ಎಲ್ಲರಿಗೂ ಗೊತ್ತಿರುವಂತೆ ಶಿವಮೊಗ್ಗ - ಬೆಂಗಳೂರು ರೈಲಿಗೆ ಕಾಯ್ದಿರಿಸಿದ ಟಿಕೆಟ್ ಸಿಗುವುದು ಬಹಳ ಕಷ್ಟ. ವಿಶೇಷವಾಗಿ, ಶುಕ್ರವಾರ ರಾತ್ರಿ ಬೆಂಗಳೂರಿನಿಂದ ಹಾಗು ಭಾನುವಾರ ರಾತ್ರಿ ಶಿವಮೊಗ್ಗದಿಂದ. ಕನಿಷ್ಠ 45-50 ದಿನಗಳ ಮುಂಚೆಯೇ ಟಿಕೆಟನ್ನು ಕಾಯ್ದಿರಿಸಬೇಕು. ಇಂಥಹ ಪರಿಸ್ಥಿತಿಯಲ್ಲಿ ನಾನು ಮಾಡಿದ ತಪ್ಪು ಒಂದು 'ಅದ್ಭುತ ಪಾಠ'..!
ಫೆಬ್ರವರಿಯ ಒಂದು ವಾರಾಂತ್ಯ ಊರಿಗೆ ಹೋಗಬೇಕಾಯಿತು. ಹೋಗಬೇಕು ಎಂದು ಬಹಳ ತಡವಾಗಿ ನಿರ್ಧರಿಸಿದ ತಪ್ಪಿಗೆ (ಸುಮಾರು 3 ವಾರಗಳ ಮೊದಲು, ಅಷ್ಟೇ) ರೈಲಿಗೆ ಟಿಕೆಟ್ ಸಿಗುವ ಅವಕಾಶ ಅಸಾಧ್ಯವಾಯಿತು. ಇದೇ ಸಮಯದಲ್ಲಿ ಒಂದು ಉಪಾಯ ಹೊಳೆಯಿತು. ಶಿವಮೊಗ್ಗದಿಂದ ಬೆಂಗಳೂರಿಗೆ ಇರುವ ಸೀಟುಗಳು ಖಾಲಿಯಗಿದ್ದರೂ ಬೀರೂರಿನಿಂದ ಅದರದ್ದೇ ಆದ ಇನ್ನೊಂದು ಖೋಟಾ ಇರುತ್ತದೆ ಎಂದು ನೋಡಿದರೆ ಆ 6 - 8 ಸೀಟುಗಳೂ ನಮ್ಮ ಪಾಲಿಗೆ ಖಾಲಿಯಾಗಿದ್ದವು. ಮತ್ತದೇ ಬೇಸರದಿಂದ ಬೇರೆ ಇನ್ಯಾವ ಬೀರೂರು - ಬೆಂಗಳೂರು ರೈಲಿನಲ್ಲಿ ಸೀಟುಗಳಿವೆ ಎಂದು ಹುಡುಕಿದ್ದಕ್ಕೆ ಅದೃಷ್ಟವಶಾತ್ ರಾತ್ರಿ 12.10 (00.10) ಕ್ಕೆ ಹೊರಡುವ ಒಂದು ರೈಲಿನಲ್ಲಿ 15 ಸೀಟುಗಳಿದ್ದವು. ದೇವರೇ, ಎಂದು 2 ಸೀಟುಗಳನ್ನು ಬುಕ್ ಮಾಡಿದೆ, ನನ್ನ ಆರ್ಧಾಂಗಿಗೂ ಸೇರಿಸಿ.
ಪ್ರಯಾಣದ ದಿನ ಬಂದೇ ಬಿಟ್ಟಿತು. ನಾನು ಶಿವಮೊಗ್ಗ - ಬೆಂಗಳೂರು ರೈಲಿಗೇ ಬೀರೂರಿನಿಂದ ಟಿಕೆಟನ್ನು ಕಾಯ್ದಿರಿಸಿದ್ದೇನೆ ಎಂದು ತಿಳಿದು ಶಿವಮೊಗ್ಗದಿಂದ ಬೀರೂರಿಗೆ ಸಾಮಾನ್ಯ ಟಿಕೆಟನ್ನು ಸಹ ತೆಗೆದುಕೊಂಡು ಬಂದೆ. ರೈಲು ಸಹ ಬಂದೇ ಬಿಟ್ಟಿತು. ಯಾವ ಭೋಗಿ ಎಂದು ತಿಳಿಯಲು ಐ-ಟಿಕೆಟ್ ನ SMS ನೋಡಿದರೆ S8 ಎಂದು ಭೋಗಿಯ ಹೆಸರಿತ್ತು..! ಬರೀ S7 ರವರೆಗೆ ಇದ್ದ ಭೋಗಿಗಳು S8 ಯಾವಾಗಾಗಿದ್ದು ಎಂದು ಬರುತ್ತಿರುವ ರೈಲನ್ನು ಮುಂದಿಟ್ಟುಕೊಂಡು ಗಾಬರಿಯಿಂದ ಯೋಚಿಸುತ್ತಿರುವಾಗಲೇ, ರೈಲು ಸಂಖ್ಯೆಯನ್ನು ನೋಡಿದಾಗ ಹೊಳೆಯಿತು ಬೀರೂರಿನಿಂದ ಬೇರೆ ರೈಲಿಗೆ ಮಾಡಿಸಿದ್ದೇನೆ ಎಂದು. ಸ್ವಲ್ಪ ಸಮಾಧಾನದಿಂದ ಯಾವುದೊ ಒಂದು ಭೋಗಿಯನ್ನು ಹತ್ತಿ ನಿಂತೆವು. ಪೋಲಿಸಿನವರು ಬಂದಾಗ ಇರುವ ವಿಷಯವನ್ನು ಹೇಳಿ ಬೀರೂರಿನವರೆಗೆ ಪ್ರಯಾಣಿಸಲು ಅವಕಾಶ ಕೇಳಿದೆವು. ಅವರೂ ನಮ್ಮನ್ನು ನಂಬಿ 'ಪರವಾಗಿಲ್ಲ, ಕುಳಿತುಕೊಳ್ಳಿ' ಎಂದು ಸಿಂಗಲ್ ಸೀಟು ಇರುವಲ್ಲಿಗೆ ಕರೆದುಕೊಂಡು ಹೋಗಿ ಕೂರಲು ಹೇಳಿ ಸೌಜನ್ಯ ಮೆರೆದರು. ನಾವೂ ಹಾಗೇ ಮಾತನಾಡುತ್ತ ಬೀರೂರನ್ನು ತಲುಪಿದೆವು.
ಸರಿಸುಮಾರು 11.45ಕ್ಕೆ ತಲುಪಿದ ನಾವು 12ರ ಸುಮಾರಿಗೆ ಬರಬೇಕಾಗಿದ್ದ ರೈಲಿಗೆ ಕಾಯಲು ಕೂತೆವು. ನಮ್ಮ ದುರಾದೃಷ್ಟವೋ, ಅದೃಷ್ಟವೋ ಗೊತ್ತಿಲ್ಲ, ಒಂದು ಗಂಟೆ ತಡವಾಗಿ, ಅಂದರೆ 1.10 ರ ಹೊತ್ತಿಗೆ ರೈಲು ಬಂತು. ನಾವು S8 ಭೋಗಿಗೆ ಹತ್ತಿ ನೋಡಿದರೆ ನಮ್ಮ ಸೀಟಿನಲ್ಲಿ ಯಾರೋ ಮಲಗಿದ್ದರು! ಸ್ವಲ್ಪ ಅಳುಕು, ಗಾಬರಿಯಿಂದ ಅವರನ್ನು ಎಬ್ಬಿಸಲು ಹೋಗಲು ಪಕ್ಕದವರೊಬ್ಬರು 'ಪ್ರಯಾಣದ ದಿನಾಂಕ ನೋಡಿ ಸರ್' ಎಂದರು. ಅದು ಭಾನುವಾರದ ಟಿಕೆಟ್ ಆಗಿತ್ತು. ಆದರೆ ರೈಲು ಬೀರೂರಿನಿಂದ ಹೊರಡುವ ಸಮಯ 00.10 (12.10) ಆಗಿದ್ದರಿಂದ ಅದಾಗಲೇ ಸೋಮವಾರ ಬಂದಾಗಿತ್ತು, ಟಿಕೆಟ್ ಇದ್ದುದು ಭಾನುವಾರಕ್ಕೆ, ಅಂದರೆ ಹಿಂದಿನ ದಿನದ ಟಿಕೆಟ್ ನಲ್ಲಿ ನಾವು ಪ್ರಯಾಣ ಮಾಡುವವರಿದ್ದೆವು...! ಮತ್ತೊಮ್ಮೆ ತಲೆ ಮೇಲೆ ಕೈ ಇಟ್ಟುಕೊಂಡು 'ಈಗೇನು ಮಾಡುವುದು' ಎಂದು ಯೋಚಿಸುತ್ತಿರುವಾಗಲೇ TT ಬಂದೇಬಿಟ್ಟರು. ಅದಾಗಲೇ 'ಟೈಟಾ'ಗಿದ್ದ ಅವರನ್ನು ಬಿಟ್ಟು ಪೋಲಿಸಿನವರನ್ನು ಹಿಡಿದು ಪರಿಸ್ಥಿತಿಯನ್ನು ವಿವರಿಸಿ ಸಹಾಯ ಮಾಡಲು ಕೇಳಿದೆವು. ಕೊನೆಗೊ ಕೆಲ ಸಮಯದ ನಂತರ ಒಂದು ಸೀಟ್ ಕೊಟ್ಟರು. ನಾವು ಎಷ್ಟು ದುಡ್ಡು ಕೇಳುತ್ತಾರೋ ಎಂದು ಭಯ ಪಡುತ್ತಿದ್ದೆವು. ನೆನ್ನೆಯ ಟಿಕೆಟ್ ಗೆ TDR ಸಹ ಅನ್ವಯವಾಗುವುದಿಲ್ಲವಲ್ಲ ಎಂದೂ ಮನಸಿನಲ್ಲಿತ್ತು. ದುಡ್ಡು ಎಷ್ಟು ಕೊಡಬೇಕು ಎಂದು ಪೊಲೀಸಿನವರನ್ನು ಕೇಳಿದರೆ TT ಯವರಿಗೇ ಕೇಳಬೇಕು ಎನ್ನುತ್ತಿದ್ದರು. ಎಷ್ಟು ಸುಮಾರು 40 ನಿಮಿಷಗಳ ಕಾದರೂ TT ಬರಲಿಲ್ಲ, ನಮಗೂ ನಿದ್ದೆ ಬಂದು ಮಲಗಿದೆವು.
ಎದ್ದಾಗ ಬೆಂಗಳೂರು ತಲುಪಿದ್ದೆವು. TT ಬಂದು ದುಡ್ಡನ್ನು ಕೇಳಲೇ ಇಲ್ಲ. ಹಿಂದಿನ ದಿನದ ಟಿಕೆಟ್ ನಲ್ಲಿ ಪ್ರಯಾಣ ಮಾಡಿದಂತಾಗಿತ್ತು :) :) :)
No comments:
Post a Comment