ರಾಮಕೃಷ್ಣಮಿಶನ್ ನ ಆಶೀರ್ವಾದದೊಂದಿಗೆ ಏಕನಾಥರು ಮದ್ರಾಸನ್ನು ತಲುಪಿದರು. ಅಲ್ಲಿ ಈ ವಿವಾದಕ್ಕೆ ಸಂಬಂಧಿಸಿದ ಫೈಲುಗಳನ್ನೆಲ್ಲ ಅವರು ಸೂಕ್ಷ್ಮವಾಗಿ ಅಧ್ಯಯನ ಮಾಡಿದಾಗ ಅವರಿಗೆ ಅದರಲ್ಲಿ ಭಕ್ತವತ್ಸಲಂ ಅವರ ವಿರೋಧದ ಮುಖ್ಯ ಎಳೆಯೊಂದು ದೊರೆಯಿತು. ಕೇಂದ್ರ ಸರ್ಕಾರದ ಸಂಸ್ಕೃತಿ ಸಚಿವರಾದ ಶ್ರೀ ಹುಮಾಯೂನ್ ಕಬೀರ್ ಆ ಶಿಲೆಯ ಮೇಲೆ ಸ್ಮಾರಕ ನಿರ್ಮಾಣದ ಬಗ್ಗೆ ವಿರೋಧ ವ್ಯಕ್ತ ಪಡಿಸಿದ್ದರು. ಏಕೆಂದರೆ ಈ ಸ್ಮಾರಕ ನಿರ್ಮಾಣದಿಂದ ಆ ಕ್ಷೇತ್ರದ ನೈಸರ್ಗಿಕ ಸೌಂದರ್ಯಕ್ಕೆ ಧಕ್ಕೆಯಾಗುತ್ತದೆ ಎಂಬುದು ಅವರ ಅಭಿಪ್ರಾಯವಾಗಿತ್ತು. ಕಬೀರರ ಈ ವಾದವನ್ನು ಪ್ರಧಾನಮಂತ್ರಿ ನೆಹರೂರವರು ಶಿಲೆಯ ಮೇಲೆ ಸ್ಮಾರಕ ನಿರ್ಮಾಣವನ್ನು ವಿರೋಧಿಸುವುದಕ್ಕೆ ಮುಖ್ಯ ಆಧಾರವನ್ನಾಗಿ ಮಾಡಿದ್ದಾರೆ ಎಂಬುದು ಭಕ್ತವತ್ಸಲಂ ಅವರ ತರ್ಕವಾಗಿತ್ತು. ಇನ್ನೀಗ ಸ್ಮಾರಕ ನಿರ್ಮಾಣಕ್ಕೆ ತಮಿಳುನಾಡು ಸರ್ಕಾರಕ್ಕಿಂತ ಮೊದಲು ಕೇಂದ್ರ ಸರ್ಕಾರದ ಅನುಮತಿ ಪಡೆಯುವುದು ಅವಶ್ಯಕವಾಗಿದೆ ಹಾಗು ಇದಕ್ಕಾಗಿ ಮೊದಲು ಹುಮಾಯೂನ್ ಕಬೀರರಿಂದ ಎದುರಾಗಿರುವ ವಿರೋಧವನ್ನು ನಿರ್ಮೂಲ ಮಾಡಬೇಕು ಎಂಬುದನ್ನು ಏಕನಾಥರು ಅರ್ಥೈಸಿಕೊಂಡರು. ಸಮಸ್ಯೆಯನ್ನು ಆಮೂಲಾಗ್ರವಾಗಿ ಅಭ್ಯಸಿಸಿದ ನಂತರ ಸ್ವಾಮಿ ವಿವೇಕಾನಂದರ ಶಿಲಾಸ್ಮಾರಕ ಸಮಿತಿಯಲ್ಲಿ ಯಾರಾದರೊಬ್ಬರು ಔಪಚಾರಿಕವಾಗಿ ಪದಗ್ರಹಣ ಮಾಡಿದ ಹೊರತು ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ವಿರೋಧವನ್ನು ಇತ್ಯರ್ಥಗೊಳಿಸಲಾಗದೆಂದು ಏಕನಾಥರಿಗೆ ಧೃಢವಾಯಿತು. ಇದಕ್ಕಾಗಿಯೇ ಅವರು ಪೂರ್ವರಚಿತ ಸಮಿತಿಯನ್ನು ಕೊಂಚವೂ ಬದಲಿಸದೆ 1963ರ ಆಗಸ್ಟ್ 13ರಂದು 'ಅಖಿಲ ಭಾರತೀಯ ವಿವೇಕಾನಂದ ಶಿಲಾಸ್ಮಾರಕ ಸಮಿತಿ'ಯ ಪ್ರಥಮ ಸಂಘಟನಮಂತ್ರಿ ಪದವಿಯನ್ನು ಅಂಗೀಕರಿಸಿದರು.
