Dec 5, 2012

ಪ್ರಪ್ರಥಮ 'ತುಂಬುಗನ್ನಡದ ಶತಾವಧಾನ' : ಅನನ್ಯ ಅನುಭವ

ಯಾವುದೇ ಕಾರ್ಯಕ್ರಮ ಆಯೋಜಿಸಿದರೂ ಕಾರ್ಯಕ್ರಮದ ಪ್ರಚಾರ ಹೇಗೆ ಮಾಡುವುದು, ಜನರಿಗೆ ವಿಷಯ ತಲುಪಿಸುವುದು ಹೇಗೆ, ಸಾಕಷ್ಟು ಜನರು ಬರದಿದ್ದರೆ! ಎಂಬೆಲ್ಲ ಆಲೋಚನೆಗಳನ್ನು ಹೊತ್ತು ಕಾರ್ಯಕ್ರಮವನ್ನು ಆಯೋಜಿಸಿದರೆ ಬರೀ ನಿರೀಕ್ಷೆಯಷ್ಟೇ ಅಲ್ಲ, ಕಲ್ಪನೆಯನ್ನೂ ಮೀರಿ ಪ್ರೇಕ್ಷಕರು, ಶ್ರೋತೃಗಳು ಬಂದರೆ ಯಾವ ಕಾರ್ಯಕ್ರಮದ ಆಯೋಜಕರಿಗೆ ತಾನೇ ಸಂತೋಷವಾಗುವುದಿಲ್ಲ? ಇದಕ್ಕೆಲ್ಲ ಸಾಕ್ಷಿಯಾಗಿದ್ದು ಪ್ರಪ್ರಥಮ 'ತುಂಬುಗನ್ನಡದ ಶತಾವಧಾನ' ಕಾರ್ಯಕ್ರಮ.

ನನಗೇನೂ ವಿಶೇಷ ಆಸಕ್ತಿಯಿಲ್ಲದಿದ್ದರೂ, ಬರೀ ಕುತೂಹಲದ ಕಾರಣಕ್ಕೆ ಹಾಗು ಗಣೇಶ್ ರವರ ಕಾರ್ಯಕ್ರಮ ಎಂಬ ಕಾರಣಕ್ಕೆ ಕಾರ್ಯಕ್ರಮದಲ್ಲಿ ಪ್ರಭಂಧಕನಾಗಿ ನನ್ನ ಅನುಭವ ನಿಜವಗಾಲೂ ದಾಖಲು ಮಾಡಿಕೊಳ್ಳು ವಂಥದ್ದು.

ನಗರದ ಎನ್ಎಂಕೆಆರ್ ವಿ ಕಾಲೇಜಿನ ಮಂಗಳ ಸಭಾಂಗಣ ದಲ್ಲಿ 3 ದಿನಗಳ ಕಾಲ ನಡೆದ ಕಾರ್ಯಕ್ರಮದಲ್ಲಿ ಜನರನ್ನು ಬರಮಾಡಿಕೊಳುವಲ್ಲಿ ನಾನು ನಿರತನಾಗಿದ್ದೆ. ಆದರೆ ಮೊದಲ ದಿನದ ಜನಪ್ರವಾಹವನ್ನು ನೋಡಿ ಸಭಾಂಗಣದ ಹೊರಗಡೆ ಹಾಕಿದ್ದ ಶಾಮಿಯಾನವನ್ನು ಮಾರನೆ ದಿನಕ್ಕೆ ಇನ್ನಷ್ಟು ವಿಸ್ತರಿಸುವಂತಾಯಿತು. ಕಾರ್ಯಕ್ರಮ ಶುರುವಾದ ಕೆಲ ಸಮಯದಲ್ಲೇ ಇಡೀ ಸಭಾಂಗಣ ತುಂಬಿ ಆ ನಂತರ ಬರುವ ಜನರನ್ನು ಶಾಮಿಯಾನದತ್ತ ತಿರುಗಿಸುವ ಕಾರ್ಯಕ್ಕೆ ನಾನು ನಿಯುಕ್ತನಾಗಬೇಕಾಯಿತು.

ನನ್ನ ಕೆಲ ಸ್ನೇಹಿತರನ್ನೂ ಪ್ರಭಂಧಕರಾಗಲು ಕರೆದಿದ್ದೆ. ಅವರಿಗೂ ಆಶ್ಚರ್ಯ..! ಹೊಸ ಕನ್ನಡವೇ ಬಾರದ ಜನರು ತುಂಬಿರುವ ಈ ಬೆಂಗಳೂರಿನಲ್ಲಿ ಎಲ್ಲ ಕಾಲದ ಕನ್ನಡವಿರುವ ಈ ಕಾರ್ಯಕ್ರಮಕ್ಕೆ ಇಷ್ಟೊಂದು ಜನ ಬರುತ್ತಿದ್ದಾರೆ ಎಂಬುದು ನನ್ನ ಆದಿಯಾಗಿ ನನ್ನ ಸ್ನೇಹಿತರ ಪ್ರಶ್ನೆಯಾಗಿತ್ತು.


ಸಾಹಿತ್ಯದ ಆಸಕ್ತಿ, ಕಾರ್ಯಕ್ರಮದ ಬಗ್ಗೆ ಕುತೂಹಲ, ಗಣೇಶ್ ರ ಬಗ್ಗೆ ಗೌರವ, ಗಣೇಶ್ ರವರ ಮಾತನ್ನು ಕೇಳುವ ಹಂಬಲದ ಕಾರಣಕ್ಕೆ ಬರುತ್ತಿದ್ದ ಜನರಿಗೆ ಸಭಾಂಗಣದ ಒಳಗೆ ಜಾಗ ಸಿಗಲಿಲ್ಲ ಎನ್ನುವ ಬೇಸರದಿಂದ ಶಾಮಿಯಾನದಲ್ಲಿ ಕಾರ್ಯಕ್ರಮವನ್ನು ಪರದೆಯಲ್ಲಿ ನೋಡಲು ಮನಸ್ಸಿರಲಿಲ್ಲ. ಎಲ್ಲರಿಗು ಗಣೇಶ್ ರನ್ನು, ಆ ಪವಿತ್ರವಾದ ವೇದಿಕೆಯನ್ನು, ನೇರವಾಗಿ ನೋಡುವ ಹಂಬಲ. ಅವರನ್ನೆಲ್ಲ 'ಎಲ್ಲ ಜಾಗಗಳೂ ಭರ್ತಿಯಾಗಿವೆ. ನಿಂತುಕೊಳ್ಳಲೂ ಜಾಗವಿಲ್ಲ ದಯವಿಟ್ಟು ಶಾಮಿಯಾನಾದಲ್ಲಿ ವ್ಯವಸ್ಥೆ ಮಾಡಿರುವ ಪರದೆಯ ಮೂಲಕ ಕಾರ್ಯಕ್ರಮವನ್ನು ನೋಡಿ' ಎಂದು ಒಪ್ಪಿಸಲು ಹರಸಾಹಸ ಪಡಬೇಕಾಯಿತು. ಕೆಲವರು, ಒಳಗೆ ಹೋಗಿ, ಜಾಗವಿಲ್ಲ ಎಂದು ಖಚಿತವಾದ ಮೇಲೆಯೇ ಶಾಮಿಯಾನಕ್ಕೆ ಹೋಗುತ್ತಿದ್ದರು. ಇನ್ನು ಕೆಲವರಂತೂ ನಿಂತು ನೋಡಿದರೂ ಪರವಾಗಿಲ್ಲ, ಗಣೇಶ್ ರನ್ನು ವೇದಿಕೆಯ ಮೇಲೆ ನೇರವಾಗಿಯೇ ನೋಡಬೇಕು ಎಂದು ಸಭಾಂಗಣದ ಒಳಗೆ ಎಲ್ಲರ ಕಣ್ತಪ್ಪಿಸಿ ಹೋಗುತ್ತಿದ್ದರು.

