Feb 17, 2012

'ಒಳ್ಳೆಯದು' ಎಂದೆನಿಸಿದುದ ಮಾಡಿದ 'ಒಳ್ಳೆಯ ಅನುಭವ'

ನನಗೂ ಸಾಕಷ್ಟು ಸಲ ಅನ್ನಿಸಿತ್ತು.ನಮಗೆ ಪರಿಚಯವಿರುವವರ ಅಥವಾ ಸಂಭಂಧಿಕರ ಸಮಸ್ಯೆಗಳಿಗೆ ದಾಕ್ಷಿಣ್ಯಕ್ಕೋಸ್ಕರವಾದರೂ ನಾವು ಸ್ಪಂದಿಸುತ್ತೇವೆ. ಆದರೆ ನಮಗೆ ಪರಿಚಯವೇ ಇಲ್ಲದವರ ಸಮಸ್ಯೆಗಳಿಗೆ ಸ್ಪಂದಿಸುವುದು ತುಸು ಕಷ್ಟ. ಅವರು ಜಗಳವಾಡುತ್ತಿದ್ದರೆ ನಾವು ಅದನ್ನು ಬಿಡಿಸುವ ಗೋಜಿಗೇ ಹೋಗುವುದಿಲ್ಲ.


ಇತ್ತೀಚೆಗೆ ನಾನು ಕೆಲಸ ಮಾಡುವ ಸಂಸ್ಥೆಯಲ್ಲಿ ಸಹೋದ್ಯೋಗಿಯೊಬ್ಬರ ಜೊತೆ ಮಾತಾಡುವಾಗ ಹಾಗೆಯೇ ಈ ಐಟಿ ಕ್ಷೇತ್ರದ ಬಗ್ಗೆ ಮಾತು ಹೊರಳಿತು. ಆಗ ಅವನು ಹೇಳಿದ ಮಾತು ನನ್ನ ಮೇಲೆ ಬಹಳ ಪರಿಣಾಮ ಉಂಟುಮಾಡಿತು.


ಅವನು ಹೇಳಿದುದು, 'ನಾನು ಕಾಲೇಜಿನಲ್ಲಿ ಓದುತ್ತಿದ್ದಾಗ ಹೇಗಿದ್ದೆನೆಂದರೆ ಯಾರಾದರೂ ರಸ್ತೆಯಲ್ಲಿ ಪೆಟ್ಟು ಮಾಡಿಕೊಂಡರೆ ಅಥವಾ ಬಿದ್ದರೆ ತಕ್ಷಣ, ಅತ್ಯಂತ ಸಹಜವಾಗಿ, ಅವರ ಸಹಾಯಕ್ಕೆ ಓಡಿ ಹೋಗುತ್ತಿದ್ದೆ. ಆದರೆ ಈ ಐಟಿ ಕ್ಷೇತ್ರಕ್ಕೆ ಬಂದು 'ಸಾಫ್ಟ್ ವೇರ್ ಇಂಜಿನಿಯರ್' ಎಂಬ 'ಆಪಾದನೆ' ಬಂದಮೇಲೆ ನಾನು ಹೇಗೆ ಬದಲಾದೆನೋ ಗೊತ್ತಿಲ್ಲ. ಯಾಕೆ ಹೀಗೆ ಹಾಳಾದೆನೋ ಗೊತ್ತಿಲ್ಲ. ನನ್ನ ಭಾವನೆಗಳೇ ಸತ್ತು ಹೋದಂತಿದೆ. ಯಾರ ಸಮಸ್ಯೆಗಳಿಗೂ, ಸಹೋದ್ಯೋಗಿಗಳ ಹೊರತಾಗಿ, ಸ್ಪಂದಿಸಲಾರದಾಗಿದ್ದೇನೆ. ಮೊನ್ನೆ ರಸ್ತೆಯಲ್ಲಿ ಬಿದ್ದ ಸೈಕಲ್ ನವನನ್ನು ಸುಮ್ಮನೆ ನೋಡುತ್ತಲೇ ಆಫೀಸಿಗೆ ಬಂದೆ. ಏನೂ ಅನ್ನಿಸಲೇ ಇಲ್ಲ. ಆಮೇಲೆ ಯೋಚಿಸಿದಾಗ ನನ್ನ ಮೇಲೆ ನನಗೆ ಅಸಹ್ಯವಾಯಿತು. ಅಕ್ಷರಶಃ ಜೀವಂತ ಶವದ ರೀತಿಯಲ್ಲಿ ನಡೆದುಕೊಂಡೆನಲ್ಲಾ ಎಂಬ ಬೇಸರವಾಯಿತು'.





