May 21, 2019

ಸಿರಿಗನ್ನಡಂ ಗೆಲ್ಗೆ

ಬಹಳ ದಿನಗಳ ನಂತರ ಮತ್ತೆ ಬರೆಯಬೇಕೆನ್ನಿಸಿತು. ಅಂತಹ ಪ್ರಸಂಗವೂ ನಡೆಯಿತು.

ಮೊನ್ನೆ ಆಫೀಸಿನಲ್ಲಿ ನನ್ನ ಆತ್ಮೀಯ ಸಹೋದ್ಯೋಗಿಯೊಬ್ಬರ ಒಂದು ಪ್ರೆಸೆಂಟೇಷನ್ ಇತ್ತು . ಅದರ ಸಲುವಾಗಿ ಅವರನ್ನು ಮಾತನಾಡಿಸಲು ಹೋದಾಗ 'ನಿಮ್ಮ ಜ್ಞಾನ ಪ್ರಸಾರದ ಕಾರ್ಯಕ್ರಮಕ್ಕೆ ಬರಲು ಖುಷಿ ಆಗ್ತಿದೆ, ಈ ಅವಕಾಶ ಸಿಕ್ಕಿದ್ದಕ್ಕೆ ನನ್ನ ಅದೃಷ್ಟ ಎನ್ನುವುದೇ ನನ್ನ ನಂಬಿಕೆ' ಎನ್ನುವ ಅರ್ಥ ಬರುವ ರೀತಿಯಲ್ಲಿ, ಪದಗಳು ಬೇರೆಯದೇ ಬಳಸಿರಬಹುದು, ಮಾತನಾಡಿದಾಗ ಅದನ್ನೇ ಕೇಳಿಸಿಕೊಂಡ ನನ್ನ ಇನ್ನೊಬ್ಬ ಸಹೋದ್ಯೋಗಿಯೊಬ್ಬರು 'ನಿಮ್ಮ ಮನೆಯಲ್ಲಿ ಪೂಜೆ ಮಾಡ್ತಾರಾ?' ಎಂದು ಕೇಳಿದ್ದಕ್ಕೆ, ನಮ್ಮೂರು ಮತ್ತೂರು ಎಂದೂ, ಸಂಸ್ಕೃತ ಗ್ರಾಮ ಎಂದು ಕರೆಯುತ್ತಾರೆಂದೂ ಮತ್ತೊಬ್ಬರು, ಇದ್ದ ಪರಿಚಯಕ್ಕೆ ಹೂರಣಿಸಿದರು.  ಸ್ವಚ್ಛ ಕನ್ನಡ ಪದಗಳ ಬಳಕೆಗೂ, ಪೂಜೆಗೂ ಏನು ಸಂಬಂಧ ಎಂದು ಗೊತ್ತಾಗದಿದ್ದುದು ನನಗೆ ಈ ಪ್ರಸಂಗವನ್ನು ದಾಖಲಿಸುವಂತಾಯಿತು.  ಹಾಗೆಯೇ ಕನ್ನಡದ  ಬಳಕೆಯ ಪರಿಸ್ಥಿತಿ ಬಗ್ಗೆ ಇನ್ನೊಂದು ಪ್ರಸಂಗ ನೆನಪಾಯಿತು.

ಒಮ್ಮೆ ನನ್ನೆಲ್ಲ ಗೆಳೆಯರು ಒಂದೆಡೆ ಕೂತು ಹರಟುತ್ತಿದ್ದಾಗ ಸುಮಾರು ೪-೫ ವರ್ಷದ ಬಾಲಕ ಅಲ್ಲಿಗೆ ಬಂದು ಸುಮ್ಮನೆ ಕುಳಿತುಕೊಂಡ ನಮ್ಮ ಜೊತೆ. ಅದೇ ಸಮಯಕ್ಕೆ ಒಬ್ಬರು ಹಿರಿಯರು ಬಂದು ನಮ್ಮನ್ನು ಸೇರಿಕೊಂಡರು . ಮಾತನಾಡುವ ಸಮಯದಲ್ಲಿ ಆ ಹಿರಿಯರು ' ಈಗ ಎಷ್ಟು ಗಂಟೆ ಯಾಗಿದೆ ಎಂದು ಕೇಳಲು ಕನ್ನಡ ದಲ್ಲಿ ಏನೆಂದು ಕರೆಯುತ್ತಾರೆ ' ಎಂದು ಕೇಳಲು ಆ ಬಾಲಕ ಯಾವುದೇ ಅನುಮಾನವಿಲ್ಲದೆ , ಕ್ಷಣಮಾತ್ರವೂ ಯೋಚಿಸದೆ 'ಟೈಮ್ ಎಷ್ಟು ' ಎಂದು ಉತ್ತರಿಸಿದ ..!

ಕೇಳಿಸಿಕೊಂಡ ನಮಗೂ ಅರ್ಥವಾಗಲು ಕೆಲ ನಿಮಿಷಗಳೇ ಕಳೆಯಿತು . ಆ ನಂತರದ ನಗೆ ನಮ್ಮ ಪಾಲಾಯಿತು.

No comments:

Post a Comment