ನಾವು ನಾಲ್ವರು ಸ್ನೇಹಿತರು ಪ್ಲಾನ್ ಹಾಕಿದ್ದು ಮುಳ್ಳಯ್ಯನಗಿರಿಗೆ ಹೋಗುವ ಎಂದು, ಆದರೆ ಹೊರಡುವ ಹಿಂದಿನ ದಿನ ನಮ್ಮ ಮೈಲ್ಸ್ ನೋಡಿದ್ರೆ ಕುಮಾರಪರ್ವತಕ್ಕೆ ಹೋಗುವ ಅಂತ ಇತ್ತು. ನಾನು ನೋಡಿರಲೂ ಇಲ್ಲ, ಎಲ್ಲಿಗಾದರೂ ಪರವಾಗಿಲ್ಲ ಅಂತ ನಾನಂತೂ ರೆಡಿ ಆದೆ..
25 ರ ಶುಕ್ರವಾರ ರಾತ್ರಿ 1೦ ರ ಸುಮಾರಿಗೆ ಕತ್ರಿಗುಪ್ಪೆಯ ಬಸ್ ಸ್ಟಾಪ್ ಗೆ ಬಂದ್ವಿ. ಬಸ್ ಗೆ ಕಾದು ಕಾದು ಕೊನೆಗೆ ಅಟೋ ಹಿಡಿದು ಮೆಜೆಸ್ಟಿಕ್ ಗೆ ಹೋದರೆ ಮಡಿಕೇರಿಯ ಬಸ್ ಗಳೆಲ್ಲ ಸ್ಯಾಟಲೈಟ್ ಬಸ್ ಸ್ಟ್ಯಾಂಡಿನಿಂದ ಹೊರಡುತ್ತವೆ ಅಂತ ಕೇಳಿದಾಗ 'ಅಯ್ಯೋ' ಅಂತ ಅಂದುಕೊಂಡು, ಚಿಕ್ಕಮಗಳೂರಿನ ಬಸ್ ನೋಡಿ ಮುಳ್ಳಯ್ಯನಗಿರಿಗಾದರೂ ಹೋಗೋಣ ಅಂತ ಯೋಚನೆ ಮಾಡುತ್ತಲೇ ಸ್ಯಾಟಲೈಟ್ ಬಸ್ ಸ್ಟ್ಯಾಂಡಿಗೆ ಹೋಗುವ ಬಸ್ ಹತ್ತಿದೆವು.
ನಮ್ಮ ದುರಾದೃಷ್ಟ, ನಾವು ಹೋಗುವಷ್ಟೊತ್ತಿಗೆ ರಾತ್ರಿ 11.30. ಮಡಿಕೇರಿಯ ಕಡೆಯ ಬಸ್ ಹೋಗಿಯಾಗಿತ್ತು. ಮತ್ತೊಮ್ಮೆ ತಲೆ ಮೇಲೆ ಕೈ ಇಟ್ಟುಕೊಳ್ಳುವ ಸರದಿ ನಮ್ಮದಾಗಿತ್ತು. ಏನು ಮಾಡುವ ಎಂದು ಯೋಚಿಸುತ್ತಲೇ ಕುಶಾಲನಗರಕ್ಕೆ ಹೋಗುವ ಕಡೆಯ ಬಸ್ ಕಂಡ ಕೂಡಲೇ ಹತ್ತಿ ಕೂತು ನಿದ್ದೆಗೆ ಅಣಿಯಾದೆವು.
ಸರಿಯಾಗಿ ಬೆಳಗ್ಗೆ 5 ಗಂಟೆಗೆ ಕುಶಾಲನಗರಕ್ಕೆ ತಲುಪಿದೆವು. ಬಸ್ಸನ್ನು ಇಳಿದರೆ, ಅಬ್ಬಬ್ಬ.., ಹಿಮಾಲಯದ ಚಳಿಯಲ್ಲಿ ಇಳಿದಂತಹ ಅನುಭವ. ಬಹುಶ 7-8 ಉಷ್ಣತೆ ಇದ್ದಿರಬಹುದು. ಆ ಪರಿಯ ಚಳಿಯನ್ನು ನಾವು ಎರಡು ವರ್ಷಗಳ ಹಿಂದೆ ಸ್ಕಂದಗಿರಿಗೆ ಹೋದಾಗ ನೋಡಿದ್ದು...
