May 24, 2009

ಪರಾಭವಗೊಂಡ ಬಿಜೆಪಿಗೆ ಇನ್ನಾದರೂ ಜ್ಞಾನೋದಯವಾದೀತೇ?

ಅಂತೂ ಇಂತೂ ಚುನಾವಣೆಯ ಯುದ್ಧ ಮುಗಿದು, ಹೊಸ ವೇಷದಲ್ಲಿ ಹಳೆ ಸರ್ಕಾರ ಮತ್ತೊಮ್ಮೆ ಅಧಿಕಾರದ ಚುಕ್ಕಾಣಿ ಹಿಡಿದು ಆಡಳಿತಕ್ಕೆ ನಿಂತಿದೆ. 'ಸಂಪುಟ ರಚನೆ' ಎಂಬ ದೊಂಬರಾಟದಲ್ಲಿ ಮುಳುಗಿದೆ. ಪರಾಭವಗೊಂಡಿರುವ ಬಿಜೆಪಿಯಲ್ಲಂತೂ 'ಆತ್ಮಾವಲೋಕನ' ಎಂಬುದಡಿ ಮತ್ತದೇ ಕಾಲ ಹರಣದ ಹಾಗೂ ಕೆಸರೆರಚಾಟದ ಕಾರ್ಯಕ್ರಮ!

ಈ ಸಲದ ಚುನಾವಣೆ ರಾಜಕೀಯ ಪಕ್ಷಗಳಿಗೆ ಬುದ್ಧಿ ಕಲಿಸಿದೆಯೂ ಇಲ್ಲವೊ ಗೊತ್ತಿಲ್ಲ. ಆದರೆ ಮತದಾರನಿಗೆ 'ಬುದ್ಧಿ' ಕಲಿಸುವ 'ಬುದ್ಧಿ' ಬಂದಿದೆ ಎಂಬುದನ್ನ ಸಾಬೀತು ಮಾಡಿದೆ.

ಚುನಾವಣೆಯಲ್ಲಿ ಒಂದು ಪಕ್ಷ ಸೋತರೆ ಇದರರ್ಥ ಜನತೆಗೆ ಆ ಪಕ್ಷ ಬೇಕಾಗಿಲ್ಲ ಎಂಬುದಕ್ಕಿಂತ, ಆ ಪಕ್ಷ ತನ್ನ ಆಡಳಿತದಲ್ಲಿ ಜನತೆಗೆ ಮೋಸ ಮಾಡಿದೆ ಎಂದು ಕರೆದರೇನೇ ಹೆಚ್ಚು ಸಮಂಜಸ.

ಅತ್ಯಂತ ಹೆಚ್ಚಿನ ಸಾಮರ್ಥ್ಯ ಇದ್ದಂತಹ, ಹೆಚ್ಚಿನ ವಿದ್ಯಾವಂತರು (ಮತ ಹಾಕದವರು ಎಂದು ಓದಿಕೊಳ್ಳಬಹುದು) ಸಹಜವಾಗಿಯೇ ಅಪೇಕ್ಷೆ ಪಡುವಂತಹ, ಕಿಂಚಿತ್ತಾದರೂ ರಾಷ್ಟ್ರೀಯ ಬದ್ದತೆಯ ಧೋರಣೆ ಹೊಂದಿರುವ ಭಾರತೀಯ ಜನತಾ ಪಕ್ಷ ಮೊನ್ನೆಯ ಚುನಾವಣೆಯಲ್ಲಿ ನೆಲಕಚ್ಚಿದ್ದು ಆಶ್ಚರ್ಯವೋ? ಸಹಜವೋ? ಮೊನ್ನೆ ೨೩ ರ ವಿಜಯ ಕರ್ನಾಟಕದಲ್ಲಿ ಪತ್ರಕರ್ತ ಪ್ರತಾಪ್ ಸಿಂಹ ಮೇಲಿನ ಪ್ರಶ್ನೆಗೆ ಉತ್ತರ ಹುಡುಕುವ ಪ್ರಯತ್ನ ಮಾಡಿದ್ದಾರೆ. ಓದಿದವನಾವನೂ ಒಪ್ಪದಿರಲು ಸಾಧ್ಯವಿಲ್ಲ. ಯಾವ ಬಿಜೆಪಿಯವನೂ ಓದಿರಲಿಕ್ಕೂ ಇಲ್ಲ!

