May 30, 2019

ಚಾರ್ ಧಾಮ್ ಪ್ರವಾಸಕಥನ - ಯಮುನೋತ್ರಿಯ ದರ್ಶನ

ಬೆಳಿಗ್ಗೆ ಸುಮಾರು 5.30 ಯ ಹೊತ್ತಿಗೆ ಬರ್ಕೊಟ್ ನಿಂದ ಹೊರಟು ಯಮುನೋತ್ರಿ ತಲುಪುವ ಹೊತ್ತಿಗೆ ಸುಮಾರು 8 ಗಂಟೆಯಾಗಿತ್ತು . ಬರ್ಕೊಟ್ ನಿಂದ ಸುಮಾರು 90 ಕಿಲೋಮೀಟರ್ ಗಳ ದೂರವಾದರೂ 3-4 ತಾಸುಗಳ ಪ್ರಯಾಣ. ಬರೇ ತಿರುವುಗಳು, ಜಾಮ್ ಗಳು, ಕಿರಿದಾದ ರಸ್ತೆಗಳು... ಒಂದು  ಕಡೆ ಪ್ರಪಾತ, ಇನ್ನೊಂದು ಕಡೆ ಕೊರೆದ ಬಂಡೆಗಳು, ಬೆಟ್ಟ-ಗುಡ್ಡಗಳು...  ಆ ರಸ್ತೆಗಳಲ್ಲಿ ಪ್ರಯಾಣಿಸುವುದೇ ಒಂದು ಸಾಹಸ...

ಯಮುನೋತ್ರಿಯ ಬುಡವನ್ನು ತಲುಪಿದ ತಕ್ಷಣ ಜನ ಮುತ್ತಿಕೊಂಡರು. ಯಾಕೆ ಅಂತ ಗೊತ್ತಾಗಲು ಕೆಲ ನಿಮಿಷಗಳೇ ಕಳೆಯಿತು. ಯಮುನೋತ್ರಿ ಬೆಟ್ಟದ ಬುಡದಿಂದ ದೇವಸ್ಥಾನ ತಲುಪಲು 6 ಕಿಮೀ ಗಳ ಬೆಟ್ಟವನ್ನು ಹತ್ತಬೇಕು. ಕೆಲ ಜಾಗಗಳಲ್ಲಿ ಮೆಟ್ಟಿಲುಗಳನ್ನು ಕಟ್ಟಿದ್ದಾರೆ. ಆದರೂ 30 ರಿಂದ 50 ಡಿಗ್ರಿ ಕೋನದ ವರೆಗಿನ ಇಳಿಜಾರುಗಳೂ ಸೇರಿವೆ. ಕೈ ಕಾಲುಗಳು ಗಟ್ಟಿಯಿರುವವರು ಚಾರಣಕ್ಕೆ ಶುರುಮಾಡಬಹುದು. ಆಗದವರಿಗೆ 3 ಆಯ್ಕೆಗಳು, ಕುದುರೆ, ಪಿಟ್ಟು (ಒಬ್ಬರೇ ಹೊರುವ ಬುಟ್ಟಿ) ಹಾಗು ಡೋಲಿ (4 ಜನ ಒಟ್ಟಿಗೆ ಹೊರುವ) ವ್ಯವಸ್ಥೆ.

ಎಷ್ಟು ಜನ ಕುದುರೆಯನ್ನು ಆಯ್ಕೆ ಮಾಡಿಕೊಳ್ಳಲು ನಮ್ಮನ್ನು ಮುತ್ತಿಕೊಂಡರು ಎಂದರೆ ನಮಗೆ ಬೇರೆ ಆಯ್ಕೆಗಳ ಬಗ್ಗೆ ಯೋಚನೆ ಮಾಡಲು ಆಗಲೇ ಇಲ್ಲ. ಒಂದು ಕುದುರೆಗೆ 2000 ರುಪಾಯಿಗಳ ಡಿಮ್ಯಾಂಡ್ ಇತ್ತು ಆದರೆ ಚೌಕಾಸಿ ಮಾಡಲು ಭಾಷೆಯ ಸಮಸ್ಯೆಯೂ ಇತ್ತು. ಮೂರು ಜನ  ಇದ್ದಿದ್ದರಿಂದ ಕೊನೆಗೂ 1500 ರೂಪಾಯಿಗಳಿಗೆ ನಮ್ಮ ಡ್ರೈವರ್ ಮಾತಾಡಿದ. ಒಟ್ಟಾರೆ 4500 ರೂಪಾಯಿಗಳು ! ಅಷ್ಟರಲ್ಲೇ ಅಪ್ಪ ಕುದುರೆಯನ್ನು ಹತ್ತಿ ಹೊರಟೇ ಬಿಟ್ಟರು. ಅಮ್ಮನಿಗೆ ಕುದುರೆ ಏರಲು ಸ್ವಲ್ಪ ಕಷ್ಟವಾದರೂ ಏರಿ ಕೂತರು. ನಾನು ಸಲೀಸಾಗಿ ಹತ್ತಿ ಕುಳಿತೆ. ಪ್ರಯಾಣ ಹೊರಟಿತು.

