Dec 9, 2011

ಆರೆಸ್ಸೆಸ್ ಮತ್ತು ಭಾಜಪದ ಸಂಬಂಧ: ಸಜ್ಜನ ಹಿಂದೂಸಮಾಜದ ಕಳಕಳಿ


ಕೆಲ ದಿನಗಳ ಹಿಂದೆ ಮತ್ತೊಂದು ಹೊಸ 'ಆರೋಪ ಸುದ್ದಿ' ಚಾಲ್ತಿಗೆ ಬಂದಿತ್ತು. ಅದು ಯಡಿಯೂರಪ್ಪನವರು 'ಹೊಸ ದಿಗಂತ' ಎಂಬ ದಿನಪತ್ರಿಕೆಗೆ ನೀಡಿದ ಅಪಾರ ಕೊಡುಗೆಗಳ ಬಗ್ಗೆ. ಯಡ್ಡಿಯವರು ಆರೆಸ್ಸೆಸ್ ನ ಜೊತೆ ಗುರುತಿಸಿಕೊಂಡಿರುವ ಒಂದೇ ಕಾರಣಕ್ಕೆ, ಇದನ್ನೇ ಆಧಾರವಾಗಿಟ್ಟುಕೊಂಡು ಸಂಘಪರಿವಾರದ ವಿರುದ್ಧ ಮಾತಾಡಲು, ಬರೆಯಲು, ಸುದ್ಧಿ ಹಬ್ಬಿಸಲು, ಆ ಮೂಲಕ 'ಹೆಸರುವಾಸಿ'ಯಾಗಲು, ಪ್ರಶಸ್ತಿ -ಅನುದಾನಗಳನ್ನು 'ಸಂಪಾದಿಸಲು' ದೇಶದಲ್ಲಿ ಬಹಳ ದೊಡ್ಡ ದೊಡ್ಡ 'ಸಂಘಟನೆ'ಗಳೇ ಇವೆ. ಅವಕ್ಕೇನು ಕೊರತೆಯಿಲ್ಲ. ಇವುಗಳ ಹಿಂದಿನ ಹೇಸಿಗೆ ರಾಜಕಾರಣ ಎಲ್ಲರಿಗು ಗೊತ್ತಿರುವಂಥದ್ದೇ.

ಆದರೆ ಯಡಿಯೂರಪ್ಪ ಅಧಿಕಾರಕ್ಕೆ ಬಂದಾಗಲೇ 'ಹೊಸ ದಿಗಂತ ' ಪತ್ರಿಕೆ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು ಸಾಧ್ಯವಾದದ್ದು ಎಂಬುದು ನಿಜವಾಗಿರಬಹುದು. ಯಡಿಯೂರಪ್ಪನವರು ಜೈಲಿನಿಂದ ಬಿಡುಗಡೆಯಾದ ಮರುದಿನದ 'ಹೊಸದಿಗಂತ' ಪತ್ರಿಕೆಯ ಮುಖಪುಟದ ಶೀರ್ಷಿಕೆ ಕೂಡ ಇದಕ್ಕೆ ಪುಷ್ಟಿ ನೀಡುವಂತಿರಬಹುದು. ಹಾಗು ಅದೇ ಯಡಿಯೂರಪ್ಪಾಧಿಕಾರದ ಸಮಯದಲ್ಲೇ ಆರೆಸ್ಸೆಸ್ಸಿನ ಜತೆ ಗುರುತಿಸಿಕೊಂಡವರು ಕೆಲವರು 'ತಮ್ಮ ಆರೆಸ್ಸೆಸ್ ತನವನ್ನು' ಬಳಸಿ ಭಾಜಪದ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡಿರುವುದಕ್ಕೆ ಆರೆಸ್ಸೆಸ್ ಗೆ ಮುಜುಗರವಾಗಿರುವುದು ಸತ್ಯವಾದರೂ ಅದಕ್ಕೆ ಆರೆಸ್ಸಸ್ಸನ್ನು ಹೊಣೆಯಾಗಿಸಲು ಸಾಧ್ಯವಿಲ್ಲ. ಅದು ಪರಮ ಮೂರ್ಖತನವಾದೀತು. ಆದರೆ ಪಂಚಾಯಿತಿ ಮಟ್ಟದ ಅಥವಾ ತಾಲ್ಲೂಕು ಮಟ್ಟದಲ್ಲೇ ತಮ್ಮ 'ಭ್ರಷ್ಟತೆಯನ್ನು ಸಾಬೀತು' ಪಡಿಸುವವರಿಗೆ ಜಿಲ್ಲಾಮಟ್ಟಕ್ಕೆ, ರಾಜ್ಯಮಟ್ಟಕ್ಕೆ ಹೋಗುವ ಅವಕಾಶವನ್ನು ನೀಡದಿರುವಲ್ಲಿ ಆರೆಸ್ಸೆಸ್ ಪ್ರಮುಖ ಪಾತ್ರ ವಹಿಸಬೇಕಾದ ಅವಶ್ಯಕತೆ ಈ ದೇಶದ ಸಜ್ಜನ ಹಿಂದೂ ಸಮಾಜದ ಅವಶ್ಯಕತೆಯೇ ಆಗಿದೆ.



ಆರೆಸ್ಸೆಸ್ ಮಾಡುತ್ತಿರುವ ಸೇವಾ ಕೆಲಸಗಳು, ಹಿಂದೂ ಸಂಘಟನೆ ಹಾಗು ಅದಕ್ಕೆ ಪೂರಕವಾದ ಎಲ್ಲ ಕೆಲಸಗಳು ಖಂಡಿತ ಈ ದೇಶಕ್ಕೆ ಅವಶ್ಯ, ಅನಿವಾರ್ಯ. ಈ ವಿಷಯವನ್ನು ಸಾಕಷ್ಟು ಕಾಂಗ್ರೆಸ್ಸಿಗರೂ ವೈಯಕ್ತಿಕವಾಗಿ ಒಪ್ಪುತ್ತಾರೆ. ಅಷ್ಟೇ ಅಲ್ಲ ರಹಸ್ಯವಾಗಿ ಪ್ರೋತ್ಸಾಹಿಸುತ್ತಾರೆ ಕೂಡ. ಆದರೆ ಕಾಂಗ್ರೆಸ್ಸಿನಲ್ಲಿನ 'ಅಸ್ತಿತ್ವದ' ಪ್ರಶ್ನೆಯ ಕಾರಣಕ್ಕೆ ಅದನ್ನು ಸಾರ್ವಜನಿಕವಾಗಿ ತೋರಿಸಿಕೊಳ್ಳುವುದಿಲ್ಲವಷ್ಟೇ. ಅವರ ಅಸಹಾಯಕತೆ ನಮಗೆ ಅರ್ಥವಾಗುತ್ತದೆ. ಪಾಪ..!

