ದೇಶದ ಔನ್ನತ್ಯದ ಬಗೆಗೆ ಕಿಂಚಿತ್ತಾದರೂ ಕಳಕಳಿಯಿದ್ದರೆ, ದೇಶದ ಹಿತದೃಷ್ಟಿಯಿಂದ ಬಿಜೆಪಿಯ ಪ್ರತಿಯೊಬ್ಬ ಕಾರ್ಯಕರ್ತನೂ ತನ್ನ ವೈಯಕ್ತಿಕ ಚಾರಿತ್ರ್ಯದ ವಿಷಯದಲ್ಲಿ ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಇದೆ.
ಪ್ರಸ್ತುತ ರಾಜಕೀಯ ವ್ಯವಸ್ಥೆಯಲ್ಲಿ ಹಾಗು ಇರುವ ಹಲವಾರು ಪಕ್ಷಗಳಲ್ಲಿ, 'ರಾಷ್ಟ್ರೀಯ ಚಾರಿತ್ರ್ಯ'ದ ಕುರಿತಾಗಿ ಸಾಸಿವೆಕಾಳಿನಷ್ಟಾದರೂ ವಿಶ್ವಾಸ ಮೂಡಿಸಿರುವ ಬಿಜೆಪಿ, ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಅಧಿಕಾರದ ಚುಕ್ಕಾಣಿ ಹಿಡಿಯಲು ಸಾಧ್ಯವಾಗಿದೆ. ಆದರೆ ಬಿಜೆಪಿ ತನ್ನ ಅಭ್ಯರ್ಥಿಗಳಲ್ಲಿ, ತನ್ನ ಕಾರ್ಯಕರ್ತರಲ್ಲಿ ಉತ್ತಮ ಚಾರಿತ್ರ್ಯ ನಿರ್ಮಾಣ ಮಾಡುವಲ್ಲಿ ವಿಫಲವಾಗಿದೆ.
ಈಗಾಗಲೇ 'ದುಷ್ಶಾಸಕ' ಎಂದೇ ಪ್ರಸಿದ್ಧಿಯಾಗಿರುವ, ಶಾಸಕರ ಸ್ಥಾನಮಾನವನ್ನು ಮೂರು ಕಾಸಿಗೆ ಹರಾಜು ಹಾಕಿರುವ, ಬಿಜೆಪಿ ಶಾಸಕ ಸಂಪಂಗಿಯ ಹಗರಣ, ಸಮಾಜದಲ್ಲಿ ಶಾಸಕರಾದಿಯಾಗಿ ಪ್ರತಿಯೊಬ್ಬ ಮತದಾರನಿಗೂ ಎಚ್ಚರಿಕೆಯ ಸೂಚನೆ ನೀಡಿದೆ.
ಈ ಹಗರಣದಿಂದ ಪಾಠ ಕಲಿತು, ತುತ್ತತುದಿಯ ಕಾರ್ಯಕರ್ತನಿಂದ ಹಿಡಿದು ಪ್ರತಿಯೊಬ್ಬ ಅಧಿಕಾರಸ್ಥರವರೆಗಿನ ಎಲ್ಲರಲ್ಲೂ ಉತ್ತಮ 'ವೈಯಕ್ತಿಕ ಚಾರಿತ್ರ್ಯ'ದ ನಿರ್ಮಾಣಕ್ಕೆ ಪ್ರಥಮ ಆದ್ಯತೆ ನೀಡಿ ಹಾಗು ಆ ನಂತರ ಉತ್ತಮ 'ರಾಷ್ಟ್ರೀಯ ಚಾರಿತ್ರ್ಯ'ದ ನಿರ್ಮಾಣದ ಮುಖಾಂತರ, ಬಿಜೆಪಿ ಹಾಗು ಇತರ ಎಲ್ಲ ಪಕ್ಷಗಳೂ ತಮ್ಮ ಬಲವರ್ಧನೆಯ ಕಾರ್ಯದಲ್ಲಿ ತೊಡಗಬೇಕು. ಆಗ ಮಾತ್ರ ಪ್ರತಿಯೊಬ್ಬ ರಾಜಕೀಯ ವ್ಯಕಿಯೂ ಭವ್ಯ ಭಾರತದ ನಿರ್ಮಾಣದಲ್ಲಿ ತನ್ನದೇ ಆದ ಕೊಡುಗೆಯನ್ನು ನೀಡಲು ಸಾಧ್ಯ.
ಉತ್ತಮ 'ವೈಯಕ್ತಿಕ ಚಾರಿತ್ರ್ಯ'ದ ಅನುಪಸ್ಥಿತಿಯಲ್ಲಿ 'ರಾಷ್ಟ್ರೀಯ ಚಾರಿತ್ರ್ಯ' ಪೂರ್ಣ ಸದುದ್ದೇಶದಿಂದ ಕೂಡಿರುವುದಿಲ್ಲ.
No comments:
Post a Comment