Dec 18, 2018

ಘಟನಾನುಭವ : ತಪ್ಪು ಮಾಡುವುದಕ್ಕೂ ಭಯಪಡದಿದ್ದರೆ ಹೇಗೆ ?!

ಇತ್ತೀಚಿಗೆ ಬನ್ನೇರುಘಟ್ಟ ರಸ್ತೆಯ ಸಾಗರ್  ಆಟೋಮೊಬೈಲ್ಸ್ ಎದುರಿಗೆ ಹೋಗುತ್ತಿರುವಾಗ ಹೋಂಡಾ ಡಿಯೋ ಗಾಡಿಯಲ್ಲಿ ಬರುತ್ತಿದ್ದ ಒಬ್ಬ ಸಿಗರೇಟ್ ಸೇದುತ್ತಾ ಅದರ ಬೂದಿಯನ್ನು ಉದುರಿಸಿದ. ಆ ಪುಡಿ ನನ್ನ ಮೇಲೆ ಹಾರಲು ನಾನು ಆತನಿಗೆ 'ಸರ್ ದಯವಿಟ್ಟು ಸಿಗರೇಟ್ ಬಿಸಾಕಿ ಸರ್' ಅಂದೆ. ಅವನು 'ಆಗಲ್ಲ' ಅಂದ. ಅದಕ್ಕೆ ನಾನು 'ಸರ್ ಸಾರ್ವಜನಿಕ ಸ್ಥಳಗಳಲ್ಲಿ ಸಿಗರೇಟ್ ಸೇವನೆ ಬ್ಯಾನ್ ಆಗಿದೆ. ದಯವಿಟ್ಟು ಸಿಗರೇಟ್ ಬಿಸಾಕಿ' ಎಂದೆ. ಅದಕ್ಕೆ ಅವನು 'ನನ್ನ ಹಣ, ನನ್ನಿಷ್ಟ, ಸಿಗರೇಟ್ ಬಿಸಾಕಲು ಸಾಧ್ಯವಿಲ್ಲ' ಎಂದು ಹೇಳಿದ್ದಕ್ಕೆ ನಾನು ನನ್ನ ಬೈಕನ್ನು ಅಡ್ಡ ಹಾಕಿ, 'ಸಿಗರೇಟ್ ಬಿಸಾಕುವವರೆಗೆ ನಾನು ಮುಂದೆ ಹೋಗಲು ಬಿಡುವುದಿಲ್ಲ' ಎಂದು ಪಟ್ಟು ಹಿಡಿದೆ. ಅವನೂ 'ಯಾರಿಗಾದರೂ ಕಂಪ್ಲೇಂಟ್ ಕೊಡಿ, ಯಾರು ಬರ್ತಾರೆ ನೋಡೇಬಿಡ್ತೀನಿ' ಎಂದು ಅಲ್ಲೇ ಪಕ್ಕದಲ್ಲೇ ನಮ್ಮ ಗಾಡಿಗಳನ್ನು ನಿಲ್ಲಿಸಿಕೊಂಡೆವು.

ನಾನು ಸಂಖ್ಯೆ 100 ಕ್ಕೆ ಫೋನ್ ಮಾಡಿ ಪೊಲೀಸಿನವರಿಗೆ ತಿಳಿಸಿದೆ. ಸುಮಾರು 15-20 ನಿಮಿಷದವರೆಗೂ ಕಾಯುತ್ತಿದ್ದ ನಾವು, ನಾನು ಅವನ ಗಾಡಿಯ ಹಿಂಬದಿಯ ಹಿಡಿಯನ್ನು ಹಿಡಿದುಕೊಂಡು ಪೋಲೀಸಿನವರಿಗೆ ನಾವಿರುವ ಜಾಗದ ಮಾಹಿತಿಯನ್ನು ಹಂಚಿಕೊಳ್ಳುತ್ತ ಮಾತನಾಡುತ್ತಿರುವಾಗ ಇನ್ನೇನು ಹೊಯ್ಸಳ 166, (CFS3364796) ಬರುವಷ್ಟರಲ್ಲಿ ಆಪಾದಿತ ತಕ್ಷಣವೇ ಗಾಡಿಯನ್ನು ಹತ್ತಿ ಸ್ಟಾರ್ಟ್ ಮಾಡಿ ಹೊರಟೇಬಿಟ್ಟ. ಅಷ್ಟರಲ್ಲೇ ನಾನು ಅವನ ಗಾಡಿಯ ಸಂಖ್ಯೆ ಹಾಗು ಅವನ ಫೋಟೋ ವನ್ನು ಸಹ ತೆಗೆದುಕೊಂಡಿದ್ದೆ. ಅವನ ಗಾಡಿಯನ್ನು ಹಿಡಿದುಕೊಂಡಿದ್ದ ನಾನು ಫೋನಿನಲ್ಲಿ ಮಾತನಾಡುತ್ತಿದ್ದ ಕಾರಣ ಅವನ ಗಾಡಿಯನ್ನು ತಡೆಯಲಾಗಲಿಲ್ಲ ಅಷ್ಟೇ ಅಲ್ಲ ಕೆಳಗೆ ಬಿದ್ದ ನಾನು ಸುಮಾರು 10 ಅಡಿಗಳಷ್ಟು ದೂರ ರಸ್ತೆಯಲ್ಲಿ ತೀಸಿದೆ. ಎಡಗೈಗೆ ತರಚಿದ ಗಾಯಗಳಾದವು. ನನ್ನ ಪ್ರಪ್ರಥಮ ಜಪಾನ್ ಪ್ರವಾಸದ ನೆನಪಿಗಾಗಿ ಕೊಂಡುಕೊಂಡಿದ್ದ ಸುಮಾರು 7 ವರ್ಷಗಳಿಂದ ಕಾಪಾಡಿಕೊಂಡು ಬಂದಿದ್ದ ದುಬಾರಿ ವಾಚ್ ಸಹ ಹಾಳಾಯಿತು.


