Feb 26, 2011

ನಮ್ಮ ಬದ್ಧತೆ ವಿಚಾರಕ್ಕೋ, ಸ್ವಾರ್ಥಕ್ಕೋ?

ಅಮೆರಿಕಾದಲ್ಲಿ ೨ ವಾರ ಪತ್ರಿಕೆಗಳು ನಡೆಯುತ್ತಿದ್ದವು. ಎರಡೂ ಪತ್ರಿಕೆಗಳ ಮಾರಾಟ ದಿನೇ ದಿನೇ ಆಶ್ಚರ್ಯಕರ ರೀತಿಯಲ್ಲಿ ಹೆಚ್ಚಾಗುತ್ತಿದ್ದವು. ಏಕೆಂದರೆ ಒಂದು ಪತ್ರಿಕೆ ಇನ್ನೊಂದು ಪತ್ರಿಕೆಯಲ್ಲಿ ಅಚ್ಚಾದ ಸುದ್ದಿಗಳ ಕುರಿತಾಗಿ ತೀಕ್ಷ್ಣವಾಗಿ ಟೀಕಿಸುತ್ತಾ, ವಿಮರ್ಶಾತ್ಮಕವಾಗಿ ಬರೆಯುತ್ತಿತ್ತು. ಅವಹೇಳನ ಮಾಡುತ್ತಿತ್ತು. ತಪ್ಪುಗಳನ್ನು ಎತ್ತಿ ಹಿಡಿಯುತ್ತಿತ್ತು. ಇನ್ನೊಂದು ಪತ್ರಿಕೆಯೂ ಅದೇ ರೀತಿಯಲ್ಲಿ ವಿಶ್ಲೇಷಣೆ ಮಾಡುತ್ತಾ ಬರೆಯುತ್ತಿತ್ತು. ಆ ಕಾರಣಕ್ಕಾಗಿ ಒಂದು ಪತ್ರಿಕೆ ಇನ್ನೊಂದು ಪತ್ರಿಕೆಯನ್ನ ಯಾವ ರೀತಿಯಲ್ಲಿ ಟೀಕಿಸುತ್ತದೆ ಎಂಬುದನ್ನು ತಿಳಿದುಕೊಳ್ಳುವ ಸಲುವಾಗಿ ಜನರು ಪ್ರತಿ ವಾರ ಕುತೂಹಲದಿಂದ ಎರಡೂ ಪತ್ರಿಕೆಯನ್ನು ಕೊಂಡು ಓದುತ್ತಿದ್ದರು. ಹೀಗೆ ದಿನೇ ದಿನೇ ಪತ್ರಿಕೆಯ ಪ್ರಸಾರ ಬೆಳೆಯುತ್ತ ಹೋಯಿತು. ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಯಿತು.

ಇದನ್ನೆಲ್ಲಾ ಗಮನಿಸುತ್ತಿದ್ದ ಅಲ್ಲಿನ ಸಚಿವನೊಬ್ಬ ತನ್ನ ಜನ್ಮದಿನೋತ್ಸವದ ಆಚರಣೆಗೆ ಎರಡೂ ಪತ್ರಿಕೆಯ ಸಂಪಾದಕನನ್ನು ಕರೆಯಬೇಕೆಂಬ ಆಸೆಯಿಂದ ಎರಡೂ ಪತ್ರಿಕೆಯ ಕಚೇರಿಗೆ ಆಹ್ವಾನವನ್ನು ಕಳಿಸಿದ. ಈ ಮೂಲಕ ತನ್ನ ಪ್ರಸಿದ್ದಿಯನ್ನು ಹೆಚ್ಚಿಸಿಕೊಳ್ಳಬೇಕೆಂಬ ಉದ್ದೇಶ ಹೊಂದಿದ್ದ. ಆಚರಣೆಯ ದಿನ ಬಂತು. ಸಂಜೆಯಿಂದಲೇ ಇಬ್ಬರು ಸಂಪಾದಕರಿಗೂ ಕಾಯುತ್ತಲಿದ್ದ. ಸುಮಾರು ೭ ರ ವೇಳೆಗೆ ಒಬ್ಬ ಸಂಪಾದಕ ಬಂದ. ಸಚಿವ ಬರಮಾಡಿಕೊಂಡ. ಇನ್ನೊಬನಿಗೆ ಕಾಯುತ್ತಿರುವಾಗ ಮೊದಲಿನವನು 'ಯಾರಿಗೆ ಕಾಯುತ್ತಿರುವಿರಿ?' ಎಂದು ಕೇಳಿ ಇನ್ನೊಂದು ಪತ್ರಿಕೆಯ ಸಂಪಾದಕನಿಗೆ ಎಂದ ಸಚಿವನಿಗೆ ಆಶ್ಚರ್ಯ ಕಾದಿತ್ತು. ಎರಡೂ ಪತ್ರಿಕೆಯ ಸಂಪಾದಕ ಒಬ್ಬನೇ ಆಗಿದ್ದ !!!!!




ನನಗೆ ಪ್ರಸ್ತುತ ಈ ಕಥೆ ಮನಸ್ಸಿಗೆ ಬಂದದ್ದು 'ವೈಚಾರಿಕ ಬದ್ದತೆ'ಯ ವಿಚಾರದ ಬಗ್ಗೆ ಯೋಚಿಸುತ್ತಿರುವಾಗ.ಇಲ್ಲಿ ಸಂಪಾದಕನ ಬದ್ದತೆ ವಿಚಾರಕ್ಕೋ ಅಥವಾ ವ್ಯಾಪರಕ್ಕೋ ? ಇಲ್ಲಿ ಬಹುಶಃ ಈ ಸಂಪಾದಕನ ಉದ್ದೇಶ ತನ್ನ ಪ್ರತಿಭೆಯ ಕಾರಣದಿಂದ ವ್ಯಾಪಾರವಷ್ಟೇ ಇರಬಹುದು.

ನನ್ನೊಬ್ಬ ಬಹಳ ಒಳ್ಳೆಯ ಸ್ನೇಹಿತನೂ ಇದೇ ಸಮಯದಲ್ಲಿ ನೆನಪಿಗೆ ಬಂದ. ಅವನು ಬಹಳ ಒಳ್ಳೆಯ ವಾಗ್ಮಿ. ಸಾಮಾನ್ಯರಿಗಿಂತ ವೈಚಾರಿಕವಾಗೂ ಸಾಕಷ್ಟು ತಿಳಿದುಕೊಂಡವನು. ಅವನ ಇನ್ನೊಂದು ವಿಶೇಷ ವೆಂದರೆ ಯಾವುದೇ ವಿಷಯದ ಕುರಿತಾಗಿ ಪರವಾಗಿಯೂ ಅಥವಾ ವಿರೋಧವಾಗಿಯೂ ಅಷ್ಟೇ ಚೆನ್ನಾಗಿ ಮಾತಾಡಬಲ್ಲ ವಾಗ್ಮಿ. ಹೀಗಿರುವಾಗ ಇಲ್ಲಿ ಅವನ ಬಧ್ಧತೆ ಯಾವ ವಿಚಾರದ ಕಡೆಗೆ ಎಂಬ ಪ್ರಶ್ನೆ ಬಂದಾಗ ಅನುಮಾನ ಎದುರಾಗುತ್ತದೆ. ಇಂತಹ ಸಮಯಗಳಲ್ಲಿ ನಮ್ಮ ಬದ್ದತೆ ವಿಚಾರಕ್ಕೋ ಅಥವಾ ನಮ್ಮ ಸಾಮರ್ಥ್ಯಕ್ಕೋ?

ಯಾಕೆಂದರೆ ಒಮ್ಮೊಮ್ಮೆ ನಮ್ಮ ಬಂಧುಗಳೋ ಅಥವಾ ನಮಗೆ ಹತ್ತಿರದವರೋ ತಪ್ಪು ಮಾಡಿದರೆ ನಾವು ಅದರ ಸಮರ್ಥನೆಗೇ ಹೋಗಿಬಿಡುತ್ತೇವೆ. ಆದರೆ ಅದೇ ತಪ್ಪನ್ನು ಪಕ್ಕದಮನೆಯವರು ಮಾಡಿಬಿಟ್ಟರೆ ಅವರನ್ನು ಜೈಲಿಗೇ ಅಟ್ಟುವಂತೆ ಆಗ್ರಹಿಸುತ್ತೇವೆ. ನಮ್ಮ ಮಗ ಮಾಡಿದ ಸಣ್ಣ ಕಳ್ಳತನ 'ಮಗು ಮಾಡಿದ್ದು'!!! ಪಕ್ಕದ ಮನೆಯ ಹುಡುಗ ಮಾಡಿದ ಕಳ್ಳತನ 'ಬೆಳೆಯುವ ಸಿರಿ ಮೊಳಕೆಯಲ್ಲಿ'...!!!!

ಎಷ್ಟು ಅಸಹ್ಯ ಆಲ್ವಾ ಈ ನಮ್ಮ ಸ್ವಜನ ಪಕ್ಷಪಾತದಂತಹ ನಡವಳಿಕೆ ? ಈ ಕಾರಣದಿಂದ ಹಣವಿರುವವರು, ರಾಜಕೀಯ ಶಕ್ತಿಗಳು ತಮ್ಮ ತಮ್ಮ ಆಟಗಳನ್ನು ಸಮಾಜದಲ್ಲಿ ಆಡುತ್ತಲೇ ಬಂದಿದ್ದಾರೆ. ನಾವೂ ಸಾಕಷ್ಟು ಬಾರಿ ಅವುಗಳಿಂದಲೇ ಸ್ವಾರ್ಥಾನುಕೂಲವನ್ನು ಪಡೆಯುತ್ತಲೇ ಬಂದಿದ್ದೇವೆ...
ಕರ್ನಾಟಕದ ಹಲವಾರು ಕಡೆ ನ್ಯಾಯಾಲಯದ ಆದೇಶದ ಮೇರೆಗೆ ಅನಧಿಕೃತ ಧಾರ್ಮಿಕ ಕಟ್ಟಡಗಳನ್ನು ತೆರವುಗೊಳಿಸುವ ವಿಚಾರವಾಗಿ ಹಲವಾರು ಪ್ರತಿಭಟನೆಗಳು ನಡೆದಿವೆ. ಶ್ರಧ್ಧಾ ಭಕ್ತಿಗಳ ಸಂಕೇತವಾದ ಮಂದಿರಗಳನ್ನ ತೆರವುಗೊಳಿಸುವುದು ಅಷ್ಟು ಸಮಂಜಸವಲ್ಲವೆನ್ನುದು ಅಕ್ಷರಶಃ ಸತ್ಯ. ಅದನ್ನು ಅಲ್ಲಗೆಳೆಯುವ ಮಾತೆ ಇಲ್ಲ. ಆದರೆ ಒಂದು ಕಡೆ ತೆರವುಗೊಳಿಸುವುದನ್ನು ಖಂಡಿಸುವ , ಪ್ರತಿಭಟಿಸುವ ನಾಯಕರೇ ಮಗದೊಂದು ಕಡೆ ತಮ್ಮ ಸ್ವಾರ್ಥಕ್ಕೋಸರ ಅಥವಾ ರಾಜಕೀಯ ದುರುದ್ದೇಶಗಳಿಗೋಸ್ಕರ ಅಭಿವೃದ್ಧಿಯ ನೆಪವನ್ನೊಡ್ಡಿ ದೇವಸ್ಥಾನಗಳನ್ನ ನೆಲಸಮ ಮಾಡುವ 'ಆಸಕ್ತಿ'ಯನ್ನು ಹೊಂದಿರುವುದನ್ನು ನೋಡಿ, ಹೇಳಬೇಕಾದವರು ಸುಮ್ಮನಿದ್ದಾರೆ. ಸುಮ್ಮನಿರಬೇಕಾದವರು 'ತಾನು ಮಾಡಿದ್ದೆ ಸರಿ' ಎಂಬ ಧೋರಣೆಯಲ್ಲಿ 'ಮುನ್ನಡೆ'ಯುತ್ತಿದ್ದಾರೆ ಎಂಬ ದುಃಖದಲ್ಲಿ 'ನಮ್ಮ ಬದ್ಧತೆ ವಿಚಾರಕ್ಕೋ, ವ್ಯಕ್ತಿಗೋ, ಸ್ವಾರ್ಥಕ್ಕೋ?' ಎಂಬ ಪ್ರಶ್ನೆ ಹಾಗೆ ಬಂದು

ಕುರುಡು ಕಾಂಚಾಣ ಬಳಿಯಿರದ ನಾವು
ಅಧಿಕಾರ ಬಲವಾ ಪಡೆಯದವರು ನಾವು
ಜನಬಲವನಂತೂ ಅರಿಯದವರು ನಾವು
ಯಾವುದನು ತಾನೇ ಎದುರಿಸಲು ಸಾಧ್ಯ?

ಎದುರಿಸಿದರಂತೂ ಮುಗಿಯಿತು ಕಥೆ
ಇದೆ ತಾನೇ ನಮ್ಮ ಕೈಲಾಗದವರ ವ್ಯಥೆ....

ಎಂಬ ನಾನೇ ಬರೆದ ಸಾಲುಗಳ ನೆನಪಾಗಿ, ಎಲ್ಲ ಆಲೋಚನೆಗಳೂ ಹಾಗೆ ವಾಪಸ್ ಹೋಯಿತು.

