Feb 24, 2013

ಹೊರಟಿದ್ದು ಮುಳ್ಳಯ್ಯನಗಿರಿಗೆ , ತಲುಪಿದ್ದು ಕುಮಾರಪರ್ವತಕ್ಕೆ...


ನಾವು ನಾಲ್ವರು ಸ್ನೇಹಿತರು ಪ್ಲಾನ್ ಹಾಕಿದ್ದು ಮುಳ್ಳಯ್ಯನಗಿರಿಗೆ ಹೋಗುವ ಎಂದು, ಆದರೆ ಹೊರಡುವ ಹಿಂದಿನ ದಿನ ನಮ್ಮ ಮೈಲ್ಸ್ ನೋಡಿದ್ರೆ ಕುಮಾರಪರ್ವತಕ್ಕೆ ಹೋಗುವ ಅಂತ ಇತ್ತು. ನಾನು ನೋಡಿರಲೂ ಇಲ್ಲ, ಎಲ್ಲಿಗಾದರೂ ಪರವಾಗಿಲ್ಲ ಅಂತ ನಾನಂತೂ ರೆಡಿ ಆದೆ..

25 ರ ಶುಕ್ರವಾರ ರಾತ್ರಿ 1೦ ರ ಸುಮಾರಿಗೆ ಕತ್ರಿಗುಪ್ಪೆಯ ಬಸ್ ಸ್ಟಾಪ್ ಗೆ ಬಂದ್ವಿ. ಬಸ್ ಗೆ ಕಾದು ಕಾದು ಕೊನೆಗೆ ಅಟೋ ಹಿಡಿದು ಮೆಜೆಸ್ಟಿಕ್ ಗೆ ಹೋದರೆ ಮಡಿಕೇರಿಯ ಬಸ್ ಗಳೆಲ್ಲ ಸ್ಯಾಟಲೈಟ್ ಬಸ್ ಸ್ಟ್ಯಾಂಡಿನಿಂದ ಹೊರಡುತ್ತವೆ ಅಂತ ಕೇಳಿದಾಗ 'ಅಯ್ಯೋ' ಅಂತ ಅಂದುಕೊಂಡು, ಚಿಕ್ಕಮಗಳೂರಿನ ಬಸ್ ನೋಡಿ ಮುಳ್ಳಯ್ಯನಗಿರಿಗಾದರೂ  ಹೋಗೋಣ ಅಂತ ಯೋಚನೆ ಮಾಡುತ್ತಲೇ ಸ್ಯಾಟಲೈಟ್ ಬಸ್ ಸ್ಟ್ಯಾಂಡಿಗೆ ಹೋಗುವ ಬಸ್ ಹತ್ತಿದೆವು.

ನಮ್ಮ ದುರಾದೃಷ್ಟ, ನಾವು ಹೋಗುವಷ್ಟೊತ್ತಿಗೆ ರಾತ್ರಿ 11.30. ಮಡಿಕೇರಿಯ ಕಡೆಯ ಬಸ್ ಹೋಗಿಯಾಗಿತ್ತು. ಮತ್ತೊಮ್ಮೆ ತಲೆ ಮೇಲೆ ಕೈ ಇಟ್ಟುಕೊಳ್ಳುವ ಸರದಿ ನಮ್ಮದಾಗಿತ್ತು. ಏನು ಮಾಡುವ ಎಂದು ಯೋಚಿಸುತ್ತಲೇ ಕುಶಾಲನಗರಕ್ಕೆ ಹೋಗುವ ಕಡೆಯ ಬಸ್ ಕಂಡ ಕೂಡಲೇ ಹತ್ತಿ ಕೂತು ನಿದ್ದೆಗೆ ಅಣಿಯಾದೆವು. 

ಸರಿಯಾಗಿ ಬೆಳಗ್ಗೆ 5 ಗಂಟೆಗೆ ಕುಶಾಲನಗರಕ್ಕೆ ತಲುಪಿದೆವು. ಬಸ್ಸನ್ನು ಇಳಿದರೆ, ಅಬ್ಬಬ್ಬ.., ಹಿಮಾಲಯದ ಚಳಿಯಲ್ಲಿ ಇಳಿದಂತಹ ಅನುಭವ. ಬಹುಶ 7-8 ಉಷ್ಣತೆ ಇದ್ದಿರಬಹುದು. ಆ ಪರಿಯ ಚಳಿಯನ್ನು ನಾವು ಎರಡು ವರ್ಷಗಳ ಹಿಂದೆ ಸ್ಕಂದಗಿರಿಗೆ ಹೋದಾಗ ನೋಡಿದ್ದು...

ಕುಶಾಲನಗರದಿಂದ ನಾವು ಹೋಗಬೇಕಾದ್ದು ಸೋಮವಾರಪೇಟೆಗೆ. ಸಿಕ್ಕವರನ್ನೆಲ್ಲ ಕೇಳುತ್ತ ಸುಮಾರು 6 .3೦ರ ಸುಮಾರಿಗೆ ಬಂದ ಸೋಮವಾರಪೇಟೆಯ ಬಸ್ ಹತ್ತಿ, ಶಯನೋತ್ಸವಕ್ಕೆ ನಾಂದಿ ಹಾಡಿದೆವು.

ಸುಮಾರು ೯೦ ನಿಮಿಷಗಳ  ಕಾಲದ ಪ್ರಯಾಣದ ನಂತರ ಸೋಮವಾರಪೇಟೆ ತಲುಪಿ ಬಸ್ ನಿಂದ ಕೆಳಗಿಳಿದರೆ  ಅಲ್ಲೇ ಇನ್ನೊಂದು ಬಸ್  ಪುಷ್ಪಗಿರಿಗೆ ಹೊರಟಿತ್ತು. ನಾವು ಆ ಬಸ್ಸನ್ನು ಹಿಡಿಯಬೇಕು ಎಂದು ಚಾಲಕನನ್ನು  ವಿಚಾರಿಸಿದಾಗ ಇನ್ನು ೨೦ ನಿಮಿಷಗಳು ಸಮಯವಿರುವುದು  ನಮ್ಮ ಬೆಳಗಿನ ಹೊಟ್ಟೆಪಾಡಿಗೆ ವ್ಯವಸ್ಥೆ  ಮಾಡಿಕೊಳ್ಳಲು ಅನುಕೂಲವಾಯಿತು. ಅಲ್ಲೇ ಇದ್ದ ಕಾಂಡಿಮೆಂಟ್ಸ್ ನಲ್ಲಿ ಬ್ರೆಡ್, ಬಿಸ್ಕತ್, ನೀರಿನ ಬಾಟಲ್ಸ್, ಚಾಕೊಲೆಟ್ ಗಳನ್ನು ಕೊಂಡು, ಪಕ್ಕದ ಹೋಟೆಲ್ ನಲ್ಲಿ ತಿಂಡಿಯನ್ನು ಕಟ್ಟಿಸಿಕೊಂಡು ಬಸ್ ಏರಿದರೆ ಬೆಳಗ್ಗೆ 8.3೦ರ ಹೊತ್ತಿಗೆ 'ಮಲ್ಲಳ್ಳಿ ಜಲಪಾತ'ದ ಸ್ಟಾಪ್ ನಲ್ಲಿ ಇಳಿದೆವು. 

ಅಲ್ಲಿಂದ ೨ ಕಿಲೋಮೀಟರ್ ನಡೆದು ಜಲಪಾತವನ್ನು ತಲುಪಿದೆವು. ಎರಡೆರಡು ಅಡಿಗಳ ಎತ್ತರದ ಮೆಟ್ಟಿಲುಗಳನ್ನು ಇಳಿದು, ಜಲಪಾತದಲ್ಲಿ ಸ್ನಾನಾದಿಗಳನ್ನು ಮುಗಿಸಿ, ತಿಂಡಿ ತಿನ್ನುವ ತನಕ ಎಲ್ಲ ಸೂಪರ್... ಆದರೆ ವಾಪಸ್ ಹತ್ತುವಾಗ.... ಆ ಎತ್ತೆತ್ತರದ ಮೆಟ್ಟಿಲುಗಳನ್ನು ಹತ್ತಿ ಬರಲು ಪಟ್ಟ ಕಷ್ಟ, ಅಬಾಬಬಬಬ.....  ವರ್ಣಿಸಲಸಾಧ್ಯ. ಕುಮಾರ ಪರ್ವತಕ್ಕೆ ಶುರು ಮಾಡುವ ಮುನ್ನವೇ ನಮ್ಮ ಉತ್ಸಾಹ ಮಕಾಡೆ ಮಲಗಿತ್ತು.

ಅಂತು ಇಂತೂ ದೇಹದ ಶಕ್ತಿಯನ್ನೆಲ್ಲ ವ್ಯಯಿಸಿ ಮೇಲೆ ಬಂದು, ಕುಮಾರ ಪರ್ವತಕ್ಕೆ ದಾರಿ ಎಲ್ಲಿಂದ ಎಂದು ಯೋಚಿಸುತ್ತಲೇ 'ಕಂಡ ದಾರಿಯೇ ಇರಬೇಕು' ಎಂಬ ಅನುಮಾನದಿಂದಲೇ ನಡೆಯಲು ಶುರು ಮಾಡಿದೆವು. ನಮ್ಮ ಅದೃಷ್ಟಕ್ಕೆ,  ವೆಂಕಟೇಶ್ ಎಂಬುವರು  ಸಿಕ್ಕಿ ನಾವು ಹೋಗುತ್ತಿದ್ದ ದಾರಿಯನ್ನು ಖಚಿತ ಪಡಿಸಿದಾಗ ಸ್ವಲ್ಪ ಸಮಾಧಾನ. ಇಲ್ಲದಿದ್ದರೆ ಆ ಸುಸ್ತಿನಲ್ಲಿ ಮತ್ತೆ ಎಲ್ಲಿ ವೃಥಾ ನಡೆಯಬೇಕಾಗುತ್ತದೋ ಎಂದು ಭಯ ಪಟ್ಟಿದ್ದೆವು. 

ಸುಮಾರು ಮಧ್ಯಾಹ್ನ ೧ ರ ಸುಮಾರಿಗೆ ಮುಖ್ಯ ರಸ್ತೆ ತಲುಪಿ, ಅಲ್ಲಿಂದ ಶಾಂತಮಲ್ಲಿಕಾರ್ಜುನ ಸ್ವಾಮಿಯ ದೇವಸ್ಥಾನವನ್ನು ತಲುಪಬೇಕಾಗಿತ್ತು. ಅತಿ ಸುಸ್ತಾಗಿದ್ದ ಕಾರಣ ರಸ್ತೆಯಲ್ಲೇ ೧೦ ನಿಮಿಷ ಕೂತು, ನಂತರ ಹೊರಟೆವು. ಪ್ರತಿ ೫ ನಿಮಿಷದ ನಡಿಗೆಗೆ  ಸುಸ್ತಾಗುತ್ತಿದ್ದ ಸಮಯಕ್ಕೆ, ಬರುತ್ತಿದ್ದ  ಟೆಂಪೋಗೆ ಕೈ ಅಡ್ಡ ಹಾಕಿದೆವು. ನಮ್ಮದೃಷ್ಟ, ಹತ್ತಿಸಿಕೊಂಡರು. ಆ ಮೊದಲೇ ಸಾಕಷ್ಟು ವಾಹನಗಳಿಗೆ ಕೈ ಹಾಕಿ, ನಿಲ್ಲಿಸದೆ, ಹಿಡಿ ಶಾಪಗಳನ್ನೆಲ್ಲ ಹಾಕಾಗಿತ್ತು. ಅವರು ನೇರ ದೇವಸ್ಥಾನಕ್ಕೆ ಹೋಗುವವರಾಗಿದ್ದರು. ಸುಮಾರು ೪ ಕಿಲೋಮೀಟರ್ ಗಳ ನಡಿಗೆಯನ್ನ ಉಳಿಸಿದ ವಾಹನದ ಡ್ರೈವರ್ ಗೆ ಹಣ ನೀಡಿದರೂ ಬೇಡವೆಂದರು. 'ಅವರಿಗೆ ಒಳ್ಳೆಯದಾಗಲಿ' ಎಂದು ಹಾರೈಸಿ, ದೇವರ ದರ್ಶನ ಪಡೆದು 'ಕುಮಾರಪರ್ವತ'ವನ್ನು ಹತ್ತಲು ಶುರು ಮಾಡಿದೆವು. ಕುಕ್ಕೆ ಸುಬ್ರಮಣ್ಯದ ಕಡೆಗೆ ಇಳಿಯುವುದು ಎಂದು ನಿಶ್ಚಯಿಸಿದ್ದ ಕಾರಣಕ್ಕೆ, ಅತ್ತ ಕಡೆಯಿಂದ ಇಳಿಯುವಾಗ ಸಿಕ್ಕುವ 'ಭಟ್ಟರ' ಮನೆಗೆ ಫೋನ್ ಮಾಡಿ ಮಾರನೆ ದಿನ ನಾವು ನಾಲ್ವರು ಊಟಕ್ಕೆ ಬರುವುದಾಗಿ ತಿಳಿಸಿದೆವು.

