Nov 5, 2015

'ಮುಖ್ಯಮಂತ್ರಿ'ಗಳು ರಾಜ್ಯಕ್ಕೇ ಹೊರತು ಪಕ್ಷ ಅಥವಾ ವಿಚಾರಕ್ಕಲ್ಲ...

ಕರ್ನಾಟಕದ ಆಡಳಿತ ಈ ಮಟ್ಟಿಗೆ ಕೊಳೆಯುತ್ತಿದೆ ಎಂದರೆ ಬೇಸರವಾಗುತ್ತದೆ. ರಾಜ್ಯದ ಮುಖ್ಯಮಂತ್ರಿಯಾಗಿ ಆತ್ಮಸಾಕ್ಷಿಗೆ ವಿರುಧ್ಧವಾಗಿ ಬಾಯಿಗೆ ಬಂದಂತೆ ಮಾತನಾಡುತ್ತಿರುವ ಮಾನ್ಯ ಸಿದ್ದರಾಮಯ್ಯನವರು ತಾವು ಎಲ್ಲರಿಗು ಮುಖ್ಯಮಂತ್ರಿ, ಈ ರಾಜ್ಯದ ಮುಖ್ಯಮಂತ್ರಿ ಎಂಬುದನ್ನು ಮರೆತಿರುವಂತಿದೆ. ಆಡಳಿತಪಕ್ಷದ ಪ್ರತಿ ಕೆಲಸವನ್ನೂ ವಿರೋಧಿಸಲೇಬೇಕೆಂದುಕೊಳ್ಳುವ ಪ್ರತಿಪಕ್ಷದ ನಾಯಕನ ರೀತಿಯಲ್ಲೇ ವರ್ತಿಸುತ್ತಿದ್ದಾರೆ. ಇದನ್ನು ಕಂಡರೆ ಅವರ ಅಭಿಮಾನಿಗಳೇ, ಅವರ ಹಿಂಬಾಲಕರೇ ಅಸಹ್ಯ ಪಟ್ಟುಕೊಳ್ಳಬೇಕಾದ ಪರಿಸ್ಥಿತಿ ಇದೆ. 

ಭಜರಂಗದಳ, ಶ್ರೀರಾಮಸೇನೆಯಂತಹ ಸಂಘಟನೆಗಳ ವಿರುಧ್ಧ ಅಸಹನೆಯನ್ನ ಎಬ್ಬಿಸುವುದು, ದೇಶದ ಕೋಟ್ಯಾಂತರ ಜನರ ಶ್ರಧ್ಧಾಭಕ್ತಿಯಿಂದ ಪೂಜಿಸುವ ಗೋವಿನ ಮಾಂಸ ಸೇವನೆಯನ್ನು ಪ್ರಚೋದಿಸುವುದು, ನಿರ್ಧಿಷ್ಟ ಸಮುದಾಯದ ಜನರನ್ನು ಒಲೈಸುವಂತಹ ಆಶ್ವಾಸನೆಗಳು, ಯೋಜನೆಗಳು, ಬದುಕಿರುವ ರೈತರನ್ನು ಉಳಿಸಿಕೊಳ್ಳುವ ಬದಲು ಆತ್ಮಹತ್ಯೆಯೇ ವಾಸಿ ಎನಿಸುವಂತಹ ನಿರ್ಧಾರಗಳು, ಪರಿಹಾರಗಳು..! ಇವನ್ನೆಲ್ಲ ನೋಡಿದಾಗ ಬಹುಶಃ ಸಿದ್ದರಾಮಯ್ಯನವರಿಗೆ ತಾವು ಈ ರಾಜ್ಯದ ಮುಖ್ಯಮಂತ್ರಿಗಳು ಮರೆತಿರಬಹುದು ಎಂದೆನಿಸುತ್ತದೆ. ತಮಗೆ ಯಾರೇ ವಿರುಧ್ಧ ಏನೇ ಅಸಹನೆಯಿದ್ದರೂ ಅದನ್ನು ತೀರಿಸುಕೊಳ್ಳುವ ಸ್ಥಾನ 'ಮುಖ್ಯಮಂತ್ರಿ'ಯ ಸ್ಥಾನವಲ್ಲ. ಆ ಸ್ಥಾನಕ್ಕೆ ಆದರದ್ದೇ ಆದ ಸ್ಥಾನಗೌರವವಿರುತ್ತದೆ ಮತ್ತು ಅದನ್ನು ಕಾಪಾಡುವ ಜವಾಬ್ದಾರಿ ಸಿದ್ದರಾಮಯ್ಯನವರಿಗಿರಬೇಕಾಗಿದೆ. 

ಯಾವುದೇ ಸಂಘಟನೆಗಳ ವಿರುಧ್ಧದ ಆರೋಪವಿದ್ದರೆ ಅವುಗಳನ್ನು ಕಾನೂನಿನ ಮೂಲಕ ಸಾಬೀತು ಪಡಿಸಿ, ಅದನ್ನು ಬಿಟ್ಟು ಬರೀ ವಿರೋಧಿ ಹೇಳಿಕೆಗಳನ್ನು ಕೊಡುವುದು ಅವರ ಸ್ಥಾನಕ್ಕೆ ತಕ್ಕುದಲ್ಲ. ಆರೋಪಗಳು ಸಾಬಿತಾಗಿದ್ದರೂ ಯಾವುದೇ ಕ್ರಮ ಕೈಗೊಳ್ಳದ ಉದಾಹರಣೆಗಳಿವೆ. ಅವುಗಳ ವಿರುದ್ಧ ಕಾನೂನಿನ ಮೂಲಕ ಕ್ರಮ ಕೈಗೊಂಡು ಜನರಿಗೆ ಕಾನೂನಿನ ಮೇಲೆ, ವ್ಯವಸ್ಥೆಯ ಮೇಲೆ ನಂಬಿಕೆ ಬರುವಂತೆ ಮಾಡುವುದು ಮುಖ್ಯಮಂತ್ರಿಗಳ ಮುಂದಿರುವ ಸವಾಲಾದರೂ ಅದೇ ಕರ್ತವ್ಯವಾಗಿದೆ. 

ಸಿದ್ದರಾಮಯ್ಯನವರು ವೈಯಕ್ತಿಕವಾಗಿ ಎಷ್ಟೇ ಸಭ್ಯನಾಗಿದ್ದರೂ ಸಹ ಹಲವಾರು ಒತ್ತಡಗಳಿಗೆ ಮಣಿದು ಹೀಗೆಲ್ಲ ಮಾಡುತ್ತಿರಬಹುದು ಆದರೆ ಇವುಗಳೆಲ್ಲದರ ಪರಿಣಾಮ ಸಮಾಜಕ್ಕೆ ಒಳ್ಳೆಯದಲ್ಲ ಎಂಬುದು ಅಷ್ಟೇ ಸತ್ಯ. ಸಮಾಜದ ಎಲ್ಲ ಜನರನ್ನು ಒಪ್ಪಿಸಲಾಗದಿದ್ದರೂ ಕೆಲವರಿಗೆ ಅಸಹ್ಯ ಬರಿಸುವ ರೀತಿಯಲ್ಲಿ ಆಡಳಿತ ನಡೆಸಬಾರದು. ಗೋಮಾಂಸ ಸೇವನೆ ಎಂಬುದು ಎರಡು ಸಮುದಾಯಗಳ ನಡುವಿನ ಅಂತರದ, ಅತ್ಯಂತ ಸೂಕ್ಷ್ಮ ವಿಷಯವಾಗಿದ್ದು, ಆ ಅಂತರವನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳ ನಡತೆಯಿರಬೇಕೆ ವಿನಃ  ನಿರ್ಧಿಷ್ಟ ಸಮುದಾಯವನ್ನು ಆಕರ್ಷಿಸುವ ಸಲುವಾಗಲ್ಲ. ಒಗ್ಗಟ್ಟಿಲ್ಲದ ಹಿಂದೂಗಳ ಮತಗಳು ಹೇಗೂ ಹಲವು ಪಕ್ಷಗಳ ನಡುವೆ ಹಂಚಿಹೋಗುತ್ತದೆ ಎಂದು ಮುಂದಿನ ಚುನಾವಣೆಯ ದೃಷ್ಟಿಯಲ್ಲೇ ಹಿಂದುಗಳನ್ನು ಉದಾಸೀನ ಮಾಡುವುದು, ಅವರ ನಂಬಿಕೆಗಳಿಗೆ ಅವಮಾನಿಸುವುದು ತರವಲ್ಲ. ಉತ್ತಮ ಆಡಳಿತ ನಡೆಸಿ ಮುಂದಿನ ಚುನಾವಣೆಯನ್ನು ಗೆಲ್ಲುವ ಮನವಿರಬೇಕೆ ವಿನಃ ಜನತೆಯ ನಡುವಿನ ವೈಷಮ್ಯದ ಬಂಡವಾಳದಿಂದಲ್ಲ.


ಮೊನ್ನೆ ಶಿವಮೊಗ್ಗದಲ್ಲಿ ಸ್ಥಳೀಯ ಬಿಜೆಪಿ ನಾಯಕರೊಬ್ಬರು ಮುಖ್ಯಮಂತ್ರಿಯವರ ವಿರುಧ್ಧ ಕೊಟ್ಟ ಹೇಳಿಕೆಯೂ ಸಹ ಸರಿಯಾದುದಲ್ಲ. ರಾಜ್ಯದ ಮುಖ್ಯಮಂತ್ರಿಯಾದರೂ ಹೀಗೆಲ್ಲ ಮಾಡುತ್ತಿದ್ದಾರಲ್ಲ ಎಂಬ ಅಸಹಾಯಕತೆಯ ಕಾರಣಕ್ಕೆ ಕೊಟ್ಟಂತಹ ಅಥವಾ ಪ್ರತಿಭಟನೆಯ ಓಘದಲ್ಲಿ ಕೊಟ್ಟ ಹೇಳಿಕೆಯಾದರೂ ಮುಖ್ಯಮಂತ್ರಿಯವರ ಸ್ಥಾನಕ್ಕೆ ನಾವು ಸಾರ್ವಜನಿಕವಾಗಿ ಅಗೌರವ ತರುವ ಹೇಳಿಕೆ ನೀಡುವುದು ಯಾರಿಗೂ ಶೋಭೆಯಲ್ಲ. 

