Feb 12, 2013

ಆ ಸಾಂಗತ್ಯದ ಅನುಭವವೇ ಒಂದು ಶಿಕ್ಷಣ, ಸಂಸ್ಕಾರ...

ಕೆಲ ವರ್ಷಗಳ ಹಿಂದೆ ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ನಡೆದ ಒಂದು ಸಮಾರಂಭದಲ್ಲಿ ಕಿರುತೆರೆ ನಿರ್ದೇಶಕ ಟಿ.ಎನ್.ಸೀತಾರಾಮ್ ತಮ್ಮ ಬಗ್ಗೆ ಹೇಳುವಾಗ 'ನನಗೆ ಜೀವನದಲ್ಲಿ ಇಬ್ಬರು ಗುರುಗಳು. ಒಬ್ಬರು ಪುಸ್ತಕಗಳನ್ನ ಓದಲು ಹೇಳಿಕೊಟ್ಟರೆ ಇನ್ನೊಬ್ಬರು ಯಾವ ಯಾವ ಪುಸ್ತಕಗಳನ್ನ ಓದಬೇಕು ಅಂತ ಹೇಳಿಕೊಟ್ಟರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಪ್ರಚಾರಕರಾದ ನ.ಕೃಷ್ಣಪ್ಪನವರು ಪುಸ್ತಕಗಳನ್ನ ಓದುವ ಹವ್ಯಾಸಕ್ಕೆ ಪ್ರೇರಣೆ ಕೊಟ್ಟರೆ, ಪತ್ರಕರ್ತ ಲಂಕೇಶ್ ರವರು ಪುಸ್ತಕಗಳ ಆಯ್ಕೆಗೆ ಕಾರಣರಾದರು' ಎಂದು ಹೇಳಿದ್ದು ನನಗೆ ನೆನಪಿದೆ. ಸೀತಾರಾಂರವರಿಗೆ ಸಿಕ್ಕಿದ ಗುರುಗಳ ಸ್ಥಾನಗಳು ಅದಲು ಬದಲಾಗಿದ್ದರೆ ಇನ್ನು ಚೆನ್ನಾಗಿರುತ್ತಿತ್ತು ಎಂದು ಆ ತಕ್ಷಣ ಕೆಲವರು ಅಂದುಕೊಂಡಿದ್ದು ಉಂಟು.

ಕಳೆದ ಹಲವಾರು ವರ್ಷಗಳಿಂದ ಕ್ಯಾನ್ಸರ್ ನ 'ಸ್ನೇಹಿತ'ರಾಗಿರುವ ನ.ಕೃಷ್ಣಪ್ಪನವರ ಬಗೆಗೆ ಹಾಗೂ ಕ್ಯಾನ್ಸರನ್ನು ಗೆದ್ದಿರುವ,  ಅದರ ಜೊತೆಗೆ ಸಹಜವಾಗಿ ಬದುಕುತ್ತಿರುವ ಇನ್ನು ಕೆಲವರ ಬಗೆಗೆ ಬರೆದಿರುವ ಸಂಗ್ರಹಯೋಗ್ಯವಾದ, ಕ್ಯಾನ್ಸರ್ ನನ್ನು 'ಅಪ್ಪಿ'ಕೊಂಡಿರುವವರಿಗೆ ಸ್ಥೈರ್ಯ ತುಂಬುವ ಸಲುವಾಗಿ ಬರೆದಿರುವ 'ಮೃತ್ಯುಮಿತ್ರ' ಪುಸ್ತಕಕ್ಕೆ ಟಿ.ಎನ್.ಸೀತಾರಾಮ್ ರವರು ಬರೆದ ಮುನ್ನುಡಿ ಈಗ್ಗೆ ಕೆಲ ದಿನಗಳ ಹಿಂದೆ ಓದಿದಾಗ ಬಹಳ ಖುಷಿಯಾಯಿತು. ಸೈದ್ಧಾಂತಿಕವಾಗಿ ಬೇರೆ ಬೇರೆ ದಿಕ್ಕಿನಲ್ಲಿದ್ದರೂ ಇಬ್ಬರು ಹಿರಿಯರ ನಡುವಿನ ಉತ್ತಮ ಸಂಬಂಧ, ಎಡಪಂತೀಯ - ಬಲಪಂತೀಯ ಎಂದು 'ವೈಯಕ್ತಿಕ' ದ್ವೇಷಗಳನ್ನು ಕಾರುತ್ತಿರುವ ಕೊಳಕು ಮನಸ್ಸುಗಳಿಗೆ ಮೇಲ್ಪಂಕ್ತಿಯಾಗಿದೆ. 

