Jan 21, 2025

'ನೋಟು ಮುದ್ರಣಾಲಯ' ಭೇಟಿಯ ಕ್ಷಣಗಳು

ಕಳೆದ 4-5 ವರ್ಷಗಳಿಂದ ಇದ್ದ ಆಸೆ ಎಂದರೆ ಮೈಸೂರಿನ ನೋಟು ಮುದ್ರಣಾಲಯವನ್ನು ವೀಕ್ಷಿಸಬೇಕು ಎಂದು. ನನ್ನ ಸ್ನೇಹಿತರ ತಂಡದೊಂದಿಗೆ ಹೋಗುವ ಯೋಜನೆ ಇತ್ತು. ಆದರೆ ಅದು ಸಾಧ್ಯವಾಗಿರಲಿಲ್ಲ. ಅಷ್ಟರಲ್ಲೇ ನೋಟು ಅಮಾನ್ಯೀಕರಣದ ಕಾರಣದಿಂದ  ಸಾರ್ವಜನಿಕರ ಭೇಟಿಯನ್ನು ರದ್ದುಗೊಳಿಸಿದರು. ನನ್ನ ಆಸೆ ಹಾಗೆ ಉಳಿದುಕೊಂಡಿತ್ತು. ಕಳೆದ ವರ್ಷವೇ ಸಾರ್ವಜನಿಕ ಭೇಟಿಯನ್ನು ಆರಂಭಿಸಿದ್ದರೂ ಕಾಲ ಕೂಡಿ ಬಂದಿರಲಿಲ್ಲ. ಅಲ್ಲಿ ಕೆಲಸ ಮಾಡುವವರ ಮುಖಾಂತರ ಮಾತ್ರ ಹೋಗುವ ಅವಕಾಶವಿರುವುದೇ ವಿನಃ ಹಾಗೆಯೇ ಹೋಗಲು ಅವಕಾಶವಿಲ್ಲ . ಆ ಕಾರಣಕ್ಕಾಗಿಯೇ ಯಾರು ಬೇಕಾದರೂ ಹೋಗಲು ಸಾಧ್ಯವಿಲ್ಲ. ಅಲ್ಲಿರುವವರೇ ನಮ್ಮ ಸಲುವಾಗಿ ನಮ್ಮ ವಿವರಗಳನ್ನು ನೀಡಿ ವೀಕ್ಷಣೆಗೆ ಅನುಮತಿ ಪಡೆಯಬೇಕು. 

ಹೇಗಾದರೂ ಒಮ್ಮೆ ನೋಟು ಮುದ್ರಣವನ್ನು ನೋಡಬೇಕು ಎಂಬ ಆಸೆ ಉತ್ತುಂಗದಲ್ಲಿದ್ದಾಗಲೇ  ಅವಕಾಶವಾಗುವ ಲಕ್ಷಣ ಕಾಣಿಸಿತು. ನನ್ನ ಭಾವನ ಸ್ನೇಹಿತರೊಬ್ಬರು ಅಲ್ಲೇ ಕೆಲಸ ಮಾಡುತ್ತಿದ್ದುದು ಗೊತ್ತಿತ್ತು. ಮೈಸೂರಿನಲ್ಲಿ ಒಂದು ಕಾರ್ಯಕ್ರಮದ ನಿಮಿತ್ತ ಎಲ್ಲರೂ ಮೈಸೂರಿಗೆ ಹೋಗುವ ಯೋಜನೆ ತಿಳಿದು ಅದೇ ಶನಿವಾರ ತಿಂಗಳ ಮೊದಲ ಶನಿವಾರವೂ ಆದ್ದರಿಂದ ಎಲ್ಲವೂ ಕೂಡಿಬಂತು.