ಈ ಹಿಂದೆ ಎಷ್ಟೇ ಜನ ಮುಖ್ಯಮಂತ್ರಿಯಾಗಿ ಬಂದಿದ್ದರೂ ಎಲ್ಲರಿಂದ ಭಿನ್ನವಾಗಿ ಆದರೆ ಅಷ್ಟೇ ಶ್ರೇಷ್ಟವಾಗಿ ಎಲ್ಲರಿಂದಲೂ ಸೈ ಎನಿಸುವ ರೀತಿಯಲ್ಲಿ ಆಡಳಿತ ನಡೆಸಿದರೆ ಸಹಜವಾಗಿಯೇ ಪ್ರತಿ ಚುನಾವಣೆಯ ಗೆಲುವು ನಿಮ್ಮದಾಗುತ್ತದೆ ಸಿದ್ದರಾಮಯ್ಯನವರೇ. ಎಲ್ಲರಿಂದಲೂ ಸೈ ಎನಿಸಿಕೊಳ್ಳಲಾಗುವುದಿಲ್ಲ ಎಂಬುದು ಸತ್ಯವಾದರೂ ಆ ದಿಕ್ಕಿನಲ್ಲಿ ಪ್ರಾಮಾಣಿಕ ಪ್ರಯತ್ನವಾದರೂ ಇರಬೇಕಲ್ಲವೇ?



Nov 2, 2015

ಅಮೆರಿಕಾನುಭವ : ಕೊನೆಗೂ ಟ್ರಾಫಿಕ್ ಟಿಕೆಟ್ ನ ಅನುಭವವಾಯಿತು...

ಕಳೆದ 3 ಬಾರಿಯ ಅಮೇರಿಕಾ ಭೇಟಿಗಳಲ್ಲಿ, 3 ಕಾರು, ಒಟ್ಟಾಗಿ 14 ತಿಂಗಳುಗಳ ಕಾಲ 'ಕಾರಿ'ನ ಒಡೆಯನಾಗಿ, ಸುಮಾರು 14-15 ಸಾವಿರ ಮೈಲುಗಳಷ್ಟಾಗುವ ಪ್ರಯಾಣ ಮಾಡಿದ್ದೇನೆ ಆದರೆ ಈ ವರೆಗೂ ಟ್ರಾಫಿಕ್ ಟಿಕೆಟ್ ಸಿಕ್ಕಿರಲಿಲ್ಲ. ಆದರೆ ಅದರ ಅನುಭವವೂ ಈ ಸಲ ಆಯಿತು. 

