May 22, 2014

ವಿವೇಕಾನಂದ ಶಿಲಾಸ್ಮಾರಕದ 'ಅದ್ಭುತ'ಗಾಥೆ - ಭಾಗ ೪

ಸಬ್ ಕೆ ಸಾಥ್ , ಸಬ್ ಕಾ ಸಾಥ್ :

1970ರ ಸೆಪ್ಟೆಂಬರ್ 2ರ ಶಿಲಾಸ್ಮಾರಕದ ವಿದ್ಯುಕ್ತ ಉದ್ಘಾಟನೆಯಾದ ಒಂದು ತಿಂಗಳ ನಂತರ "ಏಕನಾಥಜಿ, ಇಷ್ಟೊಂದು ದೊಡ್ಡ ಚಮತ್ಕಾರವನ್ನು ಮಾಡಿ ತೋರಿಸಿದ ಬಳಿಕ ಈಗ ನಿಮಗೇನನ್ನಿಸುತ್ತಿದೆ?" ಎಂದು ಕೇಳಿದ್ದಕ್ಕೆ "ಈ ಚಮತ್ಕಾರವನ್ನು ನಾನು ಮಾಡಿದ್ದಲ್ಲ. ಭಾರತದ ಆ ಜಾಗೃತ ಚೇತನವೇ ಮಾಡಿ ತೋರಿಸಿದ್ದು. ನೋಡಲಿಕ್ಕೇನೋ ಅದು ಮೂರ್ಛಿತಾವಸ್ಥೆಯಲ್ಲಿದ್ದಂತಿದ್ದರೂ ಒಳಗಿಂದೊಳಗೆ ಅದು ಸಶಕ್ತವಾಗಿದ್ದು ಅದು ಜೀವಂತವಾಗಿಯೂ ಇದೆ. ಈಗ ನಾನು ಕಳೆದ 7 ವರ್ಷಗಳ ಹಿಂದಿನ ಜೀವನದತ್ತ ನೋಡಿದರೆ ಸ್ವತಃ ನನಗೇ ಆಶ್ಚರ್ಯವಾಗುತ್ತದೆ, ಯಾವ ಮಹಾಶಕ್ತಿಯು ನನ್ನನ್ನು ಅದರ ಕೈಗೊಂಬೆಯಾಗಿಸಿಕೊಂಡು ಈ ಮಹತ್ಕಾರ್ಯವನ್ನು ಮಾಡಿಸಿತು ಎಂದು. ನನಗಂತೂ ಸಂಘದ ಕಾರ್ಯದ ಹೊರತಾಗಿ ಬೇರ್ಯಾವ ಅನ್ಯಪದ್ದತಿಯಿಂದ ಸಾರ್ವಜನಿಕ ಕಾರ್ಯಗಳನ್ನು ಮಾಡಿಸಿದ ಅನುಭವವಿಲ್ಲ. ನಿರ್ಮಾಣಕಲೆ, ವಾಸ್ತುಕಲೆ, ಪ್ರಚಾರಕಲೆ, ಇತ್ಯಾದಿಗಳೆಲ್ಲೆಲ್ಲ ಸ್ವಲ್ಪವೂ ಜ್ಞಾನ ಇದ್ದಿರಲಿಲ್ಲ. ಆದರೆ ಈ 7 ವರ್ಷಗಳಲ್ಲಿ ಯಾವುದೊ ಅದೃಶ್ಯ ಶಕ್ತಿಯು ನನ್ನನ್ನು ಕುಣಿಸುತ್ತಲೇ ಇತ್ತು, ನಾನೂ ಕುಣಿಯುತ್ತಲೇ ಇದ್ದೆ"  ಎಂದರು. 