ಕುಶಾಲನಗರದಿಂದ ನಾವು ಹೋಗಬೇಕಾದ್ದು ಸೋಮವಾರಪೇಟೆಗೆ. ಸಿಕ್ಕವರನ್ನೆಲ್ಲ ಕೇಳುತ್ತ ಸುಮಾರು 6 .3೦ರ ಸುಮಾರಿಗೆ ಬಂದ ಸೋಮವಾರಪೇಟೆಯ ಬಸ್ ಹತ್ತಿ, ಶಯನೋತ್ಸವಕ್ಕೆ ನಾಂದಿ ಹಾಡಿದೆವು.
ಸುಮಾರು ೯೦ ನಿಮಿಷಗಳ ಕಾಲದ ಪ್ರಯಾಣದ ನಂತರ ಸೋಮವಾರಪೇಟೆ ತಲುಪಿ ಬಸ್ ನಿಂದ ಕೆಳಗಿಳಿದರೆ ಅಲ್ಲೇ ಇನ್ನೊಂದು ಬಸ್ ಪುಷ್ಪಗಿರಿಗೆ ಹೊರಟಿತ್ತು. ನಾವು ಆ ಬಸ್ಸನ್ನು ಹಿಡಿಯಬೇಕು ಎಂದು ಚಾಲಕನನ್ನು ವಿಚಾರಿಸಿದಾಗ ಇನ್ನು ೨೦ ನಿಮಿಷಗಳು ಸಮಯವಿರುವುದು ನಮ್ಮ ಬೆಳಗಿನ ಹೊಟ್ಟೆಪಾಡಿಗೆ ವ್ಯವಸ್ಥೆ ಮಾಡಿಕೊಳ್ಳಲು ಅನುಕೂಲವಾಯಿತು. ಅಲ್ಲೇ ಇದ್ದ ಕಾಂಡಿಮೆಂಟ್ಸ್ ನಲ್ಲಿ ಬ್ರೆಡ್, ಬಿಸ್ಕತ್, ನೀರಿನ ಬಾಟಲ್ಸ್, ಚಾಕೊಲೆಟ್ ಗಳನ್ನು ಕೊಂಡು, ಪಕ್ಕದ ಹೋಟೆಲ್ ನಲ್ಲಿ ತಿಂಡಿಯನ್ನು ಕಟ್ಟಿಸಿಕೊಂಡು ಬಸ್ ಏರಿದರೆ ಬೆಳಗ್ಗೆ 8.3೦ರ ಹೊತ್ತಿಗೆ 'ಮಲ್ಲಳ್ಳಿ ಜಲಪಾತ'ದ ಸ್ಟಾಪ್ ನಲ್ಲಿ ಇಳಿದೆವು.
ಅಲ್ಲಿಂದ ೨ ಕಿಲೋಮೀಟರ್ ನಡೆದು ಜಲಪಾತವನ್ನು ತಲುಪಿದೆವು. ಎರಡೆರಡು ಅಡಿಗಳ ಎತ್ತರದ ಮೆಟ್ಟಿಲುಗಳನ್ನು ಇಳಿದು, ಜಲಪಾತದಲ್ಲಿ ಸ್ನಾನಾದಿಗಳನ್ನು ಮುಗಿಸಿ, ತಿಂಡಿ ತಿನ್ನುವ ತನಕ ಎಲ್ಲ ಸೂಪರ್... ಆದರೆ ವಾಪಸ್ ಹತ್ತುವಾಗ.... ಆ ಎತ್ತೆತ್ತರದ ಮೆಟ್ಟಿಲುಗಳನ್ನು ಹತ್ತಿ ಬರಲು ಪಟ್ಟ ಕಷ್ಟ, ಅಬಾಬಬಬಬ..... ವರ್ಣಿಸಲಸಾಧ್ಯ. ಕುಮಾರ ಪರ್ವತಕ್ಕೆ ಶುರು ಮಾಡುವ ಮುನ್ನವೇ ನಮ್ಮ ಉತ್ಸಾಹ ಮಕಾಡೆ ಮಲಗಿತ್ತು.
