Feb 1, 2026

ನಿರ್ಲಿಪ್ತ ಪ್ರಾಧ್ಯಾಪಕರ ಅಗ್ರೇಸರ್

ಯಾವ ದಿನ, ಇನ್ನೂ 10-15 ವರ್ಷಗಳ ನಂತರ ತಡವಾಗಿ  ಬರಲಿ ಎಂದು ಕೇಳಿಕೊಳ್ಳುತ್ತಿದ್ದೆನೋ, ಆ ದಿನ ದುರದೃಷ್ಟವಶಾತ್ ಬಂದೇ ಬಿಟ್ಟಿತು.

ನಾನು ಇಂಜಿನಿಯರಿಂಗ್ ಪದವಿ ಮುಗಿಸಿ 20 ವರ್ಷಗಳ ನಂತರವೂ ಆಗಿಂದಾಗ್ಗೆ ಕಾಲೇಜಿಗೆ ಹೋಗುವ ಪರಿಪಾಠವನ್ನು ಇರಿಸಿಕೊಳ್ಳುವ ಹಾಗೆ ಮಾಡಿದ, ಸಾಕಷ್ಟು ವಿಷಯಗಳ ಬಗ್ಗೆ ಚರ್ಚಿಸುವ ಮಾನಸಿಕತೆಯನ್ನು ಹುಟ್ಟಿಸಿ ಹಾಗು ಪೋಷಿಸಿದ ಕಾಲೇಜಿನ ಆಕರ್ಷಣೆ ಎಂದರೆ ನಮ್ಮ ಪ್ರದೀಪ್ ಸರ್ !!

ಈಗ್ಗೆ ಕೆಲ ವರ್ಷಗಳ ಹಿಂದೆ ಕಾಲೇಜಿಗೆ ಹೋಗಿದ್ದಾಗ ನಮ್ಮ ಕಾಲದಲ್ಲಿ ಬಸ್ಸಿನ ಡ್ರೈವರ್ ಆಗಿದ್ದ ಆಚಾರ್ರು ಸಿಕ್ಕಿದ್ರು. ನನ್ನ ನೋಡಿ ಇನ್ನು ಪಾಸ್ ಆಗಿಲ್ವ ಅಂತ ಕೇಳಿ ಕಿಚಾಯಿಸಿದ್ದರು. ಅಷ್ಟರ ಮಟ್ಟಿಗೆ ನನ್ನ ಕಾಲೇಜಿನ ಭೇಟಿ ನಡೆಯುತ್ತಿತ್ತು, ನಿನ್ನೆಯವರೆಗೂ. 

ನಾನು ಪ್ರದೀಪ್ ಸರ್ ರನ್ನು ಮೊದಲ ಬಾರಿ ಭೇಟಿ ಮಾಡಿದ್ದು 2002 ರಲ್ಲಿ 'ಪರಿಣಿತ'ದಲ್ಲಿ. ಆ ಸಮಯದಲ್ಲಿನ C/C++ ಹೇಳಿಕೊಡುವ ಪ್ರತಿಷ್ಠಿತ ಕೋಚಿಂಗ್ ಸೆಂಟರ್ 'ಪರಿಣಿತ'ವಾಗಿತ್ತು. ಅದೇ ಹೊಸ Desktop Computer ಗಳನ್ನು assembly ಮಾಡಿಕೊಡುವ ಜಾಗವೂ ಆಗಿತ್ತು. ಅಂದರೆ ಆ ಕಾಲದ ಶಿವಮೊಗ್ಗದಲ್ಲಿ ಇಂಜಿನಿಯರಿಂಗ್ ಓದುತ್ತಿದ್ದವರೆಲ್ಲರೂ ತಮ್ಮ Desktop ಗಳನ್ನು ಕೊಂಡುಕೊಂಡಿದ್ದು ಪ್ರದೀಪ್ ಸರ್ ಅವರ ಬಳಿಯೇ, ನನ್ನನ್ನೂ ಸೇರಿಸಿ. ಆವಾಗಲೇ ಕಂಪ್ಯೂಟರ್ ಗಳ ಬಗ್ಗೆ ಸಾಕಷ್ಟು ಜ್ಞಾನವನ್ನು ಸಂಪಾದಿಸಿ ಅದನ್ನ ಹಂಚುತ್ತಿದ್ದರು. 

ನಾನು 2003 ರಲ್ಲಿ ಕಾಲೇಜು ಸೇರಿದಾಗ ಪ್ರದೀಪ್ ಸರ್ E&C ವಿಭಾಗದ ಅಧ್ಯಾಪಕರಾಗಿದ್ದರು. ನಾನು IS ವಿಭಾಗದ ವಿದ್ಯಾರ್ಥಿಯಾಗಿದ್ದೆ. ಆವಾಗಿನಿಂದಲೇ ಸರ್ ಗೆ ತಲೆ ತಿನ್ನಲು ಶುರು ಮಾಡಿದ್ದೆ. ಆದರೆ ನನ್ನ ವಿಭಾಗವಲ್ಲದ ಕಾಲೇಜು ಹಾಗು 'ಪರಿಣಿತ'ದ ಕಾರಣ ಸಮಯ ಸಾಲುತ್ತಿರಲಿಲ್ಲ. 

ಅದೃಷ್ಟವಶಾತ್ 2005 ರಲ್ಲಿ ತಮ್ಮ MTech ನ ವಿಷಯದ ಕಾರಣಕ್ಕೆ ಪ್ರದೀಪ್ ಸರ್ IS ವಿಭಾಗಕ್ಕೆ ಬರಬೇಕಾಯಿತು. ಆಗ ನನ್ನಷ್ಟು ಅದೃಷ್ಟಶಾಲಿ ಯಾರಿಲ್ಲ ಎಂದೆನಿಸಿದ್ದು ಸುಳ್ಳಲ್ಲ. ಅಲ್ಲಿಂದ ಅವರಿಗೆ ನನ್ನ ತಲೆ ನೋವು ಶುರುವಾಗಿ ಇಂದಿನವರೆಗೂ ನಡೆದುಕೊಂಡ ಬಂದಿದೆ. ಮಲಯ ಮಾರುತದ ವಿಷ್ಣುವರ್ಧನ್ ಪಾತ್ರದಲ್ಲಿ ಸಂಗೀತ ಬರದಿದ್ದರೂ ಗುರುವಿಗೆ ಹತ್ತಿರವಾಗಿದ್ದರೆ ವಿದ್ಯೆ ಬರಬಹುದೇನೋ ಎಂಬ 'ಮೂಢ'ನಂಬಿಕೆ ಯಿಂದಷ್ಟೇ !

ಕಳೆದ 25 ವರ್ಷಗಳಿಂದ ಒಂದೇ ಸಮನಾದ, ಋಷಿ ಸದೃಶವಾದ ಜೀವನ ಶೈಲಿ, ವೇಷ-ಭಾಷೆ ಗಳಲ್ಲಿ Consistency, ಇರುವ ನಾನು ನೋಡಿರುವ ಅಪರೂಪದ ವ್ಯಕ್ತಿಗಳಲ್ಲಿ ಪ್ರದೀಪ್ ಸರ್ ಮತ್ತೊಂದು ಅಪರೂಪ. 