ಮೊದಲನೇ ದಿನ ನವೆಂಬರ್ 30 ರಂದು, ಕಾರ್ಯಕ್ರಮ ಮುಗಿದು ಎಲ್ಲರೂ ತಮ್ಮ ತಮ್ಮ ಮನೆಗಳಿಗೆ ಹಿಂದಿರುಗುತ್ತಿರುವಾಗ ಸಭಾಂಗಣದ ಒಳಗೆ ಜಾಗ ಸಿಗದಿದ್ದ ಒಬ್ಬರು ಅಜ್ಜಿ ಬಂದು 'ಏ ಹುಡುಗಾ, ಸಭಾಂಗಣದ ಒಳಗಡೆಯ ಮುಂದಿನ ಸಾಲಿನಲ್ಲೇ ಜಾಗ ಸಿಗಬೇಕಾದರೆ ನಾಳೆ ನಾನು ಎಷ್ಟೊತ್ತಿಗೆ ಬರಬೇಕು' ಎಂದು ಕೇಳಿದಾಗ ಕಾರ್ಯಕ್ರಮದ ಯಶಸ್ಸು ಗೋಚರಿಸಲು ಶುರುವಾಯಿತು.

ಶನಿವಾರ, ಡಿಸೆಂಬರ್ 1 ರಂದು ಕಾರ್ಯಕ್ರಮ ಶುರುವಾದ 10 ನಿಮಿಷಗಳೊಳಗೆ ಇಡೀ ಸಭಾಂಗಣ ಪೂರ್ತಿಯಾಗಿತ್ತು. ಆ ನಂತರ ಬಂದ ನನ್ನ ಆತ್ಮೀಯರೊಬ್ಬರಿಗೆ ವಿಷಯ ತಿಳಿಸಿದ್ದಕ್ಕೆ ಅವರಿಗೆ ಪರಮಾಶ್ಚರ್ಯ!. ಇಷ್ಟು ಬೇಗ ಸಭಾಂಗಣದ ಎರಡೂ ಮಹಡಿಗಳು ಭರ್ತಿ ಎಂಬುದನ್ನು ನಂಬಲು ಅವರು ತಯಾರಿರಲಿಲ್ಲ. ಆದರೆ ಒಳಗೆ ಹೋಗಿ ನೋಡಿ ಬಂದಾಗಲೇ ಅವರು ನನ್ನ ಮಾತನ್ನು ನಂಬಿದ್ದು.


ಒಬ್ಬರು ಹಿರಿಯರಿಗೆ 'ಒಳಗೆ ಕುಳಿತುಕೊಳ್ಳಲು ಜಾಗವಿಲ್ಲ, ಪರದೆಯಲ್ಲಿ ನೋಡಿ' ಎಂದು ಶಾಮಿಯನದ ಕಡೆ ಕೈ ತೋರಿಸಿದ್ದಕ್ಕೆ 'ತುಂಬಾ ಸಂತೋಷ. ಈ ಕಾಲದಲ್ಲಿ, ಅದೂ ಈ ಬೆಂಗಳೂರಿನಲ್ಲಿ ಇಂಥ ಒಳ್ಳೆಯ ಕಾರ್ಯಕ್ರಮ ಜನರಿಂದ ಭರ್ತಿಯಾಗಿದೆ ಎಂದರೆ ನನಗೆ ಅದೇ ಸಂತೋಷ. ನನಗೆ ಜಾಗ ಸಿಗದಿದ್ದರೂ, ನನಗೆ ನೋಡಲಾಗದಿದ್ದರೂ ಬೇಸರವಿಲ್ಲ' ಎಂದಾಗ ನನಗೂ ನಿಜ ಎನಿಸಿತು.

ಎರಡನೆಯ ದಿನಕ್ಕೆ ವಾಹನಗಳ ನಿಲುಗಡೆಯ ಜಾಗದ ಸಮಸ್ಯೆ ಶುರುವಾಯಿತು. ಕೆಲ ಸಮಯದ ನಂತರ ಕಾರುಗಳನ್ನು ಒಳಬಿಡುವುದನ್ನು ನಿಲ್ಲಿಸಿದರೆ ದ್ವಿಚಕ್ರವಾಹನಗಳನ್ನೂ ಒಳಬಿಡುವುದನ್ನು ನಿಲ್ಲಿಸುವ ಪರಿಸ್ಥಿತಿ ಎದುರಾಯಿತು. ಆಗಂತುಕರೊಬ್ಬರು ತಮ್ಮ ಬೈಕನ್ನು ನಿಲ್ಲಿಸಲು ಜಾಗವಿಲ್ಲದ್ದನ್ನು ನೋಡಿ 'ಯಾಕ್ರೀ ಇಷ್ಟ್ ಜನರನ್ನ ಕರೀಬೇಕಾಗಿತ್ತು?' ಎಂದು ತಮ್ಮ ಆಶ್ಚರ್ಯವನ್ನು ಹೊರಹಾಕಿದರು. ನನಗೆ ಅವರು ಬೈದರೋ ಅಥವಾ ಕಾರ್ಯಕ್ರಮದ ಕುರಿತು ಹೊಗಳಿದರೋ ಎಂದು ಅರ್ಥವಾಗಲೇ ಇಲ್ಲ.

ನಾನು ಇನ್ನೂ ಒಂದು ಅಂಶ ಗಮನಿಸಿದ್ದು ಎಂದರೆ ಸಾಕಷ್ಟು ಜನ ಶತಾವಧಾನಿಗಳು ಹೇಳುತ್ತಿದ್ದ ಪದ್ಯಗಳನ್ನ, ಆಶು ಕವಿತೆಗಳನ್ನ ಬರೆದುಕೊಳ್ಳುತ್ತಿದ್ದುದು ಹಾಗು ಇನ್ನು ಕೆಲವರು ತಾವು ಸಹ ಬರೆದು ಅದನ್ನ ಗಣೇಶ್ ರವರಿಗೆ ಕಳಿಸುತ್ತಿದ್ದುದು. ಬಹುಶಃ ಕನ್ನಡ ಭಾಷೆಯ ಅಥವಾ ಸಂಸ್ಕೃತ ವಿಷಯಗಳ ಮೇಲೆ ಅಧ್ಯಯನ ಮಾಡುವವರಿರಬೇಕು  ಎಂದು ಸುಮ್ಮನಾದೆ.


ಕೊನೆಯ ದಿನದ ಹೊತ್ತಿಗೆ ಪರಿಸ್ಥಿತಿ ಬದಲಾಗಿತ್ತು. ಮೊದಲೆರಡು ದಿನದ ಅನುಭವವಿದ್ದವರಿಗೆ ಆಗಲೇ ಮನವರಿಕೆಯಾಗಿತ್ತು, ಕಾರ್ಯಕ್ರಮ ಪ್ರಾರಂಭವಾಗುವ ಮೊದಲೇ ಸಭಾಂಗಣ ಸೇರದಿದ್ದರೆ ಕೂರಲು ಜಾಗ ಸಿಗುವುದಿಲ್ಲ ಎಂದು. ತಡವಾಗಿ ಬಂದವರು ನಗುನಗುತ್ತ ತಾವೇ ಸಹಜವಾಗಿ ಶಾಮಿಯಾನದತ್ತ ನಡೆಯುತ್ತಿದ್ದರು. ಕೊನೆಯ ದಿವಸಕ್ಕೆ ಬಂದ ಹೊಸಬರಿಗೆ ಮಾತ್ರ ಶಾಮಿಯಾನದ ದಾರಿ ತೋರಿಸಬೇಕಾಗಿತ್ತು.

