Nov 10, 2013

ಅಮೆರಿಕಾನುಭವ - 3 : ಸರಿ ಎನಿಸಿದುದನ್ನು ಮಾಡಿದ್ದರ ತೃಪ್ತಿ ತಂದಿತ್ತು..

ನನ್ನ ವೀಸಾ ಅವಧಿ ಸೆಪ್ಟೆಂಬರ್ 30, 2013 ಕ್ಕೆ ಮುಗಿಯುವುದಿತ್ತು. ನನ್ನ ವೀಸಾವನ್ನು ಮುಂದುವರೆಸುವ ಕೋರಿಕೆಯನ್ನು ಅಮೇರಿಕಾದ ಇಮಿಗ್ರೇಶನ್ ವಿಭಾಗ ಇನ್ನೂ ಒಪ್ಪಿರಲಿಲ್ಲ. ಆ ಕಾರಣಕ್ಕೆ ಅದೇ ತಿಂಗಳ ಮೊದಲನೇ ವಾರದಲ್ಲಿ ಪಡೆದ ಕಾರು ಚಾಲನಾ ಪರವಾನಗಿಯನ್ನು ಸೆಪ್ಟೆಂಬರ್ 30ರ ವರೆಗೆ ಮಾತ್ರ ಕೊಟ್ಟರು. ಆ ಸಮಯದಲ್ಲಿ ಪರವಾನಗಿಯನ್ನು ಪಡೆಯುವುದು ಮುಖ್ಯವಾಗಿತ್ತು. ಆ ಕಾರಣಕ್ಕೆ ನಾನು ಸುಮ್ಮನೆ 25 ಡಾಲರ್ ಗಳನ್ನು ಕಟ್ಟಿ ಪರವಾನಗಿ ಪಡೆದು ಬಂದಿದ್ದೆ. 

ಕೆಲ ದಿನಗಳ ನಂತರ ಯೋಚನೆ ಮಾಡಿದಾಗ ನನಗನ್ನಿಸಿದ್ದು, ಒಬ್ಬ ಉದ್ಯೋಗಿ ವೀಸಾವನ್ನು ಮುಂದುವರೆಸಲು ಕೋರಿದ್ದ ಅರ್ಜಿ ಸಂಖ್ಯೆಯನ್ನು ಇಟ್ಟುಕೊಂಡು ವೀಸಾ ಅವಧಿ ಮುಗಿದರೂ 240 (240 day Rule) ದಿನಗಳ ಕಾಲ ಕೆಲಸ ಮಾಡಲು ಕಾನೂನಿನ ಅವಕಾಶವಿದೆ ಎಂದ ಮೇಲೆ ಅದೇ ಅರ್ಜಿ ಸಂಖ್ಯೆಯನ್ನು ವಾಹನ ಪರವಾನಗಿಯನ್ನು ನೀಡಲು ಯಾಕೆ ದಾಖಲೆಯನ್ನಾಗಿ ಪರಿಗಣಿಸಬಾರದು ಎಂದೆನಿಸಲು ಶುರುವಾಯಿತು. ಅದಕ್ಕೆ ತಕ್ಷಣ ನನ್ನ ಪ್ರಶ್ನೆಯನ್ನು ನನ್ನ ಕ್ಷೇತ್ರದ ಅಧಿಕಾರಿಗೆ ಕೇಳಲು (Secretory of State ) ಮೇಲ್ ಕಳಿಸಿದೆ. ಮಾರನೆಯ ದಿನ ಕರೆ ಬಂತು. ನಾನು ನಮ್ಮ ರಾಜ್ಯದ (Michigan ) ಅಧಿಕಾರಿ Ruth Johnson ನೊಂದಿಗೆ ನನ್ನ ಸಮಸ್ಯೆಯ ಬಗ್ಗೆ ಮಾತಾಡಬೇಕು ಎಂದು ವಿನಂತಿಸಿಕೊಂಡೆ. ಅದಕ್ಕವರು ಸಮಸ್ಯೆಯ ಬಗ್ಗೆ ಕೇಳಿ ತಾವೇ ಪರಿಹರಿಸುವುದಾಗಿ ಹೇಳಿ ನನಗೆ ಸಂಬಂಧ ಪಟ್ಟ ಎಲ್ಲ ದಾಖಲೆಗಳನ್ನು ಪಡೆದು Homeland Security ವಿಭಾಗವನ್ನು ಸಂಪರ್ಕಿಸಿ (Background Verification) ಒಂದು ದಿನದ ನಂತರ ನನಗೆ ಮೇಲ್ ಕಳಿಸಿದರು. ಮೇ 28, 2014ರ ವರೆಗೆ ನನ್ನ ವಾಹನ ಚಾಲನಾ ಪರವಾನಗಿಯನ್ನು ಪಡೆಯಲು ಅವಕಾಶವಿದೆ ಎಂದರು. ನಾನು ಮಾರನೇ ದಿನ ಹೋಗಿ ನನ್ನ ಪರವಾನಗಿಯನ್ನು ನವೀಕರಣಗೊಳಿಸಿಕೊಂಡೆ. ಆದರೆ ನನ್ನ ಚಾಲನಾ ಪರವಾನಗಿಯ ಅವಧಿ ಮುಗಿದಿದ್ದ ಕಾರಣಕ್ಕೆ 25 ಡಾಲರ್ ಗಳ ದಂಡವನ್ನು ತೆತ್ತಿದ್ದೆ. 

ಆ ನಂತರ ನನ್ನ ಕೆಲ ಸಹೋದ್ಯೋಗಿಗಳಿಗೂ ಇದೇ ಸಮಸ್ಯೆ ಇದ್ದ ಕಾರಣಕ್ಕೆ ಅವರಿಗೂ ಸಹಾಯವಾಯಿತು. ಅವರೂ ನವೀಕರಣಗೊಳಿಸಿಕೊಂಡರು. 

ಇನ್ನೂ ಕೆಲ ದಿನಗಳ ನಂತರ ಇನ್ನೊಂದು ಯೋಚನೆ ಬಂತು. ನಾನು ಮೊದಲ ಬಾರಿಗೆ ಪರವಾನಗಿಯನ್ನು ಪಡೆದಾಗ ನನ್ನ ಬಳಿ ವೀಸಾ ಮುಂದುವರೆಸಲು ಕೋರಿದ ಅರ್ಜಿ ಸಂಖ್ಯೆ ಇತ್ತು. ಆವಾಗಲೇ ಅದನ್ನು ಪರಿಗಣಿಸಿದ್ದರೆ ನಾನು ನವೀಕರಣಗೊಳಿಸಿಕೊಳ್ಳುವ ಸಂದರ್ಭವೇ ಬರುತ್ತಿರಲಿಲ್ಲ, ನನ್ನ 25 ಡಾಲರ್ ಗಳ ದಂಡವೂ ಉಳಿಯುತ್ತಿತ್ತು ಎಂದೆನಿಸಿತು .

ತಕ್ಷಣ ಮತ್ತೊಮ್ಮೆ ಮೇಲ್ ಕಲಿಸಿದೆ ಈ ವಿಷಯವಾಗಿ ಚರ್ಚೆ ಮಾಡಬೇಕು ಎಂದು. ಒಬ್ಬ ವ್ಯಕ್ತಿ ವೀಸಾವನ್ನು ಮುಂದುವರೆಸಲು ಕೋರಿದ್ದ ಅರ್ಜಿ ಸಂಖ್ಯೆಯನ್ನು ವಾಹನ ಪರವಾಗಿಯನ್ನು ನೀಡಲು ದಾಖಲೆಯನ್ನಾಗಿ ಪರಿಗಣಿಸಬಾರದು, ಸಾರ್ವಜನಿಕ ಸಾರಿಗೆಯ 'ದಾರಿದ್ರ್ಯ'ತೆ ಇರುವ ಇಂತಹ ದೇಶದಲ್ಲಿ ಪರವಾನಗಿ ಇಲ್ಲದೆಯೇ ಹೇಗೆ ಒಬ್ಬ ವ್ಯಕ್ತಿಯು ವಾಸಮಾಡಬಹುದು, ಉದ್ಯೋಗ ಮಾಡಬಹುದು ಎಂದು ಯೋಚಿಸಲು ಸಾಧ್ಯವಾಗುತ್ತದೆ, ವೀಸಾ ಮುಗಿಯುವ ಅವಧಿ ಮತ್ತು 240 ದಿನಗಳ ಅವಧಿಯನ್ನು ಮೊದಲೇ ಪರಿಗಣಿಸಬೇಕಿತ್ತು, ಎನ್ನುವುದು ನನ್ನ ಪ್ರಶ್ನೆಯಾಗಿತ್ತು. 

ಕೆಲ ಚರ್ಚೆಗಳ ನಂತರ ಅವರನ್ನು ಒಪ್ಪಿಸುವುದರಲ್ಲಿ ಗೆದ್ದಿದ್ದೆ. ಕೊನೆಗೆ ನನ್ನ 25 ಡಾಲರ್ ಗಳನ್ನು ಹಿಂದಿರುಗಿಸಲು ಒಪ್ಪಿಸಿವುದರಲ್ಲೂ ಗೆದ್ದಿದ್ದೆ. ಕೆಲ ದಿನಗಳ ನಂತರ ರಾಜ್ಯದ ಖಜಾನೆಯ ಇಲಾಖೆಯಿಂದ ಚೆಕ್ ಬಂತು. 

ಸಾಕಷ್ಟು ಸಲ ನಮಗನ್ನಿಸಿದನ್ನು ಮಾಡಲಾಗದೆ ದಾಕ್ಷಿಣ್ಯಕ್ಕೆ ಹೆದರಿ ಸುಮ್ಮನಾಗುತ್ತೇವೆ. ಅದನ್ನೇ ಬೇರೆಯವರು ಮಾಡಿದಾಗ, 'ಛೆ, ನಮಗೂ ಅನ್ನಿಸಿತ್ತು, ನಾವೇ ಮಾಡಬಾರದಿತ್ತೆ ಎಂದು ಹಲುಬುತ್ತೇವೆ. ಆದರೆ ಈ ಸಲ ಹಾಗೆ ಆಗಲಿಲ್ಲ. ನನಗೆ ಸರಿ ಎನಿಸಿದುದನ್ನು ಮಾಡಿದ್ದರ ತೃಪ್ತಿ ತಂದಿತ್ತು. ಅದು ಸರಿಯೂ ಆಗಿತ್ತು.

Oct 20, 2013

ಆಲ್ಬನಿಯಲ್ಲಿ ನನ್ನ ಪ್ರಥಮ 'ಪ್ಯಾರಾಸೈಲಿಂಗ್'

ನಾನು ಆಲ್ಬನಿಗೆ ಹೋದಾಗ ನಮ್ಮ ದೊಡ್ಡಪ್ಪನ ಜೊತೆ ಸುತ್ತಾಡಲು ಹೋದಾಗ ಅಲ್ಲೇ ಇದ್ದ 'ಲೇಕ್ ಜಾರ್ಜ್' ಎನ್ನುವ ಸ್ಥಳಕ್ಕೆ ಹೋದಾಗ ಅಲ್ಲಿ ಒಂದೆರಡು ಬೋಟುಗಳು ಕೆರೆಯಲ್ಲಿ ಚಲಿಸುತ್ತಿದ್ದುದನ್ನು ಕಂಡೊಡನೆ ಅವುಗಳ ಮೇಲೆ ಪ್ಯಾರಾಚೂಟ್ ಗಳು ಹಾರುತ್ತಿದ್ದುದನ್ನು ಕಂಡು ಕುತೂಹಲ ಮೂಡಿತು . ತಕ್ಷಣ ಅದರ ಬಗ್ಗೆ ವಿಚಾರಿಸಿದೆ. ಕೇಳಿದೊಡನೆಯೇ ರೋಮಾಂಚನಗೊಂಡೆ.

ಅದೇ 'ಪ್ಯಾರಾಸೈಲಿಂಗ್'...!

ಅಲ್ಲಿಯವರೆಗೆ ಹೆಸರು ಕೇಳಿದ್ದೆನೇ ಹೊರತು ಸರಿಯಾದ ಮಾಹಿತಿಯಿರಲಿಲ್ಲ. ಬರೇ ಪ್ಯಾರಾಚೂಟ್ ಬಳಕೆಯ ವಿಷಯ ಗೊತ್ತಿತ್ತು. ತಕ್ಷಣ ಹೆಸರು ನೋಂದಾಯಿಸಲು ಹೋದೆ. ಆದರೆ ಇನ್ನರ್ಧ ಗಂಟೆಗಳ ಕಾಲ ಆಗುವುದಿಲ್ಲ. ನಂತರ ಗಾಳಿಯ ವೇಗವನ್ನು ನೋಡಿಕೊಂಡು ಖಚಿತ ಪಡಿಸುತ್ತೇವೆ ಎಂದರು. ನಾನು ಆಯ್ತು ಎಂದೆ. ಅಲ್ಲೇ ಸುತ್ತಾಡಿ ಕಾಲ ಕಳೆದು ಮದ್ಯಾಹ್ನ 12.30ಯ ಸುಮಾರಿಗೆ ಬಂದೆ. ನನ್ನ ಅದೃಷ್ಟಕ್ಕೆ ಗಾಳಿಯ ಅನುಕೂಲವಿತ್ತು.


75 ಡಾಲರ್ ಗಳನ್ನೂ ಕೊಟ್ಟು ಅದಕ್ಕೆ ಬೇಕಾದ ಜಾಕೆಟ್ ಅನ್ನು ಧರಿಸಿ ಬೋಟ್ ಏರಿದೆ. ನನ್ನ ಜೊತೆಗೆ ಇನ್ನೊಂದು ಇಬ್ಬರು ಮಕ್ಕಳ ತಂಡ ಇತ್ತು. ಸುಮಾರು 10-12 ವರ್ಷದ ಅಕ್ಕ-ತಂಗಿ ಒಟ್ಟಿಗೇ ಭಾಗವಸುವವರಿದ್ದರು. ನಾನು ಒಬ್ಬನೇ ಇದ್ದ ಕಾರಣಕ್ಕೆ ನಾನೇ ಮೊದಲಿಗನಾದೆ. ನನ್ನ ಕ್ಯಾಮೆರಾವನ್ನು ಸಹಾಯಕನಿಗೆ ಕೊಟ್ಟು, ಮೊಬೈಲ್ ಅನ್ನು ಆ ಇಬ್ಬರು ಮಕ್ಕಳ ಪೈಕಿ ಒಬ್ಬಳಿಗೆ ಕೊಟ್ಟು ಇಬ್ಬರೂ ತೆಗೆಯಲಿ ಎಂದು ನಾನು ಹಾರಲು ತಯಾರಾದೆ. ಸಹಾಯಕ ಬಂದು ಹಾರಲು ಬೇಕಾದ ನೈಲಾನ್ ಬೆಲ್ಟ್ ಗಳನ್ನೂ ಕಟ್ಟಿ, ಅವುಗಳನ್ನು ಪ್ಯಾರಾಚೂಟ್ ಗಳಿಗೆ ಸಿಕ್ಕಿಸಿ, ಬೋಟ್ ನ ತುದಿಯಲ್ಲಿ ನಿಲ್ಲಿಸಿ, ಕೂರುವ ಭಂಗಿಯನ್ನು ತಿಳಿಸಿ ಹೋದ.


