Sep 2, 2014

ಅಮೆರಿಕಾನುಭವ 2014 - ಭಾಗ 1

ಇತ್ತೀಚೆಗೆ ಸ್ಯಾನ್ ಡಿಯಾಗೋ - ಲಾಸ್ ಏಂಜಲಸ್ ಪ್ರವಾಸಕ್ಕೆ ಹೋಗಿದ್ದೆ (ಜೂನ್ 3 ರಿಂದ 7). ಅದರ ಕೆಲವು ಅನುಭವವನ್ನ ಆದಷ್ಟು ಚಿಕ್ಕದಾಗಿ ಬರೆದಿಟ್ಟು ಕೊಳ್ಳುವ ಪ್ರಯತ್ನ. 

ಜೂನ್ 3ರ ಗುರುವಾರ ಬೆಳಿಗ್ಗೆ 8.20 ಕ್ಕಿದ್ದ ಹಾಲೆಂಡ್ (ನಾನಿರುವ)ನಿಂದ ಚಿಕಾಗೊಗೆ ರೈಲು ಹಿಡಿದು ತಲುಪಿ ಅಲ್ಲಿಂದ ಮೆಟ್ರೋ ರೈಲು ಹಿಡಿದು ಓ'ಹರೆ ವಿಮಾನ ನಿಲ್ದಾಣವನ್ನು ತಲುಪಿದೆ. ರೈಲು 1 ಗಂಟೆ ತಡವಾಗಿ ಚಿಕಾಗೊ ತಲುಪಿತ್ತು. 2-3 ತಾಸುಗಳ ಕಾಯುವಿಕೆಯ ನಂತರ ಇನ್ನೇನು ಬೋರ್ಡ್ ಆಗಬೇಕು ಅನ್ನುವಷ್ಟರಲ್ಲಿ ಲಾಸ್ ಏಂಜಲೀಸ್ ಗೆ ಹೋಗಬೇಕಿದ್ದ ಸ್ಪಿರಿಟ್ ವಿಮಾನ 2 ತಾಸು ವಿಳಂಬವಾಗಿತ್ತು. ವಾತಾವರಣ ಅನುಕೂಲವಾಗಿದ್ದರೂ ಯಾವುದೇ ಕಾರಣ ನೀಡದೇ ವಿಮಾನವನ್ನು ತಡವಾಗಿಸಿದ್ದಕ್ಕೆ ಪ್ರಯಾಣಿಕರು ಜಗಳಮಾಡುತ್ತಿದ್ದರು. ಆದರೂ ಅವನೇನು ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ವಿಧಿಯಿಲ್ಲದೇ ಪ್ರಯಾಣಿಕರು ಕಾಯಬೇಕಾಯಿತು.