ಕೊನೆಗೂ ಮಾತುಕತೆ ನಡೆದು ಭೇಟಿಯು ನಿಶ್ಚಯವಾಯಿತು. ಭೇಟಿಗೆ ಬರುವವರ ಕೆಲ ಮಾಹಿತಿಯನ್ನು ಮೊದಲೇ ತಿಳಿಸಬೇಕಿದ್ದರಿಂದ ನಮ್ಮ ನಮ್ಮ ಮಾಹಿತಿಯನ್ನು ಹಂಚಿಕೊಂಡೆವು. ಅದಕ್ಕೆ ಪ್ರತಿಯಾಗಿ ನಮ್ಮ ಭೇಟಿಯ ವಿವರವಾದ ಕೋರಿಕೆಗೆ ಬೇಕಾದ ಕಾಗದ ಪತ್ರಗಳು ತಯಾರಾದವು. ನಾವು ಬೆಳಿಗ್ಗೆ 6.30ಗೆ ಹೊರಟೆವು. ಭೇಟಿಯ ಕಾಲಾವಕಾಶ ಬೆಳಿಗ್ಗೆ 8.30ಯಿಂದ 11.30ಯ ವರೆಗೆ ಮಾತ್ರ ಇದ್ದುದರಿಂದ  ನಾವು 9ರ ಒಳಗೆ ನಾವು ಸೇರಬೇಕಿತ್ತು. ಸರಿ ಸುಮಾರು 9.30ಯ ಹೊತ್ತಿಗೆ ಎಲ್ಲ ಭದ್ರತಾ ವ್ಯವಸ್ಥೆಗಳೆಲ್ಲ ಮುಗಿಸಿಕೊಂಡು ಒಳಗೆ ಹೋಗಿ ನೋಡಿದರೆ, ನನ್ನ ಪಾಲಿಗೆ ಒಂದು ಅದ್ಭುತ ಪ್ರಪಂಚವೇ ಮುಂದಿತ್ತು.

ನಾಲ್ಕು ಅಥವಾ ಐದು ಸಾಲುಗಳ ಯಂತ್ರಗಳಲ್ಲಿ ಹಾದು ಮುದ್ರಣವಾಗುವ ನೋಟುಗಳು, ಸಾಕಷ್ಟು  ಹಂತಗಳನ್ನು ದಾಟಿಕೊಂಡು ಎಲ್ಲ ಪರೀಕ್ಷೆಗಳನ್ನು ಮುಗಿಸಿಕೊಂಡು ಚಲಾವಣೆಗೆ ಅರ್ಹವಾಗುತ್ತವೆ. ಎಲ್ಲವು ಜರ್ಮನಿ ಅಥವಾ ಜಪಾನಿನ ಯಂತ್ರಗಳು ಹಾಗೂ ಸಾಕಷ್ಟು ವರ್ಷಗಳಿಂದ ಸ್ವಲ್ಪವೂ ತೊಂದರೆ ನೀಡದೆ ಇರುವ ಯಂತ್ರಗಳು ಎಂದು ಕೇಳಿ ಕ್ಷಣ ಆಶ್ಚರ್ಯವೇ ಆಯಿತು. ಮೊದಲಿಗೆ ನೋಟಿನಲ್ಲಿರುವ ಬಣ್ಣದ ಭಾಗವನ್ನು ಮುದ್ರಿಸುವ ಅಂದರೆ ವಾಟರ್ ಮಾರ್ಕ್(ಗಾಂಧೀಜಿ ಫೋಟೋ) ಕೂಡ ಇದರಲ್ಲಿ ಸೇರಿಕೊಂಡು, ಯಂತ್ರಗಳು ಪ್ರತಿ ಕ್ಷಣಕ್ಕೆ  10 x 5 ನೋಟುಗಳಿರುವ ಪೇಪರ್  ಮುದ್ರಣಗೊಳ್ಳುತ್ತವೆ. ಆ ತರಹದ 10,000 ಪೇಪರಿನ ಬಂಡಲಿನ ಹಲವಾರು ಬಂಡಲುಗಳು ಪ್ರತಿ ಯಂತ್ರಗಳಿಗೂ ಫೀಡ್ ಮಾಡಲಾಗಿರುತ್ತದೆ. 

