ಯಾವ ದಿನ, ಇನ್ನೂ 10-15 ವರ್ಷಗಳ ನಂತರ ತಡವಾಗಿ ಬರಲಿ ಎಂದು ಕೇಳಿಕೊಳ್ಳುತ್ತಿದ್ದೆನೋ, ಆ ದಿನ ದುರದೃಷ್ಟವಶಾತ್ ಬಂದೇ ಬಿಟ್ಟಿತು.
ನಾನು ಇಂಜಿನಿಯರಿಂಗ್ ಪದವಿ ಮುಗಿಸಿ 20 ವರ್ಷಗಳ ನಂತರವೂ ಆಗಿಂದಾಗ್ಗೆ ಕಾಲೇಜಿಗೆ ಹೋಗುವ ಪರಿಪಾಠವನ್ನು ಇರಿಸಿಕೊಳ್ಳುವ ಹಾಗೆ ಮಾಡಿದ, ಸಾಕಷ್ಟು ವಿಷಯಗಳ ಬಗ್ಗೆ ಚರ್ಚಿಸುವ ಮಾನಸಿಕತೆಯನ್ನು ಹುಟ್ಟಿಸಿ ಹಾಗು ಪೋಷಿಸಿದ ಕಾಲೇಜಿನ ಆಕರ್ಷಣೆ ಎಂದರೆ ನಮ್ಮ ಪ್ರದೀಪ್ ಸರ್ !!
ಈಗ್ಗೆ ಕೆಲ ವರ್ಷಗಳ ಹಿಂದೆ ಕಾಲೇಜಿಗೆ ಹೋಗಿದ್ದಾಗ ನಮ್ಮ ಕಾಲದಲ್ಲಿ ಬಸ್ಸಿನ ಡ್ರೈವರ್ ಆಗಿದ್ದ ಆಚಾರ್ರು ಸಿಕ್ಕಿದ್ರು. ನನ್ನ ನೋಡಿ ಇನ್ನು ಪಾಸ್ ಆಗಿಲ್ವ ಅಂತ ಕೇಳಿ ಕಿಚಾಯಿಸಿದ್ದರು. ಅಷ್ಟರ ಮಟ್ಟಿಗೆ ನನ್ನ ಕಾಲೇಜಿನ ಭೇಟಿ ನಡೆಯುತ್ತಿತ್ತು, ನಿನ್ನೆಯವರೆಗೂ.
ನಾನು ಪ್ರದೀಪ್ ಸರ್ ರನ್ನು ಮೊದಲ ಬಾರಿ ಭೇಟಿ ಮಾಡಿದ್ದು 2002 ರಲ್ಲಿ 'ಪರಿಣಿತ'ದಲ್ಲಿ. ಆ ಸಮಯದಲ್ಲಿನ C/C++ ಹೇಳಿಕೊಡುವ ಪ್ರತಿಷ್ಠಿತ ಕೋಚಿಂಗ್ ಸೆಂಟರ್ 'ಪರಿಣಿತ'ವಾಗಿತ್ತು. ಅದೇ ಹೊಸ Desktop Computer ಗಳನ್ನು assembly ಮಾಡಿಕೊಡುವ ಜಾಗವೂ ಆಗಿತ್ತು. ಅಂದರೆ ಆ ಕಾಲದ ಶಿವಮೊಗ್ಗದಲ್ಲಿ ಇಂಜಿನಿಯರಿಂಗ್ ಓದುತ್ತಿದ್ದವರೆಲ್ಲರೂ ತಮ್ಮ Desktop ಗಳನ್ನು ಕೊಂಡುಕೊಂಡಿದ್ದು ಪ್ರದೀಪ್ ಸರ್ ಅವರ ಬಳಿಯೇ, ನನ್ನನ್ನೂ ಸೇರಿಸಿ. ಆವಾಗಲೇ ಕಂಪ್ಯೂಟರ್ ಗಳ ಬಗ್ಗೆ ಸಾಕಷ್ಟು ಜ್ಞಾನವನ್ನು ಸಂಪಾದಿಸಿ ಅದನ್ನ ಹಂಚುತ್ತಿದ್ದರು.
ನಾನು 2003 ರಲ್ಲಿ ಕಾಲೇಜು ಸೇರಿದಾಗ ಪ್ರದೀಪ್ ಸರ್ E&C ವಿಭಾಗದ ಅಧ್ಯಾಪಕರಾಗಿದ್ದರು. ನಾನು IS ವಿಭಾಗದ ವಿದ್ಯಾರ್ಥಿಯಾಗಿದ್ದೆ. ಆವಾಗಿನಿಂದಲೇ ಸರ್ ಗೆ ತಲೆ ತಿನ್ನಲು ಶುರು ಮಾಡಿದ್ದೆ. ಆದರೆ ನನ್ನ ವಿಭಾಗವಲ್ಲದ ಕಾಲೇಜು ಹಾಗು 'ಪರಿಣಿತ'ದ ಕಾರಣ ಸಮಯ ಸಾಲುತ್ತಿರಲಿಲ್ಲ.