ಇದಾದ ಮಾರನೇ ದಿನವೇ ನಾನು ಶಿವಮೊಗ್ಗದಿಂದ ಬೆಂಗಳೂರಿಗೆ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದೆ. ಆಗ ಒಂದು ಕ್ಷುಲ್ಲಕ ಕಾರಣಕ್ಕೆ ಒಬ್ಬ ಪ್ರಯಾಣಿಕನಿಗೂ ಹಾಗು ನಿರ್ವಾಹಕನಿಗೂ ಕಲಹ ಶುರುವಾಯಿತು. ಉಳಿದ ಪ್ರಯಾಣಿಕರು ಅವರ ಪಾಡಿಗೆ ಸುಮ್ಮನೆ ಇದ್ದರು. ಜಗಳ ಅದರ ಪಾಡಿಗೆ ನಡೆಯುತ್ತಿತ್ತು. ಅದನ್ನು ನೋಡಿದ ನನಗೆ ಜಗಳ ಬಿಡಿಸಲು ಹೋಗುವುದಾ ಬೇಡವಾ, ಹೋಗುವುದಾ ಬೇಡವಾ ಎಂಬ ಗೊಂದಲ ಉಂಟಾಯಿತು. ಆಗ ನೆನಪಾದ ನನ್ನ ಸಹೋದ್ಯೋಗಿಯ ಮಾತುಗಳು ನನ್ನನ್ನು ತಕ್ಷಣ ಎದ್ದು ಹೋಗಿ ಜಗಳ ನಿಲ್ಲಿಸುವ ಪ್ರಯತ್ನಕ್ಕೆ ಪ್ರೇರಣೆ ನೀಡಿತು. ನನ್ನ ಕಾರಣಕ್ಕೆ ಜಗಳ ಏನೂ ನಿಲ್ಲಲಿಲ್ಲ. ಆದರೆ ನನ್ನ ನಂತರ ಸಾಕಷ್ಟು ಉಳಿದ ಪ್ರಯಾಣಿಕರ ಮಧ್ಯಸ್ತಿಕೆಯಿಂದ ಜಗಳ ನಿಂತಿತು.

ಈವರೆಗೆ ನನಗೆ ಏನೂ ಅನಿಸುವ ಮಟ್ಟಿಗಲ್ಲದಿದ್ದರೂ ಅನ್ನಿಸಿದ್ದರೂ ನಾನು ಮಧ್ಯ ಪ್ರವೇಶಿಸುವ ಧೈರ್ಯ ಮಾಡಿರಲಿಲ್ಲ. ಆ ನಂತರ 'ಏನಾದರೂ ಮಾಡಬಹುದಿತ್ತು' ಎಂದಷ್ಟೇ ಅನಿಸುತ್ತಿತ್ತು. ಆದರೆ ಅನುಷ್ಠಾನಕ್ಕೆ ತರುವ ಧೈರ್ಯ ಮಾಡಿದ್ದು ಇದೇ ಮೊದಲು. ಜಗಳ ನಿಲ್ಲಿಸುವ ಕೆಲಸಕ್ಕೆ ನಾನು ನಾಂದಿಯಾದೆನಲ್ಲ, ನನಗೆ 'