May 2, 2012

ನಾವು ಬದಲಾಗಬೇಕೆ ? ಬದಲಾಗದವರು ಸಿಗುತ್ತಾರೆಯೇ?


ನಾನು ಕಳೆದ ಕಂಪೆನಿಯಲ್ಲಿದ್ದಾಗ ನನ್ನೊಬ್ಬ ಸಹೋದ್ಯೋಗಿಯೊಬ್ಬ ನನ್ನನ್ನು ಕುರಿತು ಬಹಳ ಆಶ್ಚರ್ಯದಿಂದ ಒಂದು ಪ್ರಶ್ನೆ ಕೇಳಿದ್ದ. 'ನೀನು ಸಿಗರೇಟ್ ಸೇದುವುದಿಲ್ಲ, ಡ್ರಿಂಕ್ಸ್ ತೆಗೆದುಕೊಳ್ಳುವುದಿಲ್ಲ, ಪಾನ್ ಗಳ ಅಭ್ಯಾಸವಿಲ್ಲ. ಈ ಯಾವುದೂ ಇಲ್ಲದಿರುವ ನಿನ್ನ ಜೀವನದಲ್ಲಿ ಏನಿದೆ?' ಅಂತ ಕೇಳಿದಾಗ ನನಗೆ ಆ ಕ್ಷಣಕ್ಕೆ ಬರೀ ನಕ್ಕಿದ್ದೆ. ಆದರೆ ನನಗೂ ಇದೊಂದು ಪ್ರಶ್ನೆಯಾಗಿ, ಸಮಸ್ಯೆಯಾಗಿದ್ದುದು ನಿಜವೂ ಹೌದು. ಆದರೆ ಸಮಸ್ಯೆಯ ಅನುಭವ ಅಷ್ಟೇ ಬೇಗನೆ ಶುರುವಾಯಿತು ಕೂಡ.


ಯಾವುದೇ ದುರಭ್ಯಾಸಗಳಿಗೂ 'ಸುಲಭ' ಪ್ರಚೋದನೆಗಳಾಗಲೀ, ಉತ್ತೇಜನವಾಗಲೀ ಇರದ ವಾತಾವರಣದಲ್ಲಿ ಬೆಳೆದ ನನಗೆ ಅಂತಹ ಯಾವುದೇ ಸಹವಾಸವೂ ‘ಸಲೀಸಾಗಿ’ ಸಿಗಲಿಲ್ಲ. ಅದೃಷ್ಟವಶಾತ್ ಸಿಗಲಿಲ್ಲವೋ ಅಥವಾ ದುರದೃಷ್ಟವಶಾತ್ ಸಿಗಲಿಲ್ಲವೋ ಎಂಬುದು ನನಗೆ ಇನ್ನೂ ತಿಳಿಯದ ವಿಷಯ.  ಕನ್ನಡದವರು, ಕನ್ನಡವೇ ಅಪರೂಪವಾಗುವ ಈ ಐಟಿ ಕ್ಷೇತ್ರದಲ್ಲಿ ಸಸ್ಯಾಹಾರಿಗಳಂತೂ ಅದಕ್ಕಿಂತ ಅಪರೂಪ. ಹೀಗಿರುವಾಗ ನಾನು ಕೆಲಸ ಮಾಡುವ ಎಲ್ಲ ತಂಡಗಳಲ್ಲಿ ನಾನೊಬ್ಬನೇ ಸಸ್ಯಾಹಾರಿಯಾಗಿ ಅನುಭವಿಸುವ 'ಅನುಭವ'ಕ್ಕೆ ಏನೆಂದು ಕರೆಯಬೇಕೆಂದು ಗೊತ್ತಾಗೋದಿಲ್ಲ.

ಇತ್ತೀಚಿಗೆ ನನ್ನ ಇನ್ನೊಬ್ಬ ಸಹೋದ್ಯೋಗಿಯೇ 'ಎಂತ ಮನುಷ್ಯ ಮಾರಾಯ ನೀನು..! ಮಾಂಸದ ಕತೆ ಬಿಡು, ಬೆಳ್ಳುಳ್ಳಿ ತಿನ್ನೋಲ್ಲ ಅಂತೀಯ, ಮೊಟ್ಟೆ ತಿನ್ನಲ್ಲ ಅಂತೀಯ, ಹೆಂಡ, ಬಿಯರ್ ಬಿಟ್ಹಾಕು, ವೈನ್ ಸಹ ಕುಡಿಯಲ್ಲ ಅಂತೀಯ, ಸಿಗರೇಟ್ ನೀನ್ ಸೇದೋದು ಬಿಡು, ಬೇರೆಯವರು ಸೇದಿದರೆನೆ ಆಗೋಲ್ಲ. ಹುಡುಗಿಯರ ಬಗ್ಗೆ 'ರಸವತ್ತಾಗಿ' ಮಾತಾಡೋದಿರಲಿ, ಇನ್ನೊಬ್ಬರು ಮಾತಾಡೋದನ್ನ ಎಂಜಾಯ್ ಮಾಡೋದಕ್ಕೂ ಬರಲ್ಲ. ಬಂದ್ರೂ avoid ಮಾಡೋದಕ್ಕೆ ಜಾಗನೇ ಖಾಲಿ ಮಾಡಿಬಿಡ್ತೀಯಹೀಗಿರುವಾಗ ನಿನ್ನ ಜೊತೆ ಬೇರೆಯಬೇಕಾದರೆ ನಿನ್ನ ತರಹವೇ ಇರಬೇಕು. ಇಲ್ದೆ ಹೋದ್ರೆ ಸಾಧ್ಯವೇ ಇಲ್ಲ. ಅವನ ಮಾತುಗಳು ನನ್ನ ಮೇಲೆ ಬಹಳ ಪರಿಣಾಮ ಮಾಡಿದವು. ಅವನು ಮುಂದುವರೆದು 'ನೀನೆ ಯೋಚನೆ ಮಾಡು ನಿನಗೆ ಎಷ್ಟು ಜನ ಸ್ನೇಹಿತರಿದ್ದಾರೆ ಅಂತ, ಎಷ್ಟು ಜನ ಸ್ನೇಹಿತರು ನಿನ್ನ ಜೊತೆ ಸಮಯ ಕಳೆಯಬೇಕು ಅಂತ ಯೋಚಿಸ್ತಾರೆ ಅಂತ. ನಾವು ಕಾಲಕ್ಕೆ ತಕ್ಕಂತೆ ಸ್ವಲ್ಪವಾದ್ರೂ ಬದಲಾಗದೆ ಇದ್ರೆ ಬದಲಾದವರು ನಮ್ಮ ಜತೆ ಇರೋಕ್ಕಾಗಲ್ಲ' ಅಂತ ಹೇಳ್ದಾಗ ಗರ ಬಡಿದವನಂತೆ ಸುಮ್ಮನಾಗಿದ್ದೆ...!

ನನಗೂ ಬಹಳಸಲ ಅನ್ಸಿತ್ತು 'ಸಿಗರೇಟ್ ಸೇದುವವರಿಗೆ, ಡ್ರಿಂಕ್ಸ್ ತೆಗೆದುಕೊಳ್ಳುವವರಿಗೆ, ಹುಡುಗಿಯರ ಬಗ್ಗೆ 'ರಸವತ್ತಾಗಿ' ಮಾತಾಡುವ 'ಕಲೆ'ಇರುವವರಿಗೆ ಇರುವ ಸ್ನೇಹಿತರದಂಡು ಎಲ್ಲ 'ಯೋಗ್ಯತೆ'ಗಳಿಲ್ಲದವರಿಗೆ ಹೇಗೆ ತಾನೇ ಲಭಿಸೀತು? 3 ತಿಂಗಳುಗಳಿಂದ ನನ್ನ ತಂಡದಲ್ಲಿದ್ದ ನನ್ನ ಸಹೋದ್ಯೋಗಿಗೆ ಆಗ ತಾನೇ ಹೊಸದಾಗಿ ಸೇರಿದವನ ಜೊತೆ ಬೆರೆಯಲು 'ಸಿಗರೇಟ್'' ಎನ್ನುವುದು ಎಷ್ಟು ದೊಡ್ಡ ಕಾರಣವಾಯಿತು ಗೊತ್ತ! ಅದೇ ಸಾಕಾಯಿತು ಕೂಡ

ಎಷ್ಟು ಜನ ಹುಡುಗರು, ಹುಡುಗಿಯರ ಬಗ್ಗೆ ಎಷ್ಟು ಸುಲಭವಾಗಿ, 'ರಸವತ್ತಾಗಿ' ಮಾತಾಡುತ್ತಾರೆ...! ಮೊದಮೊದಲಿಗೆ ಅಪರೂಪವಾಗಿ ಕಾಣುತ್ತಿದ್ದ ನನಗೆ ಕ್ರಮೇಣ ಅತ್ಯಂತ ಸಹಜವಾಗಿ ಕಾಣಿಸಲು ಶುರುವಾಯಿತುಇದೆಲ್ಲ ಇಷ್ಟು ಸಹಜ ಅಂತ ಗೊತ್ತಾಗೊಹೊತ್ತಿಗೆ ನಾನುಸಹಜವಾಗಿ’ ಬದಲಾಗುವ ಸಮಯ ಮೀರಿಹೊಗಿತ್ತು. ಅಂದರೆ ನನ್ನ ಕಾಲೇಜಿನ ಜೀವನ ಮುಗಿದಿತ್ತು. 

ಇದಕ್ಕಿಂತ ನನಗೆ ಆಶ್ಚರ್ಯವಾಗುವ ವಿಷಯ ಅಂದರೆ ನನ್ನ ಜೊತೆಯೇ ನನ್ನ ತರಹವೇ ಇದ್ದ ಸಾಕಷ್ಟು ಜನ ನನ್ನ ಸ್ನೇಹಿತರು ಕಾಲೇಜು ಮೆಟ್ಟಿಲು ಹತ್ತುವ ಹೊತ್ತಿಗೆ ಎಷ್ಟು ಬೇಗ ಎಷ್ಟು ನಾಜೂಕಾಗಿ 'ಮುಂದುವರೆದಿದ್ದರು' ಎಂದರೆ ನನಗೆ ಸಾಕಷ್ಟು ಸಲ ನಾನೇ ವಯಸ್ಸಿಗೆ ತಕ್ಕಂತೆ ಬದಲಾಗಿಲ್ಲ ಎಂದೆನಿಸುವ ಮಟ್ಟಿಗೆ ನನ್ನ ಜತೆಗಾರರು ಬದಲಾಗಿದ್ದರು, ‘update’ ಆಗಿದ್ದರುನಾನು ಎಲ್ಲರ ಹಾಗೆಯೇ ಬದಲಾಗಬೇಕೇ ಅಥವಾ ನಾನಿದ್ದ ಹಾಗೆಯೇ ಇರಬೇಕೇ ಎಂಬ ಗೊಂದಲಗಳಲ್ಲಿ ಬಹಳ ದಿನಗಳ ಕಾಲ ಯೋಚನೆ ಮಾಡಿದ್ದಿದೆಬದಲಾಗಬೇಕೆಂದುಕೊಂಡರೆ ಹೇಗೆ ಬದಲಾಗಬೇಕು, ಅದಕ್ಕೆ ಬೇಕಾದ 'ಜ್ಞಾನ' ಹೇಗೆ ಸಂಪಾದಿಸಬೇಕು ಎಂಬೆಲ್ಲ ಪ್ರಶ್ನೆಗಳಿಗೆ ತಕ್ಷಣ ಉತ್ತರವಿರಲಿಲ್ಲ.