ಶ್ರೀಯುತ ಕೃಷ್ಣಪ್ಪನವರ ಬಗೆಗೆ, ಅವರು ಚೆನ್ನಾಗಿರಲಿ ಎಂದು ಪ್ರಾರ್ಥಿಸುವ, ಅವರ ಆಶೀರ್ವಾದ ನಮ್ಮ ಮೇಲೆ ಎಂದೂ ಇರಲಿ ಎಂದು ಕೇಳಿಕೊಳ್ಳುವ ದೊಡ್ಡ ಬಳಗವೇ ಇದೆ. ಸಂಘದ ಪ್ರಚಾರಕರ ಮೇಲ್ಪಂಕ್ತಿಯೇ ಹಾಗೆ. ಆ ಸಾಂಗತ್ಯದ ಅನುಭವವೇ ಒಂದು ಶಿಕ್ಷಣ, ಸಂಸ್ಕಾರ. ಆದರೆ ಅದನ್ನು ಬರಮಾಡಿಕೊಳ್ಳುವ ಮನಸ್ಸಿರಬೇಕಷ್ಟೆ. 

ಪುಸ್ತಕದ ಮುನ್ನುಡಿಯನ್ನು ನನ್ನ ಬ್ಲಾಗ್ ನಲ್ಲಿ ಇರಿಸಿಕೊಳ್ಳುವ ಕಾರಣಕ್ಕಷ್ಟೇ ಈ ಲೇಖನ. 

ನೆಚ್ಚಿನ ಕೃಷ್ಣಪ್ಪನವರಿಗೆ ಪ್ರಣಾಮಗಳು.

ನೆನಪಿದೆಯಾ? ಕೃಷ್ಣಪ್ಪನವರೆ ಹೀಗೆ ಪತ್ರ ಶುರು ಮಾಡುವುದನ್ನು ನೀವೇ ನನಗೆ ಕಲಿಸಿಕೊಟ್ಟಿದ್ದು. 1932ರಲ್ಲಿ ನಾನಿನ್ನೂ ಚಿಕ್ಕ ಹುಡುಗ. ಮಿಡ್ಲ್‌ಸ್ಕೂಲ್‌ನಲ್ಲಿ ಓದುತ್ತಿದ್ದೆನೆಂದು ನೆನಪು. ಯಾವುದೋ ಅನಾರೋಗ್ಯಕ್ಕೆ ನನ್ನನ್ನು ಚಿಕ್ಕಬಳ್ಳಾಪುರದ ಮಿಷನ್ ಆಸ್ಪತ್ರೆಗೆ ಸೇರಿಸಿದ್ದರು. ಅಲ್ಲಿ ನನ್ನ ವಿಳಾಸಕ್ಕೆ ನೀವು ನೆಚ್ಚಿನರಾಜ, ಅಕ್ಕರೆಯ ನೆನಪುಗಳು ಎಂದು ರುಜು ಮಾಡಿ 9 ಪುಟಗಳ ಒಂದು ಪತ್ರ ಬರೆದಿದ್ದಿರಿ (ಮನೆಯಲ್ಲಿ ನನ್ನನ್ನುರಾಜ ಎಂದು ಕರೆಯುತ್ತಿದ್ದರು). ನನ್ನನ್ನುಅದಕ್ಕೆ ಮುಂಚೆ ನೀವು 5-6 ಬಾರಿ ನಮ್ಮ ಮನೆಯ ಹತ್ತಿರವಿದ್ದ ಮೈದಾನದಲ್ಲಿ ನೋಡಿದ್ದೀರಿ ಅಷ್ಟೆ. ಆದರೆ ನಾನು ಯಾತನೆಯಿಂದ ಮನಸ್ಸೆಲ್ಲ ಮಂಕಾಗಿ ಮಲಗಿದ್ದಾಗ – ಒಬ್ಬ 10 ವರ್ಷದ ಚಿಕ್ಕ ಹುಡುಗನಿಗೆ ಅಂತಃಕರಣ, ವಿಶ್ವಾಸ ಮತ್ತು ಭರವಸೆತುಂಬಿದ 9 ಪುಟದ ಪತ್ರ ಬರೆದಿದ್ದಿರಿ. ಖಾಯಿಲೆ ಬಿದ್ದಿರುವ ಚಿಕ್ಕಅಪರಿಚಿತ ಹುಡುಗನ ಮೇಲೆ ಯಾರು ತೋರಿಸುತ್ತಾರೆ ಅಂಥ ವಿಶ್ವಾಸ ಈ ಕಾಲದಲ್ಲಿ? ಆ ಪತ್ರ ಬಂದಾಗ ಖಾಯಿಲೆಯಿಂದ ಮಲಗಿದ್ದ ನಾನು ಅಪರೂಪದ ಸಂಭ್ರಮ ಪಟ್ಟಿದ್ದೆ. ನನಗೆ ಮೊದಲ ಪತ್ರವಿರಬೇಕು. ಪತ್ರದ ತುಂಬಾ ಅಂತಃಕರಣ, ಸುಂದರ ಅಕ್ಷರಗಳು, ಸ್ವಚ್ಛ ಭಾಷೆ. ಅಂಥ ಪತ್ರವನ್ನು ನಾನು ಮುಂಚೆ ನೋಡಿಯೂ ಇರಲಿಲ್ಲ. ಆಮೇಲೆ ನಮ್ಮ ಮನೆಯಲ್ಲಿ ಎಷ್ಟೋ ವರ್ಷ ನಿಮ್ಮ ಪತ್ರದ್ದೇ ಮಾತು. ಪತ್ರ ಬರೆದರೆ ಕೃಷ್ಣಪ್ಪನವರಥರ ಬರೆಯಬೇಕು ಎಂದು ಎಲ್ಲರೂ ಅಂದುಕೊಳ್ಳುವಷ್ಟು ಸುಂದರವಾಗಿತ್ತು ನಿಮ್ಮ ಪತ್ರ. ಪಾಯಶಃ ನಿಮ್ಮ ಪತ್ರದ ಭಾಷೆ ಮತ್ತು ಅಂತರ್ಗತ ಭಾವ ಕೋಶತೆ ನನ್ನನ್ನು ಸಾಹಿತ್ಯ ಮತ್ತು ಕಲೆಯಕಡೆ ಸೆಳೆದವು ಎಂದು ನನ್ನ ಭಾವನೆ.

