Dec 1, 2011

ಮತ್ತೂರು ವಿಜಯದಶಮಿ ಬೌದ್ಧಿಕ್ : ಭಾಗ - ೪

ಒಮ್ಮೆ ಒಂದು ಘೋಷ್ ವರ್ಗ ನಡೀತಿತ್ತು. ಅವಾಗ ಒಬ್ಬ ಘೋಷ್ ಶಿಕ್ಷಕ, ಒಬ್ಬ ಘೋಷ್ ಶಿಕ್ಷಾರ್ಥಿ ಅಪ್ಪಾಜಿ ಜೋಶಿಯವರೊಡನೆ ಹೋಗ್ತಾ ಇದ್ದರು. ಆಗ ಡಾಕ್ಟರ್ ಜಿ ಆ ಘೋಷ್ ಶಿಕ್ಷಕ ಮತ್ತು ಶಿಕ್ಷಾರ್ಥಿಯವರ ಮಧ್ಯೆ ನಡೆದು ಹೋದರು. ಆಗ ಘೋಷ್ ಶಿಕ್ಷಕ 'ಡಾಕ್ಟರ್ ಜಿ ಹಾಗೆ ಮಧ್ಯೆ ಹೋಗಬಾರದು. ಪಕ್ಕದಲ್ಲಿ ಹೋಗಬಹುದು' ಅಂತ ಹೇಳಿದ. ಆ ನಂತರ ಅಪ್ಪಾಜಿ ಜೋಷಿ ಡಾಕ್ಟರ್ ಜಿಯವರಿಗೆ ಕೇಳಿದರು 'ನೀವು ಬೇಕು ಅಂತಲೇ ಹಾಗೆ ನಡೆದುಕೊಂಡಿರಲ್ಲವೇ?, ಯಾಕೆ?' ಅಂತ ಕೇಳಿದಾಗ ಅದಕ್ಕೆ ಡಾಕ್ಟರ್ ಜಿ 'ಸಂಘದ ಸ್ವಯಂಸೇವಕ ನನಗೆ ತಲೆಬಾಗುತ್ತಾನೋ ಅಥವಾ ಸಂಘದ ನಿಯಮಗಳಿಗೆ ತಲೆಬಾಗುತ್ತಾನೋ ಅನ್ನೋದನ್ನ ತಿಳಿದುಕೊಳ್ಳಲು. ಅವನು ಸರಿ ಮಾಡಿದ.' ಅಂತ ಅಪ್ಪಾಜಿಯವರಿಗೆ ಹೇಳಿದರು.

ಇನ್ನೊಮ್ಮೆ ವರ್ಗದ ಬೈಠಕ್ ನಲ್ಲಿ ಡಾಕ್ಟರ್ ಜಿ 'ನಾನು ಡಾಕ್ಟರ ಕೇಶವ ಬಲಿರಾಮ ಹೆಡಗೆವಾರ್ ಹೇಳ್ತಾ ಇದ್ದೀನಿ ಇದು ಹಿಂದೂ ರಾಷ್ಟ್ರ ಅಲ್ಲ' ಅಂತ ಹೇಳಿದಾಗ ಎಲ್ಲರಿಗೂ ಆಶ್ಚರ್ಯ .! ತುಂಬಾ ಜನ 'ಅದು ಸಾಧ್ಯ ಇಲ್ಲ' ಅಂತ ಅಂದ್ರು. 'ಅದಿರಲಿ, ಇದಕ್ಕೆ ನಿಮ್ಮಗಳ ಉತ್ತರ ಏನು?' ಅಂತ ಡಾಕ್ಟ ರ್ ಜಿ ಕೇಳಿದ್ದಕ್ಕೆ 'ಆಗ ಡಾಕ್ಟರ್ ಜಿ ಸರಸಂಘಚಾಲಕರಾಗಿರೋದಿಲ್ಲ' ಅಂತ ಉತ್ತರ ಕೊಟ್ರು. ಅಂದ್ರೆ ಡಾಕ್ಟರ್ ಜಿ ಯವರಿಗೆ ಸ್ವಯಂಸೇವಕರು ತನ್ನನ್ನು ನಿಷ್ಠೆಯಿಂದ ನೋಡಬೇಕು ಅಂತ ಇರಲಿಲ್ಲ, ಸಂಘವನ್ನ ನಿಷ್ಠೆಯಿಂದ ನೋಡಬೇಕು ಅಂತ ಇತ್ತು. ಸಂಘದ ವಿಚಾರವನ್ನ, ಗುರಿಯನ್ನ, ನಿಷ್ಠೆಯಿಂದ ಅನುಸರಣೆ ಮಾಡಬೇಕು ಅಂತ ಇತ್ತು. ತುಂಬಾ ಸಂದರ್ಭದಲ್ಲಿ ಮನುಷ್ಯ ಇಲ್ಲೇ ಎಡವುವಂಥದ್ದು. ಸಂಘಕ್ಕೆ ಬರುವುದಕ್ಕೆ ಯಾರೋ ಒಬ್ಬರು ಸ್ನೇಹಿತರು ಕಾರಣರಾಗಬಹುದು. ಆದರೆ ಇಲ್ಲಿ ಉಳಿಯಬೇಕಾದರೆ ಸಂಘದ ನಿಷ್ಠೆಯನ್ನೇ ಉಳಿಸಿಕೊಳ್ಳಬೇಕಾದ್ದು. ಇದನ್ನ ಹೆಜ್ಜೆಹೆಜ್ಜೆನಲ್ಲಿ ಡಾಕ್ಟರ್ ಜಿ ಕಲಿಸ್ತಾ ಇದ್ರು.

