ಯಮುನೋತ್ರಿಯ ಪ್ರಯಾಣದ ಅತಿಯಾದ ಸುಸ್ತು, ಕುದುರೆ ಪ್ರಯಾಣದ ನೋವುಗಳನ್ನು ಹೊತ್ತು ಮಲಗಿದ್ದರಿಂದ ಒಳ್ಳೆಯ ನಿದ್ದೆಯೂ ಬಂದಿತ್ತು.
ಇನ್ನು ನಮ್ಮ ಮುಂದಿನ ಪ್ರಯಾಣ ಗಂಗೋತ್ರಿಯಾಗಿತ್ತು. ಬರ್ಕೊಟ್ ನಿಂದ ಯಮುನೋತ್ರಿಗೆ ಪ್ರಯಾಣಿಸಬೇಕಿತ್ತು. ಸಾಕಷ್ಟು ಪ್ರಯಾಣ ಮಾಡಿ ಮಾರನೇ ದಿನ ಸಂಜೆಯ ಹೊತ್ತಿಗೆ ಮನೇರಿ ಎಂಬ ಜಾಗವನ್ನು ತಲುಪಬೇಕಿತ್ತು. ಅಲ್ಲಿ ನಮ್ಮ ತಂಗುವ ವ್ಯವಸ್ಥೆಯಾಗಿತ್ತು. ಉತ್ತರಕಾಶಿ ಎಂಬ ಜಾಗವನ್ನು ಹಾದು ಹೋಗಬೇಕಿತ್ತು. ಅಲ್ಲಿ ಕಾಶಿ ವಿಶ್ವನಾಥನ ದೇವಸ್ಥಾನದ ರೀತಿಯಲ್ಲೇ ವಿಶ್ವನಾಥನ ದೇವಸ್ಥಾನವಿತ್ತು. ದೇವರ ದರ್ಶನ ನಮ್ಮ ಯೋಜನೆಯಾಗಿತ್ತು. ಕಾಕತಾಳೀಯವಾಗಿ ನನ್ನ ಹುಟ್ಟಿದ ದಿನ ಅವತ್ತೇ ಆಗಿತ್ತು.
ಆದರೆ ದುರದೃಷ್ಟವಶಾತ್ ನಮ್ಮ ಕಾರಿನ ಚಾಲಕ ಅಷ್ಟೊತ್ತಿಗೆ ವಕ್ರನಾಗಿದ್ದ. ಕಾರಣ ಇಂದಿಗೂ ತಿಳಿದಿಲ್ಲ. ಕಾರಿನ ವೇಗವನ್ನು ಅತಿಗೊಳಿಸಿದ್ದ. ಎಷ್ಟು ಸಲ ಕೇಳಿದರೂ ಕೆಲ ಕಡೆಗಳಲ್ಲಿ ನಿಲ್ಲಿಸುತ್ತಿರಲಿಲ್ಲ. ಎಷ್ಟು ಸಲ ನಿಧಾನವಾಗಿ ಓಡಿಸಿ ಎಂದು ವಿನಂತಿಸಿಕೊಂಡರೂ ಉಪಯೋಗವಾಗಿರಲಿಲ್ಲ. ಭಾಷೆಯ ಸಮಸ್ಯೆಯೂ ನಮಗಿತ್ತು. ಆತ B.Sc ಮಾಡಿದ್ದರೂ ಲವಲೇಶದಷ್ಟು ಸಹ ಇಂಗ್ಲಿಷ್ ಬರುತ್ತಿರಲಿಲ್ಲ. ನಮ್ಮ ಕ್ಯಾ-ಕಹಾ-ಯಹಾ-ವಹಾ ಹಿಂದಿ ಸಾಲುತ್ತಿರಲಿಲ್ಲ ಅವನೊಂದಿಗೆ ವ್ಯವಹರಿಸಲು.