ದೋಣಿಯ ವೇಗವನ್ನು ಹೆಚ್ಚಿಸುತ್ತಿದ್ದಂತೆ, ಪ್ಯಾರಾಚೂಟಿಗೆ ಸಿಗಿಸಿದ್ದ ಹಗ್ಗವನ್ನು ನಿಧಾನವಾಗಿ ಬಿಡುತ್ತಾ ಬಂದರು . ಆ ಹಗ್ಗವು ಇನ್ನೊಂದು ಕಡೆ ಒಂದು ಗಾಲಿಗೆ ಸುತ್ತಿರುತ್ತಾರೆ. ಸಹಜವಾಗಿ ಪ್ಯಾರಾಚೂಟ್ ಗೆ ಗಾಳಿ ತುಂಬಲು,  ನಾನು ಸಹ ಮೇಲೆ ಏರುತ್ತಾ ಹೋದೆ. ನೋಡನೋಡುತ್ತಿದ್ದಂತೆ ನಾನು ಸುಮಾರು 500 ಮೀಟರ್ ಗಳ ಎತ್ತರದಲ್ಲಿ ಹಕ್ಕಿಯಂತೆ ಹಾರಾಡುತ್ತಿದ್ದೆ. ಅಕ್ಷರಶಃ ಹಕ್ಕಿಯಂತೆಯೇ ಭಾಸವಾಗುತ್ತಿತ್ತು. ಕಳೆದ ವರ್ಷದ ಜಪಾನಿನನಲ್ಲಿದ್ದಾಗಿನ   ಸ್ಕೈಡೈವಿಂಗ್ ನೆನಪಿಗೆ ಬರುತ್ತಿತ್ತು. ಸರಿಸುಮಾರು 20 ನಿಮಿಷಗಳ ಕಾಲ ಹಾರಾಡಿದೆ. ನನ್ನ ಮತ್ತು ಪ್ಯಾರಚೂಟನ್ನು ಯಾವ ರೀತಿ ಪೋಣಿಸಿದ್ದರು ಎಂದರೆ ಎಲ್ಲ ಭಂಗಿಗಳಲ್ಲೂ ಕೂರುವಷ್ಟರ ಮಟ್ಟಿಗೆ ಆರಾಮಾಗಿತ್ತು . ಅದರ ಗೇರ್ ಅಂಡ್ ವೇರ್ ಗಳು ಹಾಗಿದ್ದವು (gear and wear).


ಆ ನಂತರ ಹಗ್ಗ ಸುತ್ತಿದ ಗಾಲಿಯನ್ನು ವಿರುಧ್ಧ ದಿಕ್ಕಿನಲ್ಲಿ ಸುತ್ತುತ್ತ ನಾನು ದೋಣಿಗೆ ಹತ್ತಿರವಾಗುತ್ತ ಕೆಳಗೆ ಬರಲು ಶುರುವಾದೆ. ಕಡೆಯಲ್ಲಿ ನಾನು ದೋಣಿಯ ಒಂದು ತುದಿಯಲ್ಲಿ ಬಂದು ನಿಲ್ಲುವ ತನಕ ಹಗ್ಗದ ಗಾಲಿ ಸುತ್ತಿಕೊಳ್ಳುತ್ತಿತ್ತು. ನಾನು ಬಂದು ಇಳಿದ ನಂತರ ನನ್ನ ಸಹಾಯಕ ಬಂದು ನನ್ನನ್ನು ಪ್ಯಾರಾಚೂಟಿನಿಂದ ಬಿಡಿಸಿ ಅವುಗಳಿಗೆ ಇನ್ನೊಬ್ಬರನ್ನು ಸಿಗಿಸುತ್ತಾರೆ. ಕನಿಷ್ಠ ಒಬ್ಬರು, ಗರಿಷ್ಟ ಮೂವರು ಗಾಳಿಯಲ್ಲಿ ಹಾರಬಹುದು.

ಎಲ್ಲ ಮುಗಿದ ಮೇಲೆ ಅನಿಸಿದ್ದೆಂದರೆ ಇಷ್ಟು ಹೊತ್ತು ನಾನು ಒಂದು ಬೃಹತ್ 'ಗಾಳಿಪಟ'ಕ್ಕೆ ಜೋಡಿಯಾಗಿದ್ದೆ ಎಂದು. ಸಹಜವಾದ ಗಾಳಿಪಟದ 'ತತ್ವ'ಕ್ಕೆ 'ಪ್ಯಾರಾಸೈಲಿಂಗ್' ಎಂಬ ಆಧುನಿಕತೆಯ ವಿಸ್ತೃತ ರೂಪವನ್ನು ಕೊಟ್ಟು ಮನುಷ್ಯನೂ ಹಾರುವಂತೆ ಮಾಡಲಾಗಿದೆ. ಇದನ್ನು ಪ್ರಾರಂಭಿಸಿದವನಿಗೆ ಮನದಲ್ಲೇ ನಮನಗೈದು ಮನೆ ಕಡೆ ತಿರುಗಿದೆ.

ಯಾವುದೇ ತಯಾರಿಯಿಲ್ಲದೆ, ಯಾವುದೇ ಮಾಹಿತಿ ಸಂಗ್ರಹವಿಲ್ಲದೆ 'ಪ್ಯಾರಾಸೈಲಿಂಗ್' ಎಂಬ 'ಅನನ್ಯ ಅನುಭವ' ಮುಗಿದಿತ್ತು.

Sep 29, 2013

ಆಸ್ಪತ್ರೆಗಳ 'ಸುಲಿಗೆ'ಗಳಿಗೆ ಕಡಿವಾಣ ಬೇಕು..

ಇತ್ತೀಚೆಗಷ್ಟೇ ಬೆಂಗಳೂರಿನ ಕೆ.ಆರ್.ಆಸ್ಪತ್ರೆಯ ಸುಲಿಗೆಯ ಬಗ್ಗೆ ಅದೂ ಪೋಲಿಸ್ ಇಲಾಖೆಗೆ ಸೇರಿದ ವ್ಯಕ್ತಿಯ ವಿಷಯದಲ್ಲಿ ನಡೆದಿರುವ ಅವ್ಯವಹಾರ ಬರೀ ಒಂದು ಉದಾಹರಣೆಯಷ್ಟೇ. ಇಂತಹ ಸುಲಿಗೆಗಳನ್ನು ಮಾಡುವ ಲೆಕ್ಕವಿಲ್ಲದ ಆಸ್ಪತ್ರೆಗಳು ಬೆಂಗಳೂರಿನಲ್ಲಷ್ಟೇ ಅಲ್ಲ. ರಾಜ್ಯಾದ್ಯಂತ ಇದೆ. ರೋಗಿಗಳ ದೌರ್ಬಲ್ಯವನ್ನು, ಅಸಹಾಯಕತೆಯನ್ನು, ನಂಬಿಕೆಯನ್ನು 'ಅತಿ' ಸಂಪಾದನೆಯ ಮೂಲವನ್ನಾಗಿ ಮಾಡಿಕೊಂಡಿರುವ ಸಾಕಷ್ಟು ಆಸ್ಪತ್ರೆಗಳಿಗೆ ಅಂಕುಶ ಬೇಕಾಗಿದೆ. ಯಾವುದೇ ಸಮಸ್ಯೆಗೆ ಯಾರಾದಾರೂ ಚಿಕಿತ್ಸೆಗಾಗಿ ದಾಖಲಾದರೆ ಆದಷ್ಟು ಹೆಚ್ಚು ದಿನ ರೋಗಿಯನ್ನು ಉಳಿಸಿಕೊಳ್ಳುವ, ಅಗತ್ಯವಿಲ್ಲದ ಅಥವಾ ಅನಿವಾರ್ಯವಲ್ಲದ ಔಷಧಿಗಳನ್ನು ಗೀಚಿಕೊಡುವ ಕೆಲವರಾದರೂ ಇದ್ದೇ ಇದ್ದಾರೆ. ಸಾವಿರ ರೂಪಾಯಿಗಳ ಜಾಗದಲ್ಲಿ ಎರಡು ಸಾವಿರ ಖರ್ಚಾದರೆ ಕೆಲ 'ವಿಶೇಷ' ಸವಲತ್ತುಗಳ ಕಾರಣ ಕೊಡಬಹುದು. ಆದರೆ ಅದೇ ಒಂದು ಸಾವಿರದ ಜಾಗದಲ್ಲಿ ಹತ್ತು, ಹದಿನೈದು ಸಾವಿರ ಖರ್ಚಾಗುವಂತಾದರೆ ಅದು ವೈದ್ಯಕೀಯ ಕ್ಷೇತ್ರದಲ್ಲಿನ 'ಹೊಟ್ಟೆಬಾಕತನ'ವನ್ನು ತೋರಿಸುತ್ತದೆ.


ಲೆಕ್ಕಕ್ಕೂ ಸಿಗದ ಆರೋಗ್ಯ ವಿಮಾ ಸಂಸ್ಥೆಗಳೂ ಸಹ ತಮ್ಮದೇ ಆದ ವೈದ್ಯರ ತಂಡವನ್ನು ರಚಿಸಿಟ್ಟುಕೊಂಡಿರುತ್ತವೆ. ಯಾವುದೇ ಚಿಕಿತ್ಸೆಗೆ ಅವರದ್ದೇ ವೈದ್ಯರ ತಂಡ ಇಷ್ಟೇ ಮೊತ್ತವನ್ನ ನಿಯಮಿತಗೊಳಿಸಿ ಖಾತರಿಗೊಳಿಸುತ್ತದೆ. ಆ ಮೊತ್ತವನ್ನು ಮಾತ್ರ ಆಸ್ಪತ್ರೆಗೆ ರೋಗಿಯ ಪರವಾಗಿ ನೀಡುತ್ತದೆ. ಉಳಿದ ಹಣವನ್ನು ಚಿಕಿತ್ಸೆ ಪಡೆದವರೇ ನೀಡಬೇಕು. ಅಂದರೆ ವಿಮಾ ಸಂಸ್ಥೆಗಳಿಗೂ ಗೊತ್ತಿದೆ ಆಸ್ಪತ್ರೆಗಳ ಸುಲಿಗೆಗಳಿಗೆ ಬಗ್ಗೆ. ಆ ಕಾರಣಕ್ಕೇನೆ ಅವರದ್ದೇ ಆದ ವೈದ್ಯರ ತಂಡ ಇರುತ್ತದೆ.

ಈ ಎಲ್ಲ ಸುಲಿಗೆಗಳ ಕಡಿವಾಣಕ್ಕೆ ಸರ್ಕಾರದ ಕಡೆಯಿಂದ ಅಥವಾ ಸರ್ಕಾರೀ ನಿಯಂತ್ರಿತ ಖಾಸಗಿ ವೈದ್ಯರ ತಂಡದ ಅವಶ್ಯಕತೆ ಇದೆ. ತಾವು ಪಡೆದ ವೈದ್ಯಕೀಯ ಸೌಲಭ್ಯಗಳು ಮತ್ತು ಅವುಗಳ ಪಾವತಿಗಳ ಬಗ್ಗೆ ಖಾತರಿ ಮಾಡಿಕೊಳ್ಳುವ ಸೌಲಭ್ಯ ಎಲ್ಲ ಸಾರ್ವಜನಿಕರಿಗೆ ಸಿಗುವಂತಾಗಬೇಕು. ಆಗಲೇ ಉತ್ತಮ ಚಿಕಿತ್ಸೆಗೆ ಅನುಗುಣವಾದ ಪಾವತಿ ಮಾಡಿದ ಸಾರ್ಥಕತೆ ಪ್ರತಿ ವ್ಯಕ್ತಿಗೆ ಸಿಗುತ್ತದೆ. ಆ ಮೂಲಕ ವೈದ್ಯಕೀಯ ವ್ಯವಸ್ಥೆ ಹಾಗೂ ಸಾರ್ವಜನಿಕರ ನಡುವೆ ಉತ್ತಮ ಸಂಬಂಧ ಹಾಗೂ  ನಂಬಿಕೆ ಏರ್ಪಡಿಸುವ ಕೆಲಸ ಆಗಬೇಕಿದೆ.


Jul 29, 2013

ಅಮೆರಿಕಾನುಭವ ೨ : ಅನುಭವದ ಮೋಡಿಯೇ ಮೋಡಿ... !

ಅಮೆರಿಕಕ್ಕೆ ಬಂದು ಸಾಕಷ್ಟು ದಿನಗಳ ನಂತರ ಹೊರಗಡೆ ಹೋಗುವ ಅವಕಾಶ ದೊರೆಯಿತು. ಇರುವ 3 ದಿನಗಳ ರಜೆಗಳಿಗೆ ನನ್ನೆರಡು ರಜೆಗಳನ್ನು ಸೇರಿಸಿ 5 ದಿನಗಳ ಕಾಲ ನ್ಯೂಯಾರ್ಕ್, ಚಿಕಾಗೊ ಹಾಗು ಅಲ್ಬನಿಗಳನ್ನು ನೋಡುವ ಸಲುವಾಗಿ ನಿರ್ಧಾರ ಮಾಡಿದೆ. ಒಬ್ಬನೇ ಆಗಿದ್ದರಿಂದ ವಿಮಾನ, ರೈಲು, ಬಸ್ ಹಾಗು ಟ್ಯಾಕ್ಸಿ ಗಳ ಸಹಾಯದಿಂದ ಒಬ್ಬನೇ ಸಾಕಷ್ಟು ಸುತ್ತಾಡಿ ಬಂದೆ. ಈ 5 ದಿನಗಳ ಪ್ರವಾಸದ ಅನುಭವವನ್ನ ಬರೆದಿಟ್ಟುಕೊಳ್ಳುವಷ್ಟು ವಿಶೇಷವಾಗಿತ್ತು. ಜುಲೈ 4ರ ಗುರುವಾರ ಬೆಳಿಗ್ಗೆ 8.20ಕ್ಕೆ ಹಾಲೆಂಡ್ ನಿಂದ ಅಮ್ ಟ್ರಾಕ್ ರೈಲಿನಲ್ಲಿ ಚಿಕಾಗೊವಿಗೆ ಹೋಗಿ ಅಲ್ಲಿ ನನ್ನೊಬ್ಬ ಸ್ನೇಹಿತನನ್ನು ಸೇರಿ, ಭಾರತೀಯ ಹೋಟೆಲಿನಲ್ಲಿ ಊಟ ಮಾಡಿ, ಮಿಚಿಗನ್ ಲೇಕ್ ಬಳಿ ಕೆಲ ಸಮಯ ಕಳೆದು ಸಂಜೆ 5.40ರ ಸ್ಪಿರಿಟ್ ಏರ್ಲೈನ್ಸ್ ನ ವಿಮಾನದಲ್ಲಿ ನ್ಯೂಯಾರ್ಕ್ ನ ಲಗಾರ್ಡಿಯಾ ಏರ್ಪೋರ್ಟ್ ಗೆ ಹೋಗಿ ಅಲ್ಲಿ ಆತ್ಮೀಯರೊಬ್ಬರ ಮನೆಯಲ್ಲಿ ಉಳಿದು, ಶುಕ್ರವಾರ, ಶನಿವಾರ ನ್ಯೂಯಾರ್ಕನ್ನು ನೋಡಿ ಭಾನುವಾರ ಬೆಳಿಗ್ಗೆ ಆಲ್ಬನಿಗೆ ಬಸ್ ನಲ್ಲಿ ಹೋಗಿ ಅಲ್ಲಿ ನಮ್ಮ ದೊಡ್ಡಪ್ಪನವರ ಮನೆಯಲ್ಲಿ 1 ದಿನ ತಂಗಿ, ಸೋಮವಾರ ಸಂಜೆ 5 ಗಂಟೆಯ ಯುನೈಟೆಡ್ ಏರ್ಲೈನ್ಸ್ ನಲ್ಲಿ ಕ್ಲೀವ್ ಲ್ಯಾಂಡ್ ಮುಖಾಂತರ ಗ್ರಾಂಡ್ ರಾಪಿಡ್ ಗೆ ಬಂದಿದ್ದು. ಇದಿಷ್ಟು ಸಂಕ್ಷಿಪ್ತ. ಇನ್ನು ಮುಂದೆ ವಿಶೇಷ.

1. ವಿಮಾನದ ಟಿಕೆಟ್ ಬುಕ್ ಮಾಡುವಾಗ ಚಿಕಾಗೋವಿನಿಂದ ನ್ಯೂಯಾರ್ಕ್ ಗೆ ಟ್ರಾವೆಲ್ ಇನ್ಸೂರೆನ್ಸ್ ತೆಗೆದುಕೊಂಡಿದ್ದೆ. ಆದರೆ ಅಲ್ಬನಿಯಿಂದ ಗ್ರಾಂಡ್ ರಾಪಿಡ್ ಗೆ ತೆಗೆದುಕೊಂಡಿರಲಿಲ್ಲ. ವಿಮಾನ ತಡವಾದರೆ ಅಥವಾ ರದ್ದಾದರೆ ಕೆಲವು ಸೌಲಭ್ಯಗಳಿಗೆ ಸಹಾಯವಾಗುತ್ತದೆ ಎಂದು. ಆದರೆ ನಾನು ಯಾವುದಕ್ಕೆ ತೆಗೆದುಕೊಳ್ಳಲಿಲ್ಲವೋ ಅದೇ ವಿಮಾನ, ಪೂರಕವಲ್ಲದ ಹವಾಮಾನದ ಕಾರಣಕ್ಕೆ ತಡವಾಗಿ ಹೊರಟಿತು !

2. ಆಲ್ಬನಿಯಿಂದ ಗ್ರಾಂಡ್ ರಾಪಿಡ್ ಗೆ ಬರುವ ವಿಮಾನ ರಾತ್ರಿ 9 ಗಂಟೆಗೆ ತಲುಪುವುದಾಗಿತ್ತು. ಆದರೆ ಹವಾಮಾನ ವೈಪರೀತ್ಯದ ಕಾರಣಕ್ಕೆ ತಡವಾಗಿ ರಾತ್ರಿ 12ರ ಸುಮಾರಿಗೆ ತಲುಪಿ ಪಜೀತಿ ಮಾಡಿತು. ಆ ಹೊತ್ತಿನಲ್ಲಿ ಟ್ಯಾಕ್ಸಿಯಲ್ಲಿ ಹೋಗುವುದು ಬೇಡ ಎಂದು ಯೋಚಿಸಿ ಏರ್ಪೋರ್ಟ್ ಸ್ಟಾಫ್ ಒಬ್ಬರ ಬಳಿ ಹೋಗಿ 'ವಿಮಾನ ತಡವಾಗಿ ಬಂದಿದೆ. ಈ ಹೊತ್ತಿನಲ್ಲಿ ಟ್ಯಾಕ್ಸಿಯಲ್ಲಿ ಹೋಗುವ ಬದಲು ನಾಳೆ ಬೆಳಿಗ್ಗೆ ಹಾಲೆಂಡ್ ಗೆ ರೈಲಿನಲ್ಲಿ ಹೋಗುತ್ತೇನೆ. ಇಲ್ಲಿ ಏನೂ ತೊಂದರೆ ಇಲ್ಲದಿದ್ದರೆ ಈ ರಾತ್ರಿ ಏರ್ಪೋರ್ಟ್ ನಲ್ಲೆ ಉಳಿದುಕೊಳ್ಳುತ್ತೇನೆ ಎಂದು ಯೋಚಿಸುತ್ತಿದ್ದೇನೆ' ಎಂದು ಹೇಳಿದ್ದೆ ತಡ ಅಲ್ಲೇ ಇದ್ದ ಪೋಲೀಸಿನವರಿಗೆ ನನ್ನ ಪರಿಚಯಿಸಿ, ಏರ್ಪೋರ್ಟ್ ನಲ್ಲಿದ್ದ ಒಂದು ಕೊಠಡಿಗೆ ಕರೆದುಕೊಂಡು ಹೋಗಿ, ಯಾರೋ ಬಿಟ್ಟುಹೋಗಿದ್ದ ದಿಂಬನ್ನು ನನಗೆ ಕೊಟ್ಟು, ನಾಳೆ ಬೆಳಿಗ್ಗೆ ನನ್ನನ್ನು ಹತ್ತಿರದ ಬಸ್ ನಿಲ್ದಾಣಕ್ಕೆ ಕರೆದುಕೊಂಡು ಹೋಗಲು ಟ್ಯಾಕ್ಸಿಯನ್ನು ಬರಲು ಹೇಳಿ, ಅಲ್ಲಿಂದ ರೈಲ್ವೇ ನಿಲ್ದಾಣಕ್ಕೆ ಹೋಗಲು ಯಾವ ಬಸ್ ಹಿಡಿಯಬೇಕು, ಎಲ್ಲಿ ಇಳಿಯಬೇಕು ಎಂದೆಲ್ಲ ಗುರುತುಮಾಡಿ ಕೊಟ್ಟು, ಬಸ್ಸಿಗೆ ಬೇಕಾದ 1.50 ಡಾಲರ್ ಗಳನ್ನೂ ಕೈನಲ್ಲಿಟ್ಟು (ಬಸ್ ನಲ್ಲಿ ಚಿಲ್ಲರೆ ಕೊಡುವುದಿಲ್ಲ), ಎರಡು ಬಾಟಲಿ ನೀರನ್ನೂ ಕೊಟ್ಟು, ಟ್ಯಾಕ್ಸಿ ಡ್ರೈವರ್ ನಿಮ್ಮ ಮೊಬೈಲಿಗೆ ಕಾಲ್ ಮಾಡುತ್ತಾರೆ ಎಂದು ಹೇಳಿ, ಅಲ್ಲಿಯವರೆಗೂ ಆರಾಮಾಗಿ ನಿದ್ದೆ ಮಾಡಿ' ಎಂದು ಹೇಳಿ ಹೊರಟುಹೋದರು !

3. ಬೆಳಿಗ್ಗೆ 5ರ ಸುಮಾರಿಗೆ ಟ್ಯಾಕ್ಸಿ ಬಂದಿತು. ಸುಮಾರು 30-35 ವರ್ಷದ ಕರಿ ಹೆಂಗಸು. ಕಿಂಚಿತ್ ಭಯವೂ ಆಯಿತು. ಹೋಗದೇ ಇರಲಾಗುವುದಿಲ್ಲ. ದೇವರ ನೆನೆದು ಕಾರು ಹತ್ತಿದೆ. 5-6 ನಿಮಿಷದಲ್ಲೇ ಬಸ್ ನಿಲ್ದಾಣ ಬಂದಿತು. ಹಣವನ್ನು ಕೊಟ್ಟು ಇನ್ನೇನು ಹೊರಡುವಷ್ಟರಲ್ಲೇ ಆ ಹೆಂಗಸು 'ಒಬ್ಬರೇ ಇದ್ದೀರ, ಹುಷಾರು' ಎಂದು ಹೇಳಿದಾಗ ಹೇಗಾಗಿರಬೇಡ ನನಗೆ..! ನಾನು ಏನಕ್ಕೆ ಎಂದಿದ್ದಕ್ಕೆ 'ಸುತ್ತ ಮುತ್ತ ಯಾರೂ ಇಲ್ಲ. ಈ ಹೊತ್ತಿನಲ್ಲಿ ಸ್ವಲ್ಪ ಅಪಾಯ. ಹೆದರಬೇಡಿ' ಎಂದು ನನ್ನ ಭಯವನ್ನು ಇಮ್ಮಡಿ ಗೊಳಿಸಿದಳು. ಮೊದಲಿಗೆ ಇವಳ ಬಗ್ಗೆಯೇ ಹೆದರಿ ಈಗ ಇವಳಿಂದ ಬೇರೆಯವರ ಬಗ್ಗೆ ಭಯ...! 2 ನಿಮಿಷ ಅಲ್ಲೇ ಇದ್ದು, 'ಕ್ಷಮಿಸಿ, ನನಗೆ ಬೇರೆ ರಿಸೆರ್ವೆಶನ್ ಇದೆ. ನಾನು ಹೋಗಲೇಬೇಕು. ಇಲ್ಲದಿದ್ದರೆ ನಿಮ್ಮ ಬಸ್ ಬರುವವರೆಗೂ ಕಾಯುತ್ತಿದ್ದೆ. ಈ ಸ್ಪ್ರೇಯನ್ನು ತೆಗೆದುಕೊಳ್ಳಿ. ಯಾರಾದರೂ ತೊಂದರೆ ಮಾಡಲು ಬಂದರೆ ಅವರ ಮುಖಕ್ಕೆ ಇದನ್ನು ಬಳಸಿ' ಎಂದು ಹೇಳಿ ಹೋದಳು. ಹೆಚ್ಚಿದ ಅನುಮಾನ - ಆತಂಕ. ಆಮೇಲೆ ಬಂದವರೆಲ್ಲರ ಮೇಲೂ ಅನುಮಾನ. ಅದೃಷ್ಟವಶಾತ್ ಯಾರೂ ಏನೂ ತೊಂದರೆ ಮಾಡಲಿಲ್ಲ. ನಾನು ಹೊರಡಬೇಕಿದ್ದ ಬಸ್ ಬಂದಾಗಲೇ ನನಗೆ ಸಮಾಧಾನ.

4. ಇದಕ್ಕೆ ಕೆಲವು ದಿನಗಳ ಹಿಂದೆ ಇದೇ ರೀತಿಯ ಒಂದು ಅನುಭವವಾಗಿತ್ತು. ನನ್ನೊಬ್ಬ ಸಹೋದ್ಯೋಗಿಯ ಮಡದಿಯನ್ನು ಕರೆದುಕೊಂಡು ಬರಲು ನಾನು ಅವನ ಜತೆ ಗ್ರಾಂಡ್ ರಾಪಿಡ್ ಏರ್ಪೋರ್ಟ್ ಗೆ ಹೋಗಿದ್ದೆ. ಆ ದಿನವೂ ಆ ವಿಮಾನ ಬರೋಬ್ಬರಿ 3 ಗಂಟೆಗಳ ಕಾಲ ತಡವಾಗುವುದು ಖಚಿತವಾಗಿತ್ತು. ನಾನು ಬಂದದ್ದೂ ಅದೇ ವಿಮಾನ, ನಾನು ಬಂದಾಗಲೂ ತಡವಾಗಿತ್ತು. ಸಂಜೆ 9 ಗಂಟೆಗೇ ಹೋಗಿದ್ದ ನಾವು ಇನ್ನೂ 3 ಗಂಟೆಗಳ ಕಾಲ ಕಾಯಬೇಕಾಗಿತ್ತು. ಹೊಟ್ಟೆ ಬೇರೆ ಹಸಿಯುತ್ತಿತ್ತು. ಏರ್ಪೋರ್ಟ್ ಸ್ಟಾಫ್ ಬಳಿ ಹೋಗಿ 'ನಡೆದುಕೊಂಡು ಹೋಗುವ ಅಂತರದಲ್ಲಿ ಯಾವುದಾದರೂ ಹೋಟೆಲ್ ಇದೆಯಾ?' ಎಂದು ಕೇಳಿದ್ವಿ. ಅದಕ್ಕೆ ಅವರು ತುಂಬಾ ಸಂಕಟದಿಂದ ಇಲ್ಲಿ ಹತ್ತಿರದಲ್ಲಿ ಯಾವುದೂ ಇಲ್ಲ ಎಂದು ತುಂಬಾ ವಿಷಾದ ವ್ಯಕ್ತಪಡಿಸಿ ಕುಡಿಯುವುದಕ್ಕೆ ನೀರಿನ 2 ಬಾಟಲಿಗಳು, ತಿನ್ನಲು 2 ಎನರ್ಜಿ ಚಾಕೊಲೆಟ್ ಗಳನ್ನು ಕೊಟ್ಟು ಉಪಚರಿಸಿದರು!

ನಮ್ಮ ದೇಶದಲ್ಲಿ ಇವ್ಯಾವುವೂ ನಮಗೆ ಹೊಸದಲ್ಲ, ವಿಶೇಷವಲ್ಲ, ಮೋಡಿಯಲ್ಲ. ಆದರೆ ಇಂತಹ ದೇಶಗಳಲ್ಲಿ ಈ ಎಲ್ಲವೂ ಹೊಸದೇ. ಅದಕ್ಕೆ ಪ್ರವಾಸದ ಆನಂದಕ್ಕಿಂತ ಈ ವಿಶೇಷ ಅನುಭವದ ಮೋಡಿಯೇ ನನ್ನ ಮನಸ್ಸಿನಲ್ಲಿ ಅಚ್ಚುಳಿದಿದೆ.

Jun 24, 2013

ಅಮೆರಿಕಾನುಭವ - ೧ : ಭಾಷೆ ಬಿಟ್ಟು ಎಲ್ಲವೂ ಸಮಸ್ಯೆಯೇ...!

ಅಮೆರಿಕಾಕ್ಕೆ ಬಂದು ಸಾಕಷ್ಟು ದಿನಗಳ ನಂತರ ನನ್ನ ಅನುಭವವನ್ನು ನನ್ನ ಬ್ಲಾಗಿನಲ್ಲಿ ಬರೆಯಲು ಅವಕಾಶ ಬಂತು. ಜಪಾನಿನಲ್ಲಿದ್ದಾಗ ಎಲ್ಲದಕ್ಕೂ ಸಾಕಷ್ಟು ಸಮಯವಿರುತ್ತಿತ್ತು. ಪ್ರತಿದಿನ ಏನಾದರೊಂದನ್ನು ಬರೆಯುತ್ತಿದ್ದೆ. ಆದರೆ ಇಲ್ಲಿಯ ಕೆಲಸದ ವಾತಾವರಣ ಬೇರೆಯದೇ ತೆರನಾದ್ದರಿಂದ ಸಮಯ ಸಿಗುವುದೂ ಅಪರೂಪವಾಗುತ್ತಿತ್ತು. ಬಹಳ ಬಲವಾದ ನಿಶ್ಚಯ ಮಾಡಿ ಅಂತೂ ಬರೆಯಲು ಶುರುವಿಟ್ಟೆ.

ಕಾಕತಾಳೀಯವೆಂದರೆ ಎರಡು ವರ್ಷಗಳ ಹಿಂದೆ ನನ್ನ ಮೊದಲ ವಿದೇಶದ ಅವಕಾಶ, ಜಪಾನ್ ದೇಶಕ್ಕೆ, ಇದೇ ಏಪ್ರಿಲ್ 23ರ ದಿನವಾಗಿತ್ತು. ಕಳೆದ ಸತತ 3 ವರ್ಷಗಳಿಂದಲೂ ಇದೇ ಸಮಯದಲ್ಲಿ ನಾನು ಹೊರ ದೇಶಕ್ಕೆ ಹೋಗುವ ಪರಿಸ್ಥಿತಿ ಬಂದಿದೆ. ಅರ್ಥಾತ್ ನಾನು ಭಾರತ ದಲ್ಲಿರುವ ಅವಕಾಶ ಇಲ್ಲದಂತಾಗಿದೆ. ಇದೇನು ಸೌಭಾಗ್ಯವೋ, ದೌರ್ಭಾಗ್ಯವೋ ಗೊತ್ತಿಲ್ಲ..!

ಏಪ್ರಿಲ್ 23ರ ರಾತ್ರಿ (24ರ ಬೆಳಿಗ್ಗೆ) 4.3೦ರ ಎತಿಹಾದ್ ವಿಮಾನವನ್ನ ಹತ್ತಿ ಬೆಳಿಗ್ಗೆ ಅಬುಧಾಬಿ ತಲುಪಿ ಅಲ್ಲಿಂದ ಶಿಕಾಗೋಗೆ ನಿರಂತರ ೧೫ಗಂಟೆಗಳ ಪ್ರಯಾಣ ಮಾಡಿ ಜೀವನ ಅರ್ಧ ಬೇಜಾರಾಗಾಗಿತ್ತು. ಅಂತೂ ಇಂತೂ ನನ್ನ 'ಪೋರ್ಟ್ ಆಫ್ ಎಂಟ್ರಿ' ಶಿಕಾಗೋ ತಲುಪಿ ಸೆಕ್ಯೂರಿಟಿ ಚೆಕ್ ಎಲ್ಲ ಮುಗಿಸಿ ಇಮಿಗ್ರೇಶನ್ ಗೆ ಅಣಿಯಾದೆ.

ಶಿಕಾಗೋವಿನಲ್ಲಿ ಏರ್ಪೋರ್ಟ್ ನಲ್ಲಿ ಇಮಿಗ್ರೇಶನ್ ಅಧಿಕಾರಿಯ ಸಂದರ್ಶಕ್ಕೆ ಕಾಯುತ್ತಿದ್ದೆ. ನನ್ನ ಮುಂದಿನ ವ್ಯಕ್ತಿಯ ಸರದಿ ಮುಗಿದ ನಂತರ ನಾನು ಅಧಿಕಾರಿಯ ಬಳಿ ಹೋಗಿದ್ದಕ್ಕೆ ಆ ಅಧಿಕಾರಿ 'ನಾನಿನ್ನೂ ನಿಮ್ಮನ್ನು ಕರೆದಿಲ್ಲ. ವಾಪಸ್ ಹಿಂದೆ ಹೋಗಿ' ಎಂದು ಎಷ್ಟು ಗಡುಸಾಗಿ ಹೇಳಿದ ಎಂದರೆ ಅಂದಿನಿಂದಲೇ ಈ ದೇಶದ ಬಗ್ಗೆ ಕೆಟ್ಟ ಅಭಿಪ್ರಾಯಗಳು ಬರಲು ಆರಂಭಿಸಿದವು.

ಇದೇ ತರಹದಲ್ಲಿ ಜಪಾನಿನಿಂದ ವಾಪಾಸ್ ಹೊರಡುವಾಗ ವಾಪಾಸ್ ಕೊಡಲು ಮರೆತಿದ್ದ ನನ್ನ 'ಏಲಿಯನ್ ಕಾರ್ಡ'ನ್ನು ಪಡೆಯಲು ಸ್ವತಃ ಅಧಿಕಾರಿಯೇ ನನ್ನ ಬಳಿಗೆ ಬಂದು ನಾನು ಮತ್ತೆ ಬರುವುದಿಲ್ಲ ಎನ್ನುವುದನ್ನುಸಾಕಷ್ಟು ಬಾರಿ ಕೇಳಿ ಖಚಿತ ಪಡಿಸಿಕೊಂಡು ಹೋಗಿದ್ದು ನನ್ನ ಮನಸ್ಸಿನಲ್ಲಿ ಇನ್ನು ಹಾಗೆಯೇ ಉಳಿದಿದೆ.

ಶಿಕಾಗೋದಿಂದ ನಾನು ಹೋಗಬೇಕಾದ ಹಾಲೆಂಡ್ ಜಾಗದ ಹತ್ತಿರದ ಏರ್ಪೋರ್ಟ್ 'ಗ್ರ್ಯಾಂಡ್ ರಾಪಿಡ್' ಗೆ ಹೋಗಬೇಕಾಗಿತ್ತು. ಶಿಕಾಗೋದಲ್ಲಿ ಲಗ್ಗೇಜ್ ಗಳನ್ನು ತೆಗೆದುಕೊಂಡು, ಡೊಮೆಸ್ಟಿಕ್ ಏರ್ ಲೈನ್ಸ್ ಆದ ಅಮೆರಿಕನ್ ಏರ್ ಲೈನ್ಸ್ ನ ವಿಮಾನ ಹಿಡಿಯಲು ಮತ್ತೆ ಚೆಕ್-ಇನ್ ಮಾಡಬೇಕಾಯಿತು. ಹೋಗಿ ವಿಚಾರಿಸಿದರೆ ನಾನು ಹೋಗಬೇಕಾಗಿದ್ದ 6.30ಯ ವಿಮಾನ ರದ್ದಾಗಿತ್ತು. ನಂತರದ ವಿಮಾನ ರಾತ್ರಿ 9.30ಗೆ ಇತ್ತು. ಅಲ್ಲಿಯವರೆಗೆ ಕಾಯಬೇಕಾಯಿತು. ಆ ಸಮಯದಲ್ಲೇ ನಾನು ಹೋಗುವ ಸ್ಥಳಕ್ಕೇ ಹೋಗುವವನಿದ್ದ, ನಾನು ಕೆಲಸ ಮಾಡುವ ಕಂಪೆನಿಗೇ ಕೆಲಸ ಮಾಡುವವನಿದ್ದ ಒಬ್ಬ ತಮಿಳುನಾಡು ಮೂಲದ ವ್ಯಕ್ತಿಯನ್ನು ಭೇಟಿಯಾದೆ. ಕೊನೆಗೂ 9. 4೦ಕ್ಕೆ ಬಂದ 40 ಜನರ ಪುಟ್ಟ ವಿಮಾನವನ್ನು ಏರಿ ಕುಳಿತು ವಿಮಾನ ಹೊರಟಾಗ ರಾತ್ರಿ 10.15. ಗ್ರ್ಯಾಂಡ್ ರಾಪಿಡ್ ತಲುಪಿದಾಗ 11.40. ಅಲ್ಲಿಂದ ನಾವಿಬ್ಬರೂ ಟಾಕ್ಸಿಯನ್ನು ಹಿಡಿದು ಮನೆಗೆ ಹೋದಾಗ ರಾತ್ರಿ 1.40.

ಇಲ್ಲಿಗೆ ಬಂದ ಒಂದೇ ವಾರಕ್ಕೆ ನನಗನ್ನಿಸಿದುದನ್ನು ಒಂದೇ ವಾಕ್ಯದಲ್ಲಿ ಹೇಳಬೇಕೆಂದರೆ, ಜಪಾನಿನಲ್ಲಿ ಭಾಷೆ ಮಾತ್ರ ಸಮಸ್ಯೆ ಯಾಗಿತ್ತು. ಆದರೆ ಇಲ್ಲಿ ಭಾಷೆ ಯನ್ನು ಹೊರತುಪಡಿಸಿ ಇನ್ನೆಲ್ಲವೂ ಸಮಸ್ಯೆಯೇ, ನನ್ನ ಪಾಲಿಗೆ. ಜಪಾನಿನಲ್ಲಿ ಭಾಷೆಯ ಸಮಸ್ಯೆಯೇ ದೊಡ್ಡದಾಗಿ ಕಂಡು ಸಾಕು ಅನಿಸಿತ್ತು. ಆದರೆ ಇಲ್ಲಿಗೆ ಬಂದ ನಂತರ ಅಲ್ಲಿನ ಸಮಸ್ಯೆ ಬಹಳ ಚಿಕ್ಕ ಸಮಸ್ಯೆಯಾಗಿ ಕಂಡಿತು..!

ಜಪಾನಿನಲ್ಲಿ ಇತರರೊಂದಿಗೆ ಜನರ ನಡವಳಿಕೆ ಅದ್ಭುತ. ಇಲ್ಲೂ ಸಾಕಷ್ಟು ಅದೇ ತರಹವಿದ್ದರೂ ಜಪಾನಿನ ತರಹ ತೀರ ಕ್ಷೇಮ ಎಂಬಂತಹ ವಾತಾವರಣವೇನೂ ಇಲ್ಲ ಎಂಬುದು ಖಚಿತವಾಯಿತು.

Feb 24, 2013

ಹೊರಟಿದ್ದು ಮುಳ್ಳಯ್ಯನಗಿರಿಗೆ , ತಲುಪಿದ್ದು ಕುಮಾರಪರ್ವತಕ್ಕೆ...


ನಾವು ನಾಲ್ವರು ಸ್ನೇಹಿತರು ಪ್ಲಾನ್ ಹಾಕಿದ್ದು ಮುಳ್ಳಯ್ಯನಗಿರಿಗೆ ಹೋಗುವ ಎಂದು, ಆದರೆ ಹೊರಡುವ ಹಿಂದಿನ ದಿನ ನಮ್ಮ ಮೈಲ್ಸ್ ನೋಡಿದ್ರೆ ಕುಮಾರಪರ್ವತಕ್ಕೆ ಹೋಗುವ ಅಂತ ಇತ್ತು. ನಾನು ನೋಡಿರಲೂ ಇಲ್ಲ, ಎಲ್ಲಿಗಾದರೂ ಪರವಾಗಿಲ್ಲ ಅಂತ ನಾನಂತೂ ರೆಡಿ ಆದೆ..

25 ರ ಶುಕ್ರವಾರ ರಾತ್ರಿ 1೦ ರ ಸುಮಾರಿಗೆ ಕತ್ರಿಗುಪ್ಪೆಯ ಬಸ್ ಸ್ಟಾಪ್ ಗೆ ಬಂದ್ವಿ. ಬಸ್ ಗೆ ಕಾದು ಕಾದು ಕೊನೆಗೆ ಅಟೋ ಹಿಡಿದು ಮೆಜೆಸ್ಟಿಕ್ ಗೆ ಹೋದರೆ ಮಡಿಕೇರಿಯ ಬಸ್ ಗಳೆಲ್ಲ ಸ್ಯಾಟಲೈಟ್ ಬಸ್ ಸ್ಟ್ಯಾಂಡಿನಿಂದ ಹೊರಡುತ್ತವೆ ಅಂತ ಕೇಳಿದಾಗ 'ಅಯ್ಯೋ' ಅಂತ ಅಂದುಕೊಂಡು, ಚಿಕ್ಕಮಗಳೂರಿನ ಬಸ್ ನೋಡಿ ಮುಳ್ಳಯ್ಯನಗಿರಿಗಾದರೂ  ಹೋಗೋಣ ಅಂತ ಯೋಚನೆ ಮಾಡುತ್ತಲೇ ಸ್ಯಾಟಲೈಟ್ ಬಸ್ ಸ್ಟ್ಯಾಂಡಿಗೆ ಹೋಗುವ ಬಸ್ ಹತ್ತಿದೆವು.

ನಮ್ಮ ದುರಾದೃಷ್ಟ, ನಾವು ಹೋಗುವಷ್ಟೊತ್ತಿಗೆ ರಾತ್ರಿ 11.30. ಮಡಿಕೇರಿಯ ಕಡೆಯ ಬಸ್ ಹೋಗಿಯಾಗಿತ್ತು. ಮತ್ತೊಮ್ಮೆ ತಲೆ ಮೇಲೆ ಕೈ ಇಟ್ಟುಕೊಳ್ಳುವ ಸರದಿ ನಮ್ಮದಾಗಿತ್ತು. ಏನು ಮಾಡುವ ಎಂದು ಯೋಚಿಸುತ್ತಲೇ ಕುಶಾಲನಗರಕ್ಕೆ ಹೋಗುವ ಕಡೆಯ ಬಸ್ ಕಂಡ ಕೂಡಲೇ ಹತ್ತಿ ಕೂತು ನಿದ್ದೆಗೆ ಅಣಿಯಾದೆವು. 

ಸರಿಯಾಗಿ ಬೆಳಗ್ಗೆ 5 ಗಂಟೆಗೆ ಕುಶಾಲನಗರಕ್ಕೆ ತಲುಪಿದೆವು. ಬಸ್ಸನ್ನು ಇಳಿದರೆ, ಅಬ್ಬಬ್ಬ.., ಹಿಮಾಲಯದ ಚಳಿಯಲ್ಲಿ ಇಳಿದಂತಹ ಅನುಭವ. ಬಹುಶ 7-8 ಉಷ್ಣತೆ ಇದ್ದಿರಬಹುದು. ಆ ಪರಿಯ ಚಳಿಯನ್ನು ನಾವು ಎರಡು ವರ್ಷಗಳ ಹಿಂದೆ ಸ್ಕಂದಗಿರಿಗೆ ಹೋದಾಗ ನೋಡಿದ್ದು...