ಕಾಲೇಜಿನ IS, CS, E&C, TC, DS, AI&ML ಎಲ್ಲ ಬ್ರಾಂಚ್ ಗಳಿಗೆ ಬೇಕಾದ ಸಂಪನ್ಮೂಲ ವ್ಯಕ್ತಿಯಾಗಿರುವ, (ವರ್ತಮಾನದಲ್ಲೂ), ಯಾವುದೇ ಸಮಯದಲ್ಲಿ ಅವರ ಜೊತೆ technical topics ಗಳ ಬಗ್ಗೆ ಚರ್ಚೆ  ಅಥವಾ  ಪ್ರಶ್ನೆ ಗೆ ಸದಾ ಕಾಯುತ್ತಿರುವ ದಂಡೇ ಇರುತ್ತಿತ್ತು . ಕಾಲೇಜಿನಲ್ಲಿ ಸರ್ ಒಬ್ಬರೇ ಕೂತಿದ್ದ ಸಮಯಗಳು ಬಹಳ ಕಡಿಮೆ ಅಥವಾ , ಬಹುಶಃ ಇಲ್ಲವೇ ಇಲ್ಲ.  

Electronics ಹಾಗು Computer Science ವಿಷಯಗಳಲ್ಲಿ ಅವರಿಗಿದ್ದ ಆಸಕ್ತಿ ಹಾಗು ಜ್ಞಾನದ ಬಗ್ಗೆ ಬರೆಯುವ ಸಾಹಸಕ್ಕೆ ನನ್ನಂತಹ ಕುಬ್ಜ ಹೋಗುವುದು ಸರಿಯಲ್ಲ. ಶಿವಮೊಗ್ಗದ ಪ್ರತಿಷ್ಠಿತ  ಸಂಸ್ಥೆಗಳಿಗೆ ಸಂಬಂಧ ಪಟ್ಟ ಯಾವುದೇ Software ಹಾಗು Computer ಗಳ ವಿಚಾರದಲ್ಲಿ ಪ್ರದೀಪ್ ಸರ್ ರವರ Expert Advice ಇರದಿರಲು ಸಾಧ್ಯವಿಲ್ಲ. ರಾಷ್ಟೀಯ ಶಿಕ್ಷಣ ಸಮಿತಿಯ ಸಂಸ್ಥೆಗಳಲ್ಲಿ ಬಳಸುತ್ತಿರುವ ಸಾಕಷ್ಟು Software ಗಳ ಹಿಂದೆ ಸರ್ ರವರ ಮೆದುಳು ಇದ್ದೇ ಇದೆ.  

ಕಾಲೇಜಿನಲ್ಲಿ ತಮ್ಮ ಅದ್ಭುತ 37 ವರ್ಷಗಳ ದೀರ್ಘ ಸೇವೆಯನ್ನು ಪೂರೈಸಿ ನಿವೃತ್ತಿಯಾಗುತ್ತಿರುವ ಪ್ರದೀಪ್ ಸರ್ ರವರ ಅನುಪಸ್ಥಿತಿ, ಸಂಸ್ಥೆಯಲ್ಲಿ ನಿರ್ವಿವಾದವಾಗಿ ಒಂದು ದೊಡ್ಡ ತಾಂತ್ರಿಕ ಶೂನ್ಯತೆ (technical vacuum) ಯನ್ನು ಉಂಟುಮಾಡಲಿದೆ.

ಪ್ರದೀಪ್ ಸರ್ ರವರ ನಿವೃತ್ತಿ ಜೀವನ ಸಂತೋಷ , ಸುಖ ಹಾಗು ನೆಮ್ಮದಿಯಿಂದ ಕೂಡಿರಲಿ ಎಂದು ಆ ಭಗವಂತನಲ್ಲಿ ನನ್ನದೂ  ಒಂದು ಪ್ರಾರ್ಥನೆ. 

ಇನ್ನು ಮುಂದೆ ಕಾಲೇಜಿಗೆ ಹೋಗುವ ಯಾವ ಕಾರಣ ಹುಡುಕಲಿ ಎಂಬುದೇ ನನ್ನ ಈಗಿನ ಪ್ರಶ್ನೆಯಾಗಿದೆ ! ! ! 



Jan 21, 2025

'ನೋಟು ಮುದ್ರಣಾಲಯ' ಭೇಟಿಯ ಕ್ಷಣಗಳು

ಕಳೆದ 4-5 ವರ್ಷಗಳಿಂದ ಇದ್ದ ಆಸೆ ಎಂದರೆ ಮೈಸೂರಿನ ನೋಟು ಮುದ್ರಣಾಲಯವನ್ನು ವೀಕ್ಷಿಸಬೇಕು ಎಂದು. ನನ್ನ ಸ್ನೇಹಿತರ ತಂಡದೊಂದಿಗೆ ಹೋಗುವ ಯೋಜನೆ ಇತ್ತು. ಆದರೆ ಅದು ಸಾಧ್ಯವಾಗಿರಲಿಲ್ಲ. ಅಷ್ಟರಲ್ಲೇ ನೋಟು ಅಮಾನ್ಯೀಕರಣದ ಕಾರಣದಿಂದ  ಸಾರ್ವಜನಿಕರ ಭೇಟಿಯನ್ನು ರದ್ದುಗೊಳಿಸಿದರು. ನನ್ನ ಆಸೆ ಹಾಗೆ ಉಳಿದುಕೊಂಡಿತ್ತು. ಕಳೆದ ವರ್ಷವೇ ಸಾರ್ವಜನಿಕ ಭೇಟಿಯನ್ನು ಆರಂಭಿಸಿದ್ದರೂ ಕಾಲ ಕೂಡಿ ಬಂದಿರಲಿಲ್ಲ. ಅಲ್ಲಿ ಕೆಲಸ ಮಾಡುವವರ ಮುಖಾಂತರ ಮಾತ್ರ ಹೋಗುವ ಅವಕಾಶವಿರುವುದೇ ವಿನಃ ಹಾಗೆಯೇ ಹೋಗಲು ಅವಕಾಶವಿಲ್ಲ . ಆ ಕಾರಣಕ್ಕಾಗಿಯೇ ಯಾರು ಬೇಕಾದರೂ ಹೋಗಲು ಸಾಧ್ಯವಿಲ್ಲ. ಅಲ್ಲಿರುವವರೇ ನಮ್ಮ ಸಲುವಾಗಿ ನಮ್ಮ ವಿವರಗಳನ್ನು ನೀಡಿ ವೀಕ್ಷಣೆಗೆ ಅನುಮತಿ ಪಡೆಯಬೇಕು. 

ಹೇಗಾದರೂ ಒಮ್ಮೆ ನೋಟು ಮುದ್ರಣವನ್ನು ನೋಡಬೇಕು ಎಂಬ ಆಸೆ ಉತ್ತುಂಗದಲ್ಲಿದ್ದಾಗಲೇ  ಅವಕಾಶವಾಗುವ ಲಕ್ಷಣ ಕಾಣಿಸಿತು. ನನ್ನ ಭಾವನ ಸ್ನೇಹಿತರೊಬ್ಬರು ಅಲ್ಲೇ ಕೆಲಸ ಮಾಡುತ್ತಿದ್ದುದು ಗೊತ್ತಿತ್ತು. ಮೈಸೂರಿನಲ್ಲಿ ಒಂದು ಕಾರ್ಯಕ್ರಮದ ನಿಮಿತ್ತ ಎಲ್ಲರೂ ಮೈಸೂರಿಗೆ ಹೋಗುವ ಯೋಜನೆ ತಿಳಿದು ಅದೇ ಶನಿವಾರ ತಿಂಗಳ ಮೊದಲ ಶನಿವಾರವೂ ಆದ್ದರಿಂದ ಎಲ್ಲವೂ ಕೂಡಿಬಂತು.

