Nov 8, 2009

ನಗರದ ಐಟಿ ಕಂಪೆನಿ 'ಕೆ ಪಿ ಐ ಟಿ ಕಮ್ಮಿನ್ಸ್'ನ ಸಾಮಾಜಿಕ ಕಳಕಳಿ


ನಗರದ ಕೆಲವು ಐಟಿ ಕಂಪನಿಗಳು ಉತ್ತರ ಕರ್ನಾಟಕದ ನೆರೆ ಪರಿಹಾರಕ್ಕಾಗಿ ತಮ್ಮದೇ ಆದ ಕೊಡುಗೆ ನೀಡುತ್ತಿರುವುದು ಅತ್ಯಂತ ಹರ್ಷದಾಯಕ. ಉತ್ತಮ ಸಾಮಾಜಿಕ ಕಳಕಳಿಯೊಂದಿಗೆ ಹಲವರ ನೋವುಗಳಿಗೆ ಹಾಗೂ ಪ್ರಕೃತಿ ವಿಕೋಪಗಳಿಗೆ ಸ್ಪಂದಿಸುತ್ತಿರುವ ನಮ್ಮ ದೇಶದ ಹೆಮ್ಮೆಯ ಕಂಪನಿಗಳ ಸಾಲಿಗೆ ಸೇರುವ ನಗರದ 'ಕೆಪಿಐಟಿ ಕಮಿನ್ಸ್' ಎಂಬ ಕಂಪನಿ ನೆರೆ ಪರಿಹಾರಕ್ಕಾಗಿ ತನ್ನ ಉದ್ಯೋಗಿಗಳಿಗೆ ಸಹಾಯ ಮಾಡಲು ಸೂಚಿಸಿದೆ.

ಉದ್ಯೋಗಿಗಳಿಂದ ಹಣವನ್ನು ಸಂಗ್ರಹಿಸಿ 'ಯೂತ್ ಫಾರ್ ಸೇವಾ' ಎಂಬ ಸಂಸ್ಥೆಯ ಮೂಲಕ ತನ್ನ ಕರ್ತವ್ಯವನ್ನು ನಿರ್ವಹಿಸಲು ಕಂಪನಿ ನಿರ್ಧರಿಸಿದೆ. ಈಗಾಗಲೇ ಸಂಗ್ರಹ ಕಾರ್ಯ ಆರಂಭವಾಗಿದೆ. ಸುಮಾರು 8000 ಉದ್ಯೋಗಿಗಳಿರುವ ಸಂಸ್ಥೆಯಲ್ಲಿ ಎಲ್ಲರೂ ತಮ್ಮ ತಮ್ಮ ಪಾಲಿನ ಕರ್ತವ್ಯವನ್ನು ಕಡ್ಡಾಯವಾಗಿ ನಿರ್ವಹಿಸಲಿದ್ದಾರೆ.

ಕಂಪನಿ ಈ ತರಹದ ಇನ್ನು ಕೆಲವು ಉತ್ತಮ ಕಾರ್ಯಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದೆ. ಈ ಕಾರಣಕ್ಕಾಗಿಯೇ ಕಂಪನಿ 'ವಿ - ಕೇರ್' ಎಂಬ ಉದ್ಯೋಗಿಗಳ ತಂಡವನ್ನು ಕಟ್ಟಿದೆ. ಈಗ್ಗೆ ಕೆಲವು ದಿನಗಳ ಹಿಂದೆ ನಗರದ ವೈಟ್ ಫೀಲ್ಡ್ ನಲ್ಲಿರುವ ಒಂದು ಸರ್ಕಾರಿ ಶಾಲೆಯನ್ನು ದತ್ತು ತೆಗೆದುಕೊಂಡು ಅಲ್ಲಿರುವ ಮಕ್ಕಳಿಗೆ ಮಧ್ಯಾಹ್ನದ ಭೋಜನದ ವ್ಯವಸ್ಥೆಯನ್ನು ಕಲ್ಪಿಸಲು 'ಅಕ್ಷಯ ಪಾತ್ರೆ' ಯೋಜನೆಯಡಿ ಕೈ ಜೋಡಿಸಿತ್ತು. ಈ ಕಾರಣಕ್ಕಾಗಿ ತನ್ನ ಉದ್ಯೋಗಿಗಳಿಂದ ಸಂಗ್ರಹಿಸಲ್ಪಟ್ಟ ಸುಮಾರು 3 ಲಕ್ಷ ರು.ಗಳನ್ನು ಯೋಜನೆಯಲ್ಲಿ ತೊಡಗಿಸಿದೆ.

'ಸಮರ್ಥನಂ ಟ್ರಸ್ಟ್' ಎಂಬ ಅಂಧ ಮಕ್ಕಳ ಬದುಕಿನಲ್ಲಿ ಹರ್ಷವನ್ನು ತುಂಬುವ ಸಂಸ್ಥೆಯೊಂದಿಗೆ ಕೈ ಜೋಡಿಸಿರುವ 'ಕೆಪಿಐಟಿ ಕಮಿನ್ಸ್', ಬದುಕಿನಲ್ಲಿ ಸಾರ್ಥಕತೆಯನ್ನು ಕಂಡುಕೊಳ್ಳುವ ಇಚ್ಛೆಯುಳ್ಳ ತನ್ನ ಉದ್ಯೋಗಿಗಳಿಗೆ ಉತ್ತಮ ಅವಕಾಶವನ್ನು ನೀಡಿದೆ.

ಯಾರ ನೋವಿಗೂ ಸ್ಪಂದಿಸದಿರುವ, ಆಧುನೀಕತೆಯ ಅಮಲಿನಲ್ಲಿ, ಶ್ರೀಮಂತಿಕೆಯ ಅಟ್ಟಹಾಸದಲ್ಲಿ ಮಾನವೀಯತೆಯನ್ನೇ ಮರೆಯುವ ಹಲವಾರು ಸ್ವಾರ್ಥ ವಿದೇಶೀ ಕಂಪನಿಗಳ ಮಧ್ಯೆ, ಪ್ರಚಾರಕ್ಕಾಗಿ ಟಿವಿಗಳಿಗೆ, ದಿನಪತ್ರಿಕೆಗಳಿಗೆ, ಪೋಸು ನೀಡುತ್ತ ಸಹಾಯಮಾಡುವ ಡೋಂಗಿಗಳ ಮಧ್ಯೆ, 'ಕೆಪಿಐಟಿ ಕಮಿನ್ಸ್' ಕಂಪನಿ ಎಲೆಮರೆಕಾಯಿಯಂತೆ ತನ್ನ ಕೈಂಕರ್ಯದಲ್ಲಿ ತೊಡಗಿದೆ.

ಹೀಗೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ತನ್ನ ಸಾಮಾಜಿಕ ಬದ್ದತೆಯನ್ನು ಪ್ರದರ್ಶಿಸುತ್ತ ಆ ಮೂಲಕ ಇನ್ನಿತರ ಐಟಿ ಕಂಪೆನಿಗಳಿಗೆ ಉತ್ತಮ ಮೇಲ್ಪಂಕ್ತಿಯನ್ನು ಹಾಕಿಕೊಟ್ಟಿದೆ ನಮ್ಮ 'ಕೆ ಪಿ ಐ ಟಿ ಕಮಿನ್ಸ್'.

1 comment: