Dec 26, 2011

ಚಕ್ರವರ್ತಿಯವರ 'ಜಾಗೋ ಭಾರತ್' : ಅತ್ಯಂತ ಪ್ರೇರಣಾದಾಯಿ ಕಾರ್ಯಕ್ರಮ

ಮೊನ್ನೆ ೨೫ರ ಸಂಜೆ ಗಿರಿನಗರದ ಶ್ರೀ ರಾಮಕೃಷ್ಣ ವಿಶ್ವಭಾವೈಕ್ಯ ಮಂದಿರದ ಆವರಣದಲ್ಲಿ, ರಾಮಕೃಷ್ಣ ಸೇವಾ ಟ್ರಸ್ಟ್ ಸಹಯೋಗದಲ್ಲಿ, ಯೋಗಶ್ರಿ ಸಂಸ್ಥೆ ಆಯೋಜಿಸಿದ್ದ, ೨೪೩ ನೆಯ 'ಜಾಗೋ ಭಾರತ್' ಕಾರ್ಯಕ್ರಮ, ನೆರೆದಿದ್ದ ಭಾರಿ ಜನಸ್ತೋಮ, ಮೈ-ಮನ 'ದೈಶಿಕ ಭಾವಮಯ'ವಾಗುವ ವಾತಾವರಣ, ಚಕ್ರವರ್ತಿ ಸೂಲಿಬೆಲೆಯವರ ಪ್ರೇರಣಾದಾಯಿ ಮಾತುಗಳು, ಅನುಭವಗಳು ಎಂಥವರಲ್ಲೂ 'ದೇಶಭಕ್ತಿ'ಯನ್ನು ಜಾಗೃತಗೊಳಿಸುವಂತಿತ್ತು. ಮಧ್ಯೆ ಮಧ್ಯೆ ದೇಶಭಕ್ತಿ ಗೀತೆಗಳ ಗಾಯನ ವಾತಾವರಣದ ಪಾವಿತ್ರ್ಯವನ್ನು ಹೆಚಿಸುತ್ತಿದ್ದವು.

ಬಹಳ ದಿನಗಳಿಂದ ಚಕ್ರವರ್ತಿಯವರ 'ಜಾಗೋ ಭಾರತ್' ಕಾರ್ಯಕ್ರಮ ವನ್ನು ವೀಕ್ಷಿಸಲೇಬೇಕು ಎಂದು ಕಾಯುತ್ತಿದ್ದೆ. ಕೊನೆಗೂ ಮೊನ್ನೆ ಆ ಅವಕಾಶ ಸಿಕ್ಕಿತು. ಸ್ಥಳ ಹುಡುಕಿಕೊಂಡು ಹೋಗಿ ಕಾರ್ಯಕ್ರಮದಲ್ಲಿ ಕೂತವನೇ ಕೊನೆಯಲ್ಲಿ ವಂದೇಮಾತರಂ ಮುಗಿಯುವವರೆಗೂ ಪ್ರಯತ್ನಪಟ್ಟರೂ ಮೇಲೆ ಏಳಲು ಸಾಧ್ಯವಾಗಲೇ ಇಲ್ಲ. ಆ ನಡುಗುವ ಚಳಿಯಲ್ಲೂ ಕೂತಿದ್ದ ಹೆಂಗಸರು ಮಕ್ಕಳನ್ನು ನೋಡಿ ನನಗೆ ನಾನೇ ಹಾಸ್ಯ ಮಾಡಿಕೊಂಡು ಕಾರ್ಯಕ್ರಮ ಮುಗಿಸಿಕೊಂಡೇ ತೆರಳಿದ್ದು.

ಕಾರ್ಯಕ್ರಮದ ವಾತಾವರಣ ಹೇಗಿತ್ತು ಅಂದ್ರೆ ಸಿಖ್ಖ್ ಪಂಥ ಪ್ರಾರಂಭವಾದ ಆ ದಿನ ವನ್ನು ನೆನಪಿಸುವಂತಿತ್ತು. ಆ ಸಂದರ್ಭದಲ್ಲಿ ಸೂಲಿಬೆಲೆ ಯವರೆನಾದರೂ 'ದೇಶಕ್ಕಾಗಿ ಯಾರು ಪ್ರಾಣ ಕೊಡಲು ತಯಾರಿದೀರ?' ಅಂತ ಏನಾದರು ಕೇಳಿದ್ದರೆ ಬಹುತೇಕ ಎಲ್ಲರು 'ನಾ ರೆಡಿ ' ಎಂದು ಏಳುತ್ತಿದ್ದರು. ಆ ತರಹದಲ್ಲಿ ಸ್ವದೇಶದ ಬಗೆಗಿನ ಅಭಿಮಾನವನ್ನ ತಟ್ಟಿ ಎಬ್ಬಿಸಿದಂತಿತ್ತು. ಹೆಸರಿಗೆ ತಕ್ಕಂತೆ 'ಭಾರತವನ್ನ ಜಾಗೃತ'ಗೊಳಿಸು ವಂತಿತ್ತು. 'ಜಾಗೋ ಭಾರತ್ 'ಕಾರ್ಯಕ್ರಮಕ್ಕೆ ತಾವೇನಾದರೂ ಮಾಡಬೇಕೆಂದು ಬಂದಿದ್ದ ವೇದಿಕೆಯ ಮೇಲಿದ್ದ ವರನ್ನ ಪರಿಚಯ ಮಾಡಿಸಿದಾಗ ಎಂಥವರಲ್ಲೂ 'ತಾವೂ ಸಹ ಏನಾದರು ಮಾಡಬೇಕು' ಎಂದೆನಿಸದೇ ಇರಲು ಸಾಧ್ಯವೇ ಇಲ್ಲ.


ಚಕ್ರವರ್ತಿಯವರ ೨೪೩ ನೆಯ 'ಜಾಗೋ ಭಾರತ್' ಕಾರ್ಯಕ್ರಮವಾದ್ದರಿಂದ ಅವರ ಹಿಂದಿನ ಅನುಭವಗಳು ಎಂಥವರ ಕಣ್ಣಲ್ಲೂ ಕಂಬನಿ ಬರಿಸದೆ ಇರಲಿಲ್ಲ. ಅವಾಗವಾಗ ಅವರು ಹಾರಿಸುತ್ತಿದ್ದ ನಗೆ ಚಟಾಕಿಗಳು ಸಹ ಎಲ್ಲರನ್ನು ನಗಿಸಿತ್ತು. ಅವರು ಹೇಳಿದ ಒಂದು ಘಟನೆ.

ಮದುವೆ ನಿಶ್ಚಯವಾದ ಒಬ್ಬಳು ಹುಡುಗಿ ಚಕ್ರವರ್ತಿಯವರನ್ನು ತನ್ನ ಮದುವೆಯ ಸಂದರ್ಭದ ಆರತಕ್ಷತೆಗೆ 'ಜಾಗೋ ಭಾರತ್' ಕಾರ್ಯಕ್ರಮ ವನ್ನು ನಡೆಸಿಕೊಡಲು ಕೇಳಿಕೊಳ್ಳುತ್ತಾಳೆ. ಎಷ್ಟು ಬೇಡವೆಂದರೂ ಕೇಳದೆ ಹಠ ಹಿಡಿಯುತ್ತಾಳೆ. ಕಾರ್ಯಕ್ರಮ ಮುಗಿದ ನಂತರ ಚಕ್ರವರ್ತಿಯವರ ಹತ್ತಿರ ಬಂದು ತನ್ನ ಮಕ್ಕಳನ್ನು ದೇಶದ ಕೆಲಸಕ್ಕಾಗಿ ಕಳಿಸಿಕೊಡ್ತೇನೆ ಅಂತ ಹೇಳುವಷ್ಟರ ಮಟ್ಟಿಗೆ ಪ್ರೇರಣೆ ಪಡೆದಿರುತ್ತಾಳೆ. ಇಂತಹ ಎಷ್ಟೋ ಘಟನೆಗಳ ಸರಮಾಲೆಯನ್ನೇ ನಮ್ಮ ಮುಂದಿರಿಸಿದ ಕಾರ್ಯಕ್ರಮ ನಿಜವಾಗಲು ಅತ್ಯಂತ ಪ್ರೇರಣಾದಾಯಿಯಾಗಿತ್ತು. ತಕ್ಷಣ ಮನೆಗೆ ಬಂದು ಮುಂದಿನ ಜಾಗೋ ಭಾರತ್ ಕಾರ್ಯಕ್ರಮ ಯಾವಾಗ ಎಂದು
ತಪತಪಿಸುವ ಮಟ್ಟಿಗೆ ಪ್ರಭಾವಿಯಾಗಿತ್ತು ಎಂದು ಹೇಳಲು ಹೆಮ್ಮೆಯಾಗುತ್ತದೆ.

ಕಾರ್ಯಕ್ರಮದ ಕೊನೆಯಲ್ಲಿ ಸೂಲಿಬೆಲೆಯವರು ಎಲ್ಲರಿಗು ಪ್ರಾರ್ಥನೆ ಮಾಡಿದ್ದು ಏನು ಗೊತ್ತ? 'ದಯವಿಟ್ಟು ಇನ್ನಾದರು ನಮ್ಮ ಭಾರತವನ್ನ ಬೈಯುವುದನ್ನ ನಿಲ್ಲಿಸಿ' ಅಂತ.




ಖಂಡಿತ ಎಲ್ಲರು ಹಾಗು ಎಲ್ಲವಾಗಲೂ ಕೇಳಬೇಕಾದ, ನೋಡಬೇಕಾದ ಕಾರ್ಯಕ್ರಮ 'ಜಾಗೋ ಭಾರತ್'. ನಮ್ಮ ದೇಶದ ಹಿರಿಮೆಗಳೇನು ಎಂದು ತಿಳಿದುಕೊಳ್ಳಲು, ಭಾರತವನ್ನು ಪ್ರೀತಿಸಲು, 'ಭಾರತೀಯ'ನಾಗಲು ಹೆಮ್ಮೆಪಡಲು ಏನಿದೆ ಏನು ತಿಳಿದುಕೊಳ್ಳಲು ಯಾರಾದರು 'ಕಷ್ಟ' ಪಡುತ್ತಿದ್ದರೆ ದಯವಿಟ್ಟು ತಪ್ಪಿಸಿಕೊಳ್ಳಬೇಡಿ, 'ಜಾಗೋ ಭಾರತ್'.


Dec 9, 2011

ಆರೆಸ್ಸೆಸ್ ಮತ್ತು ಭಾಜಪದ ಸಂಬಂಧ: ಸಜ್ಜನ ಹಿಂದೂಸಮಾಜದ ಕಳಕಳಿ


ಕೆಲ ದಿನಗಳ ಹಿಂದೆ ಮತ್ತೊಂದು ಹೊಸ 'ಆರೋಪ ಸುದ್ದಿ' ಚಾಲ್ತಿಗೆ ಬಂದಿತ್ತು. ಅದು ಯಡಿಯೂರಪ್ಪನವರು 'ಹೊಸ ದಿಗಂತ' ಎಂಬ ದಿನಪತ್ರಿಕೆಗೆ ನೀಡಿದ ಅಪಾರ ಕೊಡುಗೆಗಳ ಬಗ್ಗೆ. ಯಡ್ಡಿಯವರು ಆರೆಸ್ಸೆಸ್ ನ ಜೊತೆ ಗುರುತಿಸಿಕೊಂಡಿರುವ ಒಂದೇ ಕಾರಣಕ್ಕೆ, ಇದನ್ನೇ ಆಧಾರವಾಗಿಟ್ಟುಕೊಂಡು ಸಂಘಪರಿವಾರದ ವಿರುದ್ಧ ಮಾತಾಡಲು, ಬರೆಯಲು, ಸುದ್ಧಿ ಹಬ್ಬಿಸಲು, ಆ ಮೂಲಕ 'ಹೆಸರುವಾಸಿ'ಯಾಗಲು, ಪ್ರಶಸ್ತಿ -ಅನುದಾನಗಳನ್ನು 'ಸಂಪಾದಿಸಲು' ದೇಶದಲ್ಲಿ ಬಹಳ ದೊಡ್ಡ ದೊಡ್ಡ 'ಸಂಘಟನೆ'ಗಳೇ ಇವೆ. ಅವಕ್ಕೇನು ಕೊರತೆಯಿಲ್ಲ. ಇವುಗಳ ಹಿಂದಿನ ಹೇಸಿಗೆ ರಾಜಕಾರಣ ಎಲ್ಲರಿಗು ಗೊತ್ತಿರುವಂಥದ್ದೇ.

ಆದರೆ ಯಡಿಯೂರಪ್ಪ ಅಧಿಕಾರಕ್ಕೆ ಬಂದಾಗಲೇ 'ಹೊಸ ದಿಗಂತ ' ಪತ್ರಿಕೆ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು ಸಾಧ್ಯವಾದದ್ದು ಎಂಬುದು ನಿಜವಾಗಿರಬಹುದು. ಯಡಿಯೂರಪ್ಪನವರು ಜೈಲಿನಿಂದ ಬಿಡುಗಡೆಯಾದ ಮರುದಿನದ 'ಹೊಸದಿಗಂತ' ಪತ್ರಿಕೆಯ ಮುಖಪುಟದ ಶೀರ್ಷಿಕೆ ಕೂಡ ಇದಕ್ಕೆ ಪುಷ್ಟಿ ನೀಡುವಂತಿರಬಹುದು. ಹಾಗು ಅದೇ ಯಡಿಯೂರಪ್ಪಾಧಿಕಾರದ ಸಮಯದಲ್ಲೇ ಆರೆಸ್ಸೆಸ್ಸಿನ ಜತೆ ಗುರುತಿಸಿಕೊಂಡವರು ಕೆಲವರು 'ತಮ್ಮ ಆರೆಸ್ಸೆಸ್ ತನವನ್ನು' ಬಳಸಿ ಭಾಜಪದ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡಿರುವುದಕ್ಕೆ ಆರೆಸ್ಸೆಸ್ ಗೆ ಮುಜುಗರವಾಗಿರುವುದು ಸತ್ಯವಾದರೂ ಅದಕ್ಕೆ ಆರೆಸ್ಸಸ್ಸನ್ನು ಹೊಣೆಯಾಗಿಸಲು ಸಾಧ್ಯವಿಲ್ಲ. ಅದು ಪರಮ ಮೂರ್ಖತನವಾದೀತು. ಆದರೆ ಪಂಚಾಯಿತಿ ಮಟ್ಟದ ಅಥವಾ ತಾಲ್ಲೂಕು ಮಟ್ಟದಲ್ಲೇ ತಮ್ಮ 'ಭ್ರಷ್ಟತೆಯನ್ನು ಸಾಬೀತು' ಪಡಿಸುವವರಿಗೆ ಜಿಲ್ಲಾಮಟ್ಟಕ್ಕೆ, ರಾಜ್ಯಮಟ್ಟಕ್ಕೆ ಹೋಗುವ ಅವಕಾಶವನ್ನು ನೀಡದಿರುವಲ್ಲಿ ಆರೆಸ್ಸೆಸ್ ಪ್ರಮುಖ ಪಾತ್ರ ವಹಿಸಬೇಕಾದ ಅವಶ್ಯಕತೆ ಈ ದೇಶದ ಸಜ್ಜನ ಹಿಂದೂ ಸಮಾಜದ ಅವಶ್ಯಕತೆಯೇ ಆಗಿದೆ.



ಆರೆಸ್ಸೆಸ್ ಮಾಡುತ್ತಿರುವ ಸೇವಾ ಕೆಲಸಗಳು, ಹಿಂದೂ ಸಂಘಟನೆ ಹಾಗು ಅದಕ್ಕೆ ಪೂರಕವಾದ ಎಲ್ಲ ಕೆಲಸಗಳು ಖಂಡಿತ ಈ ದೇಶಕ್ಕೆ ಅವಶ್ಯ, ಅನಿವಾರ್ಯ. ಈ ವಿಷಯವನ್ನು ಸಾಕಷ್ಟು ಕಾಂಗ್ರೆಸ್ಸಿಗರೂ ವೈಯಕ್ತಿಕವಾಗಿ ಒಪ್ಪುತ್ತಾರೆ. ಅಷ್ಟೇ ಅಲ್ಲ ರಹಸ್ಯವಾಗಿ ಪ್ರೋತ್ಸಾಹಿಸುತ್ತಾರೆ ಕೂಡ. ಆದರೆ ಕಾಂಗ್ರೆಸ್ಸಿನಲ್ಲಿನ 'ಅಸ್ತಿತ್ವದ' ಪ್ರಶ್ನೆಯ ಕಾರಣಕ್ಕೆ ಅದನ್ನು ಸಾರ್ವಜನಿಕವಾಗಿ ತೋರಿಸಿಕೊಳ್ಳುವುದಿಲ್ಲವಷ್ಟೇ. ಅವರ ಅಸಹಾಯಕತೆ ನಮಗೆ ಅರ್ಥವಾಗುತ್ತದೆ. ಪಾಪ..!

ಆದರೆ ಆರೆಸ್ಸೆಸ್ 'ಮಾಡದಿರುವ' ಕೆಲಸದ ಹಾಗು ಅದರ ಪರಿಣಾಮಗಳ ಬಗ್ಗೆ ಸಮಾಜದ ಹಲವರಲ್ಲಿ ವ್ಯಕ್ತವಾಗಿರುವ ಅಭಿಪ್ರಾಯಗಳು ಆರೆಸ್ಸೆಸ್ಸಿನ ನಿಷ್ಠಾವಂತ ಕಾರ್ಯಕರ್ತರಲ್ಲೇ ಚಿಂತೆಗೆ ಕಾರಣವಾಗಿರುವುದು ನಿಜ. ತಮ್ಮ ಮನೆಯ ಮಕ್ಕಳ ತಪ್ಪಿಗೆ ತಾವೇ ಮೊದಲು ದಂಡಿಸಬೇಕೆ ಹೊರತು ಬೇರೆಯವರು ದಂಡಿಸಲು ಅವಕಾಶ ಕೊಡಬಾರದು ಎಂಬುದು ಆರೆಸ್ಸೆಸ್ಸಿನಲ್ಲೇ ಆಡುವ ಮಾತು. ಅದೇ ತರಹದಲ್ಲಿ ಆರೆಸ್ಸೆಸ್ಸಿನ ಕಾರ್ಯಕರ್ತರಾದ ಕಾರಣಕ್ಕೆ, ಕೆಲ ತಿಂಗಳುಗಳ ಕಾಲ ಪೂರ್ಣಾವಧಿ ಕಾರ್ಯಕರ್ತರಾದ ಕಾರಣಕ್ಕೆ, ಭಾಜಪದಲ್ಲಿ ಸೀಟು ಗಿಟ್ಟಿಸಿಕೊಂಡವರು, 'ಸ್ವಯಂಸೇವಕನು' ಮಾಡಬಾರದ್ದನ್ನು ಮಾಡುತ್ತಿದ್ದರೂ ಸಂಘದ ಹಿರಿಯರು ಬರೇ 'ಸಲಹೆ - ಸೂಚನೆ'ಗಳಿಗೆ ಸೀಮಿತವಾದದ್ದು ಮಾತ್ರ ಆರೆಸ್ಸಸ್ ನ ಅಸಹಾಯಕತೆಯನ್ನು ತೋರಿಸುತ್ತದೆ. ಅಧಿಕಾರವೇರಿದ ಒಬ್ಬ ಸ್ವಯಂಸೇವಕನನ್ನು ಅವನ ಚಾರಿತ್ರ್ಯದ ಆಧಾರದ ಮೇಲೆ ನಿಯಂತ್ರಣ ಮಾಡುವ ಇಚ್ಛೆ ಅಥವಾ ಅವಕಾಶ ಸಂಘಕ್ಕೆ ಇಲ್ಲದಿದ್ದರೂ ಅವನಿಂದ ಬರೇ ಉತ್ತಮ ಆಡಳಿತವನ್ನು ಅಪೇಕ್ಷಿಸುವ ಈ ಅಸಹಾಯಕತೆಗೆ ಉತ್ತರ?



ಪ್ರಸ್ತುತ ಸಮಯದಲ್ಲಿ ಆರೆಸ್ಸೆಸ್ಸಿನ ಸಾಮಾನ್ಯ ಕಾರ್ಯಕರ್ತ ಅಥವಾ ಸಜ್ಜನ ಹಿಂದೂ ಸಮಾಜದ ವರ್ಗ ಬಯಸುವುದು, ಆರೆಸ್ಸಸ್ ಖಡಾಖಂಡಿತವಾಗಿ ಬಿಜೆಪಿಯನ್ನು ತನ್ನ ಪರಿವಾರವಲ್ಲ ಎಂದು ಘೋಷಿಸುವುದು ಅಥವಾ 'ಸ್ವಯಂಸೇವಕತ್ವ'ವನ್ನು ಕಾಪಾಡಿಕೊಳ್ಳಲಾಗದವರನ್ನು ಮುಲಾಜಿಲ್ಲದೆ ಭಾಜಪದಿಂದ ಹೊರಹಾಕಿ 'ತಾನು ನಿರ್ಮಾಣ' ಮಾಡಿದ ವ್ಯಕ್ತಿಯನ್ನು ಆ ಜಾಗಕ್ಕೆ ತಂದು ಕೂರಿಸುವುದು. ಹೊಸ ವ್ಯಕ್ತಿಗಳಿಂದ ಅಧಿಕಾರಕ್ಕೆ ಬರಲು ಕಷ್ಟವಾಗಬಹುದು ಹಾಗು ಅಧಿಕಾರಕ್ಕೆ ಬಂದ ಮೇಲೆ ಹೊಸಬರೂ ಸಹ ತಪ್ಪು ಹಾದಿ ತುಳಿಯಬಹುದು. ಅಧಿಕಾರಕ್ಕೆ ಬರಲು ಸಾಧ್ಯವೋ ಅಲ್ಲವೋ, ಕಷ್ಟವೋ ನಷ್ಟವೋ, ಸಚ್ಚಾರಿತ್ರ್ಯ ವ್ಯಕ್ತಿಗಳಿಗೆ ಮಾತ್ರ ಅವಕಾಶ ನಿಡಿದಾಗ ಮಾತ್ರ ಆರೆಸ್ಸೆಸ್ ತನ್ನ ಮೇಲೆ ಸಮಾಜದ ಸಜ್ಜನ ವರ್ಗ ಇಟ್ಟಿರುವ ನಂಬಿಕೆಯನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ.

ಸಾಮಾನ್ಯ ಸ್ವಯಂಸೇವಕನಾಗಿದ್ದಾಗ ಅತ್ಯಂತ ಒಳ್ಳೆಯ ಚಾರಿತ್ರ್ಯವುಳ್ಳ ವ್ಯಕ್ತಿಯಾಗಿದ್ದವ ಅಧಿಕಾರಕ್ಕೆ ಬಂದ ಕೂಡಲೇ ಆಸ್ತಿವಂತನಾಗುತ್ತಾನೆ. ಸಂಘದ ಜವಾಬ್ದಾರಿಯಿದ್ದವ 'ಭಾಜಪದ ಅಧಿಕಾರವುಳ್ಳವ'ನಾಗುತ್ತಾನೆ ಎಂದರೆ, ಸಾಮಾನ್ಯ ವ್ಯಕ್ತಿಯಾಗಿ 'ಅಧಿಕಾರ ಏರುವವ'ನಿಗೂ, ಒಬ್ಬ ಸ್ವಯಂಸೇವಕನಾಗಿ 'ಅಧಿಕಾರ ಏರುವವ'ನಿಗೂ ಏನು ವ್ಯತ್ಯಾಸ? ಹಾಗಿದ್ದಾಗಲೂ ಆ ವ್ಯಕ್ತಿಗೆ ಸಂಘದ ಪೋಷಣೆ ಸಿಕ್ಕಿದರೆ ಅವನಿಗೆ ಎಂದಿಗೂ ತನ್ನ ತಪ್ಪಿನ ಅರಿವಾಗುವುದಿಲ್ಲ. ಅವನಿಗೆ 'ಅಪರಾಧಿತನ' ಕಾಡುವುದಿಲ್ಲ. ಅವನು ತನ್ನ ತಪ್ಪನ್ನು ತಿದ್ದಿಕೊಳ್ಳುವುದಿಲ್ಲ.



ಯಾವಾಗ ತನ್ನ ತಪ್ಪಿನ ಕಾರಣಕ್ಕೆ ಆರೆಸ್ಸೆಸ್ ನನ್ನನ್ನು ಉಪೇಕ್ಷಿಸುತ್ತದೆ ಎಂದೆನಿಸುತ್ತದೋ ಆಗ ತಪ್ಪಿತಸ್ಥನಿಗೆ ಯಾವುದೋ ಮಟ್ಟದ ಹಿಂಜರಿಕೆ ಆಗುವುದು ಖಂಡಿತ. ಮತ್ತೊಮ್ಮೆ ಅವನು ಸಾಮಾನ್ಯ ಸ್ವಯಂಸೇವಕನ ಮಟ್ಟದಿಂದ ತನ್ನ ಚಾರಿತ್ರ್ಯವನ್ನು ಸಾಬೀತು ಪಡಿಸಿ ಭಾಜಪಕ್ಕೆ ಬರಲು ಪ್ರಯತ್ನಿಸುತ್ತಾನೆ. ಆರೆಸ್ಸೆಸ್ ಏನು ಮಾಡುತ್ತದೆ ಎಂಬುದನ್ನು ಸಮಾಜ ನೋಡುವುದು ಸ್ವಯಂಸೇವಕರ ಮೂಲಕವೇ. ಅದು ಸ್ಥಳೀಯ ಸ್ವಯಂಸೇವಕರ ಮೂಲಕ. ಇನ್ನೂ ಮುಖ್ಯವಾಗಿ ಸ್ಥಳೀಯ 'ಅಧಿಕಾರಸ್ಥ ಸ್ವಯಂಸೇವಕರ' ಮೂಲಕ. ಆ ಜಾಗಕ್ಕೆ ನಾವು ಸರಿಯಾದವರನ್ನು ನಿಲ್ಲಿಸದಿದ್ದರೆ 'ಅಧಿಕಾರಕ್ಕೆ ಬಂದ ನಂತರ ಸ್ವಯಂಸೇವಕನೂ ಒಂದೇ, ಇತರರೂ ಒಂದೇ' ಎಂದಾಗುತ್ತದೆ. ಸಂಘಟನಾ ಕೌಶಲ, ಮಾತಿನ ಕೌಶಲ, ಹಣದ ಸಾಮರ್ಥ್ಯ, ಸಂಪರ್ಕ ಸಾಮರ್ಥ್ಯ ಇವೆಲ್ಲವೂ ಚಾರಿತ್ರ್ಯದ ನಂತರದ ಸ್ಥಾನವನ್ನು ಪಡೆಯುವಂತಾದರೆ ಮಾತ್ರ ಭಾಜಪದಲ್ಲಿ ಸಜ್ಜನರು ಇರಲು ಹಾಗು ಸಜ್ಜನರು ಉಳಿಯಲು ಸಾಧ್ಯವಾಗುತ್ತದೆ.

ಈ ಕೆಲಸ ನಾವು ಹೇಳುವಷ್ಟು ಅಥವಾ ಬರೆಯುವಷ್ಟು ಸುಲಭವಲ್ಲ ಎಂಬ ಸತ್ಯದ ಅರಿವಿದ್ದರೂ ನಮ್ಮ ಅಪೇಕ್ಷೆಯ ಹಿಂದೆ ಉತ್ತಮ ಸಮಾಜ ನಿರ್ಮಾಣದ ಕಳಕಳಿಯಿದೆ ಎಂಬುದನ್ನು ಇಲ್ಲಿ ಉಲ್ಲೇಖಿಸಲೇಬೇಕು. ಸಸಿಯಿಂದ ಹೆಮ್ಮರದೆತ್ತರಕ್ಕೆ ಬೆಳೆದ ಆರೆಸ್ಸೆಸ್ಸಿನ ಬಗ್ಗೆ ಅತ್ಯಂತ ನಂಬಿಕೆ, ವಿಶ್ವಾಸವಿದ್ದರೂ, ಭವಿಷ್ಯದ 'ಭವ್ಯ ಭಾರತ ನಿರ್ಮಾಣ'ದ ಕನಸು ಎಲ್ಲಿ ಅಸಾಧ್ಯವಾಗುವುದೋ ಎಂಬ ಸಂಶಯ, ಭಯ ಹಿಂದೂಸಮಾಜದ ನಮ್ಮಂತಹ ಹಲವರಲ್ಲಿ ಮೂಡಿರುವ ಕಾರಣಕ್ಕೆ ನಮ್ಮ ಮನಸ್ಸಿನ ದುಗುಡಗಳನ್ನ ಹೊರಕ್ಕೆ ಹಾಕಿದ ಸಮಾಧಾನವಷ್ಟೇ.


"ವಂದೇ ಭಾರತಮಾತರಂ"

Dec 1, 2011

ಮತ್ತೂರು ವಿಜಯದಶಮಿ ಬೌದ್ಧಿಕ್ : ಭಾಗ - ೪

ಒಮ್ಮೆ ಒಂದು ಘೋಷ್ ವರ್ಗ ನಡೀತಿತ್ತು. ಅವಾಗ ಒಬ್ಬ ಘೋಷ್ ಶಿಕ್ಷಕ, ಒಬ್ಬ ಘೋಷ್ ಶಿಕ್ಷಾರ್ಥಿ ಅಪ್ಪಾಜಿ ಜೋಶಿಯವರೊಡನೆ ಹೋಗ್ತಾ ಇದ್ದರು. ಆಗ ಡಾಕ್ಟರ್ ಜಿ ಆ ಘೋಷ್ ಶಿಕ್ಷಕ ಮತ್ತು ಶಿಕ್ಷಾರ್ಥಿಯವರ ಮಧ್ಯೆ ನಡೆದು ಹೋದರು. ಆಗ ಘೋಷ್ ಶಿಕ್ಷಕ 'ಡಾಕ್ಟರ್ ಜಿ ಹಾಗೆ ಮಧ್ಯೆ ಹೋಗಬಾರದು. ಪಕ್ಕದಲ್ಲಿ ಹೋಗಬಹುದು' ಅಂತ ಹೇಳಿದ. ಆ ನಂತರ ಅಪ್ಪಾಜಿ ಜೋಷಿ ಡಾಕ್ಟರ್ ಜಿಯವರಿಗೆ ಕೇಳಿದರು 'ನೀವು ಬೇಕು ಅಂತಲೇ ಹಾಗೆ ನಡೆದುಕೊಂಡಿರಲ್ಲವೇ?, ಯಾಕೆ?' ಅಂತ ಕೇಳಿದಾಗ ಅದಕ್ಕೆ ಡಾಕ್ಟರ್ ಜಿ 'ಸಂಘದ ಸ್ವಯಂಸೇವಕ ನನಗೆ ತಲೆಬಾಗುತ್ತಾನೋ ಅಥವಾ ಸಂಘದ ನಿಯಮಗಳಿಗೆ ತಲೆಬಾಗುತ್ತಾನೋ ಅನ್ನೋದನ್ನ ತಿಳಿದುಕೊಳ್ಳಲು. ಅವನು ಸರಿ ಮಾಡಿದ.' ಅಂತ ಅಪ್ಪಾಜಿಯವರಿಗೆ ಹೇಳಿದರು.

ಇನ್ನೊಮ್ಮೆ ವರ್ಗದ ಬೈಠಕ್ ನಲ್ಲಿ ಡಾಕ್ಟರ್ ಜಿ 'ನಾನು ಡಾಕ್ಟರ ಕೇಶವ ಬಲಿರಾಮ ಹೆಡಗೆವಾರ್ ಹೇಳ್ತಾ ಇದ್ದೀನಿ ಇದು ಹಿಂದೂ ರಾಷ್ಟ್ರ ಅಲ್ಲ' ಅಂತ ಹೇಳಿದಾಗ ಎಲ್ಲರಿಗೂ ಆಶ್ಚರ್ಯ .! ತುಂಬಾ ಜನ 'ಅದು ಸಾಧ್ಯ ಇಲ್ಲ' ಅಂತ ಅಂದ್ರು. 'ಅದಿರಲಿ, ಇದಕ್ಕೆ ನಿಮ್ಮಗಳ ಉತ್ತರ ಏನು?' ಅಂತ ಡಾಕ್ಟ ರ್ ಜಿ ಕೇಳಿದ್ದಕ್ಕೆ 'ಆಗ ಡಾಕ್ಟರ್ ಜಿ ಸರಸಂಘಚಾಲಕರಾಗಿರೋದಿಲ್ಲ' ಅಂತ ಉತ್ತರ ಕೊಟ್ರು. ಅಂದ್ರೆ ಡಾಕ್ಟರ್ ಜಿ ಯವರಿಗೆ ಸ್ವಯಂಸೇವಕರು ತನ್ನನ್ನು ನಿಷ್ಠೆಯಿಂದ ನೋಡಬೇಕು ಅಂತ ಇರಲಿಲ್ಲ, ಸಂಘವನ್ನ ನಿಷ್ಠೆಯಿಂದ ನೋಡಬೇಕು ಅಂತ ಇತ್ತು. ಸಂಘದ ವಿಚಾರವನ್ನ, ಗುರಿಯನ್ನ, ನಿಷ್ಠೆಯಿಂದ ಅನುಸರಣೆ ಮಾಡಬೇಕು ಅಂತ ಇತ್ತು. ತುಂಬಾ ಸಂದರ್ಭದಲ್ಲಿ ಮನುಷ್ಯ ಇಲ್ಲೇ ಎಡವುವಂಥದ್ದು. ಸಂಘಕ್ಕೆ ಬರುವುದಕ್ಕೆ ಯಾರೋ ಒಬ್ಬರು ಸ್ನೇಹಿತರು ಕಾರಣರಾಗಬಹುದು. ಆದರೆ ಇಲ್ಲಿ ಉಳಿಯಬೇಕಾದರೆ ಸಂಘದ ನಿಷ್ಠೆಯನ್ನೇ ಉಳಿಸಿಕೊಳ್ಳಬೇಕಾದ್ದು. ಇದನ್ನ ಹೆಜ್ಜೆಹೆಜ್ಜೆನಲ್ಲಿ ಡಾಕ್ಟರ್ ಜಿ ಕಲಿಸ್ತಾ ಇದ್ರು.

ಪ್ರತ್ಯಕ್ಷ ಡಾಕ್ಟರ್ ಜಿ ಬಗ್ಗೆ ತುಂಬಾ ಜನಕ್ಕೆ ಡಾಕ್ಟರ್ ಜಿ ತುಂಬಾ ದೊಡ್ಡವರು ಅಂತ ಅನ್ನಿಸ್ತಾನೇ ಇರ್ಲಿಲ್ಲ. ಅಂದ್ರೆ ತಮಗಿಂತ ೨ ಹೆಜ್ಜೆ ಮುಂದಿರಬಹುದು, ನಾವು ೨ ಹೆಜ್ಜೆ ಮುಂದಿಟ್ರೆ ನಾವು ಡಾಕ್ಟರ್ ಜಿ ಜೊತೆ ಅಂತ ಯೋಚಿಸ್ತಾ ಇದ್ರು. ಆದ್ರೆ ತಾವು ೨ ಹೆಜ್ಜೆ ಇಡುವ ಹೊತ್ತಿಗೆ ಡಾಕ್ಟರ್ ಜಿ ಇನ್ ೨ ಹೆಜ್ಜೆ ಮುಂದೆ ಇಡ್ತಾ ಇದ್ರು. ನೋಡಕ್ಕೆ ೨ ಹೆಜ್ಜೆ ಮಾತ್ರ ಮುಂದಿದ್ರೂ ಮನಸ್ಸಿನಲ್ಲಿ ೫೦ ಹೆಜ್ಜೆ ಮುಂದೆ ಇರ್ತಾ ಇದ್ರು ಅಂತ. ಆದ್ರೆ ನೋಡುವವರಿಗೆ ಅವರು ೨ ಹೆಜ್ಜೆ ಮಾತ್ರ ಮುಂದಿದಾರೆ ಅಂತ ಅನ್ನಿಸ್ತಾ ಇತ್ತು. ಸಂಘದ ವಿಶೇಷತೆ ಅಂದ್ರೆ ಇದೇ.