ನಾನು ನನ್ನ ವಿದ್ಯಾಭ್ಯಾಸ ಮುಗಿಸಿ ಬೆಂಗಳೂರಿಗೆ ಬಂದು ವರ್ಷವಾಗುವಷ್ಟರ ಹೊತ್ತಿಗೆ ಪರಿಚಯವಾದ ಒಬ್ಬ ಸ್ನೇಹಿತ ಒಂದು ಮಾತನ್ನು ಅತ್ಯಂತ ಸೂಕ್ಷ್ಮವಾಗಿ ಹೇಳಿದ್ದ. 'ಕೆಲ ವಯಸ್ಸಿನಲ್ಲಿ ಕೆಲ ವಿಷಯಗಳು ಗೊತ್ತಿಲ್ಲದಿರುವುದು ಮುಗ್ಧತೆಯಿರಬಹುದು. ಆದರೆ ಅದು ಮುಂದುವರೆದರೆ ಅದೇ ಪೆದ್ದುತನವಾಗುವುದು. ಪ್ರೌಢಶಾಲೆಗೆ ಬಂದಾಗ ನಿನಗೆ ಕ್ರಿಕೆಟ್ ಆಟ ಹೇಗೆ ಆಡುವುದು ಹೇಗೆ ಅಂತ ಗೊತ್ತಿಲ್ಲ ಅಂದರೆ ನಿನ್ನನ್ನ ಪೆದ್ದ ಅಂತಾರೆಯೇ ಹೊರತು ಮುಗ್ಧ ಅಂತ ಯಾವ ಹುಚ್ಚನೂ ಕರೆಯುವುದಿಲ್ಲ' ಎಂದು ಹೇಳಿದ್ದ. ಅದು ನಿಜ ಎಂದು ನನಗೆ ತಿಳಿದದ್ದು, ಈಗ ಪಿಯುಸಿಯಲ್ಲಿರುವ ನನ್ನ ಹಲವು ಜನ ಸ್ನೇಹಿತರನ್ನು ನೋಡಿದಾಗ.

'ಯಾವ ದೇಶವಾಗಲೀ, ವ್ಯಕ್ತಿಯಾಗಲೀ, ಸಮಾಜವಾಗಲೀ ತನ್ನ ಅಸ್ಮಿತೆಯನ್ನ ಕಳೆದುಕೊಳ್ಳುವುದೋ, ಆಗ ಅದರ ಅವನತಿ ಆರಂಭವಾದಂತೆಯೇ. ನಮ್ಮ ದೇಶದ ಕುಟುಂಬ ಪದ್ಧತಿ, ಜೀವನ ಪದ್ಧತಿ, ಸಂಬಂಧಗಳು, ದೇವರ ಆರಾಧನೆ, ನಂಬಿಕೆಗಳು ಇವೆಲ್ಲ ನಮ್ಮ ದೇಶದ ಹಿರಿಮೆಗಳು. ಇವೇ ನಮ್ಮ ದೇಶ ತನ್ನದೇ ಆದ ಅಸ್ತಿತ್ವವನ್ನ ನಿರ್ಮಿಸಿಕೊಳ್ಳಲು ಕಾರಣವಾದಂತವು. ಇವೇ ಪಾಶ್ಚಾತ್ಯರು ನಮ್ಮನ್ನು ಅನುಸರಿಸಲು ಕಾರಣವಾದಂತವು' ಎಂಬೆಲ್ಲವುಗಳನ್ನು ಕೇಳಿದ್ದ ನನಗೆ ನನ್ನನ್ನು ನಾನು ಸಮಾಧಾನ ಪಟ್ಟುಕೊಳ್ಳುವ ದಾರಿಯನ್ನು ಕಂಡುಕೊಂಡೆ

ಆಗ ಪ್ರಶ್ನೆ ಕೇಳಿದ ನನ್ನ ಸಹೋದ್ಯೋಗಿಯನ್ನು ಒಂದು ದಿನ ಕರೆದು 'ಇಷ್ಟೆಲ್ಲಾ ಪ್ರಪಂಚದ ಆಕರ್ಷಣೆಗಳ ನಡುವೆ, ಇಷ್ಟೆಲ್ಲಾ ವೈಭೋಗಗಳ ನಡುವೆ, 'ಮಜಾ ಮಾಡುವುದು' ಎಂಬುದಕ್ಕೆ ಇರುವ ನಾನಾ ಅರ್ಥಗಳ ನಡುವೆ, ಇಷ್ಟೆಲ್ಲಾ ವೈವಿಧ್ಯದ 'ಸಹವಾಸ'ಗಳ ನಡುವೆ ಬದಲಾಗದೆ ಇರುವುದೂ ಅಷ್ಟು ಸುಲಭವಲ್ಲ. ಆ ಕಾರಣಕ್ಕಾಗಿಯೇ ನಾನು ಎಷ್ಟು ಕಡಿಮೆ ಸಾಧ್ಯವೋ ಅಷ್ಟು ಕಡಿಮೆ ಬದಲಾವಣೆಯಲ್ಲಿ ನಾನು ನಾನಾಗಿಯೇ ಇರಲು ಪ್ರಯತ್ನವಷ್ಟೇ' ಅಂತ ಉತ್ತರ ಕೊಟ್ಟೆ. ಅದಕ್ಕವನು ನಾನು ನಿನ್ನನ್ನು ಗೌರವಿಸಬಹುದೇ ಹೊರತು ನಿನ್ನನ್ನು ಅನುಕರಿಸಲು ಸಾಧ್ಯವಿಲ್ಲ ಎಂದು ನೇರವಾಗಿಯೇ ಹೇಳಿದ. ನಾನು ಸಹ ಒಪ್ಪಿಕೊಳ್ಳಬೇಕಾಯಿತು. 

ಆದರೆ ಹೇಳಿದಷ್ಟು, ಅಂದುಕೊಂಡಷ್ಟು ಯಾವುದೂ ಸುಲಭವಲ್ಲವಲ್ಲ. ವಿಧಿಯೋ ಆಟವೋ ಎಂಬಂತೆ ತಡವಾಗಿಯಾದರೂ ಹೊಸ ಹೊಸ ಸಹವಾಸಗಳು ಅತ್ಯಂತ ಸಹಜವಾಗಿಯೇ entry ಕೊಟ್ಟಿವೆ. ಉದ್ದೇಶಪೂರ್ವಕವಾಗಲ್ಲದಿದ್ದರೂ, ಸಹಜವಾಗಿಯೇ ನಾನು ಸಾಕಷ್ಟು ಬದಲಾಗಿದೀನಿ. ಬದಲಾಗದಿದ್ದುದರ ಕಾರಣಕ್ಕೆ, ಭಾವನಾತ್ಮಕವಾಗಿ, ಸಾಕಷ್ಟು ಜನರನ್ನ ಕಳೆದುಕೊಂಡಿದೀನಿ, ಸಾಕಷ್ಟು ಜನ ನನ್ನನ್ನೂ ಕಳೆದುಕೊಂಡಿದಾರೆ.

ಆದರೆ ನನ್ನ ಬದಲಾದತನಕ್ಕೂ ನಾನು ಒಂದು ಉತ್ತರ ಕೊಟ್ಟುಕೊಳ್ಳಬೇಕಲ್ಲ ಎಂದು ಯೋಚಿಸಿದಾಗ ನೆನಪಾದದ್ದು ಹಿರಿಯೊಬ್ಬರು ಹೇಳಿದ ಮಾತು. 'ಕರು ಚಿಕ್ಕದಾಗಿರುವಾಗ ಅದಕ್ಕೆ ಸಣ್ಣಗೆ ಹಾಗು ಮೃದುವಾಗಿರುವ ಹಗ್ಗವನ್ನು ಕಟ್ತೇವೆ. ಅದು ಬೆಳೀತಾ ಬೆಳೀತಾ ನಾವು ಹೇಗೆ ಹಗ್ಗವನ್ನೂ ಬದಲಾಯಿಸುತ್ತೇವೋ ನಾವೂ ಸಹ ಕಾಲಕ್ಕೆ ತಕ್ಕಂತೆ ಹಾಗು ನಮ್ಮ ಬೆಳವಣಿಗೆಗೆ ಪೂರಕವಾಗಿ ಬದಲಾಗಬೇಕು' ಅಂತ