ನಂತರದ ಕೆಲವು ಕ್ಷಣಗಲ್ಲಿ ಹೊಯ್ಸಳ ಬಂತು, ಪೋಲೀಸಿನವರು (ಪದ್ಮಾವತಿ) ಆತನ ಗಾಡಿಯ ಸಂಖ್ಯೆಯನ್ನು ತಿಳಿದುಕೊಂಡು ನನ್ನ ಗಾಯವನ್ನು ತೊಳೆದುಕೊಳ್ಳಲು ನೀರನ್ನು ಕೊಟ್ಟು ಚಿಕಿತ್ಸೆ ತೆಗೆದುಕೊಳ್ಳಲು ಸಲಹೆಯಿತ್ತು  ಹೊರಟರು.

ಒಂದು ಗಮನಿಸಬೇಕಾದ ಅಂಶವೆಂದರೆ ಆಪಾದಿತ ವ್ಯಕ್ತಿಯು ಮುಸ್ಲಿಂ ವ್ಯಕ್ತಿಯಾಗಿ ಕಂಡನಾ ಎಂದು  ವಿಚಾರಿಸಿದ್ದು.

ನಂತರ ಟ್ವಿಟ್ಟರ್ ನಲ್ಲಿ ವಿಷಯ ಹಂಚಿಕೊಂಡ ನಾನು ಎಲ್ಲ ಟ್ರಾಫಿಕ್ ಪೋಲೀಸಿನವರಿಗೂ ವಿಷಯ ತಿಳಿಸಿದೆ ಆದರೆ ಇನ್ನು ಪ್ರ ಯೋಜನವಾಗಿಲ್ಲ. SG ಪಾಳ್ಯ ಪೊಲೀಸ್ ಸ್ಟೇಷನ್ ಗೆ ಹೋಗಿ ದೂರು ಸಹ ಕೊಟ್ಟೆ ಆದರೂ ಇನ್ನು ಪ್ರಯೋಜನವಾಗಿಲ್ಲ. ಆ ಗಾಡಿಯು ತೀರಾ ಹೊಸದಾಗಿದ್ದರಿಂದ ಅದರ ಸಂಖ್ಯೆಯು ಅಂತರ್ಜಾಲದಲ್ಲಿ ಲಭ್ಯವಿರಲಿಲ್ಲ. ಆ ಕಾರಣ ನಾನು ಯಶವಂತಪುರದ (KA04) ಪ್ಲಾನೆಟ್ ಹೋಂಡಾಗೆ ಫೋನ್ ಮಾಡಿ ಆ ವಾಹನದ ಮಾಲೀಕನನ್ನ ವಿಚಾರಿಸಲು ಪ್ರಯತ್ನಿಸಿದೆ ಆದರೆ ಹೇಳಲಿಲ್ಲ. ಕೊನೆಪಕ್ಷ ನಿಮ್ಮಲ್ಲಿ ದಾಖಲೆ ಇರುವುದನ್ನು ಖಚಿತಪಡಿಸಿ, ಪೋಲೀಸಿನವರ ಜೊತೆ ಬರುತ್ತೇನೆ ಎಂದರೂ ಹೇಳಲಿಲ್ಲ. ಕೊನೆಗೆ SG ಪಾಳ್ಯ ಸ್ಟೇಷನ್ನಿಗೆ ಫೋನ್ ಮಾಡಿ ಆ ಷೋರೋಮಿನ ನಂಬರ್ ಕೊಟ್ಟರೂ ಇನ್ನು ಯಾವುದೇ ಉಪಯೋಗವಾಗಿಲ್ಲ.

No comments:

Post a Comment