ಇತ್ತೀಚಿಗೆ ಶಿಕಾಗೋಗೆ ಹೋಗಿದ್ದಾಗ ಒಂದು ಪೂರ್ತಿ ದಿನ ಸುತ್ತಾಡಿ ರಾತ್ರಿ ಸುಮಾರು 11 ರ ಹೊತ್ತಿಗೆ ಆತ್ಮೀಯರೊಬ್ಬರ ಮನೆಯಲ್ಲಿ ಊಟ ಮುಗಿಸಿ ಹೊರಟೆವು. ಸ್ವಲ್ಪ ಹೊತ್ತಿನಲ್ಲೇ ಪೆಟ್ರೋಲ್ ಗಾಗಿ ಹತ್ತಿರದಲ್ಲೆ ಒಂದು ಪೆಟ್ರೋಲ್ ಬಂಕ್ ನಲ್ಲಿ ನಿಲ್ಲಿಸಿ, ಕಾರಿನ ಲೈಟನ್ನು ಆರಿಸಿ, ಕೆಳಗಿಳಿದು ಪೆಟ್ರೋಲ್ ತುಂಬಿಸಿ ಹೊರಟೆ . ಬಂಕಿನಿಂದ ಹೊರಗೆ ಬಂದು ಜಿಪಿಎಸ್ ನ ಆಜ್ಞೆಯಂತೆ ಎಡಗಡೆಯ ದಿಕ್ಕಿಗೆ ಚಲಿಸಬೇಕಿತ್ತು . ಅಮೆರಿಕವಾದ್ದರಿಂದ, ರಸ್ತೆಯ ಎಡಭಾಗ , ನಮ್ಮ ಬಲಭಾಗ . ಆ ರಸ್ತೆ 4 - 4 ಲೇನಿನ (lane) ರಸ್ತೆ ಯಾಗಿದ್ದರಿಂದ (8 ಲೇನ್ ಒಟ್ಟು) ರಸ್ತೆಯ ಡಿವೈಡರ್ ಕಾಣದೆ (ರಾತ್ರಿಯ ಹೊತ್ತಾದ ಕಾರಣಕ್ಕೆ)  ರಸ್ತೆಯ ಬಲಭಾಗದ ನಮ್ಮ ಎಡಭಾಗದ ೪ ನೆ ಲೇನ್ ನಲ್ಲಿ ಓಡಿಸಿದೆ (5,6,7,8 ಲೇನ್ ಗಳಲ್ಲಿ ಯಾವುದಾದರೊಂದನ್ನು ಹಿಡಿಯಬೇಕಿತ್ತು). ತಕ್ಷಣವೇ ರಸ್ತೆ ವಿಭಾಜಕ ಕಂಡು U ಟರ್ನ್ ಮಾಡಿಕೊಂಡು ವಾಪಾಸ್ ಹೊರಟೆ. ಆದರೆ ದುರದೃಷ್ಟವಶಾತ್ ಮರುಕ್ಷಣವೆ ಎಲ್ಲೋ ಇದ್ದ ಪೋಲೀಸಿನವನು ಲೈಟು, ಸೈರನ್ ಹಾಕಿಕೊಂಡು ನಮ್ಮನ್ನು ಹಿಂಬಾಲಿಸಿದ. ಬೆವರಿನ ಸ್ನಾನ, ಮನದಲ್ಲಿ ಭಯ, ಎಷ್ಟು ದುಡ್ಡನ್ನು ಪೀಕುತ್ತಾನೋ ಎಂಬ ಆತಂಕ, ಜೈಲಿಗಿಲ್ಲ ತಾನೇ ಎಂಬ ಯೋಚನೆಯಲ್ಲೇ ನನ್ನ ಕಾರನ್ನು ನಿಲ್ಲಿಸಿದೆ. 


ಪೋಲೀಸಿನವನು ಬಂದು 'ಸರ್, ನಾನು ನಿಮ್ಮನ್ನು ನಿಲ್ಲಿಸಿದ ಉದ್ದೇಶ ನೀವು ಕಾರಿನ ಲೈಟನ್ನು ಹಾಕದೆ ಓಡಿಸುತ್ತಿದ್ದೀರಿ, ಅದು ಸೇಫ್ಟಿ ಸಮಸ್ಯೆಯಾಗಿದೆ ಎಂದು ಹೇಳಿ, ಇನ್ಸೂರೆನ್ಸ್ ಹಾಗು ಪರವಾನಗಿಯನ್ನು ಕೇಳಿದರು. ಬಾಡಿಗೆ ಕಾರಾದ ಕಾರಣ ಪರವಾನಗಿಯನ್ನು ಮಾತ್ರ ಕೊಟ್ಟೆ. ರಸ್ತೆಯ ತಪ್ಪಾದ ಮಾರ್ಗದಲ್ಲಿ ಕಾರು ಚಲಾಯಿಸಿ ಮಾಡಿದ್ದ ದೊಡ್ಡ ತಪ್ಪಿನಿಂದ ಬಚಾವಾದೆ ಎಂಬ ಸಮಾಧಾನ ಹಾಗು ಮೊದಲ ಬಾರಿ ಪೊಲೀಸಿಗೆ ಸಿಕ್ಕಿಕೊಂಡ ಭಯದಲ್ಲಿ ಪೋಲಿಸಿನವನನ್ನು ಒಲಿಸಿಕೊಳ್ಳಲು, ಕ್ಷಮೆ ಕೇಳುವಷ್ಟರಲ್ಲೇ ಅವನು ರಸೀದಿಯನ್ನು ತರಲು ತನ್ನ ವಾಹನಕ್ಕೆ ತೆರಳಿದ್ದ. ಆ ನಂತರ ಅವನು ರಸೀದಿಯನ್ನು ತಂದಾಗ ಸ್ವಲ್ಪ ಸಮಾಧಾನವಾಗಿದ್ದರಿಂದ ಅವನನ್ನು ಮಾತನಾಡಿಸಲು ಸಮಯ ಮಿಂಚಿತ್ತು. ಏನನ್ನೂ ಕೇಳುವ ಸ್ಥಿತಿಯಲ್ಲಿರಲಿಲ್ಲ. ಆಗ ಅವನು '$50 ಡಾಲರ್ ಗಳ ದಂಡದ ರಸೀದಿಯನ್ನು ಕೊಟ್ಟು, ತಕರಾರಿದ್ದರೆ ನ್ಯಾಯಾಲಯದಲ್ಲಿ ದಾಖಲಿಸಬಹುದು ಇಲ್ಲದಿದ್ದರೆ ದಂಡ ಕಟ್ಟಿದರಾಯಿತು, ಏನು ಚಿಂತಿಸಬೇಡಿ, ಈ ರಸೀದಿ ಯಾವ ಸಮಸ್ಯೆಯನ್ನು ಕೊಡುವುದಿಲ್ಲ, ಬರೇ ದಂಡ ಕಟ್ಟಿದರಾಯಿತು, ಎಲ್ಲೂ ದಾಖಲಾಗುವುದಿಲ್ಲ. ಇನ್ಸೂರೆನ್ಸ್ ಗೂ ಸಮಸ್ಯೆಯಾಗುವುದಿಲ್ಲ' ಎಂದು ಧೈರ್ಯ ಹೇಳಿ ಹೊರಟುಹೋದರು. 

