Mar 27, 2012

‘ಒಂಟಿ ಭಾವ’ದ ಕೈಗೆ ಸಿಕ್ಕಿ ನರಳಿದ್ದು...

ನಾನು ಕಳೆದ ಬಾರಿ ಜಪಾನ್ ಗೆ ಬಂದಾಗ ನನ್ನ ಸಹೋದ್ಯೋಗಿಯೊಬ್ಬರ ಜೊತೆ ಇದ್ದಿದ್ದಕ್ಕೆ ನನಗೆ ಊಟದ ವಿಷಯದಲ್ಲೂ, ಭಾಷೆಯ ವಿಷಯದಲ್ಲೂ ಯಾವುದೇ ಸಮಸ್ಯೆಗಳೂ ಇರಲಿಲ್ಲ. 45 ದಿನಗಳು ಹೇಗೆ ಕಳೆದ ಹೋದವು ಎಂಬುದೇ ತಿಳಿಯಲಿಲ್ಲ. ಅದೇ ಕಾರಣಕ್ಕೆ ನಾನು ವಾಪಾಸ್ ಭಾರತಕ್ಕೆ ಬಂದಮೇಲೆ ಮುಂದಿನ ಜಪಾನ್ ಅವಕಾಶಕ್ಕೆ ಅತ್ಯಂತ ಸಡಗರದಿಂದಲೇ ಸಮ್ಮತಿ ಸೂಚಿಸಿದ್ದೆ.

ಆದರೆ ಈ ಸಲ ಜಪಾನ್ ನ ‘ನರಿತ ಏರ್ಪೋರ್ಟ್’ ಗೆ ಬರುವಾಗಿನ ತನಕ ಸಹಜವಾಗಿಯೇ ಇದ್ದೆ. ಎಲ್ಲ ಪರೀಕ್ಷೆಗಳನ್ನು ಮುಗಿಸಿಕೊಂಡು 'ನರಿತ ಎಕ್ಸ್ ಪ್ರೆಸ್' ನ ಟಿಕೆಟ್ ತೆಗೆದುಕೊಂಡು ರೈಲುಹತ್ತಿ ಕೂತ ತಕ್ಷಣಕ್ಕೆ ಮನಸ್ಸಿನಲ್ಲಿ ಏನೋ ತಳಮಳ, ದುಃಖ. ಮನೆಗೆ ಹೋದಮೇಲೆ ಹೇಗೋ ಏನೋ, ನಾಳೆಯಿಂದ ನಾನು ಒಬ್ಬನೇ ನನ್ನ ರೂಮಿನಲ್ಲಿ ಇರಬೇಕು, ನಾನೇ ಅಡಿಗೆ ಮಾಡಿಕೊಳ್ಳಬೇಕು, ಅದೂ ಪೂರ್ಣ ಸಸ್ಯಾಹಾರದ ಅಡಿಗೆ..! ಬಟ್ಟೆ ಒಗೆದುಕೊಳ್ಳುವುದು, ಭಾಷೆಯ ಗಂಧವಿಲ್ಲದೆ ಅಡಿಗೆಗೆ ಬೇಕಾದ ಸಾಮಾನುಗಳನ್ನು ಕೊಂಡುಕೊಳ್ಳುವುದು, ಯಾವ ಪುರುಷಾರ್ಥಕ್ಕಾಗಿ ನಾನು ಇಲ್ಲಿಗೆ ಬಂದೆ, ಏನಾದರು ಸಮಸ್ಯೆಯಾದರೆ, ಆರೋಗ್ಯದ ವ್ಯತ್ಯಯವಾದರೆ ಯಾರು ಗತಿ, ಎಂಬೆಲ್ಲ ಯೋಚನೆಗಳು ಬಂದು ಕಣ್ಣುಗಳು ತನಗೆ ತಾವೇ ಒದ್ದೆಯಾದವು ! ಹಣವಾದರೆ ಸ್ವಲ್ಪ ತಡವಾಗಿಯಾದರೂ ನಮ್ಮ ದೇಶದಲ್ಲೇ ಸಂಪಾದಿಸಬಹುದು. ನೆಮ್ಮದಿಯಿಂದ ಅಪ್ಪ-ಅಮ್ಮ ಹತ್ತಿರ, ಅಕ್ಕನ ಹತ್ತಿರ ಇರುವುದರ ಮುಂದೆ ಇಲ್ಲಿನ ಸಂಪಾದನೆ ಯಾವ ಲೆಕ್ಕ ಎಂದು ನನ್ನನ್ನು ನೋಡಿ ನಾನೇ ಅಸಹ್ಯ ಪಟ್ಟುಕೊಂಡೆ.