ಪ್ರತ್ಯಕ್ಷ ಡಾಕ್ಟರ್ ಜಿ ಬಗ್ಗೆ ತುಂಬಾ ಜನಕ್ಕೆ ಡಾಕ್ಟರ್ ಜಿ ತುಂಬಾ ದೊಡ್ಡವರು ಅಂತ ಅನ್ನಿಸ್ತಾನೇ ಇರ್ಲಿಲ್ಲ. ಅಂದ್ರೆ ತಮಗಿಂತ ೨ ಹೆಜ್ಜೆ ಮುಂದಿರಬಹುದು, ನಾವು ೨ ಹೆಜ್ಜೆ ಮುಂದಿಟ್ರೆ ನಾವು ಡಾಕ್ಟರ್ ಜಿ ಜೊತೆ ಅಂತ ಯೋಚಿಸ್ತಾ ಇದ್ರು. ಆದ್ರೆ ತಾವು ೨ ಹೆಜ್ಜೆ ಇಡುವ ಹೊತ್ತಿಗೆ ಡಾಕ್ಟರ್ ಜಿ ಇನ್ ೨ ಹೆಜ್ಜೆ ಮುಂದೆ ಇಡ್ತಾ ಇದ್ರು. ನೋಡಕ್ಕೆ ೨ ಹೆಜ್ಜೆ ಮಾತ್ರ ಮುಂದಿದ್ರೂ ಮನಸ್ಸಿನಲ್ಲಿ ೫೦ ಹೆಜ್ಜೆ ಮುಂದೆ ಇರ್ತಾ ಇದ್ರು ಅಂತ. ಆದ್ರೆ ನೋಡುವವರಿಗೆ ಅವರು ೨ ಹೆಜ್ಜೆ ಮಾತ್ರ ಮುಂದಿದಾರೆ ಅಂತ ಅನ್ನಿಸ್ತಾ ಇತ್ತು. ಸಂಘದ ವಿಶೇಷತೆ ಅಂದ್ರೆ ಇದೇ.

ಸಾಮಾನ್ಯವಾಗಿ ವ್ಯಕ್ತಿಗತ ಪವಾಡಗಳಿಗೆ ಮನುಷ್ಯ ಬೇಗ ಮಾರುಹೋಗ್ತಾನೆ. ಸತ್ತು ಹೋದ ಪಾರಿವಾಳಕ್ಕೆ ಯಾವನೋ ಒಬ್ಬ ಜೀವ ಬರಿಸಿದ ಅಂದ್ರೆ ನಾವು ಬಹಳ ಆಶ್ಚರ್ಯ ಪಡ್ತೇವೆ. ಯಾರಾದ್ರೂ ಕೃತಕ ಹೂವಿಗೆ ವಾಸನೆ ಬರಿಸಿದ್ರು ಅಂದ್ರೆ ಕಣ್ ಕಣ್ ಬಿಡ್ತೇವೆ. ಆದರೆ ಸಂಘ ಮಾಡಿರುವ ಪವಾಡ ಇದೆಯಲ್ಲ, ಇಷ್ಟು ಜನರನ್ನ 'ದೇಶಭಕ್ತ'ರನ್ನಾಗಿ ಮಾಡಿರುವುದಿದೆಯಲ್ಲ, ಇಷ್ಟು ಜನರನ್ನ 'ಈ ದೇಶಕ್ಕೆ ನಿಷ್ಠೆಯಿಂದಿರುವಂತೆ' ಮಾಡಿರುವುದಿದೆಯಲ್ಲ ಇಂಥ ಪವಾಡವನ್ನ ಜಗತ್ತಿನಲ್ಲಿ ಯಾರೂ ಮಾಡಲು ಸಾಧ್ಯ ಇಲ್ಲ.

ಹಾಗಾಗಿ ಸ್ವಯಂಸೇವಕರು ಹೊರಗಡೆ ಪ್ರಪಂಚದ ಪವಾಡಗಳಿಗೆ ಮರುಳಾಗದೆ ನಾವು ಸಂಘದ ಪವಾಡವನ್ನೇ ತೆರೆದ ದೃಷ್ಟಿಯಿಂದ ನೋಡುವುದರಿಂದ ಸಂಘ ಕಾರ್ಯದಲ್ಲಿ ಉಳಿಯಲು ಸಾಧ್ಯವಾಗುತ್ತೆ. ಸಂಘದ ವಿಶೇಷತೆಗಳನ್ನ ಆಗಾಗ್ಗೆ ಮೆಲುಕು ಹಾಕುತ್ತಾ, ಸಂಘದ ಹಿರಿಯರು ಹೇಳಿದ ವಿಚಾರಗಳನ್ನ ಆಗಾಗ್ಗೆ ಚಿಂತಿಸುತ್ತಾ, ಸಂಘದ ಜೊತೆ ನಿರಂತರ ಸಂಪರ್ಕ ಇಟ್ಟುಕೊಳ್ಳುವ ಮೂಲಕ, ನಾವು ಜೀವನಪೂರ 'ಸ್ವಯಂಸೇವಕ'ರು ಎಂಬ ಮಾನಸಿಕತೆಯನ್ನ ಬೆಳೆಸಿಕೊಳ್ಳೋಣ.


( ಮುಗಿಯಿತು)

No comments:

Post a Comment