ಕೊನೆಗೂ ಮಾತುಕತೆ ನಡೆದು ಭೇಟಿಯು ನಿಶ್ಚಯವಾಯಿತು. ಭೇಟಿಗೆ ಬರುವವರ ಕೆಲ ಮಾಹಿತಿಯನ್ನು ಮೊದಲೇ ತಿಳಿಸಬೇಕಿದ್ದರಿಂದ ನಮ್ಮ ನಮ್ಮ ಮಾಹಿತಿಯನ್ನು ಹಂಚಿಕೊಂಡೆವು. ಅದಕ್ಕೆ ಪ್ರತಿಯಾಗಿ ನಮ್ಮ ಭೇಟಿಯ ವಿವರವಾದ ಕೋರಿಕೆಗೆ ಬೇಕಾದ ಕಾಗದ ಪತ್ರಗಳು ತಯಾರಾದವು. ನಾವು ಬೆಳಿಗ್ಗೆ 6.30ಗೆ ಹೊರಟೆವು. ಭೇಟಿಯ ಕಾಲಾವಕಾಶ ಬೆಳಿಗ್ಗೆ 8.30ಯಿಂದ 11.30ಯ ವರೆಗೆ ಮಾತ್ರ ಇದ್ದುದರಿಂದ  ನಾವು 9ರ ಒಳಗೆ ನಾವು ಸೇರಬೇಕಿತ್ತು. ಸರಿ ಸುಮಾರು 9.30ಯ ಹೊತ್ತಿಗೆ ಎಲ್ಲ ಭದ್ರತಾ ವ್ಯವಸ್ಥೆಗಳೆಲ್ಲ ಮುಗಿಸಿಕೊಂಡು ಒಳಗೆ ಹೋಗಿ ನೋಡಿದರೆ, ನನ್ನ ಪಾಲಿಗೆ ಒಂದು ಅದ್ಭುತ ಪ್ರಪಂಚವೇ ಮುಂದಿತ್ತು.

ನಾಲ್ಕು ಅಥವಾ ಐದು ಸಾಲುಗಳ ಯಂತ್ರಗಳಲ್ಲಿ ಹಾದು ಮುದ್ರಣವಾಗುವ ನೋಟುಗಳು, ಸಾಕಷ್ಟು  ಹಂತಗಳನ್ನು ದಾಟಿಕೊಂಡು ಎಲ್ಲ ಪರೀಕ್ಷೆಗಳನ್ನು ಮುಗಿಸಿಕೊಂಡು ಚಲಾವಣೆಗೆ ಅರ್ಹವಾಗುತ್ತವೆ. ಎಲ್ಲವು ಜರ್ಮನಿ ಅಥವಾ ಜಪಾನಿನ ಯಂತ್ರಗಳು ಹಾಗೂ ಸಾಕಷ್ಟು ವರ್ಷಗಳಿಂದ ಸ್ವಲ್ಪವೂ ತೊಂದರೆ ನೀಡದೆ ಇರುವ ಯಂತ್ರಗಳು ಎಂದು ಕೇಳಿ ಕ್ಷಣ ಆಶ್ಚರ್ಯವೇ ಆಯಿತು. ಮೊದಲಿಗೆ ನೋಟಿನಲ್ಲಿರುವ ಬಣ್ಣದ ಭಾಗವನ್ನು ಮುದ್ರಿಸುವ ಅಂದರೆ ವಾಟರ್ ಮಾರ್ಕ್(ಗಾಂಧೀಜಿ ಫೋಟೋ) ಕೂಡ ಇದರಲ್ಲಿ ಸೇರಿಕೊಂಡು, ಯಂತ್ರಗಳು ಪ್ರತಿ ಕ್ಷಣಕ್ಕೆ  10 x 5 ನೋಟುಗಳಿರುವ ಪೇಪರ್  ಮುದ್ರಣಗೊಳ್ಳುತ್ತವೆ. ಆ ತರಹದ 10,000 ಪೇಪರಿನ ಬಂಡಲಿನ ಹಲವಾರು ಬಂಡಲುಗಳು ಪ್ರತಿ ಯಂತ್ರಗಳಿಗೂ ಫೀಡ್ ಮಾಡಲಾಗಿರುತ್ತದೆ. 

ಪ್ರತಿ ಹಂತದಲ್ಲೂ ಅತ್ಯದ್ಭುತವಾದ ಕ್ಯಾಮೆರಾಗಳು ಪ್ರತಿ ಪೇಪರಿನ ಫೋಟೋಗಳನ್ನು ಪಡೆದು  ಇಮೇಜ್ ಪ್ರೊಸೆಸಿಂಗ್ ಮುಖಾಂತರ ಉತ್ಕೃಷ್ಟ ಮಟ್ಟದ ಪರೀಕ್ಷೆಯನ್ನು ಮಾಡುತ್ತದೆ. ಕಿಂಚಿತ್ ಲೋಪಗಳು ಸಿಕ್ಕಿದರೂ ಆ ಪೇಜನ್ನು ಹೊರಗೆ ತೆಗೆದು ಇನ್ನೊಂದು ಜಾಗದಲ್ಲಿ ತೆಗೆದಿಡಲು ವ್ಯವಸ್ಥೆ ಇರುತ್ತದೆ. ಆ ನಂತರ ಅವುಗಳನ್ನು ಮಾನ್ಯುಯಲ್ ಆಗಿ ಪರೀಕ್ಷೆ ಮಾಡಿ ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತಾರೆ. ಶೇಕಡಾ ೧ ರಷ್ಟು ಲೋಪಗಳು  ಉಂಟಾಗುವುದು ಸ್ವೀಕಾರಾರ್ಹವೆಂದು ಪರಿಗಣಿಸಲಾಗುತ್ತದೆ. 

ಆ ನಂತರದ ಹಂತ ನೋಟಿನ ಬಂಡಲ್ ಗಳನ್ನು ಮಾಡುವುದು. ಅದ್ಭುತ ಯಂತ್ರಗಳ ಸಹಾಯದಿಂದ 10 x 5 ರ ಪೇಪರಿನ ಬಂಡಲುಗಳು ಉದ್ದುದ್ದ ಹಾಗೂ ಅಗಲಗಲ ಕತ್ತರಿಸಿಕೊಂಡು 100 ನೋಟುಗಳ ಬಂಡಲುಗಳಾಗಿ ಹೊರಗೆ ಬರುತ್ತದೆ. ಆ ಬಂಡಲುಗಳನ್ನು ಇನ್ನೊಂದು ವಿಧವಾದ ಪ್ಲಾಸ್ಟಿಕ್ ರೋಲುಗಳಲ್ಲಿ ಸುತ್ತಿ ರಟ್ಟಿನ ಬಾಕ್ಸ್ ಗಳಿಗೆ ತುಂಬಲಾಗುತ್ತದೆ. 

