Dec 26, 2011

ಚಕ್ರವರ್ತಿಯವರ 'ಜಾಗೋ ಭಾರತ್' : ಅತ್ಯಂತ ಪ್ರೇರಣಾದಾಯಿ ಕಾರ್ಯಕ್ರಮ

ಮೊನ್ನೆ ೨೫ರ ಸಂಜೆ ಗಿರಿನಗರದ ಶ್ರೀ ರಾಮಕೃಷ್ಣ ವಿಶ್ವಭಾವೈಕ್ಯ ಮಂದಿರದ ಆವರಣದಲ್ಲಿ, ರಾಮಕೃಷ್ಣ ಸೇವಾ ಟ್ರಸ್ಟ್ ಸಹಯೋಗದಲ್ಲಿ, ಯೋಗಶ್ರಿ ಸಂಸ್ಥೆ ಆಯೋಜಿಸಿದ್ದ, ೨೪೩ ನೆಯ 'ಜಾಗೋ ಭಾರತ್' ಕಾರ್ಯಕ್ರಮ, ನೆರೆದಿದ್ದ ಭಾರಿ ಜನಸ್ತೋಮ, ಮೈ-ಮನ 'ದೈಶಿಕ ಭಾವಮಯ'ವಾಗುವ ವಾತಾವರಣ, ಚಕ್ರವರ್ತಿ ಸೂಲಿಬೆಲೆಯವರ ಪ್ರೇರಣಾದಾಯಿ ಮಾತುಗಳು, ಅನುಭವಗಳು ಎಂಥವರಲ್ಲೂ 'ದೇಶಭಕ್ತಿ'ಯನ್ನು ಜಾಗೃತಗೊಳಿಸುವಂತಿತ್ತು. ಮಧ್ಯೆ ಮಧ್ಯೆ ದೇಶಭಕ್ತಿ ಗೀತೆಗಳ ಗಾಯನ ವಾತಾವರಣದ ಪಾವಿತ್ರ್ಯವನ್ನು ಹೆಚಿಸುತ್ತಿದ್ದವು.

ಬಹಳ ದಿನಗಳಿಂದ ಚಕ್ರವರ್ತಿಯವರ 'ಜಾಗೋ ಭಾರತ್' ಕಾರ್ಯಕ್ರಮ ವನ್ನು ವೀಕ್ಷಿಸಲೇಬೇಕು ಎಂದು ಕಾಯುತ್ತಿದ್ದೆ. ಕೊನೆಗೂ ಮೊನ್ನೆ ಆ ಅವಕಾಶ ಸಿಕ್ಕಿತು. ಸ್ಥಳ ಹುಡುಕಿಕೊಂಡು ಹೋಗಿ ಕಾರ್ಯಕ್ರಮದಲ್ಲಿ ಕೂತವನೇ ಕೊನೆಯಲ್ಲಿ ವಂದೇಮಾತರಂ ಮುಗಿಯುವವರೆಗೂ ಪ್ರಯತ್ನಪಟ್ಟರೂ ಮೇಲೆ ಏಳಲು ಸಾಧ್ಯವಾಗಲೇ ಇಲ್ಲ. ಆ ನಡುಗುವ ಚಳಿಯಲ್ಲೂ ಕೂತಿದ್ದ ಹೆಂಗಸರು ಮಕ್ಕಳನ್ನು ನೋಡಿ ನನಗೆ ನಾನೇ ಹಾಸ್ಯ ಮಾಡಿಕೊಂಡು ಕಾರ್ಯಕ್ರಮ ಮುಗಿಸಿಕೊಂಡೇ ತೆರಳಿದ್ದು.

ಕಾರ್ಯಕ್ರಮದ ವಾತಾವರಣ ಹೇಗಿತ್ತು ಅಂದ್ರೆ ಸಿಖ್ಖ್ ಪಂಥ ಪ್ರಾರಂಭವಾದ ಆ ದಿನ ವನ್ನು ನೆನಪಿಸುವಂತಿತ್ತು. ಆ ಸಂದರ್ಭದಲ್ಲಿ ಸೂಲಿಬೆಲೆ ಯವರೆನಾದರೂ 'ದೇಶಕ್ಕಾಗಿ ಯಾರು ಪ್ರಾಣ ಕೊಡಲು ತಯಾರಿದೀರ?' ಅಂತ ಏನಾದರು ಕೇಳಿದ್ದರೆ ಬಹುತೇಕ ಎಲ್ಲರು 'ನಾ ರೆಡಿ ' ಎಂದು ಏಳುತ್ತಿದ್ದರು. ಆ ತರಹದಲ್ಲಿ ಸ್ವದೇಶದ ಬಗೆಗಿನ ಅಭಿಮಾನವನ್ನ ತಟ್ಟಿ ಎಬ್ಬಿಸಿದಂತಿತ್ತು. ಹೆಸರಿಗೆ ತಕ್ಕಂತೆ 'ಭಾರತವನ್ನ ಜಾಗೃತ'ಗೊಳಿಸು ವಂತಿತ್ತು. 'ಜಾಗೋ ಭಾರತ್ 'ಕಾರ್ಯಕ್ರಮಕ್ಕೆ ತಾವೇನಾದರೂ ಮಾಡಬೇಕೆಂದು ಬಂದಿದ್ದ ವೇದಿಕೆಯ ಮೇಲಿದ್ದ ವರನ್ನ ಪರಿಚಯ ಮಾಡಿಸಿದಾಗ ಎಂಥವರಲ್ಲೂ 'ತಾವೂ ಸಹ ಏನಾದರು ಮಾಡಬೇಕು' ಎಂದೆನಿಸದೇ ಇರಲು ಸಾಧ್ಯವೇ ಇಲ್ಲ.