ಕೆಲ ಸಮಯದ   ನಂತರ ಸಿಕ್ಕ ಚೆಕ್ ಪೋಸ್ಟ್ ನಲ್ಲಿ ಅರಣ್ಯ ಅಧಿಕಾರಿಗಳಿಗೆ ಒಬ್ಬರಿಗೆ 1೦೦ ರಂತೆ 4೦೦ ರುಪಾಯಿಗಳನ್ನು ಕೊಟ್ಟು ನಮ್ಮ ಚಾರಣವನ್ನು ಮುಂದುವರೆಸಿದವು. ಅಲ್ಲಿಂದ 7 ಕಿಲೋಮೀಟರ್ ಗಳ ದೂರ ಸಾಗಬೇಕಾಗಿತ್ತು. ಪ್ರತಿ ೦.25 ಕಿಲೋಮೀಟರ್ ಗಳಿಗೆ ಸಿಗುತ್ತಿದ್ದ 'ಉಳಿದಿರುವ ದೂರದ' ಬೋರ್ಡ್ ಗಳನ್ನೂ ನೋಡುತ್ತಾ , ಪ್ರತಿ ಅರ್ಧ ಕಿಲೋಮೀಟರ್ ಗಳಿಗೆ 5 ನಿಮಿಷದ ವಿಶ್ರಾಂತಿ ತೆಗೆದುಕೊಳ್ಳುತ್ತಾ ಹೊರಟೆವು. 'ಮಲ್ಲಳ್ಳಿ' ಯಾ ಪ್ರಭಾವದಿಂದ ಸಾಕಷ್ಟು ಬೇಗ ಸುಸ್ತಾಗುತ್ತಿತ್ತು. ಹೊಟ್ಟೆ ಖಾಲಿಯಾಗಿತ್ತು. ಅರ್ಧ ದೂರ ಹೋಗುವಷ್ಟರಲ್ಲೇ ತಂದಿದ್ದ ಬ್ರೆಡ್-ಜಾಮ್, ಬಿಸ್ಕೆಟ್ ಗಳು ಖಾಲಿಯಾದವು. ರಾತ್ರಿ ಬೆಟ್ಟದ ಮೇಲೆ ತಂಗುವಾಗ 'ಹೊಟ್ಟೆಪಾಡು' ಏನು ಎಂದು ಯೋಚಿಸುತ್ತ ಹೋಗುತ್ತಿರುವಾಗಲೇ ಸಾಕಷ್ಟು ಯುವಕರ ತಂದ ವನ್ನು ಎದುರಾದೆವು.  ಪರಿಚಯವಾಯಿತು. 'ರಚನ್' ಎಂಬವನು ಊಟವಾಯಿತಾ ಎಂದಾಗ, ಮೊದಲಿಗೆ ಆಯ್ತು ಎಂದೆವು, ಆದರೆ ಆಗಿರಲಿಲ್ಲ. ಮೇಲೆ ತಂಗಲು 'ಟೆಂಟ್'ಗಳನ್ನೆಲ್ಲ ತಂದಿದೀರ ತಾನೇ? ಎಂದಾಗ, ನಮ್ಮಿಂದ ನಿರುತ್ತರ. ಮೊದಲೇ ನಾವು ಯಾವುದೇ ತಯಾರಿಯಿಲ್ಲದೆ ಹೊರಟಿದ್ದೆವು. ನಮ್ಮ ಬಳಿ ಟೆಂಟ್ ಎಲ್ಲಿಂದ ಬರಬೇಕು ?! ಇನ್ನೊಮ್ಮೆ ಊಟದ ಪ್ರಶ್ನೆ ಬಂದಾಗ 'ರಾತ್ರಿಗೆ' ಏನು ಇಲ್ಲ ಎಂದದ್ದಕ್ಕೆ 2 ಪ್ಯಾಕ್ ಪುಳಿಯೊಗರೆ ಕೊಟ್ಟರು. ಹೋದ ಜೀವ ಬಂದಂತಾಗಿತ್ತು. ಅವರಿಗೂ ಹಾಗೂ ಮನದಲ್ಲಿ ದೇವರಿಗೂ ಥ್ಯಾಂಕ್ಸ್ ಹೇಳಿ ನಮ್ಮ ನಡಿಗೆಯನ್ನು ಮುಂದುವರೆಸಿದೆವು. 

ಬೆಟ್ಟದ ತುದಿ ತಲುಪುವ ಹೊತ್ತಿಗೆ ಸಾಯಂಕಾಲ 5.30 ಆಗಿತ್ತು. ಆ ಸುಸ್ತಿನಲ್ಲಿ ಒಮ್ಮೆ ವಾಪಸ್ ಹೋಗೋಣವೇ  ಎಂದು ಯೋಚಿಸಿದ್ದೂ ಉಂಟು. ಆದರೆ ಅದಾಗಲೇ ಬೆಟ್ಟವನ್ನು ಹತ್ತಿ ಇಳಿಯುತ್ತಿದ್ದ ಹೆಣ್ಣು ಮಕ್ಕಳು, 9 ವರ್ಷದ ಹುಡುಗನನ್ನು ನೋಡಿ, ನಮ್ ಬಗ್ಗೆ ನಾವೇ ಛೀ ಎಂದುಕೊಂಡು ಕೆಲಸ ಮುಗಿಸಿದ್ದೆವು. 

ಪೂರ್ಣ ಪ್ರಮಾಣದ 'ಸೂರ್ಯಾಸ್ತ'ವನ್ನು ಕಣ್ತುಂಬಿಕೊಂಡು ಮಲಗಲು ಅಣಿಯಾದೆವು. 