ಸೈದ್ಧಾಂತಿಕ ಸಂಸ್ಕಾರದ ಕಾರಣಕ್ಕೆ ರಾಜಕೀಯಕ್ಕೆ ಕಾಲಿಟ್ಟವರೂ ಸಹ ಭ್ರಷ್ಟಾಚಾರದಲ್ಲಿ, ಸುಳ್ಳು ಹೇಳುವಲ್ಲಿ, ಅಕ್ರಮ ಆಸ್ತಿ ಮಾಡಿಕೊಳ್ಳುವಲ್ಲಿ, ಸ್ವಜನಪಕ್ಷಪಾತದಲ್ಲಿ ನಿರತರಾಗಿದ್ದಾರೆ. ಅದಕ್ಕೆ ಉತ್ತರವಾಗಿ, 'ಎಲ್ಲ ಬಿಟ್ಟವರಂತೆ', ಇತರ ಪಕ್ಷಗಳ ನಾಯಕರೂ ಮಾಡಿದ್ದಾರೆ ಎಂಬ ಬೇಜವಾಬ್ದಾರಿತನದ ಉತ್ತರ ಕೊಡುತ್ತಾರೆ. ಛೆ ಇವರೂ ಮನುಷ್ಯರಾ? ಹೇಳುವುದು ಸುಲಭ, ಆದರೆ ರಾಜಕೀಯ ಕ್ಷೇತ್ರದಲ್ಲಿ ಸರಿಯಿರುವುದು ಸುಲಭದ ಮಾತಲ್ಲ ಎನ್ನುವುದು ನಮ್ಮ ನಾಯಕರಿಗೆ ಅಭ್ಯಾಸವಾಗಿ ಬಿಟ್ಟಿದೆ. ಅದನ್ನೇ ದುರುಪಯೋಗ ಮಾಡಿಕೊಂಡು ಭ್ರಷ್ಟಾಚಾರದಲ್ಲಿ ಆಗ್ರಹಪೂರ್ವಕವಾಗಿ ನಿರತರಾಗಿದ್ದಾರೆ. ಎಷ್ಟು ಅಸಹ್ಯ ಆಲ್ವಾ? ಮಾಡಿದ ಅನ್ಯಾಯಗಳನ್ನ ಸಮರ್ಥನೆ ಮಾಡಿಕೊಳ್ಳುವ ಮಟ್ಟಕ್ಕೆ ರಾಜಕೀಯ ನಾಯಕರು ಹೋಗುತ್ತಾರೆ ಎಂದರೆ ಈ ವ್ಯವಸ್ಥೆ ನಮಗೆ ಬೇಕಾ ಎಂಬ ಪ್ರಶ್ನೆಯೂ ಉದ್ಭವವಾಗುತ್ತದೆ. ಆದರೆ ಕಮ್ಯುನಿಸ್ಟ್ ವ್ಯವಸ್ಥೆಗೆ ಹೋಲಿಸಿಕೊಂಡರೆ ನಮ್ಮ ಪ್ರಜಾಪ್ರಭುತ್ವ ಎಷ್ಟೋ ವಾಸಿ ಎಂಬ ಸಮಾಧಾನ ಪಟ್ಟು ಕೊಳ್ಳ ಬೇಕಾಗುತ್ತದೆ.

ನಮ್ಮ ನಾಯಕರಲ್ಲಿ ಒಳ್ಳೆಯ ಕೆಲಸಗಳನ್ನು ಮಾಡುವ ಸಲುವಾಗಿ ಸ್ಪರ್ಧೆ ಏರ್ಪಡಬೇಕು. ಅದನ್ನು ಬಿಟ್ಟು ಭ್ರಷ್ಟಾಚಾರ ದಲ್ಲೇ ಸ್ಪರ್ಧೆ ಏರ್ಪಟ್ಟಿರುವುದು ವಿಪರ್ಯಾಸ. ಹಣಬಲ, ಜನಬಲ, ಅಧಿಕಾರಬಲ ಎಲ್ಲವೂ ಒಬ್ಬರ ಬಳಿಯಲ್ಲೇ ಶೇಖರವಾಗುವುದೂ ಆ ಭಗವಂತನ ಸೃಷ್ಟಿಯ ವಿಪರ್ಯಾಸ. ಎಲ್ಲವನ್ನು ಅವನ ಮೇಲೆ ಹಾಕಿ ನಾವು ಆತ್ಮಸಾಕ್ಷಿಯ ವಿರುದ್ಧವಾಗಿ ನಡೆಯದೇ ಇರುವುದೇ ನಮ್ಮ ಕರ್ತವ್ಯವಾಗಿದೆ. ಹಾಗು ಅದೇ ಸವಾಲಾಗಿದೆ ಕೂಡ.

No comments:

Post a Comment