Apr 20, 2015

ಸ್ವಾರ್ಥರಾಜಕೀಯ ಪ್ರೇರಿತ ಆಚರಣೆಗಳು

ಸಂವಿಧಾನ ಶಿಲ್ಪಿ ಡಾ।।ಅಂಬೇಡ್ಕರ್ ಜಯಂತಿಯ ಪುಣ್ಯ ದಿನದಂದು ಅವರ ಆದರ್ಶಗಳನ್ನ, ಅವರ ಚಿಂತನೆಗಳನ್ನ, ಸಮಾಜಮುಖಿ ರೀತಿಯಲ್ಲಿ ಕಾರ್ಯರೂಪಗೊಳಿಸಿ, ಆಚರಿಸಿ ಅವರ ಜನ್ಮದಿನವನ್ನ ಅರ್ಥಪೂರ್ಣಗೊಳಿಸುವುದನ್ನು ಬಿಟ್ಟು ಮತ್ತೊಂದು ರಾಜಕೀಯ ಪಕ್ಷದ ವಿರುದ್ಧ ನಮ್ಮಲ್ಲಿರುವ ಎಲ್ಲ ನಕಾರಾತ್ಮಕ ಧೋರಣೆಗಳನ್ನ, ಅಸೂಯೆಯನ್ನು ಹೊರಹಾಕುವ ಮೂಲಕ, ಪವಿತ್ರ ಗೋಮಾತೆಯ ಮಾಂಸವನ್ನು ಸಾರ್ವಜನಿಕವಾಗಿ ಸೇವಿಸುವ ಮೂಲಕ ಅಂಬೇಡ್ಕರರಿಗೆ ಅವಮಾನ ಮಾಡುತ್ತಿರುವುದು ಖಂಡಿತ ಒಳ್ಳೆಯ ಬೆಳವಣಿಗೆಯಲ್ಲ. ಈ ಮೂಲಕ ಅಂಬೇಡ್ಕರರನ್ನು ಗೋಮಾಂಸ ಸೇವನೆಯ ಪೋಷಕ ಎಂದೆಲ್ಲ ಬಿಂಬಿಸಿ ಅವರನ್ನು ನಿರ್ಧಿಷ್ಟ ಸಮುದಾಯಗಳಿಗೆ ಮಾತ್ರ ಮೀಸಲಾಗಿಸುವ, ಉಳಿದವರಲ್ಲಿ ಅಂಬೇಡ್ಕರರ ಬಗೆಗೆ ತಪ್ಪು ಅಭಿಪ್ರಾಯಗಳನ್ನು ಉಂಟುಮಾಡುವ ಹುನ್ನಾರವಿದು.

ಸಮಾಜದ ಮಹಾಪುರುಷರ ಜಯಂತಿಯಂತಹ ಆಚರಣೆಗಳು ಪಕ್ಷಾತೀತವಾಗಿ, ಸಮಾಜಮುಖಿ ಒಳ್ಳೆಯ ಕೆಲಸಗಳ್ಳನ್ನು ನಡೆಸಲು ಉತ್ತಮ ನೆಪವಾಗಬೇಕೆ ವಿನಃ ಸಮುದಾಯಗಳ ವಿರುದ್ಧದ ಆಚರಣೆಗಳಿಗಲ್ಲ. ಸಮಾಜದ ಬುದ್ಧಿಜೀವಿಗಳು, ಚಿಂತಕರು ಎಂದು ಕರೆಸಿಕೊಳ್ಳುವ, ಮೇಲಾಗಿ ಜ್ಞಾನಪೀಠಿಗಳಾಗಿ, ಮುಗ್ಧ ಜನರನ್ನು ತಮ್ಮ ತಮ್ಮ ಸ್ವಾರ್ಥರಾಜಕೀಯ ಕಾರಣಗಳಿಗೆ, ಗುಂಪುಕಟ್ಟಿ 'ಮುಖಪುಟ'ವಾಗುವ ಅಭಿಲಾಷೆಗಳಿಗೆ ಬಳಸಿಕೊಳ್ಳುವುದು ಖಂಡಿತ ಯಾರಿಗೂ ಶೋಭೆ ತರುವುದಿಲ್ಲ, ಅವರ ಪ್ರಶಸ್ತಿಗಳಿಗೂ ಸೇರಿಸಿ.!

ಕೆಲವು ಸಾಹಿತಿಗಳು ಕೃತಿ ರಚನೆಯ ಮೂಲಕ ಸುದ್ದಿಯಾಗಿದ್ದಕ್ಕಿಂತ ಪ್ರತಿಭಟನೆಯ ಮೂಲಕ ಸುದ್ಡಿಯಾಗಿದ್ದೇ ಹೆಚ್ಚು . ಮುಂದಿನ ಪೀಳಿಗೆಗೆ ಅವರೆಲ್ಲ 'ಸಾಹಿತಿ'ಗಿಂತ ರಾಜಕೀಯ ವ್ಯಕ್ತಿಯಾಗಿಯೇ ಪರಿಚಯವಾಗುವುದರಲ್ಲಿ ಅನುಮಾನವಿಲ್ಲ. ಆದರೆ ಅವರೆಲ್ಲರಿಂದ ಒಳ್ಳೊಳ್ಳೆಯ ಕೃತಿಗಳಷ್ಟೇ ಹೊರಗೆ ಬರಲಿ ಎಂಬುದು ಬಹುಜನರ ಹಾರೈಕೆ. 

ಹೇಗೆ ಸಂಘಪರಿವಾರದ ಸಂಘಟನೆಗಳು ಅಂಬೇಡ್ಕರರ ಜಯಂತಿಯನ್ನು ವಿವಿಧ ರೀತಿಗಳಲ್ಲಿ ಆಚರಿಸುವ ಮೂಲಕ ಒಳ್ಳೆಯ ಕೆಲಸಕ್ಕೆ ನಾಂದಿ ಹಾಡಿದ್ದಾರೆಯೋ  ಹಾಗೆಯೇ ಸ್ವಾಮಿ ವಿವೇಕಾನಂದ, ಭಗತ್ ಸಿಂಗ್, ಚಂದ್ರಶೇಖರ್ ಅಜಾದ್, ಲಾಲ್ ಬಹಾದ್ದೂರ್ ಶಾಸ್ತ್ರೀಜಿ ಅಂತಹ ಸರ್ವಾನುಕರಣೀಯ ಮಹಾಪುರುಷರ ಜಯಂತಿಗಳು ಕಾಂಗ್ರೆಸ್ ಮತ್ತು ಕಾಂಗ್ರೆಸ್ ಪೋಷಿತ, ಸಂಘಟನೆಗಳೂ ಆಚರಿಸುವಂತಾಗಲಿ ಎಂಬುದೇ ನಮ್ಮ ಆಶಯ. 

(ಈ ನನ್ನ ಮೇಲಿನ ಅಭಿಪ್ರಾಯ ಲೇಖನ ಏಪ್ರಿಲ್ ೧೮ ರ ಕನ್ನಪ್ರಭದಲ್ಲಿ ಪ್ರಕಟವಾಯಿತು )

No comments:

Post a Comment