ಅದೃಷ್ಟವಶಾತ್ 2005 ರಲ್ಲಿ ತಮ್ಮ MTech ನ ವಿಷಯದ ಕಾರಣಕ್ಕೆ ಪ್ರದೀಪ್ ಸರ್ IS ವಿಭಾಗಕ್ಕೆ ಬರಬೇಕಾಯಿತು. ಆಗ ನನ್ನಷ್ಟು ಅದೃಷ್ಟಶಾಲಿ ಯಾರಿಲ್ಲ ಎಂದೆನಿಸಿದ್ದು ಸುಳ್ಳಲ್ಲ. ಅಲ್ಲಿಂದ ಅವರಿಗೆ ನನ್ನ ತಲೆ ನೋವು ಶುರುವಾಗಿ ಇಂದಿನವರೆಗೂ ನಡೆದುಕೊಂಡ ಬಂದಿದೆ. ಮಲಯ ಮಾರುತದ ವಿಷ್ಣುವರ್ಧನ್ ಪಾತ್ರದಲ್ಲಿ ಸಂಗೀತ ಬರದಿದ್ದರೂ ಗುರುವಿಗೆ ಹತ್ತಿರವಾಗಿದ್ದರೆ ವಿದ್ಯೆ ಬರಬಹುದೇನೋ ಎಂಬ 'ಮೂಢ'ನಂಬಿಕೆ ಯಿಂದಷ್ಟೇ !
ಕಳೆದ 25 ವರ್ಷಗಳಿಂದ ಒಂದೇ ಸಮನಾದ, ಋಷಿ ಸದೃಶವಾದ ಜೀವನ ಶೈಲಿ, ವೇಷ-ಭಾಷೆ ಗಳಲ್ಲಿ Consistency, ಇರುವ ನಾನು ನೋಡಿರುವ ಅಪರೂಪದ ವ್ಯಕ್ತಿಗಳಲ್ಲಿ ಪ್ರದೀಪ್ ಸರ್ ಮತ್ತೊಂದು ಅಪರೂಪ.
ಕಾಲೇಜಿನ IS, CS, E&C, TC, DS, AI&ML ಎಲ್ಲ ಬ್ರಾಂಚ್ ಗಳಿಗೆ ಬೇಕಾದ ಸಂಪನ್ಮೂಲ ವ್ಯಕ್ತಿಯಾಗಿರುವ, (ವರ್ತಮಾನದಲ್ಲೂ), ಯಾವುದೇ ಸಮಯದಲ್ಲಿ ಅವರ ಜೊತೆ technical topics ಗಳ ಬಗ್ಗೆ ಚರ್ಚೆ ಅಥವಾ ಪ್ರಶ್ನೆ ಗೆ ಸದಾ ಕಾಯುತ್ತಿರುವ ದಂಡೇ ಇರುತ್ತಿತ್ತು . ಕಾಲೇಜಿನಲ್ಲಿ ಸರ್ ಒಬ್ಬರೇ ಕೂತಿದ್ದ ಸಮಯಗಳು ಬಹಳ ಕಡಿಮೆ ಅಥವಾ , ಬಹುಶಃ ಇಲ್ಲವೇ ಇಲ್ಲ.
Electronics ಹಾಗು Computer Science ವಿಷಯಗಳಲ್ಲಿ ಅವರಿಗಿದ್ದ ಆಸಕ್ತಿ ಹಾಗು ಜ್ಞಾನದ ಬಗ್ಗೆ ಬರೆಯುವ ಸಾಹಸಕ್ಕೆ ನನ್ನಂತಹ ಕುಬ್ಜ ಹೋಗುವುದು ಸರಿಯಲ್ಲ. ಶಿವಮೊಗ್ಗದ ಪ್ರತಿಷ್ಠಿತ ಸಂಸ್ಥೆಗಳಿಗೆ ಸಂಬಂಧ ಪಟ್ಟ ಯಾವುದೇ Software ಹಾಗು Computer ಗಳ ವಿಚಾರದಲ್ಲಿ ಪ್ರದೀಪ್ ಸರ್ ರವರ Expert Advice ಇರದಿರಲು ಸಾಧ್ಯವಿಲ್ಲ. ರಾಷ್ಟೀಯ ಶಿಕ್ಷಣ ಸಮಿತಿಯ ಸಂಸ್ಥೆಗಳಲ್ಲಿ ಬಳಸುತ್ತಿರುವ ಸಾಕಷ್ಟು Software ಗಳ ಹಿಂದೆ ಸರ್ ರವರ ಮೆದುಳು ಇದ್ದೇ ಇದೆ.
ಕಾಲೇಜಿನಲ್ಲಿ ತಮ್ಮ ಅದ್ಭುತ 37 ವರ್ಷಗಳ ದೀರ್ಘ ಸೇವೆಯನ್ನು ಪೂರೈಸಿ ನಿವೃತ್ತಿಯಾಗುತ್ತಿರುವ ಪ್ರದೀಪ್ ಸರ್ ರವರ ಅನುಪಸ್ಥಿತಿ, ಸಂಸ್ಥೆಯಲ್ಲಿ ನಿರ್ವಿವಾದವಾಗಿ ಒಂದು ದೊಡ್ಡ ತಾಂತ್ರಿಕ ಶೂನ್ಯತೆ (technical vacuum) ಯನ್ನು ಉಂಟುಮಾಡಲಿದೆ.
ಪ್ರದೀಪ್ ಸರ್ ರವರ ನಿವೃತ್ತಿ ಜೀವನ ಸಂತೋಷ , ಸುಖ ಹಾಗು ನೆಮ್ಮದಿಯಿಂದ ಕೂಡಿರಲಿ ಎಂದು ಆ ಭಗವಂತನಲ್ಲಿ ನನ್ನದೂ ಒಂದು ಪ್ರಾರ್ಥನೆ.
ಇನ್ನು ಮುಂದೆ ಕಾಲೇಜಿಗೆ ಹೋಗುವ ಯಾವ ಕಾರಣ ಹುಡುಕಲಿ ಎಂಬುದೇ ನನ್ನ ಈಗಿನ ಪ್ರಶ್ನೆಯಾಗಿದೆ ! ! !