ಆದರೆ ಆರೆಸ್ಸೆಸ್ 'ಮಾಡದಿರುವ' ಕೆಲಸದ ಹಾಗು ಅದರ ಪರಿಣಾಮಗಳ ಬಗ್ಗೆ ಸಮಾಜದ ಹಲವರಲ್ಲಿ ವ್ಯಕ್ತವಾಗಿರುವ ಅಭಿಪ್ರಾಯಗಳು ಆರೆಸ್ಸೆಸ್ಸಿನ ನಿಷ್ಠಾವಂತ ಕಾರ್ಯಕರ್ತರಲ್ಲೇ ಚಿಂತೆಗೆ ಕಾರಣವಾಗಿರುವುದು ನಿಜ. ತಮ್ಮ ಮನೆಯ ಮಕ್ಕಳ ತಪ್ಪಿಗೆ ತಾವೇ ಮೊದಲು ದಂಡಿಸಬೇಕೆ ಹೊರತು ಬೇರೆಯವರು ದಂಡಿಸಲು ಅವಕಾಶ ಕೊಡಬಾರದು ಎಂಬುದು ಆರೆಸ್ಸೆಸ್ಸಿನಲ್ಲೇ ಆಡುವ ಮಾತು. ಅದೇ ತರಹದಲ್ಲಿ ಆರೆಸ್ಸೆಸ್ಸಿನ ಕಾರ್ಯಕರ್ತರಾದ ಕಾರಣಕ್ಕೆ, ಕೆಲ ತಿಂಗಳುಗಳ ಕಾಲ ಪೂರ್ಣಾವಧಿ ಕಾರ್ಯಕರ್ತರಾದ ಕಾರಣಕ್ಕೆ, ಭಾಜಪದಲ್ಲಿ ಸೀಟು ಗಿಟ್ಟಿಸಿಕೊಂಡವರು, 'ಸ್ವಯಂಸೇವಕನು' ಮಾಡಬಾರದ್ದನ್ನು ಮಾಡುತ್ತಿದ್ದರೂ ಸಂಘದ ಹಿರಿಯರು ಬರೇ 'ಸಲಹೆ - ಸೂಚನೆ'ಗಳಿಗೆ ಸೀಮಿತವಾದದ್ದು ಮಾತ್ರ ಆರೆಸ್ಸಸ್ ನ ಅಸಹಾಯಕತೆಯನ್ನು ತೋರಿಸುತ್ತದೆ. ಅಧಿಕಾರವೇರಿದ ಒಬ್ಬ ಸ್ವಯಂಸೇವಕನನ್ನು ಅವನ ಚಾರಿತ್ರ್ಯದ ಆಧಾರದ ಮೇಲೆ ನಿಯಂತ್ರಣ ಮಾಡುವ ಇಚ್ಛೆ ಅಥವಾ ಅವಕಾಶ ಸಂಘಕ್ಕೆ ಇಲ್ಲದಿದ್ದರೂ ಅವನಿಂದ ಬರೇ ಉತ್ತಮ ಆಡಳಿತವನ್ನು ಅಪೇಕ್ಷಿಸುವ ಈ ಅಸಹಾಯಕತೆಗೆ ಉತ್ತರ?



ಪ್ರಸ್ತುತ ಸಮಯದಲ್ಲಿ ಆರೆಸ್ಸೆಸ್ಸಿನ ಸಾಮಾನ್ಯ ಕಾರ್ಯಕರ್ತ ಅಥವಾ ಸಜ್ಜನ ಹಿಂದೂ ಸಮಾಜದ ವರ್ಗ ಬಯಸುವುದು, ಆರೆಸ್ಸಸ್ ಖಡಾಖಂಡಿತವಾಗಿ ಬಿಜೆಪಿಯನ್ನು ತನ್ನ ಪರಿವಾರವಲ್ಲ ಎಂದು ಘೋಷಿಸುವುದು ಅಥವಾ 'ಸ್ವಯಂಸೇವಕತ್ವ'ವನ್ನು ಕಾಪಾಡಿಕೊಳ್ಳಲಾಗದವರನ್ನು ಮುಲಾಜಿಲ್ಲದೆ ಭಾಜಪದಿಂದ ಹೊರಹಾಕಿ 'ತಾನು ನಿರ್ಮಾಣ' ಮಾಡಿದ ವ್ಯಕ್ತಿಯನ್ನು ಆ ಜಾಗಕ್ಕೆ ತಂದು ಕೂರಿಸುವುದು. ಹೊಸ ವ್ಯಕ್ತಿಗಳಿಂದ ಅಧಿಕಾರಕ್ಕೆ ಬರಲು ಕಷ್ಟವಾಗಬಹುದು ಹಾಗು ಅಧಿಕಾರಕ್ಕೆ ಬಂದ ಮೇಲೆ ಹೊಸಬರೂ ಸಹ ತಪ್ಪು ಹಾದಿ ತುಳಿಯಬಹುದು. ಅಧಿಕಾರಕ್ಕೆ ಬರಲು ಸಾಧ್ಯವೋ ಅಲ್ಲವೋ, ಕಷ್ಟವೋ ನಷ್ಟವೋ, ಸಚ್ಚಾರಿತ್ರ್ಯ ವ್ಯಕ್ತಿಗಳಿಗೆ ಮಾತ್ರ ಅವಕಾಶ ನಿಡಿದಾಗ ಮಾತ್ರ ಆರೆಸ್ಸೆಸ್ ತನ್ನ ಮೇಲೆ ಸಮಾಜದ ಸಜ್ಜನ ವರ್ಗ ಇಟ್ಟಿರುವ ನಂಬಿಕೆಯನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ.