ಆಸಾಮಿ ದೇವಸ್ಥಾನದಲ್ಲಿ ನಿಲ್ಲಿಸಲೇ ಇಲ್ಲ. ದೇವಸ್ಥಾನವನ್ನು ತೋರಿಸಿ ಮುಂದೆ ಹೊರಟ. ಇನ್ನು ಮಧ್ಯಾಹ್ನವಾಗಿದ್ದರಿಂದ ನಾವು ತಂಗುವ ಜಾಗಕ್ಕೆ ಕರೆದುಕೊಂಡು ಹೋಗಿ ಸ್ವಲ್ಪ ವಿಶ್ರಾಂತಿಯ ನಂತರ ಕರೆದುಕೊಂಡು ಬರುತ್ತಾನೇನೋ ಎಂದು ಸುಮ್ಮನಾದೆವು. ಆಮೇಲೆ ನೋಡಿದರೆ 18 ಕಿಮೀ ಆಯಿತು ಮತ್ತೆ ಹೋಗಲು ಆಗುವುದಿಲ್ಲ ಎಂದುಬಿಟ್ಟ! Itinerary ನಲ್ಲಿತ್ತಲ್ಲ ಅಂದರೂ ಮೊದಲೇ ಹೇಳಬೇಕಿತ್ತು ಎಂದು ಖಂಡತುಂಡವಾಗಿ ಹೇಳಿದ. ನಮಗೆ ಕಾರನ್ನು ಕೊಡಿಸಿದ ವ್ಯಕ್ತಿಯ ಮೂಲಕವೂ ಹೇಳಿಸಲು ಪ್ರಯತ್ನಿಸಿದೆ. ಅವನೂ ಯಾಕೋ ಸಹಾಯ ಮಾಡಲಿಲ್ಲ. ಮಾರನೇ ದಿನ ಗಂಗೋತ್ರಿಯಿಂದ ಹೊರಡುವಾಗ ಹೋಗಿ ಬನ್ನಿ ಎಂದ. ನಾವೂ ಸುಮ್ಮನಾದೆವು.
ಮನೇರಿ ತಲುಪಿದಾಗ ಸುಮಾರು 2 ಗಂಟೆಯಾಗಿತ್ತು. ಸ್ವಲ್ಪ ಹೊತ್ತು ಮಲಗಿದೆವು. ಪಕ್ಕದಲ್ಲೇ ಗಂಗಾ ನದಿ ಹರಿಯುತ್ತಿತ್ತು. ಎದ್ದ ನಂತರ ನಾನು, ಅಮ್ಮ ಗಂಗೆಯ ಹತ್ತಿರ ಹೋಗಿ ಸ್ವಲ್ಪ ಹೊತ್ತು ಕಾಲ ಕಳೆದು ಬರುವ ಎಂದು ಹೊರಟೆವು. ಗಂಗೆಯನ್ನು ಸ್ಪರ್ಶಿಸಲು ಅಕ್ಷರಶಃ ಹಿಮವನ್ನು ಮುಟ್ಟಿದ ಅನುಭವ! ಆಗುವುದಾದರೆ ಸ್ನಾನವನ್ನೇ ಮಾಡುವ ಎಂದು ಯೋಚಿಸಿದ್ದೆ. ಆ ಚಳಿಯನ್ನು ಮುಟ್ಟಿದೊಡನೆ ಸಾಧ್ಯವೇ ಇಲ್ಲ ಎಂದೆನಿಸಿತ್ತು. ಕೆಲ ಫೋಟೋಗಳನ್ನು ತೆಗೆದು ಅಲ್ಲೇ ಇದ್ದ ಒಂದು ಪುಟ್ಟ ಆಶ್ರಮ ಒಂದಕ್ಕೆ ಭೇಟಿ ಕೊಟ್ಟು ದೇವರ ದರ್ಶನ ಮಾಡಿ ನಮ್ಮ ಬಿಡಾರಕ್ಕೆ ಬಂದೆವು.