ನಿಮಗೇ ಗೊತ್ತು ನಮ್ಮ ತಂದೆ ಕಾಂಗ್ರೆಸ್‌ನವರು.ತುಂಬಾ ಶಿಸ್ತಿನ ಮನುಷ್ಯರು. ಹಳೆಯ ಕಾಂಗ್ರೆಸ್‌ನವರಿಗೆ ಸಂಘದವರನ್ನು ಕಂಡರೆ ಕೋಪವಿರುತ್ತಿದ್ದ ದಿನಗಳು. ಅಂಥಾ ನಮ್ಮ ಮನೆಯಲ್ಲಿಕೂಡ ನಿಮ್ಮನ್ನು ಕಂಡರೆ ನಮ್ಮ ಮನೆಯಎಲ್ಲರಿಗೂ ಎಷ್ಟು ಪ್ರೀತಿ ವಿಶ್ವಾಸ. ನೆನಪಿದೆಯಾ?ಅಷ್ಟು ವಿಶ್ವಾಸ, ಅಂತಃಕರಣತಮ್ಮಲ್ಲಿಕಾಣುತ್ತಿದ್ದೆವು ನಾವು. 

ನೀವು ನಂಬಿದ ಸಂಘಟನೆಯ ಸೈದ್ಧಾಂತಿಕ ತತ್ವಗಳಿಗೆ ನಾನು ಬಹುದೂರ ಹೋಗಿ ಸಮಾಜವಾದಿ ಪಕ್ಷಕ್ಕೆ ಸೇರಿದಾಗಲೂ ನಿಮ್ಮ ಬಗೆಗಿನ ವೈಯಕ್ತಿಕಗೌರವ ನನಗೆ ಕಿಂಚಿತ್ತೂ ಕಡಿಮೆಯಾಗಲಿಲ್ಲ. ಅಂಥದೊಡ್ಡ ವ್ಯಕ್ತಿ ನೀವು. ಆಗ ನಿಮಗೆ 28-30 ವಯಸ್ಸು ಅನಿಸುತ್ತೆ. ದೇಹದ ಮತ್ತು ಬದುಕಿನ ಆಕರ್ಷಣೆಯ ವಿರುದ್ಧ ಹೋರಾಟ ಮಾಡುವುದು ಸುಲಭದ ಮಾತಲ್ಲ. ಆದರೆ ಆ ವಯಸ್ಸಿನಲ್ಲಿ ನೀವು ಎಂಥ ನಿಸ್ಪೃಹ ಬದುಕು ಬದುಕುತ್ತಿದ್ದಿರಿ ಎಂದು ಅನೇಕ ವರ್ಷಗಳ ನಂತರ ನನಗೆ ಅರಿವಾಗತೊಡಗಿತು. ಈ ಸಮಾಜಕ್ಕೆ ನನ್ನ ಬದುಕು ಅರ್ಪಣೆ ಎಂದು ಆತ್ಮವಿಶ್ವಾಸದ ನಗೆ ಬೀರುತ್ತಾ ಹೇಳುತ್ತಿದ್ದಿರಿ. ನಿಮ್ಮಔಷಧಿಗಾಗಿ ಕೊಂಡುಕೊಂಡ ಆಗಿನ ಮೂರು ಪೈಸೆಯ ಒಂದು  ನಿಂಬೆಹಣ್ಣಿನ ಲೆಕ್ಕ ಕೂಡ ಬರೆದುಕೊಳ್ಳುತ್ತಿದ್ದಿರಿ. ಅದನ್ನು ನಿಮ್ಮ ಕೇಂದ್ರ ಶಾಖೆಗೆ ಕಳುಹಿಸುತ್ತಿದ್ದರೋ ಏನೋ ಗೊತ್ತಿಲ್ಲ. ಅಷ್ಟು ನಿಸ್ಪೃಹ ಮನುಷ್ಯರು ನೀವು. ನಾನು ಮೆಚ್ಚುವ ಗಾಂಧಿಯಂತ ಅತ್ಯಂತ ಸರಳ ಬದುಕನ್ನು ಬದುಕಿದ ಮನುಷ್ಯ ನೀವು. ಕೃಷ್ಣಪ್ಪನವರೆ ನಿಮ್ಮ ಬುದ್ಧಿಶಕ್ತಿಗೆ, ನಿಮ್ಮ ವಿದ್ಯಾಭ್ಯಾಸಕ್ಕೆ ನಿಮ್ಮ ಚಮಕಿಗೆ ನೀವು ಸುಲಭವಾಗಿ ಐಎಎಸ್ ಮಾಡಿ ದೊಡ್ಡ ಅಧಿಕಾರಿಯಾಗಬಹುದಿತ್ತು. ಏನು ಬೇಕಾದರೂ ಆಗಬಹುದಿತ್ತು. ಆದರೆ ನೀವು ಅದೆಲ್ಲವನ್ನು ಧಿಕ್ಕರಿಸಿ ಸಂಘಟನೆಗೆ ನಿಮ್ಮನ್ನು ಸಮರ್ಪಿಸಿಕೊಂಡಿರಿ.

ನಿಮ್ಮ ಸಂಘಟನೆಯ ಬಗ್ಗೆ ನನ್ನದೇ ಆದ ವಿರೋಧವಿದೆ. ಭಾರತವನ್ನು ಅಮೆರಿಕಾದ ಮಡಿಲಲ್ಲಿ ಇಡಲು ಕಾರಣವಾದ ಸಂಘಟನೆ ಎಂಬ ಆಳದ ಸಿಟ್ಟು ಇದೆ. ಆರ್ಥಿಕ ಸಮಾನತೆಯ ಬಗ್ಗೆ ಚಕಾರವೆತ್ತದೆ ಧರ್ಮದ ವಿಚಾರದಲ್ಲಿ ಮಾತ್ರ ಉದ್ವಿಗ್ನರಾಗುವವರು ಎಂಬ ಆಕ್ಷೇಪಣೆ ನನ್ನದು. ನಾನು ಸೈದ್ಧಾಂತಿಕವಾಗಿ ಬೇರೆದಾರಿ ಹಿಡಿದರೂ ಕೂಡ ಇಂದಿಗೂ ನನ್ನ ಮನಸ್ಸಿನಲ್ಲಿ ಮತ್ತು ಹೃದಯಲ್ಲಿ ಅತ್ಯಂತ ಆತ್ಮೀಯ ಗುರುವಿನಂತೆ ನಿಂತವರಲ್ಲಿ ನೀವು ಮೊದಲಿಗರು. ನಾನು ದೂರ ಹೋದೆನೆಂದು ಕೋಪಗೊಂಡವರು ನೀವಲ್ಲ. ಬದಲಿಗೆ ಎಷ್ಟೋ ವರ್ಷಗಳ ನಂತರ ಮಾಯಾಮೃಗ ತೆಗೆದದ್ದು ನಾನೇ ಎಂದುಗೊತ್ತಾದಾಗ ನನ್ನನ್ನು ಹುಡುಕಿಕೊಂಡು ಬಂದು ಆತ್ಮೀಯವಾಗಿ ಅಪ್ಪಿಕೊಂಡು ಹೆಮ್ಮೆಪಟ್ಟ ಬಂಧು ನೀವು.