ಕುಶಾಲನಗರದಿಂದ ನಾವು ಹೋಗಬೇಕಾದ್ದು ಸೋಮವಾರಪೇಟೆಗೆ. ಸಿಕ್ಕವರನ್ನೆಲ್ಲ ಕೇಳುತ್ತ ಸುಮಾರು 6 .3೦ರ ಸುಮಾರಿಗೆ ಬಂದ ಸೋಮವಾರಪೇಟೆಯ ಬಸ್ ಹತ್ತಿ, ಶಯನೋತ್ಸವಕ್ಕೆ ನಾಂದಿ ಹಾಡಿದೆವು.

ಸುಮಾರು ೯೦ ನಿಮಿಷಗಳ  ಕಾಲದ ಪ್ರಯಾಣದ ನಂತರ ಸೋಮವಾರಪೇಟೆ ತಲುಪಿ ಬಸ್ ನಿಂದ ಕೆಳಗಿಳಿದರೆ  ಅಲ್ಲೇ ಇನ್ನೊಂದು ಬಸ್  ಪುಷ್ಪಗಿರಿಗೆ ಹೊರಟಿತ್ತು. ನಾವು ಆ ಬಸ್ಸನ್ನು ಹಿಡಿಯಬೇಕು ಎಂದು ಚಾಲಕನನ್ನು  ವಿಚಾರಿಸಿದಾಗ ಇನ್ನು ೨೦ ನಿಮಿಷಗಳು ಸಮಯವಿರುವುದು  ನಮ್ಮ ಬೆಳಗಿನ ಹೊಟ್ಟೆಪಾಡಿಗೆ ವ್ಯವಸ್ಥೆ  ಮಾಡಿಕೊಳ್ಳಲು ಅನುಕೂಲವಾಯಿತು. ಅಲ್ಲೇ ಇದ್ದ ಕಾಂಡಿಮೆಂಟ್ಸ್ ನಲ್ಲಿ ಬ್ರೆಡ್, ಬಿಸ್ಕತ್, ನೀರಿನ ಬಾಟಲ್ಸ್, ಚಾಕೊಲೆಟ್ ಗಳನ್ನು ಕೊಂಡು, ಪಕ್ಕದ ಹೋಟೆಲ್ ನಲ್ಲಿ ತಿಂಡಿಯನ್ನು ಕಟ್ಟಿಸಿಕೊಂಡು ಬಸ್ ಏರಿದರೆ ಬೆಳಗ್ಗೆ 8.3೦ರ ಹೊತ್ತಿಗೆ 'ಮಲ್ಲಳ್ಳಿ ಜಲಪಾತ'ದ ಸ್ಟಾಪ್ ನಲ್ಲಿ ಇಳಿದೆವು. 

ಅಲ್ಲಿಂದ ೨ ಕಿಲೋಮೀಟರ್ ನಡೆದು ಜಲಪಾತವನ್ನು ತಲುಪಿದೆವು. ಎರಡೆರಡು ಅಡಿಗಳ ಎತ್ತರದ ಮೆಟ್ಟಿಲುಗಳನ್ನು ಇಳಿದು, ಜಲಪಾತದಲ್ಲಿ ಸ್ನಾನಾದಿಗಳನ್ನು ಮುಗಿಸಿ, ತಿಂಡಿ ತಿನ್ನುವ ತನಕ ಎಲ್ಲ ಸೂಪರ್... ಆದರೆ ವಾಪಸ್ ಹತ್ತುವಾಗ.... ಆ ಎತ್ತೆತ್ತರದ ಮೆಟ್ಟಿಲುಗಳನ್ನು ಹತ್ತಿ ಬರಲು ಪಟ್ಟ ಕಷ್ಟ, ಅಬಾಬಬಬಬ.....  ವರ್ಣಿಸಲಸಾಧ್ಯ. ಕುಮಾರ ಪರ್ವತಕ್ಕೆ ಶುರು ಮಾಡುವ ಮುನ್ನವೇ ನಮ್ಮ ಉತ್ಸಾಹ ಮಕಾಡೆ ಮಲಗಿತ್ತು.

ಅಂತು ಇಂತೂ ದೇಹದ ಶಕ್ತಿಯನ್ನೆಲ್ಲ ವ್ಯಯಿಸಿ ಮೇಲೆ ಬಂದು, ಕುಮಾರ ಪರ್ವತಕ್ಕೆ ದಾರಿ ಎಲ್ಲಿಂದ ಎಂದು ಯೋಚಿಸುತ್ತಲೇ 'ಕಂಡ ದಾರಿಯೇ ಇರಬೇಕು' ಎಂಬ ಅನುಮಾನದಿಂದಲೇ ನಡೆಯಲು ಶುರು ಮಾಡಿದೆವು. ನಮ್ಮ ಅದೃಷ್ಟಕ್ಕೆ,  ವೆಂಕಟೇಶ್ ಎಂಬುವರು  ಸಿಕ್ಕಿ ನಾವು ಹೋಗುತ್ತಿದ್ದ ದಾರಿಯನ್ನು ಖಚಿತ ಪಡಿಸಿದಾಗ ಸ್ವಲ್ಪ ಸಮಾಧಾನ. ಇಲ್ಲದಿದ್ದರೆ ಆ ಸುಸ್ತಿನಲ್ಲಿ ಮತ್ತೆ ಎಲ್ಲಿ ವೃಥಾ ನಡೆಯಬೇಕಾಗುತ್ತದೋ ಎಂದು ಭಯ ಪಟ್ಟಿದ್ದೆವು. 

ಸುಮಾರು ಮಧ್ಯಾಹ್ನ ೧ ರ ಸುಮಾರಿಗೆ ಮುಖ್ಯ ರಸ್ತೆ ತಲುಪಿ, ಅಲ್ಲಿಂದ ಶಾಂತಮಲ್ಲಿಕಾರ್ಜುನ ಸ್ವಾಮಿಯ ದೇವಸ್ಥಾನವನ್ನು ತಲುಪಬೇಕಾಗಿತ್ತು. ಅತಿ ಸುಸ್ತಾಗಿದ್ದ ಕಾರಣ ರಸ್ತೆಯಲ್ಲೇ ೧೦ ನಿಮಿಷ ಕೂತು, ನಂತರ ಹೊರಟೆವು. ಪ್ರತಿ ೫ ನಿಮಿಷದ ನಡಿಗೆಗೆ  ಸುಸ್ತಾಗುತ್ತಿದ್ದ ಸಮಯಕ್ಕೆ, ಬರುತ್ತಿದ್ದ  ಟೆಂಪೋಗೆ ಕೈ ಅಡ್ಡ ಹಾಕಿದೆವು. ನಮ್ಮದೃಷ್ಟ, ಹತ್ತಿಸಿಕೊಂಡರು. ಆ ಮೊದಲೇ ಸಾಕಷ್ಟು ವಾಹನಗಳಿಗೆ ಕೈ ಹಾಕಿ, ನಿಲ್ಲಿಸದೆ, ಹಿಡಿ ಶಾಪಗಳನ್ನೆಲ್ಲ ಹಾಕಾಗಿತ್ತು. ಅವರು ನೇರ ದೇವಸ್ಥಾನಕ್ಕೆ ಹೋಗುವವರಾಗಿದ್ದರು. ಸುಮಾರು ೪ ಕಿಲೋಮೀಟರ್ ಗಳ ನಡಿಗೆಯನ್ನ ಉಳಿಸಿದ ವಾಹನದ ಡ್ರೈವರ್ ಗೆ ಹಣ ನೀಡಿದರೂ ಬೇಡವೆಂದರು. 'ಅವರಿಗೆ ಒಳ್ಳೆಯದಾಗಲಿ' ಎಂದು ಹಾರೈಸಿ, ದೇವರ ದರ್ಶನ ಪಡೆದು 'ಕುಮಾರಪರ್ವತ'ವನ್ನು ಹತ್ತಲು ಶುರು ಮಾಡಿದೆವು. ಕುಕ್ಕೆ ಸುಬ್ರಮಣ್ಯದ ಕಡೆಗೆ ಇಳಿಯುವುದು ಎಂದು ನಿಶ್ಚಯಿಸಿದ್ದ ಕಾರಣಕ್ಕೆ, ಅತ್ತ ಕಡೆಯಿಂದ ಇಳಿಯುವಾಗ ಸಿಕ್ಕುವ 'ಭಟ್ಟರ' ಮನೆಗೆ ಫೋನ್ ಮಾಡಿ ಮಾರನೆ ದಿನ ನಾವು ನಾಲ್ವರು ಊಟಕ್ಕೆ ಬರುವುದಾಗಿ ತಿಳಿಸಿದೆವು.

ಕೆಲ ಸಮಯದ   ನಂತರ ಸಿಕ್ಕ ಚೆಕ್ ಪೋಸ್ಟ್ ನಲ್ಲಿ ಅರಣ್ಯ ಅಧಿಕಾರಿಗಳಿಗೆ ಒಬ್ಬರಿಗೆ 1೦೦ ರಂತೆ 4೦೦ ರುಪಾಯಿಗಳನ್ನು ಕೊಟ್ಟು ನಮ್ಮ ಚಾರಣವನ್ನು ಮುಂದುವರೆಸಿದವು. ಅಲ್ಲಿಂದ 7 ಕಿಲೋಮೀಟರ್ ಗಳ ದೂರ ಸಾಗಬೇಕಾಗಿತ್ತು. ಪ್ರತಿ ೦.25 ಕಿಲೋಮೀಟರ್ ಗಳಿಗೆ ಸಿಗುತ್ತಿದ್ದ 'ಉಳಿದಿರುವ ದೂರದ' ಬೋರ್ಡ್ ಗಳನ್ನೂ ನೋಡುತ್ತಾ , ಪ್ರತಿ ಅರ್ಧ ಕಿಲೋಮೀಟರ್ ಗಳಿಗೆ 5 ನಿಮಿಷದ ವಿಶ್ರಾಂತಿ ತೆಗೆದುಕೊಳ್ಳುತ್ತಾ ಹೊರಟೆವು. 'ಮಲ್ಲಳ್ಳಿ' ಯಾ ಪ್ರಭಾವದಿಂದ ಸಾಕಷ್ಟು ಬೇಗ ಸುಸ್ತಾಗುತ್ತಿತ್ತು. ಹೊಟ್ಟೆ ಖಾಲಿಯಾಗಿತ್ತು. ಅರ್ಧ ದೂರ ಹೋಗುವಷ್ಟರಲ್ಲೇ ತಂದಿದ್ದ ಬ್ರೆಡ್-ಜಾಮ್, ಬಿಸ್ಕೆಟ್ ಗಳು ಖಾಲಿಯಾದವು. ರಾತ್ರಿ ಬೆಟ್ಟದ ಮೇಲೆ ತಂಗುವಾಗ 'ಹೊಟ್ಟೆಪಾಡು' ಏನು ಎಂದು ಯೋಚಿಸುತ್ತ ಹೋಗುತ್ತಿರುವಾಗಲೇ ಸಾಕಷ್ಟು ಯುವಕರ ತಂದ ವನ್ನು ಎದುರಾದೆವು.  ಪರಿಚಯವಾಯಿತು. 'ರಚನ್' ಎಂಬವನು ಊಟವಾಯಿತಾ ಎಂದಾಗ, ಮೊದಲಿಗೆ ಆಯ್ತು ಎಂದೆವು, ಆದರೆ ಆಗಿರಲಿಲ್ಲ. ಮೇಲೆ ತಂಗಲು 'ಟೆಂಟ್'ಗಳನ್ನೆಲ್ಲ ತಂದಿದೀರ ತಾನೇ? ಎಂದಾಗ, ನಮ್ಮಿಂದ ನಿರುತ್ತರ. ಮೊದಲೇ ನಾವು ಯಾವುದೇ ತಯಾರಿಯಿಲ್ಲದೆ ಹೊರಟಿದ್ದೆವು. ನಮ್ಮ ಬಳಿ ಟೆಂಟ್ ಎಲ್ಲಿಂದ ಬರಬೇಕು ?! ಇನ್ನೊಮ್ಮೆ ಊಟದ ಪ್ರಶ್ನೆ ಬಂದಾಗ 'ರಾತ್ರಿಗೆ' ಏನು ಇಲ್ಲ ಎಂದದ್ದಕ್ಕೆ 2 ಪ್ಯಾಕ್ ಪುಳಿಯೊಗರೆ ಕೊಟ್ಟರು. ಹೋದ ಜೀವ ಬಂದಂತಾಗಿತ್ತು. ಅವರಿಗೂ ಹಾಗೂ ಮನದಲ್ಲಿ ದೇವರಿಗೂ ಥ್ಯಾಂಕ್ಸ್ ಹೇಳಿ ನಮ್ಮ ನಡಿಗೆಯನ್ನು ಮುಂದುವರೆಸಿದೆವು. 

ಬೆಟ್ಟದ ತುದಿ ತಲುಪುವ ಹೊತ್ತಿಗೆ ಸಾಯಂಕಾಲ 5.30 ಆಗಿತ್ತು. ಆ ಸುಸ್ತಿನಲ್ಲಿ ಒಮ್ಮೆ ವಾಪಸ್ ಹೋಗೋಣವೇ  ಎಂದು ಯೋಚಿಸಿದ್ದೂ ಉಂಟು. ಆದರೆ ಅದಾಗಲೇ ಬೆಟ್ಟವನ್ನು ಹತ್ತಿ ಇಳಿಯುತ್ತಿದ್ದ ಹೆಣ್ಣು ಮಕ್ಕಳು, 9 ವರ್ಷದ ಹುಡುಗನನ್ನು ನೋಡಿ, ನಮ್ ಬಗ್ಗೆ ನಾವೇ ಛೀ ಎಂದುಕೊಂಡು ಕೆಲಸ ಮುಗಿಸಿದ್ದೆವು. 

ಪೂರ್ಣ ಪ್ರಮಾಣದ 'ಸೂರ್ಯಾಸ್ತ'ವನ್ನು ಕಣ್ತುಂಬಿಕೊಂಡು ಮಲಗಲು ಅಣಿಯಾದೆವು. 

