ಪ್ರಸಂಗ 2 :
ಇದೇ ಪ್ರವಾಸದ ಕೊನೆಯ ದಿನ ನಾನು ಹೊರಡುವಾಗ ಏರ್ಪೋರ್ಟ್ ಗೆ ಹೋಗಲು ವ್ಯಾನ್ (shared van) ಬುಕ್ ಮಾಡಿದ್ದರು ನನ್ನ ಸ್ನೇಹಿತರು. ಹೊರಡುವಾಗ 'ನಿನ್ನನ್ನು ತಲುಪಿಸುವ ದರವನ್ನು ಆಗಲೇ ನೀಡಿದ್ದೇನೆ. ಏರ್ಪೋರ್ಟ್ ತಲುಪಿಸಿದ ಮೇಲೆ 4-5 ಡಾಲರ್ ಟಿಪ್ಸ್ ಕೊಡು ಸಾಕು ಅವನಿಗೆ' ಎಂದು ಹೇಳಿದರು. ಈ ಅಮೇರಿಕಾದಲ್ಲಿ ಸಾಕಷ್ಟು ಬೇಸರಿಸುವ ವಿಷಯ, ನನಗೆ ಅಷ್ಟು ಸುಲಭವಾಗಿ ಕೊಡಲಾಗದ್ದು, ಈ 'ಟಿಪ್ಸ್'. ಒಂದು ಮಾದರಿಯ ಅಘೋಷಿತ ನಿಯಮ ಈ ಟಿಪ್ಸ್ ಕೊಡುವುದು. ಬೆಳಿಗ್ಗೆ 4.30ರ ಸುಮಾರಿಗೆ ಬಂದ ಅವನು ಅಲ್ಲಿಂದ 70 ಮೈಲುಗಳಷ್ಟು ದೂರವಿದ್ದ ಲಾಸ್ ಏಂಜಲಿಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ 5.30 - 6 ರ ಸುಮಾರಿಗೆ ನನ್ನನ್ನು ತಲುಪಿಸಿದ. ನಾನೂ ಇಳಿದು 4 ಡಾಲರ್ ಗಳನ್ನು ನೀಡಲು ಹೋದರೆ '70 ಮೈಲುಗಳಷ್ಟು ದೂರಕ್ಕೆ 4 ಡಾಲರ್ ಟಿಪ್ಸಾ ಎಂದು ಕೋಪಿಸಿಕೊಂಡು, 'ನನಗೆ ಬೇಡ' ಎಂದು ಹೊರಡಲು ರೆಡಿ ಆದ. ನಾನು ಇನ್ನೊಂದು ಡಾಲರನ್ನೂ ಸೇರಿಸಿ 5 ಡಾಲರ್ ಕೊಡಲು 'ಏತಕ್ಕಾಗಿ ಹೀಗೆ, ಕಡಿಮೆ ಆಯ್ತಾ ಅಥವಾ ಎಷ್ಟು ನಿನ್ನ ಅಪೇಕ್ಷೆ' ಎಂದೆ. ಅದಕ್ಕವನು ಅದೇ ಕೊಪದಲ್ಲೇ 'ಏನೂ ಇಲ್ಲ ಬಿಡಿ, ನೀವೇ ಇಟ್ಟುಕೊಳ್ಳಿ ಇದನ್ನೂ' ಎಂದು ಮತ್ತೊಮ್ಮೆ ಹೊರಡಲು ಸಜ್ಜಾದ. ನನಗೂ ಕೋಪ ಬಂತು, 'ಯುವರ್ ವಿಶ್' ಎಂದು ಉತ್ತರಿಸಿ ಎಸ್ಕೇಪ್ ಆದೆ.... :)
ಪ್ರಸಂಗ 3:
ಇದು ಇತ್ತೀಚೆಗಿನ ಪ್ರಸಂಗ. ಕೃಷ್ಣ ಜನ್ಮಾಷ್ಟಮಿಯ ದಿನ ದೇವಸ್ಥಾನಕ್ಕೆ ಹೋಗುವ ಎಂದು ಯೋಚಿಸಿದ್ದೆ. ಆದರೆ ಅಂದೇ ನನ್ನ ಕ್ರಿಕೆಟ್ ಆಟವಿದ್ದುದರಿಂದ ಹಾಗು ದೇವಸ್ಥಾನ ಅಲ್ಲಿಂದ ಸಾಕಷ್ಟು ದೂರ ಇದ್ದುದರಿಂದ ಹೋಗಲಾಗಲಿಲ್ಲ. ಅದೇ ಯೋಚನೆಯಲ್ಲಿದ್ದಾಗ ನನ್ನ ಮೊಬೈಲಿನ ವಾಟ್ಸ್ ಆಪ್ ನಲ್ಲಿ ಒಂದು ಮೆಸೇಜ್ ಬಂತು. ಮುಂದಿನ ವಾರ ಗ್ರಾಂಡ್ ರಾಪಿಡ್ ನ ಒಂದು ಸ್ಥಳದಲ್ಲಿ ಇಸ್ಕಾನ್ ನವರಿಂದ ಕೃಷ್ಣ ಜನ್ಮಾಷ್ಟಮಿ ಪೂಜೆ ಹಾಗು ಪ್ರಸಾದ ವಿನಿಯೋಗವಿರುತ್ತದೆ ಎಂದು. ನನಗೆ ಇಸ್ಕಾನ್ ದೇವಸ್ಥಾನ ಗ್ರಾಂಡ್ ರಾಪಿಡ್ ನಲ್ಲಿದೆ ಎಂದು ತಿಳಿದಿರಲಿಲ್ಲ, ಇರಬಹುದೇನೋ ಎಂದು ನಾನು ಜಿಪಿಎಸ್ ಹಾಕಿ ಹೊರಟೆ. ಅಲ್ಲಿಗೆ ಹೋದರೆ, ಆ ವಿಳಾಸಕ್ಕೆ ನನ್ನ ಜಿಪಿಎಸ್ ಒಂದು ಸಣ್ಣ ಗುಡಿಸಿಲು ತರಹದ ಜಾಗ ತೋರಿಸುತ್ತಿತ್ತು. ಅದೇ ಸ್ಥಳಕ್ಕೆ ಬೇಕಾದ ಪಾರ್ಕಿಂಗ್ ಸ್ಥಳವೂ ಇರಲಿಲ್ಲ. ಅವಾಗ ಅನುಮಾನ ಬಂತು, ಅದು ದೇವಸ್ಥಾನವಾಗಿರಲು ಸಾಧ್ಯವೇ ಇಲ್ಲ ಎಂದು.