ನಾವು ಹೊರಡುವಾಗ ವಾತಾವರಣವೂ ಚೆನ್ನಾಗಿತ್ತು. ನಿಧಾನಕ್ಕೆ ಮಳೆಯೂ ಶುರುವಾಯಿತು, ಉಷ್ಣಾಂಶವೂ ಕಡಿಮೆಯಾಗತೊಡಗಿತು.  ಇನ್ನೂ 2 ಕಿಮೀ  ಕೂಡ ಮುಗಿದಿರಲಿಲ್ಲ, ಕುದುರೆಯ ಪ್ರಯಾಣವೂ ಕಷ್ಟವಾಗತೊಡಗಿತು. ಇನ್ನು 4 ಕಿಮೀ ಹೇಗಪ್ಪಾ ಎಂದೆನಿಸತೊಡಗಿತು. ಪದೇ ಪದೇ ರೆಸ್ಟ್ ಬೇಕೆನಿಸತೊಡಗಿತು. ಕಿರಿದಾದ ಜಾಗಗಳಲ್ಲಿ ಕುದುರೆಗಳು ಹೋಗಬೇಕಾಗಿದ್ದರಿಂದ ಹಾಗು ಆ ಕಡೆಯಿಂದ ಬರುವ ಕುದುರೆಗಳಿಗೆ, ಪಿಟ್ಟುಗಳಿಗೆ, ಡೋಲಿಗಳಿಗೆಲ್ಲ ಜಾಗ ಬೇಕಿದ್ದರಿಂದ ಅಲ್ಲಲ್ಲೇ ಜಾಮ್ ಆಗುತ್ತಿತ್ತು. ಕೆಲವೊಮ್ಮೆ ಸುಮಾರು ಅರ್ಧ ಗಂಟೆಗಳ ಕಾಲ ನಿಲ್ಲಬೇಕಿತ್ತು. ಈ ಎಲ್ಲ  ಕಾರಣಗಳಿಂದ 2 ಗಂಟೆಗಳ ಪ್ರಯಾಣ 4 ಗಂಟೆಯಾಯಿತು. 12.30 ಯಾಗಿತ್ತು ತಲುಪುವ ಹೊತ್ತಿಗೆ.

ಕುದುರೆಯ ಪ್ರಯಾಣ ಅಪ್ಪ ಅಮ್ಮ ಇಬ್ಬರಿಗೂ ಸಾಕಷ್ಟು ತೊಂದರೆ, ನೋವುಗಳನ್ನು ಕೊಟ್ಟಿತ್ತು. ಸಣ್ಣ ಪುಟ್ಟ ಪೆಟ್ಟುಗಳನ್ನೂ ಕೊಟ್ಟಿತ್ತು. 6 ಕಿಮೀಗಳ ದೂರ 'ಸಿಕ್ಕಾಪಟ್ಟೆ' ದೂರ ಎಂದೆನಿಸಿತ್ತು. ಯಾವಾಗ ಕುದುರೆಯಿಂದ ಕೆಳಗಿಳಿಯುತ್ತೇವೋ ಎಂದೆನಿಸಿತ್ತು.  ಕೈಕಾಲುಗಳು ಮರಗಟ್ಟಿದಂತಾಗಿತ್ತು ಚಳಿಗೆ. ವಾಪಾಸ್ ಬರುವಾಗ ಅಮ್ಮನಿಗೆ ಕುದುರೆ ಸಾಧ್ಯವೇ ಇಲ್ಲ ಎಂದು ನಿರ್ಧರಿಸಲಾಯಿತು.

ಇನ್ನೊಂದು ಮಜಾ ವಿಷಯವೆಂದರೆ ಬೆಟ್ಟ ಹತ್ತುವಾಗ ಮಧ್ಯೆ ಚಹಾ ಕುಡಿಯಲು ನಿಲ್ಲಿಸಿದಾಗ ನನ್ನ ಕುದುರೆ ಕಳೆದುಹೋಗಿತ್ತು. ಸಾವಿರಾರು  ಕುದುರೆಗಳ ಪೈಕಿ ಸುಮಾರು 20 ನಿಮಿಷಗಳ ಹುಡುಕಿದರೂ ಸಿಕ್ಕಿರಲಿಲ್ಲ. ಇನ್ನು ತಡ ಮಾಡುವುದು ಬೇಡ ಎಂದು  ಹಾಗೆ ನಡೆದುಕೊಂಡೇ ಹೊರಟೆ, ಅಪ್ಪ-ಅಮ್ಮನ ಕುದುರೆಯ ಜೊತೆ. ಸುಮಾರು ಅರ್ಧ ಗಂಟೆಗಳ ಕಾಲ ಹತ್ತಿದಮೇಲೆ ನನ್ನ ಕುದುರೆ ಸಿಕ್ಕಿತು. ಅಷ್ಟರಲ್ಲೇ ಈ ಬೃಹತ್ ದೇಹ ಇಟ್ಟುಕೊಂಡು 'ಹತ್ತುವುದು ಅಷ್ಟು ಸುಲಭವಲ್ಲ' ಎಂಬ ಅರಿವಾಗಿತ್ತು! 


ದೇವಸ್ಥಾನದಿಂದ ಸಾಕಷ್ಟು ದೂರದಲ್ಲೇ ಕುದುರೆಯನ್ನು ನಿಲ್ಲಿಸಲಾಯಿತು. ಅಲ್ಲಿಂದ ನಡೆದುಕೊಂಡು ಹೋಗಬೇಕು. ಆ ದಾರಿಯೇ ಸುಮಾರು 1 ಕಿಮೀ ಅಷ್ಟು ದೂರವಿತ್ತು. ಅದನ್ನು ನೋಡಿ ಮೊದಲೇ ಕಾಲಿನ ನೋವಿನ ಸಮಸ್ಯೆ ಇದ್ದ ನಮ್ಮ ತಂದೆಗೆ ಕೋಪವೇ ಬಂದಿತು. ಸಾಕಷ್ಟು ನೋವನ್ನು ಅನುಭವಿಸಿ ಕುದುರೆ ಮೇಲೆ ಬಂದು ಇನ್ನೂ ನಡೆಯಬೇಕಾ ಎಂದು ಆ ಕುದುರೆಯವನನ್ನು ಕುರಿತು ಇನ್ನು ಸ್ವಲ್ಪ ದೂರ ಬಂದು ಬಿಡಬಾರದಿತ್ತಾ ಎಂದು ಶಾಪ ಹಾಕುವಂತಾಗಿತ್ತು.

ಸ್ವಲ್ಪ ದೂರ ನಡೆದು ಬಂದು ನೋಡಿದರೆ ದೇವಸ್ಥಾನಕ್ಕೆ ಹೋಗಲು ಒಂದು ದಾರಿ, ಬರಲು ಒಂದು ದಾರಿ ವ್ಯವಸ್ಥೆ ಮಾಡಲಾಗಿತ್ತು. ಬರುವ ದಾರಿ ಹತ್ತಿರವಿತ್ತು. ಆದರೆ ಪೊಲೀಸ್ ನವರು ಬಿಡುತ್ತಿರಲಿಲ್ಲ. ನಂತರ ಒಬ್ಬ ಪೊಲೀಸ್ ಅಧಿಕಾರಿಯನ್ನು ಭೇಟಿಯಾಗಿ ಅಪ್ಪನ ಕಾಲು ನೋವು, ಮಂಡಿ ಆಪರೇಷನ್ ಮಾಡಿಸುವ ಯೋಜನೆ ಬಗ್ಗೆ ತಿಳಿಸಿ ಹತ್ತಿರದ ದಾರಿಯಲ್ಲಿ ಬಿಡಲು ಅನುಮತಿ ಪಡೆದೆ. 

