May 12, 2014

ವಿವೇಕಾನಂದ ಶಿಲಾಸ್ಮಾರಕದ 'ಅದ್ಭುತ'ಗಾಥೆ - ಭಾಗ ೩

ಏಕನಾಥಜಿ : ಕಲ್ಪನೆ ಮತ್ತು ಯಥಾರ್ಥ 
323 ಸಾಂಸದರ ಹಸ್ತಾಕ್ಷರಗಳು ಹಾಗು ನೆಹರೂರವರ ಹೇಳಿಕೆಯಿಂದ ಪ್ರಭಾವಿತರಾದ ಭಕ್ತವತ್ಸಲಂರವರು 1964ರ ಫೆಬ್ರವರಿ 5ರಂದು ರಾಜ್ಯ ಸರ್ಕಾರವು ಸ್ವಾಮಿ ವಿವೇಕಾನಂದ ಸ್ಮಾರಕಕ್ಕೆ ಒಪ್ಪಿಗೆ ನೀಡಿದೆ ಆದರೆ ಈ ಪ್ರತಿಮೆಯು ಸಣ್ಣ ಆಕಾರದ್ದಾಗಿದ್ದು ಒಂದು ಸುರಕ್ಷಿತವಾದ ಬೇಲಿಯೊಳಗೆ ಇರುವಂತದ್ದಾಗಿರುತ್ತದೆ ಎಂದು ತನ್ನ ಕೆಲವು ಬಾತ್ಮೀದಾರರಿಗೆ ತಿಳಿಸಿದರು. ಭಕ್ತವತ್ಸಲಂರವರ ಈ ಹೇಳಿಕೆಯು ಮರುದಿನ ಪತ್ರಿಕೆಗಳಲ್ಲಿ ಪ್ರಕಟವಾಯಿತು. ಆದರೆ ಏಕನಾಥರು ಭಕ್ತವತ್ಸಲಂರವರ ಹಟದ ಸ್ವಭಾವವನ್ನು ಅರಿತಿದ್ದರು. ಹೀಗಾಗಿ ಅವರು ಬಹಳ ವಿನಮ್ರತೆಯೊಂದಿಗೆ ಫೆಬ್ರವರಿ 13ರಂದು ಭಕ್ತವತ್ಸಲಂರವರನ್ನು ಖುದ್ದಾಗಿ ಭೇಟಿಯಾಗಿ ಶಿಲೆಯ ಮೇಲೆ ಪ್ರತಿಮೆ ಸ್ಥಾಪಿಸುವುದಕ್ಕೆ ಅನುಮತಿ ನೀಡಿದ್ದಕ್ಕಾಗಿ ಕೃತಜ್ಞತೆ ಅರ್ಪಿಸಿದರು.

ಆದರೆ ಸ್ಮಾರಕದ ಸ್ವರೂಪ ಹಾಗು ಆಕಾರದ ಬಗೆಗೆ ಏಕನಾಥರು ಹಾಗು ಭಕ್ತವತ್ಸಲಂರವರ ಕಲ್ಪನೆಯ ಚಿತ್ರಗಳಲ್ಲಿ ಆಕಾಶ-ಪಾತಾಳದ ಅಂತರವಿತ್ತು. ಭಕ್ತವತ್ಸಲಂರವರು 15x15 ಅಡಿ ಆಕಾರದ ಸ್ಮಾರಕ ನಿರ್ಮಾಣಕ್ಕೆ ಅಂಟಿಕೊಂಡಿದ್ದರೆ ಏಕನಾಥರ ಕಲ್ಪನೆಯಲ್ಲಿ ಭವ್ಯವಾದ, ವಿಶಾಲವಾದ ಚಿತ್ರ ಮನೆಮಾಡಿತ್ತು. ಸರ್ಕಾರದ ಅನುಮತಿಯಿಲ್ಲದೆ ತಮ್ಮ ಕಲ್ಪನೆಯು ಸಾಕಾರಗೊಳ್ಳುವಂತಿರಲಿಲ್ಲ. ಆದ್ದರಿಂದ ಏಕನಾಥರು ಭಕ್ತವತ್ಸಲಂರೊಡನೆ ಬಹಳ ಧೈರ್ಯ, ಬುದ್ಧಿವಂತಿಕೆಯಿಂದಲೇ ವ್ಯವಹರಿಸಿದರು. ಅವರೊಂದಿಗೆ ತಮ್ಮಿಬ್ಬರ ನಡುವಿನ ಕಲ್ಪನೆಗಳ ಭಿನ್ನತೆಯನ್ನು ವ್ಯಕ್ತಪಡಿಸಲೇ ಇಲ್ಲ. ಸ್ವಾಮಿ ವಿವೇಕಾನಂದರ ಬಗ್ಗೆ ಶ್ರಧ್ಧೆ, ಭಕ್ತಿ ಮತ್ತು ಅವರ ಸ್ಮಾರಕ ನಿರ್ಮಾಣ ವಿಚಾರದಲ್ಲಿ ತಮ್ಮಿಬ್ಬರ ನಡುವಿನ ಏಕಾಭಿಪ್ರಾಯವನ್ನೇ ಭಕ್ತವತ್ಸಲಂರೆದುರು ವ್ಯಕ್ತಪಡಿಸುತ್ತಿದ್ದರು. ತನ್ನ ಈ ಚತುರತೆಯಿಂದ ಏಕನಾಥರು ಸ್ಮಾರಕದ ಬಗೆಗಿನ  ತಮ್ಮ ಕಲ್ಪನಾ ಚಿತ್ರದ ಸಾಕಾರಕ್ಕಾಗಿ ಭಕ್ತವತ್ಸಲಂರವರ ಅನುಮತಿ ಪಡೆಯುವ ನಿಟ್ಟಿನಲ್ಲಿ ಪ್ರಯತ್ನಶೀಲರಾದರು. 


