಕೃತ ಗ್ರಾಮ ಎಂದೇ ಹೆಸರು ವಾಸಿಯಾಗಿರುವ 'ಮತ್ತೂರಿ'ನಲ್ಲಿ 31 ಡಿಸೆಂಬರ್ ನಿಂದ 2 ನೆ ಜನವರಿವರೆಗೆ ನಡೆದ 'ವಿಶ್ವ ಸಂಕೇತಿ ಸಮ್ಮೇಳನ', ಪ್ರಪಂಚದಾದ್ಯಂತ ಹಂಚಿ ಹೋಗಿರುವ ಸಂಕೇತಿ ಸಮುದಾಯವನ್ನು 3 ದಿನಗಳ ಮಟ್ಟಿಗೆ ಒಂದೆಡೆ ಸೇರಿಸುವಲ್ಲಿ ಬಹುತೇಕ ಯಶಸ್ವಿಯಾಗಿದೆ ಎಂತಲೇ ಹೇಳಬಹುದು.

ಅತ್ಯಂತ ಪುಟ್ಟ ಸಮುದಾಯವಾಗಿರುವ 'ಸಂಕೇತಿ ಸಮುದಾಯ' ದವರು ಬಹುತೇಕ ಎಲ್ಲ ದೇಶಗಳಲ್ಲಿಯೂ ನೆಲೆಸಿದ್ದಾರೆ. ನಮ್ಮ ಪ್ರಾಚಿನ ಸಂಸ್ಕೃತಿಗಳಾದ ವೇದ-ಉಪನಿಷತ್ತುಗಳು, ಸಂಸ್ಕೃತ, ವೇದಾಂತ, ಸಂಗೀತ, ಭರತನಾಟ್ಯ, ಮೃದಂಗ ಮುಂತಾದ ಅನೇಕ ವಿಧದ ಕಲೆಗಳು ಮತ್ತು ವಿದ್ಯೆಗಳಲ್ಲಿ ತಮ್ಮದೇ ಆದ ಪ್ರಾವೀಣ್ಯತೆಯನ್ನು ಪಡೆದು ಮೇಲ್ಪಂಕ್ತಿಯನ್ನು ಹಾಕಿಕೊಟ್ಟವರು ಅನೇಕ ಮಂದಿ. ಈ ಕಾರಣದಿಂದ ಸಮ್ಮೇಳನದಲ್ಲಿ ಈ ಎಲ್ಲ ಪ್ರತಿಭೆಗಳ ಅನಾವರಣ ನೋಡುಗರಿಗೆ ಹಾಗು ಕೇಳುಗರಿಗೆ ಅತ್ಯಂತ ಹೆಮ್ಮೆ ಹಾಗು ಸಂತೋಷವನ್ನುಂಟು ಮಾಡಿತು.

ಎಲ್ಲರೂ ತಮ್ಮ ತಮ್ಮ ನೆಚ್ಚಿನ ಸಾಂಪ್ರದಾಯಿಕ ಉಡುಗೆಗಳಲ್ಲಿ ಮೈ ಮರೆತು ಸಮಾವೇಶದಲ್ಲಿ ಭಾಗವಹಿಸುತ್ತ ಒಂದು ಹೊಸ ವಾತಾವರಣದಲ್ಲಿ ಮುಳುಗಿದ್ದರು. ಪುಟ್ಟ ಪುಟ್ಟ ಮಕ್ಕಳ ಖುಷಿಯನ್ನಂತೂ ಕೇಳಲೇಬೇಕಾಗಿಲ್ಲ. ತಮ್ಮ ಮಕ್ಕಳ ಪ್ರತಿಭೆಗಳನ್ನು ತಮ್ಮ ಸಮುದಾಯದವರ ಮುಂದೆ ಅನಾವರಣಗೊಳಿಸಲು ಕಾಯುತ್ತಿದ್ದ ಪೋಷಕರು ಒಂದು ಕಡೆಯಾದರೆ ವೇದಿಕೆಯ ಮೇಲೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ತಮ್ಮ ತಮ್ಮ ಸರತಿಗಾಗಿ ಕಾಯುತ್ತಿದ್ದ 'ಪ್ರತಿಭೆ'ಗಳು ಮತ್ತೊಂದು ಕಡೆ. ಕನ್ನಡ ವಾಹಿನಿ ಈ-ಟಿವಿಯ ಪ್ರಸಿದ್ಧ 'ಎದೆ ತುಂಬಿ ಹಾಡುವೆನು' ಖ್ಯಾತಿಯ ಲಕ್ಷ್ಮಿ ನಾಗರಾಜ್, ಇಂದು ನಾಗರಾಜ್ ರಂತಹ ಹೆಸರಾಂತ ಗಾಯಕರ ಕಾರ್ಯಕ್ರಮಗಳಿಗೆ ರಾತ್ರಿ ೧ ಗಂಟೆಯವರೆಗೂ ಶ್ರೋತೃ ಗಳು ಕಾಯುತ್ತಿದ್ದರು.

ಸುಮಾರು ೪೦೦೦ ಜನರನ್ನು ಒಟ್ಟುಗೂಡಿಸಿ, ಮೂರು ದಿನವೂ ದಿನದ ಮೂರೂ ಹೊತ್ತು ಜನರ ಭೋಜನ ವ್ಯವಸ್ಥೆಯನ್ನು ನೋಡಿಕೊಂಡು, ಹಾಗೆಯೇ ಎಲ್ಲ ಹೊತ್ತೂ ಸಾಂಸ್ಕೃತಿಕ ಕಾರ್ಯಕ್ರಮಗಳು, ವಿಚಾರಗೋಷ್ಠಿಗಳು ಹಾಗು ಇನ್ನಿತರ ವಿಶೇಷ ಕಾರ್ಯಕ್ರಮಗಳ ಮೂಲಕ ಸಮ್ಮೇಳನವನ್ನು 'ಸಾಕಷ್ಟು' ವಿಧದ ಜನರಿಗೆ ಮುಟ್ಟುವಂತೆ ಹಾಗು ಅವಿಸ್ಮರಣೀಯವಾಗಿ ನಡೆಯಲು ಕಾರಣರಾದ ಎಲ್ಲ ಸಂಕೇತಿ ಬಂಧುಗಳಿಗೆ ಅಭಿನಂದನೆಗಳು.

ಎಲ್ಲ ಕಾರ್ಯಕ್ರಮಗಳಿಗೂ ಅದರದ್ದೇ ಆದ ಬೇವು ಬೆಲ್ಲಗಳಿದ್ದರೂ ಬೆಲ್ಲಗಳನ್ನು ನೋಡಿ ಸಕಾರಾತ್ಮಕವಾಗಿ ಚಿಂತಿಸುವುದನ್ನು ರೂಢಿಸಿಕೊಳ್ಳುವ ಪ್ರಯತ್ನದಲ್ಲಿ ಇದೂ ಒಂದು ಅಷ್ಟೇ.


"ಸರ್ವೇ ಜನಾಃ ಸಜ್ಜನೋ ಭವಂತು"

-------