ಪ್ರತಿ ಹಂತದಲ್ಲೂ ಅತ್ಯದ್ಭುತವಾದ ಕ್ಯಾಮೆರಾಗಳು ಪ್ರತಿ ಪೇಪರಿನ ಫೋಟೋಗಳನ್ನು ಪಡೆದು  ಇಮೇಜ್ ಪ್ರೊಸೆಸಿಂಗ್ ಮುಖಾಂತರ ಉತ್ಕೃಷ್ಟ ಮಟ್ಟದ ಪರೀಕ್ಷೆಯನ್ನು ಮಾಡುತ್ತದೆ. ಕಿಂಚಿತ್ ಲೋಪಗಳು ಸಿಕ್ಕಿದರೂ ಆ ಪೇಜನ್ನು ಹೊರಗೆ ತೆಗೆದು ಇನ್ನೊಂದು ಜಾಗದಲ್ಲಿ ತೆಗೆದಿಡಲು ವ್ಯವಸ್ಥೆ ಇರುತ್ತದೆ. ಆ ನಂತರ ಅವುಗಳನ್ನು ಮಾನ್ಯುಯಲ್ ಆಗಿ ಪರೀಕ್ಷೆ ಮಾಡಿ ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತಾರೆ. ಶೇಕಡಾ ೧ ರಷ್ಟು ಲೋಪಗಳು  ಉಂಟಾಗುವುದು ಸ್ವೀಕಾರಾರ್ಹವೆಂದು ಪರಿಗಣಿಸಲಾಗುತ್ತದೆ. 

ಆ ನಂತರದ ಹಂತ ನೋಟಿನ ಬಂಡಲ್ ಗಳನ್ನು ಮಾಡುವುದು. ಅದ್ಭುತ ಯಂತ್ರಗಳ ಸಹಾಯದಿಂದ 10 x 5 ರ ಪೇಪರಿನ ಬಂಡಲುಗಳು ಉದ್ದುದ್ದ ಹಾಗೂ ಅಗಲಗಲ ಕತ್ತರಿಸಿಕೊಂಡು 100 ನೋಟುಗಳ ಬಂಡಲುಗಳಾಗಿ ಹೊರಗೆ ಬರುತ್ತದೆ. ಆ ಬಂಡಲುಗಳನ್ನು ಇನ್ನೊಂದು ವಿಧವಾದ ಪ್ಲಾಸ್ಟಿಕ್ ರೋಲುಗಳಲ್ಲಿ ಸುತ್ತಿ ರಟ್ಟಿನ ಬಾಕ್ಸ್ ಗಳಿಗೆ ತುಂಬಲಾಗುತ್ತದೆ. 

ಪ್ರತಿ ಹಂತದಲ್ಲೂ ಕ್ಯಾಮೆರಾಗಳು ಅದ್ಭುತವಾಗಿ ಅತ್ಯಂತ ಸೂಕ್ಷ್ಮ ಮುದ್ರಣ ದೋಷಗಳನ್ನೂ ಕಂಡುಹಿಡಿದು  ಬೇರ್ಪಡಿಸಿ ಕಾರ್ಯವನ್ನು ಸುಗಮಗೊಳಿಸುವ ವ್ಯವಸ್ಥೆ ಅದ್ಭುತ. ಪ್ರತಿನಿತ್ಯ ಎರಡು ಶಿಫ್ಟ್ ಗಳಲ್ಲಿ ಕೆಲಸ ಮಾಡುವ ವ್ಯವಸ್ಥೆ ಇದ್ದು ಮುದ್ರಣಕ್ಕೆ ಬೇಕಾದ ಕಾಗದ ಹಾಗು ಬಣ್ಣದ ಉತ್ಪಾದನೆಯೂ ಸ್ಥಾನೀಯವಾಗಿಯೇ ನಡೆಯುವುದರಿಂದ, ಸ್ವಂತಿಕೆ ಒಂದು ಹೆಮ್ಮೆಯಾಗಿದೆ ಹಾಗು ನಕಲು ಮಾಡುವುದನ್ನು ತಡೆಯಲು ಸಹಕಾರಿಯಾಗಿದೆ . 