ನಾನು ಮನೆಗೆ ಬಂದು 'ಕೊನೆಗೂ ಟಿಕೆಟ್ ನ ಅನುಭವವಾಯಿತು, ಇದೊಂದು ಬಾಕಿಯಿತ್ತು' ಎಂಬ ಅಪರಾಧಿಭಾವದ ಸಮಾಧಾನ ನನ್ನನ್ನು ಕಾಡಿತ್ತು. 

Apr 20, 2015

ಸ್ವಾರ್ಥರಾಜಕೀಯ ಪ್ರೇರಿತ ಆಚರಣೆಗಳು

ಸಂವಿಧಾನ ಶಿಲ್ಪಿ ಡಾ।।ಅಂಬೇಡ್ಕರ್ ಜಯಂತಿಯ ಪುಣ್ಯ ದಿನದಂದು ಅವರ ಆದರ್ಶಗಳನ್ನ, ಅವರ ಚಿಂತನೆಗಳನ್ನ, ಸಮಾಜಮುಖಿ ರೀತಿಯಲ್ಲಿ ಕಾರ್ಯರೂಪಗೊಳಿಸಿ, ಆಚರಿಸಿ ಅವರ ಜನ್ಮದಿನವನ್ನ ಅರ್ಥಪೂರ್ಣಗೊಳಿಸುವುದನ್ನು ಬಿಟ್ಟು ಮತ್ತೊಂದು ರಾಜಕೀಯ ಪಕ್ಷದ ವಿರುದ್ಧ ನಮ್ಮಲ್ಲಿರುವ ಎಲ್ಲ ನಕಾರಾತ್ಮಕ ಧೋರಣೆಗಳನ್ನ, ಅಸೂಯೆಯನ್ನು ಹೊರಹಾಕುವ ಮೂಲಕ, ಪವಿತ್ರ ಗೋಮಾತೆಯ ಮಾಂಸವನ್ನು ಸಾರ್ವಜನಿಕವಾಗಿ ಸೇವಿಸುವ ಮೂಲಕ ಅಂಬೇಡ್ಕರರಿಗೆ ಅವಮಾನ ಮಾಡುತ್ತಿರುವುದು ಖಂಡಿತ ಒಳ್ಳೆಯ ಬೆಳವಣಿಗೆಯಲ್ಲ. ಈ ಮೂಲಕ ಅಂಬೇಡ್ಕರರನ್ನು ಗೋಮಾಂಸ ಸೇವನೆಯ ಪೋಷಕ ಎಂದೆಲ್ಲ ಬಿಂಬಿಸಿ ಅವರನ್ನು ನಿರ್ಧಿಷ್ಟ ಸಮುದಾಯಗಳಿಗೆ ಮಾತ್ರ ಮೀಸಲಾಗಿಸುವ, ಉಳಿದವರಲ್ಲಿ ಅಂಬೇಡ್ಕರರ ಬಗೆಗೆ ತಪ್ಪು ಅಭಿಪ್ರಾಯಗಳನ್ನು ಉಂಟುಮಾಡುವ ಹುನ್ನಾರವಿದು.

ಸಮಾಜದ ಮಹಾಪುರುಷರ ಜಯಂತಿಯಂತಹ ಆಚರಣೆಗಳು ಪಕ್ಷಾತೀತವಾಗಿ, ಸಮಾಜಮುಖಿ ಒಳ್ಳೆಯ ಕೆಲಸಗಳ್ಳನ್ನು ನಡೆಸಲು ಉತ್ತಮ ನೆಪವಾಗಬೇಕೆ ವಿನಃ ಸಮುದಾಯಗಳ ವಿರುದ್ಧದ ಆಚರಣೆಗಳಿಗಲ್ಲ. ಸಮಾಜದ ಬುದ್ಧಿಜೀವಿಗಳು, ಚಿಂತಕರು ಎಂದು ಕರೆಸಿಕೊಳ್ಳುವ, ಮೇಲಾಗಿ ಜ್ಞಾನಪೀಠಿಗಳಾಗಿ, ಮುಗ್ಧ ಜನರನ್ನು ತಮ್ಮ ತಮ್ಮ ಸ್ವಾರ್ಥರಾಜಕೀಯ ಕಾರಣಗಳಿಗೆ, ಗುಂಪುಕಟ್ಟಿ 'ಮುಖಪುಟ'ವಾಗುವ ಅಭಿಲಾಷೆಗಳಿಗೆ ಬಳಸಿಕೊಳ್ಳುವುದು ಖಂಡಿತ ಯಾರಿಗೂ ಶೋಭೆ ತರುವುದಿಲ್ಲ, ಅವರ ಪ್ರಶಸ್ತಿಗಳಿಗೂ ಸೇರಿಸಿ.!