ಯೋಕೋಹಾಮಕ್ಕೆ ತಲುಪಿ ಅಲ್ಲಿಂದ ಕಾರನ್ನು ಹಿಡಿದು , ಚಾಲಕನಿಗೆ ಜಪಾನೀಸ್ ಭಾಷೆಯ ವಿಳಾಸವನ್ನು ಕೊಟ್ಟು ನಾನಿರಬೇಕಾದ ಅಪಾರ್ಟ್ಮೆಂಟ್ ತಲುಪಿದರೆ ಹೇಗೆ ಒಳಗೆ ಹೊಕಬೇಕೆಂಬುದೇ ತಿಳಿಯಲಿಲ್ಲ. ಅಲ್ಲೇ ಬರುತ್ತಿದ್ದ ಒಬ್ಬರಿಗೆ ಕೇಳಿದರೆ, ಅವರಿಗೆ ಆಂಗ್ಲ ಭಾಷೆ ಅರ್ಥವಾಗದೆ ಅವರು ತಮ್ಮನ್ನು ತಾವೇ ಬೈದುಕೊಂಡು ಹೋದಂತಿತ್ತು. ತಲೆಯಲ್ಲಿರುವ ಬುದ್ಧಿಯನ್ನು ಹಾಗು-ಹೀಗೂ ಬಳಸಿ ನನ್ನ ಮನೆಯ ಸಂಖ್ಯೆಯನ್ನು ಹಿಡಿದು ಹೊರಟು ತಲುಪಿ ಬಾಗಿಲು ತೆಗೆದರೆ ನಾಲ್ಕು ಹೆಜ್ಜೆಗೇ ಮನೆ ಮುಗಿದಿತ್ತು..! ಅಡಿಗೆ ಮನೆಯಿಂದಲೇ ಶುರು, ಕೊಠಡಿಗೇ ಕೊನೆ...!

ಒಳಗೆ ಬಂದು ಅಡಿಗೆ ಮಾಡಲು ಏನೇನಿದೆ ಎಂಬುದನ್ನು ನೋಡಿ ' ನಾಲ್ಕು ಸಾಮಾನಿನಲ್ಲಿ 3 ತಿಂಗಳುಗಳ ಕಾಲ ಅಡಿಗೆ ಹೇಗೆ ಮಾಡಿಕೊಳ್ಳುವುದು' ಎಂಬೆಲ್ಲ ಯೋಚನೆ ಬಂದು ಮಂಚದ ಮೇಲೆ ಬಂದು ಮಲಗಿದವನೇ 2 ಗಂಟೆಗಳ ಕಾಲ ಸುಮ್ಮನೆ 'ಒಂಟಿ ಭಾವದಲ್ಲಿ' ನರಳಲು ಶುರು ಮಾಡಿದೆ. ನನ್ನ ಸಹೋದ್ಯೋಗಿಯೊಬ್ಬ ಇದ್ದ ಕಾರಣಕ್ಕೆ 2 ದಿನಗಳ ವರೆಗೆ ಕೊಂಚ ಸಹಜವಾಗಿದ್ದ ನಾನು ಅವನು ವಾಪಸ್ ಭಾರತಕ್ಕೆ ಹೊರಟು ನಿಂತದನ್ನು ನೋಡಿ, ಅವನು ಪಡುತ್ತಿದ್ದ ಖುಷಿಯನ್ನು ನೋಡಿ, ನಾನು ಮತ್ತೂ ಭಾವನಾ ಜೀವಿಯಾದೆ. ಅಂದಿನಿಂದಲೇ ಹೊರಡುವ ದಿನವನ್ನು ನೋಡಲು ಶುರುವಿಟ್ಟುಕೊಂಡೆ..!