ಇಡೀ ದಕ್ಷಿಣ ಬೆಂಗಳೂರಿನ ಜನರಿಗೆ ವಿಶೇಷ ಹಾಗು ವಿಶಿಷ್ಟ ಅನುಭವ ನೀಡಿದ ಈ ಕಾರ್ಯಕ್ರಮ  ಕನ್ನಡದ ಬಗ್ಗೆ , ಗಣೇಶ್ ರ ಬಗ್ಗೆ, ಶತಾವಧಾನದ ಬಗ್ಗೆ ಹೆಮ್ಮೆ ಮೂಡಿರುವುದಂತೂ ಸತ್ಯ.

ಸುರವೃಂದಕ್ಕಿದು ಚೆಲ್ವಿನಾಲಿಕೆಯ ಬಲ್ಜನ್ನಂ ಗಡೆಂಬರ್ ಬುಧರ್
ಮೆರೆಗುಂ ಸತ್ಕವಿಮೋದಕೆಂದೆ ನುಡಿವೆಣ್ ಮೆಯ್ಯಾಗೆ ಮೂರೆಂಬಿನಿಂ|
ನೆರೆ ನಾನಾರಸಮಾಂತ ಕಾವ್ಯಕಲನಂ ತ್ರೈಗುಣ್ಯದಿಂ ತೋರ್ಕುಮೀ
ತೆರದಿಂದೊಂದವಧಾನಮಲ್ತೆ ರಸಿಕರ್ಗೆಲ್ಲರ್ಗಮಾರಾಧನಂ||       – ಡಾ|| ರಾ. ಗಣೇಶ್



Nov 5, 2012

ಬೆಂಗಳೂರಿನ ಪೋಲೀಸರ 'ಸೈಡ್'ಆದಾಯ....


ಮೊನ್ನೆ ಜಯನಗರದ 36 ನೆಯ ಅಡ್ಡರಸ್ತೆಯಲ್ಲಿರುವ  ಒಂದು ಚುರುಮುರಿ ಗಾಡಿಯಲ್ಲಿ ನಾನು ಚುರುಮುರಿ ತಿಂದು ಇನ್ನೇನು ಹೊರಡುವವನಿದ್ದೆ. ಆಗ ತಾನೇ ಪಲ್ಸರ್ ಬೈಕ್ ನಲ್ಲಿ ಬಂದ ಪೋಲಿಸಿನವರಿಬ್ಬರು ಸ್ವಲ್ಪ ದೂರದಲ್ಲಿ ತಮ್ಮ ಬೈಕನ್ನು ನಿಲ್ಲಿಸಿದರು. ನಾನೂ ಕುತೂಹಲದಿಂದ ಅತ್ತ ನೋಡಿದೆ. ನೋಡುತ್ತಲೇ ಚುರುಮುರಿ ಗಾಡಿಯವನು ಅತ್ಯಂತ ಸಹಜವಾಗಿಯೇ ಹೋಗಿ ಹಣ ಕೊಟ್ಟು ಬಂದ. ನಾನೂ ಎಷ್ಟು ಎಂದು ಕೇಳಿದ್ದಕ್ಕೆ 3೦ ಎಂದು ಉತ್ತರಿಸಿದ.

ನಾನೂ ಕಳೆದೆರಡು ವರ್ಷಗಳಿಂದ ಗಮನಿಸುತ್ತಿದ್ದೇನೆ, ರಸ್ತೆ ಬದಿಯಲ್ಲಿರುವ ಸಣ್ಣ ಪುಟ್ಟ ಗಾಡಿಗಳನ್ನು ಇಟ್ಟುಕೊಂಡಿರುವವರು ಪ್ರತಿದಿನ ಪೋಲೀಸಿನವರಿಗೆ ಇಂತಿಷ್ಟು ಎಂದು ಕೊಡಬೇಕು. ಇದು 3೦ ರಿಂದ 1೦೦ ರ ವರೆಗೂ ಇರುತ್ತದೆ. ಸಾಮಾನ್ಯ ಪೇದೆ ಯಾದರೆ 3೦-4೦, ಸ್ವಲ್ಪ ಹೆಚ್ಚಿನ ಮಟ್ಟದ ಅಧಿಕಾರಿಯಾದರೆ ಇದು 1೦೦ ರ ವರೆಗೂ ತಲುಪುತ್ತದೆ.  ಕನಿಷ್ಠ 2೦ ಗಾಡಿಗಳು ಎಂದರೂ 300 ರಿಂದ 3000 ವರೆಗೆ. ತಿಂಗಳಿಗೆ ಹತ್ತಾರು ಸಾವಿರಗಳು...!

ಆದರೆ ಪ್ರಶ್ನೆಯಿರುವುದು ವ್ಯಾಪಾರಿಗಳು ಗಾಡಿಗಳನ್ನು ಇಟ್ಟುಕೊಳ್ಳುವುದು ತಪ್ಪೋ ಅಥವಾ ಪೋಲಿಸಿನವರ ವಸೂಲಿ ಸರಿಯೋ ಎಂದು. ಇಷ್ಟೆಲ್ಲಾ 'ಸೈಡ್' ಆದಾಯಗಳಿರುವ ಪೋಲೀಸಿನವರಿಗೆ ಸಂಬಳ ಎನ್ನುವುದು ನಿಜವಾಗಿಯೂ ಅವಶ್ಯಕತೆಯಿದೆಯಾ? 'ವಸೂಲಿ'ಯನ್ನೇ ಕಾನೂನುಬಧ್ಧವಾಗಿಸಿ ಪೋಲೀಸಿನವರಿಗೆ ಸಂಬಳವನ್ನೇ ನಿಲ್ಲಿಸಿದರೆ ಸರ್ಕಾರ ಅವರಿಗೆ ಕೊಡುವ ಸಂಬಳವನ್ನು ಬೇರೆ ಯಾವುದಾದರೂ ಒಳ್ಳೆಯ ಕೆಲಸಗಳಿಗೆ ವಿನಿಯೋಗಿಸಬಹುದು ಎಂಬ ಅಭಿಪ್ರಾಯ ಬರುವುದು ಸಹಜವೇ.

ಬಹುಶಃ  ಇಲ್ಲಿ ಯಾರೊಬ್ಬರಿಗೂ ನಷ್ಟವಿಲ್ಲದಿರಬಹುದು. ಯಾಕೆಂದರೆ ಗಾಡಿಯವನಿಗೆ ಪೋಲೀಸರ ಕಿರಿಕಿರಿಗಿಂತ ದಿನಕ್ಕೆ ಇಂತಿಷ್ಟು ಅಂತ ಕೊಡುವುದು ಸುಲಭವೆನಿಸರಲೂ ಉಂಟು. ಹಾಗಿದ್ದಲ್ಲಿ ಇಂತಿಂತ ಗಾಡಿಗಳಿಗೆ ಇಷ್ಟಿಷ್ಟು ಎಂದು 
ನಿಗದಿಮಾಡುವುದೇ ಲೇಸೆಂದೆನಿಸುತ್ತದೆ. ಆಗ ಗಾಡಿಯವನಿಗೆ ಸ್ವಲ್ಪ ಅನುಕೂಲವಾಗುತ್ತದೆ.


ಯಾರಾದರೂ ಸಂಬಂಧ ಪಟ್ಟವರು ತಮ್ಮ 'ಪಾಲಿನ' ಬಗ್ಗೆ ಯೋಚಿಸದೆ ಇದರ ಬಗ್ಗೆ ಗಮನ ಹರಿಸುವುದೊಳಿತು  ಎಂದೆನಿಸುತ್ತದೆ.

Aug 21, 2012

ಕಾಂಗ್ರೆಸ್ ನಲ್ಲಿ ಉತ್ತಮ ನಾಯಕರ ಕೊರತೆಯ ಸಾಬೀತು...