'ನಾವು ಯಾಕೆ ಈ ದೇಶದ ಪಾರಂಪರಿಕ ಶಿಲ್ಪಿಗಳ ಮೂಲಕ ಸ್ಮಾರಕದ ರೂಪುರೇಷೆಯನ್ನು ತಯಾರಿಸಬಾರದು ಹಾಗು ಅದರ ಬಗ್ಗೆ ದೇಶದ ಐದಾರು ಪ್ರಮುಖರ ಅಭಿಪ್ರಾಯವನ್ನು ಪಡೆಯಬಾರದು?' ಎಂಬ ಪ್ರಶ್ನೆಯೊಂದನ್ನು ಏಕನಾಥರು ಭಕ್ತವತ್ಸಲಂ ಮುಂದಿಟ್ಟಾಗ 'ಅಂತಹ ಪ್ರಮುಖರು ಯಾರಾಗಬಹುದು?' ಎಂದು ಪ್ರಶ್ನಿಸಿದರು. ಆ ಕೂಡಲೇ ಏಕನಾಥರು ಪ್ರಧಾನಿ  ಪಂಡಿತ್ ನೆಹರೂ, ಗೃಹಮಂತ್ರಿ ಶಾಸ್ತ್ರೀಜಿ, ರಾಷ್ಟ್ರಪತಿ ರಾಧಾಕೃಷ್ಣನ್, ಸಂಸ್ಕೃತಿ ಮಂತ್ರಿ ಮಹಮ್ಮದ್ ಕರೀಂ ಛಾಗ್ಲಾ, ರಾಮಕೃಷ್ಣ ಮಿಶನ್ ನ ಅಧ್ಯಕ್ಷ ಸ್ವಾಮಿ ಮಾಧವಾನಂದರು ಹಾಗು ಕೊನೆಯಲ್ಲಿ ಅವರು ಕಂಚಿ ಕಾಮಕೋಟಿಪೀಠದ ಪರಮಾಚಾರ್ಯರಾದ ಚಂದ್ರಶೇಖರ ಸರಸ್ವತಿಯವರ ಹೆಸರನ್ನೂ ಉಲ್ಲೇಖಿಸಿದ್ದರು. ಪರಮಾಚಾರ್ಯರ ಬಗ್ಗೆ ಭಕ್ತವತ್ಸಲಂರವರು ಅಗಾಧ ಶ್ರಧ್ಧೆ ಹೊಂದಿದ್ದಾರೆಂಬುದನ್ನು ಏಕನಾಥರು ಅರಿತಿದ್ದರು. ಅವರ ಹೆಸರನ್ನು ಹೇಳುತ್ತಿದ್ದಂತೆಯೇ ಭಕ್ತವತ್ಸಲಂರವರು ಆನಂದಿತರಾಗಿ "ಸರಿ, ನೀವು ಸ್ಮಾರಕದ ಕರಡು ನಕಾಶೆಯನ್ನು ತಯಾರಿಸಿ ಅದರ ಬಗ್ಗೆ ಪರಮಾಚಾರ್ಯರ ಅಭಿಪ್ರಾಯವೇನೆಂಬುದನ್ನು ನನಗೆ ತಿಳಿಸಿ " ಎಂದರಂತೆ. ಏಕನಾಥರು ಕೂಡಲೇ ಪರಮಾಚಾರ್ಯರನ್ನು ಭೇಟಿಯಾದರು. ಅವರು ಸಹ ಸ್ಮಾರಕದ ಬಗೆಗೆ ಬಹಳ ಆಸಕ್ತಿಯನ್ನು ವ್ಯಕ್ತಪಡಿಸಿದರು ಹಾಗೂ ಏಕನಾಥರ ಮುಖೇನ ಆಯ್ಕೆಯಾದ ಪರಂಪರಾಗತ ಶೈಲಿಯ ಉತ್ಕೃಷ್ಟ ವಾಸ್ತುಶಿಲ್ಪಿಯಾದ ಎಸ್.ಕೆ.ಆಚಾರಿಯವರನ್ನು ತಮ್ಮೊಂದಿಗೇ ಕೂರಿಸಿಕೊಂಡು ಸ್ಮಾರಕದ ರೂಪುರೇಷೆಯ ಬಗ್ಗೆ ವಿವರವಾಗಿ ಚರ್ಚಿಸಿದರು ಹಾಗು ಅವಶ್ಯವಾದ ನಿರ್ದೇಶನಗಳನ್ನೂ ನೀಡಿದರು. ಪರಮಾಚಾರ್ಯರಿಂದ ಸ್ವೀಕೃತವಾದ ಕರಡು ಚಿತ್ರವನ್ನು ನೋಡಲು ಭಕ್ತವತ್ಸಲಂ ಉತ್ಸುಕರಾದರು. ಏಕನಾಥರು ಅವರಿಗೆ ಚಿತ್ರವನ್ನೇನೋ ತೋರಿಸಿದರು ಆದರೆ ಅದರ ಗಾತ್ರ, ಆಕಾರದ ಉಲ್ಲೇಖ ಮಾಡದೇ ಜಾಗೃತೆ ವಹಿಸಿದ್ದರು. 

