ನನ್ನ ವೀಸಾ ಅವಧಿ ಸೆಪ್ಟೆಂಬರ್ 30, 2013 ಕ್ಕೆ ಮುಗಿಯುವುದಿತ್ತು. ನನ್ನ ವೀಸಾವನ್ನು ಮುಂದುವರೆಸುವ ಕೋರಿಕೆಯನ್ನು ಅಮೇರಿಕಾದ ಇಮಿಗ್ರೇಶನ್ ವಿಭಾಗ ಇನ್ನೂ ಒಪ್ಪಿರಲಿಲ್ಲ. ಆ ಕಾರಣಕ್ಕೆ ಅದೇ ತಿಂಗಳ ಮೊದಲನೇ ವಾರದಲ್ಲಿ ಪಡೆದ ಕಾರು ಚಾಲನಾ ಪರವಾನಗಿಯನ್ನು ಸೆಪ್ಟೆಂಬರ್ 30ರ ವರೆಗೆ ಮಾತ್ರ ಕೊಟ್ಟರು. ಆ ಸಮಯದಲ್ಲಿ ಪರವಾನಗಿಯನ್ನು ಪಡೆಯುವುದು ಮುಖ್ಯವಾಗಿತ್ತು. ಆ ಕಾರಣಕ್ಕೆ ನಾನು ಸುಮ್ಮನೆ 25 ಡಾಲರ್ ಗಳನ್ನು ಕಟ್ಟಿ ಪರವಾನಗಿ ಪಡೆದು ಬಂದಿದ್ದೆ.
ಕೆಲ ದಿನಗಳ ನಂತರ ಯೋಚನೆ ಮಾಡಿದಾಗ ನನಗನ್ನಿಸಿದ್ದು, ಒಬ್ಬ ಉದ್ಯೋಗಿ ವೀಸಾವನ್ನು ಮುಂದುವರೆಸಲು ಕೋರಿದ್ದ ಅರ್ಜಿ ಸಂಖ್ಯೆಯನ್ನು ಇಟ್ಟುಕೊಂಡು ವೀಸಾ ಅವಧಿ ಮುಗಿದರೂ 240 (240 day Rule) ದಿನಗಳ ಕಾಲ ಕೆಲಸ ಮಾಡಲು ಕಾನೂನಿನ ಅವಕಾಶವಿದೆ ಎಂದ ಮೇಲೆ ಅದೇ ಅರ್ಜಿ ಸಂಖ್ಯೆಯನ್ನು ವಾಹನ ಪರವಾನಗಿಯನ್ನು ನೀಡಲು ಯಾಕೆ ದಾಖಲೆಯನ್ನಾಗಿ ಪರಿಗಣಿಸಬಾರದು ಎಂದೆನಿಸಲು ಶುರುವಾಯಿತು. ಅದಕ್ಕೆ ತಕ್ಷಣ ನನ್ನ ಪ್ರಶ್ನೆಯನ್ನು ನನ್ನ ಕ್ಷೇತ್ರದ ಅಧಿಕಾರಿಗೆ ಕೇಳಲು (Secretory of State ) ಮೇಲ್ ಕಳಿಸಿದೆ. ಮಾರನೆಯ ದಿನ ಕರೆ ಬಂತು. ನಾನು ನಮ್ಮ ರಾಜ್ಯದ (Michigan ) ಅಧಿಕಾರಿ Ruth Johnson ನೊಂದಿಗೆ ನನ್ನ ಸಮಸ್ಯೆಯ ಬಗ್ಗೆ ಮಾತಾಡಬೇಕು ಎಂದು ವಿನಂತಿಸಿಕೊಂಡೆ. ಅದಕ್ಕವರು ಸಮಸ್ಯೆಯ ಬಗ್ಗೆ ಕೇಳಿ ತಾವೇ ಪರಿಹರಿಸುವುದಾಗಿ ಹೇಳಿ ನನಗೆ ಸಂಬಂಧ ಪಟ್ಟ ಎಲ್ಲ ದಾಖಲೆಗಳನ್ನು ಪಡೆದು Homeland Security ವಿಭಾಗವನ್ನು ಸಂಪರ್ಕಿಸಿ (Background Verification) ಒಂದು ದಿನದ ನಂತರ ನನಗೆ ಮೇಲ್ ಕಳಿಸಿದರು. ಮೇ 28, 2014ರ ವರೆಗೆ ನನ್ನ ವಾಹನ ಚಾಲನಾ ಪರವಾನಗಿಯನ್ನು ಪಡೆಯಲು ಅವಕಾಶವಿದೆ ಎಂದರು. ನಾನು ಮಾರನೇ ದಿನ ಹೋಗಿ ನನ್ನ ಪರವಾನಗಿಯನ್ನು ನವೀಕರಣಗೊಳಿಸಿಕೊಂಡೆ. ಆದರೆ ನನ್ನ ಚಾಲನಾ ಪರವಾನಗಿಯ ಅವಧಿ ಮುಗಿದಿದ್ದ ಕಾರಣಕ್ಕೆ 25 ಡಾಲರ್ ಗಳ ದಂಡವನ್ನು ತೆತ್ತಿದ್ದೆ.