ಕರ್ನಾಟಕದ ಕಾಂಗ್ರೆಸ್ ನಲ್ಲಿ ಉತ್ತಮ ನಾಯಕರಿಲ್ಲ ಎಂಬುದನ್ನು ಪದೇ ಪದೇ ನಿರೂಪಿಸುತ್ತ ಬಂದಿರುವ ಪರಮೇಶ್ವರ್ ರವರು ರಾಜ್ಯದಲ್ಲಿನ ಪ್ರತಿಯೊಂದು ಸನ್ನಿವೇಶಕ್ಕೂ ಮನಬಂದಂತೆ ಮಾತಾಡುತ್ತಿರುವುದು ಪರಮೇಶ್ವರ್ ರವರಲ್ಲಿ ಎಲ್ಲವೂ ಸರಿಯಿಲ್ಲ ಎಂಬುದನ್ನೂ ಸಾಬೀತು ಪಡಿಸುತ್ತಿದ್ದಾರೆ. ಕೆಲ ದಿನಗಳ ಹಿಂದೆಯಷ್ಟೇ ಅಡ್ವಾಣಿಯವರ ಬಗ್ಗೆ ಬಾಯಿಗೆ ಬಂದಂತೆ ಮಾತನಾಡಿ ತಮ್ಮ ಯೋಗ್ಯತೆ ಏನು ಎಂಬುದನ್ನು ತೋರಿಸಿದ್ದ ಪರಮೇಶ್ವರ್, ಆ ನಂತರ ಅವರ ಹೆಸರಿನ ಜೊತೆ ಡಾಕ್ಟರ್ ಎಂದು ಸೇರಿಸಲು ಯೋಚನೆ ಮಾಡುವಂತಹ ಪರಿಸ್ಥಿತಿ ಎದುರಾಗಿತ್ತು. ಈ ಸಮಯದಲ್ಲಿ ತಮ್ಮ ಬಾಯಿಗೆ ಇಂಟರ್ವಲ್ ಸಹ ಕೊಡದೆ ಪರಮೆಶವರ್ ರವರು ಮತ್ತೊಮ್ಮೆ ಸುದ್ದಿಯಾಗಿ, ಸಣ್ಣವರಾಗಿದ್ದಾರೆ. 

ಇಡೀ ದೇಶದಲ್ಲಿ ಎಲ್ಲೇ ಅವಘಡ ಸಂಭವಿಸಿದರೂ ಮೊದಲು ಅಲ್ಲಿಗೆ ಹೋಗುವುದು ಆರೆಸ್ಸಸ್ ನ ಕಾರ್ಯಕರ್ತರು. ಇದನ್ನು ಪ್ರತ್ಯಕ್ಷ ನೋಡಿದವರಿಗೋ ಅಥವಾ ಪ್ರತ್ಯಕ್ಷ ಅನುಭವಿಸಿದವರಿಗೋ ಗೊತ್ತು. ಯಾಕೆಂದರೆ ಆರೆಸ್ಸಸ್ ಮಾಡುವ ಯಾವ ಕೆಲಸಗಳೂ ನಮ್ಮ ಮಾಧ್ಯಮದವರಿಗೆ ವಿಶೇಷವೂ ಅಲ್ಲ ಸುದ್ದಿಯೂ ಅಲ್ಲ. ಬಹುಶಃ ಅದು ಆರೆಸ್ಸೆಸ್ಸಿನವರ ಕರ್ತವ್ಯ ಎಂದೇ ಅವರು ಭಾವಿಸಿ ಸುಮ್ಮನಿರುತ್ತಾರೆ. ಅದು ನಿಜವೂ ಹೌದು. ಇಲ್ಲಿ ಆದದ್ದೂ ಅದೇ. 

ಸದ್ಯದ ರಾಜ್ಯದ ಬ್ರೇಕ್ ನ್ಯೂಸ್ ಆದ ಅಸ್ಸಾಮೀಯರ ವಲಸೆಯನ್ನು ನಿಯಂತ್ರಿಸಲು ಮತ್ತು ಅವರಿಗೆ ಧೈರ್ಯ ತುಂಬಲು ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತರು ಅತ್ಯಂತ ಸಹಜವಾಗಿಯೇ ತಮ್ಮ ಕೆಲಸವನ್ನು ಮಾಡುತ್ತಿದ್ದಾರೆ. ಈ ಕೆಲಸವನ್ನು ರಾಜ್ಯದಲ್ಲಿ ಬಿಜೆಪಿ ಸರ್ಕಾರದ 'ಪೋಲೀಸ್ ವ್ಯವಸ್ಥೆಯ ವೈಫಲ್ಯ' ಎಂದು ನಾಮಕರಣ ಮಾಡಿ ಪುರೋಹಿತರಾಗಹೊರಟಿದ್ದಾರೆ ಪರಮೇಶ್ವರ್. ಇಂತಹ ಕೆಲಸದ ಬಗ್ಗೆಯೂ ತಮ್ಮ ಸಣ್ಣ ಸಣ್ಣ ಮಾತುಗಳನ್ನು ಹರಿಬಿಟ್ಟಿರುವುದು ರಾಜ್ಯ ಕಾಂಗ್ರೆಸ್ ನಲ್ಲಿ ಯೋಗ್ಯ ನಾಯಕರ ಕೊರತೆಯನ್ನು ಎತ್ತಿ ಹಿಡಿದಿದೆ. 


ಪ್ರತಿಯೊಂದಕ್ಕೂ ರಾಜ್ಯ ಸರ್ಕಾರವನ್ನು ತೆಗಳುವ ಚಟದಲ್ಲಿ ಮಗ್ನರಾಗಿರುವ ಹಲವಾರು ತಲೆಲೆಕ್ಕಗಳಲ್ಲಿ ಇವರೂ ಒಬ್ಬರಾಗಿದ್ದಾರೆ. ಮಾತಾಡುವ ಮುಂಚೆ ಪರಮೇಶ್ವರರ ಮೆದುಳು ಕೆಲಸ ಮಾಡಲೆಂದು ಅವರವರ ದೇವರಲ್ಲಿ ಪ್ರಾರ್ಥಿಸುವುದು ರಾಜ್ಯ ಕಾಂಗ್ರೆಸ್ ನ ಹಿತದೃಷ್ಟಿಯಿಂದ ಹಾಗು ಅವರ ಹಿತದೃಷ್ಟಿಯಿಂದ ಒಳ್ಳೆಯದು ಎನ್ನುವುದು ಒಳ್ಳೆಯ ಸಲಹೆಯಾಗುವುದರಲ್ಲಿ ಸಂಶಯವಿಲ್ಲ. 

ಇನ್ನೇನು ಜಿ.ಪರಮೇಶ್ವರ್ ತಮ್ಮ ಮೇಡಮ್ಮರನ್ನು ಸಿಕ್ಕಾಪಟ್ಟೆ ಖುಷಿ ಪಡಿಸಿದರು ಅನ್ನುವಷ್ಟರಲ್ಲೇ ತಾನೇನು ಕಡಿಮೆ ಎನ್ನುವಂತೆ ಸ್ಪರ್ಧೆಗೆ ಬಂದರು ಎಐಸಿಸಿ ಪ್ರಧಾನ ಕಾರ್ಯದರ್ಶಿ ಬಿ ಕೆ ಹರಿಪ್ರಸಾದ್. ಆರೆಸ್ಸೆಸ್ ನ ಬಗ್ಗೆ 'ಬೇ''ಕಾ'ಬಿಟ್ಟಿ 'ಹರಿ'ಬಿಟ್ಟಿರುವ ಹರಿಪ್ರಸಾದರು 'ನಾವು ಕಾಂಗ್ರೆಸ್ಸಿನವರೆಲ್ಲ ಹೀಗೆಯೇ' ಎಂದು ಆಡಿ ತೋರಿಸಿದ್ದಾರೆ. ಅಸ್ಸಾಮೀಯರು ವಾಪಸ್ ಹೋಗುವಂತೆ ಮಾಡುತ್ತಿದ್ದ ಎಸ್ಎಂಎಸ್ ಗಳ ಹಿಂದಿನ 'ಕೈ'ಗಳು ಪಾಕಿಸ್ತಾನದಲ್ಲಿವೆ ಎಂದು ತನಿಖೆಗಳಿಂದ ಹೊರಬರುತ್ತಿದ್ದರೂ ಕಾಂಗ್ರೆಸ್ಸಿನ 'ಕೈ' ಗಳು ಮಾತ್ರ ಸುಮ್ಮನಾದಂತಿಲ್ಲ. ಕಾಂಗ್ರೆಸ್ಸಿನ ಅವನತಿ ಶುರುವಾದಂತೆಯೇ. 

Jun 25, 2012

ಜನರ ಕಷ್ಟಗಳಿಗೆ ಸ್ಪಂದಿಸುತ್ತಿರುವ 'ಕನ್ನಡದ ಕೋಟ್ಯಾಧಿಪತಿ'


ಯಾವ ಕನ್ನಡಿಗನಿಗೆ ತಾನೇ ಹೆಮ್ಮೆಯಾಗುವುದಿಲ್ಲ?

ಹಿಂದಿಯ 'ಕೌನ್ ಬನೇಗ ಕರೋಡ್ ಪತಿ'ಗೆ ಕನ್ನಡತನವನ್ನ, ಕರ್ನಾಟಕದ ಜನರ ಕಷ್ಟಗಳಿಗೆ ಸ್ಪಂದಿಸುವ 'ಮಾನವೀಯತೆ'ಯನ್ನ ಹೊತ್ತು ನಮಗೆ ನೀಡುತ್ತಿರುವ 'ಕನ್ನಡದ ಕೋಟ್ಯಾಧಿಪತಿ'ಯನ್ನು ನೋಡಿದರೆ ಯಾವ ಕನ್ನಡಿಗನಿಗೆ ತಾನೇ ಹೆಮ್ಮೆಯಾಗುವುದಿಲ್ಲ?

ಸಾಕಷ್ಟು ದಿನಗಳಿಂದ ದುಬಾರಿ ಬೆಂಗಳೂರಲ್ಲಿ ಸಣ್ಣ ಮನೆಯನ್ನು ಮಾಡಬೇಕು ಎಂಬ ಮಹದಾಸೆಯಿರುವ ಸ್ನೇಹಿತನೊಬ್ಬನಿಗೆ 'ನೀನ್ಯಾಕೆ ಕನ್ನಡದ ಕೋಟ್ಯಾಧಿಪತಿ ಅವಕಾಶಕ್ಕೆ ಪ್ರಯತ್ನಿಸಬಾರದು?' ಅಂತ ತಮಾಷೆಗೆ ಕೇಳಿದ್ದಕ್ಕೆ ಅವನು 'ನಾನ್ಯಾಕ್ ಮಾರಾಯ? ಆ ದೇವರ ಕೃಪೆಯಿಂದ ನನ್ನ ಹಣದ ಅವಶ್ಯಕತೆಗಳನ್ನ ಪೂರೈಸಿ ಕೊಳ್ಳುವುದಕ್ಕೆ ದುಡಿಯುವ ಸಾಮರ್ಥ್ಯವನ್ನ ಕೊಟ್ಟಿದಾನೆ. ತಕ್ಷಣದಲ್ಲಿ ಲಕ್ಷಾಂತರ ರೂಪಾಯಿಗಳ ಅನಿವಾರ್ಯತೆಗಳಿಲ್ಲ ನನಗೆ. ಆದರೆ ಆರೋಗ್ಯದ ಸಮಸ್ಯೆಗಳಿಂದ ನರಳುತ್ತಿರುವ, ದಿನದ ಹೊಟ್ಟೆ ಪಾಡಿಗೂ ಕಷ್ಟ ಪಡುತ್ತಿರುವ ಎಷ್ಟೋ ಜನರಿಗೆ ಅವಕಾಶ ಸಿಗುತ್ತಿರುವ ನಮ್ಮ 'ಕನ್ನಡ ದ ಕೋಟ್ಯಾಧಿಪತಿ' ಕಾರ್ಯ ಕ್ರಮಕ್ಕೆ ನಮ್ಮಂತಹವರು ಪ್ರಯತ್ನಿಸುವುದು ನನಗೆ ಸರಿ ಕಾಣೋಲ್ಲ. ಅಂತಹವರು ಮಾತ್ರ ಅಲ್ಲಿಗೆ ಬರುವಂತಾಗಬೇಕು. ಅದೇ ನನ್ನ ಹಾರೈಕೆ' ಅಂದಾಗ, ಛೆ, ನನಗು ಯಾಕೆ ಹಾಗನ್ನಿಸುವುದಿಲ್ಲ? ನನಗೆ ಯಾಕೆ ಇಷ್ಟು ಒಳ್ಳೆ ಮನಸ್ಸಿಲ್ಲ ಅಂತ ಬೇಸರವಾಯಿತು.

'ಸೆಲೆಬ್ರಿಟಿ' ಸುತ್ತುಗಳಲ್ಲಿ ಗಣ್ಯರನ್ನ ಕರೆಸಿ ಅವರ ಕೈಗಳಿಂದಲೂ  ಅವರು ಗೆದ್ದ ಹಣವನ್ನೂ ಒಳ್ಳೆಯ ಉದ್ದೇಶಗಳಿಗೆ ವಿನಿಯೋಗಿಸುವ ಪ್ರೇರಣಾ ದಾಯಿ ಕಾರ್ಯಕ್ರಮ ನಮ್ಮ ಕನ್ನಡದ ವಾಹಿನಿಯಲ್ಲಿ ಪ್ರಸಾರವಾಗ್ತಿದೆ ಅಂತ ಹೇಳಿಕೊಳ್ಳಲಿಕ್ಕೆ ಖುಷಿಯಾಗುತ್ತೆ. ಕಾರ್ಯಕ್ರಮದಲ್ಲಿ ಭಾಗವಹಿಸುವವರ ಕಿರುಪರಿಚಯದ ವೀಡಿಯೊ ಮುಖಾಂತರ  ಅವರ ಗೆಲ್ಲುವ ಹಣದ ಸದ್ವಿನಿಯೋಗದ ಕುರಿತಾದ ಮಾಹಿತಿಯನ್ನೂ ನೀಡಿ ವೀಕ್ಷಕರ ಹೃದಯ ಮುಟ್ಟುವಂತಹ ಪ್ರಯತ್ನಕ್ಕೆ ನಮ್ಮದೊಂದು ಸಲಾಂ.
ಬಹುಶಃ ಪುನೀತ್ ರಾಜ್ ಕುಮಾರ್ ರವರು ಚಿತ್ರಗಳನ್ನು ಮಾಡಿರುವುದಕ್ಕಿಂತ ಹೆಚ್ಚಾಗಿ ಜನರ ಮನಸ್ಸನ್ನು ತಲುಪಲು 'ಕನ್ನಡದ ಕೋಟ್ಯಾಧಿಪತಿ' ಎಂಬ 'ಮಾಧ್ಯಮ' ಕಾರಣವಾಗಬಹುದು. ಅದಕ್ಕಿಂತಲೂ ಹೆಚ್ಚಾಗಿ ಪುನೀತ್ ರವರು ನಟಸಾರ್ವಭೌಮ ಡಾ||ರಾಜ್ ಕುಮಾರ್ ರವರ ಮಗನಾಗಿರುವುದರಿಂದಲೇ ಇಡೀ ಕುಟುಂಬದ ಮೇಲಿನ ಶ್ರಧ್ಧಾ-ಗೌರವಗಳು ಇಮ್ಮಡಿಗೊಳ್ಳಲು ಈ 'ಕನ್ನಡದ ಕೋಟ್ಯಾಧಿಪತಿ' ಕಾರಣಗುತ್ತಿದೆ ಎಂದರೆ ಹೆಚ್ಚು ಸರಿಯಾಗಬಹುದೇನೋ.


