Nov 2, 2015

ಅಮೆರಿಕಾನುಭವ : ಕೊನೆಗೂ ಟ್ರಾಫಿಕ್ ಟಿಕೆಟ್ ನ ಅನುಭವವಾಯಿತು...

ಕಳೆದ 3 ಬಾರಿಯ ಅಮೇರಿಕಾ ಭೇಟಿಗಳಲ್ಲಿ, 3 ಕಾರು, ಒಟ್ಟಾಗಿ 14 ತಿಂಗಳುಗಳ ಕಾಲ 'ಕಾರಿ'ನ ಒಡೆಯನಾಗಿ, ಸುಮಾರು 14-15 ಸಾವಿರ ಮೈಲುಗಳಷ್ಟಾಗುವ ಪ್ರಯಾಣ ಮಾಡಿದ್ದೇನೆ ಆದರೆ ಈ ವರೆಗೂ ಟ್ರಾಫಿಕ್ ಟಿಕೆಟ್ ಸಿಕ್ಕಿರಲಿಲ್ಲ. ಆದರೆ ಅದರ ಅನುಭವವೂ ಈ ಸಲ ಆಯಿತು. 

ಇತ್ತೀಚಿಗೆ ಶಿಕಾಗೋಗೆ ಹೋಗಿದ್ದಾಗ ಒಂದು ಪೂರ್ತಿ ದಿನ ಸುತ್ತಾಡಿ ರಾತ್ರಿ ಸುಮಾರು 11 ರ ಹೊತ್ತಿಗೆ ಆತ್ಮೀಯರೊಬ್ಬರ ಮನೆಯಲ್ಲಿ ಊಟ ಮುಗಿಸಿ ಹೊರಟೆವು. ಸ್ವಲ್ಪ ಹೊತ್ತಿನಲ್ಲೇ ಪೆಟ್ರೋಲ್ ಗಾಗಿ ಹತ್ತಿರದಲ್ಲೆ ಒಂದು ಪೆಟ್ರೋಲ್ ಬಂಕ್ ನಲ್ಲಿ ನಿಲ್ಲಿಸಿ, ಕಾರಿನ ಲೈಟನ್ನು ಆರಿಸಿ, ಕೆಳಗಿಳಿದು ಪೆಟ್ರೋಲ್ ತುಂಬಿಸಿ ಹೊರಟೆ . ಬಂಕಿನಿಂದ ಹೊರಗೆ ಬಂದು ಜಿಪಿಎಸ್ ನ ಆಜ್ಞೆಯಂತೆ ಎಡಗಡೆಯ ದಿಕ್ಕಿಗೆ ಚಲಿಸಬೇಕಿತ್ತು . ಅಮೆರಿಕವಾದ್ದರಿಂದ, ರಸ್ತೆಯ ಎಡಭಾಗ , ನಮ್ಮ ಬಲಭಾಗ . ಆ ರಸ್ತೆ 4 - 4 ಲೇನಿನ (lane) ರಸ್ತೆ ಯಾಗಿದ್ದರಿಂದ (8 ಲೇನ್ ಒಟ್ಟು) ರಸ್ತೆಯ ಡಿವೈಡರ್ ಕಾಣದೆ (ರಾತ್ರಿಯ ಹೊತ್ತಾದ ಕಾರಣಕ್ಕೆ)  ರಸ್ತೆಯ ಬಲಭಾಗದ ನಮ್ಮ ಎಡಭಾಗದ ೪ ನೆ ಲೇನ್ ನಲ್ಲಿ ಓಡಿಸಿದೆ (5,6,7,8 ಲೇನ್ ಗಳಲ್ಲಿ ಯಾವುದಾದರೊಂದನ್ನು ಹಿಡಿಯಬೇಕಿತ್ತು). ತಕ್ಷಣವೇ ರಸ್ತೆ ವಿಭಾಜಕ ಕಂಡು U ಟರ್ನ್ ಮಾಡಿಕೊಂಡು ವಾಪಾಸ್ ಹೊರಟೆ. ಆದರೆ ದುರದೃಷ್ಟವಶಾತ್ ಮರುಕ್ಷಣವೆ ಎಲ್ಲೋ ಇದ್ದ ಪೋಲೀಸಿನವನು ಲೈಟು, ಸೈರನ್ ಹಾಕಿಕೊಂಡು ನಮ್ಮನ್ನು ಹಿಂಬಾಲಿಸಿದ. ಬೆವರಿನ ಸ್ನಾನ, ಮನದಲ್ಲಿ ಭಯ, ಎಷ್ಟು ದುಡ್ಡನ್ನು ಪೀಕುತ್ತಾನೋ ಎಂಬ ಆತಂಕ, ಜೈಲಿಗಿಲ್ಲ ತಾನೇ ಎಂಬ ಯೋಚನೆಯಲ್ಲೇ ನನ್ನ ಕಾರನ್ನು ನಿಲ್ಲಿಸಿದೆ. 