ಈ ಸಮಯಕ್ಕೆ ಸ್ಮಾರಕ ನಿರ್ಮಾಣ ಕಾರ್ಯದಲ್ಲಿ ತಮಿಳುನಾಡಿನ ಸರ್ಕಾರದ ಕಡೆಯಿಂದ ಎದುರಾಗಲಿದ್ದ ವಿರೋಧವನ್ನು ಪರಾಜಯಗೊಳಿಸುವಂತಹ ಕೊನೆಯ ಹಂತವನ್ನೂ ಏಕನಾಥರು ಪಾರುಗೊಳಿಸಿಯಾಗಿತ್ತು. ಸ್ಮಾರಕದ ಆಕಾರವು ಅವಿರತವಾಗಿ ವಿಸ್ತಾರಗೊಳ್ಳುತ್ತಾ ಇತ್ತು. ಸಭಾಮಂಟಪದೊಂದಿಗೇ  ದೇವಿಯ ಚರಣಗಳ ಮೇಲೆ ಶ್ರೀಪಾದ ಮಂಟಪ ಹಾಗು ಶಿಲೆಯ ಮೇಲೆ ಒಂದು ಆಳವಾದ ಹೊಂಡದಲ್ಲಿ 'ಓಂ' ಪ್ರತಿಮೆಯೊಂದಿಗೆ ಒಂದು ಧ್ಯಾನಮಂಟಪವನ್ನು ನಿರ್ಮಿಸುವಂತಹ ಕಲ್ಪನೆಗಳು ಏಕನಾಥರ ಮನಸ್ಸಿನಲ್ಲಿ ಮೂಡಲಾರಂಭಿಸಿದ್ದುವು. ಅದಕ್ಕೆ ಹಂತಹಂತವಾಗಿ ಸರ್ಕಾರದಿಂದ ಔಪಚಾರಿಕವಾಗಿ ಅನುಮತಿಯನ್ನೂ ಪಡೆಯುತ್ತಿದ್ದರು. 