ಅತ್ಯಂತ ಕೊನೆಯ ಹಂತವಾಗಿ ಇನ್ನೊಂದು ಸುತ್ತಿನ ಪರೀಕ್ಷೆ ನಡೆಯುತ್ತದೆ. ಯಾವುದೇ ಯಂತ್ರಗಳ ಸಹಾಯವಿಲ್ಲದೆ ನಡೆಯುವ ಈ ಹಂತದಲ್ಲಿ ಬಂಡಲ್ ಗಳ ಪ್ರಮಾಣದಲ್ಲಿ ತಿರಸ್ಕಾರಗೊಂಡ ನೋಟುಗಳನ್ನು ಪರೀಕ್ಷಿಸಿ ಮುಂದಿನ ತೀರ್ಮಾನಗಳನ್ನು ತೆಗೆದುಕೊಳ್ಳಲಾಗುತ್ತದೆ. ಪೂರ್ಣ ತಿರಸ್ಕಾರವಿರಬಹುದು ಅಥವಾ ಕೆಲವು ಚಲಾವಣೆಗೆ ಅರ್ಹವಾದ ಮುದ್ರಣ ದೋಷಗಳೂ ಇರಬಹುದು. 

ನಾವು ಭೇಟಿ ನೀಡಿದಾಗ 500, 20ರ ಹೊಸ ನೋಟು, 100 ಮತ್ತು 200 ಮುಖಬೆಲೆಗಳ ನೋಟುಗಳ ಮುದ್ರಣ ನಡೆಯುತ್ತಿತ್ತು. ಆರ್ಬಿಐನ ಅಂಗಸಂಸ್ಥೆಯಾಗಿ ಕೆಲಸ ನಿರ್ವಹಿಸುವ ನೋಟು ಮುದ್ರಣಾಲಯ, ಕೇಂದ್ರ ಸರ್ಕಾರದ ನೇರ ಹಸ್ತಕ್ಷೇಪಕ್ಕೆ ಆಸ್ಪದ ಕೊಟ್ಟಿಲ್ಲ. 

ಇನ್ನೊಂದು ಮುಖ್ಯವಾದ ಅಂಶವೆಂದರೆ ನೋಟು ಮುದ್ರಣ ನಗರದ ವಿಸ್ತೀರ್ಣ, ಅದರ ನಿರ್ವಹಣೆ, ಅಚ್ಚುಕಟ್ಟುತನ, ಸ್ವಚ್ಛತೆ, ಅಲ್ಲಿರುವ ಕ್ರೀಡಾ ವ್ಯವಸ್ಥೆಗಳು, ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ  ಇರುವ ಕೇಂದ್ರೀಯ ವಿದ್ಯಾಲಯ, ಎಲ್ಲವನ್ನೂ ಒಡಲೊಳಗೆ ಕಾಪಾಡಿಕೊಂಡಿರುವುದು ನಿಬ್ಬೆರಗಾಗಿಸುವಂತೆ ಮಾಡುತ್ತದೆ.

ಭಾನುಮಾಯನ ಅನುಪಸ್ಥಿತಿ ಯಾರಿಗೂ ಕಾಡದೆ ಇರದು

ಸುಮಾರು 14 ವರ್ಷಗಳ ಹಿಂದೆ, ಹೊಸ ಬೈಕು ಕೊಂಡ ಖುಷಿಯಲ್ಲಿ ನಾನು ಮತ್ತು ನನ್ನ ಆತ್ಮೀಯ ಸ್ನೇಹಿತ ಬೆಂಗಳೂರಿನಿಂದ ಮತ್ತೂರಿಗೆ ಬೈಕಿನಲ್ಲೇ ಬಂದಿದ್ವಿ. ಯಾರಿಗೂ ಬೈಕಿನಲ್ಲಿ ಬರುವ ವಿಷಯವನ್ನು ತಿಳಿಸಿರಲಿಲ್ಲ. ವಿಷಯವಾಗಿ ನಮ್ಮ ತಾಯಂದಿರು ಚಕಾರವೆತ್ತಿದಾಗ ಭಾನು ಮಾಯ ' ವಯಸ್ಸಿನಲ್ಲಿ ಬೈಕಿನಲ್ಲಿ ಬರದೇ ಏನ್ ನಿಮ್ಮ ವಯಸ್ಸಿನಲ್ಲಿ ಅಥವಾ 60 ವರ್ಷ ಆದಮೇಲೆ ಬರೋಕ್ಕಾಗುತ್ತೇ? ಮಕ್ಕಳು ಮಾಡುವುದೆಲ್ಲವನ್ನು  ವಿರೋಧಿಸುವುದಕ್ಕಿಂತ ಅವರ ಧೈರ್ಯ ಸ್ವಭಾವವನ್ನ ಗೌರವಿಸಿ ಹುಷಾರಾಗಿ ಬನ್ನಿ ಅಂತ ಹೇಳುವುದು ಒಳ್ಳೆಯದು ' ಅಂತ  ಹೇಳಿದ್ದು ನೆನಪಾಗಿ ಅವರ ಅನುಪಸ್ಥಿತಿಯನ್ನು ನಂಬಲು ಇನ್ನು ಸಾಧ್ಯವಾಗಿಲ್ಲ

ಮತ್ತೂರಿನ ಸಂಘಸ್ಥಾನ ದುರ್ಗಮ್ಮನ ದೇವಸ್ಥಾನದ ಪಕ್ಕದಲ್ಲಿ ಹಿಂದೆ ಸಾಯಂ ಶಾಖೆ ನಡೆಯುತ್ತಿದ್ದ ಸಮಯ. ಲಗೋರಿ ಆಗಿನ ಆಟದ ಆಕರ್ಷಣೆ. ಆವರಣದ ಸುತ್ತಲೂ ತಂತಿಯ ಬೇಲಿ. ಆಟ ಆಡುವಾಗ ಚೆಂಡು ಬೇಲಿಯ ಹೊರಗೆ ಹೋದಾಗಲೆಲ್ಲಸಮಯವನ್ನು ಉಳಿಸಲು ಸಾಕಷ್ಟು ಬಾರಿ ಬೇಲಿಯನ್ನು ಹಾರಿ ಹೋಗುತ್ತಿದ್ದೆ. ನೋಡಲು  ದಪ್ಪಗಿದ್ದರೂ ಆಟೋಟಗಳಲ್ಲಿ ಅಷ್ಟೇನೂ ಹಿಂದಿರಲಿಲ್ಲ. ದೇವಸ್ಥಾನದ ಕಟ್ಟೆಯನ್ನು ಒಂದು ಕೈಯ್ಯನ್ನಿಟ್ಟು ಹಾರುತ್ತಿದ್ದೆ. ಇವುಗಳೆಲ್ಲದರ ಬಗ್ಗೆ ತಿಳಿದಿದ್ದರೇನೋ ಎಂಬಂತೆ ಭಾನುಮಾಯ, ಒಮ್ಮೆ, ನಾನು ಚೆಂಡನ್ನು ತರಲು ಬೇಲಿ ಹಾರಿದುದನ್ನು ನೋಡಿ, ನನ್ನನ್ನು ಕರೆದುಏನೋ ಅಷ್ಟು ಚೆನ್ನಾಗಿ ಹಾರ್ತೀಯಾ ! ನೋಡಿ ಖುಷಿಯಾಯಿತು.  ಆದರೆ ಎಷ್ಟೇ ಹುಷಾರಾಗಿದ್ರು ಸಾಕಾಗಲ್ಲ ಒಮ್ಮೊಮ್ಮೆ. ನಿಮ್ಮ ತಾಯಿ ನಿನ್ನನ್ನು ಉಳಿಸಿಕೊಳ್ಳಲು ಸಾಕಷ್ಟು ಕಷ್ಟ ಪಟ್ಟಿದ್ದಾರೆ. ನಿನ್ನ ಮೇಲೆ ಪ್ರಾಣವೇ ಇಟ್ಟುಕೊಂಡಿದ್ದಾರೆ. ಯೋಚನೆ ಮಾಡು' ಅಂತ ಹೇಳಿ ಭುಜ ತಟ್ಟಿ ಹೋಗಿದ್ದರು .