ಪ್ರತಿ ಹಂತದಲ್ಲೂ ಕ್ಯಾಮೆರಾಗಳು ಅದ್ಭುತವಾಗಿ ಅತ್ಯಂತ ಸೂಕ್ಷ್ಮ ಮುದ್ರಣ ದೋಷಗಳನ್ನೂ ಕಂಡುಹಿಡಿದು  ಬೇರ್ಪಡಿಸಿ ಕಾರ್ಯವನ್ನು ಸುಗಮಗೊಳಿಸುವ ವ್ಯವಸ್ಥೆ ಅದ್ಭುತ. ಪ್ರತಿನಿತ್ಯ ಎರಡು ಶಿಫ್ಟ್ ಗಳಲ್ಲಿ ಕೆಲಸ ಮಾಡುವ ವ್ಯವಸ್ಥೆ ಇದ್ದು ಮುದ್ರಣಕ್ಕೆ ಬೇಕಾದ ಕಾಗದ ಹಾಗು ಬಣ್ಣದ ಉತ್ಪಾದನೆಯೂ ಸ್ಥಾನೀಯವಾಗಿಯೇ ನಡೆಯುವುದರಿಂದ, ಸ್ವಂತಿಕೆ ಒಂದು ಹೆಮ್ಮೆಯಾಗಿದೆ ಹಾಗು ನಕಲು ಮಾಡುವುದನ್ನು ತಡೆಯಲು ಸಹಕಾರಿಯಾಗಿದೆ . 

ಅತ್ಯಂತ ಕೊನೆಯ ಹಂತವಾಗಿ ಇನ್ನೊಂದು ಸುತ್ತಿನ ಪರೀಕ್ಷೆ ನಡೆಯುತ್ತದೆ. ಯಾವುದೇ ಯಂತ್ರಗಳ ಸಹಾಯವಿಲ್ಲದೆ ನಡೆಯುವ ಈ ಹಂತದಲ್ಲಿ ಬಂಡಲ್ ಗಳ ಪ್ರಮಾಣದಲ್ಲಿ ತಿರಸ್ಕಾರಗೊಂಡ ನೋಟುಗಳನ್ನು ಪರೀಕ್ಷಿಸಿ ಮುಂದಿನ ತೀರ್ಮಾನಗಳನ್ನು ತೆಗೆದುಕೊಳ್ಳಲಾಗುತ್ತದೆ. ಪೂರ್ಣ ತಿರಸ್ಕಾರವಿರಬಹುದು ಅಥವಾ ಕೆಲವು ಚಲಾವಣೆಗೆ ಅರ್ಹವಾದ ಮುದ್ರಣ ದೋಷಗಳೂ ಇರಬಹುದು. 

ನಾವು ಭೇಟಿ ನೀಡಿದಾಗ 500, 20ರ ಹೊಸ ನೋಟು, 100 ಮತ್ತು 200 ಮುಖಬೆಲೆಗಳ ನೋಟುಗಳ ಮುದ್ರಣ ನಡೆಯುತ್ತಿತ್ತು. ಆರ್ಬಿಐನ ಅಂಗಸಂಸ್ಥೆಯಾಗಿ ಕೆಲಸ ನಿರ್ವಹಿಸುವ ನೋಟು ಮುದ್ರಣಾಲಯ, ಕೇಂದ್ರ ಸರ್ಕಾರದ ನೇರ ಹಸ್ತಕ್ಷೇಪಕ್ಕೆ ಆಸ್ಪದ ಕೊಟ್ಟಿಲ್ಲ. 

ಇನ್ನೊಂದು ಮುಖ್ಯವಾದ ಅಂಶವೆಂದರೆ ನೋಟು ಮುದ್ರಣ ನಗರದ ವಿಸ್ತೀರ್ಣ, ಅದರ ನಿರ್ವಹಣೆ, ಅಚ್ಚುಕಟ್ಟುತನ, ಸ್ವಚ್ಛತೆ, ಅಲ್ಲಿರುವ ಕ್ರೀಡಾ ವ್ಯವಸ್ಥೆಗಳು, ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ  ಇರುವ ಕೇಂದ್ರೀಯ ವಿದ್ಯಾಲಯ, ಎಲ್ಲವನ್ನೂ ಒಡಲೊಳಗೆ ಕಾಪಾಡಿಕೊಂಡಿರುವುದು ನಿಬ್ಬೆರಗಾಗಿಸುವಂತೆ ಮಾಡುತ್ತದೆ.

ಭಾನುಮಾಯನ ಅನುಪಸ್ಥಿತಿ ಯಾರಿಗೂ ಕಾಡದೆ ಇರದು

ಸುಮಾರು 14 ವರ್ಷಗಳ ಹಿಂದೆ, ಹೊಸ ಬೈಕು ಕೊಂಡ ಖುಷಿಯಲ್ಲಿ ನಾನು ಮತ್ತು ನನ್ನ ಆತ್ಮೀಯ ಸ್ನೇಹಿತ ಬೆಂಗಳೂರಿನಿಂದ ಮತ್ತೂರಿಗೆ ಬೈಕಿನಲ್ಲೇ ಬಂದಿದ್ವಿ. ಯಾರಿಗೂ ಬೈಕಿನಲ್ಲಿ ಬರುವ ವಿಷಯವನ್ನು ತಿಳಿಸಿರಲಿಲ್ಲ. ಈ ವಿಷಯವಾಗಿ ನಮ್ಮ ತಾಯಂದಿರು ಚಕಾರವೆತ್ತಿದಾಗ ಭಾನು ಮಾಯ 'ಈ ವಯಸ್ಸಿನಲ್ಲಿ ಬೈಕಿನಲ್ಲಿ ಬರದೇ ಏನ್ ನಿಮ್ಮ ವಯಸ್ಸಿನಲ್ಲಿ ಅಥವಾ 60 ವರ್ಷ ಆದಮೇಲೆ ಬರೋಕ್ಕಾಗುತ್ತೇ? ಮಕ್ಕಳು ಮಾಡುವುದೆಲ್ಲವನ್ನು  ವಿರೋಧಿಸುವುದಕ್ಕಿಂತ ಅವರ ಧೈರ್ಯ ಸ್ವಭಾವವನ್ನ ಗೌರವಿಸಿ ಹುಷಾರಾಗಿ ಬನ್ನಿ ಅಂತ ಹೇಳುವುದು ಒಳ್ಳೆಯದು ' ಅಂತ  ಹೇಳಿದ್ದು ನೆನಪಾಗಿ ಅವರ ಅನುಪಸ್ಥಿತಿಯನ್ನು ನಂಬಲು ಇನ್ನು ಸಾಧ್ಯವಾಗಿಲ್ಲ. 