ಆದರೆ ನಮ್ಮ ಬದಲಾದ’ತನ’ವನ್ನು ಎಲ್ಲ ಕಡೆಗಳಲ್ಲಿಯೂ ಅಭಿವ್ಯಕ್ತಗೊಳಿಸುವುದು ಅಷ್ಟು ಸುಲಭವಲ್ಲಇಷ್ಟೆಲ್ಲಾ ಬದಲಾವಣೆಗಳ ನಡುವೆ ಜೀವನ ತನ್ನದೇ ಆದ ದಿಕ್ಕನ್ನ ಪಡೆದ್ಕೊತಾ ಇದೆ. 'ಆದದ್ದೆಲ್ಲ ಒಳ್ಳೆಯದಕ್ಕೆ' ಎಂಬ ನಂಬಿಕೆ ಇವತ್ತನ್ನು ಹರ್ಷಮಯವಾಗಿರಿಸಲು ಸಹಾಯಕವಾಗಿದೆ.. ಮುಂದೆ ಹೇಗಿರುತ್ತೆ ಎಂಬ ಕುತೂಹಲ ಮಾತ್ರ ನಿರಂತರವಾಗಿರುತ್ತದೆ.

ನನ್ನ ಸಮಾಧಾನಕ್ಕೆ ಬರೆದುಕೊಂಡ  ಅನುಭವ ಆದಷ್ಟು ಸಂಕ್ಷಿಪ್ತವಾಗಿ ಬರೆದುಕೊಳ್ಳಲು ಪ್ರಯತ್ನಿಸಿದ್ದೇನೆ. ಹಲವರಿಗೆ ಹಲವು ರೀತಿಯಲ್ಲಿ ಅರ್ಥವಾಗುವಂತಹ ನನ್ನ ಅನುಭವ ನನ್ನ ಕುರಿತಾದ ಕೆಲವು ಪ್ರಶ್ನೆಗಳಿಗೆ ನನಗೆ ನಾನೇ ಉತ್ತರ ಕಂಡುಕೊಳ್ಳುವ ಪ್ರಯತ್ನಗಳಲ್ಲಿ ಇದೂ ಒಂದು

14 comments:

 1. Super.... one of the best article that u have written...

  ReplyDelete
 2. guru, how are you changing ?!

  you starting drinking, smoking, etc, etc ????!!!

  ReplyDelete
  Replies
  1. ಕೆಲ ವಿಷಯಗಳನ್ನು ಸಹಿಸಿಕೊಳ್ಳಲಾಗದ ಮಟ್ಟದಿಂದ ಸಹಿಸಿಕೊಳ್ಳುವ ಮಟ್ಟದ ತನಕ ಬದಲಾಗಿದ್ದೆನಷ್ಟೇ...

   Delete
  2. ಕೆಲವು ವಿಷಯದಲ್ಲಿ compromise ಆಗದಿರುವುದು ಉತ್ತಮ

   Delete
 3. It doesn't worth changing, if it isn't positive.