ಅಂತು ಇಂತೂ ದೇಹದ ಶಕ್ತಿಯನ್ನೆಲ್ಲ ವ್ಯಯಿಸಿ ಮೇಲೆ ಬಂದು, ಕುಮಾರ ಪರ್ವತಕ್ಕೆ ದಾರಿ ಎಲ್ಲಿಂದ ಎಂದು ಯೋಚಿಸುತ್ತಲೇ 'ಕಂಡ ದಾರಿಯೇ ಇರಬೇಕು' ಎಂಬ ಅನುಮಾನದಿಂದಲೇ ನಡೆಯಲು ಶುರು ಮಾಡಿದೆವು. ನಮ್ಮ ಅದೃಷ್ಟಕ್ಕೆ, ವೆಂಕಟೇಶ್ ಎಂಬುವರು ಸಿಕ್ಕಿ ನಾವು ಹೋಗುತ್ತಿದ್ದ ದಾರಿಯನ್ನು ಖಚಿತ ಪಡಿಸಿದಾಗ ಸ್ವಲ್ಪ ಸಮಾಧಾನ. ಇಲ್ಲದಿದ್ದರೆ ಆ ಸುಸ್ತಿನಲ್ಲಿ ಮತ್ತೆ ಎಲ್ಲಿ ವೃಥಾ ನಡೆಯಬೇಕಾಗುತ್ತದೋ ಎಂದು ಭಯ ಪಟ್ಟಿದ್ದೆವು.
ಸುಮಾರು ಮಧ್ಯಾಹ್ನ ೧ ರ ಸುಮಾರಿಗೆ ಮುಖ್ಯ ರಸ್ತೆ ತಲುಪಿ, ಅಲ್ಲಿಂದ ಶಾಂತಮಲ್ಲಿಕಾರ್ಜುನ ಸ್ವಾಮಿಯ ದೇವಸ್ಥಾನವನ್ನು ತಲುಪಬೇಕಾಗಿತ್ತು. ಅತಿ ಸುಸ್ತಾಗಿದ್ದ ಕಾರಣ ರಸ್ತೆಯಲ್ಲೇ ೧೦ ನಿಮಿಷ ಕೂತು, ನಂತರ ಹೊರಟೆವು. ಪ್ರತಿ ೫ ನಿಮಿಷದ ನಡಿಗೆಗೆ ಸುಸ್ತಾಗುತ್ತಿದ್ದ ಸಮಯಕ್ಕೆ, ಬರುತ್ತಿದ್ದ ಟೆಂಪೋಗೆ ಕೈ ಅಡ್ಡ ಹಾಕಿದೆವು. ನಮ್ಮದೃಷ್ಟ, ಹತ್ತಿಸಿಕೊಂಡರು. ಆ ಮೊದಲೇ ಸಾಕಷ್ಟು ವಾಹನಗಳಿಗೆ ಕೈ ಹಾಕಿ, ನಿಲ್ಲಿಸದೆ, ಹಿಡಿ ಶಾಪಗಳನ್ನೆಲ್ಲ ಹಾಕಾಗಿತ್ತು. ಅವರು ನೇರ ದೇವಸ್ಥಾನಕ್ಕೆ ಹೋಗುವವರಾಗಿದ್ದರು. ಸುಮಾರು ೪ ಕಿಲೋಮೀಟರ್ ಗಳ ನಡಿಗೆಯನ್ನ ಉಳಿಸಿದ ವಾಹನದ ಡ್ರೈವರ್ ಗೆ ಹಣ ನೀಡಿದರೂ ಬೇಡವೆಂದರು. 'ಅವರಿಗೆ ಒಳ್ಳೆಯದಾಗಲಿ' ಎಂದು ಹಾರೈಸಿ, ದೇವರ ದರ್ಶನ ಪಡೆದು 'ಕುಮಾರಪರ್ವತ'ವನ್ನು ಹತ್ತಲು ಶುರು ಮಾಡಿದೆವು. ಕುಕ್ಕೆ ಸುಬ್ರಮಣ್ಯದ ಕಡೆಗೆ ಇಳಿಯುವುದು ಎಂದು ನಿಶ್ಚಯಿಸಿದ್ದ ಕಾರಣಕ್ಕೆ, ಅತ್ತ ಕಡೆಯಿಂದ ಇಳಿಯುವಾಗ ಸಿಕ್ಕುವ 'ಭಟ್ಟರ' ಮನೆಗೆ ಫೋನ್ ಮಾಡಿ ಮಾರನೆ ದಿನ ನಾವು ನಾಲ್ವರು ಊಟಕ್ಕೆ ಬರುವುದಾಗಿ ತಿಳಿಸಿದೆವು.