ಮತ್ತೂರಿನ ಸಂಘಸ್ಥಾನ ದುರ್ಗಮ್ಮನ ದೇವಸ್ಥಾನದ ಪಕ್ಕದಲ್ಲಿ ಹಿಂದೆ ಸಾಯಂ ಶಾಖೆ ನಡೆಯುತ್ತಿದ್ದ ಸಮಯ. ಲಗೋರಿ ಆಗಿನ ಆಟದ ಆಕರ್ಷಣೆ. ಆವರಣದ ಸುತ್ತಲೂ ತಂತಿಯ ಬೇಲಿ. ಆಟ ಆಡುವಾಗ ಚೆಂಡು ಬೇಲಿಯ ಹೊರಗೆ ಹೋದಾಗಲೆಲ್ಲಸಮಯವನ್ನು ಉಳಿಸಲು ಸಾಕಷ್ಟು ಬಾರಿ ಬೇಲಿಯನ್ನು ಹಾರಿ ಹೋಗುತ್ತಿದ್ದೆ. ನೋಡಲು  ದಪ್ಪಗಿದ್ದರೂ ಆಟೋಟಗಳಲ್ಲಿ ಅಷ್ಟೇನೂ ಹಿಂದಿರಲಿಲ್ಲ. ದೇವಸ್ಥಾನದ ಕಟ್ಟೆಯನ್ನು ಒಂದು ಕೈಯ್ಯನ್ನಿಟ್ಟು ಹಾರುತ್ತಿದ್ದೆ. ಇವುಗಳೆಲ್ಲದರ ಬಗ್ಗೆ ತಿಳಿದಿದ್ದರೇನೋ ಎಂಬಂತೆ ಭಾನುಮಾಯ, ಒಮ್ಮೆ, ನಾನು ಚೆಂಡನ್ನು ತರಲು ಬೇಲಿ ಹಾರಿದುದನ್ನು ನೋಡಿ, ನನ್ನನ್ನು ಕರೆದು ‘ಏನೋ ಅಷ್ಟು ಚೆನ್ನಾಗಿ ಹಾರ್ತೀಯಾ ! ನೋಡಿ ಖುಷಿಯಾಯಿತು.  ಆದರೆ ಎಷ್ಟೇ ಹುಷಾರಾಗಿದ್ರು ಸಾಕಾಗಲ್ಲ ಒಮ್ಮೊಮ್ಮೆ. ನಿಮ್ಮ ತಾಯಿ ನಿನ್ನನ್ನು ಉಳಿಸಿಕೊಳ್ಳಲು ಸಾಕಷ್ಟು ಕಷ್ಟ ಪಟ್ಟಿದ್ದಾರೆ. ನಿನ್ನ ಮೇಲೆ ಪ್ರಾಣವೇ ಇಟ್ಟುಕೊಂಡಿದ್ದಾರೆ. ಯೋಚನೆ ಮಾಡು' ಅಂತ ಹೇಳಿ ಭುಜ ತಟ್ಟಿ ಹೋಗಿದ್ದರು .

 ಸುಮಾರು 30 ವರ್ಷಗಳ ಹಿಂದೆ ನಮ್ಮ ಮನೆಯ ಹಸು ರೈತರ ಬೀದಿಯ ಒಬ್ಬರ ಮನೆಯ ಹಿತ್ತಲಿನಲ್ಲಿ ನುಗ್ಗಿ ಸಮಸ್ಯೆ ಮಾಡಿದ್ದಕ್ಕೆ ಅವರು ಹಸುವನ್ನು ಕಟ್ಟಿ ಹಾಕಿ ಕೊಂಡಿದ್ದರು. ನಾನು ಅವರನ್ನು ಕೇಳಿದರೂ ಉಪಯೋಗವಾಗಿರಲಿಲ್ಲ. ಆ ಸಮಯಕ್ಕೆ ಭಾನುಮಾಯ ರಸ್ತೆಯಲ್ಲಿ ಬರುತ್ತಿದ್ದರು. ವಿಷಯವನ್ನು ತಿಳಿಸಿದ ಕೂಡಲೇ ಅವರೇ ಖುದ್ದಾಗಿ ಬಂದು ಮಾತಾಡಿ ಹಸುವನ್ನು ಬಿಡಲು ಗದರಿದ್ದರು. ಸಹಜವಾಗೇ ಆ ವ್ಯಕ್ತಿಗೆ ಹಸುವನ್ನು ಬಿಡದೇ ಬೇರೆ ದಾರಿಯಿರಲಿಲ್ಲ.

ಇತ್ತೀಚಿಗೆ  ಒಂದು ಸಮಾರಂಭದ ಭೋಜನಕ್ಕೆ ಕರೆಯಲು ಹೋದಾಗಲೂ 'ಬಾ ಕುಳಿತುಕೋ, ಮನೇಲಿ ಎಲ್ಲ ಹೇಗಿದ್ದಾರೆ' ಎಂದು ಆತ್ಮೀಯವಾಗಿ ಉಪಚರಿಸಿದ ವ್ಯಕ್ತಿ ಈಗಿಲ್ಲ ಅಂದರೆ ದೇವರ ಬಗ್ಗೆ ಕೋಪ ಬರದೇ ಇರದು.

ನಾವು ಸಣ್ಣವರಿದ್ದಾಗ ಊರಿನ ರಥೋತ್ಸವದ  ಭಜನೆಗಳಲ್ಲಿ ಅವರು ಹೇಳಿಕೊಡುತ್ತಿದ್ದ 'ರಾಮ ಜಿ ಕಿ ಸೇನಾ ಚಲೀ' ಮತ್ತು ಇತರ ರಾಷ್ತ್ರೀಯತೆಯ ಸಂಬಂಧಿತ ಭಜನೆಗಳು, ಆ ಕಂಚಿನ ಕಂಠದ ಧ್ವನಿಯಲ್ಲಿ ಇನ್ಮುಂದೆ ಕೇಳಲು ಅವಕಾಶವಂಚಿತರನ್ನಾಗಿ ಮಾಡಿದ ವಿಧಿಗೆ ಕರುಣೆಯೇ ಇಲ್ಲವೇ?

ಇಡೀ ಸಮಾಜದ ಬಹುಪಾಲು ಜನರು ಒಬ್ಬ ವ್ಯಕ್ತಿಯನ್ನು ಹೀಗಳೆಯುತ್ತಿದ್ದಾಗ, ಜರೆಯುತ್ತಿದ್ದಾಗ, ತುಚ್ಛವಾಗಿ ಕಾಣುತ್ತಿದ್ದಾಗ ಅದೂ ಆ ವ್ಯಕ್ತಿ ತನ್ನನ್ನು ಒಪ್ಪಲೊಲ್ಲದವನಾಗಿದ್ದಾಗ,  ಅನ್ನುವವರಲ್ಲಿ ಒಬ್ಬನಾಗುವುದು ಬಹಳ ಸುಲಭ. ಆದರೆ ಆ ಸಮಯದಲ್ಲೂ ಎಲ್ಲರಿಗಿಂತ ಭಿನ್ನವಾಗಿ ಆ ವ್ಯಕ್ತಿಯ ಪರವಾಗಿ ಸ್ಪಂದಿಸುವುದು ಅವರಿಗೆ ಮಾತ್ರ ತಕ್ಕುದಾಗಿತ್ತು.