ಶಿಲಾ ಸ್ಮಾರಕದ ಆರ್ಥಿಕ ಬಜೆಟ್ ಕನ್ಯಾಕುಮಾರಿ ಜಿಲ್ಲಾ ಸಮಿತಿಯ 40000 ರುಪಾಯಿಗಳಿಂದ ಹೆಚ್ಚಾಗುತ್ತಾ ಬಂದು 1 ಕೋಟಿ 35 ಲಕ್ಷ ರೂಪಾಯಿಗಳ ಹಂತಕ್ಕೆ ಹೋಗಿ ನಿಂತಿತು . ಈ ದೊಡ್ಡ ಪ್ರಮಾಣದ ಧನರಾಶಿಯನ್ನು ಹೊಂದಿಸುವುದು ಸುಲಭದ ಕೆಲಸವಾಗಿರಲಿಲ್ಲ. 1965ರ ಭಾರತ ಪಾಕಿಸ್ತಾನ ಯುಧ್ಧ ಹಾಗು ರುಪಾಯಿಯ ಅಪಮೌಲ್ಯದ ಕಾರಣದಿಂದಾಗಿ ದೇಶವು ಗಂಭೀರವಾದ ಅರ್ಥಿಕ ಸಂಕಷ್ಟ ಎದುರಿಸುತ್ತಿತ್ತು.  ಎಷ್ಟೋ ಬಾರಿ ಹಣದ ಅಭಾವದಿಂದ ಕೆಲಸಗಾರರಿಗೆ ಅಲ್ಪವೇತನವನ್ನೂ ಕೊಡಲಾಗುತ್ತಿರಲಿಲ್ಲ. ಇದರಿಂದಾಗಿ ಕೆಲಸಗಾರರನ್ನು ಉಳಿಸಿಕೊಳ್ಳಲೂ ಕಷ್ಟವಾಗುತ್ತದೇನೋ ಎಂದು ಕೆಲವೊಮ್ಮೆ ಅನಿಸುತ್ತಿತ್ತು. ಆದರೆ ಏಕನಾಥಜಿಯವರ ನಿಸ್ವಾರ್ಥ ಸಾಧನೆ ಮತ್ತು ಶಿಲಾಸ್ಮಾರಕದಿಂದ ಸ್ಫುರಿಸುತ್ತಿರುವ ಆಧ್ಯಾತ್ಮ ಚೇತನದಿಂದ ಪ್ರೇರಿತರಾಗಿ 'ನಾವು ನಮ್ಮ ಕುಟುಂಬದವರನ್ನು ಊರಿಗೆ ಕಳುಹಿಸಿದ್ದೇವೆ, ಅಲ್ಲಿ ಅವರಿಗೆ ತಕ್ಕ ಮಟ್ಟದ ವ್ಯವಸ್ಥೆ ಮಾಡಬಹುದು. ತಾವು ಇಲ್ಲೀಗ ನಮ್ಮ ಹೊಟ್ಟೆ ತುಂಬುವಷ್ಟರ ಮಟ್ಟಿಗೆ ವ್ಯವಸ್ಥೆ ಮಾಡಿದರೆ ಸಾಕು, ನಾವಿಲ್ಲಿ ಕೆಲಸ ಮಾಡುತ್ತಾ ಇರುತ್ತೇವೆ, ತಮ್ಮ ಬಳಿ ಹಣ ಬಂದ ನಂತರ ಕೊಟ್ಟರೆ ಸಾಕು ' ಎಂದು ಸ್ವತಃ ಕೆಲಸಗಾರೇ ಏಕನಾಥರ ಬಳಿ ತಿಳಿಸಿದ್ದರಂತೆ!