ಸಿಕ್ಕಾಪಟ್ಟೆ ಚಳಿ ಇರುತ್ತದೆ ಎಂದು 2-3 ಸುತ್ತಿನ ಬಟ್ಟೆಗಳಿಂದ ತಯಾರಾದೆವು. ಯಾವ ಟೆಂಟ್ ಗಳೂ ಇಲ್ಲದೆ ಹೋಗಿದ್ದ ನಮಗೆ ಬಂಡೆಗಳೇ ಹಾಸಿಗೆಗಳಾದವು. 7-8 ಗಂಟೆಯ ಸಮಯದಲ್ಲಿ ಅಷ್ಟೇನೂ ಚಳಿಯಿರಲಿಲ್ಲ. ವರಸದೃಶವಾದ 'ಪುಳಿಯೊಗರೆ'ಯನ್ನು ತಿಂದು ಸ್ವಲ್ಪ ಹೊತ್ತು ಮಲಗಿದೆವು. ಆದರೆ ಆನಂತರ ಶುರುವಾದ ಚಳಿ ನಮ್ಮನ್ನು ಬೆಳಿಗ್ಗೆಯವರೆಗೂ ಪೂರ್ಣ ಎಚ್ಚರವಾಗಿಯೇ ಇರಿಸುವಲ್ಲಿ ಸಫಲವಾಯಿತು! ನಿದ್ದೆ ಬಂದ ಮೇಲೆ ಯಾವ ಚಳಿಯು ಏನೂ ಮಾಡುವುದಿಲ್ಲ ಎಂದು ಅವಾಗವಾಗ ನಿದ್ದೆ ಮಾಡಲು ಸಾಕಷ್ಟು ವಿಫಲ ಪ್ರಯತ್ನ ಮಾಡಿದ್ದುಂಟು. 

ಬೆಳಿಗ್ಗೆ 7 ರ ಹೊತ್ತಾದರೂ ಉದಯಿಸುತ್ತಿರುವ ಸೂರ್ಯನನ್ನು ನೋಡಲಾಗದ ನಾವು ಇನ್ನೇನು ಹೊರಡುವಷ್ಟರಲ್ಲಿ 'ಸೂರ್ಯೋದಯವನ್ನು' ನೋಡಿದೆವು. ಸಾಕ್ಷಾತ್ ಭಗವೆಯೇ ಪ್ರತ್ಯಕ್ಷವಾದಂತಿತ್ತು !

7.15 ಗೆ ಹೊರಟ ನಾವು ಸುಮಾರು 16-18 ಕಿಲೋಮೀಟರ್ ಗಳ ದೂರವನ್ನು ಕ್ರಮಿಸಬೇಕಾಗಿತ್ತು. ನೀರಿಲ್ಲ, ಹೊಟ್ಟೆಗಿಲ್ಲ. ನಡೆಯುತ್ತಾ ಎಲ್ಲ ಬಗೆಯ ಸುಸ್ತುಗಳನ್ನೂ ಹೊತ್ತು 9 ಕಿಲೋಮೀಟರ್ ಗಳನ್ನು ನಡೆದು, 4 ಬೆಟ್ಟಗಳನ್ನು ದಾಟಿ,  1೦.3೦ಕ್ಕೆ ಭಟ್ಟರ ಮನೆಗೆ ಹೋಗಿ ಊಟ ಮಾಡಿ, ಎಲ್ಲೇ ಮುಂದಿದ್ದ ಅವರ ತೋಟದಲ್ಲಿ 1 ಗಂಟೆಗಳ ಕಾಲ ಮಲಗಿ, 12.30ಗೆ ಪುನಃ ಹೊರಟೆವು. ಅಲ್ಲಿಂದ ಇನ್ನು 6-8 ಕಿಲೋಮೀಟರ್ ಗಳ ದೂರವಿತ್ತು ಕುಕ್ಕೆಸುಬ್ರಮಣ್ಯಕ್ಕೆ. 

ಅಲ್ಲಿಂದ ನಡೆದ ನಮಗಾದ ಸುಸ್ತು, ಅನುಭವ,... ಹುಷ್ಶಪಾ.. ಎಷ್ಟು ನಡೆದರೂ ಕುಕ್ಕೆಯನ್ನು ತಲುಪಲೇ   ಆಗುತ್ತಿರಲಿಲ್ಲ. ಎಷ್ಟು ನಡೆದು ಯಾರನ್ನು ಕೇಳಿದರೂ ಇನ್ನು 2 ಕಿಲೋಮೀಟರ್ ಇದೆ ಎಂತಲೇ ಹೇಳುತ್ತಿದ್ದರು. ಆ ಕಾಡನ್ನು ದಾಟುವಾಗ ಸಿಗುತ್ತಿದ್ದ ಪ್ರತಿ ಇಳಿಜಾರನ್ನೂ 'ಇದೇ  ಕೊನೆಯ ಇಳಿಜಾರು' ಎಂದು ಕೊಳ್ಳುತ್ತಲೇ ಇಳಿಯುತ್ತಿದ್ದೆವು. ಆದರೆ ಕುಕ್ಕೆ ಮಾತ್ರ ಬರುತ್ತಿರಲಿಲ್ಲ. 

2.45 ರ ಹೊತ್ತಿಗೆ ಕುಕ್ಕೆಯನ್ನು ತಲುಪಿ, ಅಲ್ಲಿಂದ ಬಸ್ ನಿಲ್ದಾಣಕ್ಕೆ ೨ ಕಿಲೋಮೀಟರ್ ನಡೆದು ತಲುಪುವ ಹೊತ್ತಿಗೆ ಮಧ್ಯಾಹ್ನ 3.30 ಗಂಟೆ. ಹೋಟೆಲ್ ನಲ್ಲಿ ಊಟ ಮಾಡಿ ಬಸ್ ಸ್ಟ್ಯಾಂಡಿಗೆ ಹೋದರೆ ಬಸ್ ಇರಲಿಲ್ಲ. ಸಂಸ್ಥೆಯ ಅಧಿಕಾರಿಯೊಬ್ಬರಿಗೆ ಕೇಳಿದರೆ ರಾತ್ರಿಯವರೆಗೂ ಬೆಂಗಳೂರಿಗೆ ಬಸ್ಸೇ ಇಲ್ಲ ಎಂದು 'ಪುಂಗಿ' ಊದಿದರು. ಆ ಸುಸ್ತಿನಲ್ಲಿದ್ದ ನಮಗೆ ಮತ್ತೊಮ್ಮೆ ವಿಚಾರಿಸಬೇಕು ಎಂದೆನಿಸದೆ, ಖಾಸಗಿ ಬಸ್ಸಿಗೆ ಮುಂಗಡ ಟಿಕೆಟ್ ತೆಗೆದುಕೊಂಡು,  ಪೂರ್ಣ ವಿಶ್ರಾಂತಿಗೆ ಅವಕಾಶವಾಯಿತು ಎಂದು ಧರ್ಮಛತ್ರದಂತಿದ್ದ ಜಾಗದಲ್ಲಿ ನಾವು ಹೋಗಿ 4.30ರ ಸುಮಾರಿಗೆ  ತಲೆ ಊರಿದೆವು. ಎದ್ದಾಗ ಸಂಜೆ 7 ಗಂಟೆ..! 