ಸಾಮಾನ್ಯವಾಗಿ ವ್ಯಕ್ತಿಗತ ಪವಾಡಗಳಿಗೆ ಮನುಷ್ಯ ಬೇಗ ಮಾರುಹೋಗ್ತಾನೆ. ಸತ್ತು ಹೋದ ಪಾರಿವಾಳಕ್ಕೆ ಯಾವನೋ ಒಬ್ಬ ಜೀವ ಬರಿಸಿದ ಅಂದ್ರೆ ನಾವು ಬಹಳ ಆಶ್ಚರ್ಯ ಪಡ್ತೇವೆ. ಯಾರಾದ್ರೂ ಕೃತಕ ಹೂವಿಗೆ ವಾಸನೆ ಬರಿಸಿದ್ರು ಅಂದ್ರೆ ಕಣ್ ಕಣ್ ಬಿಡ್ತೇವೆ. ಆದರೆ ಸಂಘ ಮಾಡಿರುವ ಪವಾಡ ಇದೆಯಲ್ಲ, ಇಷ್ಟು ಜನರನ್ನ 'ದೇಶಭಕ್ತ'ರನ್ನಾಗಿ ಮಾಡಿರುವುದಿದೆಯಲ್ಲ, ಇಷ್ಟು ಜನರನ್ನ 'ಈ ದೇಶಕ್ಕೆ ನಿಷ್ಠೆಯಿಂದಿರುವಂತೆ' ಮಾಡಿರುವುದಿದೆಯಲ್ಲ ಇಂಥ ಪವಾಡವನ್ನ ಜಗತ್ತಿನಲ್ಲಿ ಯಾರೂ ಮಾಡಲು ಸಾಧ್ಯ ಇಲ್ಲ.

ಹಾಗಾಗಿ ಸ್ವಯಂಸೇವಕರು ಹೊರಗಡೆ ಪ್ರಪಂಚದ ಪವಾಡಗಳಿಗೆ ಮರುಳಾಗದೆ ನಾವು ಸಂಘದ ಪವಾಡವನ್ನೇ ತೆರೆದ ದೃಷ್ಟಿಯಿಂದ ನೋಡುವುದರಿಂದ ಸಂಘ ಕಾರ್ಯದಲ್ಲಿ ಉಳಿಯಲು ಸಾಧ್ಯವಾಗುತ್ತೆ. ಸಂಘದ ವಿಶೇಷತೆಗಳನ್ನ ಆಗಾಗ್ಗೆ ಮೆಲುಕು ಹಾಕುತ್ತಾ, ಸಂಘದ ಹಿರಿಯರು ಹೇಳಿದ ವಿಚಾರಗಳನ್ನ ಆಗಾಗ್ಗೆ ಚಿಂತಿಸುತ್ತಾ, ಸಂಘದ ಜೊತೆ ನಿರಂತರ ಸಂಪರ್ಕ ಇಟ್ಟುಕೊಳ್ಳುವ ಮೂಲಕ, ನಾವು ಜೀವನಪೂರ 'ಸ್ವಯಂಸೇವಕ'ರು ಎಂಬ ಮಾನಸಿಕತೆಯನ್ನ ಬೆಳೆಸಿಕೊಳ್ಳೋಣ.


( ಮುಗಿಯಿತು)

Nov 24, 2011

ಮತ್ತೂರು ವಿಜಯದಶಮಿ ಬೌದ್ಧಿಕ್ : ಭಾಗ - ೩

ನಮ್ಮ ದೇಶದಲ್ಲಿ ಬಹಳಷ್ಟು ಜನ ದೊಡ್ಡವರು ದೇಶಭಕ್ತರಿದ್ದರು. ಗಾಂಧೀಜಿ, ಸಾವರ್ಕರ್, ಸುಭಾಶ್ ಚಂದ್ರ ಬೋಸ್ ಮುಂತಾದವರು. ಈ ರೀತಿಯಾಗಿ ದೇಶಭಕ್ತರಾಗಿದ್ದಂತಹ ದೊಡ ವ್ಯಕ್ತಿಗಳು ಇಂಗ್ಲೆಂಡ್ ನಲ್ಲಿ ಬಹಳ ಕಡಿಮೆ ಜನರಿದ್ದರು. ಆದರೆ ಬ್ರಿಟಿಷರು ನಮ್ಮನ್ನ ಆಳಿದರು, ನಾವು ಸೋತೆವು. ೧೫ ಇಂಗ್ಲೆಡ್ ಅನ್ನು ನಮ್ಮ ದೇಶದಲ್ಲಿ ಇಡಬಹುದು. ಆದರೂ ನಾವು ಸೋತೆವು. ಅಂದರೆ ನಾವು ಎಷ್ಟೇ ಸಮರ್ಥರಾಗಿದ್ದರೂ ನಾವು ನಮಗಿಂತ ಅಸಮರ್ಥರಾದವರ ಮುಂದೆ ಸೋತಿದ್ದೇವೆ. ಯಾಕೆ ನಾವು ಸೋತ್ವಿ?

ಎರಡನೇ ಮಹಾಯುದ್ಧದ ಸಮಯದಲ್ಲಿ ಜರ್ಮನಿಯವರು ಇಂಗ್ಲೆಂಡ್ ಮೇಲೆ ಪ್ರತಿನಿತ್ಯ ಬಾಂಬುಗಳನ್ನು ಹಾಕ್ತಾಯಿರ್ತಾರೆ. ಒಂದು ದಿನ ಇಂಗ್ಲೆಂಡಿನ ಪೋಲೀಸಿನವರು ಒಬ್ಬನನ್ನ ಬಂಧಿಸ್ತಾರೆ. ಅವನು ಜರ್ಮನಿಯ ಸಿಐಡಿ ಅಂತ ಹೇಳಿ ಅರೆಸ್ಟ್ ಮಾಡ್ತಾರೆ. ಅವನು ಪ್ರತಿನಿತ್ಯ ಇಂಗ್ಲೆಂಡಿನ ರಹಸ್ಯಗಳನ್ನ ಜರ್ಮನಿಗೆ ತಿಳಿಸ್ತಿರ್ತಾನೆ ಅಂತ. ವಿಚಾರಣೆ ಎಲ್ಲ ಆಗುತ್ತೆ. ಜರ್ಮನಿಯವನಿಗೆ ಕುತೂಹಲ ತಡೆಯಲಾರದೆ ಕೇಳ್ತಾನೆ 'ನನ್ನನ್ನ ಹೇಗೆ ಹಿಡಿದ್ರಿ? ಯಾವ ಡಿಪಾರ್ಟ್ ಮೆಂಟ್ ನನ್ನನ್ನ ಹಿಡಿದಿದ್ದು?, ಹೇಗೆ ನನ್ನ ಹಿಡಿದದ್ದು? ' ಅಂತ. ಅದಕ್ಕೆ ಪೋಲೀಸಿನವರು 'ಯಾವ ಡಿಪಾರ್ಟ್ ಮೆಂಟೂ ಅಲ್ಲ. ನೀನು ಪ್ರತಿ ದಿನ ತಿಂಡಿ ತಿನ್ನಲು ಹೋಗುತ್ತಿದ್ದ ಹೋಟೆಲಿನ ಮಾಣಿ ನಿನ್ನನ್ನ್ದು ಹಿಡಿದುಕೊಟ್ಟದ್ದು ಅಂತ!'.

ಅದನ್ನು ಕೇಳಿದ ಕೂಡಲೇ ಅವನಿಗೆ ಪರಮಾಶ್ಚರ್ಯ..!! ಅದಕ್ಕೆ ಆ ಹೋಟೆಲ್ ಮಾಣಿಯನ್ನು ಕುರಿತು 'ನಾನು ನಿಮ್ಮ ರೀತಿಯಲ್ಲೇ ಇಂಗ್ಲಿಷ್ ಮಾತಾಡ್ತಿದ್ದೆ, ನಿಮ್ಮ ರೀತಿಯಲ್ಲೇ ಬಟ್ಟೆಗಳನ್ನ ಹಾಕ್ತಿದ್ದೆ, ನಿಮ್ಮ ರೀತಿಗಳಲ್ಲೇ ನನ್ನ ಆಹಾರವನ್ನ ತೆಗೆದುಕೊಳ್ಳುತ್ತಿದ್ದೆ. ಹಾಗಿದ್ದಾಗ್ಲು ಹೇಗೆ ನನ್ನನ್ನ ಗುರುತು ಹಿಡಿದೆ?' ಅಂತ ಕುತೂಹಲದಿಂದ ಕೇಳ್ತಾನೆ. ಅದಕ್ಕೆ ಮಾಣಿ 'ಆ ದಿನ ನೀವು ಹೊಡೆದ ಸೀಟಿ ನಮ್ಮ ದೇಶದವ ಹೊಡೆಯುವ ಸೀಟಿಗಿಂತ ಭಿನ್ನವಾಗಿತ್ತು. ಆಗಲೇ ನೀವು ನಮ್ಮ ದೇಶದವರಲ್ಲ ಎಂಬ ಖಾತರಿಯೊಂದಿಗೆ ಯುದ್ಧದ ಸಮಯದಲ್ಲಿ ನೀವು ನಮ್ಮ ದೇಶದಲ್ಲಿರುವ ಬಗ್ಗೆ ಅನುಮಾನದಿಂದ ಪೊಲೀಸರಿಗೆ ದೂರು ಕೊಟ್ಟೆ.' ಅಂತ ಉತ್ತರಿಸಿದ.

ಅಂದರೆ ಸರ್ವ ಸಾಮಾನ್ಯ ಮನುಷ್ಯನ ದೇಶಭಕ್ತಿಯ ಮತ್ತ ಆ ದೇಶದಲ್ಲಿ ಜಾಸ್ತಿಯಿರುವುದರಿಂದ ಇದು ಸಾಧ್ಯವಾಯಿತು.

ಒಂದು ಸಂಘಟಿತ ಸ್ವರೂಪ, ಒಂದು ಏಕ ಸೂತ್ರತೆಯನ್ನ ಆ ದೇಶದಲ್ಲಿ ಕಾಣ್ತೇವೆ. ಹಾಗಾಗಿ ಅವರು ನಮ್ಮ ದೇಶವನ್ನು ಆಳಿದರು. ಸಂಖ್ಯೆಯಲ್ಲಿ ನಾವು ಅವರಿಗಿಂತ ಜಾಸ್ತಿ ಆದರೆ ಸರ್ವಸಾಮಾನ್ಯ ಮನುಷ್ಯನ ದೇಶಭಕ್ತಿಯ ಮಟ್ಟ ಯಾವ ಮಟ್ಟದಲ್ಲಿದೆ ಎಂದರೆ ಆ ರೀತಿಯಾಗಿಲ್ಲ. ರಾಬರ್ಟ್ ಕ್ಲೈವ್ ಬಂಗಾಳವನ್ನು ಗೆದ್ದಾಗ ಅವನು 'ನಾನು ಬಂಗಾಳದ ರಾಜ' ಅಂತ ಹೇಳಲಿಲ್ಲ ಅವನು. 'ನಾನು ಬ್ರಿಟಿಷ್ ಸಾಮ್ರಾಜ್ಯದ ಪ್ರತಿನಿಧಿಯಾಗಿ ಇಲ್ಲಿದೀನಿ' ಅಂತ ಹೇಳಿಕೊಂಡ. ಆದರೆ ನಮ್ಮ ದೇಶದ ಜನರಾದ ನಾವು ಇವತ್ತಿಗೂ ಅಷ್ಟೇ, ಅವತ್ತಿಗೂ ಅಷ್ಟೇ. ಒಂದು ಸಣ್ಣ ಜಾಗ ಸಿಕ್ಕಿದರೂ 'ನನ್ನದು' ಎಂಬ ಅಹಂನಿಂದ ಹೇಳ್ಕೊತೀವಿ. ನಾನು ಇಷ್ಟು ದೊಡ್ಡ 'ಹಿಂದೂಸಮಾಜದ ಪ್ರತಿನಿಧಿ' ಅಂತ ಯೋಚನೆ ಮಾಡೋದಿಲ್ಲ, ಈ ದೇಶದ ಒಬ್ಬ ಪ್ರಜೆ ಅಂತ ಯೋಚನೆ ಮಾಡೋದಿಲ್ಲ. ಆ ಕೆಲಸವನ್ನೇ ಡಾಕ್ಟರ್ ಜಿ ಮಾಡಿದ್ದು. ಡಾಕ್ಟರ್ ಜಿ ಸಣ್ಣ ಸಣ್ಣ ಸಂಗತಿಗಳ ಮುಖಾಂತರ ನಮಗೆ ಇದನ್ನ ಕಲಿಸಿದರು.

ಸಾಮಾನ್ಯವಾಗಿ ವ್ಯಕ್ತಿಗು ಹಾಗು ಕುಟುಂಬದ ಸ್ವಾರ್ಥಕ್ಕು ಏನಾದ್ರು ಸಮಸ್ಯೆ ಬಂದ್ರೆ, ಪ್ರತಿಯೊಂದು ಸಂದರ್ಭದಲ್ಲೂ ಸಾಮಾನ್ಯ ವ್ಯಕ್ತಿ ತನ್ನ ಸ್ವಾರ್ಥವನ್ನೇ ಹಿಡಿಯುತ್ತಾನೆ. ಕುಟುಂಬದ ಹಿತಕ್ಕೂ , ಊರಿನ ಹಿತಕ್ಕೂ ಏನಾದರೂ ತಾಕಲಾಟ ಬಂದ್ರೆ, ತನ್ನ ಕುಟುಂಬದ ಹಿತವನ್ನು ಹಿಡಿಯುತ್ತಾನೆ. ಆದರೆ ಸಂಘ ಇದನ್ನ ಉಲ್ಟಾ ಮಾಡುವಂತಹ ಪ್ರಯತ್ನ ಮಾಡುತ್ತೆ. ತನಗಿಂತ ಕುಟುಂಬ ದೊಡ್ಡದು, ತನಗಿಂತ ಸಮಾಜ ದೊಡ್ಡದು, ತನಗಿಂತ ದೇಶ ದೊಡ್ಡದು ಅನ್ನೋದನ್ನ ಕಲಿಸೋ ಪ್ರಯತ್ನ ಸಂಘದ್ದು. ಹಾಗಾಗಿ ನಮ್ಮ ನಿಷ್ಠೆ ವ್ಯಕ್ತಿಗಲ್ಲ, ಸಂಘಟನೆಗೆ. ನಮ್ಮ ನಿಷ್ಠೆ ಸಂಘಟನೆಗಲ್ಲ ದೇಶಕ್ಕೆ, ದೇಶನಿಷ್ಠೆ ಮತ್ತು ಸಂಘನಿಷ್ಠೆ ಗಳ ನಡುವೆ ಪ್ರಶ್ನೆ ಬಂದು ದೇಶದ ನಿಷ್ಠೆಗೆ ತೊಂದರೆ ಆಗೋದಾದ್ರೆ ಆಗ ಸಂಘನಿಷ್ಠೆಯನ್ನು ಬಿಡಬೇಕಾಗುತ್ತೆ. ಹಾಗಾಗಿ ಡಾಕ್ಟರ್ ಜಿ ಸಣ್ಣ ಸಣ್ಣ ಸಂಗತಿಗಳ ಮುಖಾಂತರ ಇದನ್ನ ಕಲಿಸ್ತಿದ್ರು.




(ಸಶೇಷ: ಮುಂದಿನ ಭಾಗದೊಂದಿಗೆ ಮುಕ್ತಾಯ )



ಮತ್ತೂರು ವಿಜಯದಶಮಿ ಬೌದ್ಧಿಕ್ : ಭಾಗ - ೨

Nov 9, 2011

ಮತ್ತೂರು ವಿಜಯದಶಮಿ ಬೌದ್ಧಿಕ್ : ಭಾಗ - ೨

ಸಂಘ ಅನ್ನೋದಕ್ಕಿಂತ ಸಂಘ ಮಾಡುವಂತಹ ಕೆಲಸಕ್ಕೆ ವಿಜಯ ನಿಶ್ಚಿತ. ಸಂಘದ ವಿಚಾರ ಇದ್ದಾಗ ಮಾತ್ರ ಪ್ರಪಂಚ ಉಳಿಯೋದಕ್ಕೆ ಸಾಧ್ಯ, ಎಂಬ ನಂಬಿಕೆ ಯೊಂದಿಗೆ ನಾವು ಸಂಘದ ಕೆಲಸವನ್ನ ಮಾಡ್ಬೇಕು.

ಮಾನನೀಯ ದತ್ತೊಪಂತ್ ತೇಂಗಡಿಜಿಯವರು ಸಂಸತ್ ಸದಸ್ಯರಾಗಿದ್ರು. ಹೀಗೆ ಸದಸ್ಯರ ಜೊತೆ ಮಾತಾಡುತ್ತಿದ್ರು. ಎಲ್ಲ ಪಕ್ಷದವರು ಇದ್ರೂ. ಯಾರೋ ಒಬ್ಬರು 'ಯಾರು ಅದು ಆರ್ಎಸ್ಸೆಸ್ ಶುರು ಮಾಡಿದ್ದು?' ಅಂತ ಹೇಳಿದ್ದಕ್ಕೆ ಇನ್ನೊಬ್ಬರು 'ಆರೆಸ್ಸಸ್ ಶುರು ಮಾಡಿದ್ದು ಯಾರು ಅಂತ ಗೊತ್ತಿಲ್ವಾ?' ಅಂದಾಗ ಮಾನನೀಯ ದತ್ತೊಪಂಥರು 'ಗೊತ್ತಿಲ್ದೆ ಇರೋದು ಸರಿ ಇದೆ ' ಅಂತ ಸಮಾಧಾನ ಮಾಡಿದರು. ಡಾಕ್ಟರ್ ಜಿಯವರ ನೆರಳು ಡಾಕ್ಟರ್ ಜಿಯವರಿಗಿಂತ ದೊಡ್ಡದಿದೆ. ಡಾಕ್ಟರ್ ಜಿ ಯಾವಾಗಲು ತಮ್ಮನ್ನ ಸಂಘಟನೆಗಿಂತ ದೊಡ್ಡವರನ್ನಾಗಿ ಮಾಡಿಕೊಳ್ಳಲೇ ಇಲ್ಲ. ಹಾಗಾಗಿ ಜಗತ್ತಿನಲ್ಲಿ ಡಾಕ್ಟರ್ ಜಿ ಯವರು ಗೊತ್ತಿಲ್ಲದಿರುವವರು ಸಾಕಷ್ಟು ಜನ ಇದ್ದಾರೆ ಆದರೆ ಆರೆಸ್ಸಸ್ ಗೊತ್ತಿಲ್ಲದಿರುವವರು ತುಂಬಾ ಕಡಿಮೆ. ಬರೆ ಡಾಕ್ಟರ್ ಜಿ ಅಂತಲ್ಲ, ಸಂಘದ ಸಾಕಷ್ಟು ಹಿರಿಯರು ಸಹ ಸಂಘದ ಪದ್ದತಿಯ ಕಾರಣಕ್ಕೆ ತಾವು ಸಾಕಷ್ಟು ದೊಡ್ಡ ವ್ಯಕ್ತಿಗಳಾದರೂ ಹೊರಗಡೆ ಪ್ರಪಂಚಕ್ಕೆ ಸಾಧಾರಣ ವ್ಯಕ್ತಿಗಳಾಗಿಯೇ ಇರ್ತಾರೆ.

ಮಾನನೀಯ ದತ್ತೊಪಂತ್ ತೇಂಗಡಿಜಿಯವರು ನಿಧನರಾದಾಗ ಪತ್ರಿಕೆಯ ಮೂಲೆಯಲ್ಲಿ 'ಭಾರತಿಯ ಮಜ್ದೂರ್ ಸಂಘದ ಸಂಸ್ಥಾಪಕ ದತ್ತೊಪಂತ್ ತೇಂಗಡಿಯವರು ನಿಧನರಾದರು' ಅಂತ ಬಂದಿತ್ತು. ವಾಜಪೇಯಿ, ಆಡ್ವಾಣಿ ಅಂಥವರನ್ನು ನಿರ್ಮಾಣ ಮಾಡಿದಂತಹ ತೇಂಗಡಿಜಿಯವರು ಎಷ್ಟು ದೊಡ್ಡ ವ್ಯಕ್ತಿಗಳೆಂದು ಅವರನ್ನು ಹತ್ತಿರದಿಂದ ನೋಡಿದವರಿಗೆ ಮಾತ್ರ ಗೊತ್ತು. ಆದರೆ ಹೊರಗಡೆ ಪ್ರಪಂಚಕ್ಕೆ ಅವರು ಸಾಧಾರಣ ವ್ಯಕ್ತಿಯಾಗಿಯೇ ಉಳಿದರು.

ನಿಧನರಾದ ಹೋ.ವೆ.ಶೇಷಾದ್ರಿಯವರ ಶ್ರದ್ಧಾಂಜಲಿ ಕಾರ್ಯಕ್ರಮ ಬೆಂಗಳೂರಿನಲ್ಲಿ ನಡೆ ಯಿತು. ಕಾರ್ಯಕ್ರಮಕ್ಕೆ ಆಡ್ವಾಣಿ, ವಾಜಪೇಯಿ ಯವರೆಲ್ಲ ಬಂದಿದ್ದರು. ನೆರೆದಿದ್ದ ಪತ್ರಕರ್ತರಿಗೆ ಸಿಕ್ಕಾಪಟ್ಟೆ ಆಶ್ಚರ್ಯ..! ಯಾರೋ ಶೇಷಾದ್ರಿ ಅನ್ನೋವ್ರು ಹೋಗಿದ್ದಕ್ಕೆ ಆಡ್ವಾಣಿ, ವಾಜಪೇಯಿ ಯವರೆಲ್ಲ ಯಾಕೆ ಬಂದಿದ್ದಾರೆ..!? ಅಂತ.

ಹೀಗೆ ಸಂಘದ ವಿಶೇಷ ಅಂದ್ರೆ ತನ್ನನ್ನ ತಾನು ದೊಡ್ಡವನನ್ನಾಗಿ ಮಾಡಿಕೊಳ್ಳದೆ ಇರೋದು.

ಸರ್ವಸಾಮಾನ್ಯ ಮನುಷ್ಯನ ದೇಶಭಕ್ತಿಯ ಮಟ್ಟವನ್ನ ಜಾಸ್ತಿ ಮಾಡಿದಾಗ ಈ ದೇಶ ಉಳಿಯತ್ತೆ ಅನ್ನೋದು ನಮ್ಮ ವಿಚಾರ. ಸಂಘದ ಪ್ರಾರ್ಥನೆಯಲ್ಲೂ ನಾವು ಅದನ್ನೇ ಹೇಳ್ತೇವೆ. ಧರ್ಮದ ಆಧಾರದ ಮೇಲೆ ಈ ದೇಶದ ಸಮಾಜವನ್ನ ಸಂಘಟನೆ ಮಾಡಿ ಧರ್ಮ ರಕ್ಷಣೆ ಮಾಡೋ ಮುಖಾಂತರ ಈ ದೇಶವನ್ನ ಪರಮ ವೈಭವವನ್ನಾಗಿ ಮಾಡ್ತೇವೆ ಅಂತ.ನಾವು ಸಾಮಾನ್ಯವಾಗಿ ಮಾತಾಡ್ತಿರ್ತೇವೆ, 'ಯತೋ ಧರ್ಮಃ ತತೋ ಜಯಃ' ಅಂತ. ಆದರೆ ಅದರ ಪ್ರತ್ಯಕ್ಷ ಅನುಭವ ನಮಗೆ ಕಷ್ಟ.

ಇತ್ತೀಚಿಗೆ ಕೆ.ಎಸ.ಲಾಲ್ ಎಂಬುವರು 'ಇಂಡಿಯನ್ ಮುಸ್ಲಿಂ ಸ್ ಹೂ ಆರ್ ದೆ ?' ಅನ್ನೋ ಪುಸ್ತಕ ಬರೆದಿದ್ದಾರೆ. ಭಾರತದಲ್ಲಿ ಮುಸ್ಲಿಮರ ಸಂಖ್ಯೆ ಹೇಗೆ ಜಾಸ್ತಿಯಾಯ್ತು ಅನ್ನೋದನ್ನ ಅದರಲ್ಲಿ ಅವರು ಹೇಳಿದಾರೆ. ಮತಾಂತರ, ಹಿಂದೂ ಹೆಣ್ಣುಮಕ್ಕಳನ್ನು ಮ ದುವೆಯಾಗುವುದು, ಹೆಚ್ಚಿಗೆ ಹೆಣ್ಣುಮಕ್ಕಳನ್ನು ಮದುವೆ ಯಾಗುವುದು, ಯುದ್ಧಗಳಲ್ಲಿ ಹಿಂದೂ ಸೈನಿಕರನ್ನೇ ಮುಂದೆ ನಿಲ್ಲಿಸಿ ಯುದ್ಧ ಮಾಡುವುದು ಈ ಎಲ್ಲ ರೀತಿಗಳಿಂದ ಮುಸ್ಲಿಮರು ತಮ್ಮ ಸಂಖ್ಯೆಯನ್ನ ಹೆಚ್ಚಿಸಿಕೊಂಡರು ಅನ್ನೋದನ್ನ ಅವರು ಉಲ್ಲೇಖ ಮಾಡಿದಾರೆ.

ಅವತ್ತಿನ ಕಾಲದಲ್ಲಿ ಸಾಕಷ್ಟು ದೇವಸ್ಥಾನಗಳು ಇದ್ದವು, ಧರ್ಮದ ಬಗ್ಗೆ ಪ್ರವಚನ ಮಾಡುವವರಿದ್ದರು. ಹೀಗಿದ್ದೂ ಎಲ್ಲ ಕಡೆ ಹೊಡೆತ ಬಿತ್ತು. ಆಶ್ಚರ್ಯದ ವಿಷಯ ಅಂದರೆ, ಸಿಂಧ್ ಪ್ರಾಂತ್ಯ ದಿಂದ ಮುಸಲ್ಮಾನರ ಆಕ್ರಮಣ ಆಯ್ತು. ಬಂಗಾಳ, ಅಂದರೆ ಈಗಿನ ಬಾಂಗ್ಲಾದೇಶ, ಇರೋದು ಸಿಂಧ್ ಪ್ರಾಂತ್ಯದಿಂದ ಸಾವಿರಾರು ಮೈಲುಗಳ ದೂರ. ಆದರೂ ಅಲ್ಲಿ ಮತಾಂತರ ಮಾಡಿದ್ರು. ಅದರ ಪ್ರಮಾಣ ಎಷ್ಟು ಅಂದ್ರೆ ನಿಶ್ಚಿತ ಸಮಯದಲ್ಲಿ ಕಪ್ಪ ಕೊಡದಿದ್ದಾಗ ತನ್ನ ಕುಟುಂಬ ಸಮೇತ ಅವನು ಇಸ್ಲಾಂಗೆ ಮತಾಂತರವಾಗಬೇಕಾಗಿತ್ತು. ಒಬ್ಬ ರಾಜ ಕಪ್ಪ ಕೊಡಕ್ಕೆ ಹೋಗ್ತಾನೆ. ಅವನ ಪಕ್ಕದ ರಾಜ್ಯದ ಒಬ್ಬ ರಾಜ ಬಂದಿರೋದಿಲ್ಲ. ಅವನು ಸ್ವಲ್ಪ ದೊಡ್ಡ ರಾಜ. ಅವನು ಮತಾಂತರನಾದರೆ ಕಷ್ಟ ಅಂತ ಅವನ ಕಪ್ಪವನ್ನು ಇವನೇ ಕೊಟ್ಟು ಇಸ್ಲಾಂಗೆ ಮತಾಂತರವಾಗುತ್ತಿದ್ದ.

ಮೊಹಮ್ಮದ್ ಕುಲಿಖಾನ್ ಒಬ್ಬ ಬ್ರಾಹ್ಮಣನಾಗಿದ್ದವ, ಜಲಾಲುದ್ದೀನ್ , ಅವರು ಇವತ್ತಿನ ಬಾಂಗ್ಲಾದೇಶವನ್ನ ನಿರ್ಮಾಣ ಮಾಡಕ್ಕೆ ಕಾರಣರಾದರು. ಅಂದರೆ ಅಂದಿಗೂ, ಇಂದಿಗೂ ನಾವು ಏನನ್ನ ಅಂದುಕೊತೀವಿ ಎಲ್ಲಿ ಧರ್ಮವಿರುತ್ತೋ ಅಲ್ಲಿ ವಿಜಯ ಅಂತ ಅದರ ಪ್ರತ್ಯಕ್ಷ ಅನುಭವ ನಮಗಿಲ್ಲ. ಅಂದರೆ ನಮ್ಮ ಕಲ್ಪನೆಯಲ್ಲಿ ನಾವು ಯಾವುದನ್ನ ಧರ್ಮ ಅಂತ ನಂಬಿದ್ದೇವೋ ಆ ಧರ್ಮ ಇದ್ದಾಗಲೂ ನಾವು ಸೋತಿದೇವೆ. ಹಾಗಾದರೆ ನಿಜವಾದ ಧರ್ಮ ಅಂದರೆ ಯಾವುದು ಅಂತಲಾದರೂ ಗೊತ್ತಾಗಬೇಕು ಅಥವಾ ಯತೋ ಧರ್ಮಃ ತತೋ ಜಯಃ ಅನ್ನೋದು ಗೆಲುವಲ್ಲ ಅನ್ನೋದಾದ್ರೂ ಗೊತ್ತಾಗಬೇಕು.

ಹೀಗಾಗಿ ಸಂಘಧರ್ಮ ಉಳಿದಾಗ ವ್ಯಕ್ತಿಗತವಾದಂತಹ ನಮ್ಮ ಎಲ್ಲ ಸಂಗತಿಗಳೂ ಉಳಿಯೋದಕ್ಕೆ ಸಾಧ್ಯ. ಆ ಸಂಘಧರ್ಮವನ್ನ ಪಾಲನೆ ಮಾಡುವಂತಹ ವ್ಯವಸ್ಥೆಯನ್ನ ಡಾಕ್ಟರ ಜಿ ನಿರ್ಮಾಣ ಮಾಡಿದ್ರು. ಅಂದರೆ ಸರ್ವಸಾಮಾನ್ಯ ಮನುಷ್ಯನ ದೇಶಭಕ್ತಿಯ ಮಟ್ಟವನ್ನ ಜಾಸ್ತಿ ಮಾಡಿದ್ರು.


(ಸಶೇಷ)

Nov 4, 2011

ಮತ್ತೂರು ವಿಜಯದಶಮಿ ಬೌದ್ಧಿಕ್ : ಭಾಗ - ೧

ಮತ್ತೂರು ವಿಜಯದಶಮಿ ಉತ್ಸವ
ತಾರೀಖು: ಅಕ್ಟೋಬರ್ ೬, ೨೦೧೧, ಗುರುವಾರ
ಬೌದ್ಧಿಕ್: ಶ್ರೀಯುತ ರಾಜಾರಾಮ್, ಮತ್ತೂರು

ವಿಜಯದಶಮಿ ಹಿಂದೂ ಸಮಾಜದ ಒಂದು ಉತ್ಸವ. ಸಂಘ ಯಾವುದೇ ಉತ್ಸವಗಳನ್ನ ಅಷ್ಟೇ ಅಲ್ಲ ಯಾವುದನ್ನು ಹೊಸದಾಗಿ ಪ್ರಾರಂಭ ಮಾಡಿಲ್ಲ. ಸಂಘದ ವಿಶೇಷವೇ ಸಂಘ ಪ್ರಾರಂಭ ಆದಂತಹ ದಿನ.

ಸಂಘದ ಕೆಲಸವನ್ನ ಎಷ್ಟೋ ಉತ್ಸಾಹದಿಂದ ಮಾಡಿದ ಎಷ್ಟೋ ದಿನಗಳ ನಂತರ ನಮಗೆ ಸಹಜವಾಗಿ ಅನ್ಸುತ್ತೆ, ಎಷ್ಟು ದಿನದವರೆಗೆ ಸಂಘದ ಕೆಲಸವನ್ನ ಮಾಡೋದು, ಯಾವುದು ಇದಕ್ಕೆ ಗುರಿ, ಯಾವುದು ಕೊನೆ ಅಂತ ಅನ್ನಿಸೋದಕ್ಕೆ ಶುರು ಆಗುತ್ತೆ. ಯಾಕೆ ಅಂದರೆ ಸಾಮಾನ್ಯವಾಗಿ ಮನುಷ್ಯನಿಗೆ ಇಷ್ಟು ದಿನದ ಕೆಲಸ ಅಂತ ನಿಗದಿಯಾಗಿರೋ ಕೆಲಸವನ್ನ ಮಾಡೋದು ಸುಲಭ. ಆದರೆ ನಿರಂತರವಾಗಿ ಮಾಡುವ ಕೆಲಸ ಕಷ್ಟ. ವರ್ಷದ ಅಷ್ಟು ದಿನವೂ ನಿತ್ಯ ಒಂದರಂತೆ ಸೂರ್ಯನಮಸ್ಕಾರ ಮಾಡೋದು ಕಷ್ಟ. ಆದರೆ ೧ ತಿಂಗಳ ಅವಧಿಯಲ್ಲಿ ೫೦೦ ಸೂರ್ಯನಮಸ್ಕಾರ ಮಾಡೋದು ಸುಲಭ.

ಸಂಘದ ಕೆಲಸವೂ ನಿರಂತರವಾಗಿ ಮಾಡ್ತಕ್ಕಂತಹ ಕೆಲಸ. ಇದಕ್ಕೆ ಗೆಲುವು ಸಿಗುತ್ತಾ? ಅಂತ ಮನುಷ್ಯ ಸಹಜವಾಗಿ ಯೋಚಿಸ್ತಾನೆ. ಯಾಕೆಂದ್ರೆ ಮನುಷ್ಯನಿಗೆ ತಕ್ಷಣ ಫಲ ಸಿಗಬೇಕು ಅಂತ ಯೋಚಿಸ್ತಾನೆ. ಇತ್ತೀಚಿಗೆ ಬೆಂಗಳೂರಿನಲ್ಲಿ ಸಂಘಚಾಲಕರ ವರ್ಗ ನಡೆಯಿತು. ವರ್ಗದಲ್ಲಿ ಪರಮ ಪೂಜನೀಯ ಸರಸಂಘಚಾಲಕರ ಅವಧಿಯಲ್ಲಿ ಅವರೊಂದು ಕಥೆ ಹೇಳಿದರು.

ಮುಸಲ್ಮಾನರ ಆಡಳಿತ ಕಾಲದಲ್ಲಿ ಇಬ್ಬರು ಸ್ನೇಹಿತರಿದ್ದರು. ಒಬ್ಬ ಮುಸ್ಲಿಂ ಇನ್ನೊಬ್ಬ ಹಿಂದೂ. ಒಮ್ಮೆ ಆ ಮುಸಲ್ಮಾನನಿಗೆ ೧೦೦ ರುಪಾಯಿ ಬೇಕಾಗುತ್ತೆ. ಸ್ನೇಹಿತನ ಮನೆಗೆ ಕೇಳಕ್ಕೆ ಬರ್ತಾನೆ, ಆದರೆ ಅವನು ಕೃಷಿಕ, ಗದ್ದೆಗೆ ಹೋಗಿರ್ತಾನೆ. ಅವನ ಮಡದಿಗೆ 'ನಾನಿಲ್ಲೇ ಮಸೀದಿಯಲ್ಲಿ ಇರ್ತೇನೆ, ಬಂದ ಕೂಡಲೇ ಹೇಳಿ ಕಳಿಸಿ' ಅಂತ ಹೇಳಿ ಮಸೀದಿಗೆ ಹೋಗ್ತಾನೆ. ಸ್ನೇಹಿತ ಬಂದೊಡನೆಯೇ ಮಸೀದಿಗೆ ಹೋಗ್ತಾನೆ ಅಲ್ಲಿ ಒಬ್ಬ ಮೌಲ್ವಿಯ ಪ್ರವಚನ ಆಗ್ತಿರುತ್ತೆ. ಇವನು ಪ್ರವಚನವನ್ನ ಪೂರ್ಣ ಕೇಳಿ ನಂತರ ಸ್ನೇಹಿತನಿಗೆ 'ಪ್ರವಚನ ತುಂಬಾ ಚೆನ್ನಾಗಿತ್ತು, ಅವರನ್ನು ಪರಿಚಯ ಮಾಡಿಸು' ಅಂತ ಕೇಳ್ತಾನೆ.

ಪರಿಚಯ ಮಾಡಿಸಿದ ನಂತರ, ಮೌಲ್ವಿಯನ್ನ ಕುರಿತು ಹಿಂದೂ ಸ್ನೇಹಿತ 'ನಿಮ್ಮ ಪ್ರವಚನ ತುಂಬಾ ಚೆನ್ನಾಗಿತ್ತು, ಆದರೆ ಒಂದು ವಿಷಯ ನನಗೆ ಹಿಡಿಸಲಿಲ್ಲ' ಹೇಳಿದಾಗ ಅದಕ್ಕೆ ಮೌಲ್ವಿ ಆಶ್ಚರ್ಯದಿಂದ 'ಯಾವ ವಿಷಯ?' ಅಂತ ಕೇಳ್ತಾರೆ. ಅದಕ್ಕೆ ಹಿಂದೂ ಸ್ನೇಹಿತ 'ದೇವರ ದೇವತ್ವ ಅನ್ನೋದು ಯಾರಿಗೂ ಅರ್ಥ ವಾಗದ ವಿಷಯ ಅಂತ ಹೇಳಿದ್ರಲ್ಲ ಆದರೆ ನನಗೆ ಗೊತ್ತಾಗುತ್ತೆ, ಬೇಕಾದ್ರೆ ತೋರಿಸ್ತೀನಿ, ಆದರೆ ಒಂದು ಷರತ್ತು' ಅಂತ ಹೇಳಿದಾಗ ಅಲ್ಲಿದ್ದವರಿಗೆಲ್ಲ ಆಶ್ಚರ್ಯ..! ಮೌಲ್ವಿಗೆ ಗೊತ್ತಾಗದೆ ಇರೋ ವಿಷಯ ಅವನಿಗೆ ಹೇಗೆ ಗೊತ್ತಾಗುತ್ತೆ ಅಂತ ! 'ವಿಷಯ ಸಮರ್ಥನೆಯ ನಂತರ ನಂಗೆ ೨೦೦ ರುಪಾಯಿಯನ್ನು ಕೊಡಬೇಕು' ಎಂಬ ಶರತ್ತನ್ನು ಮುಂದಿಟ್ಟು ಎಲ್ಲರನ್ನು ನದಿಯ ದಂಡೆಯ ಬಳಿಗೆ ಕರೆದುಕೊಂಡು ಹೋಗ್ತಾನೆ.