ನನ್ನ ಪ್ರಶ್ನೆಯೇನಂದರೆ, ಮಾಧ್ಯಮದವರನ್ನು ಸರಿಯಾಗಿ ಬಳಸಿಕೊಳ್ಳಲು ಬಾರದ, ರಾಷ್ಟ್ರೀಯ ಸುದ್ಧಿವಾಹಿನಿಗಳ ಜತೆಗೆ ಉತ್ತಮ ಸಂಬಂಧವಿರಿಸಿಕೊಳ್ಳಲು ಬಾರದ ಒಂದು ಪಕ್ಷವನ್ನ'ರಾಷ್ಟ್ರೀಯ ಪಕ್ಷ' ಎಂದು ಕೆರಯಬಹುದಾ? ಅಂತ!

ಭಯೋತ್ಪಾದನೆಯಂಥ ಅತಿ ಮುಖ್ಯವಾದ ಹಾಗೂ ಮಹತ್ವವಾದ ವಿಷಯವನ್ನೇ ಚುನಾವಣೆಯಲ್ಲಿ ಸರಿಯಾಗಿ ಬಳಸಿಕೊಳ್ಳಲು ಸಾಧ್ಯವಾಗದ ಬಿಜೆಪಿಗೆ ಇನ್ಯಾವ ವಿಷಯವನ್ನು ಬಳಸಿಕೊಳ್ಳಲು ಆಗುತ್ತದೆ? ತಾನು ಮಾತ್ರ ಸಮಗ್ರ ಭಾರತದ ಕಲ್ಪನೆಯನ್ನಿಟ್ಟುಕೊಂಡು ಅದನ್ನು ಜನತೆಗೆ ನೀಡುವಲ್ಲಿ ಶಕ್ತರಾಗದ ಬಿಜೆಪಿ ಹೇಗೆ ತಾನೇ ಗೆಲುವಿನ ಕನಸು ಕಂಡಿತು? ಶಿಸ್ತಿಗೆ ಹೆಸರಾಗಿದ್ದಂತಹ ಪಕ್ಷ ಅದನ್ನೇ ಕಳೆದುಕೊಳ್ಳುವತ್ತ ಸಾಗಿರುವಾಗ ತನ್ನ ಸ್ಥಾನವನ್ನು ಹೇಗೆ ತಾನೇ ಭದ್ರಪಡಿಸಿಕೊಂಡೀತು? ಬಿಜೆಪಿಗೆ ನೀಡುವ ಬೆಂಬಲವನ್ನು 'ದೇಶದ ಕೆಲಸ' ಎಂದೇ ನಂಬಿರುವ ಲಕ್ಷಾಂತರ ಪ್ರಜೆಗಳಲ್ಲಿ ಯಾವ ನಂಬಿಕೆಯನ್ನುಳಿಸಿದೆ ಬಿಜೆಪಿ? ಮತದಾನ ಮಾಡದ ವಿದ್ಯಾವಂತರನ್ನ ಆಕರ್ಷಿಸಲು ಅಸಮರ್ಥರಾದ ಬಿಜೆಪಿಗೆ ಜ್ಞಾನೋದಯ ಯಾವಾಗ?


ಇನ್ನಾದರೂ ಭಾರತೀಯ ಜನತಾ ಪಕ್ಷ ಎಚ್ಚೆತ್ತುಕೊಳ್ಳದಿದ್ದರೆ ದೇಶಕ್ಕೂ ನಷ್ಟ, ಜನತೆಗೂ ದ್ರೋಹ, ಪಕ್ಷದ ಅಸ್ತಿತ್ವಕ್ಕೂ ಧಕ್ಕೆ, ಪ್ರತಾಪ್ ಸಿಂಹ ಹೇಳಿದ ಹಾಗೆ, ೨೦೧೪ ರ ಚುನಾವಣೆಯ ನಂತರವೂ 'ಆತ್ಮಾವಲೋಕನ' ದ ಬಿಜೆಪಿಗೆ ಕಟ್ಟಿಟ್ಟ ಬುತ್ತಿ!

No comments:

Post a Comment