ಸಂಜೆ 6 ಕ್ಕೆ ತಲುಪಬೇಕಿದ್ದ ವಿಮಾನ 8.30ಗೆ ತಲುಪಿತ್ತು. ಅಲ್ಲಿಂದ ನನ್ನ ಆತ್ಮೀಯ ಬಂಧುವೊಬ್ಬರು ಬಂದು ಸ್ಯಾನ್ ಡಿಯಾಗೋಗೆ ಕರೆದುಕೊಂಡು ಹೋದರು. ಗುರುವಾರ ರಾತ್ರಿಯಿಂದ ಶನಿವಾರ ಬೆಳಿಗ್ಗೆಯವರೆಗೆ ಸ್ಯಾನ್ ಡಿಯಾಗೋದಲ್ಲಿದ್ದು ಶುಕ್ರವಾರ ಅಲ್ಲಿನ ಸೀವರ್ಲ್ಡ್ ನೋಡಿ, ಹತ್ತಿರದ ಕೊರೋನಾಡೋ ಐಲ್ಯಾಂಡ್ ಅನ್ನು ನೋಡಿ ಬಂಧುಗಳ ಜೊತೆ ಕೆಲವು ಗಂಟೆಗಳ ಸಮಯ ಕಳೆದು ಶನಿವಾರ ಬೆಳಿಗ್ಗೆ 10 ಗಂಟೆಯ ಗ್ರೇಹೌಂಡ್ ಬಸ್ ಮೂಲಕ ಲಾಸ್ ಏಂಜಲಿಸ್ ತಲುಪಿದೆ.
ಲಾಸ್ ಏಂಜಲೀಸ್ ಗೆ ಮಧ್ಯಾಹ್ನ 12 ರ ಸುಮಾರಿಗೆ ಬಂದಿಳಿದು ಗ್ರೇಹೌಂಡ್ ಬಸ್ ಸ್ಟಾಂಡ್ ನಿಂದ ಯೂನಿವರ್ಸಲ್ ಸ್ಟುಡಿಯೊಸ್ ಗೆ ಟ್ಯಾಕ್ಸಿ ಮಾಡಿಕೊಂಡು ಹೋಗಿ ಅಲ್ಲಿ ಸಂಜೆ 8 ರ ತನಕ ಸಮಯ ಕಳೆದು ನನ್ನ ಆತ್ಮೀಯರೊಬ್ಬರ ಮನೆಗೆ ಹೋಗಿ, ಉಳಿದು ಮಾರನೇ ದಿನ ಅವರ ಜೊತೆ ಹತ್ತಿರದ ಕೆಲವು ಸ್ಥಳಗಳಿಗೆ ಹೋಗಿ ಸಮಯ ಕಳೆದು ಸಂಜೆ ಇನ್ನೊಬ್ಬರು ಆತ್ಮೀಯರೊಬ್ಬರ ಮನೆಗೆ ಹೋಗಿ, ಉಳಿದು ಸೋಮವಾರ ಬೆಳಗಿನ ಜಾವ ಹೊರಟು 8.30 ರ ವಿಮಾನ ಹಿಡಿದು ಚಿಕಾಗೋ ತಲುಪಿದೆ. ಮಧ್ಯಾಹ್ನ 2 ರ ಸುಮಾರಿಗೆ ತಲುಪಿದ ನನ್ನ ವಿಮಾನ ಅಲ್ಲಿಂದ ಸಿಟಿಎ ರೈಲಿನ ಮೂಲಕ ಚಿಕಾಗೊದ ಯೂನಿಯನ್ ಸ್ಟೇಶನ್ ತಲುಪಿ ಸಂಜೆ 5 ಕ್ಕಿದ್ದ ರೈಲಿನ ಮೂಲಕ ಹಾಲೆಂಡ್ ತಲುಪಿ, ರಾತ್ರಿ 9.30ರ ಸುಮಾರಿಗೆ ಮನೆ ತಲುಪಿದೆ. 
ಇವಿಷ್ಟು ನನ್ನ ಪ್ರಯಾಣದ ಸಂಕ್ಷಿಪ್ತ ವಿವರ. ಈಗ 'ಅನುಭವ ಪ್ರಸಂಗ'ಗಳ ವಿಷಯಕ್ಕೆ ಬರೋಣ.

ಪ್ರಸಂಗ 1 :

ಯುನಿವರ್ಸಲ್ ಸ್ಟುಡಿಯೋ ನೋಡಿ ಹೊರಡುವಾಗ ನಾನು ರೈಲನ್ನು ಹಿಡಿದು ಹೋಗಬೇಕಾಯಿತು. ಅಕಸ್ಮಾತ್ ಯೋಜನೆಯಲ್ಲಿ ಬದಲಾವಣೆಯಾದರೆ ತಾನು ಹೋಗಬೇಕಿದ್ದ ಟೋರ್ರನ್ಸ್ ಗೆ ಹೇಗೆ ಹೋಗಬೇಕು ಎನ್ನುವ ತಯಾರಿಮಾಡಿಕೊಂಡಿರಲಿಲ್ಲ ಹಾಗಾಗಿ ಸ್ವಲ್ಪ ಎಡವಟ್ಟಾಯಿತು. ಯಾರಿಗೂ ಮಾಹಿತಿ ಇರವುದಿಲ್ಲವೋ ಏನೋ, ಒಟ್ಟಿನಲ್ಲಿ ಕೇಳಿದವರೆಲ್ಲರೂ 'ನನಗೆ ಗೊತ್ತಿಲ್ಲ' ಎಂದವರೆ. ಸುಮಾರು 1 ಗಂಟೆಗಳ ಕಾಲ ಪರದಾಡಿ ಅವರಿವರನ್ನು ಕೇಳಿದರೂ ಏನೂ ಸಹಾಯವಾಗಲಿಲ್ಲ. ಕೊನೆಗೆ ದೇವರಮೇಲೆ ಭಾರ ಹಾಕಿ ಡೌನ್ ಟೌನ್ ಗೆ ಹೋದರಾಯಿತು, ಅಲ್ಲಿಂದ ನನ್ನ ಸ್ನೇಹಿತರಿಗೆ ಫೋನಾಯಿಸಿದರಾಯಿತು ಎಂದು ಟ್ರೈನ್ ಹತ್ತಿದೆ. ಅದೂ ಒನ್ ವೇ ಟಿಕೆಟ್ ನಲ್ಲಿ. ಟ್ರೈನಿನಲ್ಲಿ ಒಬ್ಬರು ಒಂದು ಸ್ಟೇಷನ್ ಹೆಸರು ಹೇಳಿ ಅಲ್ಲಿಂದ ಟೋರ್ರನ್ಸ್ ಗೆ ಹತ್ತಿರವಾಗುತ್ತದೆ ಎಂದು ಹೇಳಿದರು. ಅದು Downtown ಗಿಂತ ಹಿಂದಿನ ಸ್ಟೇಶನ್ ಆಗಿತ್ತು. ನಾನು ಹಾಗೆಯೇ ಮಾಡಿದೆ. ಅಲ್ಲಿ ಇಳಿದು ಹೊರಗೆ ಬಂದರೆ ಜನರ ವಾಸನೆಯೂ ಕಾಣಲಿಲ್ಲ..! ಯಾವ ಮಾಹಿತಿಯೂ ಸಿಗುವ ಕುರುಹೂ ಕಾಣಲಿಲ್ಲ! ಕೊನೆಗೆ ಡೌನ್ ಟೌನ್ ಗೆ ಅಂದರೆ ಯೂನಿಯನ್ ಸ್ಟೇಷನ್ನಿಗೇ ಹೋಗುವ ಎಂದು ಮತ್ತೆ ಟ್ರೈನ್ ಹತ್ತಲು ಬಂದರೆ ಒನ್ ವೇ ಟಿಕೆಟ್ ಆದ ಕಾರಣ ಟಿಕೆಟ್ ಕೆಲಸ ಮಾಡಲಿಲ್ಲ..! ಹಾಗೆಯೇ ಒಳಗೆ ಹೋಗಲು  ಪ್ರಯತ್ನಿಸುತ್ತಿರುವಾಗಲೇ ಒಬ್ಬಾಕೆ ಬಂದು ಬಾಗಿಲು ತೆರೆದು ಕೊಟ್ಟು ಹೋದಳು. ನಾನೂ ಧನ್ಯವಾದ ಅರ್ಪಿಸಿ ರೈಲು ಹಿಡಿದು ಡೌನ್ ಟೌನ್ ಸ್ಟೇಷನ್ನಾದ ಯೂನಿಯನ್ ಸ್ಟೇಷನ್ನಿಗೆ  ಬಂದಿಳಿದೆ. 