ಕೆಲ ಸಮಯದ ನಂತರ ಸಿಕ್ಕ ಚೆಕ್ ಪೋಸ್ಟ್ ನಲ್ಲಿ ಅರಣ್ಯ ಅಧಿಕಾರಿಗಳಿಗೆ ಒಬ್ಬರಿಗೆ 1೦೦ ರಂತೆ 4೦೦ ರುಪಾಯಿಗಳನ್ನು ಕೊಟ್ಟು ನಮ್ಮ ಚಾರಣವನ್ನು ಮುಂದುವರೆಸಿದವು. ಅಲ್ಲಿಂದ 7 ಕಿಲೋಮೀಟರ್ ಗಳ ದೂರ ಸಾಗಬೇಕಾಗಿತ್ತು. ಪ್ರತಿ ೦.25 ಕಿಲೋಮೀಟರ್ ಗಳಿಗೆ ಸಿಗುತ್ತಿದ್ದ 'ಉಳಿದಿರುವ ದೂರದ' ಬೋರ್ಡ್ ಗಳನ್ನೂ ನೋಡುತ್ತಾ , ಪ್ರತಿ ಅರ್ಧ ಕಿಲೋಮೀಟರ್ ಗಳಿಗೆ 5 ನಿಮಿಷದ ವಿಶ್ರಾಂತಿ ತೆಗೆದುಕೊಳ್ಳುತ್ತಾ ಹೊರಟೆವು. 'ಮಲ್ಲಳ್ಳಿ' ಯಾ ಪ್ರಭಾವದಿಂದ ಸಾಕಷ್ಟು ಬೇಗ ಸುಸ್ತಾಗುತ್ತಿತ್ತು. ಹೊಟ್ಟೆ ಖಾಲಿಯಾಗಿತ್ತು. ಅರ್ಧ ದೂರ ಹೋಗುವಷ್ಟರಲ್ಲೇ ತಂದಿದ್ದ ಬ್ರೆಡ್-ಜಾಮ್, ಬಿಸ್ಕೆಟ್ ಗಳು ಖಾಲಿಯಾದವು. ರಾತ್ರಿ ಬೆಟ್ಟದ ಮೇಲೆ ತಂಗುವಾಗ 'ಹೊಟ್ಟೆಪಾಡು' ಏನು ಎಂದು ಯೋಚಿಸುತ್ತ ಹೋಗುತ್ತಿರುವಾಗಲೇ ಸಾಕಷ್ಟು ಯುವಕರ ತಂದ ವನ್ನು ಎದುರಾದೆವು. ಪರಿಚಯವಾಯಿತು. 'ರಚನ್' ಎಂಬವನು ಊಟವಾಯಿತಾ ಎಂದಾಗ, ಮೊದಲಿಗೆ ಆಯ್ತು ಎಂದೆವು, ಆದರೆ ಆಗಿರಲಿಲ್ಲ. ಮೇಲೆ ತಂಗಲು 'ಟೆಂಟ್'ಗಳನ್ನೆಲ್ಲ ತಂದಿದೀರ ತಾನೇ? ಎಂದಾಗ, ನಮ್ಮಿಂದ ನಿರುತ್ತರ. ಮೊದಲೇ ನಾವು ಯಾವುದೇ ತಯಾರಿಯಿಲ್ಲದೆ ಹೊರಟಿದ್ದೆವು. ನಮ್ಮ ಬಳಿ ಟೆಂಟ್ ಎಲ್ಲಿಂದ ಬರಬೇಕು ?! ಇನ್ನೊಮ್ಮೆ ಊಟದ ಪ್ರಶ್ನೆ ಬಂದಾಗ 'ರಾತ್ರಿಗೆ' ಏನು