ಹತ್ತಿರದಲ್ಲಿ ಬೇರೆ ಯಾವ ಪಬ್ಲಿಕ್ ಪಾರ್ಕಿಂಗ್ ಜಾಗವೂ ಕಾಣಲಿಲ್ಲವಾದ್ದರಿಂದ ಸ್ವಲ್ಪ ಭಯದಿಂದಲೇ ಪಕ್ಕದಲ್ಲಿದ್ದ ಫೈರ್ ಸ್ಟೇಶನ್ ನ ಪಾರ್ಕಿಂಗ್ ನಲ್ಲಿ ಗಾಡಿ ನಿಲ್ಲಿಸಿ ಹೋಗಿ ಮತ್ತೊಮ್ಮೆ ಅದು ದೇವಸ್ಥಾನವಲ್ಲ ಎಂದು ಖಚಿತ ಪಡಿಸಿಕೊಂಡು ವಾಪಸ್ ಹೊರಡುವ ಎಂದು ಬಂದರೆ, ನನ್ನ ಕಾರಿನ ಹಿಂದೆ ಪೋಲೀಸಿನವರ ಕಾರು ನಿಂತಿತ್ತು..! ನನ್ನ ಎದೆ ಡವ ಡವ ಎನ್ನಲು ಶುರು ಮಾಡಿತು. ಕ್ಷಣ ಮಾತ್ರದಲ್ಲಿ ಮುಖದಲ್ಲಿ ಭಯದ ಬೆವರು. ಬಹುಶಃ ನಾನು ಫೈರ್ ಸ್ಟೇಶನ್ ನ ಜಾಗದಲ್ಲಿ ಕಾರನ್ನು ನಿಲ್ಲಿಸಬಾರದಿತ್ತು ಎಂದೆನಿಸುತ್ತದೆ, ಛೆ ನೋ ಪಾರ್ಕಿಂಗ್ ಎಂದೂ ಹಾಕಿಲ್ಲ ಎಂದು ಬೈದುಕೊಳ್ಳುತ್ತಾ, ಅಥವಾ ರಸ್ತೆ ದಾಟಿದ್ದು ತಪ್ಪಿರಬಹುದಾ, ತಿರುವು ತೆಗೆದು ಕೊಳ್ಳಬಾರದಿತ್ತೇನೋ, ಅಥವಾ ವೇಗವಾಗಿ ಬಂದೆನಾ ಅಥವಾ ಸಿಗ್ನಲ್ ಜಂಪ್ ಮಾಡಿರುವ ನೆನಪಿಲ್ಲ ಎಂದೆಲ್ಲ ಆಲೋಚನೆಗಳೊಂದಿಗೆ ತಪ್ಪು ಮಾಡಿದ್ದರೆ ತಪ್ಪಿಸಿಕೊಳ್ಳಲಂತೂ ಸಾಧ್ಯವಿಲ್ಲ ಎಂದೇ ಧೈರ್ಯ ಮಾಡಿ ಬಂದು ನಾನೇ 'ಹೈ , ಹೌ ಆರ್ ಯು ಡೂಯಿಂಗ್ ಟುಡೇ ?' ಎಂದು ಪ್ರಾರಂಭಿಸಿ 'ನಾನು ಏನಾದರೂ ತಪ್ಪು ಮಾಡಿದ್ನಾ?' ಎಂದು ಅವರನ್ನೇ ಕೇಳಿದೆ. ಅದಕ್ಕವರು ಪಕ್ಕದಲ್ಲಿದ್ದ ಇನ್ನೊಂದು ಕಾರನ್ನು ತೋರಿಸಿ 'ನಾವು ಬಂದಿದ್ದು ಆ ಕಾರಿಗಾಗಿ, ಅದರ ಮಾಲೀಕರು ಇವರು, ಕಳುವಾಗಿತ್ತು ಅದು, ಅದನ್ನು ಹುಡುಕುತ್ತಿದ್ದೆವು, ನಿಮ್ಮದೇನು ತಪ್ಪಿಲ್ಲ, ನಿಶ್ಚಿಂತೆಯಿಂದಿರಿ' ಎಂದು ಹೇಳಿದಾಗ ಹೋದ ಪ್ರಾಣ ಬಂದಂತಾಗಿತ್ತು....
ಮನಸ್ಸಿನಲ್ಲೇ ದೇವರಿಗೊಂದು ಕೃತಜ್ಞತೆ ಅರ್ಪಿಸಿ, ಯಾವ ತಪ್ಪನ್ನೂ ಮಾಡಿಸಬೇಡ ಭಗವಂತ ಎಂದು ವಿನಂತಿಸಿ ಮನೆ ಕಡೆಗೆ ಹೊರಟೆ.....
No comments:
Post a Comment