ಈ ರೀತಿಯಾಗಿ 1963ರ ಆಗಸ್ಟ್ 11 ರಿಂದ ವಿವೇಕಾನಂದ ಶಿಲಾಸ್ಮಾರಕ ಸಮಿತಿಯ ಸಂಘಟನಾ ಮಂತ್ರಿಸ್ಥಾನವನ್ನು ನಿಭಾಯಿಸುತ್ತಾ 1964ರ ಸೆಪ್ಟೆಂಬರ್ ವರೆಗೂ ಒಂದು ವರ್ಷ ಸ್ಮಾರಕ ನಿರ್ಮಾಣಕ್ಕೆ ಸರಕಾರೀ ಅನುಮತಿಗಳನ್ನು ಪಡೆಯಲಿಕ್ಕಾಗಿಯೇ ಕಳೆದುಹೋಯಿತು. ಆದರೆ ಈಗಿನ ಸ್ಮಾರಕದ ಚಿತ್ರಣವನ್ನು ಸಾಕಾರಗೊಳಿಸುವುದಕ್ಕಾಗಿ ತಮಿಳುನಾಡಿನ ಸರ್ಕಾರದ ಅನುಮತಿಗಳಿಸುವ ಕಾರ್ಯವು ಅಂತಿಮ ಹಂತದ ತನಕ ಸಾಗಿತ್ತು. ಇಡೀ ಚಿತ್ರವನ್ನು ಒಗ್ಗೂಡಿಸಿ ಒಮ್ಮೆಗೇ ಪ್ರಸ್ತುತ ಪಡಿಸಿ ಸರ್ಕಾರವನ್ನು ಬೆಚ್ಚಿಸದೆ ಎಚ್ಚರಿಕೆ ವಹಿಸಲಾಗಿತ್ತು. ಇಲ್ಲಿ ಭಾವುಕತೆಯ ಒಘಕ್ಕಿಂತ ಏಕನಾಥರ ಪ್ರಗಲ್ಭವಾದ ಚತುರತೆ ಹಾಗು ಕುಶಲ ರಣನೀತಿಯ ಪ್ರಭಾವವೇ ಅಧಿಕವಾಗಿತ್ತು . 