ದೇವರ ದರ್ಶನಕ್ಕೆ ಪ್ರಯತ್ನಿಸಿದೆವು. ಏನು ವಿಶೇಷವಿತ್ತೋ ಏನೋ, ಅಂದು ಕುಕ್ಕೆ ಅತಿ ಜನಜಂಗುಳಿಯಿಂದ ಕೂಡಿತ್ತು. ಒಂದು ಗಂಟೆ ಕಾದರೂ ದರ್ಶನವಾಗುವ ಸಾಧ್ಯತೆಗಳಿರಲಿಲ್ಲ. ದೂರದಿಂದಲೇ ಕೈ ಮುಗಿದು, 9 ಗಂಟೆಗೆ ಊಟ ಮಾಡಿ, 9.30 ರ ಹೊತ್ತಿಗೆ ಹೊರಟು, 10 ಗಂಟೆಗೆ ಹೊರಡಲಿದ್ದ ಬಸ್ ಹಿಡಿದು ಬೆಂಗಳೂರಿಗೆ ಬಂದಾಗ ಬೆಳಿಗ್ಗೆ 6 ಗಂಟೆ. ಮನೆಗೆ ಬಂದು 'ಇಂದು ಸಿಕ್ ಲೀವ್' ಎಂದು ನಿಶ್ಚಯಿಸಿ ಮಲಗಿದೆವು. 

ಎರಡು ದಿನಗಳಲ್ಲಿ ಸರಿಸುಮಾರು 35-40 ಕಿಲೋಮೀಟರ್ ಗಳನ್ನು ಸರಿಯಾಗಿ ಹೊಟ್ಟೆಗಿಲ್ಲದೆ ನಡೆದ ನಮಗೆ ಮತ್ತೊಮ್ಮೆ ಚಾರಣದ ಸಹವಾಸವೇ ಬೇಡ ಎಂಬಷ್ಟರ ಮಟ್ಟಿಗೆ ಸುಸ್ತಾಗಿತ್ತು. ಆದರೂ ಒಂದು ಹೊಸ ಅನುಭವವಾಗಿತ್ತು. 

Feb 12, 2013

ಆ ಸಾಂಗತ್ಯದ ಅನುಭವವೇ ಒಂದು ಶಿಕ್ಷಣ, ಸಂಸ್ಕಾರ...

ಕೆಲ ವರ್ಷಗಳ ಹಿಂದೆ ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ನಡೆದ ಒಂದು ಸಮಾರಂಭದಲ್ಲಿ ಕಿರುತೆರೆ ನಿರ್ದೇಶಕ ಟಿ.ಎನ್.ಸೀತಾರಾಮ್ ತಮ್ಮ ಬಗ್ಗೆ ಹೇಳುವಾಗ 'ನನಗೆ ಜೀವನದಲ್ಲಿ ಇಬ್ಬರು ಗುರುಗಳು. ಒಬ್ಬರು ಪುಸ್ತಕಗಳನ್ನ ಓದಲು ಹೇಳಿಕೊಟ್ಟರೆ ಇನ್ನೊಬ್ಬರು ಯಾವ ಯಾವ ಪುಸ್ತಕಗಳನ್ನ ಓದಬೇಕು ಅಂತ ಹೇಳಿಕೊಟ್ಟರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಪ್ರಚಾರಕರಾದ ನ.ಕೃಷ್ಣಪ್ಪನವರು ಪುಸ್ತಕಗಳನ್ನ ಓದುವ ಹವ್ಯಾಸಕ್ಕೆ ಪ್ರೇರಣೆ ಕೊಟ್ಟರೆ, ಪತ್ರಕರ್ತ ಲಂಕೇಶ್ ರವರು ಪುಸ್ತಕಗಳ ಆಯ್ಕೆಗೆ ಕಾರಣರಾದರು' ಎಂದು ಹೇಳಿದ್ದು ನನಗೆ ನೆನಪಿದೆ. ಸೀತಾರಾಂರವರಿಗೆ ಸಿಕ್ಕಿದ ಗುರುಗಳ ಸ್ಥಾನಗಳು ಅದಲು ಬದಲಾಗಿದ್ದರೆ ಇನ್ನು ಚೆನ್ನಾಗಿರುತ್ತಿತ್ತು ಎಂದು ಆ ತಕ್ಷಣ ಕೆಲವರು ಅಂದುಕೊಂಡಿದ್ದು ಉಂಟು.