 ಸುಮಾರು 30 ವರ್ಷಗಳ ಹಿಂದೆ ನಮ್ಮ ಮನೆಯ ಹಸು ರೈತರ ಬೀದಿಯ ಒಬ್ಬರ ಮನೆಯ ಹಿತ್ತಲಿನಲ್ಲಿ ನುಗ್ಗಿ ಸಮಸ್ಯೆ ಮಾಡಿದ್ದಕ್ಕೆ ಅವರು ಹಸುವನ್ನು ಕಟ್ಟಿ ಹಾಕಿ ಕೊಂಡಿದ್ದರು. ನಾನು ಅವರನ್ನು ಕೇಳಿದರೂ ಉಪಯೋಗವಾಗಿರಲಿಲ್ಲ. ಸಮಯಕ್ಕೆ ಭಾನುಮಾಯ ರಸ್ತೆಯಲ್ಲಿ ಬರುತ್ತಿದ್ದರು. ವಿಷಯವನ್ನು ತಿಳಿಸಿದ ಕೂಡಲೇ ಅವರೇ ಖುದ್ದಾಗಿ ಬಂದು ಮಾತಾಡಿ ಹಸುವನ್ನು ಬಿಡಲು ಗದರಿದ್ದರು. ಸಹಜವಾಗೇ ವ್ಯಕ್ತಿಗೆ ಹಸುವನ್ನು ಬಿಡದೇ ಬೇರೆ ದಾರಿಯಿರಲಿಲ್ಲ.

ಇತ್ತೀಚಿಗೆ  ಒಂದು ಸಮಾರಂಭದ ಭೋಜನಕ್ಕೆ ಕರೆಯಲು ಹೋದಾಗಲೂ 'ಬಾ ಕುಳಿತುಕೋ, ಮನೇಲಿ ಎಲ್ಲ ಹೇಗಿದ್ದಾರೆ' ಎಂದು ಆತ್ಮೀಯವಾಗಿ ಉಪಚರಿಸಿದ ವ್ಯಕ್ತಿ ಈಗಿಲ್ಲ ಅಂದರೆ ದೇವರ ಬಗ್ಗೆ ಕೋಪ ಬರದೇ ಇರದು.

ನಾವು ಸಣ್ಣವರಿದ್ದಾಗ ಊರಿನ ರಥೋತ್ಸವದ  ಭಜನೆಗಳಲ್ಲಿ ಅವರು ಹೇಳಿಕೊಡುತ್ತಿದ್ದ 'ರಾಮ ಜಿ ಕಿ ಸೇನಾ ಚಲೀ' ಮತ್ತು ಇತರ ರಾಷ್ತ್ರೀಯತೆಯ ಸಂಬಂಧಿತ ಭಜನೆಗಳು, ಕಂಚಿನ ಕಂಠದ ಧ್ವನಿಯಲ್ಲಿ ಇನ್ಮುಂದೆ ಕೇಳಲು ಅವಕಾಶವಂಚಿತರನ್ನಾಗಿ ಮಾಡಿದ ವಿಧಿಗೆ ಕರುಣೆಯೇ ಇಲ್ಲವೇ?

ಇಡೀ ಸಮಾಜದ ಬಹುಪಾಲು ಜನರು ಒಬ್ಬ ವ್ಯಕ್ತಿಯನ್ನು ಹೀಗಳೆಯುತ್ತಿದ್ದಾಗ, ಜರೆಯುತ್ತಿದ್ದಾಗ, ತುಚ್ಛವಾಗಿ ಕಾಣುತ್ತಿದ್ದಾಗ ಅದೂ ವ್ಯಕ್ತಿ ತನ್ನನ್ನು ಒಪ್ಪಲೊಲ್ಲದವನಾಗಿದ್ದಾಗ,  ಅನ್ನುವವರಲ್ಲಿ ಒಬ್ಬನಾಗುವುದು ಬಹಳ ಸುಲಭ. ಆದರೆ ಸಮಯದಲ್ಲೂ ಎಲ್ಲರಿಗಿಂತ ಭಿನ್ನವಾಗಿ ವ್ಯಕ್ತಿಯ ಪರವಾಗಿ ಸ್ಪಂದಿಸುವುದು ಅವರಿಗೆ ಮಾತ್ರ ತಕ್ಕುದಾಗಿತ್ತು.