ಸಾಮಾನ್ಯ ಸ್ವಯಂಸೇವಕನಾಗಿದ್ದಾಗ ಅತ್ಯಂತ ಒಳ್ಳೆಯ ಚಾರಿತ್ರ್ಯವುಳ್ಳ ವ್ಯಕ್ತಿಯಾಗಿದ್ದವ ಅಧಿಕಾರಕ್ಕೆ ಬಂದ ಕೂಡಲೇ ಆಸ್ತಿವಂತನಾಗುತ್ತಾನೆ. ಸಂಘದ ಜವಾಬ್ದಾರಿಯಿದ್ದವ 'ಭಾಜಪದ ಅಧಿಕಾರವುಳ್ಳವ'ನಾಗುತ್ತಾನೆ ಎಂದರೆ, ಸಾಮಾನ್ಯ ವ್ಯಕ್ತಿಯಾಗಿ 'ಅಧಿಕಾರ ಏರುವವ'ನಿಗೂ, ಒಬ್ಬ ಸ್ವಯಂಸೇವಕನಾಗಿ 'ಅಧಿಕಾರ ಏರುವವ'ನಿಗೂ ಏನು ವ್ಯತ್ಯಾಸ? ಹಾಗಿದ್ದಾಗಲೂ ಆ ವ್ಯಕ್ತಿಗೆ ಸಂಘದ ಪೋಷಣೆ ಸಿಕ್ಕಿದರೆ ಅವನಿಗೆ ಎಂದಿಗೂ ತನ್ನ ತಪ್ಪಿನ ಅರಿವಾಗುವುದಿಲ್ಲ. ಅವನಿಗೆ 'ಅಪರಾಧಿತನ' ಕಾಡುವುದಿಲ್ಲ. ಅವನು ತನ್ನ ತಪ್ಪನ್ನು ತಿದ್ದಿಕೊಳ್ಳುವುದಿಲ್ಲ.



ಯಾವಾಗ ತನ್ನ ತಪ್ಪಿನ ಕಾರಣಕ್ಕೆ ಆರೆಸ್ಸೆಸ್ ನನ್ನನ್ನು ಉಪೇಕ್ಷಿಸುತ್ತದೆ ಎಂದೆನಿಸುತ್ತದೋ ಆಗ ತಪ್ಪಿತಸ್ಥನಿಗೆ ಯಾವುದೋ ಮಟ್ಟದ ಹಿಂಜರಿಕೆ ಆಗುವುದು ಖಂಡಿತ. ಮತ್ತೊಮ್ಮೆ ಅವನು ಸಾಮಾನ್ಯ ಸ್ವಯಂಸೇವಕನ ಮಟ್ಟದಿಂದ ತನ್ನ ಚಾರಿತ್ರ್ಯವನ್ನು ಸಾಬೀತು ಪಡಿಸಿ ಭಾಜಪಕ್ಕೆ ಬರಲು ಪ್ರಯತ್ನಿಸುತ್ತಾನೆ. ಆರೆಸ್ಸೆಸ್ ಏನು ಮಾಡುತ್ತದೆ ಎಂಬುದನ್ನು ಸಮಾಜ ನೋಡುವುದು ಸ್ವಯಂಸೇವಕರ ಮೂಲಕವೇ. ಅದು ಸ್ಥಳೀಯ ಸ್ವಯಂಸೇವಕರ ಮೂಲಕ. ಇನ್ನೂ ಮುಖ್ಯವಾಗಿ ಸ್ಥಳೀಯ 'ಅಧಿಕಾರಸ್ಥ ಸ್ವಯಂಸೇವಕರ' ಮೂಲಕ. ಆ ಜಾಗಕ್ಕೆ ನಾವು ಸರಿಯಾದವರನ್ನು ನಿಲ್ಲಿಸದಿದ್ದರೆ 'ಅಧಿಕಾರಕ್ಕೆ ಬಂದ ನಂತರ ಸ್ವಯಂಸೇವಕನೂ ಒಂದೇ, ಇತರರೂ ಒಂದೇ' ಎಂದಾಗುತ್ತದೆ. ಸಂಘಟನಾ ಕೌಶಲ, ಮಾತಿನ ಕೌಶಲ, ಹಣದ ಸಾಮರ್ಥ್ಯ, ಸಂಪರ್ಕ ಸಾಮರ್ಥ್ಯ ಇವೆಲ್ಲವೂ ಚಾರಿತ್ರ್ಯದ ನಂತರದ ಸ್ಥಾನವನ್ನು ಪಡೆಯುವಂತಾದರೆ ಮಾತ್ರ ಭಾಜಪದಲ್ಲಿ ಸಜ್ಜನರು ಇರಲು ಹಾಗು ಸಜ್ಜನರು ಉಳಿಯಲು ಸಾಧ್ಯವಾಗುತ್ತದೆ.