ಸುಮಾರು ಒಂದು ವಾರಗಳ ಕಾಲದ ತನಕ ಹೊರಡುವುದರ ಬಗ್ಗೆ ಯೋಚಿಸಿ, ಯೋಚಿಸಿ, ಲ್ಯಾಪ್ ಟಾಪ್ ಹಾಗು ಅಂತರ್ಜಾಲದ ಕಾರಣದಿಂದ ಅಮ್ಮ, ಅಪ್ಪ, ಅಕ್ಕ, ಸ್ನೇಹಿತರು ಎಂಬೆಲ್ಲರ ಜೊತೆ ಮಾತಾಡಿ ಸಮಾಧಾನವಾಗಲು ನನಗೆ ಕೊಂಚ ಸಮಯವೇ ಹಿಡಿದಿತ್ತು.

ಆದರೆ ಒಂದು ಸಮಾಧಾನ ವಿಷಯವೆಂದರೆ 'ಅನುಭವ'. ಒಬ್ಬನೇ ಬಂದಾಗ, ಇದ್ದಾಗ ಹಾಗು ಬಂಧುಗಳ ಜೊತೆಯಲ್ಲಿದ್ದರೆ ಹೇಗೆ ಎಂಬನುಭವ ಸಿಕ್ಕಿದ್ದು.

Mar 11, 2012

ಸಿಂಗಪೂರ್ ಏರ್ಲೈನ್ಸ್ ನಲ್ಲಿ ಪ್ರಯಾಣ : ಒಂದು ಅನುಭವ

ನನ್ನ ಸಹೋದ್ಯೋಗಿಯ ಸಲಹೆ ಹಾಗು ಅವನ ಅನುಭವಗಳನ್ನು ಕೇಳಿ ನಾನು ಸಹ ಏಜೆಂಟ್ ಬಳಿ ಕಾದಾಡಿ ಸಿಂಗಪೂರ್ ಏರ್ಲೈನ್ಸ್ ನಲ್ಲಿ ಪ್ರಯಾಣಿಸುವ ಅವಕಾಶವನ್ನು ಪಡೆದದ್ದಕ್ಕೆ ಪ್ರಯಾಣದ ಮುಂಚೆಯೇ ಅದರ 'ವಿಶೇಷತೆ'ಯನ್ನು 'ಅನುಭವಿಸಿ'ಯಾಯಿತು. ಈಗ ಥೈ ಹಾಗು ಸಿಂಗಪೂರ್ ಏರ್ಲೈನ್ಸ್, ಎರಡರ ಅನುಭವವೂ ಇರುವ ಕಾರಣಕ್ಕೆ ಅವುಗಳ ಬಗ್ಗೆ ಬರೆಯುವ ಅಂತಷ್ಟೇ. ಕೇವಲ ಒಂದು ನೆನಪಿಗಾಗಿ, ಒಂದು ದಾಖಲೆಗಾಗಿ.

ನಾನು ಟಿಕೆಟ್ಟನ್ನು ಬುಕ್ ಮಾಡುವಾಗ ನನ್ನ ಮ್ಯಾನೇಜರ್ ಹೇಳಿದ್ರು, ಏರ್ಲೈನ್ಸ್ ನಲ್ಲಿ ಇರೋದು ಎರಡೇ ವಿಧ. ಬೋಯಿಂಗ್ ಅಥವಾ ಏರ್ ಬಸ್. ಎಲ್ಲ ಏರ್ ಬಸ್ ವಿಮಾನಗಳೂ ಹಾಗು ಎಲ್ಲ ಬೋಯಿಂಗ್ ವಿಮಾನಗಳೂ ಒಂದೇ. ಆಸನಗಳಲ್ಲಿ ಯಾವ ವ್ಯತ್ಯಾಸವೂ ಇರುವುದಿಲ್ಲ. ಆದರೆ ಚಾಕರಿಯಲ್ಲಿ, ಅಂದರೆ ಸರ್ವಿಸ್ ನಲ್ಲಿ ಹೆಚ್ಚು ಕಡಿಮೆ ಇರಬಹುದು ಎಂದು. ನಾನಾಗ ನಂಬಲಿಲ್ಲ. ವಿಮಾನದ ಒಳಗೆ ಹೋಗಿ ಕೂತ ನಂತರವೇ ಗೊತ್ತಾಗಿದ್ದು. ಎಲ್ಲ ಒಂದೇ ಎಂದು. ಕಾಲಿಡುವ ಜಾಗ, ಸೀಟಿನ ಅಗಲಗಳು ಎಲ್ಲ ಒಂದೇ. ಏನು ವ್ಯತ್ಯಾಸವಿಲ್ಲ ಎಂದು.

ಆದರೆ ನಾ ಕಂಡ ಬಹು ಮುಖ್ಯ ವ್ಯತ್ಯಾಸವೆಂದರೆ ತಾವು ನೀಡುವ ತಿನಿಸುಗಳ ಬಗೆಗಿನ ಪರಿವಿಡಿ ಪಟ್ಟಿ, ಅಂದರೆ ಮೆನು ಕಾರ್ಡ್, ಅದರಲ್ಲಿದ್ದ ಸ್ಥಾನೀಯ ಭಾಷೆ ಹಾಗು ಲಭ್ಯವಿದ್ದ ಆ ದೇಶದ ಕೆಲವು ಭಾಷೆಗಳ ಚಲನಚಿತ್ರಗಳು. ನಾನು ಮೆನು ಕಾರ್ಡ್ ನಲ್ಲಿ ಕನ್ನಡವನ್ನು ನೋಡಿದ ಕೂಡಲೇ ಬಹಳ ಖುಷಿಯಾಗಿ ನನ್ನ ಸಹೋದ್ಯೋಗಿಯನ್ನು ನೆನೆದು ಅವನಿಗೊಂದು ಮನದಲ್ಲೇ ಸಲಾಂ ಸಲ್ಲಿಸಿದೆ. ಯಾಕೆಂದರೆ ನಾನು ಸ್ವಲ್ಪ ಜಾಸ್ತಿ ಕನ್ನಡವನ್ನು ಇಷ್ಟಪಡುವ ವ್ಯಕ್ತಿ. ವಿಮಾನದಲ್ಲಿ ಹಿಂದಿ ಹಾಗು ತಮಿಳು ಭಾಷೆಯ ಒಂದೆರಡು ಚಲನಚಿತ್ರಗಳು ಲಭ್ಯವಿದ್ದ ಕಾರಣಕ್ಕೆ ನಾನು ನಿದ್ದೆಯನ್ನೇ ಮಾಡಲಾಗಲಿಲ್ಲ.

ನಾನು ಸಿಂಗಾಪುರ್ ನಿಂದ ಜಪಾನ್ ಗೆ ಪ್ರಯಾಣಿಸಿದ ವಿಮಾನದ ವಿಶೇಷತೆಯೆಂದರೆ, ಜಗತ್ತಿನ ಅತ್ಯಂತ ದೊಡ್ಡ , ಪ್ರಯಾಣಿಕರ ವಿಮಾನ. ಆ ವಿಮಾನದಲ್ಲೂ ಸಹ ಹಿಂದಿ ಮತ್ತು ತಮಿಳು ಭಾಷೆಯ ಚಲನಚಿತ್ರಗಳು ಲಭ್ಯವಿತ್ತು. ನಾನು ಸಿಂಗಪೂರ್ ಏರ್ಲೈನ್ಸ್ ನಲ್ಲಿ ಪ್ರಯಾಣಿಸಬೇಕು ಎಂಬುದಕ್ಕೆ ಈ ದೊಡ್ಡದಾದ ವಿಮಾನದಲ್ಲಿ ಪ್ರಯಾಣಿಸಬೇಕು ಎಂಬ ಕಾರಣವೂ ಒಂದಿತ್ತು. ಅವಕಾಶವೇನೋ ಸಿಕ್ಕಿತು. ಆದರೆ ನನಗೆ ಮೇಲಿನ ಚಾವಣಿಯಲ್ಲಿನ (Upper Decker) ಆಸನ ಮಾತ್ರ ಸಿಗಲಿಲ್ಲ.

ಇನ್ನುಳಿದಂತೆ ಎಲ್ಲ ಚಾಕರಿಯಲ್ಲೂ ಥೈ ಹಾಗು ಸಿಂಗಾಪುರ್ ಏರ್ಲೈನ್ಸ್ ಒಂದೇ ಎಂಬುದು ನನ್ನ ಅಭಿಪ್ರಾಯವಷ್ಟೇ.

ಸಾಕಷ್ಟು ವಿಶೇಷ ಅನುಭವಗಳೊಂದಿಗೆ ನನ್ನ ಪ್ರಯಾಣ ಮುಗಿದಿತ್ತು. ಜಪಾನ್ ಗೆ ಎರಡನೇ ಬಾರಿಗೆ ನಾನು ಬಂದಿದ್ದರೂ, ಈ ಸಲ ಒಬ್ಬಂಟಿಯಾಗಿ ಇರಬೇಕಾಗಿತ್ತು. ಅದರ ರಸವತ್ತಾದ ಅನುಭವ ಮುಂದಿನವಾರ.

Mar 7, 2012

ಎರಡನೇ ಬಾರಿಗೆ ಜಪಾನ್ ಗೆ ಪ್ರಯಾಣ - ವಿಶೇಷ ಅನುಭವ

ಅದೃಷ್ಟವಶಾತೋ ಅಥವಾ ಇನ್ನೊಂದು ರೀತಿಯೋ ಗೊತ್ತಿಲ್ಲ, ಇನ್ನೊಮ್ಮೆ ಬಾರಿಗೆ ಜಪಾನ್ ಗೆ ಹೋಗುವ ಅವಕಾಶ ಅರಸಿ ಬಂತು. ಮೊದಲ ಬಾರಿಯ ಒಳ್ಳೆಯ ಅನುಭವಗಳ ಕಾರಣಕ್ಕೆ ನಾನು 'ಹೂಂ' ಎಂದೇ ಬಿಟ್ಟೆ. ನನ್ನ ಪ್ರಯಾಣದ ಸಲುವಾಗಿ ಆಫೀಸಿನ ಕೆಲಸಗಳು ಶುರು ಆದವು. ಅಷ್ಟೇ ಬೇಗ ಮುಗಿದವೂ ಕೂಡ. ಹೊರಡುವ ದಿನವೂ ನಿಶ್ಚಯವಾಯಿತು. ಆ ಸಲುವಾಗಿ ಖರ್ಚುಗಳೂ ಶುರುವಾದವು. ಹೊಸ ಲಗ್ಗೇಜ್ ಸಾಮಾನುಗಳನ್ನೂ ಕೊಂಡಾಯಿತು. ಊರಿನಿಂದ ಆ ಪುಡಿ - ಈ ಪುಡಿ ಎಲ್ಲ ಬಂತು, ಎಂಟಿಆರ್ನ ವಸ್ತುಗಳು ಬಂದವು, ದಿನಸಿ ವಸ್ತುಗಳು ಬಂದವು, ಬಟ್ಟೆಗಳು ಒಗೆದು ಇಸ್ತ್ರಿಯಾದವು. ಎಲ್ಲವನ್ನು ಒಂದೆಡೆ ಸೇರಿಸಿಯಾಯಿತು.

ಮೊದಲ ಬಾರಿಗೆ ಹೋದಾಗ ಥೈ ಏರ್ವೇಸ್ ನಲ್ಲಿ ಹೋದ ಕಾರಣಕ್ಕೆ ಹಾಗು ನನ್ನ ಸಹೋದ್ಯೋಗಿಯೊಬ್ಬನ ಪ್ರೇರಣೆ ಹಾಗು ಅನುಭವಗಳನ್ನು ಕೇಳಿ ಸಾಕಷ್ಟು ಕುತೂಹಲದೊಂದಿಗೆ ಈ ಬಾರಿ ಸಿಂಗಪೂರ್ ಏರ್ಲೈನ್ಸ್ ನಲ್ಲೆ ಹೋಗಬೇಕೆಂದು, ಎಲ್ಲ ಸಲಹೆಗಳನ್ನು ತಿರಸ್ಕರಿಸಿ ಹಠ ಮಾಡಿ ಕಾದು ಕಾದು, ಸಿಂಗಪೂರ್ ಏರ್ಲೈನ್ಸ್ ನಲ್ಲಿ ಪ್ರಯಾಣಿಸುವ ಅವಕಾಶವನ್ನು ದಕ್ಕಿಸಿಕೊಂಡಿದ್ದಾಯ್ತು.