ಕೆಲವು ಸಾಹಿತಿಗಳು ಕೃತಿ ರಚನೆಯ ಮೂಲಕ ಸುದ್ದಿಯಾಗಿದ್ದಕ್ಕಿಂತ ಪ್ರತಿಭಟನೆಯ ಮೂಲಕ ಸುದ್ಡಿಯಾಗಿದ್ದೇ ಹೆಚ್ಚು . ಮುಂದಿನ ಪೀಳಿಗೆಗೆ ಅವರೆಲ್ಲ 'ಸಾಹಿತಿ'ಗಿಂತ ರಾಜಕೀಯ ವ್ಯಕ್ತಿಯಾಗಿಯೇ ಪರಿಚಯವಾಗುವುದರಲ್ಲಿ ಅನುಮಾನವಿಲ್ಲ. ಆದರೆ ಅವರೆಲ್ಲರಿಂದ ಒಳ್ಳೊಳ್ಳೆಯ ಕೃತಿಗಳಷ್ಟೇ ಹೊರಗೆ ಬರಲಿ ಎಂಬುದು ಬಹುಜನರ ಹಾರೈಕೆ. 

ಹೇಗೆ ಸಂಘಪರಿವಾರದ ಸಂಘಟನೆಗಳು ಅಂಬೇಡ್ಕರರ ಜಯಂತಿಯನ್ನು ವಿವಿಧ ರೀತಿಗಳಲ್ಲಿ ಆಚರಿಸುವ ಮೂಲಕ ಒಳ್ಳೆಯ ಕೆಲಸಕ್ಕೆ ನಾಂದಿ ಹಾಡಿದ್ದಾರೆಯೋ  ಹಾಗೆಯೇ ಸ್ವಾಮಿ ವಿವೇಕಾನಂದ, ಭಗತ್ ಸಿಂಗ್, ಚಂದ್ರಶೇಖರ್ ಅಜಾದ್, ಲಾಲ್ ಬಹಾದ್ದೂರ್ ಶಾಸ್ತ್ರೀಜಿ ಅಂತಹ ಸರ್ವಾನುಕರಣೀಯ ಮಹಾಪುರುಷರ ಜಯಂತಿಗಳು ಕಾಂಗ್ರೆಸ್ ಮತ್ತು ಕಾಂಗ್ರೆಸ್ ಪೋಷಿತ, ಸಂಘಟನೆಗಳೂ ಆಚರಿಸುವಂತಾಗಲಿ ಎಂಬುದೇ ನಮ್ಮ ಆಶಯ. 

(ಈ ನನ್ನ ಮೇಲಿನ ಅಭಿಪ್ರಾಯ ಲೇಖನ ಏಪ್ರಿಲ್ ೧೮ ರ ಕನ್ನಪ್ರಭದಲ್ಲಿ ಪ್ರಕಟವಾಯಿತು )

Mar 27, 2015

ದಿನ ಬದಲಾವಣೆ : ಟಿಕೆಟ್ ಕಾಯ್ದಿರಿಸುವಾಗಿನ 'ಅನುಭವ ಪಾಠ'

ಎಲ್ಲರಿಗೂ ಗೊತ್ತಿರುವಂತೆ ಶಿವಮೊಗ್ಗ - ಬೆಂಗಳೂರು ರೈಲಿಗೆ ಕಾಯ್ದಿರಿಸಿದ ಟಿಕೆಟ್ ಸಿಗುವುದು ಬಹಳ ಕಷ್ಟ. ವಿಶೇಷವಾಗಿ, ಶುಕ್ರವಾರ ರಾತ್ರಿ ಬೆಂಗಳೂರಿನಿಂದ ಹಾಗು ಭಾನುವಾರ ರಾತ್ರಿ ಶಿವಮೊಗ್ಗದಿಂದ. ಕನಿಷ್ಠ 45-50 ದಿನಗಳ ಮುಂಚೆಯೇ ಟಿಕೆಟನ್ನು ಕಾಯ್ದಿರಿಸಬೇಕು. ಇಂಥಹ ಪರಿಸ್ಥಿತಿಯಲ್ಲಿ ನಾನು ಮಾಡಿದ ತಪ್ಪು ಒಂದು 'ಅದ್ಭುತ ಪಾಠ'..!

ಫೆಬ್ರವರಿಯ ಒಂದು ವಾರಾಂತ್ಯ ಊರಿಗೆ ಹೋಗಬೇಕಾಯಿತು. ಹೋಗಬೇಕು ಎಂದು ಬಹಳ ತಡವಾಗಿ ನಿರ್ಧರಿಸಿದ ತಪ್ಪಿಗೆ (ಸುಮಾರು 3 ವಾರಗಳ ಮೊದಲು, ಅಷ್ಟೇ) ರೈಲಿಗೆ ಟಿಕೆಟ್ ಸಿಗುವ ಅವಕಾಶ ಅಸಾಧ್ಯವಾಯಿತು. ಇದೇ ಸಮಯದಲ್ಲಿ ಒಂದು ಉಪಾಯ ಹೊಳೆಯಿತು. ಶಿವಮೊಗ್ಗದಿಂದ ಬೆಂಗಳೂರಿಗೆ ಇರುವ ಸೀಟುಗಳು ಖಾಲಿಯಗಿದ್ದರೂ ಬೀರೂರಿನಿಂದ ಅದರದ್ದೇ ಆದ ಇನ್ನೊಂದು ಖೋಟಾ ಇರುತ್ತದೆ ಎಂದು ನೋಡಿದರೆ ಆ 6 - 8 ಸೀಟುಗಳೂ ನಮ್ಮ ಪಾಲಿಗೆ ಖಾಲಿಯಾಗಿದ್ದವು. ಮತ್ತದೇ ಬೇಸರದಿಂದ ಬೇರೆ ಇನ್ಯಾವ ಬೀರೂರು - ಬೆಂಗಳೂರು ರೈಲಿನಲ್ಲಿ ಸೀಟುಗಳಿವೆ ಎಂದು ಹುಡುಕಿದ್ದಕ್ಕೆ ಅದೃಷ್ಟವಶಾತ್ ರಾತ್ರಿ 12.10 (00.10) ಕ್ಕೆ ಹೊರಡುವ ಒಂದು ರೈಲಿನಲ್ಲಿ 15 ಸೀಟುಗಳಿದ್ದವು. ದೇವರೇ, ಎಂದು 2 ಸೀಟುಗಳನ್ನು ಬುಕ್ ಮಾಡಿದೆ, ನನ್ನ ಆರ್ಧಾಂಗಿಗೂ ಸೇರಿಸಿ. 

ಪ್ರಯಾಣದ ದಿನ ಬಂದೇ ಬಿಟ್ಟಿತು. ನಾನು ಶಿವಮೊಗ್ಗ - ಬೆಂಗಳೂರು ರೈಲಿಗೇ ಬೀರೂರಿನಿಂದ ಟಿಕೆಟನ್ನು ಕಾಯ್ದಿರಿಸಿದ್ದೇನೆ ಎಂದು ತಿಳಿದು ಶಿವಮೊಗ್ಗದಿಂದ ಬೀರೂರಿಗೆ ಸಾಮಾನ್ಯ ಟಿಕೆಟನ್ನು ಸಹ ತೆಗೆದುಕೊಂಡು ಬಂದೆ. ರೈಲು ಸಹ ಬಂದೇ ಬಿಟ್ಟಿತು. ಯಾವ ಭೋಗಿ ಎಂದು ತಿಳಿಯಲು ಐ-ಟಿಕೆಟ್ ನ SMS ನೋಡಿದರೆ S8 ಎಂದು ಭೋಗಿಯ ಹೆಸರಿತ್ತು..!  ಬರೀ S7 ರವರೆಗೆ ಇದ್ದ ಭೋಗಿಗಳು S8 ಯಾವಾಗಾಗಿದ್ದು ಎಂದು ಬರುತ್ತಿರುವ ರೈಲನ್ನು ಮುಂದಿಟ್ಟುಕೊಂಡು ಗಾಬರಿಯಿಂದ ಯೋಚಿಸುತ್ತಿರುವಾಗಲೇ, ರೈಲು ಸಂಖ್ಯೆಯನ್ನು ನೋಡಿದಾಗ ಹೊಳೆಯಿತು ಬೀರೂರಿನಿಂದ ಬೇರೆ ರೈಲಿಗೆ ಮಾಡಿಸಿದ್ದೇನೆ ಎಂದು. ಸ್ವಲ್ಪ ಸಮಾಧಾನದಿಂದ ಯಾವುದೊ ಒಂದು ಭೋಗಿಯನ್ನು ಹತ್ತಿ ನಿಂತೆವು. ಪೋಲಿಸಿನವರು ಬಂದಾಗ ಇರುವ ವಿಷಯವನ್ನು ಹೇಳಿ ಬೀರೂರಿನವರೆಗೆ ಪ್ರಯಾಣಿಸಲು ಅವಕಾಶ ಕೇಳಿದೆವು. ಅವರೂ ನಮ್ಮನ್ನು ನಂಬಿ 'ಪರವಾಗಿಲ್ಲ, ಕುಳಿತುಕೊಳ್ಳಿ' ಎಂದು ಸಿಂಗಲ್ ಸೀಟು ಇರುವಲ್ಲಿಗೆ ಕರೆದುಕೊಂಡು ಹೋಗಿ ಕೂರಲು ಹೇಳಿ ಸೌಜನ್ಯ  ಮೆರೆದರು. ನಾವೂ ಹಾಗೇ ಮಾತನಾಡುತ್ತ ಬೀರೂರನ್ನು ತಲುಪಿದೆವು. 