ಕೊರೆಯುವ ಚಳಿ, ಬೇಸರಿಸುವ ಮಳೆಗಾಲ ಮಧ್ಯೆಯೇ, ಕೊನೆಗೂ ಗಂಗೆ-ಯಮುನೆ-ಸರಸ್ವತಿಯರ ದರ್ಶನ ಪಡೆದು,  ಬಿಸಿನೀರಿನ (ವಿಷ್ಣು, ಸೂರ್ಯ) ಕುಂಡಗಳ ನೀರನ್ನು ಸ್ಪರ್ಶಿಸಿ, ತೀರ್ಥ ಸ್ವೀಕರಿಸಿ, ಮನಮೋಹಕವಾಗಿ ಹರಿದುಬರುತ್ತಿದ್ದ ಯಮುನೆಯ ಸ್ಪರ್ಶಕ್ಕೋಸ್ಕರ ಝರಿಗಿಳಿದೆವು ನಾನು-ಅಮ್ಮ. ಅಪ್ಪನಿಗೆ ಒಂದು ತಂಬಿಗೆಯಲ್ಲಿ ಯಮುನೆಯನ್ನು ತುಂಬಿಕೊಂಡು ಬಂದೆ. ಅಕ್ಷರಶಃ ಫ್ರೀಜರ್ ನ ನೀರಿನಷ್ಟೇ ಕೊರೆಯುತ್ತಿದ್ದ ಯಮುನೆಯನ್ನು ಸ್ಪರ್ಶಿಸಿದೊಡನೆ ಏನೋ ಒಂದು ಧನ್ಯತಾ ಭಾವ ಆವರಿಸಿತ್ತು . ಬೆಟ್ಟ ಹತ್ತುವಾಗ ಆವರಿಸಿದ್ದ ನಕಾರ ಭಾವನೆಗಳೆಲ್ಲ ಮಾಯವಾಗಿದ್ದವು. 

ನಂತರ ಕುದುರೆಗಳೆಲ್ಲ ವಾಪಸ್ ಹೊರಡುವ ಸ್ಥಳಕ್ಕೆ ಕಷ್ಟಪಟ್ಟು ಅಪ್ಪ ನಡೆದರು. ನಮ್ಮ ಕುದುರೆಯ ವ್ಯಕ್ತಿಯನ್ನು ಕಾದು (ಅವನ ಹೆಸರು ನಾಗೇಂದರ್) ಅವನು ಬಂದ ನಂತರ ಅವನ ಸಹಾಯದಿಂದಲೇ ಅಮ್ಮನಿಗೆ ಪಿಟ್ಟುಗೆ ವ್ಯವಸ್ಥೆ ಮಾಡಿ 2000 ರುಪಾಯಿಗೆ ಮಾತಾಡಿ ವಾಪಸ್  ಹೊರಟೆವು. ನಮ್ಮ ದೇಹದ ತೂಕದ ಆಧಾರದ ಮೇಲೆ ಪಿಟ್ಟುವಿಗೆಎಷ್ಟು ಎಂದು ನಿರ್ಧಾರವಾಗುತ್ತದೆ. 50 ಕೆಜಿಯ ಒಳಗೆ, 50-70, 70-90, 90 ರ ಮೀರಿದ ಎಂದು. 90 ಕೆಜಿ ದಾಟಿದವರಿಗೆ 3000 ರೂಪಾಯಿ ಶುಲ್ಕ..!    ಅತ್ತ ಕಡೆಯಿಂದ ಡೋಲಿ ಸಿಗುವುದಿಲ್ಲ, ಕಾರಣ ಕೆಳಗಿನಿಂದ ಹೊತ್ತುಕೊಂಡು ಹೋದವರು  ಅಲ್ಲಿ ಅದೇ ವ್ಯಕ್ತಿಗೇ ಕಾಯುತ್ತಿರುತ್ತಾರೆ. 