ಆದರೆ ಬಹುಮಾನರೂಪಿ ಹಣ ಮತ್ತು ಅದರ ಪ್ರಮಾಣದ ಕಾರಣಕ್ಕೆ ಇದನ್ನು ನೋಡಿದ ಬಹುಪಾಲು ವೀಕ್ಷಕರಿಗೆ ಇದೆಲ್ಲ ಸುಳ್ಳು,ಕಾರ್ಯಕ್ರಮದ ಪ್ರಚಾರಕ್ಕೆ ಎಂಬೆಲ್ಲ ಅಭಿಪ್ರಾಯ ಬರುವುದು ಸಹಜ. 

ಅದು ಸುಳ್ಳಾಗದಿರಲಿ ಎಂಬ ಆಶಯ ಎಲ್ಲರ ಪರವಾಗಿ ನಮ್ಮದು.



May 27, 2012

ಪ್ರಪ್ರಥಮ ಸ್ಕೈಡೈವ್ : ಕನಸಿನಲ್ಲೇ ಹೋದಂತಿದೆ..!


ಎರಡು ವರ್ಷದ ಹಿಂದೆ ನನ್ನ ಆತ್ಮೀಯರೊಬ್ಬರು ಅಮೆರಿಕದಲ್ಲಿದ್ದಾಗ ಸ್ಕೈಡೈವ್ ಗೆ ಹೋದ ಫೋಟೋ ಹಾಗು ವೀಡಿಯೊ ಗಳನ್ನು ನೋಡಿ ಪುಳಕಿತನಾಗಿದ್ದೆ. ಆ ಕ್ಷಣದಲ್ಲೇ ಅಂದುಕೊಂಡಿದ್ದೆ ನಾನೂ ಸಹ ನನ್ನ ಜೀವನದಲ್ಲಿ ಒಮ್ಮೆಯಾದರೂ ಸ್ಕೈಡೈವ್ ನ ಅನುಭವವನ್ನು ಪಡೆಯಬೇಕು ಅಂತ. ಅದಾದ ಕೆಲವೇ ದಿನಗಳಲ್ಲಿ ಹಿಂದಿ ಭಾಷೆಯ 'ಜಿಂದಗೀ ನಮಿಲೇಗಿ ದೋ ಬಾರಾ' ಎಂಬ ಚಲನಚಿತ್ರವನ್ನು ನೋಡಿ ಅದರಲ್ಲಿ ನೋಡಿದ ಸ್ಕೈಡೈವ್ ನನ್ನನ್ನು ಇನ್ನು ಹೆಚ್ಚಿನ ಆಕರ್ಷಣೆ ಮಾಡಿತ್ತು. ಕನಸಾಗಿದ್ದಂತಹ ಆಸೆ, ಗುರಿಯಾಗಿಬಿಟ್ಟಿತು. ಸ್ಕೈಡೈವ್  ಗೋಸ್ಕರವಾಗಿಯಾದರೂ ನಾನೂ ಬೇರೆ ದೇಶದ ಪ್ರಯಾಣ ಮಾಡಬೇಕು ಎಂಬ ಮಟ್ಟಕ್ಕೆ ಇಳಿದಿದ್ದೆ.

ಆ ನಂತರ ನಾನೂ ಅದರ ಬಗ್ಗೆ ಯೋಚನೆ ಮಾಡಿದ್ದೆ ಇಲ್ಲ.

ನಾನು ಮೊದಲ ಬಾರಿಗೆ ಜಪಾನ್ಗೆ ಬಂದಾಗಲೂ ನನ್ನ ಮನಸ್ಸಿನಲ್ಲಿ ಸ್ಕೈಡೈವ್ ಸುಪ್ತವಾಗಿತ್ತು, ಅದರ ಪಾಡಿಗೆ. ಅದಾಗ ತಾನೇ ನಡೆದಂತಹ ಸುನಾಮಿಯ ಕಾರಣಕ್ಕೆ ಸಾಕಷ್ಟು ಮನರಂಜನಾ ವೈವಿಧ್ಯತೆಗಳು ತಾತ್ಕಾಲಿಕವಾಗಿ ಸ್ಥಗಿತಗೊಂಡಿತ್ತು. ಅದಕ್ಕೆ ನನಗೆ ಆ ಬಗ್ಗೆ ಸುಳಿಯೂ ಸಿಗಲಿಲ್ಲ. ಬಂದಿದ್ದು ಗೊತ್ತಾಗದ ರೀತಿಯಲ್ಲಿ ವಾಪಾಸಾಗಿದ್ದೆ.

ಆದರೆ ಸಲ ಬಂದಾಗ ನನ್ನ ಸಹೋದ್ಯೋಗಿಯೊಬ್ಬರು ನೀಡಿದ  ಸ್ಕೈ ಡೈವ್ ಸಲಹೆ ನನ್ನ ಮನಸ್ಸಿನಲ್ಲಿ ಆಸೆ ಹುಟ್ಟಿಸಿತು. ತಕ್ಷಣವೇ ಮಾಹಿತಿ ಸಂಗ್ರಹಿಸಿ ನೋಡಿದರೆ ಅತ್ಯಂತ ದುಬಾರಿಯಾಗಿತ್ತು. ಬೇರೆಡೆಗಳಿಗಿಂತ ಸಾಕಷ್ಟು ದುಬಾರಿಯಾಗಿತ್ತು. ಅಮೆರಿಕದಲ್ಲೇ ಅಗ್ಗವಾಗಿತ್ತು. ಸ್ಕೈಡೈವ್ ಆಸೆಯನ್ನು ಈಡೇರಿಸಿಕೊಳ್ಳಲು ಅಮೆರಿಕಕ್ಕೆ ಹೋಗುವ ಅವಕಾಶಕ್ಕಾಗಿ ಕಾಯಬೇಕೋ ಅಥವಾ ಜಪಾನ್ ನಲ್ಲೆ ಮುಗಿಸಿಕೊಳ್ಳಬೇಕೋ ಎಂಬ ದ್ವಂದ್ವದಲ್ಲಿ ನಾ ಬಂದು ಬಿದ್ದೆ. 2-3 ದಿನಗಳ ನಿರಂತರ ಆಲೋಚನೆಯ ನಂತರ ನಿರ್ಧರಿಸಿದ್ದೆ, ಸ್ಕೈ ಡೈವ್ ಮುಗಿಸಿಕೊಂಡು ಹೋಗಲು.


ಭಾಷೆಯ ಸಮಸ್ಯೆಯಿಂದ ನನ್ನ ಸಹೋದ್ಯೋಗಿ ಸಹಾಯ ಪಡೆದು ಏನೇನು ಮಾಡಬೇಕೆಂದು ತಿಳಿದು ೧೫ ದಿನ ಬಿಟ್ಟು ಕಾಯ್ದಿರಿಸಿದೆ. ಪ್ರತಿ ದಿನ ಯುಟ್ಯೂಬ್ ನಲ್ಲಿ ಬೇರೆಯವರ ಸ್ಕೈ ಡೈವ್ ವೀಡಿಯೊಗಳನ್ನ ನೋಡಲು ಶುರುಮಾಡಿದೆ. ಅವರ ಸ್ಥಳದಲ್ಲಿ ನನ್ನನ್ನೇ ಕೂರಿಸಿ ಕನಸು ಕಾಣಲು ಶುರುವಿಟ್ಟುಕೊಂಡೆ. ಸಮಯದಲ್ಲಿ ನನ್ನ ಸಹೋದ್ಯೋಗಿಯೊಬ್ಬರ ಪತಿಯೊಬ್ಬರು ನ್ಯೂಜಿಲ್ಯಾಂಡ್ ನಲ್ಲಿ ಸ್ಕೈ ಡೈವ್ ಗೆ ಹೋದ ಸುದ್ದಿ ತಿಳಿದು ಅವರ ವೀಡಿಯೊವನ್ನೂ ಪಡೆದು ನೋಡಿದೆ. ೧೫ ದಿನವೂ ಇದೇ ಕಾಯಕವಾಯಿತು

ಇನ್ನೇನು ವಾರವಿದೆ ಎಂದಾಗ ಅವತ್ತಿನ ಹವಾಮಾನ ಮುನ್ಸೂಚನೆಯನ್ನು ನೋಡಿದರೆ ಮಳೆ ಬರುವ ಲಕ್ಷಣವಿತ್ತು. ಆದರೆ ಒಂದು ವಾರ ಮುಂಚಿನ ಮುನ್ಸೂಚನೆಯ ಕಾರಣಕ್ಕೆ ನಿರ್ಧಾರ ಮಾಡಲು ಆಗುವುದಿಲ್ಲ ಎಂದು ತಿಳಿದು, ಹವಾಮಾನ ಬದಲಾಗಬಹುದು ಎಂದು ಆಸೆಯಿಟ್ಟು ಕಾದೆ. ನನ್ನ ಸರತಿ ನಾಳೆ ಎಂದಾಗ ನೋಡಿದರೆ, ಮಳೆ ಬರುವುದು ಖಚಿತ ಎಂದು ತಿಳಿದು ಸಕ್ಕತ್ ಬೇಜಾರಾಯ್ತು. ಇಲ್ಲಿ ಜಪಾನ್ ನಲ್ಲಿ ಹವಾಮಾನ ಮುನ್ಸೂಚನೆ ಯಾವಾಗಲೂ ಶೇಕಡಾ ೧೦೦. ಯಾರಿಗೂ ಸಂದೇಹವಿರುವುದಿಲ್ಲ. ವರದಿಯನ್ನು ನೋಡಿಯೇ ಛತ್ರಿ ತೆಗೆದುಕೊಂಡು ಹೋಗಬೇಕೆ-ಬೇಡವೇ ಎಂದು ನಿರ್ಧರಿಸಿ ಮನೆಯಿಂದ ಹೊರಡುತ್ತಾರೆಇನ್ನೇನು ಮಾಡುವುದು-ಮೇಲ್ ಕಳಿಸಿ ಮುಂದಿನ ವಾರಕ್ಕೆ ಬದಲಾಯಿಸಿದೆ

ಮತ್ತದೇ ಕಾಯಕ, ವೀಡಿಯೊಗಳನ್ನು ನೋಡುವುದು. ವಾರ ಕಳೆದು ಹವಾಮಾನ ಮುನ್ಸೂಚನೆ ನೋಡಿದರೆ ಸಲವೂ ವರುಣದೇವನ ಕೃಪೆ ನನ್ನ ಮೇಲಿರಲಿಲ್ಲ. ಮತ್ತೊಮ್ಮೆ ಮುಂದಿನ ವಾರಕ್ಕೆ ಮುಂದೂಡಿದೆ.


ಅದರ ಮುಂದಿನ ವಾರ ಮಳೆಯಿರಲಿಲ್ಲ ಎಂದು ಖುಷಿಯಾಗಿತ್ತು. ಆದರೆ ಮೋಡದ ವಾತಾವರಣ ಜಾಸ್ತಿಯಾಗಿತ್ತು ಹಾಗು ಚಳಿ ಕೂಡ ಅಧಿಕವಾಗಿತ್ತು. ಏನು ಮಾಡುವುದು ಎಂದು ಯೋಚಿಸಿದಾಗ, ಇಷ್ಟೊಂದು ಖರ್ಚು ಮಾಡಿ ಹೋಗುತ್ತಿರುವಾಗ ಒಳ್ಳೆಯ ವಾತಾವರಣವಿದ್ದಾಗಲೇ ಹೋದರಾಯಿತು ಎಂದು ನಿರ್ಧರಿಸಿ ಮತ್ತೊಂದು ವಾರ ಮುಂದೂಡಲು ಹೊರಟರೆ ನನ್ನ ದುರಾದೃಷ್ಟಕ್ಕೆ ಆಂಗ್ಲ ಭಾಷೆ ಬರುವ ತರಬೇತುದಾರ ರಜೆಯಲ್ಲಿದ್ದ. ಕಾರಣಕ್ಕಾಗಿ ನನಗೆ ಕಷ್ಟವಾಗಬಹುದು ಎಂದು ಸಲಹೆ ಬಂದ ಕಾರಣಕ್ಕೆ ಅದರ ಮುಂದಿನ ವಾರಕ್ಕೆ ಮುಂದೂಡಿದೆ, ಅಂದರೆ ಇನ್ನು ೧೫ ದಿನ ಕಾಯಬೇಕಾಯಿತು
 

ಅಷ್ಟೊತ್ತಿಗೆ ನನಗೂ ಸಾಕಾಗಿ ಹೋಗಿತ್ತು ವೀಡಿಯೊ ಗಳನ್ನು ನೋಡಿ ನೋಡಿ. ಯಾಕೋ ನನಗೆ ಅವಕಾಶವಿಲ್ಲ ಅನ್ಸುತ್ತೆ ಎಂದುಕೊಂಡು ವೃಥಾ ಕುತೂಹಲ ಬೇಡ ಎಂದುಕೊಂಡು ಹಾಗೆ ಸುಮ್ಮನೆ ದಿನ ಕಳೆದು ನೋಡಿದರೆ ವಾತಾವರಣ ಅನುಕೂಲಕರ ವಾಗಿತ್ತು. ಬೇರೆ ಏನು ಯೋಚನೆ ಮಾಡದೆ ನಿರ್ಧಾರ ಮಾಡಿದೆ, ಏನಾದರೂ ಮಾಡಿ ಇವತ್ತು ಮುಗಿಸಿಕೊಳ್ಳಬೇಕು ಎಂದು ನಿರ್ಧರಿಸಿದವನೇ ಎಲ್ಲ ವಿಳಾಸಗಳನ್ನು, ಜಾಗ ತಲಪುವ ವಿಧಾನಗಳು, ಬಸ್ ಮಾಹಿತಿಗಳು, ರೈಲಿನ ಮಾಹಿತಿಗಳನ್ನು ಕಲೆ ಹಾಕಿ ಪ್ರಿಂಟ್ ತೆಗೆದಿಟ್ಟುಕೊಂಡೆ. ಮಾರನೆ ದಿನ ಬೆಳಗ್ಗೆ 7.30ಕ್ಕೆ ಮನೆ ಬಿಟ್ಟೆ.
ಸುಮಾರು 2.30 ಗಂಟೆ ಕಾಲದ ಸಮಯ ಬೇಕಾಗಿತ್ತು ಜಾಗ ತಲುಪಲು. ಮಧ್ಯಾಹ್ನ 12ಕ್ಕೆ ನನ್ನ ಸರದಿಯಿತ್ತು. ಸುಮಾರು 10.30 ಕ್ಕೆ ನಾನು ಜಾಗ ತಲುಪಿದೆ. ಅಲ್ಲಿದ್ದ ಜನರನ್ನು, ಪುಟ್ಟ ಪುಟ್ಟ ವಿಮಾನಗಳನ್ನು, ಹಾರುತ್ತಿದ್ದ ವ್ಯಕ್ತಿಗಳನ್ನು, ತಮ್ಮ ಸರದಿಗಾಗಿ ಕಾಯುತ್ತಿದ್ದ ವರನ್ನು ನೋಡಿ, ನನ್ನ ಸರದಿಯೂ ಇನ್ನು ಕೆಲವೇ ಗಂಟೆಗಳಲ್ಲಿ ಬರುತ್ತದೆ ಎಂಬುದನ್ನು ನೆನೆಸಿಕೊಂಡಾಗ ಎಲ್ಲ ಕನಸಿನತೆಯೇ ಭಾಸವಾಗಿತ್ತು. ಮಾಹಿತಿಗಳ ಪತ್ರಕ ಪೂರ್ತಿ ಮಾಡಿ, ವಿಳಾಸ ಕೊಟ್ಟು, ನನ್ನ ಸರದಿಗಾಗಿ ಕಾಯಲು ಅಣಿಯಾದೆ. ಸ್ಕೈಡೈವ್ ಸಹಾಯಕರು ತಮ್ಮ ತಮ್ಮ ಪ್ಯಾರಾಚೂಟ್ ಗಳನ್ನು ಬ್ಯಾಗ್ ಗಳಿಗೆ ನಾಜೂಕಿನಿಂದ ತುಂಬುತ್ತಿದ್ದ ರೀತಿ, ವೇಷಗಳನ್ನು ತೊಡುವ ರೀತಿ ನೋಡುತ್ತಾ ನನ್ನ ಸರತಿಯೂ ಬಂದೇ ಬಿಟ್ಟಿತು