ಕಳೆದ ಹಲವಾರು ವರ್ಷಗಳಿಂದ ಕ್ಯಾನ್ಸರ್ ನ 'ಸ್ನೇಹಿತ'ರಾಗಿರುವ ನ.ಕೃಷ್ಣಪ್ಪನವರ ಬಗೆಗೆ ಹಾಗೂ ಕ್ಯಾನ್ಸರನ್ನು ಗೆದ್ದಿರುವ,  ಅದರ ಜೊತೆಗೆ ಸಹಜವಾಗಿ ಬದುಕುತ್ತಿರುವ ಇನ್ನು ಕೆಲವರ ಬಗೆಗೆ ಬರೆದಿರುವ ಸಂಗ್ರಹಯೋಗ್ಯವಾದ, ಕ್ಯಾನ್ಸರ್ ನನ್ನು 'ಅಪ್ಪಿ'ಕೊಂಡಿರುವವರಿಗೆ ಸ್ಥೈರ್ಯ ತುಂಬುವ ಸಲುವಾಗಿ ಬರೆದಿರುವ 'ಮೃತ್ಯುಮಿತ್ರ' ಪುಸ್ತಕಕ್ಕೆ ಟಿ.ಎನ್.ಸೀತಾರಾಮ್ ರವರು ಬರೆದ ಮುನ್ನುಡಿ ಈಗ್ಗೆ ಕೆಲ ದಿನಗಳ ಹಿಂದೆ ಓದಿದಾಗ ಬಹಳ ಖುಷಿಯಾಯಿತು. ಸೈದ್ಧಾಂತಿಕವಾಗಿ ಬೇರೆ ಬೇರೆ ದಿಕ್ಕಿನಲ್ಲಿದ್ದರೂ ಇಬ್ಬರು ಹಿರಿಯರ ನಡುವಿನ ಉತ್ತಮ ಸಂಬಂಧ, ಎಡಪಂತೀಯ - ಬಲಪಂತೀಯ ಎಂದು 'ವೈಯಕ್ತಿಕ' ದ್ವೇಷಗಳನ್ನು ಕಾರುತ್ತಿರುವ ಕೊಳಕು ಮನಸ್ಸುಗಳಿಗೆ ಮೇಲ್ಪಂಕ್ತಿಯಾಗಿದೆ. 

ಶ್ರೀಯುತ ಕೃಷ್ಣಪ್ಪನವರ ಬಗೆಗೆ, ಅವರು ಚೆನ್ನಾಗಿರಲಿ ಎಂದು ಪ್ರಾರ್ಥಿಸುವ, ಅವರ ಆಶೀರ್ವಾದ ನಮ್ಮ ಮೇಲೆ ಎಂದೂ ಇರಲಿ ಎಂದು ಕೇಳಿಕೊಳ್ಳುವ ದೊಡ್ಡ ಬಳಗವೇ ಇದೆ. ಸಂಘದ ಪ್ರಚಾರಕರ ಮೇಲ್ಪಂಕ್ತಿಯೇ ಹಾಗೆ. ಆ ಸಾಂಗತ್ಯದ ಅನುಭವವೇ ಒಂದು ಶಿಕ್ಷಣ, ಸಂಸ್ಕಾರ. ಆದರೆ ಅದನ್ನು ಬರಮಾಡಿಕೊಳ್ಳುವ ಮನಸ್ಸಿರಬೇಕಷ್ಟೆ. 

ಪುಸ್ತಕದ ಮುನ್ನುಡಿಯನ್ನು ನನ್ನ ಬ್ಲಾಗ್ ನಲ್ಲಿ ಇರಿಸಿಕೊಳ್ಳುವ ಕಾರಣಕ್ಕಷ್ಟೇ ಈ ಲೇಖನ. 

ನೆಚ್ಚಿನ ಕೃಷ್ಣಪ್ಪನವರಿಗೆ ಪ್ರಣಾಮಗಳು.

ನೆನಪಿದೆಯಾ? ಕೃಷ್ಣಪ್ಪನವರೆ ಹೀಗೆ ಪತ್ರ ಶುರು ಮಾಡುವುದನ್ನು ನೀವೇ ನನಗೆ ಕಲಿಸಿಕೊಟ್ಟಿದ್ದು. 1932ರಲ್ಲಿ ನಾನಿನ್ನೂ ಚಿಕ್ಕ ಹುಡುಗ. ಮಿಡ್ಲ್‌ಸ್ಕೂಲ್‌ನಲ್ಲಿ ಓದುತ್ತಿದ್ದೆನೆಂದು ನೆನಪು. ಯಾವುದೋ ಅನಾರೋಗ್ಯಕ್ಕೆ ನನ್ನನ್ನು ಚಿಕ್ಕಬಳ್ಳಾಪುರದ ಮಿಷನ್ ಆಸ್ಪತ್ರೆಗೆ ಸೇರಿಸಿದ್ದರು. ಅಲ್ಲಿ ನನ್ನ ವಿಳಾಸಕ್ಕೆ ನೀವು ನೆಚ್ಚಿನರಾಜ, ಅಕ್ಕರೆಯ ನೆನಪುಗಳು ಎಂದು ರುಜು ಮಾಡಿ 9 ಪುಟಗಳ ಒಂದು ಪತ್ರ ಬರೆದಿದ್ದಿರಿ (ಮನೆಯಲ್ಲಿ ನನ್ನನ್ನುರಾಜ ಎಂದು ಕರೆಯುತ್ತಿದ್ದರು). ನನ್ನನ್ನುಅದಕ್ಕೆ ಮುಂಚೆ ನೀವು 5-6 ಬಾರಿ ನಮ್ಮ ಮನೆಯ ಹತ್ತಿರವಿದ್ದ ಮೈದಾನದಲ್ಲಿ ನೋಡಿದ್ದೀರಿ ಅಷ್ಟೆ. ಆದರೆ ನಾನು ಯಾತನೆಯಿಂದ ಮನಸ್ಸೆಲ್ಲ ಮಂಕಾಗಿ ಮಲಗಿದ್ದಾಗ – ಒಬ್ಬ 10 ವರ್ಷದ ಚಿಕ್ಕ ಹುಡುಗನಿಗೆ ಅಂತಃಕರಣ, ವಿಶ್ವಾಸ ಮತ್ತು ಭರವಸೆತುಂಬಿದ 9 ಪುಟದ ಪತ್ರ ಬರೆದಿದ್ದಿರಿ. ಖಾಯಿಲೆ ಬಿದ್ದಿರುವ ಚಿಕ್ಕಅಪರಿಚಿತ ಹುಡುಗನ ಮೇಲೆ ಯಾರು ತೋರಿಸುತ್ತಾರೆ ಅಂಥ ವಿಶ್ವಾಸ ಈ ಕಾಲದಲ್ಲಿ? ಆ ಪತ್ರ ಬಂದಾಗ ಖಾಯಿಲೆಯಿಂದ ಮಲಗಿದ್ದ ನಾನು ಅಪರೂಪದ ಸಂಭ್ರಮ ಪಟ್ಟಿದ್ದೆ. ನನಗೆ ಮೊದಲ ಪತ್ರವಿರಬೇಕು. ಪತ್ರದ ತುಂಬಾ ಅಂತಃಕರಣ, ಸುಂದರ ಅಕ್ಷರಗಳು, ಸ್ವಚ್ಛ ಭಾಷೆ. ಅಂಥ ಪತ್ರವನ್ನು ನಾನು ಮುಂಚೆ ನೋಡಿಯೂ ಇರಲಿಲ್ಲ. ಆಮೇಲೆ ನಮ್ಮ ಮನೆಯಲ್ಲಿ ಎಷ್ಟೋ ವರ್ಷ ನಿಮ್ಮ ಪತ್ರದ್ದೇ ಮಾತು. ಪತ್ರ ಬರೆದರೆ ಕೃಷ್ಣಪ್ಪನವರಥರ ಬರೆಯಬೇಕು ಎಂದು ಎಲ್ಲರೂ ಅಂದುಕೊಳ್ಳುವಷ್ಟು ಸುಂದರವಾಗಿತ್ತು ನಿಮ್ಮ ಪತ್ರ. ಪಾಯಶಃ ನಿಮ್ಮ ಪತ್ರದ ಭಾಷೆ ಮತ್ತು ಅಂತರ್ಗತ ಭಾವ ಕೋಶತೆ ನನ್ನನ್ನು ಸಾಹಿತ್ಯ ಮತ್ತು ಕಲೆಯಕಡೆ ಸೆಳೆದವು ಎಂದು ನನ್ನ ಭಾವನೆ.

ನಿಮಗೇ ಗೊತ್ತು ನಮ್ಮ ತಂದೆ ಕಾಂಗ್ರೆಸ್‌ನವರು.ತುಂಬಾ ಶಿಸ್ತಿನ ಮನುಷ್ಯರು. ಹಳೆಯ ಕಾಂಗ್ರೆಸ್‌ನವರಿಗೆ ಸಂಘದವರನ್ನು ಕಂಡರೆ ಕೋಪವಿರುತ್ತಿದ್ದ ದಿನಗಳು. ಅಂಥಾ ನಮ್ಮ ಮನೆಯಲ್ಲಿಕೂಡ ನಿಮ್ಮನ್ನು ಕಂಡರೆ ನಮ್ಮ ಮನೆಯಎಲ್ಲರಿಗೂ ಎಷ್ಟು ಪ್ರೀತಿ ವಿಶ್ವಾಸ. ನೆನಪಿದೆಯಾ?ಅಷ್ಟು ವಿಶ್ವಾಸ, ಅಂತಃಕರಣತಮ್ಮಲ್ಲಿಕಾಣುತ್ತಿದ್ದೆವು ನಾವು. 

ನೀವು ನಂಬಿದ ಸಂಘಟನೆಯ ಸೈದ್ಧಾಂತಿಕ ತತ್ವಗಳಿಗೆ ನಾನು ಬಹುದೂರ ಹೋಗಿ ಸಮಾಜವಾದಿ ಪಕ್ಷಕ್ಕೆ ಸೇರಿದಾಗಲೂ ನಿಮ್ಮ ಬಗೆಗಿನ ವೈಯಕ್ತಿಕಗೌರವ ನನಗೆ ಕಿಂಚಿತ್ತೂ ಕಡಿಮೆಯಾಗಲಿಲ್ಲ. ಅಂಥದೊಡ್ಡ ವ್ಯಕ್ತಿ ನೀವು. ಆಗ ನಿಮಗೆ 28-30 ವಯಸ್ಸು ಅನಿಸುತ್ತೆ. ದೇಹದ ಮತ್ತು ಬದುಕಿನ ಆಕರ್ಷಣೆಯ ವಿರುದ್ಧ ಹೋರಾಟ ಮಾಡುವುದು ಸುಲಭದ ಮಾತಲ್ಲ. ಆದರೆ ಆ ವಯಸ್ಸಿನಲ್ಲಿ ನೀವು ಎಂಥ ನಿಸ್ಪೃಹ ಬದುಕು ಬದುಕುತ್ತಿದ್ದಿರಿ ಎಂದು ಅನೇಕ ವರ್ಷಗಳ ನಂತರ ನನಗೆ ಅರಿವಾಗತೊಡಗಿತು. ಈ ಸಮಾಜಕ್ಕೆ ನನ್ನ ಬದುಕು ಅರ್ಪಣೆ ಎಂದು ಆತ್ಮವಿಶ್ವಾಸದ ನಗೆ ಬೀರುತ್ತಾ ಹೇಳುತ್ತಿದ್ದಿರಿ. ನಿಮ್ಮಔಷಧಿಗಾಗಿ ಕೊಂಡುಕೊಂಡ ಆಗಿನ ಮೂರು ಪೈಸೆಯ ಒಂದು  ನಿಂಬೆಹಣ್ಣಿನ ಲೆಕ್ಕ ಕೂಡ ಬರೆದುಕೊಳ್ಳುತ್ತಿದ್ದಿರಿ. ಅದನ್ನು ನಿಮ್ಮ ಕೇಂದ್ರ ಶಾಖೆಗೆ ಕಳುಹಿಸುತ್ತಿದ್ದರೋ ಏನೋ ಗೊತ್ತಿಲ್ಲ. ಅಷ್ಟು ನಿಸ್ಪೃಹ ಮನುಷ್ಯರು ನೀವು. ನಾನು ಮೆಚ್ಚುವ ಗಾಂಧಿಯಂತ ಅತ್ಯಂತ ಸರಳ ಬದುಕನ್ನು ಬದುಕಿದ ಮನುಷ್ಯ ನೀವು. ಕೃಷ್ಣಪ್ಪನವರೆ ನಿಮ್ಮ ಬುದ್ಧಿಶಕ್ತಿಗೆ, ನಿಮ್ಮ ವಿದ್ಯಾಭ್ಯಾಸಕ್ಕೆ ನಿಮ್ಮ ಚಮಕಿಗೆ ನೀವು ಸುಲಭವಾಗಿ ಐಎಎಸ್ ಮಾಡಿ ದೊಡ್ಡ ಅಧಿಕಾರಿಯಾಗಬಹುದಿತ್ತು. ಏನು ಬೇಕಾದರೂ ಆಗಬಹುದಿತ್ತು. ಆದರೆ ನೀವು ಅದೆಲ್ಲವನ್ನು ಧಿಕ್ಕರಿಸಿ ಸಂಘಟನೆಗೆ ನಿಮ್ಮನ್ನು ಸಮರ್ಪಿಸಿಕೊಂಡಿರಿ.