ಇಲ್ಲ ಎಂದದ್ದಕ್ಕೆ 2 ಪ್ಯಾಕ್ ಪುಳಿಯೊಗರೆ ಕೊಟ್ಟರು. ಹೋದ ಜೀವ ಬಂದಂತಾಗಿತ್ತು. ಅವರಿಗೂ ಹಾಗೂ ಮನದಲ್ಲಿ ದೇವರಿಗೂ ಥ್ಯಾಂಕ್ಸ್ ಹೇಳಿ ನಮ್ಮ ನಡಿಗೆಯನ್ನು ಮುಂದುವರೆಸಿದೆವು.
ಬೆಟ್ಟದ ತುದಿ ತಲುಪುವ ಹೊತ್ತಿಗೆ ಸಾಯಂಕಾಲ 5.30 ಆಗಿತ್ತು. ಆ ಸುಸ್ತಿನಲ್ಲಿ ಒಮ್ಮೆ ವಾಪಸ್ ಹೋಗೋಣವೇ ಎಂದು ಯೋಚಿಸಿದ್ದೂ ಉಂಟು. ಆದರೆ ಅದಾಗಲೇ ಬೆಟ್ಟವನ್ನು ಹತ್ತಿ ಇಳಿಯುತ್ತಿದ್ದ ಹೆಣ್ಣು ಮಕ್ಕಳು, 9 ವರ್ಷದ ಹುಡುಗನನ್ನು ನೋಡಿ, ನಮ್ ಬಗ್ಗೆ ನಾವೇ ಛೀ ಎಂದುಕೊಂಡು ಕೆಲಸ ಮುಗಿಸಿದ್ದೆವು.
ಪೂರ್ಣ ಪ್ರಮಾಣದ 'ಸೂರ್ಯಾಸ್ತ'ವನ್ನು ಕಣ್ತುಂಬಿಕೊಂಡು ಮಲಗಲು ಅಣಿಯಾದೆವು.
ಸಿಕ್ಕಾಪಟ್ಟೆ ಚಳಿ ಇರುತ್ತದೆ ಎಂದು 2-3 ಸುತ್ತಿನ ಬಟ್ಟೆಗಳಿಂದ ತಯಾರಾದೆವು. ಯಾವ ಟೆಂಟ್ ಗಳೂ ಇಲ್ಲದೆ ಹೋಗಿದ್ದ ನಮಗೆ ಬಂಡೆಗಳೇ ಹಾಸಿಗೆಗಳಾದವು. 7-8 ಗಂಟೆಯ ಸಮಯದಲ್ಲಿ ಅಷ್ಟೇನೂ ಚಳಿಯಿರಲಿಲ್ಲ. ವರಸದೃಶವಾದ 'ಪುಳಿಯೊಗರೆ'ಯನ್ನು ತಿಂದು ಸ್ವಲ್ಪ ಹೊತ್ತು ಮಲಗಿದೆವು. ಆದರೆ ಆನಂತರ ಶುರುವಾದ ಚಳಿ ನಮ್ಮನ್ನು ಬೆಳಿಗ್ಗೆಯವರೆಗೂ ಪೂರ್ಣ ಎಚ್ಚರವಾಗಿಯೇ ಇರಿಸುವಲ್ಲಿ ಸಫಲವಾಯಿತು! ನಿದ್ದೆ ಬಂದ ಮೇಲೆ ಯಾವ ಚಳಿಯು ಏನೂ ಮಾಡುವುದಿಲ್ಲ ಎಂದು ಅವಾಗವಾಗ ನಿದ್ದೆ ಮಾಡಲು ಸಾಕಷ್ಟು ವಿಫಲ ಪ್ರಯತ್ನ ಮಾಡಿದ್ದುಂಟು.