ಚಕ್ರವರ್ತಿಯವರ ೨೪೩ ನೆಯ 'ಜಾಗೋ ಭಾರತ್' ಕಾರ್ಯಕ್ರಮವಾದ್ದರಿಂದ ಅವರ ಹಿಂದಿನ ಅನುಭವಗಳು ಎಂಥವರ ಕಣ್ಣಲ್ಲೂ ಕಂಬನಿ ಬರಿಸದೆ ಇರಲಿಲ್ಲ. ಅವಾಗವಾಗ ಅವರು ಹಾರಿಸುತ್ತಿದ್ದ ನಗೆ ಚಟಾಕಿಗಳು ಸಹ ಎಲ್ಲರನ್ನು ನಗಿಸಿತ್ತು. ಅವರು ಹೇಳಿದ ಒಂದು ಘಟನೆ.

ಮದುವೆ ನಿಶ್ಚಯವಾದ ಒಬ್ಬಳು ಹುಡುಗಿ ಚಕ್ರವರ್ತಿಯವರನ್ನು ತನ್ನ ಮದುವೆಯ ಸಂದರ್ಭದ ಆರತಕ್ಷತೆಗೆ 'ಜಾಗೋ ಭಾರತ್' ಕಾರ್ಯಕ್ರಮ ವನ್ನು ನಡೆಸಿಕೊಡಲು ಕೇಳಿಕೊಳ್ಳುತ್ತಾಳೆ. ಎಷ್ಟು ಬೇಡವೆಂದರೂ ಕೇಳದೆ ಹಠ ಹಿಡಿಯುತ್ತಾಳೆ. ಕಾರ್ಯಕ್ರಮ ಮುಗಿದ ನಂತರ ಚಕ್ರವರ್ತಿಯವರ ಹತ್ತಿರ ಬಂದು ತನ್ನ ಮಕ್ಕಳನ್ನು ದೇಶದ ಕೆಲಸಕ್ಕಾಗಿ ಕಳಿಸಿಕೊಡ್ತೇನೆ ಅಂತ ಹೇಳುವಷ್ಟರ ಮಟ್ಟಿಗೆ ಪ್ರೇರಣೆ ಪಡೆದಿರುತ್ತಾಳೆ. ಇಂತಹ ಎಷ್ಟೋ ಘಟನೆಗಳ ಸರಮಾಲೆಯನ್ನೇ ನಮ್ಮ ಮುಂದಿರಿಸಿದ ಕಾರ್ಯಕ್ರಮ ನಿಜವಾಗಲು ಅತ್ಯಂತ ಪ್ರೇರಣಾದಾಯಿಯಾಗಿತ್ತು. ತಕ್ಷಣ ಮನೆಗೆ ಬಂದು ಮುಂದಿನ ಜಾಗೋ ಭಾರತ್ ಕಾರ್ಯಕ್ರಮ ಯಾವಾಗ ಎಂದು
ತಪತಪಿಸುವ ಮಟ್ಟಿಗೆ ಪ್ರಭಾವಿಯಾಗಿತ್ತು ಎಂದು ಹೇಳಲು ಹೆಮ್ಮೆಯಾಗುತ್ತದೆ.

ಕಾರ್ಯಕ್ರಮದ ಕೊನೆಯಲ್ಲಿ ಸೂಲಿಬೆಲೆಯವರು ಎಲ್ಲರಿಗು ಪ್ರಾರ್ಥನೆ ಮಾಡಿದ್ದು ಏನು ಗೊತ್ತ? 'ದಯವಿಟ್ಟು ಇನ್ನಾದರು ನಮ್ಮ ಭಾರತವನ್ನ ಬೈಯುವುದನ್ನ ನಿಲ್ಲಿಸಿ' ಅಂತ.




ಖಂಡಿತ ಎಲ್ಲರು ಹಾಗು ಎಲ್ಲವಾಗಲೂ ಕೇಳಬೇಕಾದ, ನೋಡಬೇಕಾದ ಕಾರ್ಯಕ್ರಮ 'ಜಾಗೋ ಭಾರತ್'. ನಮ್ಮ ದೇಶದ ಹಿರಿಮೆಗಳೇನು ಎಂದು ತಿಳಿದುಕೊಳ್ಳಲು, ಭಾರತವನ್ನು ಪ್ರೀತಿಸಲು, 'ಭಾರತೀಯ'ನಾಗಲು ಹೆಮ್ಮೆಪಡಲು ಏನಿದೆ ಏನು ತಿಳಿದುಕೊಳ್ಳಲು ಯಾರಾದರು 'ಕಷ್ಟ' ಪಡುತ್ತಿದ್ದರೆ ದಯವಿಟ್ಟು ತಪ್ಪಿಸಿಕೊಳ್ಳಬೇಡಿ, 'ಜಾಗೋ ಭಾರತ್'.


1 comment:

  1. http://kannada.oneindia.com/news/2011/12/27/districts-jago-bharat-inspirational-speech-chakravarty-sulibele-aid0038.html

    ReplyDelete