ಹೊರಡುವ ದಿನ, ೨೫ರ ಫೆಬ್ರವರಿ ೨೦೧೨ ಬಂದೇ ಬಿಟ್ಟಿತು. ಎಲ್ಲ ತಯಾರಿಗಳೊಂದಿಗೆ, ಎಲ್ಲ ವಸ್ತುಗಳೊಂದಿಗೆ, ಸಾಮಾನುಗಳೂ ಹೊರಟು ನಿಂತವು. ಈಸಿ ಕ್ಯಾಬ್ ಅನ್ನೂ ಬರಲು ಹೇಳಿಯಾಯಿತು. ಎಲ್ಲ ಸಾಮಾನುಗಳನ್ನು ತುಂಬಿಸಿ ತೂಕ ನೋಡಿದರೆ ಜಾಸ್ತಿಯಾಗಿದೆಯಾ ಎಂಬ ಭಯವಾಯಿತು. ತೂಕ ಮಾಡಿದಾಗ 25 ಕೆಜಿ ಇರಬೇಕಾದ ಸಾಮಾನು 29 ತೋರಿಸುತ್ತಿತ್ತು. 10 ಕೆಜಿ ಇರಬೇಕಾದ ಸಾಮಾನು 9 ತೋರಿಸುತ್ತಿತ್ತು. ಸ್ವಲ್ಪ ಅನುಮಾನ ಬಂದು ನನ್ನ ತೂಕ ನೋಡಿದರೆ 84 ಇರಬೇಕಾದ ಸ್ಥಳದಲ್ಲಿ 78 ಇತ್ತು. ಆಗ ನನಗೆ ನಾನೇ ಸಮಾಧಾನ ಮಾಡಿಕೊಂಡೆ, ಸರಿಯಾಗಿಯೇ ಇರಬಹುದು ಎಂದು, ನನ್ನ ತೂಕವಲ್ಲ, ಸಾಮಾನಿನ ತೂಕ. ಏನಾದರು ಜಾಸ್ತಿ ಇದ್ದರೆ ವಿನಂತಿಸಿಕೊಂಡರೆ ಆಯಿತು ಎಂದುಕೊಂಡೆ. ಯಾಕೆಂದರೆ ಕಳೆದ ಬಾರಿಯ ಅನುಭವದಲ್ಲಿ ಅಷ್ಟೇನೂ ಬಿಗಿ ಇರಲಿಲ್ಲ. ಒಂದೆರಡು ಕೆಜಿಗೆ ಪರವಾಗಿಲ್ಲ ಎಂದು ನಾನೇ ಸಮಾಧಾನ ಮಾಡಿಕೊಂಡೆ.

ಹೊರಡುವ ಸಮಯವೂ ಬಂದಿತು. ಸಾಯಂಕಾಲ ೭ ರ ಸುಮಾರಿಗೆ ಎಲ್ಲರಿಗು ವಂದಿಸಿ, ಎಲ್ಲರ ಶುಭಕಾಮನೆಗಳನ್ನು ಸ್ವೀಕರಿಸಿ ಮನೆಯಿಂದ ಹೊರಟೆ. ಸಾಕಷ್ಟು ಉತ್ಸಾಹಗಳು, ಕುತೂಹಲಗಳೊಂದಿಗೆ ವಿಮಾನ ನಿಲ್ದಾಣವನ್ನು ತಲುಪಾಯಿತು. ನಾನು ಬಂದ ಕಾರಿನ ಚಾಲಕನಿಗೆ ಮೊದಲೇ ಹೇಳಿದ್ದೆ, ತೂಕ ಏರುಪೇರಾದರೆ ನಾನು ಫೋನ್ ಮಾಡುತ್ತೇನೆ ಎಂದು. ಸಾಲಿಗೆ ಹೋಗಿ ಸಾಮಾನನ್ನು ಇಟ್ಟರೆ ೨೫ ತೂಗಬೇಕಾದ ಸಾಮಾನು ೩೦ ತೋರಿಸುತ್ತಿತ್ತು. ಅದನ್ನು ನೋಡಿದವ ನನ್ನ ಚೆಕ್ಕಿನ್ ಸಾಮಾನನ್ನು ತೂಕ ಮಾಡಲು ಹೇಳಿದ. ಅದನ್ನು ನೋಡಿದರೆ ೧೦ ಇರಬೇಕಾದ ಸ್ಥಳದಲ್ಲಿ ೧೩ ಇತ್ತು...! ಎಷ್ಟು ಕೇಳಿಕೊಂಡರೂ ಸಾಧ್ಯವಿಲ್ಲ ಎಂದ. ೧೦ ಮತ್ತು ೨೫ ಮಾಡಿಕೊಂಡು ಬನ್ನಿ ಎಂದ. ಅವನು ಕನ್ನಡದವನಾಗಿದ್ದ.