ನಾನು ಜೀವನದಲ್ಲಿ ಮೊದಲು ಓದಿದ ಕಾದಂಬರಿ ಭೈರಪ್ಪನವರ ಧರ್ಮಶ್ರೀಯನ್ನು ನಾನು ಹೈಸ್ಕೂಲಿನಲ್ಲಿದ್ದಾಗ ಓದಿಸಿದವರು ನೀವು. ಶಿವರಾಮ ಕಾರಂತರ ಕಾದಂಬರಿ ಓದಿಸಿದವರು ನೀವು. ಜೆ.ಪಿ.ಯವರ ಪುಸ್ತಕ ಕಮ್ಯುನಿಸಂ ನಿಂದ ಸೋಷಿಲಿಸಂವರೆಗೆ ಎಂಬ ಪುಸ್ತಕ ಓದಿಸಿ ರಾಜಕೀಯ ಚಿಂತನೆಯನ್ನು ನನ್ನಲ್ಲಿ ಶುರು ಮಾಡಿದವರು ನೀವು. ನಿಮ್ಮ ಬಗ್ಗೆ ನನಗೆ ತೀರಿಸಲಾಗದ ಋಣವಿದೆ.

ನನ್ನ ಅಮ್ಮ ಸಾವಿನ ಅಂತ್ಯದಲ್ಲಿ ನರಳುತ್ತಾ ಮಲಗಿದ್ದಾಗ ನೀವು ಅವರನ್ನು ಭೇಟಿ ಮಾಡಿ ಮನೆಯವರಿಗೆ ಧೈರ್ಯ ಕೊಟ್ಟಿದ್ದೀರಿ. ಇಡೀ ಬದುಕಿನಲ್ಲಿ ಇಷ್ಟೊಂದು ಮಾನವೀಯತೆಯನ್ನು, ಆತ್ಮೀಯತೆಯನ್ನುಇಟ್ಟುಕೊಂಡ ಮನುಷ್ಯರನ್ನು ನಾನು ನೋಡಿದ್ದು ಕಡಿಮೆ ನೀವು, ನಿಮ್ಮ ಬದುಕು ಸಹೃದಯರಿಗೆ ಒಂದು ಪಠ್ಯ ಪುಸ್ತಕ.

ನಿಮ್ಮ ಈಗಿನ ಪುಸ್ತಕ ಓದುತ್ತಾ ಹೋದಂತೆ ನನ್ನಲ್ಲಿ ಈ ನೆನಪುಗಳೆಲ್ಲಾ ಬಂದವು. ಅಂಥಎಲ್ಲ ಸಂತೋಷಕರ ನೆನಪುಗಳಿಗಾಗಿ ನಿಮಗೆ ನನ್ನ ಅನಂತಾನಂತ ಕೃತಜ್ಞತೆಗಳು.

ಟಿ.ಎನ್.ಸೀತಾರಾಮ್
--------------------

ವಿಚಾರದ ವಿಭಿನ್ನತೆಯ ಕಾರಣಕ್ಕೆ ವೈಯಕ್ತಿಕ ದ್ವೇಷವನ್ನು ಬೆಳೆಸಿ, ಪೋಷಿಸಿಕೊಂಡು ಪರಸ್ಪರ ಕೆಸರೆರಚಿಕೊಳ್ಳುವವರ,  ಭಾಗವಹಿಸುವ ಎಲ್ಲ ವೇದಿಕೆಗಳ ಮೇಲೆ 'ಪರನಿಂದೆ'ಯನ್ನೇ ಕರ್ತವ್ಯವನ್ನಾಗಿಸಿಕೊಂಡವರ ಮಧ್ಯೆ ಸೀತಾರಾಮ್ - ಕೃಷ್ಣಪ್ಪನವರ ಸ್ನೇಹ ನಂಬಲಸಾಧ್ಯವಾದ ವಾಸ್ತವ ಎಂದರೆ ಅತಿಶಯೋಕ್ತಿಯಲ್ಲ.

1 comment: