ಯಾವುದೇ ಕಾರ್ಯಕ್ರಮ ಆಯೋಜಿಸಿದರೂ ಕಾರ್ಯಕ್ರಮದ ಪ್ರಚಾರ ಹೇಗೆ ಮಾಡುವುದು, ಜನರಿಗೆ ವಿಷಯ ತಲುಪಿಸುವುದು ಹೇಗೆ, ಸಾಕಷ್ಟು ಜನರು ಬರದಿದ್ದರೆ! ಎಂಬೆಲ್ಲ ಆಲೋಚನೆಗಳನ್ನು ಹೊತ್ತು ಕಾರ್ಯಕ್ರಮವನ್ನು ಆಯೋಜಿಸಿದರೆ ಬರೀ ನಿರೀಕ್ಷೆಯಷ್ಟೇ ಅಲ್ಲ, ಕಲ್ಪನೆಯನ್ನೂ ಮೀರಿ ಪ್ರೇಕ್ಷಕರು, ಶ್ರೋತೃಗಳು ಬಂದರೆ ಯಾವ ಕಾರ್ಯಕ್ರಮದ ಆಯೋಜಕರಿಗೆ ತಾನೇ ಸಂತೋಷವಾಗುವುದಿಲ್ಲ? ಇದಕ್ಕೆಲ್ಲ ಸಾಕ್ಷಿಯಾಗಿದ್ದು ಪ್ರಪ್ರಥಮ 'ತುಂಬುಗನ್ನಡದ ಶತಾವಧಾನ' ಕಾರ್ಯಕ್ರಮ.
ನನಗೇನೂ ವಿಶೇಷ ಆಸಕ್ತಿಯಿಲ್ಲದಿದ್ದರೂ, ಬರೀ ಕುತೂಹಲದ ಕಾರಣಕ್ಕೆ ಹಾಗು ಗಣೇಶ್ ರವರ ಕಾರ್ಯಕ್ರಮ ಎಂಬ ಕಾರಣಕ್ಕೆ ಕಾರ್ಯಕ್ರಮದಲ್ಲಿ ಪ್ರಭಂಧಕನಾಗಿ ನನ್ನ ಅನುಭವ ನಿಜವಗಾಲೂ ದಾಖಲು ಮಾಡಿಕೊಳ್ಳು ವಂಥದ್ದು.
ನನಗೇನೂ ವಿಶೇಷ ಆಸಕ್ತಿಯಿಲ್ಲದಿದ್ದರೂ, ಬರೀ ಕುತೂಹಲದ ಕಾರಣಕ್ಕೆ ಹಾಗು ಗಣೇಶ್ ರವರ ಕಾರ್ಯಕ್ರಮ ಎಂಬ ಕಾರಣಕ್ಕೆ ಕಾರ್ಯಕ್ರಮದಲ್ಲಿ ಪ್ರಭಂಧಕನಾಗಿ ನನ್ನ ಅನುಭವ ನಿಜವಗಾಲೂ ದಾಖಲು ಮಾಡಿಕೊಳ್ಳು ವಂಥದ್ದು.
ನಗರದ ಎನ್ಎಂಕೆಆರ್ ವಿ ಕಾಲೇಜಿನ ಮಂಗಳ ಸಭಾಂಗಣ ದಲ್ಲಿ 3 ದಿನಗಳ ಕಾಲ ನಡೆದ ಕಾರ್ಯಕ್ರಮದಲ್ಲಿ ಜನರನ್ನು ಬರಮಾಡಿಕೊಳುವಲ್ಲಿ ನಾನು ನಿರತನಾಗಿದ್ದೆ. ಆದರೆ ಮೊದಲ ದಿನದ ಜನಪ್ರವಾಹವನ್ನು ನೋಡಿ ಸಭಾಂಗಣದ ಹೊರಗಡೆ ಹಾಕಿದ್ದ ಶಾಮಿಯಾನವನ್ನು ಮಾರನೆ ದಿನಕ್ಕೆ ಇನ್ನಷ್ಟು ವಿಸ್ತರಿಸುವಂತಾಯಿತು. ಕಾರ್ಯಕ್ರಮ ಶುರುವಾದ ಕೆಲ ಸಮಯದಲ್ಲೇ ಇಡೀ ಸಭಾಂಗಣ ತುಂಬಿ ಆ ನಂತರ ಬರುವ ಜನರನ್ನು ಶಾಮಿಯಾನದತ್ತ ತಿರುಗಿಸುವ ಕಾರ್ಯಕ್ಕೆ ನಾನು ನಿಯುಕ್ತನಾಗಬೇಕಾಯಿತು.
ನನ್ನ ಕೆಲ ಸ್ನೇಹಿತರನ್ನೂ ಪ್ರಭಂಧಕರಾಗಲು ಕರೆದಿದ್ದೆ. ಅವರಿಗೂ ಆಶ್ಚರ್ಯ..! ಹೊಸ ಕನ್ನಡವೇ ಬಾರದ ಜನರು ತುಂಬಿರುವ ಈ ಬೆಂಗಳೂರಿನಲ್ಲಿ ಎಲ್ಲ ಕಾಲದ ಕನ್ನಡವಿರುವ ಈ ಕಾರ್ಯಕ್ರಮಕ್ಕೆ ಇಷ್ಟೊಂದು ಜನ ಬರುತ್ತಿದ್ದಾರೆ ಎಂಬುದು ನನ್ನ ಆದಿಯಾಗಿ ನನ್ನ ಸ್ನೇಹಿತರ ಪ್ರಶ್ನೆಯಾಗಿತ್ತು.
ಸಾಹಿತ್ಯದ ಆಸಕ್ತಿ, ಕಾರ್ಯಕ್ರಮದ ಬಗ್ಗೆ ಕುತೂಹಲ, ಗಣೇಶ್ ರ ಬಗ್ಗೆ ಗೌರವ, ಗಣೇಶ್ ರವರ ಮಾತನ್ನು ಕೇಳುವ ಹಂಬಲದ ಕಾರಣಕ್ಕೆ ಬರುತ್ತಿದ್ದ ಜನರಿಗೆ ಸಭಾಂಗಣದ ಒಳಗೆ ಜಾಗ ಸಿಗಲಿಲ್ಲ ಎನ್ನುವ ಬೇಸರದಿಂದ ಶಾಮಿಯಾನದಲ್ಲಿ ಕಾರ್ಯಕ್ರಮವನ್ನು ಪರದೆಯಲ್ಲಿ ನೋಡಲು ಮನಸ್ಸಿರಲಿಲ್ಲ. ಎಲ್ಲರಿಗು ಗಣೇಶ್ ರನ್ನು, ಆ ಪವಿತ್ರವಾದ ವೇದಿಕೆಯನ್ನು, ನೇರವಾಗಿ ನೋಡುವ ಹಂಬಲ. ಅವರನ್ನೆಲ್ಲ 'ಎಲ್ಲ ಜಾಗಗಳೂ ಭರ್ತಿಯಾಗಿವೆ. ನಿಂತುಕೊಳ್ಳಲೂ ಜಾಗವಿಲ್ಲ ದಯವಿಟ್ಟು ಶಾಮಿಯಾನಾದಲ್ಲಿ ವ್ಯವಸ್ಥೆ ಮಾಡಿರುವ ಪರದೆಯ ಮೂಲಕ ಕಾರ್ಯಕ್ರಮವನ್ನು ನೋಡಿ' ಎಂದು ಒಪ್ಪಿಸಲು ಹರಸಾಹಸ ಪಡಬೇಕಾಯಿತು. ಕೆಲವರು, ಒಳಗೆ ಹೋಗಿ, ಜಾಗವಿಲ್ಲ ಎಂದು ಖಚಿತವಾದ ಮೇಲೆಯೇ ಶಾಮಿಯಾನಕ್ಕೆ ಹೋಗುತ್ತಿದ್ದರು. ಇನ್ನು ಕೆಲವರಂತೂ ನಿಂತು ನೋಡಿದರೂ ಪರವಾಗಿಲ್ಲ, ಗಣೇಶ್ ರನ್ನು ವೇದಿಕೆಯ ಮೇಲೆ ನೇರವಾಗಿಯೇ ನೋಡಬೇಕು ಎಂದು ಸಭಾಂಗಣದ ಒಳಗೆ ಎಲ್ಲರ ಕಣ್ತಪ್ಪಿಸಿ ಹೋಗುತ್ತಿದ್ದರು.
ಮೊದಲನೇ ದಿನ ನವೆಂಬರ್ 30 ರಂದು, ಕಾರ್ಯಕ್ರಮ ಮುಗಿದು ಎಲ್ಲರೂ ತಮ್ಮ ತಮ್ಮ ಮನೆಗಳಿಗೆ ಹಿಂದಿರುಗುತ್ತಿರುವಾಗ ಸಭಾಂಗಣದ ಒಳಗೆ ಜಾಗ ಸಿಗದಿದ್ದ ಒಬ್ಬರು ಅಜ್ಜಿ ಬಂದು 'ಏ ಹುಡುಗಾ, ಸಭಾಂಗಣದ ಒಳಗಡೆಯ ಮುಂದಿನ ಸಾಲಿನಲ್ಲೇ ಜಾಗ ಸಿಗಬೇಕಾದರೆ ನಾಳೆ ನಾನು ಎಷ್ಟೊತ್ತಿಗೆ ಬರಬೇಕು' ಎಂದು ಕೇಳಿದಾಗ ಕಾರ್ಯಕ್ರಮದ ಯಶಸ್ಸು ಗೋಚರಿಸಲು ಶುರುವಾಯಿತು.
ಶನಿವಾರ, ಡಿಸೆಂಬರ್ 1 ರಂದು ಕಾರ್ಯಕ್ರಮ ಶುರುವಾದ 10 ನಿಮಿಷಗಳೊಳಗೆ ಇಡೀ ಸಭಾಂಗಣ ಪೂರ್ತಿಯಾಗಿತ್ತು. ಆ ನಂತರ ಬಂದ ನನ್ನ ಆತ್ಮೀಯರೊಬ್ಬರಿಗೆ ವಿಷಯ ತಿಳಿಸಿದ್ದಕ್ಕೆ ಅವರಿಗೆ ಪರಮಾಶ್ಚರ್ಯ!. ಇಷ್ಟು ಬೇಗ ಸಭಾಂಗಣದ ಎರಡೂ ಮಹಡಿಗಳು ಭರ್ತಿ ಎಂಬುದನ್ನು ನಂಬಲು ಅವರು ತಯಾರಿರಲಿಲ್ಲ. ಆದರೆ ಒಳಗೆ ಹೋಗಿ ನೋಡಿ ಬಂದಾಗಲೇ ಅವರು ನನ್ನ ಮಾತನ್ನು ನಂಬಿದ್ದು.
ಒಬ್ಬರು ಹಿರಿಯರಿಗೆ 'ಒಳಗೆ ಕುಳಿತುಕೊಳ್ಳಲು ಜಾಗವಿಲ್ಲ, ಪರದೆಯಲ್ಲಿ ನೋಡಿ' ಎಂದು ಶಾಮಿಯನದ ಕಡೆ ಕೈ ತೋರಿಸಿದ್ದಕ್ಕೆ 'ತುಂಬಾ ಸಂತೋಷ. ಈ ಕಾಲದಲ್ಲಿ, ಅದೂ ಈ ಬೆಂಗಳೂರಿನಲ್ಲಿ ಇಂಥ ಒಳ್ಳೆಯ ಕಾರ್ಯಕ್ರಮ ಜನರಿಂದ ಭರ್ತಿಯಾಗಿದೆ ಎಂದರೆ ನನಗೆ ಅದೇ ಸಂತೋಷ. ನನಗೆ ಜಾಗ ಸಿಗದಿದ್ದರೂ, ನನಗೆ ನೋಡಲಾಗದಿದ್ದರೂ ಬೇಸರವಿಲ್ಲ' ಎಂದಾಗ ನನಗೂ ನಿಜ ಎನಿಸಿತು.
ಎರಡನೆಯ ದಿನಕ್ಕೆ ವಾಹನಗಳ ನಿಲುಗಡೆಯ ಜಾಗದ ಸಮಸ್ಯೆ ಶುರುವಾಯಿತು. ಕೆಲ ಸಮಯದ ನಂತರ ಕಾರುಗಳನ್ನು ಒಳಬಿಡುವುದನ್ನು ನಿಲ್ಲಿಸಿದರೆ ದ್ವಿಚಕ್ರವಾಹನಗಳನ್ನೂ ಒಳಬಿಡುವುದನ್ನು ನಿಲ್ಲಿಸುವ ಪರಿಸ್ಥಿತಿ ಎದುರಾಯಿತು. ಆಗಂತುಕರೊಬ್ಬರು ತಮ್ಮ ಬೈಕನ್ನು ನಿಲ್ಲಿಸಲು ಜಾಗವಿಲ್ಲದ್ದನ್ನು ನೋಡಿ 'ಯಾಕ್ರೀ ಇಷ್ಟ್ ಜನರನ್ನ ಕರೀಬೇಕಾಗಿತ್ತು?' ಎಂದು ತಮ್ಮ ಆಶ್ಚರ್ಯವನ್ನು ಹೊರಹಾಕಿದರು. ನನಗೆ ಅವರು ಬೈದರೋ ಅಥವಾ ಕಾರ್ಯಕ್ರಮದ ಕುರಿತು ಹೊಗಳಿದರೋ ಎಂದು ಅರ್ಥವಾಗಲೇ ಇಲ್ಲ.
ನಾನು ಇನ್ನೂ ಒಂದು ಅಂಶ ಗಮನಿಸಿದ್ದು ಎಂದರೆ ಸಾಕಷ್ಟು ಜನ ಶತಾವಧಾನಿಗಳು ಹೇಳುತ್ತಿದ್ದ
ಪದ್ಯಗಳನ್ನ, ಆಶು ಕವಿತೆಗಳನ್ನ ಬರೆದುಕೊಳ್ಳುತ್ತಿದ್ದುದು ಹಾಗು ಇನ್ನು ಕೆಲವರು ತಾವು ಸಹ ಬರೆದು
ಅದನ್ನ ಗಣೇಶ್ ರವರಿಗೆ ಕಳಿಸುತ್ತಿದ್ದುದು. ಬಹುಶಃ ಕನ್ನಡ ಭಾಷೆಯ ಅಥವಾ ಸಂಸ್ಕೃತ ವಿಷಯಗಳ ಮೇಲೆ
ಅಧ್ಯಯನ ಮಾಡುವವರಿರಬೇಕು ಎಂದು ಸುಮ್ಮನಾದೆ.
ಕೊನೆಯ ದಿನದ ಹೊತ್ತಿಗೆ ಪರಿಸ್ಥಿತಿ ಬದಲಾಗಿತ್ತು. ಮೊದಲೆರಡು ದಿನದ ಅನುಭವವಿದ್ದವರಿಗೆ ಆಗಲೇ ಮನವರಿಕೆಯಾಗಿತ್ತು, ಕಾರ್ಯಕ್ರಮ ಪ್ರಾರಂಭವಾಗುವ ಮೊದಲೇ ಸಭಾಂಗಣ ಸೇರದಿದ್ದರೆ ಕೂರಲು ಜಾಗ ಸಿಗುವುದಿಲ್ಲ ಎಂದು. ತಡವಾಗಿ ಬಂದವರು ನಗುನಗುತ್ತ ತಾವೇ ಸಹಜವಾಗಿ ಶಾಮಿಯಾನದತ್ತ ನಡೆಯುತ್ತಿದ್ದರು. ಕೊನೆಯ ದಿವಸಕ್ಕೆ ಬಂದ ಹೊಸಬರಿಗೆ ಮಾತ್ರ ಶಾಮಿಯಾನದ ದಾರಿ ತೋರಿಸಬೇಕಾಗಿತ್ತು.
ಇಡೀ ದಕ್ಷಿಣ ಬೆಂಗಳೂರಿನ ಜನರಿಗೆ ವಿಶೇಷ ಹಾಗು ವಿಶಿಷ್ಟ ಅನುಭವ ನೀಡಿದ ಈ ಕಾರ್ಯಕ್ರಮ ಕನ್ನಡದ ಬಗ್ಗೆ , ಗಣೇಶ್ ರ ಬಗ್ಗೆ, ಶತಾವಧಾನದ ಬಗ್ಗೆ ಹೆಮ್ಮೆ ಮೂಡಿರುವುದಂತೂ ಸತ್ಯ.
ಸುರವೃಂದಕ್ಕಿದು ಚೆಲ್ವಿನಾಲಿಕೆಯ ಬಲ್ಜನ್ನಂ ಗಡೆಂಬರ್ ಬುಧರ್
ಮೆರೆಗುಂ ಸತ್ಕವಿಮೋದಕೆಂದೆ ನುಡಿವೆಣ್ ಮೆಯ್ಯಾಗೆ ಮೂರೆಂಬಿನಿಂ|
ನೆರೆ ನಾನಾರಸಮಾಂತ ಕಾವ್ಯಕಲನಂ ತ್ರೈಗುಣ್ಯದಿಂ ತೋರ್ಕುಮೀ
ತೆರದಿಂದೊಂದವಧಾನಮಲ್ತೆ ರಸಿಕರ್ಗೆಲ್ಲರ್ಗಮಾರಾಧನಂ|| – ಡಾ|| ರಾ. ಗಣೇಶ್
ಸುರವೃಂದಕ್ಕಿದು ಚೆಲ್ವಿನಾಲಿಕೆಯ ಬಲ್ಜನ್ನಂ ಗಡೆಂಬರ್ ಬುಧರ್
ಮೆರೆಗುಂ ಸತ್ಕವಿಮೋದಕೆಂದೆ ನುಡಿವೆಣ್ ಮೆಯ್ಯಾಗೆ ಮೂರೆಂಬಿನಿಂ|
ನೆರೆ ನಾನಾರಸಮಾಂತ ಕಾವ್ಯಕಲನಂ ತ್ರೈಗುಣ್ಯದಿಂ ತೋರ್ಕುಮೀ
ತೆರದಿಂದೊಂದವಧಾನಮಲ್ತೆ ರಸಿಕರ್ಗೆಲ್ಲರ್ಗಮಾರಾಧನಂ|| – ಡಾ|| ರಾ. ಗಣೇಶ್
ಯಾಕ್ರೀ ಇಷ್ಟ್ ಜನರನ್ನ ಕರೀಬೇಕಾಗಿತ್ತು ... endu heLidavaru hogaLiyE irabEku!! :)
ReplyDeleteThis got published in kannada.oneindia.in
ReplyDeletehttp://kannada.oneindia.in/literature/articles/2012/unique-program-shatavadhani-ganesh-070116.html