ಸಿಕ್ಕಾಪಟ್ಟೆ ಚಳಿ ಇರುತ್ತದೆ ಎಂದು 2-3 ಸುತ್ತಿನ ಬಟ್ಟೆಗಳಿಂದ ತಯಾರಾದೆವು. ಯಾವ ಟೆಂಟ್ ಗಳೂ ಇಲ್ಲದೆ ಹೋಗಿದ್ದ ನಮಗೆ ಬಂಡೆಗಳೇ ಹಾಸಿಗೆಗಳಾದವು. 7-8 ಗಂಟೆಯ ಸಮಯದಲ್ಲಿ ಅಷ್ಟೇನೂ ಚಳಿಯಿರಲಿಲ್ಲ. ವರಸದೃಶವಾದ 'ಪುಳಿಯೊಗರೆ'ಯನ್ನು ತಿಂದು ಸ್ವಲ್ಪ ಹೊತ್ತು ಮಲಗಿದೆವು. ಆದರೆ ಆನಂತರ ಶುರುವಾದ ಚಳಿ ನಮ್ಮನ್ನು ಬೆಳಿಗ್ಗೆಯವರೆಗೂ ಪೂರ್ಣ ಎಚ್ಚರವಾಗಿಯೇ ಇರಿಸುವಲ್ಲಿ ಸಫಲವಾಯಿತು! ನಿದ್ದೆ ಬಂದ ಮೇಲೆ ಯಾವ ಚಳಿಯು ಏನೂ ಮಾಡುವುದಿಲ್ಲ ಎಂದು ಅವಾಗವಾಗ ನಿದ್ದೆ ಮಾಡಲು ಸಾಕಷ್ಟು ವಿಫಲ ಪ್ರಯತ್ನ ಮಾಡಿದ್ದುಂಟು. 

ಬೆಳಿಗ್ಗೆ 7 ರ ಹೊತ್ತಾದರೂ ಉದಯಿಸುತ್ತಿರುವ ಸೂರ್ಯನನ್ನು ನೋಡಲಾಗದ ನಾವು ಇನ್ನೇನು ಹೊರಡುವಷ್ಟರಲ್ಲಿ 'ಸೂರ್ಯೋದಯವನ್ನು' ನೋಡಿದೆವು. ಸಾಕ್ಷಾತ್ ಭಗವೆಯೇ ಪ್ರತ್ಯಕ್ಷವಾದಂತಿತ್ತು !

7.15 ಗೆ ಹೊರಟ ನಾವು ಸುಮಾರು 16-18 ಕಿಲೋಮೀಟರ್ ಗಳ ದೂರವನ್ನು ಕ್ರಮಿಸಬೇಕಾಗಿತ್ತು. ನೀರಿಲ್ಲ, ಹೊಟ್ಟೆಗಿಲ್ಲ. ನಡೆಯುತ್ತಾ ಎಲ್ಲ ಬಗೆಯ ಸುಸ್ತುಗಳನ್ನೂ ಹೊತ್ತು 9 ಕಿಲೋಮೀಟರ್ ಗಳನ್ನು ನಡೆದು, 4 ಬೆಟ್ಟಗಳನ್ನು ದಾಟಿ,  1೦.3೦ಕ್ಕೆ ಭಟ್ಟರ ಮನೆಗೆ ಹೋಗಿ ಊಟ ಮಾಡಿ, ಎಲ್ಲೇ ಮುಂದಿದ್ದ ಅವರ ತೋಟದಲ್ಲಿ 1 ಗಂಟೆಗಳ ಕಾಲ ಮಲಗಿ, 12.30ಗೆ ಪುನಃ ಹೊರಟೆವು. ಅಲ್ಲಿಂದ ಇನ್ನು 6-8 ಕಿಲೋಮೀಟರ್ ಗಳ ದೂರವಿತ್ತು ಕುಕ್ಕೆಸುಬ್ರಮಣ್ಯಕ್ಕೆ. 

ಅಲ್ಲಿಂದ ನಡೆದ ನಮಗಾದ ಸುಸ್ತು, ಅನುಭವ,... ಹುಷ್ಶಪಾ.. ಎಷ್ಟು ನಡೆದರೂ ಕುಕ್ಕೆಯನ್ನು ತಲುಪಲೇ   ಆಗುತ್ತಿರಲಿಲ್ಲ. ಎಷ್ಟು ನಡೆದು ಯಾರನ್ನು ಕೇಳಿದರೂ ಇನ್ನು 2 ಕಿಲೋಮೀಟರ್ ಇದೆ ಎಂತಲೇ ಹೇಳುತ್ತಿದ್ದರು. ಆ ಕಾಡನ್ನು ದಾಟುವಾಗ ಸಿಗುತ್ತಿದ್ದ ಪ್ರತಿ ಇಳಿಜಾರನ್ನೂ 'ಇದೇ  ಕೊನೆಯ ಇಳಿಜಾರು' ಎಂದು ಕೊಳ್ಳುತ್ತಲೇ ಇಳಿಯುತ್ತಿದ್ದೆವು. ಆದರೆ ಕುಕ್ಕೆ ಮಾತ್ರ ಬರುತ್ತಿರಲಿಲ್ಲ. 

2.45 ರ ಹೊತ್ತಿಗೆ ಕುಕ್ಕೆಯನ್ನು ತಲುಪಿ, ಅಲ್ಲಿಂದ ಬಸ್ ನಿಲ್ದಾಣಕ್ಕೆ ೨ ಕಿಲೋಮೀಟರ್ ನಡೆದು ತಲುಪುವ ಹೊತ್ತಿಗೆ ಮಧ್ಯಾಹ್ನ 3.30 ಗಂಟೆ. ಹೋಟೆಲ್ ನಲ್ಲಿ ಊಟ ಮಾಡಿ ಬಸ್ ಸ್ಟ್ಯಾಂಡಿಗೆ ಹೋದರೆ ಬಸ್ ಇರಲಿಲ್ಲ. ಸಂಸ್ಥೆಯ ಅಧಿಕಾರಿಯೊಬ್ಬರಿಗೆ ಕೇಳಿದರೆ ರಾತ್ರಿಯವರೆಗೂ ಬೆಂಗಳೂರಿಗೆ ಬಸ್ಸೇ ಇಲ್ಲ ಎಂದು 'ಪುಂಗಿ' ಊದಿದರು. ಆ ಸುಸ್ತಿನಲ್ಲಿದ್ದ ನಮಗೆ ಮತ್ತೊಮ್ಮೆ ವಿಚಾರಿಸಬೇಕು ಎಂದೆನಿಸದೆ, ಖಾಸಗಿ ಬಸ್ಸಿಗೆ ಮುಂಗಡ ಟಿಕೆಟ್ ತೆಗೆದುಕೊಂಡು,  ಪೂರ್ಣ ವಿಶ್ರಾಂತಿಗೆ ಅವಕಾಶವಾಯಿತು ಎಂದು ಧರ್ಮಛತ್ರದಂತಿದ್ದ ಜಾಗದಲ್ಲಿ ನಾವು ಹೋಗಿ 4.30ರ ಸುಮಾರಿಗೆ  ತಲೆ ಊರಿದೆವು. ಎದ್ದಾಗ ಸಂಜೆ 7 ಗಂಟೆ..! 

ದೇವರ ದರ್ಶನಕ್ಕೆ ಪ್ರಯತ್ನಿಸಿದೆವು. ಏನು ವಿಶೇಷವಿತ್ತೋ ಏನೋ, ಅಂದು ಕುಕ್ಕೆ ಅತಿ ಜನಜಂಗುಳಿಯಿಂದ ಕೂಡಿತ್ತು. ಒಂದು ಗಂಟೆ ಕಾದರೂ ದರ್ಶನವಾಗುವ ಸಾಧ್ಯತೆಗಳಿರಲಿಲ್ಲ. ದೂರದಿಂದಲೇ ಕೈ ಮುಗಿದು, 9 ಗಂಟೆಗೆ ಊಟ ಮಾಡಿ, 9.30 ರ ಹೊತ್ತಿಗೆ ಹೊರಟು, 10 ಗಂಟೆಗೆ ಹೊರಡಲಿದ್ದ ಬಸ್ ಹಿಡಿದು ಬೆಂಗಳೂರಿಗೆ ಬಂದಾಗ ಬೆಳಿಗ್ಗೆ 6 ಗಂಟೆ. ಮನೆಗೆ ಬಂದು 'ಇಂದು ಸಿಕ್ ಲೀವ್' ಎಂದು ನಿಶ್ಚಯಿಸಿ ಮಲಗಿದೆವು. 

ಎರಡು ದಿನಗಳಲ್ಲಿ ಸರಿಸುಮಾರು 35-40 ಕಿಲೋಮೀಟರ್ ಗಳನ್ನು ಸರಿಯಾಗಿ ಹೊಟ್ಟೆಗಿಲ್ಲದೆ ನಡೆದ ನಮಗೆ ಮತ್ತೊಮ್ಮೆ ಚಾರಣದ ಸಹವಾಸವೇ ಬೇಡ ಎಂಬಷ್ಟರ ಮಟ್ಟಿಗೆ ಸುಸ್ತಾಗಿತ್ತು. ಆದರೂ ಒಂದು ಹೊಸ ಅನುಭವವಾಗಿತ್ತು. 

Feb 12, 2013

ಆ ಸಾಂಗತ್ಯದ ಅನುಭವವೇ ಒಂದು ಶಿಕ್ಷಣ, ಸಂಸ್ಕಾರ...

ಕೆಲ ವರ್ಷಗಳ ಹಿಂದೆ ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ನಡೆದ ಒಂದು ಸಮಾರಂಭದಲ್ಲಿ ಕಿರುತೆರೆ ನಿರ್ದೇಶಕ ಟಿ.ಎನ್.ಸೀತಾರಾಮ್ ತಮ್ಮ ಬಗ್ಗೆ ಹೇಳುವಾಗ 'ನನಗೆ ಜೀವನದಲ್ಲಿ ಇಬ್ಬರು ಗುರುಗಳು. ಒಬ್ಬರು ಪುಸ್ತಕಗಳನ್ನ ಓದಲು ಹೇಳಿಕೊಟ್ಟರೆ ಇನ್ನೊಬ್ಬರು ಯಾವ ಯಾವ ಪುಸ್ತಕಗಳನ್ನ ಓದಬೇಕು ಅಂತ ಹೇಳಿಕೊಟ್ಟರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಪ್ರಚಾರಕರಾದ ನ.ಕೃಷ್ಣಪ್ಪನವರು ಪುಸ್ತಕಗಳನ್ನ ಓದುವ ಹವ್ಯಾಸಕ್ಕೆ ಪ್ರೇರಣೆ ಕೊಟ್ಟರೆ, ಪತ್ರಕರ್ತ ಲಂಕೇಶ್ ರವರು ಪುಸ್ತಕಗಳ ಆಯ್ಕೆಗೆ ಕಾರಣರಾದರು' ಎಂದು ಹೇಳಿದ್ದು ನನಗೆ ನೆನಪಿದೆ. ಸೀತಾರಾಂರವರಿಗೆ ಸಿಕ್ಕಿದ ಗುರುಗಳ ಸ್ಥಾನಗಳು ಅದಲು ಬದಲಾಗಿದ್ದರೆ ಇನ್ನು ಚೆನ್ನಾಗಿರುತ್ತಿತ್ತು ಎಂದು ಆ ತಕ್ಷಣ ಕೆಲವರು ಅಂದುಕೊಂಡಿದ್ದು ಉಂಟು.

ಕಳೆದ ಹಲವಾರು ವರ್ಷಗಳಿಂದ ಕ್ಯಾನ್ಸರ್ ನ 'ಸ್ನೇಹಿತ'ರಾಗಿರುವ ನ.ಕೃಷ್ಣಪ್ಪನವರ ಬಗೆಗೆ ಹಾಗೂ ಕ್ಯಾನ್ಸರನ್ನು ಗೆದ್ದಿರುವ,  ಅದರ ಜೊತೆಗೆ ಸಹಜವಾಗಿ ಬದುಕುತ್ತಿರುವ ಇನ್ನು ಕೆಲವರ ಬಗೆಗೆ ಬರೆದಿರುವ ಸಂಗ್ರಹಯೋಗ್ಯವಾದ, ಕ್ಯಾನ್ಸರ್ ನನ್ನು 'ಅಪ್ಪಿ'ಕೊಂಡಿರುವವರಿಗೆ ಸ್ಥೈರ್ಯ ತುಂಬುವ ಸಲುವಾಗಿ ಬರೆದಿರುವ 'ಮೃತ್ಯುಮಿತ್ರ' ಪುಸ್ತಕಕ್ಕೆ ಟಿ.ಎನ್.ಸೀತಾರಾಮ್ ರವರು ಬರೆದ ಮುನ್ನುಡಿ ಈಗ್ಗೆ ಕೆಲ ದಿನಗಳ ಹಿಂದೆ ಓದಿದಾಗ ಬಹಳ ಖುಷಿಯಾಯಿತು. ಸೈದ್ಧಾಂತಿಕವಾಗಿ ಬೇರೆ ಬೇರೆ ದಿಕ್ಕಿನಲ್ಲಿದ್ದರೂ ಇಬ್ಬರು ಹಿರಿಯರ ನಡುವಿನ ಉತ್ತಮ ಸಂಬಂಧ, ಎಡಪಂತೀಯ - ಬಲಪಂತೀಯ ಎಂದು 'ವೈಯಕ್ತಿಕ' ದ್ವೇಷಗಳನ್ನು ಕಾರುತ್ತಿರುವ ಕೊಳಕು ಮನಸ್ಸುಗಳಿಗೆ ಮೇಲ್ಪಂಕ್ತಿಯಾಗಿದೆ. 

ಶ್ರೀಯುತ ಕೃಷ್ಣಪ್ಪನವರ ಬಗೆಗೆ, ಅವರು ಚೆನ್ನಾಗಿರಲಿ ಎಂದು ಪ್ರಾರ್ಥಿಸುವ, ಅವರ ಆಶೀರ್ವಾದ ನಮ್ಮ ಮೇಲೆ ಎಂದೂ ಇರಲಿ ಎಂದು ಕೇಳಿಕೊಳ್ಳುವ ದೊಡ್ಡ ಬಳಗವೇ ಇದೆ. ಸಂಘದ ಪ್ರಚಾರಕರ ಮೇಲ್ಪಂಕ್ತಿಯೇ ಹಾಗೆ. ಆ ಸಾಂಗತ್ಯದ ಅನುಭವವೇ ಒಂದು ಶಿಕ್ಷಣ, ಸಂಸ್ಕಾರ. ಆದರೆ ಅದನ್ನು ಬರಮಾಡಿಕೊಳ್ಳುವ ಮನಸ್ಸಿರಬೇಕಷ್ಟೆ. 

ಪುಸ್ತಕದ ಮುನ್ನುಡಿಯನ್ನು ನನ್ನ ಬ್ಲಾಗ್ ನಲ್ಲಿ ಇರಿಸಿಕೊಳ್ಳುವ ಕಾರಣಕ್ಕಷ್ಟೇ ಈ ಲೇಖನ. 