ನದಿಯ ನೀರನ್ನು ತೋರಿಸುತ್ತ 'ಇದೇ ದೇವರ ದೇವತ್ವ' ಅಂತ ತೋರಿಸುತ್ತ 'ಈ ನೀರು ಎಲ್ಲಿಂದ ಬಂತು, ಹೇಗೆ ಬಂತು' ಅಂತ ಹೇಳಿದಾಗ ಎಲ್ಲ ಒಪ್ಪಿಕೊಂಡರು, ೨೦೦ ರುಪಾಯಿಯನ್ನು ಕೊಟ್ರು. ೧೦೦ ರುಪಾಯನ್ನು ಮುಸ್ಲಿಂ ಸ್ನೇಹಿತನಿಗೆ ಕೊಟ್ಟು, ತಾನು ೧೦೦ ರುಪಾಯನ್ನು ಇಟ್ಕೊಂಡ.

ಇದೇ ರೀತಿ ಇನ್ನೊಮ್ಮೆ ಮುಸ್ಲಿಮ ಸ್ನೇಹಿತನಿಗೆ ೨೦೦ ರುಪಾಯಿ ಬೇಕಾಗುತ್ತೆ, ಹಿಂದೂ ಸ್ನೇಹಿತ ಮಸೀದಿಗೆ ಹೋಗ್ತಾನೆ, ಪ್ರವಚನ ಆಗುತ್ತೆ, ಯಥಾ ಪ್ರಕಾರ ಪ್ರವಚನ ಮಾಡಿದ ಮೌಲ್ವಿಯನ್ನ ಕುರಿತು 'ಪ್ರವಚನ ತುಂಬಾ ಚೆನ್ನಾಗಿತ್ತು, ಆದರೆ ಇನ್ನೊಬ್ಬರ ಮನಸ್ಸಿನಲ್ಲಿ ಇರೋ ವಿಷಯ ವನ್ನ ಹೇಳೋದಿಕ್ಕಾಗಲ್ಲ ಅನ್ನೋದು ವಿಷಯ ಹಿಡಿಸಲಿಲ್ಲ. ಯಾಕೆಂದ್ರ ನಾನ್ ಹೇಳ್ತೀನಿ ಅಂದ, ಆದ್ರೆ ೪೦೦ ರುಪಾಯಿ ಷರತ್ತು ' ಅಂದ, ಎಲ್ಲ ಒಪ್ಕೊಂದ್ರು. ಹೇಗೆ ಅಂತ ಕೇಳಿದಾಗ 'ಈಗ ನಾನು ನಿಮ್ಮ ಮನಸ್ಸಿನಲ್ಲಿ ಇರೋ ವಿಷಯ ಹೇಳ್ತೀನಿ.' ಎಲ್ಲ ಆಯ್ತು ಅಂದ್ರು. 'ಇಡೀ ಪ್ರಪಂಚದಲ್ಲಿ ಇಸ್ಲಾಂ ಧರ್ಮ ಒಂದೇ ಶ್ರೇಷ್ಠ . ಜಗತ್ತಿನ ಎಲ್ಲರನ್ನು ಇಸ್ಲಾಂನ ಅನುಯಾಯಿಗಳಾಗಿ ಮಾಡ್ಬೇಕು' ಎಂದು ಯಾವುದೇ ಕಾರಣಕ್ಕೂ ಅವನು ತಿರಸ್ಕಾರ ಮಾಡಬಾರದು ಅನ್ನೋ ರೀತಿಯಲ್ಲಿ ಹೇಳಿದ. ಮೌಲ್ವಿ ಸರಿ ಅಂತ ಒಪ್ಕೊಂಡು ೪೦೦ ರುಪಾಯಿಯನ್ನು ಕೊಟ್ಟ, ಯಥಾ ಪ್ರಕಾರ ೨೦೦ ರುಪಾಯಿ ಸ್ನೇಹಿತನಿಗೆ, ೨೦೦ ತನಗೆ.

ಮತ್ತೊಮ್ಮೆ ಮುಸ್ಲಿಮ ಸ್ನೇಹಿತನಿಗೆ ೧೦೦೦ ರುಪಾಯಿ ಬೇಕಾಗುತ್ತೆ, ಕೊಡಲು ಮಸೀದಿಗೆ ಹೋಗ್ತಾನೆ, ಯಥಾ ಪ್ರಕಾರ ಪ್ರವಚನ ಮಾಡಿದ ಮೌಲ್ವಿಯನ್ನ ಕುರಿತು 'ಪ್ರವಚನ ತುಂಬಾ ಚೆನ್ನಾಗಿತ್ತು, ಆದರೆ ಪ್ರಳಯ ಆಗುತ್ತೆ ಅನ್ನೋದು ಸುಳ್ಳು. ಪ್ರಳಯ ಖಂಡಿತ ಆಗಲ್ಲ. ಈ ಸಲ ೨೦೦೦ ರುಪಾಯಿ ಷರತ್ತು ' ಅಂದ, ಎಲ್ಲ ಒಪ್ಪಿಕೊಂಡರು. ೨೦೦೦ ರುಪಾಯಿ ಕೊಟ್ರು. ಆದರೆ ಅವನ ಮುಸ್ಲಿಂ ಸ್ನೇಹಿತ ಹೇಗೆ ನಿರೂಪಿಸ್ತೀಯ ಅಂತ ಕೇಳಿದಾಗ 'ಅಲ್ಲ ಕಣಯ್ಯಾ, ಪ್ರಳಯ ಆಗದೆ ಇದ್ರೆ ಏನು ತೊಂದ್ರೆ ಇಲ್ಲ. ಅಕಸ್ಮಾತ್ ಪ್ರಳಯ ಆದ್ರೆ ಕೊಡೋಕ್ಕೆ ನಾನೂ ಇರೋಲ್ಲ, ತೊಗೊಳಕ್ಕೆ ಅವರು ಇರೋಲ್ಲ ಅಂದ'.

ಸಂಘದ ಕೆಲಸಕ್ಕೆ ವಿಜಯ ಅನ್ನೋದು ಶತಃಸಿದ್ದ. ಅಕಸ್ಮಾತ್ ವಿಜಯ ಸಿಗದೇ ಇದ್ದಲ್ಲಿ ಜಗತ್ತೇ ಇರೋಲ್ಲ ಎನ್ನುವ ನಂಬಿಕೆ ಸ್ವಯಂಸೇವಕರದ್ದಾಗಿರಬೇಕು ಅನ್ನೋ ವಿಷಯವನ್ನ ಸರಸಂಘಚಾಲಕರು ಹೇಳಿದ್ರು.

(ಸಶೇಷ)

Oct 21, 2011

'ಶರಿಯಾ' ಇದು ಸರಿಯಾ?

ಮೊನ್ನೆ ರಾತ್ರಿ ಕಚೇರಿಯಿಂದ ಮನೆಗೆ ಹೊರಡುವಾಗ ಆತ್ಮೀಯರೊಬ್ಬರು ರಾಜ್ಯದ ಕಿರಿಯ ರಾಜಕಾರಣಿಯೊಬ್ಬರ 'ಹೆಂಡತಿಯರನ್ನು ಎಣಿಸಿದವ'ರೊಬ್ಬರು ಪೋಲಿಸ್ ಗೆ ದೂರು ಕೊಟ್ಟಿರುವ ವಿಚಾರ ತಿಳಿಯಿತು. ಮಾರನೆ ದಿನ ದಿನಪತ್ರಿಕೆಯಲ್ಲೂ ಅದೇ ಬಿಸಿ ಬಿಸಿ ಸುದ್ದಿ. ವಿಚಾರ ಸರಿಯಿರಬಹುದು. ಏಕೆಂದರೆ ರಾಜಕಾರಣಿಯೊಬ್ಬರ ವೈಯಕ್ತಿಕ ಜೀವನ ಸಾಮಾಜಿಕ ಜವಾಬ್ದಾರಿ ಹೊಂದಿರುತ್ತದೆ ಎಂದು ಕೇಳಿದ್ದೆ.



ಅವರು ಹಿಂದೂ ಎಂಬ ಕಾರಣಕ್ಕೆ ಮೊದಲ ಹೆಂಡತಿ ಬದುಕಿರುವಾಗಲೇ ಇನ್ನೊಬ್ಬ ಹೆಂಡತಿಯನ್ನು ಹೊಂದುವುದು ಕಾನೂನಿನ ಪ್ರಕಾರ ತಪ್ಪಾಗಿರಬಹುದು. ಆದರೆ 'ಎಲ್ಲೆಡೆಯಲ್ಲೂ ಮೀಸಲಾತಿ', ಹಣ ಸಹಾಯ, ವಿಶೇಷ ಸ್ಥಾನಮಾನ ಮುಂತಾದ ಎಲ್ಲ ವಿಷಯಗಳಲ್ಲೂ ಎಷ್ಟು ಸಾಧ್ಯವೂ ಅದಕ್ಕಿಂತ ಹೆಚ್ಚಾಗಿಯೇ ಸಕಲ ಸವಲತ್ತುಗಳನ್ನು ಅನುಭವಿಸಲು ಈ ದೇಶದ ಕಾನೂನಿನ ಸಹಾಯವನ್ನು ಪಡೆಯುವವರು, ಈ ದೇಶದ ಕಾನೂನನ್ನು ಮಾತ್ರ ಒಪ್ಪದೇ ತಮಗೆ ಬೇಕಾದ ವಿಶೇಷ ಕಾನೂನನ್ನು ರಚಿಸಿಕೊಂಡು ಆ ಮೂಲಕ ಅಧಿಕ ಹೆಂಡತಿಯರು, ಅಧಿಕ ಮಕ್ಕಳನ್ನು ಹೊಂದಿ ತಮ್ಮ 'ವ್ಯಾಪಕ'ತೆಯನ್ನು ಹೆಚ್ಚಿಸಿಕೊಳ್ಳುವ ವ್ಯವಸ್ಥೆ ಈ ದೇಶದಲ್ಲಿ ಮಾತ್ರ ನೋಡುವಂಥದನ್ನು ನೆನೆದು ಖೇದವುಂಟಾಯಿತು.

ಇತ್ತೀಚಿಗೆ ಜಪಾನಿಗೆ ಹೋದಾಗ ಸಹೋದ್ಯೋಗಿಯೊಬ್ಬರ ಜತೆ ಮಾತಾಡುವಾಗ ನಮ್ಮ ದೇಶ ಈ 'ಎರಡು ಕಾನೂನಿನ' ಬಗ್ಗೆ ಉಲ್ಲೇಖಿಸಿದಾಗ ಅವರಿಗೂ ಅದೇ ಆಶ್ಚರ್ಯ..! ಆದರೆ ತಕ್ಷಣವೇ ಅವರಿಗೆ ನಮ್ಮ ದೇಶ ದ ಎಲ್ಲ ಆಂತರಿಕ ಸಮಸ್ಯೆಗಳಿಗೆ ಕಾರಣ ಅರ್ಥವಾಗಿ ಹೋಯಿತು.

ಈ ದೇಶದ ಅಭ್ಯುದಯವನ್ನು ಅಪೇಕ್ಷಿಸುವ ಹಾಗು ದೇಶದ ಸಮಗ್ರತೆಯನ್ನು ಎತ್ತಿಹಿಡಿಯುವ ಪ್ರತಿಯೊಬ್ಬರೂ ಸ್ವಯಿಚ್ಚೆಯಿಂದ ಈ ದೇಶದ ಕಾನೂನನ್ನು 'ಮಾತ್ರ' ಗೌರವಿಸಿ ಅನುಸರಿಸುವ ಪರಿಸ್ಥಿತಿ ಎಂದಿಗೆ ನಿರ್ಮಾಣವಾಗುದೋ, ನಮ್ಮ ದೇಶದ ಎಲ್ಲ ಆಂತರಿಕ ಸಮಸ್ಯೆಗಳು ಎಂದಿಗೆ ಬಗೆಹರಿಯುವುದೋ ಎಂಬ ಹಗಲುಗನಸು ನನಸಾಗುವುದು ಆವಾಗ?

Sep 22, 2011

ಜಪಾನಿನಾನುಭವ - ೧ : ಶಿನ್ ಕಾನ್ ಸೆನ್ ಬುಲೆಟ್ ಟ್ರೈನಿನಲ್ಲಿ ಪ್ರಯಾಣ

ಕಳೆದ ಏಪ್ರಿಲ್ 23 ರಿಂದ ಜೂನ್ 6 ರ ವರೆಗೆ ನಾನು ಜಪಾನ್ ಪ್ರವಾಸದಲ್ಲಿದ್ದೆ. ಅಲ್ಲಿನ ಕೆಲ ಅನುಭವಗಗಳಿಗೆ ಅಕ್ಷರ ರೂಪ ಕೊಟ್ಟು ಇಲ್ಲಿಡುವ ಪ್ರಯತ್ನ.

ಜಪಾನಿನಲ್ಲಿ ಬುಲೆಟ್ ರೈಲು ಬಹಳ ಪ್ರಸಿದ್ದಿ. ಅವನ್ನು ಶಿನ್ ಕಾನ್ ಸೆನ್ ಎಂದು ಕರೆಯುತ್ತಾರೆ. ಅದರಲ್ಲಿ ಪ್ರಯಾಣ ಮಾಡಲು ಮನಸ್ಸು ತವಕಿಸುತ್ತಿತ್ತು. ಆದರೆ ಪ್ರಯಾಣ ದುಬಾರಿಯೂ ಹೌದು ಹಾಗು ತೀರ ಹತ್ತಿರದ ಸ್ಥಳಗಳಿಗೆ ಬುಲೆಟ್ ಟ್ರೈನುಗಳ ಸಂಪರ್ಕವಿರುದಿಲ್ಲ. ಈ ಕಾರಣಕ್ಕಾಗಿ ಬುಲೆಟ್ ರೈಲಿನಲ್ಲಿ ಪ್ರಯಾಣಿಸಿದಂತಾಗಬೇಕು, ಹತ್ತಿರದ ಪ್ರಯಾಣವೂ ಆಗಬೇಕು(ವೆಚ್ಚ ಕಡಿಮೆ ಮಾಡಲು) ಹಾಗು ಹೋದ ಸ್ಥಳದಲ್ಲಿ ಏನಾದರೂ ನೋಡುವಂತಿರಬೇಕು ಎಂಬ ಉದ್ದೇಶವನ್ನಿಟ್ಟುಕೊಂಡು ಹುಡುಕಿದಾಗ ತೋಚಿದ್ದೇ ಓಡಾವರದ ಕೋಟೆ (Odawara Castle). ನನ್ನ ಆತ್ಮೀಯ ಸಹೋದ್ಯೋಗಿಯ ಸಹಾಯದಿಂದ ಟ್ರೈನುಗಳ ವಿವರ, ಮಾರ್ಗಗಳು ಮುಂತಾದ ಟಿಪ್ಪಣಿಗಳನ್ನು ಬರೆದುಕೊಂಡು ಹೊರಟುನಿಂತೆ.

ನಾನಿದ್ದ ಇಸೋಗೋಯಿಂದ ಹಿಗಾಶಿ-ಕನಗವ, ಅಲ್ಲಿಂದ ಶಿನ್-ಯೋಕೋಹಾಮ ತನಕ ಎಲೆಕ್ಟ್ರಿಕ್ ಟ್ರೈನ್ (ಕೆಯಿನ್-ತೊಹೊಕು ನೆಗಿಷಿ ಲೈನ್ ಮತ್ತು ಜೆಆರ್ ಯೋಕೋಹಾಮ ಲೈನ್ )ನಲ್ಲಿ ಹೋಗಿ ಅಲ್ಲಿಂದ ಶಿನ್ ಕಾನ್ ಸೆನ್ ಕೊಡಾಮ 807 ಎಂಬ ಬುಲೆಟ್ ಟ್ರೈನ್ ನಲ್ಲಿ ಓಡಾವರ ತಲುಪಿದೆ.

ಬುಲೆಟ್ ರೈಲಿಗೆ ಇದು ಕಡಿಮೆ ಅಂತರವಾದ್ದರಿಂದ ಸಾಧಾರಣ ವೇಗದಲ್ಲಿ ಚಲಿಸುತ್ತದೆ. ಸರಿಸುಮಾರು ೬೦ ಕಿಲೋಮೀಟರು ಗಳಿರುವ ಶಿನ್-ಯೋಕೋಹಾಮದಿಂದ ಓಡಾವರಕ್ಕೆ ೧೪ ನಿಮಿಷಗಳಲ್ಲಿ ತಲುಪಿದೆ! ಪ್ರಯಾಣ ಮಾಡಿದ್ದೆ ಗೊತ್ತಾಗಲಿಲ್ಲ. ಬೇರೆ ರೈಲುಗಳಲ್ಲಿ ಆಗುವ ವೈಬ್ರೆಶನ್ ಬುಲೆಟ್ ಟ್ರೈನಿನಲ್ಲಿ ಇರದ ಕಾರಣ ರೈಲು ಚಲಿಸುತ್ತಿರುವುದೇ ಅನುಭವಕ್ಕೆ ಬಾರದು. ಕಿಟಕಿಯಿಂದ ಹೊರಗೆ ನೋಡಿದಾಗ ಮಾತ್ರ ರೈಲಿನ ವೇಗ ತಿಳಿಯುತ್ತದೆ.


ನಾನು ಓಡಾವರದಲ್ಲಿ ಇಳಿದು ಓಡಾಡುವ ಶಿನ್ ಕಾನ್ ಸೆನ್ ಬುಲೆಟ್ ಟ್ರೈನುಗಳನ್ನು ಕೆಲಕಾಲ ನೋಡಿ ಹೋಗುವ ಎಂದು ಕೂತ ಮರುಕ್ಷಣವೇ ಒಂದು ಟ್ರೇನು ಓಡಾವರದಲ್ಲಿ ನಿಲ್ಲಿಸದೆ ಹೋಯಿತು. ಕೇವಲ ೧ ಸೆಕೆಂಡುಗಳಲ್ಲಿ ಟ್ರೇನು ಮಾಯ..! ನಾನು ಟ್ರೈನನ್ನು ನೋಡಿದ್ದು ಕನಸಾ ಎಂಬ ಮಟ್ಟಿಗೆ ವೇಗದಲ್ಲಿ ಚಲಿಸಿ ಕಣ್ಮರೆಯಾಯಿತು.!

ಓಡಾವರದಲ್ಲಿ ಕೆಲ ಹೊತ್ತು ಹೋಗುವ-ಬರುವ ಬುಲೆಟ್ ಟ್ರೈನುಗಳ ಫೋಟೋಗಳು ಹಾಗು ವೀಡಿಯೊಗಳನ್ನ ಫೇಸ್ ಬುಕ್ಕಿಗಾಗಿ ತೆಗೆದುಕೊಂಡು ಅಲ್ಲಿಂದ ಓಡಾವರದಕೋಟೆಯನ್ನ (Odawara Castle) ಹುಡುಕಿಕೊಂಡು ಹೊರಟೆ.


ಒಟ್ಟಿನಲ್ಲಿ ಶಿನ್ ಕಾನ್ ಸೆನ್ ಟ್ರೈನಿನಲ್ಲಿ ಪ್ರಯಾಣ ಮಾಡಬೇಕೆಂಬ ಆಸೆ ಈಡೇರಿತ್ತು. ಆದರೆ ಇನ್ನು ಹೆಚ್ಚಿನ ವೇಗದ ಬುಲೆಟ್ ಟ್ರೈನಾದ 'ಹಯಬುಸ' ದಲ್ಲಿ ಯಾವಾಗ ಪ್ರಯಾಣ ಮಾಡುವೆನೋ... ಎಂಬ ಆಸೆ ಹುಟ್ಟಿತ್ತು.

ಜಪಾನಿನ ರೈಲುಗಳಲ್ಲಿ ಯಾರು ಜೋರಾಗಿ ಮಾತಾಡುವುದಿಲ್ಲ. ನಾವು ಮಾತಾಡಿದರೆ ನಮ್ಮ ಮಾತು ಮಾತ್ರ ಕೇಳುತ್ತದೆ ಇಡೀ ನಮ್ಮ ಭೋಗಿಗೆ. ಇದೆಲ್ಲ ನೋಡಿ, ಜಪಾನಿನ ಟ್ರೈನುಗಳು ನೋಡಲು ಅಥವಾ ಒಮ್ಮೆ ಪ್ರಯಾಣಿಸಲು ಚೆಂದ. ಆದರೆ ನಮ್ಮ ದೇಶದ ರೈಲುಗಳಲ್ಲಿ ಸಿಗುವಷ್ಟು ಆನಂದ ಅಲ್ಲಿ ಸಿಗುವುದಿಲ್ಲ ಎಂಬುದು ಮಾತ್ರ ಖಾತರಿಯಾಯಿತು.

Sep 12, 2011

ಶಿವಮೊಗ್ಗ : ಪ್ರತಿಷ್ಟಿತ ಹಿಂದೂಮಹಾಸಭಾ ಗಣಪತಿ ವಿಸರ್ಜನೆ

ಮೊನ್ನೆ ಭಾನುವಾರ ದಿನಾಂಕ ೧೧-೦೯-೨೦೧೧ ರಂದು ಶಿವಮೊಗ್ಗದ ಪ್ರತಿಷ್ಟಿತ ಹಿಂದೂ ಮಹಾಸಭಾದವತಿಯಿಂದ ಪ್ರತಿಷ್ಟಾಪಿಸಿದ ಗಣಪತಿಯ ವಿಸರ್ಜನಾ ಮಹೋತ್ಸವ ಸುಮಾರು ೧೦, ೦೦೦ ಜನರ ಸಮ್ಮುಖದಲ್ಲಿ , ಸುಮಾರು ೨೦೦೦ ಕ್ಕೂ ಹೆಚ್ಚು ಪೋಲೀಸರ ಬಿಗಿ ಬಂದೋಬಸ್ತ್ ನಲ್ಲಿ, ಅತ್ಯಂತ ವೈಭವೋಪೇತವಾಗಿ ಹಾಗು ಅತ್ಯಂತ ಶಾತಿಯುತವಾಗಿ ನೆರವೇರಿತು. ಭಾನುವಾರ ಬೆಳಿಗ್ಗೆ ಸುಮಾರು ೧೧ ರ ವೇಳೆಗೆ ಪ್ರಾರಂಭವಾದ ಮೆರವಣಿಗೆಗೆ ಹಲವಾರು ಜಾನಪದ ಕಲಾವಿದರ, ಚಂಡಿ ಮೇಳದವರ ಉಪಸ್ಥಿತಿ, ನೆರೆದಿದ್ದ ಭಕ್ತ ಸಮೂಹವನ್ನು ಸದಾ ಉತ್ಸಾಹದಲ್ಲಿರುವಂತೆ ಹುರಿದುಂಬಿಸುತ್ತಿತ್ತು.

ಮೆರವಣಿಗೆ ಸಾಗುವ ಮಾರ್ಗದಲ್ಲಿ ಎಲ್ಲಿ ನೋಡಿದರೂ ಅಲ್ಲಿ ತಳಿರು ತೋರಣಗಳು, ಕೇಸರಿ ಧ್ವಜಗಳು ಕಣ್ಣಿಗೆ ತಂಪನ್ನೆರೆಯುತ್ತಿತ್ತು. ಭಾರತ ಮಾತಾಕಿ ಜೈ, ವಂದೇ ಮಾತರಂ, ಕಟ್ಟುವೆವು ಕಟ್ಟುವೆವು ರಾಮ ಮಂದಿರ ಕಟ್ಟುವೆವು, ಭಾರತ ಮಾತೆಯ ಸಿಂಧೂರ ಕಾಶ್ಮೀರ ಕಾಶ್ಮೀರ ಎಂಬ ಘೋಷಣೆಗಳು ಹೆಚ್ಚಾಗಿ ಕೇಳಿಸುತ್ತಿದ್ದವು. ಸಾಕಷ್ಟು ಕಡೆ ವೀರ ಸಾವರ್ಕರ್, ಚಂದ್ರಶೇಖರ್ ಆಜಾದ್ ಮುಂತಾದ ಪ್ರಾತಃ ಸ್ಮರಣೀಯ ಕ್ರಾಂತಿಕಾರರ ಭಾಚಿತ್ರಗಳು ಕಾಣಿಸುತ್ತಿದ್ದವು.



ನೆರೆದಿದ್ದ ಭಕ್ತ ಸಮೂಹಕ್ಕೆ ಅಲ್ಲಲ್ಲಿ ನೀರು, ಪಾನಕ, ಲಘು ಉಪಹಾರದ ವ್ಯವಸ್ಥೆಯಿತ್ತು. ಮೆರವಣಿಗೆಯಲ್ಲಿ ಭಾಗವಹಿಸಿದ್ದ ಹಲಾವರು ಮಹಿಳೆಯರು ದೇಶಭಕ್ತಿ ಗೀತೆ - ಭಜನೆಗಳನ್ನು ಹಾಡುತ್ತ ಮೆರವಣಿಗೆಗೆ ಶ್ರದ್ಧೆ ತುಂಬುತ್ತಿದ್ದುದು ಕಂಡು ಬಂತು. ಈ ನಡುವೆ ಕೆಲ ಕಾಲ ಮಳೆ ಬಂದು ಅಡ್ಡಿಪಡಿಸಲೆತ್ನಿಸಿದರೂ ಜನರ ಉತ್ಸಾಹ ನೋಡಿ ನಂತರ ಸುಮ್ಮನಾಯಿತು.

ನಗರದ ಗಾಂಧೀ ಬಜಾರ್ , ಶಿವಪ್ಪನಾಯಕ ವೃತ್ತ, ಗೋಪಿ ವೃತ್ತ, ಶಿವಮೂರ್ತಿ ವೃತ್ತ, ಜೈಲ್ ವೃತ್ತ, ಮಹಾವೀರ್ ವೃತ್ತ ಹಾಗು ಕಾನ್ವೆಂಟ್ ವೃತ್ತಗಳ ಮೂಲಕ ಸಾಗಿದ ಮೆರವಣಿಗೆ ರಾತ್ರಿ ಸುಮಾರು ೧೧ ಗಂಟೆಯ ಸುಮಾರಿಗೆ ಮುಕ್ತಾಯವಾಗಿ ಮೂರ್ತಿಯನ್ನು ತುಂಗಾ ನದಿಯಲ್ಲಿ ವಿಸರ್ಜಿಸಲಾಯಿತು.



ಧಾರ್ಮಿಕ ವಿಷಯ ಅತ್ಯಂತ ಸೂಕ್ಷ್ಮ ಹಾಗು ಅವರವರ ನಂಬಿಕೆಗೆ ಬಿಟ್ಟ ವಿಷಯ. ಬೇರೆಯವರ ಶ್ರದ್ಧಾ-ನಂಬಿಕೆಗಳ ವಿರುಧ್ಧ ದುಷ್ಟ ಕೃತ್ಯಗಳನ್ನು ಎಸಗುವವರ ಪುಂಡರಿಗೆ ಇದನ್ನು ಅರ್ಥ ಮಾಡಿಸಲು ಇಂತಹ ಸಾಮಾಜಿಕ ಜಾಗೃತಿಯ ಕಾರ್ಯಕ್ರಮಗಳು ಅವಶ್ಯವೂ ಹೌದು, ಅನಿವಾರ್ಯವೂ ಹೌದು.

Jun 23, 2011

'ಸಂಸ್ಕೃತ ಗ್ರಾಮ' ಮತ್ತೂರಿನ ಹಿರಿಮೆಗೆ ಮತ್ತೊಂದು ಗರಿ - ಪುರಾತನ ದೇವಸ್ಥಾನದ ಲೋಕಾರ್ಪಣೆ




ಸಂಸ್ಕೃತ ಭಾಷೆಯ ಬಗ್ಗೆ ಕೇಳಿದವರಿಗೆ ಮತ್ತೂರಿನ ಬಗ್ಗೆ ವಿಶೇಷವಾಗಿ ಹೇಳಬೇಕಾಗಿಲ್ಲ. ಸಂಸ್ಕೃತ ಭಾಷೆಯ ಬಗ್ಗೆ ಅತ್ಯಂತ ಕಾಳಜಿ ಹೊಂದಿರುವ ಹಾಗು ಆ ಕಾಳಜಿಯನ್ನು ತನ್ನದೇ ಆದ ರೀತಿಯಲ್ಲಿ ಅಭಿವ್ಯಕ್ತಗೊಳಿಸುತ್ತಿರುವ ಗ್ರಾಮ ಮತ್ತೂರು. ಸಂಸ್ಕೃತ ಭಾಷೆಯನ್ನು ಕಲಿಯಲು ಹಾಗೂ ಗ್ರಾಮವನ್ನು ನೋಡಲು ವಿದೇಶೀಯರಾದಿಯಾಗಿ ಬಂದವರು ಸಾಕಷ್ಟು ಮಂದಿ. ನಮ್ಮ ಮನೆಯಲ್ಲೂ ಉಳಿದವರು ಅವಿರಾಚನ್ ಎಂಬ ಜರ್ಮನ್ ಕಂ ಕೇರಳದವರು.



ಈಗ ಮತ್ತೂ ರಿನ ಹಿರಿಮೆಗೆ ಮತ್ತೊಂದು ಗರಿ ಸೇರ್ಪಡೆಯಾಗಿದೆ. ಸುಮಾರು ೧೪೦೦ ವರ್ಷದ ಇತಿಹಾಸವಿರುವ ಶ್ರೀ ಭೀಮೇಶ್ವರ ದೇವಸ್ಥಾನ ಸದ್ದುಗದ್ದಲವಿಲ್ಲದೆ, ಯಾವುದೇ ಆಡಂಬರವಿಲ್ಲದೆ, ರಾಜಕೀಯದ ಲೇಪನವಿಲ್ಲದೆ ಎದ್ದು ನಿಂತಿದೆ. ಮತ್ತೂರಿನಿಂದ ಸುಮಾರು ೧ ಕಿಲೋಮೀಟರ್ ನ ದೂರದಲ್ಲಿ ಈ ದೇವಸ್ಥಾನ ಸಾರ್ವಜನಿಕರ ದರ್ಶನಕ್ಕೆ ಲಭ್ಯವಿದೆ. ಸಮೃದ್ಧ ತುಂಗಾ ನದಿಯ ದಡದಲ್ಲಿ ಶುದ್ಧ ಹಸಿರಿನ ರಮಣೀಯ ವಾತಾವರಣದ ಮಡುವಿನಲ್ಲಿ ಅತ್ಯಂತ ಪುರಾತನವಾದ ಆದರೆ ಅವಸಾನದ ಅಂಚಿನಲ್ಲಿದ್ದ ಈ ದೇವಸ್ಥಾನವನ್ನು ಮರು ಜೋಡಿಸಿ ಧಾರ್ಮಿಕ ವಿಧಿ ವಿಧಾನಗಳ ಮೂಲಕ ಸಾರ್ವಜನಿಕರ ದರ್ಶನಕ್ಕೆ ಅನುವುಮಾಡಿಕೊಡಲಾಗಿದೆ.

ಸೂರ್ಯೋದಯವಾದ ಮರುಕ್ಷಣದಲ್ಲೇ ಸೂರ್ಯನ ಪ್ರಥಮ ಕಿರಣ ದೇವಾಲಯದ ಒಳಗಿರುವ ಈಶ್ವರ ಲಿಂಗದ ಮೇಲೆ ಬೀಳುವ ದೃಶ್ಯ ಕ್ಕೆ ಇತಿಹಾಸವಿರುವ ಬಗ್ಗೆ ನಂಬಿಕೆಯಿದೆ. ಅತ್ಯಂತ ಪುರಾತನವಾದ ಈ ದೇವಸ್ಥಾನ ಹಲವು ಇತಿಹಾಸ ಹಾಗೂ ವಿಶೇಷ ನಂಬಿಕೆಗಳಿಂದ ಕೂಡಿದ್ದು ಕೇವಲ ದೈವಭಕ್ತರಿಗಷ್ಟೇ ಅಲ್ಲದೆ ಇತಿಹಾಸದ ಅಧ್ಯಯನಕಾರರಿಗೂ ಇದು ಹಲವು ವಿಶೇಷ ಮಾಹಿತಿಗಳನ್ನೂ ಒದಗಿಸಬಲ್ಲುದಾಗಿದೆ. ಕಾರಣ, ತುಂಗಾ ನದಿಯ ದಡದಲ್ಲಿ ಇದೆ ರೀತಿಯ ಪುರಾತನವಾದ ದೇವಸ್ಥಾನಗಳು ಇರುವಿಕೆಯ ಬಗ್ಗೆ ಹಲವಾರು ಮಾಹಿತಿಗಳು ಕಾಣಸಿಗುತ್ತವೆಯಂತೆ.

ಒಂದು ಒಳ್ಳೆಯ ದೈವಿಕ ವಾತಾವರಣವನ್ನು ನಿರ್ಮಿಸುವ ಉದ್ದೇಶದಿಂದ ಹಾಗೂ ಪ್ರಾಚೀನ ದೇವಾಲಯದ ರಕ್ಷಣೆಯ ಕಾರಣಕ್ಕಾಗಿ ಸಾಕಷ್ಟು ಶ್ರಮ ವಹಿಸಿ ದೇವಸ್ಥಾನದ ಜೀರ್ಣೋದ್ಧಾರದ ಕೆಲಸವನ್ನು ಬಹುತೇಕ ಪೂರ್ಣಗೊಳಿಸಿಯಾಗಿದೆ. ಇನ್ನು ಹಲವಾರು ಜನರ ಸಹಾಯ ಹಾಗೂ ಶ್ರದ್ಧೆಯ ಅವಶ್ಯಕತೆಯಿದೆ. ಎಲ್ಲ ಸಹೃದಯ ಆಸ್ತಿಕರಿಗೂ ಹಾಗೂ ಇತಿಹಾಸದ ಆಸಕ್ತರಿಗೂ ಆತ್ಮೀಯ ಸ್ವಾಗತ.

Mar 10, 2011

ವಿಶ್ವ ಸಂಸ್ಕೃತ ಪುಸ್ತಕ ಮೇಳ : ಉತ್ತಮ ಜಾಗೃತಿ

ಬಹಳ ದಿನಗಳಿಂದ ಬರೆಯಬೇಕು ಎಂದುಕೊಡಿದ್ದರೂ ಆಗಿರಲಿಲ್ಲ. ಸಮ್ಮೇಳನ ನಡೆದ ಬಹಳ ದಿನಗಳ ನಂತರ ಬರೆಯುತ್ತಿದ್ದೇನೆ.
'ವಿಶ್ವಸಂಸ್ಕೃತ ಪುಸ್ತಕ ಮೇಳ' ನಡೆದದ್ದು ಜನವರಿ ೭ ರಿಂದ ೧೧ ರ ವರೆಗೆ. ನಾವು ಸಂಸ್ಕೃತ ಗ್ರಾಮದ 'ಕೈಲಾಗದ' ಪ್ರಜೆಗಳಾಗಿರುವ ಕಾರಣ ಹಾಗು ಬರದಿರುವವರ ಮುಂದೆ ಸಂಸ್ಕೃತ ಮಾತನಾಡಲು ಬರುವ ಕಾರಣ ನಾನು ಸಹ ಮೇಳವನ್ನು ನೋಡಲು ಹೋಗಿದ್ದೆ.


ಅಲ್ಲಿ ಕಾದಿತ್ತು ಅಚ್ಚರಿ ಹಾಗು ಸಂತೋಷ. 'ಮೃತ ಭಾಷೆ' ಎಂದು ಕೆಲ ಬುದ್ದಿ(ಇಲ್ಲದ)ಜೀವಿಗಳು ಮೂದಲಿಸುವ ಸಂಸ್ಕೃತಕ್ಕೆ ಸಂಬಧಿಸಿದ ಒಂದು ಸಮ್ಮೇಳನಕ್ಕೆ ಬಂದ ಜನಸಾಗರ ವನ್ನು ನೋಡಿ ನಿಜವಾಗಲು ಎಷ್ಟು ಆಶ್ಚರ್ಯ ಆಯ್ತು ಅಂದರೆ ಎಲ್ಲೂ ಸರಿಯಾಗಿ ಜಾಗವಿಲ್ಲದನ್ನು ನೋಡಿ ವಾಪಸ್ ಮನೆಗೆ ಹೊಗುವಂತಾಗಿತ್ತು. ಪುಸ್ತಕ ಮಳಿಗೆ ಗಳಲ್ಲಿ ಕೊಂಡುಕೊಳ್ಳುವು ದಿರಲಿ , ಪುಸ್ತಕಗಳನ್ನು ನೋಡಲೂ ಸಾಧ್ಯವಾಗಲಿಲ್ಲ ಆ ಜನ ದಟ್ಟಣೆಯಲ್ಲಿ.



ಆದರೆ ಒಂದು ಉತ್ತಮ ವಾತಾವರಣವನ್ನು ಹಾಗು ಸಂಸ್ಕೃತ ಭಾಷೆಯ ಬಗ್ಗೆ ಜಾಗೃತಿಯನ್ನು ಉಂಟು ಮಾಡುವಲ್ಲಿ ನಡೆದ ಪುಸ್ತಕ ಮೇಳ ಖಂಡಿತ ಪರಿಣಾಮಕಾರಿಯಾಯಿತು ಎಂಬುದು ನನ್ನ ಅಭಿಪ್ರಾಯ. ಆ ಸಲುವಾಗಿನ ನೆನಪಿಗೋಸ್ಕರ ಕೆಲ ಭಾವ ಚಿತ್ರಗಳನ್ನು ನನ್ನ ಬ್ಲಾಗುಸ್ತಕ ದಲ್ಲಿ ಹಿಡಿದಿಡುವ ಪ್ರಯತ್ನ ವಷ್ಟೇ.


ನಾನು ಮತ್ತೂರಿನವನು ಎಂದು ಹೇಳಿದ ತಕ್ಷಣ 'ಸಂಸ್ಕೃತ ಬರುತ್ತಾ?' ಎಂದು ಕೇಳುವವರೇ ಹೆಚ್ಚು. ಬರುತ್ತೆ ಎಂದು ಹೇಳುವುದರಲ್ಲಿ ನಮಗೆ ಹೆಮ್ಮೆ ಇದೆ.











ಸಾಮಾನ್ಯವಾಗಿ ಯಾರಿಗೆ ದೇಶದ ಬಗೆಗೆ ಅಭಿಮಾನ, ಶ್ರಧ್ಧೆಗಳು ಪ್ರಾಮಾಣಿಕವಾಗಿರುತ್ತದೋ ಅಂತಹ ಮೂರ್ಖರಿಗೆ ಸಂಸ್ಕೃತದ ಬಗ್ಗೆ ಸ್ವಲ್ಪವಾದರೂ ಹೆಮ್ಮೆ ಇದ್ದೇ ಇರುತ್ತದೆ. ನಮ್ಮ ದೇಶಕ್ಕೆ ತನ್ನದೇ ಆದ ಹಿರಿಮೆಗಳಿರುವುದರ ಕಾರಣಗಳಲ್ಲಿ ಸಂಸ್ಕೃತ ಭಾಷೆಯೂ ಒಂದು. ಸಂಸ್ಕೃತದ ಬಗ್ಗೆ ಶ್ರದ್ಧಾ-ಗೌರವಗಳನ್ನು ಆಚರಿಸುವುದು ನಮ್ಮ ಕರ್ತವ್ಯವೂ ಹೌದು.

Feb 26, 2011

ನಮ್ಮ ಬದ್ಧತೆ ವಿಚಾರಕ್ಕೋ, ಸ್ವಾರ್ಥಕ್ಕೋ?

ಅಮೆರಿಕಾದಲ್ಲಿ ೨ ವಾರ ಪತ್ರಿಕೆಗಳು ನಡೆಯುತ್ತಿದ್ದವು. ಎರಡೂ ಪತ್ರಿಕೆಗಳ ಮಾರಾಟ ದಿನೇ ದಿನೇ ಆಶ್ಚರ್ಯಕರ ರೀತಿಯಲ್ಲಿ ಹೆಚ್ಚಾಗುತ್ತಿದ್ದವು. ಏಕೆಂದರೆ ಒಂದು ಪತ್ರಿಕೆ ಇನ್ನೊಂದು ಪತ್ರಿಕೆಯಲ್ಲಿ ಅಚ್ಚಾದ ಸುದ್ದಿಗಳ ಕುರಿತಾಗಿ ತೀಕ್ಷ್ಣವಾಗಿ ಟೀಕಿಸುತ್ತಾ, ವಿಮರ್ಶಾತ್ಮಕವಾಗಿ ಬರೆಯುತ್ತಿತ್ತು. ಅವಹೇಳನ ಮಾಡುತ್ತಿತ್ತು. ತಪ್ಪುಗಳನ್ನು ಎತ್ತಿ ಹಿಡಿಯುತ್ತಿತ್ತು. ಇನ್ನೊಂದು ಪತ್ರಿಕೆಯೂ ಅದೇ ರೀತಿಯಲ್ಲಿ ವಿಶ್ಲೇಷಣೆ ಮಾಡುತ್ತಾ ಬರೆಯುತ್ತಿತ್ತು. ಆ ಕಾರಣಕ್ಕಾಗಿ ಒಂದು ಪತ್ರಿಕೆ ಇನ್ನೊಂದು ಪತ್ರಿಕೆಯನ್ನ ಯಾವ ರೀತಿಯಲ್ಲಿ ಟೀಕಿಸುತ್ತದೆ ಎಂಬುದನ್ನು ತಿಳಿದುಕೊಳ್ಳುವ ಸಲುವಾಗಿ ಜನರು ಪ್ರತಿ ವಾರ ಕುತೂಹಲದಿಂದ ಎರಡೂ ಪತ್ರಿಕೆಯನ್ನು ಕೊಂಡು ಓದುತ್ತಿದ್ದರು. ಹೀಗೆ ದಿನೇ ದಿನೇ ಪತ್ರಿಕೆಯ ಪ್ರಸಾರ ಬೆಳೆಯುತ್ತ ಹೋಯಿತು. ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಯಿತು.

ಇದನ್ನೆಲ್ಲಾ ಗಮನಿಸುತ್ತಿದ್ದ ಅಲ್ಲಿನ ಸಚಿವನೊಬ್ಬ ತನ್ನ ಜನ್ಮದಿನೋತ್ಸವದ ಆಚರಣೆಗೆ ಎರಡೂ ಪತ್ರಿಕೆಯ ಸಂಪಾದಕನನ್ನು ಕರೆಯಬೇಕೆಂಬ ಆಸೆಯಿಂದ ಎರಡೂ ಪತ್ರಿಕೆಯ ಕಚೇರಿಗೆ ಆಹ್ವಾನವನ್ನು ಕಳಿಸಿದ. ಈ ಮೂಲಕ ತನ್ನ ಪ್ರಸಿದ್ದಿಯನ್ನು ಹೆಚ್ಚಿಸಿಕೊಳ್ಳಬೇಕೆಂಬ ಉದ್ದೇಶ ಹೊಂದಿದ್ದ. ಆಚರಣೆಯ ದಿನ ಬಂತು. ಸಂಜೆಯಿಂದಲೇ ಇಬ್ಬರು ಸಂಪಾದಕರಿಗೂ ಕಾಯುತ್ತಲಿದ್ದ. ಸುಮಾರು ೭ ರ ವೇಳೆಗೆ ಒಬ್ಬ ಸಂಪಾದಕ ಬಂದ. ಸಚಿವ ಬರಮಾಡಿಕೊಂಡ. ಇನ್ನೊಬನಿಗೆ ಕಾಯುತ್ತಿರುವಾಗ ಮೊದಲಿನವನು 'ಯಾರಿಗೆ ಕಾಯುತ್ತಿರುವಿರಿ?' ಎಂದು ಕೇಳಿ ಇನ್ನೊಂದು ಪತ್ರಿಕೆಯ ಸಂಪಾದಕನಿಗೆ ಎಂದ ಸಚಿವನಿಗೆ ಆಶ್ಚರ್ಯ ಕಾದಿತ್ತು. ಎರಡೂ ಪತ್ರಿಕೆಯ ಸಂಪಾದಕ ಒಬ್ಬನೇ ಆಗಿದ್ದ !!!!!




ನನಗೆ ಪ್ರಸ್ತುತ ಈ ಕಥೆ ಮನಸ್ಸಿಗೆ ಬಂದದ್ದು 'ವೈಚಾರಿಕ ಬದ್ದತೆ'ಯ ವಿಚಾರದ ಬಗ್ಗೆ ಯೋಚಿಸುತ್ತಿರುವಾಗ.ಇಲ್ಲಿ ಸಂಪಾದಕನ ಬದ್ದತೆ ವಿಚಾರಕ್ಕೋ ಅಥವಾ ವ್ಯಾಪರಕ್ಕೋ ? ಇಲ್ಲಿ ಬಹುಶಃ ಈ ಸಂಪಾದಕನ ಉದ್ದೇಶ ತನ್ನ ಪ್ರತಿಭೆಯ ಕಾರಣದಿಂದ ವ್ಯಾಪಾರವಷ್ಟೇ ಇರಬಹುದು.

ನನ್ನೊಬ್ಬ ಬಹಳ ಒಳ್ಳೆಯ ಸ್ನೇಹಿತನೂ ಇದೇ ಸಮಯದಲ್ಲಿ ನೆನಪಿಗೆ ಬಂದ. ಅವನು ಬಹಳ ಒಳ್ಳೆಯ ವಾಗ್ಮಿ. ಸಾಮಾನ್ಯರಿಗಿಂತ ವೈಚಾರಿಕವಾಗೂ ಸಾಕಷ್ಟು ತಿಳಿದುಕೊಂಡವನು. ಅವನ ಇನ್ನೊಂದು ವಿಶೇಷ ವೆಂದರೆ ಯಾವುದೇ ವಿಷಯದ ಕುರಿತಾಗಿ ಪರವಾಗಿಯೂ ಅಥವಾ ವಿರೋಧವಾಗಿಯೂ ಅಷ್ಟೇ ಚೆನ್ನಾಗಿ ಮಾತಾಡಬಲ್ಲ ವಾಗ್ಮಿ. ಹೀಗಿರುವಾಗ ಇಲ್ಲಿ ಅವನ ಬಧ್ಧತೆ ಯಾವ ವಿಚಾರದ ಕಡೆಗೆ ಎಂಬ ಪ್ರಶ್ನೆ ಬಂದಾಗ ಅನುಮಾನ ಎದುರಾಗುತ್ತದೆ. ಇಂತಹ ಸಮಯಗಳಲ್ಲಿ ನಮ್ಮ ಬದ್ದತೆ ವಿಚಾರಕ್ಕೋ ಅಥವಾ ನಮ್ಮ ಸಾಮರ್ಥ್ಯಕ್ಕೋ?

ಯಾಕೆಂದರೆ ಒಮ್ಮೊಮ್ಮೆ ನಮ್ಮ ಬಂಧುಗಳೋ ಅಥವಾ ನಮಗೆ ಹತ್ತಿರದವರೋ ತಪ್ಪು ಮಾಡಿದರೆ ನಾವು ಅದರ ಸಮರ್ಥನೆಗೇ ಹೋಗಿಬಿಡುತ್ತೇವೆ. ಆದರೆ ಅದೇ ತಪ್ಪನ್ನು ಪಕ್ಕದಮನೆಯವರು ಮಾಡಿಬಿಟ್ಟರೆ ಅವರನ್ನು ಜೈಲಿಗೇ ಅಟ್ಟುವಂತೆ ಆಗ್ರಹಿಸುತ್ತೇವೆ. ನಮ್ಮ ಮಗ ಮಾಡಿದ ಸಣ್ಣ ಕಳ್ಳತನ 'ಮಗು ಮಾಡಿದ್ದು'!!! ಪಕ್ಕದ ಮನೆಯ ಹುಡುಗ ಮಾಡಿದ ಕಳ್ಳತನ 'ಬೆಳೆಯುವ ಸಿರಿ ಮೊಳಕೆಯಲ್ಲಿ'...!!!!

ಎಷ್ಟು ಅಸಹ್ಯ ಆಲ್ವಾ ಈ ನಮ್ಮ ಸ್ವಜನ ಪಕ್ಷಪಾತದಂತಹ ನಡವಳಿಕೆ ? ಈ ಕಾರಣದಿಂದ ಹಣವಿರುವವರು, ರಾಜಕೀಯ ಶಕ್ತಿಗಳು ತಮ್ಮ ತಮ್ಮ ಆಟಗಳನ್ನು ಸಮಾಜದಲ್ಲಿ ಆಡುತ್ತಲೇ ಬಂದಿದ್ದಾರೆ. ನಾವೂ ಸಾಕಷ್ಟು ಬಾರಿ ಅವುಗಳಿಂದಲೇ ಸ್ವಾರ್ಥಾನುಕೂಲವನ್ನು ಪಡೆಯುತ್ತಲೇ ಬಂದಿದ್ದೇವೆ...
ಕರ್ನಾಟಕದ ಹಲವಾರು ಕಡೆ ನ್ಯಾಯಾಲಯದ ಆದೇಶದ ಮೇರೆಗೆ ಅನಧಿಕೃತ ಧಾರ್ಮಿಕ ಕಟ್ಟಡಗಳನ್ನು ತೆರವುಗೊಳಿಸುವ ವಿಚಾರವಾಗಿ ಹಲವಾರು ಪ್ರತಿಭಟನೆಗಳು ನಡೆದಿವೆ. ಶ್ರಧ್ಧಾ ಭಕ್ತಿಗಳ ಸಂಕೇತವಾದ ಮಂದಿರಗಳನ್ನ ತೆರವುಗೊಳಿಸುವುದು ಅಷ್ಟು ಸಮಂಜಸವಲ್ಲವೆನ್ನುದು ಅಕ್ಷರಶಃ ಸತ್ಯ. ಅದನ್ನು ಅಲ್ಲಗೆಳೆಯುವ ಮಾತೆ ಇಲ್ಲ. ಆದರೆ ಒಂದು ಕಡೆ ತೆರವುಗೊಳಿಸುವುದನ್ನು ಖಂಡಿಸುವ , ಪ್ರತಿಭಟಿಸುವ ನಾಯಕರೇ ಮಗದೊಂದು ಕಡೆ ತಮ್ಮ ಸ್ವಾರ್ಥಕ್ಕೋಸರ ಅಥವಾ ರಾಜಕೀಯ ದುರುದ್ದೇಶಗಳಿಗೋಸ್ಕರ ಅಭಿವೃದ್ಧಿಯ ನೆಪವನ್ನೊಡ್ಡಿ ದೇವಸ್ಥಾನಗಳನ್ನ ನೆಲಸಮ ಮಾಡುವ 'ಆಸಕ್ತಿ'ಯನ್ನು ಹೊಂದಿರುವುದನ್ನು ನೋಡಿ, ಹೇಳಬೇಕಾದವರು ಸುಮ್ಮನಿದ್ದಾರೆ. ಸುಮ್ಮನಿರಬೇಕಾದವರು 'ತಾನು ಮಾಡಿದ್ದೆ ಸರಿ' ಎಂಬ ಧೋರಣೆಯಲ್ಲಿ 'ಮುನ್ನಡೆ'ಯುತ್ತಿದ್ದಾರೆ ಎಂಬ ದುಃಖದಲ್ಲಿ 'ನಮ್ಮ ಬದ್ಧತೆ ವಿಚಾರಕ್ಕೋ, ವ್ಯಕ್ತಿಗೋ, ಸ್ವಾರ್ಥಕ್ಕೋ?' ಎಂಬ ಪ್ರಶ್ನೆ ಹಾಗೆ ಬಂದು

ಕುರುಡು ಕಾಂಚಾಣ ಬಳಿಯಿರದ ನಾವು
ಅಧಿಕಾರ ಬಲವಾ ಪಡೆಯದವರು ನಾವು
ಜನಬಲವನಂತೂ ಅರಿಯದವರು ನಾವು
ಯಾವುದನು ತಾನೇ ಎದುರಿಸಲು ಸಾಧ್ಯ?

ಎದುರಿಸಿದರಂತೂ ಮುಗಿಯಿತು ಕಥೆ
ಇದೆ ತಾನೇ ನಮ್ಮ ಕೈಲಾಗದವರ ವ್ಯಥೆ....

ಎಂಬ ನಾನೇ ಬರೆದ ಸಾಲುಗಳ ನೆನಪಾಗಿ, ಎಲ್ಲ ಆಲೋಚನೆಗಳೂ ಹಾಗೆ ವಾಪಸ್ ಹೋಯಿತು.

ಸೈದ್ಧಾಂತಿಕ ಸಂಸ್ಕಾರದ ಕಾರಣಕ್ಕೆ ರಾಜಕೀಯಕ್ಕೆ ಕಾಲಿಟ್ಟವರೂ ಸಹ ಭ್ರಷ್ಟಾಚಾರದಲ್ಲಿ, ಸುಳ್ಳು ಹೇಳುವಲ್ಲಿ, ಅಕ್ರಮ ಆಸ್ತಿ ಮಾಡಿಕೊಳ್ಳುವಲ್ಲಿ, ಸ್ವಜನಪಕ್ಷಪಾತದಲ್ಲಿ ನಿರತರಾಗಿದ್ದಾರೆ. ಅದಕ್ಕೆ ಉತ್ತರವಾಗಿ, 'ಎಲ್ಲ ಬಿಟ್ಟವರಂತೆ', ಇತರ ಪಕ್ಷಗಳ ನಾಯಕರೂ ಮಾಡಿದ್ದಾರೆ ಎಂಬ ಬೇಜವಾಬ್ದಾರಿತನದ ಉತ್ತರ ಕೊಡುತ್ತಾರೆ. ಛೆ ಇವರೂ ಮನುಷ್ಯರಾ? ಹೇಳುವುದು ಸುಲಭ, ಆದರೆ ರಾಜಕೀಯ ಕ್ಷೇತ್ರದಲ್ಲಿ ಸರಿಯಿರುವುದು ಸುಲಭದ ಮಾತಲ್ಲ ಎನ್ನುವುದು ನಮ್ಮ ನಾಯಕರಿಗೆ ಅಭ್ಯಾಸವಾಗಿ ಬಿಟ್ಟಿದೆ. ಅದನ್ನೇ ದುರುಪಯೋಗ ಮಾಡಿಕೊಂಡು ಭ್ರಷ್ಟಾಚಾರದಲ್ಲಿ ಆಗ್ರಹಪೂರ್ವಕವಾಗಿ ನಿರತರಾಗಿದ್ದಾರೆ. ಎಷ್ಟು ಅಸಹ್ಯ ಆಲ್ವಾ? ಮಾಡಿದ ಅನ್ಯಾಯಗಳನ್ನ ಸಮರ್ಥನೆ ಮಾಡಿಕೊಳ್ಳುವ ಮಟ್ಟಕ್ಕೆ ರಾಜಕೀಯ ನಾಯಕರು ಹೋಗುತ್ತಾರೆ ಎಂದರೆ ಈ ವ್ಯವಸ್ಥೆ ನಮಗೆ ಬೇಕಾ ಎಂಬ ಪ್ರಶ್ನೆಯೂ ಉದ್ಭವವಾಗುತ್ತದೆ. ಆದರೆ ಕಮ್ಯುನಿಸ್ಟ್ ವ್ಯವಸ್ಥೆಗೆ ಹೋಲಿಸಿಕೊಂಡರೆ ನಮ್ಮ ಪ್ರಜಾಪ್ರಭುತ್ವ ಎಷ್ಟೋ ವಾಸಿ ಎಂಬ ಸಮಾಧಾನ ಪಟ್ಟು ಕೊಳ್ಳ ಬೇಕಾಗುತ್ತದೆ.

