ಅವರು ಮಾಡುವ, ಕ್ಷಮಿಸಿ, ಮಾಡುತ್ತಿದ್ದ ಪಾತ್ರಗಳು ಹಾಗು ಆ ಪಾತ್ರಗಳ ಅವರ ಅಭಿನಯ ಎಂಥವರ ಹೃದಯವನ್ನೂ ಮುಟ್ಟದೇ ಇರಲು ಸಾಧ್ಯವೇ ಇರಲಿಲ್ಲ. ಚಿತ್ರದಲ್ಲಿ ಅವರ ಕಣ್ಣಿನಲ್ಲಿ ನೀರು ಬರುತ್ತಿದ್ದರೆ ನೋಡುವವರ ಕಣ್ಣಿನಲ್ಲೂ ಅತ್ಯಂತ ಸಹಜವಾಗಿಯೇ ನೀರು ಬರುತ್ತಿತ್ತು, ಬರುವಂತೆ ಮಾಡುತ್ತಿತ್ತು ಅವರ ಮನೋಜ್ಞ ಅಭಿನಯ.
ಅವರ ಯಾವ ಚಿತ್ರವೂ ಯಾರ ಮನಸ್ಸಿನ ಮೇಲು ನಕಾರಾತ್ಮಕವಾಗಿ ಪರಿಣಾಮ ಬೀರಲು ಸಾಧ್ಯವಿರಲಿಲ್ಲ. ಆ ರೀತಿಯಲ್ಲಿ ಅವರ ಪಾತ್ರದ ಆಯ್ಕೆ, ಅವರ ಅಭಿನಯವಿರುತ್ತಿತ್ತು.
ಅವರ 'ವೀರಪ್ಪನಾಯ್ಕ' ಚಿತ್ರದ ಅಭಿನಯ ನೋಡುವವರಲ್ಲಿ ದೇಶಭಕ್ತಿಯ ಜಾಗೃತಿಯನ್ನು ಉಂಟುಮಾಡುತ್ತದೆ, ಅವರ 'ಸೂರ್ಯವಂಶ' ಚಿತ್ರ 'ನಮಗೆ ದ್ರೋಹ ಮಾಡಿದವರಿಗೂ ನಾವು ಒಳ್ಳೆಯದೇ ಬಯಸಬೇಕು' ಎಂದು ಆಶಿಸುವಂತೆ ಮಾಡುತ್ತದೆ, ಅವರ 'ಕರ್ಣ' ಚಿತ್ರವಂತೂ ಅದ್ಭುತ ಪ್ರೇರಣೆ ನೀಡುತ್ತದೆ. ಉತ್ತಮ ಸಾಮಾಜಿಕ ಕಳಕಳಿಯೊಂದಿಗೆ ನಿರ್ಮಾಣವಾದ ಅವರ 'ಸಿರಿವಂತ' ಚಿತ್ರ ನೋಡುವವರನ್ನು ಸಮಾಜಕ್ಕೆ ಆಸ್ತಿಯನ್ನಾಗಿ ಮಾಡುವತ್ತ ಪ್ರಾಮಾಣಿಕ ಪ್ರಯತ್ನ ಮಾಡುತ್ತದೆ. ಅತ್ಯಂತ ಹೆಚ್ಚು ಉತ್ತಮ ಚಿತ್ರಗಳಲ್ಲಿ ನಟಿಸಿದವರಲ್ಲಿ ರಾಜಕುಮಾರ್ ಅವರನ್ನು ಹೊರತು ಪಡಿಸಿದರೆ, ನಂತರದ ಸ್ಥಾನ ನಮ್ಮ ವಿಷ್ಣುವರ್ಧನ್. ಆದರೆ ಚಿತ್ರ ನೋಡುವವರ ಸಾಮಾಜಿಕ ಶಿಕ್ಷಣದ ಕಳಕಳಿ ಹೊತ್ತ ಅತ್ಯಂತ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ ನಟರಲ್ಲಿ ವಿಷ್ಣುವರ್ಧನ್ ರವರೇ ಮೊದಲಿಗರು.
ದೇಶದ ಉತ್ತಮ ಪ್ರಜೆಯನ್ನ, ಸಮಾಜದ ಒಳ್ಳೆಯ ವ್ಯಕ್ತಿಯನ್ನ, ಚಿತ್ರರಂಗದ ಅದ್ಭುತ ನಟನನ್ನ, ನಮ್ಮೆಲ್ಲರ ಆಸ್ತಿಯನ್ನ ನಾವು ಕಳೆದುಕೊಂಡಿದ್ದೇವೆ.
ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸೋಣ.
ಇಂತಹ ಸಮಯವನ್ನೂ ಸ್ವಾರ್ಥಕ್ಕಾಗಿ ಬಳಸಿಕೊಳ್ಳುವ, ಸಮಾಜದಲ್ಲಿ ಶಾಂತಿಯನ್ನು ಕದಡುವ ರಾಜಕೀಯ 'ನಾಯಿ'ಗಳಿಗೂ ಆ ಭಗವಂತ ಒಳ್ಳೆ ಬುದ್ಧಿ ಕೊಡಲಿ ಎಂದು ಆ ದೇವರಲ್ಲಿ ಪ್ರಾರ್ಥಿಸೋಣ. .