ನೆಚ್ಚಿನ ಕೃಷ್ಣಪ್ಪನವರಿಗೆ ಪ್ರಣಾಮಗಳು.

ನೆನಪಿದೆಯಾ? ಕೃಷ್ಣಪ್ಪನವರೆ ಹೀಗೆ ಪತ್ರ ಶುರು ಮಾಡುವುದನ್ನು ನೀವೇ ನನಗೆ ಕಲಿಸಿಕೊಟ್ಟಿದ್ದು. 1932ರಲ್ಲಿ ನಾನಿನ್ನೂ ಚಿಕ್ಕ ಹುಡುಗ. ಮಿಡ್ಲ್‌ಸ್ಕೂಲ್‌ನಲ್ಲಿ ಓದುತ್ತಿದ್ದೆನೆಂದು ನೆನಪು. ಯಾವುದೋ ಅನಾರೋಗ್ಯಕ್ಕೆ ನನ್ನನ್ನು ಚಿಕ್ಕಬಳ್ಳಾಪುರದ ಮಿಷನ್ ಆಸ್ಪತ್ರೆಗೆ ಸೇರಿಸಿದ್ದರು. ಅಲ್ಲಿ ನನ್ನ ವಿಳಾಸಕ್ಕೆ ನೀವು ನೆಚ್ಚಿನರಾಜ, ಅಕ್ಕರೆಯ ನೆನಪುಗಳು ಎಂದು ರುಜು ಮಾಡಿ 9 ಪುಟಗಳ ಒಂದು ಪತ್ರ ಬರೆದಿದ್ದಿರಿ (ಮನೆಯಲ್ಲಿ ನನ್ನನ್ನುರಾಜ ಎಂದು ಕರೆಯುತ್ತಿದ್ದರು). ನನ್ನನ್ನುಅದಕ್ಕೆ ಮುಂಚೆ ನೀವು 5-6 ಬಾರಿ ನಮ್ಮ ಮನೆಯ ಹತ್ತಿರವಿದ್ದ ಮೈದಾನದಲ್ಲಿ ನೋಡಿದ್ದೀರಿ ಅಷ್ಟೆ. ಆದರೆ ನಾನು ಯಾತನೆಯಿಂದ ಮನಸ್ಸೆಲ್ಲ ಮಂಕಾಗಿ ಮಲಗಿದ್ದಾಗ – ಒಬ್ಬ 10 ವರ್ಷದ ಚಿಕ್ಕ ಹುಡುಗನಿಗೆ ಅಂತಃಕರಣ, ವಿಶ್ವಾಸ ಮತ್ತು ಭರವಸೆತುಂಬಿದ 9 ಪುಟದ ಪತ್ರ ಬರೆದಿದ್ದಿರಿ. ಖಾಯಿಲೆ ಬಿದ್ದಿರುವ ಚಿಕ್ಕಅಪರಿಚಿತ ಹುಡುಗನ ಮೇಲೆ ಯಾರು ತೋರಿಸುತ್ತಾರೆ ಅಂಥ ವಿಶ್ವಾಸ ಈ ಕಾಲದಲ್ಲಿ? ಆ ಪತ್ರ ಬಂದಾಗ ಖಾಯಿಲೆಯಿಂದ ಮಲಗಿದ್ದ ನಾನು ಅಪರೂಪದ ಸಂಭ್ರಮ ಪಟ್ಟಿದ್ದೆ. ನನಗೆ ಮೊದಲ ಪತ್ರವಿರಬೇಕು. ಪತ್ರದ ತುಂಬಾ ಅಂತಃಕರಣ, ಸುಂದರ ಅಕ್ಷರಗಳು, ಸ್ವಚ್ಛ ಭಾಷೆ. ಅಂಥ ಪತ್ರವನ್ನು ನಾನು ಮುಂಚೆ ನೋಡಿಯೂ ಇರಲಿಲ್ಲ. ಆಮೇಲೆ ನಮ್ಮ ಮನೆಯಲ್ಲಿ ಎಷ್ಟೋ ವರ್ಷ ನಿಮ್ಮ ಪತ್ರದ್ದೇ ಮಾತು. ಪತ್ರ ಬರೆದರೆ ಕೃಷ್ಣಪ್ಪನವರಥರ ಬರೆಯಬೇಕು ಎಂದು ಎಲ್ಲರೂ ಅಂದುಕೊಳ್ಳುವಷ್ಟು ಸುಂದರವಾಗಿತ್ತು ನಿಮ್ಮ ಪತ್ರ. ಪಾಯಶಃ ನಿಮ್ಮ ಪತ್ರದ ಭಾಷೆ ಮತ್ತು ಅಂತರ್ಗತ ಭಾವ ಕೋಶತೆ ನನ್ನನ್ನು ಸಾಹಿತ್ಯ ಮತ್ತು ಕಲೆಯಕಡೆ ಸೆಳೆದವು ಎಂದು ನನ್ನ ಭಾವನೆ.

ನಿಮಗೇ ಗೊತ್ತು ನಮ್ಮ ತಂದೆ ಕಾಂಗ್ರೆಸ್‌ನವರು.ತುಂಬಾ ಶಿಸ್ತಿನ ಮನುಷ್ಯರು. ಹಳೆಯ ಕಾಂಗ್ರೆಸ್‌ನವರಿಗೆ ಸಂಘದವರನ್ನು ಕಂಡರೆ ಕೋಪವಿರುತ್ತಿದ್ದ ದಿನಗಳು. ಅಂಥಾ ನಮ್ಮ ಮನೆಯಲ್ಲಿಕೂಡ ನಿಮ್ಮನ್ನು ಕಂಡರೆ ನಮ್ಮ ಮನೆಯಎಲ್ಲರಿಗೂ ಎಷ್ಟು ಪ್ರೀತಿ ವಿಶ್ವಾಸ. ನೆನಪಿದೆಯಾ?ಅಷ್ಟು ವಿಶ್ವಾಸ, ಅಂತಃಕರಣತಮ್ಮಲ್ಲಿಕಾಣುತ್ತಿದ್ದೆವು ನಾವು. 

ನೀವು ನಂಬಿದ ಸಂಘಟನೆಯ ಸೈದ್ಧಾಂತಿಕ ತತ್ವಗಳಿಗೆ ನಾನು ಬಹುದೂರ ಹೋಗಿ ಸಮಾಜವಾದಿ ಪಕ್ಷಕ್ಕೆ ಸೇರಿದಾಗಲೂ ನಿಮ್ಮ ಬಗೆಗಿನ ವೈಯಕ್ತಿಕಗೌರವ ನನಗೆ ಕಿಂಚಿತ್ತೂ ಕಡಿಮೆಯಾಗಲಿಲ್ಲ. ಅಂಥದೊಡ್ಡ ವ್ಯಕ್ತಿ ನೀವು. ಆಗ ನಿಮಗೆ 28-30 ವಯಸ್ಸು ಅನಿಸುತ್ತೆ. ದೇಹದ ಮತ್ತು ಬದುಕಿನ ಆಕರ್ಷಣೆಯ ವಿರುದ್ಧ ಹೋರಾಟ ಮಾಡುವುದು ಸುಲಭದ ಮಾತಲ್ಲ. ಆದರೆ ಆ ವಯಸ್ಸಿನಲ್ಲಿ ನೀವು ಎಂಥ ನಿಸ್ಪೃಹ ಬದುಕು ಬದುಕುತ್ತಿದ್ದಿರಿ ಎಂದು ಅನೇಕ ವರ್ಷಗಳ ನಂತರ ನನಗೆ ಅರಿವಾಗತೊಡಗಿತು. ಈ ಸಮಾಜಕ್ಕೆ ನನ್ನ ಬದುಕು ಅರ್ಪಣೆ ಎಂದು ಆತ್ಮವಿಶ್ವಾಸದ ನಗೆ ಬೀರುತ್ತಾ ಹೇಳುತ್ತಿದ್ದಿರಿ. ನಿಮ್ಮಔಷಧಿಗಾಗಿ ಕೊಂಡುಕೊಂಡ ಆಗಿನ ಮೂರು ಪೈಸೆಯ ಒಂದು  ನಿಂಬೆಹಣ್ಣಿನ ಲೆಕ್ಕ ಕೂಡ ಬರೆದುಕೊಳ್ಳುತ್ತಿದ್ದಿರಿ. ಅದನ್ನು ನಿಮ್ಮ ಕೇಂದ್ರ ಶಾಖೆಗೆ ಕಳುಹಿಸುತ್ತಿದ್ದರೋ ಏನೋ ಗೊತ್ತಿಲ್ಲ. ಅಷ್ಟು ನಿಸ್ಪೃಹ ಮನುಷ್ಯರು ನೀವು. ನಾನು ಮೆಚ್ಚುವ ಗಾಂಧಿಯಂತ ಅತ್ಯಂತ ಸರಳ ಬದುಕನ್ನು ಬದುಕಿದ ಮನುಷ್ಯ ನೀವು. ಕೃಷ್ಣಪ್ಪನವರೆ ನಿಮ್ಮ ಬುದ್ಧಿಶಕ್ತಿಗೆ, ನಿಮ್ಮ ವಿದ್ಯಾಭ್ಯಾಸಕ್ಕೆ ನಿಮ್ಮ ಚಮಕಿಗೆ ನೀವು ಸುಲಭವಾಗಿ ಐಎಎಸ್ ಮಾಡಿ ದೊಡ್ಡ ಅಧಿಕಾರಿಯಾಗಬಹುದಿತ್ತು. ಏನು ಬೇಕಾದರೂ ಆಗಬಹುದಿತ್ತು. ಆದರೆ ನೀವು ಅದೆಲ್ಲವನ್ನು ಧಿಕ್ಕರಿಸಿ ಸಂಘಟನೆಗೆ ನಿಮ್ಮನ್ನು ಸಮರ್ಪಿಸಿಕೊಂಡಿರಿ.

ನಿಮ್ಮ ಸಂಘಟನೆಯ ಬಗ್ಗೆ ನನ್ನದೇ ಆದ ವಿರೋಧವಿದೆ. ಭಾರತವನ್ನು ಅಮೆರಿಕಾದ ಮಡಿಲಲ್ಲಿ ಇಡಲು ಕಾರಣವಾದ ಸಂಘಟನೆ ಎಂಬ ಆಳದ ಸಿಟ್ಟು ಇದೆ. ಆರ್ಥಿಕ ಸಮಾನತೆಯ ಬಗ್ಗೆ ಚಕಾರವೆತ್ತದೆ ಧರ್ಮದ ವಿಚಾರದಲ್ಲಿ ಮಾತ್ರ ಉದ್ವಿಗ್ನರಾಗುವವರು ಎಂಬ ಆಕ್ಷೇಪಣೆ ನನ್ನದು. ನಾನು ಸೈದ್ಧಾಂತಿಕವಾಗಿ ಬೇರೆದಾರಿ ಹಿಡಿದರೂ ಕೂಡ ಇಂದಿಗೂ ನನ್ನ ಮನಸ್ಸಿನಲ್ಲಿ ಮತ್ತು ಹೃದಯಲ್ಲಿ ಅತ್ಯಂತ ಆತ್ಮೀಯ ಗುರುವಿನಂತೆ ನಿಂತವರಲ್ಲಿ ನೀವು ಮೊದಲಿಗರು. ನಾನು ದೂರ ಹೋದೆನೆಂದು ಕೋಪಗೊಂಡವರು ನೀವಲ್ಲ. ಬದಲಿಗೆ ಎಷ್ಟೋ ವರ್ಷಗಳ ನಂತರ ಮಾಯಾಮೃಗ ತೆಗೆದದ್ದು ನಾನೇ ಎಂದುಗೊತ್ತಾದಾಗ ನನ್ನನ್ನು ಹುಡುಕಿಕೊಂಡು ಬಂದು ಆತ್ಮೀಯವಾಗಿ ಅಪ್ಪಿಕೊಂಡು ಹೆಮ್ಮೆಪಟ್ಟ ಬಂಧು ನೀವು.

ನಾನು ಜೀವನದಲ್ಲಿ ಮೊದಲು ಓದಿದ ಕಾದಂಬರಿ ಭೈರಪ್ಪನವರ ಧರ್ಮಶ್ರೀಯನ್ನು ನಾನು ಹೈಸ್ಕೂಲಿನಲ್ಲಿದ್ದಾಗ ಓದಿಸಿದವರು ನೀವು. ಶಿವರಾಮ ಕಾರಂತರ ಕಾದಂಬರಿ ಓದಿಸಿದವರು ನೀವು. ಜೆ.ಪಿ.ಯವರ ಪುಸ್ತಕ ಕಮ್ಯುನಿಸಂ ನಿಂದ ಸೋಷಿಲಿಸಂವರೆಗೆ ಎಂಬ ಪುಸ್ತಕ ಓದಿಸಿ ರಾಜಕೀಯ ಚಿಂತನೆಯನ್ನು ನನ್ನಲ್ಲಿ ಶುರು ಮಾಡಿದವರು ನೀವು. ನಿಮ್ಮ ಬಗ್ಗೆ ನನಗೆ ತೀರಿಸಲಾಗದ ಋಣವಿದೆ.

ನನ್ನ ಅಮ್ಮ ಸಾವಿನ ಅಂತ್ಯದಲ್ಲಿ ನರಳುತ್ತಾ ಮಲಗಿದ್ದಾಗ ನೀವು ಅವರನ್ನು ಭೇಟಿ ಮಾಡಿ ಮನೆಯವರಿಗೆ ಧೈರ್ಯ ಕೊಟ್ಟಿದ್ದೀರಿ. ಇಡೀ ಬದುಕಿನಲ್ಲಿ ಇಷ್ಟೊಂದು ಮಾನವೀಯತೆಯನ್ನು, ಆತ್ಮೀಯತೆಯನ್ನುಇಟ್ಟುಕೊಂಡ ಮನುಷ್ಯರನ್ನು ನಾನು ನೋಡಿದ್ದು ಕಡಿಮೆ ನೀವು, ನಿಮ್ಮ ಬದುಕು ಸಹೃದಯರಿಗೆ ಒಂದು ಪಠ್ಯ ಪುಸ್ತಕ.

ನಿಮ್ಮ ಈಗಿನ ಪುಸ್ತಕ ಓದುತ್ತಾ ಹೋದಂತೆ ನನ್ನಲ್ಲಿ ಈ ನೆನಪುಗಳೆಲ್ಲಾ ಬಂದವು. ಅಂಥಎಲ್ಲ ಸಂತೋಷಕರ ನೆನಪುಗಳಿಗಾಗಿ ನಿಮಗೆ ನನ್ನ ಅನಂತಾನಂತ ಕೃತಜ್ಞತೆಗಳು.