ನಿಮ್ಮ ಸಂಘಟನೆಯ ಬಗ್ಗೆ ನನ್ನದೇ ಆದ ವಿರೋಧವಿದೆ. ಭಾರತವನ್ನು ಅಮೆರಿಕಾದ ಮಡಿಲಲ್ಲಿ ಇಡಲು ಕಾರಣವಾದ ಸಂಘಟನೆ ಎಂಬ ಆಳದ ಸಿಟ್ಟು ಇದೆ. ಆರ್ಥಿಕ ಸಮಾನತೆಯ ಬಗ್ಗೆ ಚಕಾರವೆತ್ತದೆ ಧರ್ಮದ ವಿಚಾರದಲ್ಲಿ ಮಾತ್ರ ಉದ್ವಿಗ್ನರಾಗುವವರು ಎಂಬ ಆಕ್ಷೇಪಣೆ ನನ್ನದು. ನಾನು ಸೈದ್ಧಾಂತಿಕವಾಗಿ ಬೇರೆದಾರಿ ಹಿಡಿದರೂ ಕೂಡ ಇಂದಿಗೂ ನನ್ನ ಮನಸ್ಸಿನಲ್ಲಿ ಮತ್ತು ಹೃದಯಲ್ಲಿ ಅತ್ಯಂತ ಆತ್ಮೀಯ ಗುರುವಿನಂತೆ ನಿಂತವರಲ್ಲಿ ನೀವು ಮೊದಲಿಗರು. ನಾನು ದೂರ ಹೋದೆನೆಂದು ಕೋಪಗೊಂಡವರು ನೀವಲ್ಲ. ಬದಲಿಗೆ ಎಷ್ಟೋ ವರ್ಷಗಳ ನಂತರ ಮಾಯಾಮೃಗ ತೆಗೆದದ್ದು ನಾನೇ ಎಂದುಗೊತ್ತಾದಾಗ ನನ್ನನ್ನು ಹುಡುಕಿಕೊಂಡು ಬಂದು ಆತ್ಮೀಯವಾಗಿ ಅಪ್ಪಿಕೊಂಡು ಹೆಮ್ಮೆಪಟ್ಟ ಬಂಧು ನೀವು.

ನಾನು ಜೀವನದಲ್ಲಿ ಮೊದಲು ಓದಿದ ಕಾದಂಬರಿ ಭೈರಪ್ಪನವರ ಧರ್ಮಶ್ರೀಯನ್ನು ನಾನು ಹೈಸ್ಕೂಲಿನಲ್ಲಿದ್ದಾಗ ಓದಿಸಿದವರು ನೀವು. ಶಿವರಾಮ ಕಾರಂತರ ಕಾದಂಬರಿ ಓದಿಸಿದವರು ನೀವು. ಜೆ.ಪಿ.ಯವರ ಪುಸ್ತಕ ಕಮ್ಯುನಿಸಂ ನಿಂದ ಸೋಷಿಲಿಸಂವರೆಗೆ ಎಂಬ ಪುಸ್ತಕ ಓದಿಸಿ ರಾಜಕೀಯ ಚಿಂತನೆಯನ್ನು ನನ್ನಲ್ಲಿ ಶುರು ಮಾಡಿದವರು ನೀವು. ನಿಮ್ಮ ಬಗ್ಗೆ ನನಗೆ ತೀರಿಸಲಾಗದ ಋಣವಿದೆ.

ನನ್ನ ಅಮ್ಮ ಸಾವಿನ ಅಂತ್ಯದಲ್ಲಿ ನರಳುತ್ತಾ ಮಲಗಿದ್ದಾಗ ನೀವು ಅವರನ್ನು ಭೇಟಿ ಮಾಡಿ ಮನೆಯವರಿಗೆ ಧೈರ್ಯ ಕೊಟ್ಟಿದ್ದೀರಿ. ಇಡೀ ಬದುಕಿನಲ್ಲಿ ಇಷ್ಟೊಂದು ಮಾನವೀಯತೆಯನ್ನು, ಆತ್ಮೀಯತೆಯನ್ನುಇಟ್ಟುಕೊಂಡ ಮನುಷ್ಯರನ್ನು ನಾನು ನೋಡಿದ್ದು ಕಡಿಮೆ ನೀವು, ನಿಮ್ಮ ಬದುಕು ಸಹೃದಯರಿಗೆ ಒಂದು ಪಠ್ಯ ಪುಸ್ತಕ.

ನಿಮ್ಮ ಈಗಿನ ಪುಸ್ತಕ ಓದುತ್ತಾ ಹೋದಂತೆ ನನ್ನಲ್ಲಿ ಈ ನೆನಪುಗಳೆಲ್ಲಾ ಬಂದವು. ಅಂಥಎಲ್ಲ ಸಂತೋಷಕರ ನೆನಪುಗಳಿಗಾಗಿ ನಿಮಗೆ ನನ್ನ ಅನಂತಾನಂತ ಕೃತಜ್ಞತೆಗಳು.

ಟಿ.ಎನ್.ಸೀತಾರಾಮ್
--------------------

ವಿಚಾರದ ವಿಭಿನ್ನತೆಯ ಕಾರಣಕ್ಕೆ ವೈಯಕ್ತಿಕ ದ್ವೇಷವನ್ನು ಬೆಳೆಸಿ, ಪೋಷಿಸಿಕೊಂಡು ಪರಸ್ಪರ ಕೆಸರೆರಚಿಕೊಳ್ಳುವವರ,  ಭಾಗವಹಿಸುವ ಎಲ್ಲ ವೇದಿಕೆಗಳ ಮೇಲೆ 'ಪರನಿಂದೆ'ಯನ್ನೇ ಕರ್ತವ್ಯವನ್ನಾಗಿಸಿಕೊಂಡವರ ಮಧ್ಯೆ ಸೀತಾರಾಮ್ - ಕೃಷ್ಣಪ್ಪನವರ ಸ್ನೇಹ ನಂಬಲಸಾಧ್ಯವಾದ ವಾಸ್ತವ ಎಂದರೆ ಅತಿಶಯೋಕ್ತಿಯಲ್ಲ.