ನಮ್ಮ ನಾಯಕರಲ್ಲಿ ಒಳ್ಳೆಯ ಕೆಲಸಗಳನ್ನು ಮಾಡುವ ಸಲುವಾಗಿ ಸ್ಪರ್ಧೆ ಏರ್ಪಡಬೇಕು. ಅದನ್ನು ಬಿಟ್ಟು ಭ್ರಷ್ಟಾಚಾರ ದಲ್ಲೇ ಸ್ಪರ್ಧೆ ಏರ್ಪಟ್ಟಿರುವುದು ವಿಪರ್ಯಾಸ. ಹಣಬಲ, ಜನಬಲ, ಅಧಿಕಾರಬಲ ಎಲ್ಲವೂ ಒಬ್ಬರ ಬಳಿಯಲ್ಲೇ ಶೇಖರವಾಗುವುದೂ ಆ ಭಗವಂತನ ಸೃಷ್ಟಿಯ ವಿಪರ್ಯಾಸ. ಎಲ್ಲವನ್ನು ಅವನ ಮೇಲೆ ಹಾಕಿ ನಾವು ಆತ್ಮಸಾಕ್ಷಿಯ ವಿರುದ್ಧವಾಗಿ ನಡೆಯದೇ ಇರುವುದೇ ನಮ್ಮ ಕರ್ತವ್ಯವಾಗಿದೆ. ಹಾಗು ಅದೇ ಸವಾಲಾಗಿದೆ ಕೂಡ.

Jan 25, 2011

ಸರಾಗವಾಗಲ್ಲದಿದ್ದರೂ ಸಾಂಗವಾಗಿ ಮುಗಿದ 'ಸಾಂಗತಾ ಯಜ್ಞ'

ನಮ್ಮ ನಂಬಿಕೆಗಳು, ಶ್ರದ್ಧೆಗಳು, ಯಾವುದೇ ವಿಷಯದ ಕುರಿತಾದಿರಬಹುದು, ನಮಗೆ ಸಮಾಧಾನಪಡಿಸುವಂತಿದ್ದರೆ ಹಾಗು ಒಳ್ಳೆಯ ಚಿಂತನೆ ಮಾಡುವ ರೀತಿಯಲ್ಲಿ ಪ್ರೇರೇಪಿಸುವಂತಿದ್ದರೆ ಆ ನಂಬಿಕೆಗೆ 'ಸರಿಯೋ? ತಪ್ಪೋ?' ಎನ್ನುವ ತರ್ಕ ಬೇಕಿಲ್ಲ ಎಂಬುದು ನನ್ನ ಇತ್ತೀಚೆಗಿನ ಅನಿಸಿಕೆ.

ಇದೇ ವಿಷಯಕ್ಕೆ ಸಂಬಂಧಿಸಿದ್ದು 'ದೇವರು' ಎಂಬ 'ಅನುಭವ'.



ನಾನು ಉದ್ದೇಶಪೂರ್ವಕವಾಗಿಯೇ 'ದೇವರು' ಎನ್ನುವುದನ್ನು 'ಅನುಭವ' ಎಂದು ಕರೆದಿದ್ದೇನೆ. ಆದರೆ ಇದು 'ಪ್ರತ್ಯಕ್ಷ'ವಾಗುವ ಅನುಭವವಲ್ಲ. ನಂಬಿಕೆಯ ಕಾರಣದಿಂದ ಉಂಟಾಗುವ ಅನುಭವ. ನಂಬಿಕೆಯ ನಂತರವಷ್ಟೇ ಅನುಭವದ ಅನುಭವ ಸಾಧ್ಯ ಎನ್ನುವುದು ಮತ್ತೇನೂ ಹೇಳಬೇಕಾಗಿಲ್ಲ.

ಡಿಸೆಂಬರ್ 15 ಮತ್ತು 16 ಹೊಸಹಳ್ಳಿಯಲ್ಲೂ ಹಾಗು 17 ರಿಂದ 19 ರ ವರೆಗೆ ಮತ್ತೂರಿನಲ್ಲೂ ನಡೆದ 'ತೇರಾಕೋಟಿ ರಾಮನಾಮತಾರಕದ ಸಾಂಗತಾಯಜ್ಞ' ಹತ್ತು ಹಲವು ವಿಶೇಷ, ಪರಿಣಾಮ, ಪ್ರೇರಣೆಗಳೊಂದಿಗೆ ಮುಕ್ತಾಯಗೊಂಡದ್ದು ಈಗ ಇತಿಹಾಸ. ಯಜ್ಞದಲ್ಲಿ ಭಾಗವಹಿಸಿದವರು, ಆ ನಂತರದ ಹಾಗು ಆ ಮೊದಲ ಕೆಲವು ಸನ್ನಿವೇಶಗಳನ್ನು ನೋಡಿದಾಗ ನನಗನ್ನಿಸಿದ್ದು ಮೇಲಿನದು.


ಹೆಬ್ಬಳ್ಳಿಯ ಶ್ರೀ ದತ್ತಾವಧೂತ ಮಹಾರಾಜರ ಉಪಸ್ಥಿತಿಯಲ್ಲಿ ನಡೆದ ೫ ದಿನಗಳ ಕಾರ್ಯಕ್ರಮದಲ್ಲಿ ಭಾಗವಹಿಸಿದವರು ೨ ಸಾವಿರಕ್ಕೂ ಹೆಚ್ಚು ಮಂದಿ. ಮೊದಲೆರಡು ದಿನ ಹೊಸಹಳ್ಳಿಯಲ್ಲಿಯೂ ಹಾಗು ನಂತರದ ೩ ದಿನ ಮತ್ತೂರಿನಲ್ಲಿಯೂ ನಡೆದ ಹಲವಾರು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಬಹುತೇಕ ಬಂದವರೆಲ್ಲರೂ ಭಾಗವಹಿಸಿದುದು ಕಂಡುಬಂತು. ದತ್ತಾವಧೂತರ ಪ್ರವಚನಗಳಿಗೆ ಹದಿಹರೆಯದವರೆನ್ನದೆ ಎಲ್ಲರೂ ದೌಡಾಯಿಸುತ್ತಿದ್ದುದು ಕೆಲವರಿಗೆ ಆಶ್ಚರ್ಯ ಹಾಗು ಮತ್ತೆ ಕೆಲವರಿಗೆ 'ದಾರಿ ತಪ್ಪುತ್ತಿರುವ ಯುವಕರು' ಎಂದೆನಿಸಿದುದೂ ಉಂಟು.


ಪ್ರತಿದಿನದ ಮುಖ್ಯ ಕಾರ್ಯಕ್ರಮಗಳಾದ ರಾಮತಾರಕ ಹೋಮ ಹಾಗು ದತ್ತಾವಧೂತರ ಪ್ರವಚನಗಳಿಗೆ ಜನರು ಕಾದು ಕುಳಿತ್ತಿದ್ದ ಹಾಗೆ ಅನ್ನಿಸುತ್ತಿತ್ತು. ಹೋಮದ ಪೂರ್ಣಾಹುತಿಯವರೆಗೂ ಜನರು ಮಂತ್ರಗಳನ್ನು ಕೇಳುತ್ತಾ ಅಲುಗಾಡದೆ ಕುಳಿತು ಭಾಗವಹಿಸುತ್ತಿದ್ದುದು ಸಾಮಾನ್ಯವಾಗಿತ್ತು. ಹಿಂದೆ ಕಲಿತು ಈಗ ಮರೆತು 'ದಾರಿ ಬಿಟ್ಟಿದ್ದ'ವರಲ್ಲಿ ಕೆಲವರು, ಸಂಪಾದನೆಗೋಸ್ಕರವಲ್ಲದಿದ್ದರೂ ಜತೆಗೆ ಜತೆಯಾಗುವುದಕ್ಕೆ ಕಲಿತ ಮಂತ್ರಗಳನ್ನು ನೆನಪಿಸಿಕೊಳ್ಳುವ ಪ್ರಯತ್ನದಲ್ಲಿದ್ದಾರೆ.

ಧಾರ್ಮಿಕ ಕಾರ್ಯಕ್ರಮದ ವಿಶೇಷ ವಾತಾವರಣದಲ್ಲಿ ಶಾಲೆಗೇ ಇನ್ನೂ ಸೇರದ ಮಕ್ಕಳಾದಿಯಾಗಿ ಎಲ್ಲರ ಕೈಯಲ್ಲಿ ಜಪಮಾಲೆ, ಬಾಯಲ್ಲಿ ರಾಮಜಪ ವನ್ನು ನೋಡುತ್ತಿದ್ದ ಪೋಷಕರಲ್ಲಿ ಸಂತೋಷಪಟ್ಟವರು ಹಾಗು ಭಯಪಟ್ಟವರೂ ಸೇರಿದ್ದಾರೆ. ಆದರೆ ಆ ಸಮಯದಲ್ಲಿ ಇಡೀ ಊರು ರಾಮನಾಮದಲೆಯಲ್ಲಿ ಮುಳುಗಿದ್ದುದು ಮಾತ್ರ ಸತ್ಯ.


ಪ್ರಸ್ತುತ ಈ ಮಟ್ಟದ ಆಧುನಿಕತೆಯ ಅಬ್ಬರದಲ್ಲಿ, 'ಕಾಂಕ್ರೀಟ್ ರಸ್ತೆಗಳ' ಮೇಲೆ ಹಳ್ಳಿಗಳನ್ನು 'ಕಟ್ಟುತ್ತಿರುವಾಗ' ಒಂದು ಸಂಪೂರ್ಣ ಧಾರ್ಮಿಕ ವಾತಾವರಣವನ್ನು ಸೃಷ್ಟಿಸಿ ಜನರನ್ನು ಅದರಲ್ಲಿ ತಲ್ಲೀನರನ್ನಾಗಿಸಿದುದು ವಿಶೇಷವೇ.

Jan 18, 2011

ಪ್ರಪ್ರಥಮ 'ವಿಶ್ವ ಸಂಕೇತಿ ಸಮ್ಮೇಳನ'



ಪ್ರಪ್ರಥಮ 'ವಿಶ್ವ ಸಂಕೇತಿ ಸಮ್ಮೇಳನ' ಅದ್ಧೂರಿಯಾಗಿ ಹಾಗು ಅನೇಕ ವಿಶೇಷತೆಗಳೊಡನೆ ನೆರವೇರಿದೆ. ಸಂಸ್ಕೃತ ಗ್ರಾಮ ಎಂದೇ ಹೆಸರು ವಾಸಿಯಾಗಿರುವ 'ಮತ್ತೂರಿ'ನಲ್ಲಿ 31 ಡಿಸೆಂಬರ್ ನಿಂದ 2 ನೆ ಜನವರಿವರೆಗೆ ನಡೆದ 'ವಿಶ್ವ ಸಂಕೇತಿ ಸಮ್ಮೇಳನ', ಪ್ರಪಂಚದಾದ್ಯಂತ ಹಂಚಿ ಹೋಗಿರುವ ಸಂಕೇತಿ ಸಮುದಾಯವನ್ನು 3 ದಿನಗಳ ಮಟ್ಟಿಗೆ ಒಂದೆಡೆ ಸೇರಿಸುವಲ್ಲಿ ಬಹುತೇಕ ಯಶಸ್ವಿಯಾಗಿದೆ ಎಂತಲೇ ಹೇಳಬಹುದು.

ಅತ್ಯಂತ ಪುಟ್ಟ ಸಮುದಾಯವಾಗಿರುವ 'ಸಂಕೇತಿ ಸಮುದಾಯ' ದವರು ಬಹುತೇಕ ಎಲ್ಲ ದೇಶಗಳಲ್ಲಿಯೂ ನೆಲೆಸಿದ್ದಾರೆ. ನಮ್ಮ ಪ್ರಾಚಿನ ಸಂಸ್ಕೃತಿಗಳಾದ ವೇದ-ಉಪನಿಷತ್ತುಗಳು, ಸಂಸ್ಕೃತ, ವೇದಾಂತ, ಸಂಗೀತ, ಭರತನಾಟ್ಯ, ಮೃದಂಗ ಮುಂತಾದ ಅನೇಕ ವಿಧದ ಕಲೆಗಳು ಮತ್ತು ವಿದ್ಯೆಗಳಲ್ಲಿ ತಮ್ಮದೇ ಆದ ಪ್ರಾವೀಣ್ಯತೆಯನ್ನು ಪಡೆದು ಮೇಲ್ಪಂಕ್ತಿಯನ್ನು ಹಾಕಿಕೊಟ್ಟವರು ಅನೇಕ ಮಂದಿ. ಈ ಕಾರಣದಿಂದ ಸಮ್ಮೇಳನದಲ್ಲಿ ಈ ಎಲ್ಲ ಪ್ರತಿಭೆಗಳ ಅನಾವರಣ ನೋಡುಗರಿಗೆ ಹಾಗು ಕೇಳುಗರಿಗೆ ಅತ್ಯಂತ ಹೆಮ್ಮೆ ಹಾಗು ಸಂತೋಷವನ್ನುಂಟು ಮಾಡಿತು.

ಎಲ್ಲರೂ ತಮ್ಮ ತಮ್ಮ ನೆಚ್ಚಿನ ಸಾಂಪ್ರದಾಯಿಕ ಉಡುಗೆಗಳಲ್ಲಿ ಮೈ ಮರೆತು ಸಮಾವೇಶದಲ್ಲಿ ಭಾಗವಹಿಸುತ್ತ ಒಂದು ಹೊಸ ವಾತಾವರಣದಲ್ಲಿ ಮುಳುಗಿದ್ದರು. ಪುಟ್ಟ ಪುಟ್ಟ ಮಕ್ಕಳ ಖುಷಿಯನ್ನಂತೂ ಕೇಳಲೇಬೇಕಾಗಿಲ್ಲ. ತಮ್ಮ ಮಕ್ಕಳ ಪ್ರತಿಭೆಗಳನ್ನು ತಮ್ಮ ಸಮುದಾಯದವರ ಮುಂದೆ ಅನಾವರಣಗೊಳಿಸಲು ಕಾಯುತ್ತಿದ್ದ ಪೋಷಕರು ಒಂದು ಕಡೆಯಾದರೆ ವೇದಿಕೆಯ ಮೇಲೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ತಮ್ಮ ತಮ್ಮ ಸರತಿಗಾಗಿ ಕಾಯುತ್ತಿದ್ದ 'ಪ್ರತಿಭೆ'ಗಳು ಮತ್ತೊಂದು ಕಡೆ. ಕನ್ನಡ ವಾಹಿನಿ ಈ-ಟಿವಿಯ ಪ್ರಸಿದ್ಧ 'ಎದೆ ತುಂಬಿ ಹಾಡುವೆನು' ಖ್ಯಾತಿಯ ಲಕ್ಷ್ಮಿ ನಾಗರಾಜ್, ಇಂದು ನಾಗರಾಜ್ ರಂತಹ ಹೆಸರಾಂತ ಗಾಯಕರ ಕಾರ್ಯಕ್ರಮಗಳಿಗೆ ರಾತ್ರಿ ೧ ಗಂಟೆಯವರೆಗೂ ಶ್ರೋತೃ ಗಳು ಕಾಯುತ್ತಿದ್ದರು.

ಸುಮಾರು ೪೦೦೦ ಜನರನ್ನು ಒಟ್ಟುಗೂಡಿಸಿ, ಮೂರು ದಿನವೂ ದಿನದ ಮೂರೂ ಹೊತ್ತು ಜನರ ಭೋಜನ ವ್ಯವಸ್ಥೆಯನ್ನು ನೋಡಿಕೊಂಡು, ಹಾಗೆಯೇ ಎಲ್ಲ ಹೊತ್ತೂ ಸಾಂಸ್ಕೃತಿಕ ಕಾರ್ಯಕ್ರಮಗಳು, ವಿಚಾರಗೋಷ್ಠಿಗಳು ಹಾಗು ಇನ್ನಿತರ ವಿಶೇಷ ಕಾರ್ಯಕ್ರಮಗಳ ಮೂಲಕ ಸಮ್ಮೇಳನವನ್ನು 'ಸಾಕಷ್ಟು' ವಿಧದ ಜನರಿಗೆ ಮುಟ್ಟುವಂತೆ ಹಾಗು ಅವಿಸ್ಮರಣೀಯವಾಗಿ ನಡೆಯಲು ಕಾರಣರಾದ ಎಲ್ಲ ಸಂಕೇತಿ ಬಂಧುಗಳಿಗೆ ಅಭಿನಂದನೆಗಳು.

ಎಲ್ಲ ಕಾರ್ಯಕ್ರಮಗಳಿಗೂ ಅದರದ್ದೇ ಆದ ಬೇವು ಬೆಲ್ಲಗಳಿದ್ದರೂ ಬೆಲ್ಲಗಳನ್ನು ನೋಡಿ ಸಕಾರಾತ್ಮಕವಾಗಿ ಚಿಂತಿಸುವುದನ್ನು ರೂಢಿಸಿಕೊಳ್ಳುವ ಪ್ರಯತ್ನದಲ್ಲಿ ಇದೂ ಒಂದು ಅಷ್ಟೇ.


"ಸರ್ವೇ ಜನಾಃ ಸಜ್ಜನೋ ಭವಂತು"

-------