Apr 24, 2012
ವಿಚಾರವಾದಿಗಳಿಗೇ ವಿಚಾರಕ್ಕೆ ಬರ....
Apr 15, 2012
ಜಪಾನಿನಾನುಭವ-೩ : ನಮ್ ದೇಶ ವಾಸಿ ಮಾರಾಯ...
ಸಾಕಷ್ಟು ಜನ ಹೊರದೇಶಗಳಿಗೆ ಹೋಗಿ ಬಂದಾಗ ನಮ್ಮ ದೇಶದ ಜೊತೆ ತಾವು ಹೋದ ದೇಶವನ್ನು ತುಲನೆ ಮಾಡಿ ನಮ್ಮ ದೇಶದಲ್ಲಿ ಏನೇನು ಕೊರತೆ ಇದೆ ಎಂಬುದನ್ನ ನಮ್ಮ ದೇಶ ಎಷ್ಟು ಹಿಂದಿದೆ ಎಂಬರ್ಥದಲ್ಲಿ ಬರೀತಾರೆ. ಅದರಲ್ಲಿ ಒಳ್ಳೆ ನಮ್ಮ ದೇಶ ಇನ್ನೂ ಯಾಕೆ ಹೀಗಿದೆ ಎಂಬ ಕೊರಗಿನಿಂದಲೂ ಬರೆಯುವರಿದ್ದಾರೆ. ನಾನು ಈ ಸಲ ಸ್ವಲ್ಪ ವಿಭಿನ್ನವಾಗಿ ‘ಬರೆದುಕೊಳ್ಳೋಣ’ ಎಂದು ಅಂದುಕೊಂಡಿದ್ದೆ.
ಒಂದು ದಿನ ಶಿಬುಯದಿಂದ ಯೋಕೋಹಾಮಕ್ಕೆ ಮಿನಾತೋ ಮಿರೈ ಲೈನ್ ರೈಲು ಹತ್ತಿದೆ. ರೈಲು ಹೊರಟ ವೇಗಕ್ಕೆ ನನ್ನ ಪಕ್ಕದಲ್ಲಿದ್ದ, ಸುಮಾರು ಆರೇಳು ವರ್ಷದ ಹುಡುಗ ಕೆಳಗೆ ಬಿದ್ದ. ನಾನು ಅವನನ್ನು ನನ್ನ ತೋಳನ್ನು ಬಳಸಿ ತಕ್ಷಣ ಎತ್ತಿ ನಿಲ್ಲಿಸಿದೆ. ಆ ಕಾರಣಕ್ಕೆ ಪಕ್ಕದಲ್ಲಿದ್ದವರೆಲ್ಲ ಎಷ್ಟು ಆಶ್ಚರ್ಯದಿಂದ ನೋಡಿದರು ಎಂದರೆ, ನಾನು ಮಾಡಿದ್ದು ಸರಿನೋ, ತಪ್ಪೋ ಎಂಬನುಮಾನ ಮೂಡುವ ಮಟ್ಟಿಗೆ, ಅವರ ದೃಷ್ಟಿ ಇತ್ತು. ಜಪಾನೀಯರು ಇದನ್ನು ಹೇಗೆ ಸ್ವೀಕಾರ ಮಾಡಿದರು ಎಂಬುದೇ ಗೊತ್ತಾಗಲಿಲ್ಲ. ಇದೆಲ್ಲ ನಮ್ಮ ದೇಶದಲ್ಲಿ ಅದೆಷ್ಟು ಸಹಜ, ಇಲ್ಲಿ ...?
ಬಹುಪಾಲು ಜಪಾನಿಯರ ಒಂದು ದಿನ ಇನ್ನೊಂದು ದಿನಕ್ಕಿಂತ ಭಿನ್ನವಾಗಿರುವುದಿಲ್ಲ. ಒಬ್ಬರಿಗೊಬ್ಬರು ಅಗತ್ಯಕ್ಕಿಂತ ಹೆಚ್ಚಿನ ಮಾತಿಲ್ಲ, ಅದಕ್ಕೆ ಜಗಳವಿಲ್ಲ, ಆಹಾರದಲ್ಲಿ, ಮಾಂಸಾಹಾರದಲ್ಲಿ, ಬಿಟ್ಟರೆ ಇನ್ಯಾವುದರಲ್ಲೂ ನಮ್ಮ ದೇಶದ ತರಹ ವಿವಿಧತೆಯಿಲ್ಲ. ನಮ್ಮ ದೇಶದಲ್ಲೋ, ಹೆಜ್ಜೆ ಹೆಜ್ಜೆಗೆ ವಿವಿಧ ರೀತಿಯ ಜನ, ಆಹಾರ, ನೆಲ, ಜಲ. ಒಂದರಿಂದ ಇನ್ನೊಂದು ಉತ್ಕೃಷ್ಟ. ಅದಿಲ್ಲಿ ಅಲಭ್ಯ. ಆದರೆ ಇತ್ತೀಚಿನ ಮಕ್ಕಳು ರೈಲಿನಲ್ಲಿ, ಬೀದಿಯಲ್ಲಿ ಮಾತನಾಡಲು 'ಧೈರ್ಯ' ಮಾಡಿರುವುದು ಉತ್ತಮ ಸಂಕೇತ.
ಒಂದಂತೂ ನಿಜ. ಕೆಲವು ಸಂಘಟನೆಗಳ ಸಹವಾಸದ ಕಾರಣಕ್ಕೆ ನಮ್ಮ ದೇಶದ ಬಗೆಗೆ ಸಾಕಷ್ಟು ಹೆಮ್ಮೆ, ಪ್ರೀತಿ, ಭಕ್ತಿ, ನಿಷ್ಠೆಗಳು ಕಿಂಚಿತ್ ದೊರಕಿದರೂ ಹೊರದೇಶಕ್ಕೆ ಒಮ್ಮೆ ಹೋಗಿ, ಒಬ್ಬಂಟಿಯಾಗಿ ಇದ್ದು ಬಂದರೆ ಆ ಭಾವ ಇನ್ನೂ ಗಟ್ಟಿಯಾಗುತ್ತದೆ. ನಮ್ಮ ದೇಶ ಎಂತಹ 'ಉತ್ಕೃಷ್ಟ ಸ್ವರ್ಗ' ಎಂದು ಕೆಲವು ಜನರಿಗಂತೂ ಅರಿವಾಗಿಯೇ ಆಗುತ್ತದೆ.