2003 ನನ್ನ ಅಕ್ಕನ ಮದುವೆಯ ಸಮಯ. ಖಂಡಿತ ಬರಬೇಕು ಎಂದು, ಅವಕಾಶವಾದಾಗಲೆಲ್ಲ ವಿನಂತಿಸಿದ್ದೆ. ಆಗಿನ್ನೂ ನನಗೆ 16ರ ವಯಸ್ಸು. ನನ್ನ ಮಾತನ್ನು, ನನ್ನ ವಿನಂತಿಯನ್ನು ಹೇಗೆ ಸ್ವೀಕರಿಸುತ್ತಾರೋ ಎಂದು ಮನಸ್ಸಿನಲ್ಲಿ ಅನಿಸುದ್ದುಂಟು. ಆದರೆ ಮದುವೆಯ ದಿನ ಭೋಜನದ ನಂತರ ಖುದ್ದಾಗಿ ಬಂದು, ತಮಾಷೆಯಾಗಿ, ಹಾಜರಿ ಹಾಕುವ ರೀತಿಯಲ್ಲಿ,  'ಬಂದಿದ್ದೇನೆ , ಎಲ್ಲ ಚೆನ್ನಾಗಿತ್ತು' ಎಂದು ಹೇಳಿದ ಆ ನಗು ಮುಖದ ಭಾನುಮಾಯ ಇನ್ನಿಲ್ಲ ಅಂದರೆ  ಹೇಗೆ !!

ರಾಜಕೀಯ ಕ್ಷೇತ್ರದ ಕಾರಣಕ್ಕೆ ತಮ್ಮನ್ನು ಒಪ್ಪದ ವ್ಯಕ್ತಿಗಳೂ ಅಗೌರವದಿಂದ ಕಾಣಲಾಗದ ವ್ಯಕ್ತಿಯಾಗಿ ಬದುಕಿದ ಭಾನುಮಾಯ ಮಾಡಿದ ಸಾಮಾಜಿಕ ಕೆಲಸಗಳ ಬಗ್ಗೆ ನನ್ನಷ್ಟು ಕಡಿಮೆ ತಿಳಿದವರಿಲ್ಲವೇನೋ ಎಂಬ ಮುಜುಗರದಿಂದ ಅವರ ಬಗ್ಗೆ ಬರೆಯಲು ನಾನು ಚಿಕ್ಕವನು ಎಂದೆನಿಸಿದರೂ ನನ್ನ ವೈಯಕ್ತಿಕ ಅನುಭವವನ್ನ ಹಂಚಿಕೊಳ್ಳುವುದು ತಪ್ಪಲ್ಲ ಎಂಬ ನಂಬಿಕೆಯ ಮೇಲೆ ನನ್ನದೊಂದು  ಅಕ್ಷರ ನಮನ.

ಭಾನುಮಾಯನ ಅಗಲಿಕೆ ನನ್ನನ್ನು ಈ ಪರಿ ಭಾವುಕನಾಗಿಸುತ್ತದೆ ಎಂದು ನನಗೂ ಅನ್ನಿಸಿರಲಿಲ್ಲ.

ಭಾನುಮಾಯ ಇಲ್ಲ ಎಂಬ ಕಹಿಸತ್ಯ ಯಾವುದಾದರೂ ರೂಪದಲ್ಲಿ ಅಸತ್ಯವಾಗಲಿ ಎಂಬುದೇ ನನ್ನ ಪ್ರಾರ್ಥನೆ.