ಬೆಳಿಗ್ಗೆ 7 ರ ಹೊತ್ತಾದರೂ ಉದಯಿಸುತ್ತಿರುವ ಸೂರ್ಯನನ್ನು ನೋಡಲಾಗದ ನಾವು ಇನ್ನೇನು ಹೊರಡುವಷ್ಟರಲ್ಲಿ 'ಸೂರ್ಯೋದಯವನ್ನು' ನೋಡಿದೆವು. ಸಾಕ್ಷಾತ್ ಭಗವೆಯೇ ಪ್ರತ್ಯಕ್ಷವಾದಂತಿತ್ತು !
7.15 ಗೆ ಹೊರಟ ನಾವು ಸುಮಾರು 16-18 ಕಿಲೋಮೀಟರ್ ಗಳ ದೂರವನ್ನು ಕ್ರಮಿಸಬೇಕಾಗಿತ್ತು. ನೀರಿಲ್ಲ, ಹೊಟ್ಟೆಗಿಲ್ಲ. ನಡೆಯುತ್ತಾ ಎಲ್ಲ ಬಗೆಯ ಸುಸ್ತುಗಳನ್ನೂ ಹೊತ್ತು 9 ಕಿಲೋಮೀಟರ್ ಗಳನ್ನು ನಡೆದು, 4 ಬೆಟ್ಟಗಳನ್ನು ದಾಟಿ, 1೦.3೦ಕ್ಕೆ ಭಟ್ಟರ ಮನೆಗೆ ಹೋಗಿ ಊಟ ಮಾಡಿ, ಎಲ್ಲೇ ಮುಂದಿದ್ದ ಅವರ ತೋಟದಲ್ಲಿ 1 ಗಂಟೆಗಳ ಕಾಲ ಮಲಗಿ, 12.30ಗೆ ಪುನಃ ಹೊರಟೆವು. ಅಲ್ಲಿಂದ ಇನ್ನು 6-8 ಕಿಲೋಮೀಟರ್ ಗಳ ದೂರವಿತ್ತು ಕುಕ್ಕೆಸುಬ್ರಮಣ್ಯಕ್ಕೆ.
ಅಲ್ಲಿಂದ ನಡೆದ ನಮಗಾದ ಸುಸ್ತು, ಅನುಭವ,... ಹುಷ್ಶಪಾ.. ಎಷ್ಟು ನಡೆದರೂ ಕುಕ್ಕೆಯನ್ನು ತಲುಪಲೇ ಆಗುತ್ತಿರಲಿಲ್ಲ. ಎಷ್ಟು ನಡೆದು ಯಾರನ್ನು ಕೇಳಿದರೂ ಇನ್ನು 2 ಕಿಲೋಮೀಟರ್ ಇದೆ ಎಂತಲೇ ಹೇಳುತ್ತಿದ್ದರು. ಆ ಕಾಡನ್ನು ದಾಟುವಾಗ ಸಿಗುತ್ತಿದ್ದ ಪ್ರತಿ ಇಳಿಜಾರನ್ನೂ 'ಇದೇ ಕೊನೆಯ ಇಳಿಜಾರು' ಎಂದು ಕೊಳ್ಳುತ್ತಲೇ ಇಳಿಯುತ್ತಿದ್ದೆವು. ಆದರೆ ಕುಕ್ಕೆ ಮಾತ್ರ ಬರುತ್ತಿರಲಿಲ್ಲ.