ಪೋಲೀಸಿನವನು ಬಂದು 'ಸರ್, ನಾನು ನಿಮ್ಮನ್ನು ನಿಲ್ಲಿಸಿದ ಉದ್ದೇಶ ನೀವು ಕಾರಿನ ಲೈಟನ್ನು ಹಾಕದೆ ಓಡಿಸುತ್ತಿದ್ದೀರಿ, ಅದು ಸೇಫ್ಟಿ ಸಮಸ್ಯೆಯಾಗಿದೆ ಎಂದು ಹೇಳಿ, ಇನ್ಸೂರೆನ್ಸ್ ಹಾಗು ಪರವಾನಗಿಯನ್ನು ಕೇಳಿದರು. ಬಾಡಿಗೆ ಕಾರಾದ ಕಾರಣ ಪರವಾನಗಿಯನ್ನು ಮಾತ್ರ ಕೊಟ್ಟೆ. ರಸ್ತೆಯ ತಪ್ಪಾದ ಮಾರ್ಗದಲ್ಲಿ ಕಾರು ಚಲಾಯಿಸಿ ಮಾಡಿದ್ದ ದೊಡ್ಡ ತಪ್ಪಿನಿಂದ ಬಚಾವಾದೆ ಎಂಬ ಸಮಾಧಾನ ಹಾಗು ಮೊದಲ ಬಾರಿ ಪೊಲೀಸಿಗೆ ಸಿಕ್ಕಿಕೊಂಡ ಭಯದಲ್ಲಿ ಪೋಲಿಸಿನವನನ್ನು ಒಲಿಸಿಕೊಳ್ಳಲು, ಕ್ಷಮೆ ಕೇಳುವಷ್ಟರಲ್ಲೇ ಅವನು ರಸೀದಿಯನ್ನು ತರಲು ತನ್ನ ವಾಹನಕ್ಕೆ ತೆರಳಿದ್ದ. ಆ ನಂತರ ಅವನು ರಸೀದಿಯನ್ನು ತಂದಾಗ ಸ್ವಲ್ಪ ಸಮಾಧಾನವಾಗಿದ್ದರಿಂದ ಅವನನ್ನು ಮಾತನಾಡಿಸಲು ಸಮಯ ಮಿಂಚಿತ್ತು. ಏನನ್ನೂ ಕೇಳುವ ಸ್ಥಿತಿಯಲ್ಲಿರಲಿಲ್ಲ. ಆಗ ಅವನು '$50 ಡಾಲರ್ ಗಳ ದಂಡದ ರಸೀದಿಯನ್ನು ಕೊಟ್ಟು, ತಕರಾರಿದ್ದರೆ ನ್ಯಾಯಾಲಯದಲ್ಲಿ ದಾಖಲಿಸಬಹುದು ಇಲ್ಲದಿದ್ದರೆ ದಂಡ ಕಟ್ಟಿದರಾಯಿತು, ಏನು ಚಿಂತಿಸಬೇಡಿ, ಈ ರಸೀದಿ ಯಾವ ಸಮಸ್ಯೆಯನ್ನು ಕೊಡುವುದಿಲ್ಲ, ಬರೇ ದಂಡ ಕಟ್ಟಿದರಾಯಿತು, ಎಲ್ಲೂ ದಾಖಲಾಗುವುದಿಲ್ಲ. ಇನ್ಸೂರೆನ್ಸ್ ಗೂ ಸಮಸ್ಯೆಯಾಗುವುದಿಲ್ಲ' ಎಂದು ಧೈರ್ಯ ಹೇಳಿ ಹೊರಟುಹೋದರು. 

ನಾನು ಮನೆಗೆ ಬಂದು 'ಕೊನೆಗೂ ಟಿಕೆಟ್ ನ ಅನುಭವವಾಯಿತು, ಇದೊಂದು ಬಾಕಿಯಿತ್ತು' ಎಂಬ ಅಪರಾಧಿಭಾವದ ಸಮಾಧಾನ ನನ್ನನ್ನು ಕಾಡಿತ್ತು. 

No comments:

Post a Comment