ಟಿ.ಎನ್.ಸೀತಾರಾಮ್
--------------------

ವಿಚಾರದ ವಿಭಿನ್ನತೆಯ ಕಾರಣಕ್ಕೆ ವೈಯಕ್ತಿಕ ದ್ವೇಷವನ್ನು ಬೆಳೆಸಿ, ಪೋಷಿಸಿಕೊಂಡು ಪರಸ್ಪರ ಕೆಸರೆರಚಿಕೊಳ್ಳುವವರ,  ಭಾಗವಹಿಸುವ ಎಲ್ಲ ವೇದಿಕೆಗಳ ಮೇಲೆ 'ಪರನಿಂದೆ'ಯನ್ನೇ ಕರ್ತವ್ಯವನ್ನಾಗಿಸಿಕೊಂಡವರ ಮಧ್ಯೆ ಸೀತಾರಾಮ್ - ಕೃಷ್ಣಪ್ಪನವರ ಸ್ನೇಹ ನಂಬಲಸಾಧ್ಯವಾದ ವಾಸ್ತವ ಎಂದರೆ ಅತಿಶಯೋಕ್ತಿಯಲ್ಲ.

Jan 10, 2013

ಜಪಾನಿನಾನುಭವ - 4


ನನ್ನ ಜಪಾನ್ ಭೇಟಿಯ ಅನುಭವ ನಿಜವಾಗಲೂ ಮರೆಯಲಾಗದ್ದು ಹಾಗೂ ಅವಾಗವಾಗ ನೆನಪಿಸಿಕೊಳ್ಳಬೇಕಾದ್ದು . ಈ ಸಲ ಹೋದಾಗ ಆದ ಒಂದು ಅನುಭವ ನನ್ನನ್ನು ಒಂದು ಕ್ಷಣ ತಲ್ಲಣಗೊಳಿಸಿತ್ತು.

ಅಂದು ಬಹುಶಃ ಮೇ 9 ಅಥವಾ 10 ಇರಬಹುದು (ಇಸವಿ 2012). ಬೆಳಗ್ಗೆ 6.30 ಯ ಸುಮಾರಿಗೆ ಉತ್ಥಾನವಾಯ್ತು. ಮುಖ ತೊಳೆದು-ಹಲ್ಲುಜ್ಜಲು ಸಿಂಕ್ ಬಳಿ ಬಂದೆ. ಆಗ ತಾನೇ ಎದ್ದಿದ್ದ ನನಗೆ ಪೂರ್ತಿಯಾಗಿ ಕಣ್ಣು ಬಿಡಲು ಕಷ್ಟಪಡುತ್ತಿದ್ದೆ. ಸೂರ್ಯ ಹುಟ್ಟಿದ ಮೇಲೆಯೇ 'ಒಳ್ಳೆಯ' ನಿದ್ದೆ ಮಾಡುವ ದುರಭ್ಯಾಸದವನಾದ ನಾನು ಜಪಾನಿನಲ್ಲಿ ಬೆಳಗ್ಗೆ 7 ರ ಒಳಗೆ ಏಳುವ ಅಭ್ಯಾಸ ಮಾಡಿಕೊಂಡಿದ್ದರೂ ಪ್ರತಿದಿನ ಬೇಗ ಏಳುವ ಪ್ರಯಾಸ ಇದ್ದೇ ಇತ್ತು. ಅಷ್ಟು ಬೇಗ ಏಳುವ ಅಭ್ಯಾಸ ಜಪಾನಿಗೆ ಮಾತ್ರ ಸೀಮಿತವಾಗಿದ್ದು ವಿಪರ್ಯಾಸ.

ಸಿಂಕ್ ಬಳಿ ಇದ್ದ ಗಾಜಿನ ಲೋಟವನ್ನು ಕೈಗೆ ತೆಗೆದುಕೊಂಡು ಇನ್ನೇನು ಅದರಲ್ಲಿ ನೀರು ತುಂಬಿ ನನ್ನ ಬ್ರಶ್ ಅನ್ನು ತೊಳೆದುಕೊಳ್ಳುವಷ್ಟರಲ್ಲಿ ಕೈನಿಂದ ಲೋಟ ಜಾರಿ ಸಿಂಕ್ ಗೆ ಬಿತ್ತು. ಸಾಕಷ್ಟು ಭಾರವಿದ್ದ ಆ 'ಖಾಲಿ' ಲೋಟ ಸಿಂಕನ್ನು ಸೀಳಿಕೊಂಡು ನೆಲಕ್ಕೆ ಬಿತ್ತು. ಲೋಟ ಬಿದ್ದ ಜಾಗದಲ್ಲಿ 'ಮಾತ್ರ' ನೆಲ ಕಾಣುತ್ತಿತ್ತು. ಆ ಭಯಕ್ಕೆ ನನಗೆ ಪೂರ್ತಿ ಎಚ್ಚರವಾಯಿತು !  ಬರುವ ಖರ್ಚಿನ ಬಗ್ಗೆ ಯೋಚಿಸುತ್ತ ತಲೆ ಗಿರಾಕಿ ಹೊಡೆಯಲಾರಂಭಿಸಿತು. ಯಾವ ಕಾರಣದಿಂದಲೂ ಕಟ್ಟಬೇಕಾದ 'ತೆರಿಗೆ'ಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗದ ಸ್ಥಿತಿ ಮತ್ತು ಜಾಗದಲ್ಲಿ ನಾನಿದ್ದೆ.  ತುಂಬಾ ಯೋಚಿಸದೆ ತಕ್ಷಣ ನಾನಿದ್ದ ಅಪಾರ್ಟ್ಮೆಂಟ್ ನ ಅಧಿಕಾರಿಗೆ ಮೇಲ್ ಮಾಡಿ ತಿಳಿಸಿದೆ. ಏನೋ, 10 ರಿಂದ 15000 ಯೆನ್ ಗಳಗಾಬಹುದು, ಪರವಾಗಿಲ್ಲ ಎಂದು ನನಗೆ ನಾನೇ ಸಮಾಧಾನ ಮಾಡಿಕೊಂಡು ಆಫೀಸ್ ಗೆ ಹೋದೆ. ಆಫೀಸ್ ಗೆ ಹೋಗುವಷ್ಟರಲ್ಲಿ ನನ್ನ ಮೇಲ್ ಗೆ ಉತ್ತರ ಬಂದಿತ್ತು, 'ನಿಮ್ಮ ಮನೆಯನ್ನು ಪ್ರವೇಶಿಸಿ ಆಗಿರುವ ನಷ್ಟದ ಬಗ್ಗೆ ಹಾಗು ಅದಕ್ಕೆ ತಗುಲುವ ವೆಚ್ಚದ ಬಗ್ಗೆ ಮುಂದಿನ ಎರಡು ದಿನಗಳಲ್ಲಿ ತಿಳಿಸುತ್ತೇವೆ. ನೀವಿಲ್ಲದಿರುವ ಸಮಯದಲ್ಲಿ ನಿಮ್ಮ ಮನೆಯನ್ನು ಪ್ರವೇಶಿಸಲು ನಿಮ್ಮ ಅಭ್ಯಂತರವಿದೆಯಾ?' ಎನ್ನುವ ಮೇಲ್ ಗೆ ನಾನು 'ನನ್ನ ಅಭ್ಯಂತರವಿಲ್ಲ' ಎಂದು ಉತ್ತರಿಸಿ ಸುಮ್ಮನಾದೆ.

ಎರಡು ದಿನಗಳ ನಂತರ ಬಂದ ಮೇಲ್ ಅನ್ನು ನೋಡಿ ಆದ ಶಾಕ್ ಇದೆಯಲ್ಲ ಅದು ನನ್ನನ್ನು ಈಗಲೂ ಒಮ್ಮೊಮ್ಮೆ ಕಾಡುತ್ತದೆ. 'ತಮ್ಮಿಂದ ಆದ ನಷ್ಟದ ಕಾರಣಕ್ಕೆ ಅದಕ್ಕೆ ತಗುಲುವ ವೆಚ್ಚದ ಬಗ್ಗೆ ನಮ್ಮ ಪ್ರತಿನಿಧಿಯಿಂದ ಮಾಹಿತಿ ಬಂದಿದೆ. ಹಾಳಾದ ಸಿಂಕ್ ಅನ್ನು ರಿಪೇರಿ ಮಾಡಲಾಗದ ಕಾರಣಕ್ಕೆ ಅದನ್ನು ಪೂರ್ಣ ಬದಲಾಯಿಸುವ ಅವಶ್ಯಕತೆ ಇದೆ. ಆದ್ದರಿಂದ ಎಲ್ಲ ಸೇರಿ ತಗುಲುವ ಅಂದಾಜು ವೆಚ್ಚ 48000 ಯೆನ್ ಗಳಾಗುತ್ತವೆ. ಆ ಕುರಿತಾದ  ರಸೀದಿಯು ನಾಳೆ ನಿಮ್ಮ ಕೈ ಸೇರಲಿದೆ. ದಯವಿಟ್ಟು ಪಾವತಿಸಿ' ಎಂದು ಬರೆದ ಮೇಲ್, ವಾಪಸ್ ಬರುವ ತನಕ ನನ್ನ ಮನಸ್ಸನ್ನು ಕೊರೆದದ್ದು ಅಷ್ಟಿಷ್ಟಲ್ಲ. ತಕ್ಷಣಕ್ಕೆ ನಂಬಲು ಸಾಧ್ಯವಾಗದ ನಾನು 'ಈ ಪರಿ ವೆಚ್ಚವಾಗುತ್ತದೆ ಎಂದು ನಾನು ಊಹಿಸಿರಲೂ ಇಲ್ಲ. ನನಗೆ ನಂಬಲೂ ಸಾಧ್ಯವಾಗುತ್ತಿಲ್ಲ' ಎಂದು ಉತ್ತರಿಸಿ ಕಟ್ಟುವ ಹಣವನ್ನು ಎಟಿಎಂ ನಿಂದ ತಂದಿಟ್ಟುಕೊಂಡೆ. ಇನ್ನು ಒಂದು ಆಶ್ಚರ್ಯದ ಸಂಗತಿ ಎಂದರೆ ಒಟ್ಟಾರೆ ಹಣದ ಶೇ.40 ಭಾಗ ಮಾತ್ರ ಹೊಸ ಸಿಂಕ್ ಗೆ ತಗುಲುವ ವೆಚ್ಚವಾದರೆ ಅದಕ್ಕೆ ಕೆಲಸ ಮಾಡುವ ಕಾರ್ಮಿಕರ ಕೂಲಿ ಮಾತ್ರ ಬೆಚ್ಚಿ ಬೀಳಿಸುವಂಥದ್ದು!! 10 ರಿಂದ 15000 ಆಗಬಹುದು ಎಂದು ಕೊಂಡಿದ್ದ ನಾನು 50000 ಯೆನ್ ಅನ್ನು ಕೊಡಬೇಕು ಎಂದಾಗ ಹೇಗಾಗಿದ್ದಿರಬಹುದು..!!! ಉಳಿಸಬಹುದಾದ ಹಣದ ಬಹುಭಾಗ ಇಲ್ಲೇ 'ತೆತ್ತಬೇಕಾದ' ಸಂದರ್ಭ ಬಂದಿದ್ದು ನನ್ನ ದುರದೃಷ್ಟವೆ ಸರಿ.

ಜಪಾನಿನಲ್ಲೇ ಇದ್ದ ನಮ್ಮ ಒಬ್ಬ ಆತ್ಮೀಯರ ಹತ್ತಿರ ನನಗಾದ  ಸಂಕಟ ಗಳನ್ನೆಲ್ಲ ಹೇಳಿಕೊಂಡೆ. ಆಗ ಅವರೂ ತಮಗಾದ ಹಾಗು ತಮಗೆ ಗೊತ್ತಿದ್ದ ಇದೆ ತರಹದ ಘಟನೆಗಳನ್ನು ತಿಳಿಸಿದಾಗ,  ಬಹುಶಃ ನಾನು ಕಟ್ಟಬೇಕಾದ ಹಣವೇ ಕಡಿಮೆ ಎಂದೆನಿಸಿದ್ದು ಮಾತ್ರ ಸುಳ್ಳಲ್ಲ. ಈ ಘಟನೆಯಾದ ನಂತರ ಆದ್ಯಾವ ಪರಿ ಎಚ್ಚರ ವಹಿಸಿದ್ದೆ ಎಂದರೆ ಒಮ್ಮೊಮ್ಮೆ ನನಗೆ ನನ್ನನ್ನು ನೋಡಿಯೇ ನಗು ಬರುತ್ತಿತ್ತು. 

ಜಪಾನಿನಲ್ಲಿ ಹಳೆಯ ವಸ್ತುವನ್ನು ಎಸೆಯಲೂ ಕಷ್ಟ ಹಾಗು ಹೊಸದನ್ನು ಕೊಳ್ಳುವುದೂ ದುಬಾರಿ. ಸಣ್ಣ ಪುಟ್ಟ ವಸ್ತುಗಳಾದರೆ ಡಸ್ಟ್ ಬಿನ್ ಗೆ ಹಾಕಬಹುದು. ಆದರೆ ಕೆಟ್ಟುಹೋದ ಓವನ್, ಟಿವಿ ಮುಂತಾದ ವುಗಳನ್ನು...? ಮಾರಬೇಕಾದವರೇ ಹಣ ಕೊಟ್ಟು ಮರುಬಳಕೆ (ರಿಸೈಕಲ್) ಗೆ ನೀಡಬೇಕಾಗುತ್ತದೆ. ತಾತ್ಕಾಲಿಕವಾಗಿ ಜಪಾನಿನಲ್ಲಿ ಇರುವವರಿಗೆ, ವಾಪಾಸ್ ತಮ್ಮ ದೇಶಕ್ಕೆ ಹೋಗಬೇಕಾದ ಸಂದರ್ಭದಲ್ಲಿ ಈ ತರಹದ ಸಮಸ್ಯೆ ಬರುವುದು ನಿಶ್ಚಿತ.

ಈ ಎಲ್ಲ ಕಾರಣಕ್ಕೆ ಜಪಾನಿನಲ್ಲಿ ಹಳೆಯ ವಸ್ತುಗಳೂ ಬಹಳ ಚೆನ್ನಾಗಿರುತ್ತದೆ. ಹಾಗೆಯೇ ಎಲ್ಲ ರೀತಿಯ ಕೆಲಸ ಮಾಡುವವರೂ ಗೌರವದಿಂದ, ಯಾವುದೇ ಕೀಳರಿಮೆಯಿಲ್ಲದೆಯೇ ಬದುಕು ಸಾಗಿಸಲು ಸಾಧ್ಯವಾಗಿರಲೂಬಹುದು.