2003ರ ನನ್ನ ಅಕ್ಕನ ಮದುವೆಯ ಸಮಯ. ಖಂಡಿತ ಬರಬೇಕು ಎಂದು, ಅವಕಾಶವಾದಾಗಲೆಲ್ಲ ವಿನಂತಿಸಿದ್ದೆ. ಆಗಿನ್ನೂ ನನಗೆ 16ರ ವಯಸ್ಸು. ನನ್ನ ಮಾತನ್ನು, ನನ್ನ ವಿನಂತಿಯನ್ನು ಹೇಗೆ ಸ್ವೀಕರಿಸುತ್ತಾರೋ ಎಂದು ಮನಸ್ಸಿನಲ್ಲಿ ಅನಿಸುದ್ದುಂಟು. ಆದರೆ ಮದುವೆಯ ದಿನ ಭೋಜನದ ನಂತರ ಖುದ್ದಾಗಿ ಬಂದು, ತಮಾಷೆಯಾಗಿ, ಹಾಜರಿ ಹಾಕುವ ರೀತಿಯಲ್ಲಿ,  'ಬಂದಿದ್ದೇನೆ , ಎಲ್ಲ ಚೆನ್ನಾಗಿತ್ತು' ಎಂದು ಹೇಳಿದ ಆ ನಗು ಮುಖದ ಭಾನುಮಾಯ ಇನ್ನಿಲ್ಲ ಅಂದರೆ  ಹೇಗೆ !!

ರಾಜಕೀಯ ಕ್ಷೇತ್ರದ ಕಾರಣಕ್ಕೆ ತಮ್ಮನ್ನು ಒಪ್ಪದ ವ್ಯಕ್ತಿಗಳೂ ಅಗೌರವದಿಂದ ಕಾಣಲಾಗದ ವ್ಯಕ್ತಿಯಾಗಿ ಬದುಕಿದ ಭಾನುಮಾಯ ಮಾಡಿದ ಸಾಮಾಜಿಕ ಕೆಲಸಗಳ ಬಗ್ಗೆ ನನ್ನಷ್ಟು ಕಡಿಮೆ ತಿಳಿದವರಿಲ್ಲವೇನೋ ಎಂಬ ಮುಜುಗರದಿಂದ ಅವರ ಬಗ್ಗೆ ಬರೆಯಲು ನಾನು ಚಿಕ್ಕವನು ಎಂದೆನಿಸಿದರೂ ನನ್ನ ವೈಯಕ್ತಿಕ ಅನುಭವವನ್ನ ಹಂಚಿಕೊಳ್ಳುವುದು ತಪ್ಪಲ್ಲ ಎಂಬ ನಂಬಿಕೆಯ ಮೇಲೆ ನನ್ನದೊಂದು  ಅಕ್ಷರ ನಮನ.

ಭಾನುಮಾಯನ ಅಗಲಿಕೆ ನನ್ನನ್ನು ಈ ಪರಿ ಭಾವುಕನಾಗಿಸುತ್ತದೆ ಎಂದು ನನಗೂ ಅನ್ನಿಸಿರಲಿಲ್ಲ.

ಭಾನುಮಾಯ ಇಲ್ಲ ಎಂಬ ಕಹಿಸತ್ಯ ಯಾವುದಾದರೂ ರೂಪದಲ್ಲಿ ಅಸತ್ಯವಾಗಲಿ ಎಂಬುದೇ ನನ್ನ ಪ್ರಾರ್ಥನೆ.

Aug 26, 2019

ಯುವಾ ಬ್ರಿಗೇಡಿನ '5th Pillar' - ಭಾಗ ೧

ಈ ದಿನ (ಆಗಸ್ಟ್ ೧೦) ಒಂದು ಅತ್ಯದ್ಭುತ ಕಾರ್ಯಕ್ರಮದ ಭಾಗಿಯಾಗಿದ್ದು ನನ್ನ ಅದೃಷ್ಟವೇ ಸರಿ! ಇದರ ಹೆಸರು ಫಿಫ್ತ್ ಪಿಲ್ಲರ್ (5th Pillar)! ಇದನ್ನು ಆಯೋಜಿಸಿದ್ದು ಯುವ ಬ್ರಿಗೇಡ್.  ನನಗೆ ಈ ಕಾರ್ಯಕ್ರಮದ ಬಗ್ಗೆ ತಿಳಿದಾಗ, ಇದರ ಬಗ್ಗೆ ನಿಜಕ್ಕೂ ನನಗೆ ಗೊತ್ತಿರಲಿಲ್ಲ.  ಸುಮಾರು 15 ವರ್ಷಗಳಿಂದ ಹಿಂದೆ 2004 ರಲ್ಲಿ ನಾವು ಚಕ್ರವರ್ತಿಯವರ ಕಾರ್ಯಕ್ರಮವನ್ನು ನಮ್ಮ ಕಾಲೇಜಿನಲ್ಲಿ ಆಯೋಜಿಸಿದ್ದೆವು.  ಅದಕ್ಕೂ ಮೊದಲೇ ನಮ್ಮೂರು ಮತ್ತೂರಿನಲ್ಲೂ ಸಾಕಷ್ಟು ಕಾರ್ಯಕ್ರಮ ನಡೆದಿತ್ತು. ಆಗಿನಿಂದಲೂ ಅಭಿಮಾನವಿರುವ ನನಗೆ, ಚಕ್ರವರ್ತಿಯವರು ಇರುತ್ತಾರೆ ಎಂಬ ಒಂದೇ ಕಾರಣಕ್ಕೆ ನಾನು ಹೋಗಿದ್ದು. ಅಷ್ಟರ ಮಟ್ಟಿಗೆ ನಾನು ಅನಪೇಕ್ಷಿತನೇ !

ಇದೊಂದು ಅದ್ಭುತ ಐಡಿಯಾ! ನಮ್ಮಲ್ಲಿ ಎಷ್ಟೋ ಜನರಿಗೆ, ಏನೋ ಸಾಧಿಸಬೇಕು ಅನ್ನುವ ಹುಮ್ಮಸ್ಸು, ಮನಸ್ಸು ಇರುತ್ತದೆ, ಆದರೆ ಅದಕ್ಕೆ ಒಂದು ಗುರಿ ಹಾಗು ಗುರು ಸಿಗುವುದು ಕಷ್ಟ! ಈ ವೇದಿಕೆ, ಸ್ಟಾರ್ಟ್ ಅಪ್  ಸಾಧಕರನ್ನು ಕರೆ ತಂದು, ಅವರ ಅನುಭವವನ್ನು ಎಳೆಯ ಮನಸ್ಸುಗಳಿಗೆ ಹುರಿದುಂಬಿಸುವ ಕಾರ್ಯಕ್ರಮ ಇದು (Business Conclave). ಇಲ್ಲಿ ಇದ್ದವರೆಲ್ಲಾ ಏನಾದರೂ ಸಾಧಿಸಬೇಕು ಅನ್ನುವ ಮನಸ್ಸನ್ನು ಹೊಂದಿದ್ದ ಯುವಕ ಯುವತಿಯರೇ! 

ಉದ್ಘಾಟನೆಗೆ ಪಬ್ಲಿಕ್ ಟಿವಿ ರಂಗನಾಥ್ ಬಂದಿದ್ರು. ಅವರು ತಮ್ಮ ಅನುಭವ ಬುತ್ತಿ ಬಿಚ್ಚಿ, ನಿಮಗೆ ಒಂದು Passion, ಒಂದು Cohesive Team ಮತ್ತು ಅವಶ್ಯಕ-ಅನವಶ್ಯಕ ಖರ್ಚುಗಳ ನಡುವಿನ ವ್ಯತ್ಯಾಸ ತಿಳಿದಿರಬೇಕು ಅನ್ನುವುದನ್ನು ಉದಾಹರಣೆ ಸಹಿತ ವಿವರಿಸಿದರು. ಒಂದು ಟಿವಿ ಚಾನೆಲ್ ಶುರು ಮಾಡಲು 60-70 ಕೋಟಿ ಖರ್ಚಾಗುತ್ತಿದ್ದ ಕಾಲದಲ್ಲಿ ಪಬ್ಲಿಕ್ ಟಿವಿ ಶುರುಮಾಡಿದಾಗ ಹಾಕಿದ ಬಂಡವಾಳ 7 ಕೋಟಿ !