ಹೊರಗೆ ಬಂದು ಟೋರ್ರನ್ಸ್ ಗೆ ಹೋಗುವ ಬಗೆಯನ್ನು ಹುಡುಕುತ್ತಿರುವಾಗಲೇ ನನ್ನ ಮೊಬೈಲ್ ನಲ್ಲಿ ಚಾರ್ಜ್ ಮುಗಿದು ಹೋಗುವ ಸೂಚನೆ ಕೊಡುತ್ತಿತ್ತು. ತಕ್ಷಣ ನನ್ನ ಸ್ನೇಹಿತರಿಗೆ ಫೋನಾಯಿಸಿ 'ನನ್ನ ಮೊಬೈಲ್ ಕೈ ಕೊಡುವ ಎಲ್ಲ ಲಕ್ಷಣಗಳೂ ಇವೆ. ನಾನು ಯೂನಿಯನ್ ಸ್ಟೇಶನ್ ಗೆ ಬಂದಿಳಿದಿದ್ದೇನೆ. ನಾನೊಬ್ಬನೇ ನಿಮ್ಮ ಮನೆಗೆ ಬರುವ ಸಾಹಸ ಮಾಡಲು ಆಗುವುದು ಅನುಮಾನ. ದಯವಿಟ್ಟು ಎಷ್ಟು ಹೊತ್ತಾದರೂ ನೀವೇ ಬಂದು ನನ್ನನ್ನು ಕರೆದುಕೊಂಡು ಹೋಗಿ ' ಎಂದೆ. ಸಾಕಷ್ಟು ದೂರದ ಊರಿಗೆ ಹೋಗಿದ್ದ ನನ್ನ ಸ್ನೇಹಿತರು ಬರುವುದು ತಡವಾಗುತ್ತದೆ. ಪರವಾಗಿಲ್ಲ ನೀನಲ್ಲೇ ಇರು ಎಂದು 'ಸಮಾಧಾನ' ನೀಡಿದರು. ನಾನು ಅಷ್ಟರೊಳಗೆ ಮೊಬೈಲನ್ನು ಬದುಕಿಸುವ ಎಂದು ಚಾರ್ಜರ್ ಪಾಯಿಂಟನ್ನು ಹುಡುಕುತ್ತಿದ್ದೆ. ಆದರೆ ರಾತ್ರಿ 9.30 - 10 ಆಗಿದ್ದ ಕಾರಣ ಎಲ್ಲ ಚಾರ್ಜಿಂಗ್ ಪಾಯಿಂಟ್ ಗಳನ್ನೂ ಮುಚ್ಚಿದ್ದರು. ಬಹುಶಃ ಮನೆಗೆ ಬೇಗ ಹೋಗುವ ಮನಸ್ಸನ್ನು ಜನ ಮಾಡುವುದಿಲ್ಲ ಎಂಬ ಕಾರಣಕ್ಕಾಗಿಯೋ ಏನೋ..! ನಾನೂ  ಅಸಹಾಯಕನಾಗಿ ನಿಂತಿದ್ದೆ. ಇದ್ದ ಒಂದೇ ಸಂಪರ್ಕ ಮಾಧ್ಯಮ ಕೈ ಕೊಟ್ಟಿರುವಾಗ ನನ್ನ ಸ್ನೇಹಿತರು ಬಂದರೆ ನನ್ನನ್ನು ಅವರು ಸಂಪರ್ಕಿಸದೇ ನಾನು ಮನೆ ತಲುಪುವುದಾದರೂ ಹೇಗೆ ಎಂದು ಯೋಚಿಸುತ್ತಿರುವಾಗ ಅಲ್ಲೇ ಒಂದು ಫ್ಯಾನು ಓಡುತ್ತಿರುವುದು ಕಂಡಿತು. ಹೋಗಿ ನೋಡಿದರೆ ಆ ಚಾರ್ಜಿಂಗ್ ಪಾಯಿಂಟನ್ನು ಮಾತ್ರ ಮುಚ್ಚಿರಲಿಲ್ಲ...! 

ತಕ್ಷಣ ಹಿಂದೆ-ಮುಂದೆ ನೋಡದೆ ಫ್ಯಾನನ್ನು ತೆಗೆದು ನನ್ನ ಮೊಬೈಲ್ ಚಾರ್ಜಿಗಿಟ್ಟೆ. ಮರು ಕ್ಷಣವೇ ಪೋಲೀಸಿನಾಕೆ ಬಂದು ಗದರಿಸಿದಳು, 'ಎಲ್ಲ ಚಾರ್ಜಿಂಗ್ ಪಾಯಿಂಟುಗಳನ್ನು ಮುಚ್ಚಿರುವುದು ಕಾಣಲಿಲ್ಲವೇ ? ಇಲ್ಲಿ ಫ್ಯಾನಿನ ಪಾಯಿಂಟನ್ನೇ ಬಳಸುತ್ತಿರುವೆಯಲ್ಲ... !?' ಎಂದು. ಅದಕ್ಕೆ ನಾನು 'ನನ್ನ ಸ್ನೇಹಿತರೊಬ್ಬರು ಬರುತ್ತಿದ್ದಾರೆ ನನ್ನ ಕರೆದುಕೊಂಡು ಹೋಗಲು. ಆದರೆ ನನ್ನ ಮೊಬೈಲ್ ಗೆ ಚಾರ್ಜ್ ನ ಅವಶ್ಯಕತೆ ಇದೆ. ಇಲ್ಲದಿದ್ದರೆ ನಾನು ಮನೆಗೆ ಹೋಗಲಾಗುವುದಿಲ್ಲ . ಇದು ಅಕ್ಷರಶಃ ಎಮರ್ಜೆನ್ಸಿ' ಎಂದೆ ! ಅದಕ್ಕವರು 'ಎಷ್ಟು ಹೊತ್ತು' ಎಂದು ಮತ್ತೂ ಗದರಿಸಿದರು. ಇವರನ್ನು ಕಳಿಸಿದರೆ ಮತ್ತೆ ಬರುವುದು ಅನುಮಾನ ಎಂಬ ಧೈರ್ಯದಿಂದ, ಬೀಸುವ ದೊಣ್ಣೆಯಿಂದ ತಪ್ಪಿಸಿಕೊಳ್ಳುವ ಭರದಲ್ಲಿ, ನಾನು, 'ಕೇವಲ 10 ನಿಮಿಷ. ಆಮೇಲೂ ನಾನಿಲ್ಲೇ ಇದ್ದರೆ ನೀವೇ ಡಿಸ್ಕನೆಕ್ಟ್ ಮಾಡಿ ಬಂದು' ಎಂದೆ. ಆಯ್ತು ಎಂದವರೇ ಹೊರಟು ಹೋದರು. ಬದುಕಿದೆಯಾ ಬಡಜೀವವೇ ಎಂದುಕೊಂಡೆ. 

ಆ ಹೊತ್ತಿನಲ್ಲೇ ಇನ್ನೊಬ್ಬ ತನ್ನ ಮೊಬೈಲನ್ನು ಬದುಕಿಸಲು ನಾನು ಹೊರಡುವುದನ್ನೇ ಕಾಯುತ್ತಿದ್ದ. ನನ್ನ ಸ್ನೇಹಿತರು ಬಂದ ಮೇಲೆ ನಾನು ಹೊರಟೆ. ನಾನು ಹೊರಡುವಾಗ ಹಿಂದೆ ತಿರುಗಿ ನೋಡಿದಾಗ ಆಕೆ ಅವನಿಗೆ ಅವಕಾಶ ಕೊಡಲಿಲ್ಲ.

(ಮುಂದುವರೆಯುವುದು... )

No comments:

Post a Comment