ಶುರುವಾಯಿತು ಮೈಯೆಲ್ಲ ಬೆವರಲು. ಸ್ವಲ್ಪ ಈಚೆಗೆ ಬಂದು ಸಾಮಾನುಗಳನ್ನು ತೆಗೆಯಲು ಶುರು ಮಾಡಿದೆ. ನಾನು ಬಂದಿದ್ದ ಕಾರಿನವನಿಗೆ ಫೋನಾಯಿಸಿದೆ ಬರಲು. ಸ್ವಲ್ಪ ಸಾಮಾನನ್ನು ತೆಗೆದು ಕೊಟ್ಟು ಕಳಿಸಿ ಮತ್ತೆ ಹೋದೆ. ಈಗ ಇನ್ನೊಬ್ಬನ ಬಳಿಗೆ ಹೋದೆ. ಅವನು 25 ಮತ್ತು 10 ಇದ್ದದ್ದನ್ನು 25 ಮತ್ತು 7 ಕ್ಕೆ ಇಳಿಸಲು ಹೇಳಿ ಮುಲಾಜಿಲ್ಲದೆ ಕಳಿಸಿದ. ನಾನು ಮತ್ತೊಮ್ಮೆ ಸಾಮಾನನ್ನು ತೆಗೆಯಲು ಶುರು ಮಾಡಿದೆ. ಆಮೇಲೆ ಅಲ್ಲೇ ಹತ್ತಿರದಲ್ಲಿದ್ದ ತೂಕ ನೋಡುವ ಯಂತ್ರದಲ್ಲಿ ತೂಕ ನೋಡಿದರೆ ಇನ್ನು ಕೆಜಿ ಇಳಿಸಬೇಕಾಗಿತ್ತು. ಸಮಯ ಬೇರೆ ಓಡುತಲಿತ್ತು. ಕಡೆಗೆ ಸಾಕಷ್ಟು ಬೇಸರಿಸಿಕೊಂಡು ಕೆಜಿ ಅಕ್ಕಿ, ಜೀನ್ಸ್ ಪ್ಯಾಂಟು, ಶರ್ಟ್, ಕೆಜಿ ತೊಗರಿ ಬೇಳೆ, ಚಕ್ಕುಲಿ, ಕೋಡ್ಬಳೆ, ಕುಟ್ಟವಲಕ್ಕಿ , ಅರ್ಧ ಕೆಜಿ ಸಾರಿನ ಪುಡಿ ಎಲ್ಲ ಕೊಟ್ಟು ಕಳಿಸಿ ತೂಕ ಮಾಡಿದರೆ ಇನ್ನು ಒಂದು ಕೆಜಿ ಜಾಸ್ತಿ ಇತ್ತು. ನೋಡಿಯೇ ಬಿಡುವ ಎಂದು ಹೋದರೆ ಆಗ ಕೊನೆಗೂ ಬಿಟ್ಟ. ಆಗ ಅವನ ಮೇಲೆ, ನನ್ನ ಲಗ್ಗೇಜ್ ಗಳ ಮೇಲೆ ಬಂದ ಕೋಪ ಅಷ್ಟಿಷ್ಟಲ್ಲ. ಅಮ್ಮ, ಅಕ್ಕ ಎಲ್ಲ ಸೇರಿ ಕಷ್ಟ ಪಟ್ಟು ಮಾಡಿದ ತಿನಿಸುಗಳು, ಪುಡಿಗಳು ಎಲ್ಲ ಕೊಟ್ಟಾಗ, ಅದೂ ಜಪಾನ್ ಎಂಬ ಸಸ್ಯಾಹಾರವೇ ಗೊತ್ತಿಲ್ಲದ ಮಾಂಸಾಹಾರಿ ದೇಶಕ್ಕೆ ಬರುವಾಗ, ಹೇಗನ್ನಿಸಬೇಡ, ಎಷ್ಟು ಬೇಜಾರಾಗಬೇಡ...!?

ಬಯಸಿ ಬಯಸಿ ಸಿಂಗಪೂರ್ ಏರ್ಲೈನ್ಸ್ ಪಡೆದಿದ್ದಕ್ಕೆ ನನಗೆ ತಕ್ಕ ಶಾಸ್ತಿಯಾಗಿತ್ತು.