ಅದಾಗಲೇ ಬಳಸಿದ ಆದರೆ ಉಪಯೋಗಿಸಲು ಯೋಗ್ಯವಾದ ಕ್ಯಾಮೆರಾ ಸಹಿತ ಬಹುತೇಕ ಎಲ್ಲ ಉಪಯುಕ್ತವಾದ ವಸ್ತುಗಳನ್ನು ದೇಶಾದ್ಯಂತ ಸಂಚರಿಸಿ, ಸಂಗ್ರಹಿಸಿ, ಕಟ್ಟಿದ ಪಬ್ಲಿಕ್ ಟಿವಿಯ ಕಥೆ ಒಂದು ಪ್ರೇರಣೆಯೇ ಸರಿ. ಇವರು ಕೂರುವ ಕುರ್ಚಿ ಕೂಡ ಸೆಕೆಂಡ್ ಹ್ಯಾಂಡ್! ಒಂದು ಕಿವಿ ಮಾತು ಹೇಳಿದ ಅವರು ದಯವಿಟ್ಟು ನಿಜ ಹೇಳಿ, ಗಡಿಯಾರ ನೋಡಿ ದುಡಿಯುವುದನ್ನು ಬಿಡಿ, ಕೆಲಸ ಮುಗಿಯುವ ವರೆಗೆ ದುಡಿಯಿರಿ! ಹಾಗೆಯೇ ನಿಮಗೇನಾದರೂ ನಿಮ್ಮ ಮನಸ್ಸಿನಲ್ಲಿರುವುದನ್ನು ಹೇಳಿಕೊಳ್ಳಲು ಕಿವಿಗಳು ಸಿಗದಿದ್ರೆ, ನಾನು ಯಾವಾಗಲೂ ಸಿದ್ಧ ಅಂತ ಭರವಸೆ ಕೊಟ್ರು!

ನಂತರ ಚಾರ್ಟರ್ ಅಕೌಂಟೆಂಟ್ ಮೋಹನ್ ಕುಮಾರ್ ಮಾತನಾಡಿ, ಸ್ಟಾರ್ಟ್ ಅಪ್  ಬಗ್ಗೆ ಮೊದಲ ದಿನವೇ ಎವಲ್ಯೂಯೇಷನ್ ಮಾಡುವುದು ತಪ್ಪು, ಮಾರ್ಕೆಟ್ ಬಗ್ಗೆ ಗಮನವಿರಲಿ, ಡೆವಲಪಿಂಗ್ ದೇಶಗಳಲ್ಲಿ ಬೇಡಿಕೆ ಜಾಸ್ತಿ, ಹಾಗಾಗಿ ಆ ದೇಶಗಳ ಮಾರ್ಕೆಟ್, ಕನ್ಸೂಮರ್ ಸೈಕೊಲಾಜಿ ನೋಡುವುದನ್ನು ಬೆಳಸಿಕೊಳ್ಳಿ ಅನ್ನುವ ಸಲಹೆ ಕೊಟ್ಟರು.  

ಸದಾನಂದ ಮಯ್ಯ ಓದಿದ್ದು ಇಂಜಿನಿಯರಿಂಗ್, ಆದರೆ ಮಾಡಿದ್ದು ಹೋಟೆಲ್ ಬಿಸಿನೆಸ್. ಒಳ್ಳೆಯ ಕ್ರಿಕೆಟ್ ಆಟಗಾರ, ಜಿ ಆರ್ ವಿಶ್ವನಾಥ್ ಜೊತೆ ಆಡುತ್ತಿದ್ದವರು. ಅವರು ತಿಳಿಸಿದ  ABCD ನಿಜಕ್ಕೂ ಶ್ಲಾಘನೀಯ. A - Attitude, B - Belief, C - Confidence,  D - Dream. 

1976 ರಲ್ಲಿ ಸರ್ಕಾರ ದೋಸೆಗೆ ಇಷ್ಟೇ ದರ ವಿಧಿಸಬೇಕು ಅನ್ನುವ ಕಾನೂನು ತಂದಿತು. ಅದಕ್ಕೆ MTR  ವಿರೋಧಮಾಡಿ ಹೋಟೆಲ್ ಮುಚ್ಚಿದರು. ಆಗ ಶುರು ಮಾಡಿದ್ದೇ MTR Retail ಅಂಗಡಿ. ಅಲ್ಲಿ ಮೊದಲೇ ಸಿದ್ಧಪಡಿಸಿದ ಪ್ಯಾಕೇಜ್ ಫುಡ್ ಮಾರಲು ಶುರುಮಾಡಿದರು. ಹೀಗಾಗಿ  ರಿಟೇಲ್ ಅಂಗಡಿಗಳು (outlets) ಶುರು ಆದ್ವು. ವಾಷಿಂಗ್ ಮಷೀನ್ ಭಾರತಕ್ಕೆ ಬಂದ ಹೊಸದರಲ್ಲಿ, ಪಂಜಾಬ್ ನಲ್ಲಿ ಒಬ್ಬ ಇದನ್ನು ಲಸ್ಸಿ ಮಾಡುವ ಯಂತ್ರವಾಗಿ ಮಾರಿದ್ದನ್ನು ಮಯ್ಯ ನೆನಪಿಸಿ, ಹೊಸ ಹೊಸ ಆಲೋಚನೆಯೊಂದಿಗೆ ಮಾರ್ಕೆಟಿಂಗ್ ಮಾಡಬೇಕು ಅನ್ನುವ ಸಲಹೆ ನೀಡಿದರು.