ನನ್ನ ಸಹಾಯಕ ಹಾಗು ವೀಡಿಯೊ ತೆಗೆಯುವವರನ್ನು ಪರಿಚಯಿಸಿಕೊಂಡು ನನ್ನ ವೇಷವನ್ನು ತೊಡಲು ಹೊರಟೆ. ನನ್ನ ಸಹಾಯಕ ಬಂದು ಸಹಾಯ ಮಾಡಿದ. ವೀಡಿಯೊಗ್ರಾಫೆರ್ ತನ್ನ ಕೆಲಸವನ್ನು ಶುರುಮಾಡಿದ. ವ್ಯಾನ್ ಗೆ ಕೂತೆ. ನಾವು 14 ಜನ ಇದ್ದೆವು. ಅದರಲ್ಲಿ 9 ಜನ ಹಾರುವವರು, ಉಳಿದವರು ಸಹಾಯಕರಿದ್ದರು. ನಮ್ಮನ್ನು ಹೊತ್ತೊಯ್ಯುವ ಪುಟ್ಟ ವಿಮಾನದತ್ತ ಹೋಗಿ ಎಲ್ಲರು ಒಬ್ಬೊಬ್ಬರಾಗಿ ಏರಿ ಕೂತೆವು. ವಿಮಾನ ಹೊರಟಿತ್ತು. ಎಲ್ಲವೂ ಕನಸಿನಂತೆಯೇ ಭಾಸವಾಗುತ್ತಿತ್ತು

ಸುಮಾರು 23 ನಿಮಷಗಳ ನಂತರ 13000 ಅಡಿಗಳ ಎತ್ತರವನ್ನು ತಲುಪಿದ ನಂತರ ಬಾಗಿಲು ತೆರೆದರು. ಒಬ್ಬೊಬ್ಬರೇ ಹಾರುವವರು (ಸೋಲೋ) ತುಪು ತುಪು ಎಂದು ಹಾರಿದರು. ನನಗೆ ಕಾರ್ಟೂನ್ ನೋಡಿದ ಹಾಗಿತ್ತು. ನನ್ನ ಸರತಿಯೂ ಬಂದಿತು. ನನ್ನ ಸಹಾಯಕ ನನ್ನನ್ನು ಮುಂದೆ ಬಿಟ್ಟು, 3 ಎಣಿಸಿದ ನಂತರ ಹಾರುವುದು ಎಂದು ಹೇಳಿದ. ಮೊದಲು ನನ್ನ ವೀಡಿಯೊಗ್ರಾಫೆರ್ ಹೊರಗೆ ಹಾರಿದ. ನಂತರ ನಾವು ಹಾರಿಯೇ ಬಿಟ್ಟೆವು. ಚಳಿ ಗಾಳಿಯ ನಡುವೆ ಕ್ಯಾಮೆರಾ ವ್ಯಕ್ತಿ ಯನ್ನು ನೋಡುತ್ತಾ ಸುಮಾರು ೫೦ ಸೆಕೆಂಡುಗಳ ಕಾಲ ಕೆಳಗೆ ಬೀಳುತ್ತಿದ್ದೆವು. ನಾನು ಕ್ಯಾಮೆರಾ ವ್ಯಕ್ತಿಯನ್ನು ನೋಡುತ್ತಿದ್ದ  ಕಾರಣಕ್ಕೆ ನಾನು ಕೆಳಗೆ ನೋಡಲೇ ಇಲ್ಲ. ಅದಕ್ಕೆ ನಾನು ಕೆಳಗೆ ಬೀಳುತ್ತಿದ್ದೇನೆ ಎಂದೆನಿಸಲೇ ಇಲ್ಲ. ಆದರೆ ಗಾಳಿಯ ವೇಗ ಮಾತ್ರ ಸಾಕಷ್ಟಿತ್ತು..!


ನಂತರ ನನ್ನ ಸಹಾಯಕ ಪ್ಯಾರಚೂಟನ್ನು ತೆರೆದ, ಕ್ಯಾಮೆರಾ ವ್ಯಕ್ತಿ ತನ್ನ ಹಾದಿಯನ್ನು  ಹಿಡಿದು ದೂರವಾದ.  ಎಲ್ಲರು ನಿರ್ಧಿಷ್ಟ ದೂರವನ್ನು ಕಾಪಾಡಿಕೊಂಡು ಭೂಮಿಗೆ ಇಳಿಯಬೇಕಿತ್ತು. ಪ್ಯಾರಚೂಟನ್ನು ತೆರೆದ ನಂತರ ಎಂತಹ ಅದ್ಭುತ ಅನುಭವವೆಂದರೆ ಅನುಭವಿಸಿಯೇ ಗೊತ್ತಾಗಬೇಕು. ಹಕ್ಕಿಯಂತೆ ಹಾರುತ್ತಿದ್ದೇವೆ ಎಂದೆನಿಸುತ್ತಿತ್ತು. ಆರೇಳು ನಿಮಿಷಗಳ ನಂತರ ಇನ್ನೇನು ಭೂಮಿಯನ್ನು ಮುಟ್ಟುತ್ತೇವೆ ಎಂದಾಗ ಕ್ಯಾಮೆರಾ ವ್ಯಕ್ತಿ ಎದುರಾಗಿ ಆಗಿನ ಕ್ಷಣವನ್ನೂ ಸೆರೆಹಿಡಿದ. 2 ವರ್ಷಗಳ ಹಿಂದೆ ನಾನು ಒಮ್ಮೆ ಹೋಗಬೇಕು ಎಂದುಕೊಂಡಿದ್ದ ಸ್ಕೈಡೈವ್ ಮುಗಿದಿತ್ತು. ಎಲ್ಲ ಕನಸಿನಂತೆಯೇ

ಫೋಟೋಗಳು ಹಾಗಿ ವೀಡಿಯೊ ಡಿವಿಡಿಯನ್ನು ಕಳಿಸಲು ನನ್ನ ಆತ್ಮೀಯರೊಬ್ಬರ  ವಿಳಾಸವನ್ನು ಕೊಟ್ಟು ನಾನು ಹೊರಟು ಬಂದೆ.

ನನಗೆ  ಬೇಸರದ  ಒಂದೇ ವಿಷಯವೆಂದರೆ ಯಾವುದೇ ಕ್ಷಣದಲ್ಲೂ ನನಗೆ ಭಯವಾಗದ್ದು. ಯಾಕೆಂದರೆ ಭಯವಿದ್ದರೆ ಮಾತ್ರ ಕ್ಷಣದ ಅನುಭವ ತುಂಬಾ ದಿನಗಳವರೆಗೆ ನಮ್ಮಲ್ಲಿರುತ್ತದೆ. ಆದರೆ ನನಗೆ ಪ್ರತಿಯೊಂದು ಕ್ಷಣವನ್ನು ಸರಿಯಾಗಿ ಅನುಭವಿಸಲೇ ಆಗದ ರೀತಿಯಲ್ಲಿ, ಸಲೀಸಾಗಿ ಮುಗಿದುಹೋಗಿತ್ತು