ಕನ್ಯಾಕುಮಾರಿಯಲ್ಲಿ ಶಿಲೆಯ ನೈಸರ್ಗಿಕ ಪರಿಸರದ ಅಧ್ಯಯನ ನಡೆಸಿದ ನಂತರ ಏಕನಾಥರು ಕಬೀರರ ಭೇಟಿಗೆ ಸಮಯವನ್ನು ಕೇಳಿಕೊಂಡರೂ ಕಬೀರರು ಅವಕಾಶ ನೀಡಲೇ ಇಲ್ಲ. ಕೋಲ್ಕತ್ತಾಗೆ ಮರಳಿದ ಏಕನಾಥರು ಅಲ್ಲಿ ಸ್ವಾಮಿ ಮಾಧವಾನಂದ ಹಾಗೂ ಅನ್ಯ ಜನರೊಂದಿಗೆ ಪರಾಮರ್ಶಿಸಿದರು. ಇವರ ಸಹಾಯದಿಂದ ಕೊಲ್ಕತ್ತಾದ ಎಲ್ಲ ಪ್ರಮುಖ ಸಂಪಾದಕರನ್ನು ಭೇಟಿಯಾದರು. ಸ್ಮಾರಕ ನಿರ್ಮಾಣಕ್ಕೆ ಕಬೀರರೇ ಪ್ರಮುಖ ಮುಖ್ಯ ತಡೆಯಾಗಿದ್ದಾರೆಂಬುದು ಅವರೆಲ್ಲರ ಅಭಿಪ್ರಾಯವಾಗಿತ್ತು .
ಕನ್ಯಾಕುಮಾರಿಯಲ್ಲಿ ಸ್ವಾಮಿಜಿಯವರ ಸ್ಮಾರಕ ನಿರ್ಮಾಣಕ್ಕಾಗಿ ಇಡೀ ಬಂಗಾಳವೇ ಉತ್ಸುಕವಾಗಿತ್ತು. ಬಂಗಾಳವೇ ಕಬೀರರ ಸ್ವಂತ ರಾಜಕೀಯ ಕ್ಷೇತ್ರವಾಗಿತ್ತು. ಹೀಗಾಗಿ ಪ್ರಪ್ರಥಮವಾಗಿ ಕಬೀರರ ವಿರೋಧವನ್ನು ಕೊನೆಗೊಳಿಸಲೇಬೇಕಿತ್ತು . ವೈಯಕ್ತಿಕ ಭೇಟಿಗಳ ಬಳಿಕ ಅನುಕೂಲಕರ ಮನಃಸ್ಥಿತಿಯನ್ನು ರೂಪಿಸಿಕೊಂಡು ಕೊಲ್ಕತ್ತಾದಲ್ಲಿ ಏಕನಾಥರು ಪತ್ರಿಕಾಗೋಷ್ಠಿಯನ್ನು ಕರೆದು ಹುಮಾಯೂನ್ ಕಬೀರರ 'ವಿರೋಧಿಪಾತ್ರ'ವನ್ನು ಸಾರ್ವಜನಿಕವಾಗಿ ತೆರೆದಿಟ್ಟರು. ಮರುದಿನ ಎಲ್ಲ ವಾರ್ತಾಪತ್ರಿಕೆಗಳಲ್ಲಿ ಸುದ್ದಿಯಾಗಿ ವ್ಯಾಪಕ ವಿರೋಧವು ಆರಂಭವಾಯಿತು. ಪ್ರವಾಹದೋಪಾದಿಯ ಈ ಪ್ರಚಾರದಿಂದಾಗಿ ಕಬೀರರು ಅಪ್ರತಿಭರಾದರು. ಅವರು ಏಕನಾಥರನ್ನು ದಿಲ್ಲಿಗೆ ಬಂದು ಭೇಟಿಯಾಗುವಂತೆ ಆಹ್ವಾನಿಸಿದರು. ಏಕನಾಥರೂ ಭೇಟಿಯಾದರು. ಸುಧೀರ್ಘವಾದ ವಾರ್ತಾಲಾಪದ ನಂತರ ಕಬೀರರನ್ನು ಶಿಲಾಸ್ಮಾರಕ ನಿರ್ಮಾಣದ ವಿರೋಧದಿಂದ ವಿಮುಖರನ್ನಾಗಿಸುವಲ್ಲಿ ಏಕನಾಥರು ಸಫಲರಾದರು! ಈ ಭೇಟಿಯ ನಂತರ ಏಕನಾಥರು ಕಬೀರರೊಂದಿಗೆ ನಡೆದ ಮೌಖಿಕ ವಾರ್ತಾಲಾಪವನ್ನು ಅಕ್ಷರಶಃ ಲಿಪಿಬಧ್ಧವಾಗಿಸಿ ಆ ಕೂಡಲೇ ಕಬೀರರಿಗೆ ಕಾಣಿಕೆಯಾಗಿ ನೀಡಿದುದು ಈ ಭೇಟಿಯ ವಿಶೇಷತೆ. ಏಕನಾಥಜಿಯವರ ಅಸಾಧಾರಣ ಸ್ಮರಣ ಶಕ್ತಿ ಯನ್ನು ನೋಡಿ ಕಬೀರರು ಬಹಳ ಆಶ್ಚರ್ಯಚಕಿತರಾದರು.
ಹುಮಾಯೂನ್ ಕಬೀರರ ವಿರೋಧವನ್ನು ನಿವಾರಿಸಿದ ನಂತರ ಏಕನಾಥರು ಪಂಡಿತ್ ನೆಹರೂರವರ ಅನುಮತಿ ಪಡೆಯಲಿಕ್ಕಾಗಿ ಉಪಾಯ ಹುಡುಕತೊಡಗಿದರು. ನೆಹರೂರವರ ಅನುಮತಿ ಇಲ್ಲದೆ ತಮಿಳುನಾಡಿನ ಮುಖ್ಯಮಂತ್ರಿ ಭಕ್ತವತ್ಸಲಂರವರ ಅನುಮತಿ ಪಡೆಯುವುದು ಅಸಂಭವವೇ ಆಗಿತ್ತು. ನೆಹರೂರವರ ದೃಷ್ಟಿಯಲ್ಲಿ, ಚರ್ಚ್ ವಿರೋಧದ ಕಾರಣದಿಂದಾಗಿ ಈ ಸಮಸ್ಯೆಯು ಮೂಲಭೂತವಾದಂದೆದ್ದಾಗಿತ್ತು. ಸ್ವಾಮಿ ವಿವೇಕಾನಂದರ ಬಗ್ಗೆ ವ್ಯಕ್ತಿಗತವಾಗಿ ಶ್ರದ್ಧಾ ಭಾವವನ್ನೂ ಹೊಂದಿದ್ದೂ ನೆಹರೂರವರ ಹಿಂದುತ್ವ ವಿರೋಧೀ ನೀತಿಯು ಜಗಜ್ಜಾಹೀರಾಗಿತ್ತು. ಅವರು ಸ್ಮಾರಕ ನಿರ್ಮಾಣಕ್ಕಾಗಿ ಒಪ್ಪಿಗೆ ನೀಡಿ ತಮ್ಮ ಮೇಲೆ ಮೂಲಭೂತವಾದಿ ಎಂಬ ಮೊಹರೊತ್ತಿಸಿಕೊಳ್ಳಲು ಸಿದ್ಧರಿರಲಿಲ್ಲ. ಕೆಲವು ದಿನಗಳಲ್ಲೇ ಭಕ್ತವತ್ಸಲಂ ಜೊತೆ ನೆಹರೂರವರ ಭೇಟಿಯಾಗುವುದಿತ್ತು. ಅವರ ಕೇವಲ ಒಂದು ಶಬ್ದವೇ ಭಕ್ತವತ್ಸಲಂರನ್ನು ತಮ್ಮೆಡೆಗೆ ಸೆಳೆಯಲು ಸಾಕಿತ್ತು. ಆದರೆ ನೆಹರೂರನ್ನು ಭೇಟಿಯಾಗುವುದು ಹೇಗೆ? ಈಗ ಏಕನಾಥರ ದೃಷ್ಟಿ ಲಾಲ್ ಬಹದ್ದೂರ್ ಶಾಸ್ತ್ರಿಯವರತ್ತ ಹೋಯಿತು. ಶಾಸ್ತ್ರಿಯವರನ್ನು ಭೇಟಿಯಾದರು. ಶಾಸ್ತ್ರಿಯವರು ಕೂಡ "ನನ್ನ ದೇಹದ ಗಾತ್ರ ಚಿಕ್ಕದು, ನಾನು ನನ್ನದೇ ಆದ ಗತಿಯಲ್ಲಿ ಹಾಗು ನನ್ನದೇ ಆದ ರೀತಿಯಲ್ಲಿ ನಿಮಗೆ ಸಹಕರಿಸುತ್ತೇನೆ" ಎಂದರಂತೆ. ಕೆಲ ದಿನಗಳ ನಿರೀಕ್ಷೆಯ ನಂತರ ಏಕನಾಥರು ಕೆಲವು ಜನ ಸಂಸತ್ ಸದಸ್ಯರ ಹಸ್ತಾಕ್ಷರಗಳೊಂದಿಗೆ ಸಂಬಂಧಿತ ಮನವಿಯನ್ನು ನೆಹರೂರವರಿಗೆ ತಲುಪಿಸುವಂತೆ ಮಾಡಿದರೆ ಆಗ ಶಾಸ್ತ್ರಿಯವರ ಕೆಲಸಕ್ಕೆ ಅನುಕೂಲವಾಗಬಹುದೇ ಎಂದು ಶಾಸ್ತ್ರಿಯವರನ್ನು ಕೇಳಿದ್ದಕ್ಕೆ ಹೀಗೆ ಮಾಡಲು ಸಾಧ್ಯವಾದರೆ ಮುಂದಿನ ಹಾದಿ ಸುಗಮವಾಗುವುದೆಂದು ಲಾಲ್ ಬಹದ್ದೂರರು ಉತ್ತರಿಸಿದರು.
ಸಂಸತ್ ಅಧಿವೇಶನ ಆರಂಭವಾದೊಡನೆ ಏಕನಾಥರು ದಿಲ್ಲಿಯಲ್ಲಿ ತಳವೂರಿದರು. ಬೇರೆ ಬೇರೆ ಸಾಂಸದರನ್ನು ಪ್ರತ್ಯೇಕವಾಗಿ ಭೇಟಿಯಾದರು. ಎಲ್ಲ ಪಕ್ಷಗಳ, ಎಲ್ಲ ವಿಚಾರಧಾರೆಗಳ ಸಾಂಸದರು ಸ್ವಾಮಿ ವಿವೇಕಾನಂದರಲ್ಲಿ ಶ್ರದ್ಧೆ ಹೊಂದಿದವರಾಗಿದ್ದಾರೆ ಎಂಬುದು ಏಕನಾಥರಿಗೆ ತಿಳಿಯಿತು. ಈ ಅನುಕೂಲಕರ ಸ್ಥಿತಿಯಿಂದಾಗಿ 1963ರ ಡಿಸೆಂಬರ್ 24, 25 ಮತ್ತು 26 ಕೇವಲ ಈ ಮೂರು ದಿನಗಳ ಅವಧಿಯಲ್ಲಿ ಏಕನಾಥರು ಶಿಲಾಸ್ಮಾರಕದ ಪರವಾಗಿ 323 ಸಾಂಸದರ ಹಸ್ತಾಕ್ಷರಗಳನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾದರು .
ಸಮಾಜವಾದಿ ಸಾಂಸದರ ಹಸ್ತಾಕ್ಷರ ಪಡೆಯಲು ಡಾ.ರಾಮ ಮನೋಹರ ಲೋಹಿಯಾ ಸಹಾಯ ಮಾಡಿದರೆ ಕಮ್ಯುನಿಸ್ಟ್ ಪಕ್ಷದ ಸಾಂಸದರ ಹಸ್ತಾಕ್ಷರ ಪಡೆಯುವಲ್ಲಿ ರೇಣುಚಕ್ರವರ್ತಿಯವರೇ ಸ್ವತಃ ಮೊದಲಿಗರಾದರು. ಈ ವಿಜ್ಞಾಪನೆಯಲ್ಲಿ ಬರೀ ರಾಜ್ಯಗಳ, ಪಕ್ಷಗಳ, ಮಾತ್ರವಲ್ಲ, ಮುಸ್ಲಿಂ ಹಾಗೂ ಕ್ರಿಶ್ಚಿಯನ್ ಸಾಂಸದರ ಹಸ್ತಾಕ್ಷರಗಳೂ ಇದ್ದವು. ಈ ಹಸ್ತಾಕ್ಷರಗಳೊಂದಿಗೆ ಏಕನಾಥರು ಶಾಸ್ತ್ರೀಜಿ ಯವರನ್ನು ಭೇಟಿಯಾದಾಗ ಅದನ್ನು ನೋಡಿ ಅವರು ಚಕಿತರಾದರು. ಏಕನಾಥರಂತಹ ರಾಜಕೀಯೇತರ ಅಪ್ರಸಿಧ್ಧ ವ್ಯಕ್ತಿಯೊಬ್ಬರು ಇಷ್ಟು ಕಡಿಮೆ ಅವಧಿಯಲ್ಲಿ ಅದ್ಭುತ ಸಂಖ್ಯೆಯ ಸಾಂಸದರ ಹಸ್ತಾಕ್ಷರಗಳನ್ನು ಸಂಪಾದಿಸಿದ್ದು ಆಶ್ಚರ್ಯವಾಗಿತ್ತು .
ಪ್ರತ್ಯುತ್ತರವಾಗಿ ಶಾಸ್ತ್ರೀಜಿಯವರು 'ಈಗಿನ್ನು ನೀವು ನಿಶ್ಚಿಂತರಾಗಿರಿ. ಮುಂದಿನ ಕಾರ್ಯವನ್ನು ನಾನು ಮಾಡುತ್ತೇನೆ' ಎಂದರು. ಶಾಸ್ತ್ರೀಜಿಯವರ ಸೂಚನೆಯಂತೆ ಏಕನಾಥರು ಸಂಸತ್ತಿನ ವರಿಷ್ಠ ಸದಸ್ಯರಾದ ಶ್ರೀ ಬಾಪು ಅಣಿಯವರ ಮೂಲಕ ಈ ಹಸ್ತಾಕ್ಷರಗಳನ್ನೊಳಗೊಂಡ ಮನವಿ ಪತ್ರವನ್ನು ಔಪಚಾರಿಕ ರೀತಿಯಲ್ಲಿ ನೆಹರೂರವರಿಗೆ ತಲುಪಿಸಿದರು. ಈ ಮನವಿ ಪತ್ರವು ನೆಹರೂರವರ ಮೇಲೆ ಗಾಢವಾದ ಪ್ರಭಾವ ಬೀರಿತು ಹಾಗು ತಮ್ಮ ಮುಂದಿನ ಭೇಟಿಯಲ್ಲಿ ಭಕ್ತವತ್ಸಲಂರನ್ನು ಕಂಡು ತಮ್ಮ ಒಪ್ಪಿಗೆಯನ್ನೂ ಸೂಚಿಸಿದರು .
No comments:
Post a Comment