ಮಾರನೇ ದಿನ ಬೆಳಿಗ್ಗೆ 6 ರ ಸುಮಾರಿಗೆ ಗಂಗೋತ್ರಿಯ ಕಡೆಗೆ ಹೊರಟು 8.45 ರ ಹೊತ್ತಿಗೆ ಗಂಗೋತ್ರಿಯನ್ನು ತಲುಪಿದೆವು. ಬರೀ 60-70ಕೀಮೀಗಳಾದರೂ ಪ್ರಯಾಣ ಸಾಕಷ್ಟು ಸಮಯ ತೆಗೆದುಕೊಂಡಿತ್ತು. ದಾರಿಯೂ ಸಹ ಅಷ್ಟೇನೂ ಸುಗಮವಾಗಿರಲಿಲ್ಲ. ಅತ್ತ ಪ್ರಪಾತ ಇತ್ತ ಕೊರೆದ ಬಂಡೆ-ಬೆಟ್ಟಗಳು. ಸಹಜವಾಗಿಯೇ ದೇವರ ಸ್ಮರಣೆ ನಡೆದೇ ಇತ್ತು.
ಗಾಡಿಗಳು ನಿಲ್ಲಿಸುವ ಸ್ಥಳದಿಂದ ದೇವಸ್ಥಾನ ಸುಮಾರು ಅರ್ಧ ಕೀಮೀ ದೂರವಿದ್ದುದರಿಂದ ತಲುಪಿದ ತಕ್ಷಣ ಅಪ್ಪನಿಗೆ ವೀಲ್ ಚೇರ್ ಅನ್ನು ಪಡೆದು, ನಾನು-ಅಮ್ಮ ನಡೆಯಲು ಶುರು ಮಾಡಿದೆವು. ಸುಮಾರು ದೂರದಲ್ಲಿ ವೀಲ್ ಚೇರ್ ಗೆ ಸರ್ಕಾರಿ ಶುಲ್ಕ 50 ರೂಪಾಯಿಯನ್ನು ಕಟ್ಟಲು ಸ್ವಲ್ಪ ಬೇಗ ನಡೆದುಕೊಂಡು ಹೋಗಿ ಸರತಿಯಲ್ಲಿ ನಿಂತೆ. ವೀಲ್ ಚೇರ್ ಅನ್ನು ತಳ್ಳುತ್ತಿದ್ದ ವ್ಯಕ್ತಿ, ಅಪ್ಪ ಇಬ್ಬರೂ ನನ್ನ ಜೊತೆ ಇದ್ದರು. ಶುಲ್ಕ ಕಟ್ಟಿ ತಿರುಗಿದರೆ ಅಮ್ಮ ಕಾಣಿಸಲೇ ಇಲ್ಲ ..!
ಅಮ್ಮನ ಮೊಬೈಲ್ ಇದ್ದ ಬ್ಯಾಗ್ ನನ್ನ ಬಳಿಯೇ ಇತ್ತು. ಕ್ಷಣ ಮಾತ್ರದಲ್ಲಿ ಕಂಗಾಲಾದೆ. ಆ ಚಳಿಯಲ್ಲೂ ದೇಹವೆಲ್ಲ ಬೆವರಿತು. ಗಾಡಿ ನಿಲ್ಲಿಸಿದ ಜಾಗಕ್ಕೆ 'ಅಮ್ಮಾ ಅಮ್ಮಾ ' ಎಂದು ಕೂಗಿಕೊಂಡು ಓಡಿದೆ. ಅಲ್ಲಿಂದ ವಾಪಸ್ ದೇವಸ್ಥಾನದ ಬಳಿಗೂ ಓಡಿದೆ. ಎಲ್ಲೂ ಕಾಣಿಸಲಿಲ್ಲ. ನಾನು ಕೂಗುತ್ತಿದ್ದ ರೀತಿಯನ್ನು ನೋಡಿ ಯಾರಿಗೂ ಮರುಕವೇ ಆಗುತ್ತಿರಲಿಲ್ಲವೇನೋ ಎನಿಸುತ್ತಿತ್ತು. ಪೋಲೀಸಿನವರ ಹತ್ತಿರ ಹೋಗಿ ಬೇಡಿದೆ, ಆದರೂ ಸಮಾಧಾನಕರವಾಗಿ ಉತ್ತರಿಸಲಿಲ್ಲ. ಮಹಿಳಾ ಶೌಚಗೃಹದ ಹೊರಗೆ ನಿಂತು ನನ್ನ ಮೊಬೈಲಿನಲ್ಲಿದ್ದ ಅಮ್ಮನ ಫೋಟೋ ತೋರಿಸಿ ಒಳಗಿರಬಹುದಾ ಎಂದು ಕೇಳುತ್ತಿದ್ದೆ. ದುಃಖ ಜಾಸ್ತಿಯಾಯಿತು. ಅಳು ಬರುತ್ತಿತ್ತು. ಏನು ಮಾಡುವುದು ಎಂದೇ ತೋಚುತ್ತಿರಲಿಲ್ಲ. ಸಮಾಧಾನದ ಅವಶ್ಯಕತೆ ಇದ್ದರಿಂದ ಅಕ್ಕನಿಗೆ ಫೋನಾಯಿಸಿದೆ. ಅಪ್ಪನನ್ನು ದೇವಸ್ಥಾನದ ಸ್ವಲ್ಪ ಹತ್ತಿರದಲ್ಲೇ ಬಿಡಲು ಹೇಳಿ ಇನ್ನೊಂದು ರೌಂಡು ಹುಡುಕೊಕೊಂಡು ಬರಲು ಹೊರಟೆ. ಅಷ್ಟರಲ್ಲೇ ಅಮ್ಮ ಇನ್ನೊಬ್ಬರ ಮೊಬೈಲ್ ನಲ್ಲಿ ಫೋನ್ ಮಾಡಿದಾಗ ಸ್ವರ್ಗವೇ ಧರೆಗಿಳಿದಂತೆ ಸಮಾಧಾನವಾಗಿತ್ತು. ನಾವು ದೇವಸ್ಥಾನದ ಒಳಗೆ ಹೋಗಿರಬಹುದೆಂದು ಒಬ್ಬರೇ ಮುಂದೆ ಬಂದುಬಿಟ್ಟಿದ್ದರು. ಸದ್ಯ ಎಂದು ಒಂದೆಡೆ ಕೂತು ಸಮಾಧಾನಿಸಿಕೊಂಡು ದೇವಸ್ಥಾನಕ್ಕೆ ಹೊರಟೆವು.
ದೇವರ ದರ್ಶನಕ್ಕೆ ಸರತಿ ಸಿಕ್ಕಾಪಟ್ಟೆ ಇದ್ದುದರಿಂದ ಗಂಗಾ ಸ್ನಾನಕ್ಕೆ ಅಣಿಯಾದೆವು. ಮೊದಲು ಗಂಗೆಯ ಸ್ಪರ್ಶ ಮಾಡುವ ಎಂದು ಹೋದರೆ ಕೈ ಮರಗಟ್ಟಿಸುವಂತಹ ಚಳಿ..! ಈ ಪಾಟಿ ಛಳಿಯ ನೀರಿನಲ್ಲಿ ಸ್ನಾನ ಹೇಗೆ ಎಂಬ ಪ್ರಶ್ನೆ ಬಂತು. ಸ್ನಾನ ಸಾಧ್ಯವೇ ಇಲ್ಲ ಎಂದು ಅಮ್ಮ ಪ್ರೋಕ್ಷಣೆ ಮಾಡಿಕೊಂಡು ಬಂದರು. ಆದರೆ ಅಪ್ಪ ಸ್ನಾನ ಮಾಡಿಯೇ ತೀರುತ್ತೇನೆ ಎಂದು ಹೊರಟರು. ಅಕ್ಷರಶಃ ನಡುಗುತ್ತ ಮಾತನಾಡಲೂ ಆಗದೆ ಸ್ನಾನ ಮಾಡಿಕೊಂಡು ಬಂದರು. ಅಪ್ಪನೇ ಮಾಡಿದಮೇಲೆ ನಾನು ಹೇಗೆ ಸುಮ್ಮನಾಗುವುದು..! ತಾಯಿ ಗಂಗೆಗೆ ನಮಸ್ಕರಿಸಿ ಭಕ್ತಿಯಿಂದ ನಾನೂ ಪುಣ್ಯಸ್ನಾನ ಮುಗಿಸಿ ಬಂದೆ. ಗಂಗೆಯ ಪುಣ್ಯಸ್ನಾನದ ನಂತರ ಒಂದು ತರಹದ ಧನ್ಯತಾ ಭಾವ ನಮ್ಮನ್ನು ಆವರಿಸಿದ್ದು ನಿಜ.
