ಸುಮಾರು 14 ವರ್ಷಗಳ ಹಿಂದೆ, ಹೊಸ ಬೈಕು ಕೊಂಡ ಖುಷಿಯಲ್ಲಿ ನಾನು ಮತ್ತು ನನ್ನ ಆತ್ಮೀಯ ಸ್ನೇಹಿತ ಬೆಂಗಳೂರಿನಿಂದ ಮತ್ತೂರಿಗೆ ಬೈಕಿನಲ್ಲೇ ಬಂದಿದ್ವಿ. ಯಾರಿಗೂ ಬೈಕಿನಲ್ಲಿ ಬರುವ ವಿಷಯವನ್ನು ತಿಳಿಸಿರಲಿಲ್ಲ. ಈ ವಿಷಯವಾಗಿ ನಮ್ಮ ತಾಯಂದಿರು ಚಕಾರವೆತ್ತಿದಾಗ ಭಾನು ಮಾಯ 'ಈ ವಯಸ್ಸಿನಲ್ಲಿ ಬೈಕಿನಲ್ಲಿ ಬರದೇ ಏನ್ ನಿಮ್ಮ ವಯಸ್ಸಿನಲ್ಲಿ ಅಥವಾ 60 ವರ್ಷ ಆದಮೇಲೆ ಬರೋಕ್ಕಾಗುತ್ತೇ? ಮಕ್ಕಳು ಮಾಡುವುದೆಲ್ಲವನ್ನು ವಿರೋಧಿಸುವುದಕ್ಕಿಂತ ಅವರ ಧೈರ್ಯ ಸ್ವಭಾವವನ್ನ ಗೌರವಿಸಿ ಹುಷಾರಾಗಿ ಬನ್ನಿ ಅಂತ ಹೇಳುವುದು ಒಳ್ಳೆಯದು ' ಅಂತ ಹೇಳಿದ್ದು ನೆನಪಾಗಿ ಅವರ ಅನುಪಸ್ಥಿತಿಯನ್ನು ನಂಬಲು ಇನ್ನು ಸಾಧ್ಯವಾಗಿಲ್ಲ.
ಮತ್ತೂರಿನ ಸಂಘಸ್ಥಾನ ದುರ್ಗಮ್ಮನ ದೇವಸ್ಥಾನದ ಪಕ್ಕದಲ್ಲಿ ಹಿಂದೆ ಸಾಯಂ ಶಾಖೆ ನಡೆಯುತ್ತಿದ್ದ ಸಮಯ. ಲಗೋರಿ ಆಗಿನ ಆಟದ ಆಕರ್ಷಣೆ. ಆವರಣದ ಸುತ್ತಲೂ ತಂತಿಯ ಬೇಲಿ. ಆಟ ಆಡುವಾಗ ಚೆಂಡು ಬೇಲಿಯ ಹೊರಗೆ ಹೋದಾಗಲೆಲ್ಲಸಮಯವನ್ನು
ಉಳಿಸಲು ಸಾಕಷ್ಟು ಬಾರಿ ಬೇಲಿಯನ್ನು ಹಾರಿ ಹೋಗುತ್ತಿದ್ದೆ. ನೋಡಲು ದಪ್ಪಗಿದ್ದರೂ ಆಟೋಟಗಳಲ್ಲಿ ಅಷ್ಟೇನೂ ಹಿಂದಿರಲಿಲ್ಲ. ದೇವಸ್ಥಾನದ ಕಟ್ಟೆಯನ್ನು ಒಂದು ಕೈಯ್ಯನ್ನಿಟ್ಟು ಹಾರುತ್ತಿದ್ದೆ. ಇವುಗಳೆಲ್ಲದರ
ಬಗ್ಗೆ ತಿಳಿದಿದ್ದರೇನೋ ಎಂಬಂತೆ ಭಾನುಮಾಯ, ಒಮ್ಮೆ, ನಾನು ಚೆಂಡನ್ನು ತರಲು ಬೇಲಿ ಹಾರಿದುದನ್ನು ನೋಡಿ, ನನ್ನನ್ನು ಕರೆದು ‘ಏನೋ ಅಷ್ಟು
ಚೆನ್ನಾಗಿ ಹಾರ್ತೀಯಾ ! ನೋಡಿ ಖುಷಿಯಾಯಿತು. ಆದರೆ ಎಷ್ಟೇ ಹುಷಾರಾಗಿದ್ರು ಸಾಕಾಗಲ್ಲ ಒಮ್ಮೊಮ್ಮೆ. ನಿಮ್ಮ ತಾಯಿ ನಿನ್ನನ್ನು ಉಳಿಸಿಕೊಳ್ಳಲು ಸಾಕಷ್ಟು ಕಷ್ಟ ಪಟ್ಟಿದ್ದಾರೆ. ನಿನ್ನ ಮೇಲೆ ಪ್ರಾಣವೇ ಇಟ್ಟುಕೊಂಡಿದ್ದಾರೆ. ಯೋಚನೆ ಮಾಡು' ಅಂತ ಹೇಳಿ ಭುಜ ತಟ್ಟಿ ಹೋಗಿದ್ದರು .
ಇತ್ತೀಚಿಗೆ ಒಂದು ಸಮಾರಂಭದ ಭೋಜನಕ್ಕೆ ಕರೆಯಲು ಹೋದಾಗಲೂ 'ಬಾ ಕುಳಿತುಕೋ, ಮನೇಲಿ ಎಲ್ಲ ಹೇಗಿದ್ದಾರೆ' ಎಂದು ಆತ್ಮೀಯವಾಗಿ ಉಪಚರಿಸಿದ ವ್ಯಕ್ತಿ ಈಗಿಲ್ಲ ಅಂದರೆ ದೇವರ ಬಗ್ಗೆ ಕೋಪ ಬರದೇ ಇರದು.
ನಾವು ಸಣ್ಣವರಿದ್ದಾಗ ಊರಿನ ರಥೋತ್ಸವದ ಭಜನೆಗಳಲ್ಲಿ ಅವರು ಹೇಳಿಕೊಡುತ್ತಿದ್ದ 'ರಾಮ ಜಿ ಕಿ ಸೇನಾ ಚಲೀ' ಮತ್ತು ಇತರ ರಾಷ್ತ್ರೀಯತೆಯ ಸಂಬಂಧಿತ ಭಜನೆಗಳು, ಆ ಕಂಚಿನ ಕಂಠದ ಧ್ವನಿಯಲ್ಲಿ ಇನ್ಮುಂದೆ ಕೇಳಲು ಅವಕಾಶವಂಚಿತರನ್ನಾಗಿ ಮಾಡಿದ ವಿಧಿಗೆ ಕರುಣೆಯೇ ಇಲ್ಲವೇ?
ಇಡೀ ಸಮಾಜದ ಬಹುಪಾಲು ಜನರು ಒಬ್ಬ ವ್ಯಕ್ತಿಯನ್ನು ಹೀಗಳೆಯುತ್ತಿದ್ದಾಗ, ಜರೆಯುತ್ತಿದ್ದಾಗ, ತುಚ್ಛವಾಗಿ ಕಾಣುತ್ತಿದ್ದಾಗ ಅದೂ ಆ ವ್ಯಕ್ತಿ ತನ್ನನ್ನು ಒಪ್ಪಲೊಲ್ಲದವನಾಗಿದ್ದಾಗ, ಅನ್ನುವವರಲ್ಲಿ ಒಬ್ಬನಾಗುವುದು ಬಹಳ ಸುಲಭ. ಆದರೆ ಆ ಸಮಯದಲ್ಲೂ ಎಲ್ಲರಿಗಿಂತ ಭಿನ್ನವಾಗಿ ಆ ವ್ಯಕ್ತಿಯ ಪರವಾಗಿ ಸ್ಪಂದಿಸುವುದು ಅವರಿಗೆ ಮಾತ್ರ ತಕ್ಕುದಾಗಿತ್ತು.
2003ರ ನನ್ನ ಅಕ್ಕನ ಮದುವೆಯ ಸಮಯ. ಖಂಡಿತ ಬರಬೇಕು ಎಂದು, ಅವಕಾಶವಾದಾಗಲೆಲ್ಲ ವಿನಂತಿಸಿದ್ದೆ. ಆಗಿನ್ನೂ ನನಗೆ 16ರ ವಯಸ್ಸು. ನನ್ನ ಮಾತನ್ನು, ನನ್ನ ವಿನಂತಿಯನ್ನು ಹೇಗೆ ಸ್ವೀಕರಿಸುತ್ತಾರೋ ಎಂದು ಮನಸ್ಸಿನಲ್ಲಿ ಅನಿಸುದ್ದುಂಟು. ಆದರೆ ಮದುವೆಯ ದಿನ ಭೋಜನದ ನಂತರ ಖುದ್ದಾಗಿ ಬಂದು, ತಮಾಷೆಯಾಗಿ, ಹಾಜರಿ ಹಾಕುವ ರೀತಿಯಲ್ಲಿ, 'ಬಂದಿದ್ದೇನೆ , ಎಲ್ಲ ಚೆನ್ನಾಗಿತ್ತು' ಎಂದು ಹೇಳಿದ ಆ ನಗು ಮುಖದ ಭಾನುಮಾಯ ಇನ್ನಿಲ್ಲ ಅಂದರೆ ಹೇಗೆ !!
ರಾಜಕೀಯ ಕ್ಷೇತ್ರದ ಕಾರಣಕ್ಕೆ ತಮ್ಮನ್ನು ಒಪ್ಪದ ವ್ಯಕ್ತಿಗಳೂ ಅಗೌರವದಿಂದ ಕಾಣಲಾಗದ ವ್ಯಕ್ತಿಯಾಗಿ ಬದುಕಿದ ಭಾನುಮಾಯ ಮಾಡಿದ ಸಾಮಾಜಿಕ ಕೆಲಸಗಳ ಬಗ್ಗೆ ನನ್ನಷ್ಟು ಕಡಿಮೆ ತಿಳಿದವರಿಲ್ಲವೇನೋ ಎಂಬ ಮುಜುಗರದಿಂದ ಅವರ ಬಗ್ಗೆ ಬರೆಯಲು ನಾನು ಚಿಕ್ಕವನು ಎಂದೆನಿಸಿದರೂ ನನ್ನ ವೈಯಕ್ತಿಕ ಅನುಭವವನ್ನ ಹಂಚಿಕೊಳ್ಳುವುದು ತಪ್ಪಲ್ಲ ಎಂಬ ನಂಬಿಕೆಯ ಮೇಲೆ ನನ್ನದೊಂದು ಅಕ್ಷರ ನಮನ.
ಭಾನುಮಾಯನ ಅಗಲಿಕೆ ನನ್ನನ್ನು ಈ ಪರಿ ಭಾವುಕನಾಗಿಸುತ್ತದೆ ಎಂದು ನನಗೂ ಅನ್ನಿಸಿರಲಿಲ್ಲ.
ಭಾನುಮಾಯ ಇಲ್ಲ ಎಂಬ ಕಹಿಸತ್ಯ ಯಾವುದಾದರೂ ರೂಪದಲ್ಲಿ ಅಸತ್ಯವಾಗಲಿ ಎಂಬುದೇ ನನ್ನ ಪ್ರಾರ್ಥನೆ.
No comments:
Post a Comment