ಧನಸಂಗ್ರಹ ಅಭಿಯಾನವನ್ನು ಏಕನಾಥರು ರಾಷ್ಟ್ರೀಯ ಯಜ್ಞವನ್ನಾಗಿ ರೂಪಿಸಿದರು. ಅವರು ರಾಜ್ಯ ಮಟ್ಟದಲ್ಲಿ ಶಿಲಾಸ್ಮಾರಕ ಸಮಿತಿಗಳನ್ನು ಸಂಘಟಿಸಲಾರಂಭಿಸಿದರು. ತನ್ಮೂಲಕ ಈ ಸಮಿತಿಗಳಲ್ಲಿ ಆಯಾ ರಾಜ್ಯಗಳ ಎಲ್ಲಾ ವಿಚಾರಧಾರೆಗಳ ಪ್ರಭಾವಶಾಲಿ ಪ್ರತಿನಿಧಿಗಳನ್ನು ಒಗ್ಗೂಡಿಸಲು ಪ್ರಯತ್ನಿಸಿದ್ದರು. ತಮಿಳ್ನಾಡಿನ ರಾಜ್ಯ ಸಮಿತಿಯಲ್ಲಿ ದ್ರಾವಿಡ ಮುನ್ನೇತ್ರ ಕಜಗಂ ಮುಖಂಡರಾದ ಸಿ.ಎನ್.ಅಣ್ಣಾದೊರೈ ಸೇರಿದ್ದರೆ, ಕಮ್ಯುನಿಸ್ಟ್ ಮುಖಂಡರಾದ ಕಲ್ಯಾಣ ಸುಂದರಂ, ಜ್ಯೋತಿಬಸು, ವಾಸವ ಪುನೈಯಾರಂತಹವರೆಲ್ಲ ಭಾಗವಹಿಸಿದ್ದರು. ಏಕನಾಥರು ಈ ಸ್ಮಾರಕ ನಿರ್ಮಾಣಕ್ಕಾಗಿ ಕನಿಷ್ಠ 1 ಲಕ್ಷವನ್ನಾದರೂ ನೀಡಲು ಎಲ್ಲ ರಾಜ್ಯ ಸರ್ಕಾರವನ್ನು ಒಪ್ಪಿಸಿದ್ದರು. ನಾಗಾಲ್ಯಾಂಡ್, ಸಿಕ್ಕಿಂನಂತಹ ಸಣ್ಣ ರಾಜ್ಯಗಳಿಂದ ಹಿಡಿದು ಜಮ್ಮು-ಕಾಶ್ಮೀರದ ಮುಖ್ಯಮಂತ್ರಿ ಶೇಖ್ ಅಬ್ದುಲ್ಲಾರಿಂದಲೂ ಅವರು ಈ ಮೊತ್ತವನ್ನು ಪಡೆದಿದ್ದರು. ಮಹಾರಾಷ್ಟ್ರದಲ್ಲಿ ಸಮಿತಿಯ ಅಧ್ಯಕ್ಷರಾಗಿ ಕಾಂಗ್ರೆಸ್ ಮುಖಂಡರಾದ ಎಸ್.ಕೆ.ಪಾಟಿಲ್ ರನ್ನು ಮಾಡಿದರೆ, ಚಂದ್ರಭಾನು ಗುಪ್ತರನ್ನು ಉತ್ತರಪ್ರದೇಶದ ಸಮಿತಿಯ ಅಧ್ಯಕ್ಷರನ್ನಾಗಿಸಿದರು.

ರಾಜ್ಯ ಹಾಗು ಜಿಲ್ಲಾ ಸಮಿತಿಗಳ ನಿರ್ಮಾಣ ಪ್ರಕ್ರಿಯೆಯಲ್ಲಿ ಏಕನಾಥರು ಭಾರತದ ಬಾಹ್ಯ ವೈವಿಧ್ಯತೆ, ವಿಖಂಡಿತ ರಾಜನೀತಿಯ ಗರ್ಭದಲ್ಲಡಗಿರುವ ಸಾಂಸ್ಕೃತಿಕ ಐಕ್ಯತೆ ಹಾಗು ಧರ್ಮನಿಷ್ಠೆಗಳ ಪ್ರತ್ಯಕ್ಷ ಸಾಕ್ಷಾತ್ಕಾರವನ್ನು ಮಾಡಿದರು. ಧನಸಂಗ್ರಹಕ್ಕಾಗಿ ರಾಜ್ಯ ಸರ್ಕಾರಗಳ ಜೊತೆಯಲ್ಲಿ ಏಕನಾಥರು ಉದ್ಯಮಿಗಳ ಸಹಾಯವನ್ನೂ ಪಡೆದರು. ಮೊಟ್ಟ ಮೊದಲು ಅವರು ಪ್ರಸಿದ್ಧ ಉದ್ಯಮಿಯಾದ ಜುಗಲ್ ಕಿಶೋರರೆದುರು ತಮ್ಮ ಹಸ್ತವನ್ನು ಚಾಚಿ ಅವರಿಂದ 1 ಲಕ್ಷ ರೂಪಾಯಿಗಳ ಬೇಡಿಕೆಯನ್ನಿತ್ತರು. ಏಕನಾಥರಂತಹ ಓರ್ವ ಅಪರಿಚಿತ, ಸಾಧಾರಣ ವ್ಯಕ್ತಿಯು ಈ ಬೃಹತ್ ಯೋಜನೆಯನ್ನು ಪೂರ್ಣಗೊಳಿಸಿಯಾರೇ ಎಂಬ ವಿಶ್ವಾಸ ಆ ಉದ್ಯಮಿಗೆ ಮೂಡಲೇ ಇಲ್ಲ. ಅದರಿಂದಾಗಿ ಏಕನಾಥರು ಬಹಳವಾಗಿ ಕೇಳಿಕೊಂಡ ನಂತರ 50 ಸಾವಿರ ಮಾತ್ರ ಮೊದಲಿಗೆ ಕೊಟ್ಟು ಆ ನಂತರ ಇನ್ನುಳಿದ 50 ಸಾವಿರವನ್ನು ಕೊಟ್ಟಿದ್ದರು.

ಏಕನಾಥರು ಈ ಧನಸಂಗ್ರಹ ಕಾರ್ಯವನ್ನು ಬರೇ ಕೇವಲ ರಾಜ್ಯಗಳಿಗೆ, ಉದ್ಯಮಿಗಳಿಗಷ್ಟೇ ಸೀಮಿತಗೊಳಿಸದೆ ಈ ಸ್ಮಾರಕ ನಿರ್ಮಾಣ ಕಾರ್ಯದಲ್ಲಿ ದೇಶದಲ್ಲಿನ ಜನ-ಮನಗಳನ್ನು ಬೆಸೆಯಲು ಯೋಜನೆ ಹಾಕಿಕೊಂಡಿದ್ದರು. ಇದನ್ನೊಂದು ರಾಷ್ಟ್ರೀಯ ಪ್ರಯತ್ನದ ರೂಪದಲ್ಲಿ ವಿಶ್ವಕ್ಕೆ ಸಾಬೀತು ಪಡಿಸಲು ಬಯಸುತ್ತಿದ್ದರು. ಆದುದರಿಂದ ಜನರ ಬಳಿಗೆ ಹೋಗಿ ಧನ ಸಂಗ್ರಹಿಸುವುದಕ್ಕಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ವಿಶಾಲ ಸ್ವಯಂಸೇವಕ ವರ್ಗವು ತಮ್ಮೆಲ್ಲಾ ಶಕ್ತಿ, ಆಸಕ್ತಿಯೊಂದಿಗೆ ಈ ಅಭಿಯಾನದಲ್ಲಿ ತೊಡಗಿಕೊಂಡಿತು. ಕರ್ನಾಟಕ ಸರ್ಕಾರವು 1, 2 ರೂಪಾಯಿಗಳ ಕೂಪನ್ ಗಳ ಮೂಲಕ ಧನಸಂಗ್ರಹ ಮಾಡಲು ಮಾರ್ಗದರ್ಶನ ಮಾಡಿತ್ತು. 1966ರ ಡಿಸೆಂಬರ್ 25ಕ್ಕೆ ಮೈಸೂರು ರಾಜ್ಯ ಸಮಿತಿಯು ನಾಲ್ಕೂವರೆ ಲಕ್ಷ ರೂಪಾಯಿಗಳ ಚೆಕ್ಕನ್ನು ನೀಡುವುದರ ಮೂಲಕ ಏಕನಾಥರ ಆರ್ಥಿಕ ಹೊರೆಯನ್ನು ಕಡಿಮೆ ಮಾಡಿತ್ತು. ಈ ಕೂಪನ್ ಗಳನ್ನು ಸ್ಮೃತಿ ಚಿಹ್ನೆಯಾಗಿ ಜಾಗೃತೆಯಿಂದ ಕಾಪಾಡಬೇಕೆಂಬ ಭಾವನೆ ಪ್ರತಿಯೊಬ್ಬರ ಹೃದಯದಲ್ಲಿ ಜಾಗೃತವಾಗುವಷ್ಟು ಆಕರ್ಷಕವಾಗಿ ಅವುಗಳನ್ನು ಏಕನಾಥರು ರೂಪುಗೊಳಿಸಿದ್ದರು. ಸ್ಮಾರಕ ನಿರ್ಮಾಣಕ್ಕಾಗಿ ಸಂಗ್ರಹವಾದ 1 ಕೋಟಿ 35 ಲಕ್ಷದ ಒಟ್ಟು ಮೊತ್ತದ ಧನರಾಶಿಯಲ್ಲಿ 85 ಲಕ್ಷ ರೂಪಾಯಿಗಳು ಈ ಕೂಪನ್ ಗಳಿಂದಲೇ ಸಂಗ್ರಹ ವಾದದ್ದು! ಇಡೀ ದೇಶದಲ್ಲಿನ  30 ಲಕ್ಷ ಜನ ಈ ಕಾರ್ಯದಲ್ಲಿ ಆರ್ಥಿಕ ಸಹಾಯದಲ್ಲಿ ತೊಡಗಿದ್ದರು.