  ReplyDelete
 4. one good friend is better than thousand bad friends

  ReplyDelete
 5. 10ನೇ ಪ್ಯಾರಾಗೆ ಉತ್ತರ,

  ಮೊದಲು ಬದಲಾಗದಿದ್ದುದರ ಕಾರಣಕ್ಕೆ ಜನರನ್ನು ಕಳೆದುಕೊಳ್ಳುತ್ತಿದ್ದೆ
  ಮುಂದೆ ಬದಲಾದ ಕಾರಣ ಜನರನ್ನು ಕಳೆದುಕೊಳ್ಳುತ್ತಿ

  ReplyDelete
 6. ವಿಧಿಯೇ ಹಾಗಿದ್ದರೆ ನಾನೇನು ಮಾಡಲು ಸಾಧ್ಯ? ನನ್ನ ಉದ್ದೇಶವಂತೂ ಖಂಡಿತ ಇರುವುದಿಲ್ಲ . ಉಪಕಾರ ಮಾಡಲಾಗದಿದ್ದರೂ ಅಪಕಾರವನ್ನಂತು ಮಾಡುವುದಿಲ್ಲ.

  ReplyDelete
  Replies
  1. ವಿಧಿಯಲ್ಲ ಮೂರ್ಖತೆ, ಯಾವುದು ಸರಿ ಯಾವುದು ತಪ್ಪು ತಿಳಿದು ನಿರ್ಧಾರ ತೆಗೆದುಕೊಳ್ಳಬೇಕು

   Delete
  2. ಯಾರೂ ಕೆಟ್ಟವರಿಲ್ಲ. ಕೆಟ್ಟ ಸ್ನೇಹಿತರಂತು ಇಲ್ಲವೇ ಇಲ್ಲ. ಎಲ್ಲ ನಮ್ಮ ದೃಷ್ಟಿಕೊನವಷ್ಟೇ. ನಮಗೆ ಸರಿ ಆಗಬಾರದವರಿದ್ದಾರೆಯೇ ಹೊರತು ಯಾರಿಗೂ ಆಗಬರದವರಿಲ್ಲ.

   Delete
  3. ಅತಿಯಾದ ಭ್ರಮೆ ಆರೋಗ್ಯಕ್ಕೆ ಒಳ್ಳೆಯದಲ್ಲ,

   ಯಾರು ಏನೇ ಮಾಡಿದರೂ ಅದು ಸರಿ ಎಂದು ತಿಳಿಯುವುದು ಅಪ್ಪಟ ಮೂರ್ಖತನ.

   ಎಲ್ಲರಿಗು ಅವರವರ ಅಭಿರುಚಿಗೆ ತಕ್ಕಂತಹ ಮಿತ್ರರು ಇರುತ್ತಾರೆ, ಹಾಗೆಂದು ಅವರನ್ನು ಒಳ್ಳೆಯವರು ಎಂದು ಹೇಳಕ್ಕಾಗಲ್ಲ.

   ನಿನ್ನ ಅಭಿರುಚಿ ಬದಲಾಗಿರಬಹುದು ...

   Delete
  4. ಯಾರು ಏನೇ ಮಾಡಿದರೂ ಸರಿ ಎಂದು ನನ್ನ ಅಭಿಪ್ರಾಯವಲ್ಲ. ನನಗೆ ಸರಿ ಕಾಣದ್ದು ಇನ್ನೊಬ್ಬನಿಗೆ ಸರಿ ಕಾಣಬಹುದು ಅಷ್ಟೇ.

   Delete
  5. ಒಬ್ಬನಿಗೆ ಸರಿ, ಇನ್ನೊಬ್ಬನಿಗೆ ತಪ್ಪು ಎಂಬುದರಲ್ಲಿ ಅರ್ಥವೇ ಇಲ್ಲ,

   ದೃಷ್ಟಿಕೋನ ಬೇರೆಯಾದ ಮಾತ್ರಕ್ಕೆ ಕೆಟ್ಟ ವಿಚಾರವು ಸರಿಯಾಗುವುದಿಲ್ಲ,

   ಕೇವಲ ಇತರರೊಡನೆ ಸ್ನೇಹ ಬೆಳೆಸಲು ಹೋಗಿ ಬಲಿಯಾಗಬೇಡ

   Delete
  6. ವಿಚಾರ ಬೇರೆ, ಅಭಿಪ್ರಾಯ ಬೇರೆ. ತೇನ ವಿನಾ ತೃಣಮಪಿ ನ ಚಲತಿ

   Delete