ಈ ಕೆಲಸ ನಾವು ಹೇಳುವಷ್ಟು ಅಥವಾ ಬರೆಯುವಷ್ಟು ಸುಲಭವಲ್ಲ ಎಂಬ ಸತ್ಯದ ಅರಿವಿದ್ದರೂ ನಮ್ಮ ಅಪೇಕ್ಷೆಯ ಹಿಂದೆ ಉತ್ತಮ ಸಮಾಜ ನಿರ್ಮಾಣದ ಕಳಕಳಿಯಿದೆ ಎಂಬುದನ್ನು ಇಲ್ಲಿ ಉಲ್ಲೇಖಿಸಲೇಬೇಕು. ಸಸಿಯಿಂದ ಹೆಮ್ಮರದೆತ್ತರಕ್ಕೆ ಬೆಳೆದ ಆರೆಸ್ಸೆಸ್ಸಿನ ಬಗ್ಗೆ ಅತ್ಯಂತ ನಂಬಿಕೆ, ವಿಶ್ವಾಸವಿದ್ದರೂ, ಭವಿಷ್ಯದ 'ಭವ್ಯ ಭಾರತ ನಿರ್ಮಾಣ'ದ ಕನಸು ಎಲ್ಲಿ ಅಸಾಧ್ಯವಾಗುವುದೋ ಎಂಬ ಸಂಶಯ, ಭಯ ಹಿಂದೂಸಮಾಜದ ನಮ್ಮಂತಹ ಹಲವರಲ್ಲಿ ಮೂಡಿರುವ ಕಾರಣಕ್ಕೆ ನಮ್ಮ ಮನಸ್ಸಿನ ದುಗುಡಗಳನ್ನ ಹೊರಕ್ಕೆ ಹಾಕಿದ ಸಮಾಧಾನವಷ್ಟೇ.


"ವಂದೇ ಭಾರತಮಾತರಂ"

3 comments:

  1. This comment has been removed by the author.

    ReplyDelete
  2. NIMMANNU SWAYAMSEVAKA EMDU KAREDUKOLLUVUDAKKINTA MUNDE HOGI 'SAJJANA HIMDU SAMAJA' EMDU KAREDU KONDIRUVUDU ARIVIGE BARUTTIDE.

    OLLEYA LEKHANA. HIGE MUNDUVAREYALI.!!

    ReplyDelete
  3. Lekhanada vishaya nanna obbana abhipraayavallavaadarinda, idee hindu samajada hesarannu balaside.

    Nimma Salahege Dhanyavaadagalu.

    ReplyDelete