2.45 ರ ಹೊತ್ತಿಗೆ ಕುಕ್ಕೆಯನ್ನು ತಲುಪಿ, ಅಲ್ಲಿಂದ ಬಸ್ ನಿಲ್ದಾಣಕ್ಕೆ ೨ ಕಿಲೋಮೀಟರ್ ನಡೆದು ತಲುಪುವ ಹೊತ್ತಿಗೆ ಮಧ್ಯಾಹ್ನ 3.30 ಗಂಟೆ. ಹೋಟೆಲ್ ನಲ್ಲಿ ಊಟ ಮಾಡಿ ಬಸ್ ಸ್ಟ್ಯಾಂಡಿಗೆ ಹೋದರೆ ಬಸ್ ಇರಲಿಲ್ಲ. ಸಂಸ್ಥೆಯ ಅಧಿಕಾರಿಯೊಬ್ಬರಿಗೆ ಕೇಳಿದರೆ ರಾತ್ರಿಯವರೆಗೂ ಬೆಂಗಳೂರಿಗೆ ಬಸ್ಸೇ ಇಲ್ಲ ಎಂದು 'ಪುಂಗಿ' ಊದಿದರು. ಆ ಸುಸ್ತಿನಲ್ಲಿದ್ದ ನಮಗೆ ಮತ್ತೊಮ್ಮೆ ವಿಚಾರಿಸಬೇಕು ಎಂದೆನಿಸದೆ, ಖಾಸಗಿ ಬಸ್ಸಿಗೆ ಮುಂಗಡ ಟಿಕೆಟ್ ತೆಗೆದುಕೊಂಡು, ಪೂರ್ಣ ವಿಶ್ರಾಂತಿಗೆ ಅವಕಾಶವಾಯಿತು ಎಂದು ಧರ್ಮಛತ್ರದಂತಿದ್ದ ಜಾಗದಲ್ಲಿ ನಾವು ಹೋಗಿ 4.30ರ ಸುಮಾರಿಗೆ ತಲೆ ಊರಿದೆವು. ಎದ್ದಾಗ ಸಂಜೆ 7 ಗಂಟೆ..!
ದೇವರ ದರ್ಶನಕ್ಕೆ ಪ್ರಯತ್ನಿಸಿದೆವು. ಏನು ವಿಶೇಷವಿತ್ತೋ ಏನೋ, ಅಂದು ಕುಕ್ಕೆ ಅತಿ ಜನಜಂಗುಳಿಯಿಂದ ಕೂಡಿತ್ತು. ಒಂದು ಗಂಟೆ ಕಾದರೂ ದರ್ಶನವಾಗುವ ಸಾಧ್ಯತೆಗಳಿರಲಿಲ್ಲ. ದೂರದಿಂದಲೇ ಕೈ ಮುಗಿದು, 9 ಗಂಟೆಗೆ ಊಟ ಮಾಡಿ, 9.30 ರ ಹೊತ್ತಿಗೆ ಹೊರಟು, 10 ಗಂಟೆಗೆ ಹೊರಡಲಿದ್ದ ಬಸ್ ಹಿಡಿದು ಬೆಂಗಳೂರಿಗೆ ಬಂದಾಗ ಬೆಳಿಗ್ಗೆ 6 ಗಂಟೆ. ಮನೆಗೆ ಬಂದು 'ಇಂದು ಸಿಕ್ ಲೀವ್' ಎಂದು ನಿಶ್ಚಯಿಸಿ ಮಲಗಿದೆವು.
ಎರಡು ದಿನಗಳಲ್ಲಿ ಸರಿಸುಮಾರು 35-40 ಕಿಲೋಮೀಟರ್ ಗಳನ್ನು ಸರಿಯಾಗಿ ಹೊಟ್ಟೆಗಿಲ್ಲದೆ ನಡೆದ ನಮಗೆ ಮತ್ತೊಮ್ಮೆ ಚಾರಣದ ಸಹವಾಸವೇ ಬೇಡ ಎಂಬಷ್ಟರ ಮಟ್ಟಿಗೆ ಸುಸ್ತಾಗಿತ್ತು. ಆದರೂ ಒಂದು ಹೊಸ ಅನುಭವವಾಗಿತ್ತು.
No comments:
Post a Comment