ಅಪ್ಪ - ಅಮ್ಮ ಇಬ್ಬರೂ ಎರಡು ಕಿಲೋಮೀಟರ್ ನಷ್ಟಿದ್ದ ಸರತಿಯನ್ನು ನೋಡಿ ದೂರದಿಂದಲೇ ಕೈ ಮುಗಿದರು. ಗಂಗೆ ಯಮುನೆ ಸರಸ್ವತಿಯರ ದರ್ಶನಕ್ಕೆ ನಾನೊಬ್ಬನೇ ಹೋಗಿ ಅಲ್ಲಿದ್ದ ಎಲ್ಲ ದೇವಸ್ಥಾನಗಳಿಗೆ ನಮಸ್ಕಾರ ಮಾಡಿ, ಭಕ್ತಿ ಕಾಣಿಕೆಯನ್ನಿತ್ತು ವಾಪಸ್ ಬಂದೆ.
ಸಂಜೆ ಬಂದ ನಂತರ ಅಲ್ಲೇ ಪಕ್ಕದಲ್ಲಿ ಸೇವಾಭಾರತಿಯ ಶಾಲೆಗೆ ಭೇಟಿ ನೀಡಿ ಅಲ್ಲಿದ ಹಿರಿಯರು, ಪ್ರಾಂಶುಪಾಲರು, ಸಹಾಯಕರನ್ನ ಪರಿಚಯಿಸಿಕೊಂಡು, ನನ್ನ ಹಿಂದಿಯನ್ನೂ, ಸಂಸ್ಕೃತವನ್ನೂ, ನನ್ನ ಹಿನ್ನೆಲೆಯನ್ನೂ ಪರಿಚಯಿಸಿಕೊಂಡು ಬಂದೆ. ಬೆಳಿಗ್ಗೆ ಗಂಗೋತ್ರಿಗೆ ಹೊರಡುವಾಗಲೇ ಗಮನಿಸಿದ್ದೆ ಅಲ್ಲಿದ್ದ ಶಾಲೆಯನ್ನು. ಉತ್ತರಾಂಚಲ್ ದೈವೀ ಆಪದಾ ಪೀಡಿತ್ ಸಹಾಯತಾ ಸಮಿತಿಯ ಶಾಲೆಯಾಗಿತ್ತು ಅದು. ಶಾಲೆಯ ಪಕ್ಕದಲ್ಲೇ ವಿದ್ಯಾರ್ಥಿ ನಿಲಯವೂ ಇತ್ತು. ಪಕ್ಕದಲ್ಲೇ ಗಂಗೆಯೂ ಹರಿಯುತ್ತಿದ್ದಳು. ಅಲ್ಲೇ ಶಾಖೆಯೂ ನಡೆಯುತ್ತಿತ್ತು. ಪ್ರಾರ್ಥನೆಯ ಅವಕಾಶವೂ ನನಗೆ ಸಿಕ್ಕಿತು.
ಒಟ್ಟಿನಲ್ಲಿ ಯಮುನೋತ್ರಿಯ ತ್ರಾಸದಾಯಕ ದರ್ಶನದ ನಂತರ ಅಪ್ಪ-ಅಮ್ಮ ಇಬ್ಬರಿಗೂ ಸ್ವಲ್ಪ ಸಮಾಧಾನ ಕೊಟ್ಟ ಗಂಗೋತ್ರಿ.
No comments:
Post a Comment