ವಿರೋಧಗಳಿಗೆ ಸೋಲು :
ಒಂದೆಡೆ ಸ್ಮಾರಕ ನಿರ್ಮಾಣದ ಕಾರ್ಯ ಮುಂದುವರೆದಿದ್ದರೆ ಇನ್ನೊಂದೆಡೆ ರಾಜನೀತಿ ಕ್ಷೇತ್ರವಾದ ಹಾಗೂ ಜಾತಿವಾದದ ಮಡುವಿನಲ್ಲಿ ಕುಸಿಯತೊಡಗಿತ್ತು. ತಮಿಳುನಾಡಿನ ಉತ್ತರ ಹಾಗು ದಕ್ಷಿಣದ ವಿವಾದವು ಕಾವೇರಲಾರಂಭಿಸಿತ್ತು. ಕ್ಷೇತ್ರದವರು ಈ ಸ್ಮಾರಕ ನಿರ್ಮಾಣದ ವಿಷಯದಲ್ಲಿ ಉತ್ತರ-ದಕ್ಷಿಣ ಹೆಸರಿನಲ್ಲಿ ವಿವಾದವನ್ನಾರಂಭಿಸಲು ಪ್ರಯತ್ನಿಸುತ್ತಿದ್ದರು. ತಮಿಳ್ನಾಡಿನಲ್ಲಿ ಉತ್ತರ ಭಾರತದ ವಿವೇಕಾನಂದರ ಪ್ರತಿಮೆಯನ್ನು ಸ್ಥಾಪಿಸುವುದೇಕೆ ? ಹಾಗು ದಕ್ಷಿಣ ಭಾರತದ ವಂದನೀಯ ಸಂತರಾದ ತಿರುವಳ್ಳುವರ್ ರವರ ಪ್ರತಿಮೆಯನ್ನು ಯಾಕೆ ನಿರ್ಮಾಣ ಮಾಡುವುದಿಲ್ಲ? ಎನ್ನುವುದೇ ಅವರ ಗಲಾಟೆಗೆ ಕಾರಣವಾಗಿತ್ತು. ಈ ಕ್ಷೇತ್ರೀಯ ಆಂದೋಲನದಿಂದ ಶಿಲಾಸ್ಮಾರಕ ಸಮಿತಿಯ ಆಗಿನ ತಮಿಳ್ನಾಡುವಾಸಿ ಅಧ್ಯಕ್ಷರಾಗಿದ್ದ ರಾಜನ್ ಕೂಡ ಪ್ರಭಾವಿತರಾದರು. ಆಗ ಅವರು ಆ ಶಿಲೆಯ ಮೇಲೆ ವಿವೇಕಾನಂದರೊಂದಿಗೆ ತಿರುವಳ್ಳುವರ್ ರವರ ಪ್ರತಿಮೆಯನ್ನೂ ಅಗತ್ಯವಾಗಿ ನಿರ್ಮಾಣ ಮಾಡಬೇಕೆಂದು ಸಮಿತಿಗೆ ಒತ್ತಡ ಹೇರಿದರು. ಆಗ ಏಕನಾಥರಿಗೆ ದೊಡ್ಡ ಧರ್ಮ ಸಂಕಟವೊಂದು ಎದುರಾಯಿತು. ಅವರು ಒಂದು ಕಡೆ ರಾಜನ್ ರವರ ರಾಜೀನಾಮೆಯನ್ನು ತಡೆದರು. ಇನ್ನೊಂದೆಡೆ ದ್ರಾ.ಮು.ಕ ಮುಖಂಡರಾದ ಕರುಣಾನಿಧಿಯವರನ್ನು ಶಿಲೆಯ ಹತ್ತಿರ ಕರೆದುಕೊಂಡು ಹೋದರು. ಕರುಣಾನಿಧಿಯವರಲ್ಲಿ ಕಲಾಕಾರನ ದೃಷ್ಟಿ ಇತ್ತು. ಈ ದೃಷ್ಟಿಯಿಂದಲೇ ಅವರು ಶಿಲೆಯ ಮೇಲೆ ಎರಡು ಮಹಾಪುರುಷರ ಪ್ರತಿಮೆಗಳನ್ನು ಸ್ಥಾಪಿಸುವುದು ಅಸಂಭವ ಎಂದರು. ಹೀಗಾಗಿ ತಿರುವಳ್ಳುವರ್ ರವರ ಪ್ರತಿಮೆ ಸ್ಥಾಪನೆಗೆ ಇನ್ನೊಂದು ಸ್ಥಳವನ್ನು ಹುಡುಕಬೇಕಾಗುತ್ತದೆ ಎಂದು ಅಭಿಪ್ರಾಯವನ್ನಿತ್ತರು.