ಕುಶಲ ಸಂಘಟಕ ಹಾಗು ಪ್ರಾಯೋಜಕ 
ಏಕನಾಥರ ಪ್ರತಿಭೆ, ಕಲ್ಪನಾ ಶಕ್ತಿ, ಯೋಜನಾ ಕೌಶಲ್ಯ, ಸಾಧನ ಸಂಗ್ರಹದ ಸಾಮರ್ಥ್ಯ, ಒಂದು ಶಿಲಾಸ್ಮಾರಕ ನಿರ್ಮಾಣದ ಕಾರ್ಯವನ್ನು ರಾಷ್ಟ್ರಜಾಗೃತಿ ಹಾಗು ರಾಷ್ಟ್ರೀಯ ಐಕ್ಯತೆಯ ದೇಶವ್ಯಾಪಿ ಆಂದೋಲನವನ್ನಾಗಿಸುವಂತಹ ಕ್ಷಮತೆಯನ್ನು ಬೆಳಕಿಗೆ ತಂದಿತು. ಏಕನಾಥರು ಏಕಾಂಗಿಯಾಗಿರಲಿಲ್ಲ. ಸ್ವಾಮಿ ವಿವೇಕಾನಂದರ ಜೀವನದ ಗುರಿ ಮತ್ತು ಆದರ್ಶಗಳಿಗೆ ಸಮರ್ಪಿತವಾದ ಇಡೀ ದೇಶದಲ್ಲಿ ಹಬ್ಬಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ ವಿಶಾಲ ಸಂಘಟನೆಯು ಈ ಮಹತ್ಕಾರ್ಯದ ಬೆನ್ನೆಲುಬಾಗಿ ನಿಂತಿತ್ತು.  ವಿವೇಕಾನಂದರ ಬಗ್ಗೆ ದೇಶದ ಜನಮಾನಸದಲ್ಲಿ ವ್ಯಾಪಿಸಿದ್ದ ಶ್ರದ್ಧಾ - ಭಕ್ತಿಗಳನ್ನು, ಅನೇಕ ಪಂಗಡಗಳಲ್ಲಿ, ಪಕ್ಷಗಳಲ್ಲಿ, ಹಂಚಿಹೋಗಿದ್ದ ನೇತೃತ್ವಗಳನ್ನು ಒಂದೇ ಕಡೆ ಪ್ರವಹಿಸುವಂತೆ ಮಾಡಲು ಯಾವ ಒಂದು ಅಪೂರ್ವ ಕಲ್ಪನಾ ಶಕ್ತಿ, ಯೋಜನಾ ಚಾತುರ್ಯ, ಸಂಘಟನಾ ಕೌಶಲ್ಯದ ಅವಶ್ಯಕತೆ ಇತ್ತೋ ಅದನ್ನು ನಿಯತಿಯು ಏಕನಾಥರಲ್ಲಿ ಪ್ರಕಟಪಡಿಸಿತ್ತು. ಅವರು ಒಂದೇ ಬಾರಿ ಅನೇಕ ಪ್ರಶ್ನೆಗಳಿಗೆ ಉತ್ತರ ಹುಡುಕತೊಡಗಿದರು. ಶಿಲಾಸ್ಮಾರಕದ ಅಂತಿಮ ಚಿತ್ರಣ ಹೇಗಿರಬೇಕು, ಮಂಟಪಗಳು ಹೇಗಿರಬೇಕು, ಎಲ್ಲಿರಬೇಕು, ಎಲ್ಲೆಲ್ಲಿ ಯಾವ ಯಾವ ತರಹದ ಕಲ್ಲುಗಳು, ಎಲ್ಲೆಲ್ಲಿ ಯಾವ ಯಾವ ಬಣ್ಣಗಳು, ಎಲ್ಲೆಲ್ಲಿಂದ ಏನೇನನ್ನು ತರಬೇಕು, ತಲುಪಿಸುವ ವ್ಯವಸ್ಥೆಗಳು, ಕೆಲಸಗಾರರ ಅವಶ್ಯಕತೆ-ಪೂರೈಕೆ, ಅವರಿಗೆ ಕುಡಿಯುವ ನೀರು-ಆಹಾರ, ಕೆತ್ತನೆಗಾರರ ಪೂರೈಕೆ, ತಜ್ಞರ ಅವಶ್ಯಕತೆ ಮುಂತಾದ ಪ್ರತಿಯೊಂದು ಸಣ್ಣ ಸಣ್ಣ ವಿಷಯಕ್ಕೂ ಮೊದಲೇ ಯೋಜನೆ, ಕಾರ್ಯರೂಪದ ವಿಧಾನ ಎಲ್ಲವೂ ತಯಾರಾಗಿತ್ತು. ಇವೆಲ್ಲಕ್ಕಿಂತ ಮುಖ್ಯವಾಗಿ ಈ ಸಮಯಬದ್ಧ ವಿಶಾಲ ಯಜ್ಞವನ್ನು ಪೂರ್ಣಗೊಳಿಸಲು ಅಗತ್ಯವಾದ ಆರ್ಥಿಕ ಮೂಲಗಳಿಗಾಗಿ ಹುಡುಕಾಟದೊಂದಿಗೇ ಈ ಶೋಧ ಕಾರ್ಯವನ್ನು ರಾಷ್ಟ್ರಜಾಗೃತಿ ಹಾಗು ರಾಷ್ಟ್ರೀಯ ಏಕತೆಯ ಪ್ರಕ್ರಿಯೆಯಲ್ಲಿ ಮುಕ್ತಾಯಗೊಳಿಸುವುದೇ ಒಂದು ದೊಡ್ಡ ಪ್ರಶ್ನೆಯಾಗಿತ್ತು. ಅವರು ಒಂದು ದೊಡ್ಡ ಬಂಡೆಯಲ್ಲಿ ಒಂದು ಕಾರ್ಯಶಾಲೆಯನ್ನು ಸ್ಥಾಪನೆ ಮಾಡಿದರು . ವಿವೇಕಾನಂದಪುರಂ ಎಂಬ ಹೆಸರಿನ ವಿಶಾಲ ಪರಿಸರಕ್ಕಾಗಿ ಭೂಮಿಯನ್ನು ನಿಗದಿಗೊಳಿಸಲು ಪ್ರಯತ್ನಿಸಲಾರಂಭಿಸಿದರು.

ವಿವೇಕಾನಂದ ಶಿಲಾಸ್ಮಾರಕದ 'ಅದ್ಭುತ'ಗಾಥೆ - ಭಾಗ ೨

( ಮುಂದುವರೆಯುದು... )

No comments:

Post a Comment