ಸರಿಸುಮಾರು 11.45ಕ್ಕೆ ತಲುಪಿದ ನಾವು 12ರ ಸುಮಾರಿಗೆ ಬರಬೇಕಾಗಿದ್ದ ರೈಲಿಗೆ ಕಾಯಲು ಕೂತೆವು. ನಮ್ಮ ದುರಾದೃಷ್ಟವೋ, ಅದೃಷ್ಟವೋ ಗೊತ್ತಿಲ್ಲ, ಒಂದು ಗಂಟೆ ತಡವಾಗಿ, ಅಂದರೆ 1.10 ರ ಹೊತ್ತಿಗೆ ರೈಲು ಬಂತು. ನಾವು S8 ಭೋಗಿಗೆ ಹತ್ತಿ ನೋಡಿದರೆ ನಮ್ಮ ಸೀಟಿನಲ್ಲಿ ಯಾರೋ ಮಲಗಿದ್ದರು! ಸ್ವಲ್ಪ ಅಳುಕು, ಗಾಬರಿಯಿಂದ ಅವರನ್ನು ಎಬ್ಬಿಸಲು ಹೋಗಲು ಪಕ್ಕದವರೊಬ್ಬರು 'ಪ್ರಯಾಣದ ದಿನಾಂಕ ನೋಡಿ ಸರ್' ಎಂದರು. ಅದು ಭಾನುವಾರದ ಟಿಕೆಟ್ ಆಗಿತ್ತು. ಆದರೆ ರೈಲು ಬೀರೂರಿನಿಂದ ಹೊರಡುವ ಸಮಯ 00.10 (12.10) ಆಗಿದ್ದರಿಂದ ಅದಾಗಲೇ ಸೋಮವಾರ ಬಂದಾಗಿತ್ತು, ಟಿಕೆಟ್ ಇದ್ದುದು ಭಾನುವಾರಕ್ಕೆ, ಅಂದರೆ ಹಿಂದಿನ ದಿನದ ಟಿಕೆಟ್ ನಲ್ಲಿ ನಾವು ಪ್ರಯಾಣ ಮಾಡುವವರಿದ್ದೆವು...! ಮತ್ತೊಮ್ಮೆ ತಲೆ ಮೇಲೆ ಕೈ ಇಟ್ಟುಕೊಂಡು 'ಈಗೇನು ಮಾಡುವುದು' ಎಂದು ಯೋಚಿಸುತ್ತಿರುವಾಗಲೇ TT ಬಂದೇಬಿಟ್ಟರು. ಅದಾಗಲೇ 'ಟೈಟಾ'ಗಿದ್ದ ಅವರನ್ನು ಬಿಟ್ಟು ಪೋಲಿಸಿನವರನ್ನು ಹಿಡಿದು ಪರಿಸ್ಥಿತಿಯನ್ನು ವಿವರಿಸಿ ಸಹಾಯ ಮಾಡಲು ಕೇಳಿದೆವು. ಕೊನೆಗೊ ಕೆಲ ಸಮಯದ ನಂತರ ಒಂದು ಸೀಟ್ ಕೊಟ್ಟರು. ನಾವು ಎಷ್ಟು ದುಡ್ಡು ಕೇಳುತ್ತಾರೋ ಎಂದು ಭಯ ಪಡುತ್ತಿದ್ದೆವು. ನೆನ್ನೆಯ ಟಿಕೆಟ್ ಗೆ TDR ಸಹ ಅನ್ವಯವಾಗುವುದಿಲ್ಲವಲ್ಲ ಎಂದೂ ಮನಸಿನಲ್ಲಿತ್ತು. ದುಡ್ಡು ಎಷ್ಟು ಕೊಡಬೇಕು ಎಂದು ಪೊಲೀಸಿನವರನ್ನು ಕೇಳಿದರೆ TT ಯವರಿಗೇ ಕೇಳಬೇಕು ಎನ್ನುತ್ತಿದ್ದರು. ಎಷ್ಟು ಸುಮಾರು 40 ನಿಮಿಷಗಳ ಕಾದರೂ TT ಬರಲಿಲ್ಲ, ನಮಗೂ ನಿದ್ದೆ ಬಂದು ಮಲಗಿದೆವು. 

ಎದ್ದಾಗ ಬೆಂಗಳೂರು ತಲುಪಿದ್ದೆವು. TT ಬಂದು ದುಡ್ಡನ್ನು ಕೇಳಲೇ ಇಲ್ಲ. ಹಿಂದಿನ ದಿನದ ಟಿಕೆಟ್ ನಲ್ಲಿ ಪ್ರಯಾಣ ಮಾಡಿದಂತಾಗಿತ್ತು :) :) :)