1998ರಲ್ಲಿ ಮಯ್ಯ ಅವರಿಗೆ ಒಂದು ದೂರವಾಣಿ ಕರೆ ಬಂತು ದೆಹಲಿಯಿಂದ. ಮಯ್ಯ ದೆಹಲಿ ತಲಪಿದ್ದು ರಾತ್ರಿ 8.30ಕ್ಕೆ, ದೂರವಾಣಿ ಕರೆ ಮಾಡಿದ್ದವರು ಆಗಿನ ರಕ್ಷಣಾ ಸಚಿವ ಜಾರ್ಜ್ ಫರ್ನಾoಡೀಸ್!! ಮಯ್ಯ ಅವರು ತಲಪಿದ್ದು ಪ್ರಧಾನ ಮಂತ್ರಿ ಅಟಲ್ ಜಿ ಅವರ ಮನೆಗೆ! ಅಲ್ಲಿಗೆ ಅಬ್ದುಲ್ ಕಲಾಂ ಕೂಡ ಬಂದಾಗಿತ್ತು! ಅವರು ಪ್ರಸ್ತಾಪಿಸಿದ್ದು, ಸೈನಿಕರು ಹೊತ್ತು ಒಯ್ಯುವ ಒಂದು ದಿನದ ಬ್ಯಾಗ್ ಬಗ್ಗೆ! ಆ ಬ್ಯಾಗ್ ನಲ್ಲಿ ಒಂದು ದಿನಕ್ಕೆ ಬೇಕಾಗುವ ಊಟ, ನೀರು, ಕಾಫಿ, ಟೀ, ಹಾಲು ಇರುತ್ತದೆ. ಅದರ ತೂಕ 27 ಕೆಜಿ, ಅದನ್ನು 10 ಕೆಜಿ  ಇಳಿಸಿಕೊಡಬೇಕು ಅಂದರೆ 17ಕೆಜಿಗೆ ಅನ್ನುವ ಮಹತ್ವದ ವಿಚಾರ! ಇದಕ್ಕೆ ಕೊಟ್ಟ ಅವಧಿ ಹದಿನೈದು ದಿನ. ಮಯ್ಯ ಬ್ಯಾಗ್ ನ ತೂಕವನ್ನು 27 ಕೆಜಿ ಇಂದ 11 ಕೆಜಿ ಗೆ ಇಳಿಸಿದರು! ಇದಕ್ಕೆ MTR ಗ್ರೀನ್ ಬ್ಯಾಗ್ ಅನ್ನುವ ನಾಮಕರಣ ಮಾಡಿದರು. ಹೀಗೆ ಅವರ ಸಾಫ್ಟಿ ಐಸ್ ಕ್ರೀಮ್ ನ ಅನುಭವ ಕೂಡ ಹಂಚಿಕೊಂಡ್ರು. 

ಲೆಫ್ಟಿನೆಂಟ್ ಕೆಪಿ ನಾಗೇಶ್ - ಈತ ಯುನಿಕ್ ಡೆಟೆಕ್ಟಿವ್ ಮತ್ತು ಸೆಕ್ಯುರಿಟೀಸ್ ಶುರು ಮಾಡಿ ಯಶಸ್ಸು ಕಂಡವರು. ಇವರು ಹೇಳಿದ ವೇದ ವಾಕ್ಯ, ‘ನೀವು  ಸ್ಟಾರ್ಟ್ ಅಪ್ ಶುರು ಮಾಡಿದರೆ, ದುಡುಕು, ಸಿಡುಕು, ಕೆಡಕು ದೂರವಿಡಿ’, Attitude  decides  the  Altitude  of  the  person  ಅಂದ್ರು. ಈತ ಈ ಸೆಕ್ಯುರಿಟೀಸ್ ಉದ್ಯಮವನ್ನು ಇನ್ನೂರು ಕೋಟಿಗೆ ಬೆಳಿಸಿದ್ದಾರೆ! ಗ್ರಾಮದ ಹಿನ್ನಲೆ ಇಂದ ಬಂದ ಇವರು, ಗ್ರಾಮೀಣ ಪ್ರತಿಭೆಗಳಿಗೆ ಅವಕಾಶ ಕಲ್ಪಿಸುವ ಕಾರ್ಯ ಮಾಡುತ್ತಲಿದ್ದಾರೆ.

ನಂತರದ ಸರತಿ ಸತ್ಯಶಂಕರ್ ಭಟ್, ಅಲಿಯಾಸ್ ಬಿಂದು (Bindu Soda) ಭಟ್ಟರವರದ್ದು! ಇವರು ಹುಟ್ಟಿದ್ದು ಪುತ್ತೂರಿನ ಬಳಿಯ ಹಳ್ಳಿಯಲ್ಲಿ. ಇವರದು ತುಂಬಿದ ಬ್ರಾಹ್ಮಣ ಮಡಿವಂತ ಕುಟುಂಬ. ಒಟ್ಟು ಒಂಬತ್ತು ಮಕ್ಕಳು. ಇವರ ಅಣ್ಣಂದಿರು ಓದಿ ಕೆಲಸವಿಲ್ಲದೆ ಅಲೆಯುತ್ತಿದ್ದದ್ದನ್ನು ನೋಡಿ, ತಂದೆಯವರು ಇವರ ಓದನ್ನು SSLC ಗೆ ನಿಲ್ಲಿಸಿದರು. ಈತ ಮನೆಯವರ ಮಾತಿಗೆ ವಿರುದ್ಧವಾಗಿ, ಆಟೋ ಇಟ್ಟರು. ಅದನ್ನು ಮಾರಿ ಅಂಬಾಸಿಡಾರ್ ಕಾರ್ ಇಟ್ರು, ಆಟೋಮೊಬೈಲ್ ಸ್ಪೇರ್ ಪಾರ್ಟ್ಸ್ ಅಂಗಡಿ ಇಟ್ರು, ನಂತರ ಆಟೋಮೊಬೈಲ್ ಫೈನಾನ್ಸ್ ಕಂಪನಿ ತೆರೆದರು.  ಎಲ್ಲದರಲ್ಲೂ ಯಶಸ್ವಿ ಆದ್ರು. 

ಆದರೆ ಗ್ರಾಮದ ಯುವಕರಿಗೆ ಕೆಲಸ ಕೊಡುವ, ಅವರನ್ನು ಅಲ್ಲಿಯೇ ಉಳಿಸಿಕೊಳ್ಳುವ ಕೆಲಸ ಮಾಡಬೇಕೆಂಬ ಮಹದಾಸೆ ಇಂದ, ಅವರ ತೋಟದಲ್ಲಿ ಇದ್ದ ಸಿಹಿನೀರಿನ್ನು, ಬಾಟಲ್ ಮಾಡಿ ಮಾರುವ ಕಾರ್ಯಕ್ಕೆ ಅಡಿ ಇಟ್ಟರು, ನಂತರದ ಅವಿಷ್ಕಾರವೇ ಬಿಂದು ಸೋಡಾ!! ಇದು ಯಾವ ಮಟ್ಟದ ಸಂಚಲನ ಉಂಟು ಮಾಡಿತೆಂದರೆ, ಇವರ ಉದ್ಯಮ ಐದು ಕೋಟಿ ತಲಪಿದಾಗ, ಕೋಕಾಕೋಲಾ ಕಂಪನಿಯವರು ಐವತ್ತು ಕೋಟಿ ಕೊಟ್ಟು ಕೊಂಡುಕೊಳ್ಳಲು ಬಂದ್ರೂ, ೫೦೦ ಕೋಟಿ ಉದ್ಯಮವನ್ನಾಗಿ ಮಾಡುತ್ತೇನೆಯೇ ಹೊರತು ಮಾರುವುದಿಲ್ಲ ಎಂದು ಅದನ್ನು ಮಾರಲಿಲ್ಲ! ಈಗ ಈ ಉದ್ಯಮ 500 ಕೋಟಿಯನ್ನೂ ಮೀರಿ ತಲುಪಿದೆ. ಬೇರೆ ಬೇರೆ ದೇಶಕ್ಕೂ ಬಿಂದು ಸೋಡಾ ರಫ್ತಾಗುತ್ತಿದೆ! ಇವರು ಒಂದುಸಾವಿರ ಜನಕ್ಕೆ ಹಳ್ಳಿಯಲ್ಲಿ ಕೆಲಸ ಕೊಟ್ಟಿದ್ದಾರೆ! ಇವರ ಆಟೋಮೊಬೈಲ್ ಫೈನಾನ್ಸ್ ಕೂಡ 200 ಕೋಟಿ ತಲಪಿದೆ!


ಮುಂದುವರೆಯುವುದು...