1967ರಲ್ಲಿ ಕಾಂಗ್ರೆಸ್ಸನ್ನು ಸೋಲಿಸಿ ದ್ರಾ.ಮು.ಕ ಪಕ್ಷವು ಅಧಿಕಾರಕ್ಕೆ ಬಂದಿತು. ಈ ಪಕ್ಷದ ಮೊದಲ ಮುಖ್ಯಮಂತ್ರಿ ಅಣ್ಣಾದೊರೈರವರ ಮೃತ್ಯುವಿನ ನಂತರ ಕರುಣಾನಿಧಿಯವರು ಮುಖ್ಯಮಂತ್ರಿಗಳಾದರು ಹಾಗೂ ಈ ಕಾರಣದಿಂದಾಗಿ 1970ರ ಸೆ.3 ರಂದು ಶಿಲಾಸ್ಮಾರಕದ ಔಪಚಾರಿಕ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರೇ ಅಧ್ಯಕ್ಷತೆ ವಹಿಸಿದ್ದರು. ಸ್ಮಾರಕ ನಿರ್ಮಾಣ ಕಾರ್ಯ ಮುಗಿದ ನಂತರ ಅವರದನ್ನು ನೋಡಲೆಂದು ಬಂದಾಗ ಮೂರ್ತಿಯನ್ನು ನೋಡಿದೊಡನೆ ಗದ್ಗದಿತರಾಗಿ 'ನನ್ನ ರಾಜ್ಯದಲ್ಲಿ ಈ ಶಿಲ್ಪಕಲೆಯ ಇಂತಹ ಭವ್ಯ ಕೃತಿಯು ನಿರ್ಮಿಸಲ್ಪಟ್ಟಿರುವುದು ನನಗೆ ತಿಳಿದೇ ಇರಲಿಲ್ಲ' ಎಂದು ನುಡಿದರು. ಕಾರ್ಯಕ್ರಮದಲ್ಲಿ  'ನಾನು ಈ ವೇದಿಕೆಯಿಂದಲೇ ಹೇಳ ಬಯಸುವುದೇನೆಂದರೆ ನಾನು, ನಮ್ಮ ಪಕ್ಷ ಹಾಗು ನನ್ನ ಸರ್ಕಾರವು ಸ್ವಾಮೀಜಿಯವರ ಜೀವನಾದರ್ಶಗಳಿಗೆ ಪೂರ್ಣ ರೀತಿಯಿಂದ ಸಮರ್ಪಿತವಾಗಿದೆ' ಎಂದೂ ನುಡಿದಿದ್ದರು.

(ಹಿಂದಿನ ಭಾಗ)

No comments:

Post a Comment