ಪಿಟ್ಟು ಸಹ ಸ್ವಲ್ಪ ಕಷ್ಟ ಎಂದೆನಿಸಿದರೂ ಕುದುರೆಗಿಂತ ವಾಸಿ ಎಂಬ ನಂಬಿಕೆಯಿಂದ ಅಮ್ಮ ಪಿಟ್ಟು ಬುಟ್ಟಿಯನ್ನು ಹತ್ತಿ ಕೂತರು. ಒಂದೇ ಭಂಗಿಯಲ್ಲಿ ಕೂರುವುದು ಸ್ವಲ್ಪ ಕಷ್ಟ ಎಂದೆನಿಸಿದ್ದೂ ನಿಜ. ಒಮ್ಮೊಮ್ಮೆ ಕುದುರೆಯೇ ವಾಸಿಯಿತ್ತೋ ಎಂದೆನಿಸಿದ್ದೂ ನಿಜ. ದಾರಿಯು ಸಾಕಷ್ಟು ಕಿರಿದು ಹಾಗು ಜನದಟ್ಟಣೆ ಜಾಸ್ತಿಯಿರುವ ಕಾರಣ ಬರುವಾಗ ಸಾಕಷ್ಟು ಸಲ ಅಲ್ಲಲ್ಲೇ ಜಾಮ್ ಆಗುತ್ತಿತ್ತು. ಕಾಯಬೇಕಿತ್ತು.  ನಾನು ಮತ್ತು ಅಪ್ಪ ಕುದುರೆಯಲ್ಲಿ ಸಾಕಷ್ಟು ಬೇಗ ಎಂದರೆ 4. 30 ರ ಸುಮಾರಿಗೆ ತಲುಪಿದೆವು. ಆದರೆ ಅಮ್ಮ ಇನ್ನು ಬಂದಿರಲಿಲ್ಲ. ಸಾಕಷ್ಟು ದುಗುಡವಾಗುತ್ತಿತ್ತು. ಬಹುಶ 3-4 ಡಿಗ್ರಿ  ಉಷ್ಣಾಂಶ ಇದ್ದಿರಬಹುದು. ಕೈ-ಕಾಲುಗಳು ಅತಿಯಾದ ಚಳಿಯಿಂದ ಸ್ಪರ್ಶವನ್ನು ಕಳೆದುಕೊಂಡಂತಿದ್ದವು. ಒಳಗೊಳಗೇ ದುಃಖವಾಗುತ್ತಿತ್ತು. ಇತ್ತ ಅಪ್ಪ ಬಯ್ಯುತ್ತಿದ್ದರು ಅಮ್ಮನನ್ನು ಬುಟ್ಟಿಯಲ್ಲಿ ಕಳಿಸಿದ್ದಕ್ಕೆ, ಕುದುರೆಯವನು ದುಡ್ಡಿಗಾಗಿ ಪೀಡಿಸುತ್ತಿದ್ದ,  ನಾನು ಅಮ್ಮ ಬರುವವರೆಗೂ ಕೊಡುವುದಿಲ್ಲ ಎಂದೆ. ಸುಮಾರು 5.30 ರ ಹೊತ್ತಿಗೆ ಅಮ್ಮ ಬಂದರು. ಸಮಾಧಾನಕ್ಕೆ ಅಳುವೂ ಬಂತು.  ಎಲ್ಲಿ ಅಮ್ಮನಿಗೆ ಕಷ್ಟವಾಯಿತೋ ಎಂದು ದುಃಖವಾಗುತ್ತಿತ್ತು. ಆದರೂ ಸಣ್ಣ ಪುಟ್ಟ ಪೆಟ್ಟುಗಳು, ನೋವುಗಳು, ಬೇಸರದಲ್ಲೇ, ಸದ್ಯ ದರ್ಶನವಾಯಿತು ಎಂಬ ಸಮಾಧಾನವೂ ಸಿಕ್ಕಿತು. ಅಲ್ಲೇ ಹತ್ತಿರದಲ್ಲಿದ್ದ ಹೋಟೆಲಿನಲ್ಲಿ ಬಟ್ಟೆಗಳನ್ನು ಬದಲಾಯಿಸಿ, ಅವರವರ ಶುಲ್ಕದ ಹಣವನ್ನು ಕೊಟ್ಟು ವಾಪಸ್ ಹೊರಟೆವು. 

ರಾತ್ರಿ ಸುಮಾರು 8 ರ ಹೊತ್ತಿಗೆ ಬರ್ಕೊಟ್ ನಲ್ಲಿ ನಮಗಾಗಿ ನಿಶ್ಚಯಿಸಿದ್ದ  ಹೋಟೆಲನ್ನು ತಲುಪಿ ವಿಶ್ರಾಂತಿ ಪಡೆದೆವು. ಯಾವಾಗ ಬೆಚ್ಚಗೆ ರಗ್ಗನ್ನು ಹೊದ್ದು ಮಲಗುತ್ತೇವೋ ಎಂದೆನಿಸಿತ್ತು ಆ ಚಳಿಗೆ :) 

No comments:

Post a Comment