ಆ ನಂತರ ನನ್ನ ಕೆಲ ಸಹೋದ್ಯೋಗಿಗಳಿಗೂ ಇದೇ ಸಮಸ್ಯೆ ಇದ್ದ ಕಾರಣಕ್ಕೆ ಅವರಿಗೂ ಸಹಾಯವಾಯಿತು. ಅವರೂ ನವೀಕರಣಗೊಳಿಸಿಕೊಂಡರು.
ಇನ್ನೂ ಕೆಲ ದಿನಗಳ ನಂತರ ಇನ್ನೊಂದು ಯೋಚನೆ ಬಂತು. ನಾನು ಮೊದಲ ಬಾರಿಗೆ ಪರವಾನಗಿಯನ್ನು ಪಡೆದಾಗ ನನ್ನ ಬಳಿ ವೀಸಾ ಮುಂದುವರೆಸಲು ಕೋರಿದ ಅರ್ಜಿ ಸಂಖ್ಯೆ ಇತ್ತು. ಆವಾಗಲೇ ಅದನ್ನು ಪರಿಗಣಿಸಿದ್ದರೆ ನಾನು ನವೀಕರಣಗೊಳಿಸಿಕೊಳ್ಳುವ ಸಂದರ್ಭವೇ ಬರುತ್ತಿರಲಿಲ್ಲ, ನನ್ನ 25 ಡಾಲರ್ ಗಳ ದಂಡವೂ ಉಳಿಯುತ್ತಿತ್ತು ಎಂದೆನಿಸಿತು .
ತಕ್ಷಣ ಮತ್ತೊಮ್ಮೆ ಮೇಲ್ ಕಲಿಸಿದೆ ಈ ವಿಷಯವಾಗಿ ಚರ್ಚೆ ಮಾಡಬೇಕು ಎಂದು. ಒಬ್ಬ ವ್ಯಕ್ತಿ ವೀಸಾವನ್ನು ಮುಂದುವರೆಸಲು ಕೋರಿದ್ದ ಅರ್ಜಿ ಸಂಖ್ಯೆಯನ್ನು ವಾಹನ ಪರವಾಗಿಯನ್ನು ನೀಡಲು ದಾಖಲೆಯನ್ನಾಗಿ ಪರಿಗಣಿಸಬಾರದು, ಸಾರ್ವಜನಿಕ ಸಾರಿಗೆಯ 'ದಾರಿದ್ರ್ಯ'ತೆ ಇರುವ ಇಂತಹ ದೇಶದಲ್ಲಿ ಪರವಾನಗಿ ಇಲ್ಲದೆಯೇ ಹೇಗೆ ಒಬ್ಬ ವ್ಯಕ್ತಿಯು ವಾಸಮಾಡಬಹುದು, ಉದ್ಯೋಗ ಮಾಡಬಹುದು ಎಂದು ಯೋಚಿಸಲು ಸಾಧ್ಯವಾಗುತ್ತದೆ, ವೀಸಾ ಮುಗಿಯುವ ಅವಧಿ ಮತ್ತು 240 ದಿನಗಳ ಅವಧಿಯನ್ನು ಮೊದಲೇ ಪರಿಗಣಿಸಬೇಕಿತ್ತು, ಎನ್ನುವುದು ನನ್ನ ಪ್ರಶ್ನೆಯಾಗಿತ್ತು.
ಕೆಲ ಚರ್ಚೆಗಳ ನಂತರ ಅವರನ್ನು ಒಪ್ಪಿಸುವುದರಲ್ಲಿ ಗೆದ್ದಿದ್ದೆ. ಕೊನೆಗೆ ನನ್ನ 25 ಡಾಲರ್ ಗಳನ್ನು ಹಿಂದಿರುಗಿಸಲು ಒಪ್ಪಿಸಿವುದರಲ್ಲೂ ಗೆದ್ದಿದ್ದೆ. ಕೆಲ ದಿನಗಳ ನಂತರ ರಾಜ್ಯದ ಖಜಾನೆಯ ಇಲಾಖೆಯಿಂದ ಚೆಕ್ ಬಂತು.
ಸಾಕಷ್ಟು ಸಲ ನಮಗನ್ನಿಸಿದನ್ನು ಮಾಡಲಾಗದೆ ದಾಕ್ಷಿಣ್ಯಕ್ಕೆ ಹೆದರಿ ಸುಮ್ಮನಾಗುತ್ತೇವೆ. ಅದನ್ನೇ ಬೇರೆಯವರು ಮಾಡಿದಾಗ, 'ಛೆ, ನಮಗೂ ಅನ್ನಿಸಿತ್ತು, ನಾವೇ ಮಾಡಬಾರದಿತ್ತೆ ಎಂದು ಹಲುಬುತ್ತೇವೆ. ಆದರೆ ಈ ಸಲ ಹಾಗೆ ಆಗಲಿಲ್ಲ. ನನಗೆ ಸರಿ ಎನಿಸಿದುದನ್ನು ಮಾಡಿದ್ದರ ತೃಪ್ತಿ ತಂದಿತ್ತು. ಅದು ಸರಿಯೂ ಆಗಿತ್ತು.
Good One
ReplyDeletesantoshaa bahala santoshaaaa
ReplyDeleteಅಭಿನಂದನೆಗಳು
ReplyDelete