ಇತ್ತೀಚೆಗೆ ಧಾರವಾಡ ಬಳಿಯ ಐಟಿಐ ಕಾಲೇಜಿನಲ್ಲಿ ನಡೆದ ಪ್ರಬಂಧ ಸ್ಪರ್ಧೆಯೊಂದರಲ್ಲಿ ಗೆದ್ದವರಿಗೆ ಬಹುಮಾನವಾಗಿ ಕೆಲವು ಪುಸ್ತಕಗಳನ್ನು ನೀಡಲಾಗುತ್ತದೆ ಎಂದು ತಿಳಿದು ಖುಷಿಯಾಗಿತ್ತು. ಆದರೆ ಸ್ಪರ್ಧೆ ಮುಗಿದ ನಂತರ ಬಹುಮಾನ ವಿಜೇತರ ಕೈಗೆ ಸಿಕ್ಕ ಪುಸ್ತಕ ನೋಡಿದರೆ ಕೆಲವು ರಾಜಕೀಯ ವ್ಯಕ್ತಿಗಳ ವಿಕೃತ ಮನಸ್ಸುಗಳ ಅನಾವರಣವಾಗುತ್ತದೆ. ನನ್ನೊಬ್ಬ ಆತ್ಮೀಯರಿಗೆ ಸಿಕ್ಕ ಪುಸ್ತಕ, ಇನ್ನೊಬ್ಬರ ಏಳಿಗೆಯ ಕುರಿತಾದ ಅಸೂಯೆಯ ಪ್ರತೀಕವಾದ, ನಕಾರಾತ್ಮಕ ಮನೋಭಾವದ 'ಸುರೇಶ್ ಭಟ್ ಬಕ್ರಬೈಲ್ ಅವರು ಬರೆದ "ಮಂಕು ಬೂ(ಮೋ)ದಿ-ಹಿಟ್ಲರ್ ರ ಹೆಜ್ಜೆ ಜಾಡುಗಳು"!' ಆದರೆ ಇದನ್ನು ನೋಡಿ ಯಾರಿಗೂ ಇದರ ಹಿಂದಿನ ದುರುದ್ದೇಶಗಳು ಗೋಚರಿಸುವುದೇ ಇಲ್ಲ. ತಮ್ಮ ಬಗ್ಗೆ, ತಾವೇನು ಜನರಿಗೆ ಒಳ್ಳೆಯದನ್ನು ಮಾಡಿದ್ದೇವೆ ಎನ್ನುವ ವಿಷಯವನ್ನು ಇಟ್ಟುಕೊಂಡು ಜನರ ಬಳಿಗೆ ಹೊಗಲು ಸಾಧ್ಯವಿಲ್ಲ, ಮೋದಿಯ ಎದುರು ನಿಲ್ಲಲು ಹೆಚ್ಚಾಗಿ ಏನೂ ವಿಷಯವಿಲ್ಲ ಎಂದರಿತ ಕಾಂಗ್ರೆಸ್ಸಿಗರು, ಮೋದಿಯ ಕುರಿತಾಗಿ ಸಮಾಜದಲ್ಲಿ ದ್ವೇಷವನ್ನು, ಅಸಹನೆಯನ್ನು ಹುಟ್ಟುಹಾಕಲು ಪ್ರಯತ್ನಿಸುತ್ತಿದ್ದಾರೆ. ತನಗೆ ಸಿಗದಿದ್ದರೂ ಇನ್ನೊಬ್ಬರಿಗೆ ಸಿಗುವುದನ್ನು ತಪ್ಪಿಸಲು ಹೊರಟರೆ ಕೊನೆಗೆ ಧುರ್ಯೋಧನನಿಗಾದ ಪರಿಸ್ಥಿತಿಯೇ ಇವರಿಗೆ ಕಟ್ಟಿಟ್ಟ ಬುತ್ತಿ ಎಂದು ಆದಷ್ಟು ಬೇಗ ಅರಿತರೆ ಭವಿಷ್ಯದ ಕನಸು ಕಾಣಬಹುದು.
ತಮ್ಮ ಶೈಕ್ಷಣಿಕ ಸಂಸ್ಥೆಗಳನ್ನು ತಮ್ಮ ರಾಜಕೀಯದ ಭವಿಷ್ಯದ 'ಓಟು'ಗಳನ್ನು ನಿರ್ಮಾಣ ಮಾಡಲು ಬಳಸುವಂತಹ ಕೆಟ್ಟ ಮನಸ್ಸಿನ ಫುಡಾರಿಗಳು ಇರುವವರೆಗೂ ನಮ್ಮ ದೇಶದ ರಾಜಕೀಯ ವ್ಯವಸ್ಥೆ ಸರಿಯಾಗಲು ಸಾಧ್ಯವಿಲ್ಲ. ನಾನೂ ಸಹ ಕಾಂಗ್ರೆಸ್ ನೇತೃತ್ವದ ಕಾಲೇಜುಗಳಲ್ಲೇ ಓದಿದ್ದರೂ ಕಾಲೇಜಿನ ಆಡಳಿತ ಒಂದು ಬಾರಿಯೂ ತಮ್ಮ 'ನಕಾರಾತ್ಮಕ' ವಿಚಾರವನ್ನು ಬೆಳೆಸಲು ಪ್ರಯತ್ನಿಸುವುದನ್ನು ಕಂಡಿಲ್ಲ. ಆದರೆ ನನ್ನ ಕಾಲೇಜು ಬರೀ ಅಪವಾದವಾಗಿರಬಹುದಷ್ಟೇ.!
( ಈ ನನ್ನ ಮೇಲಿನ ಬರಹ ದಿನಾಂಕ ಮೇ 13, 2014ರ 'ಕನ್ನಡಪ್ರಭ'ದಲ್ಲಿ ಪ್ರಕಟವಾಯಿತು )
No comments:
Post a Comment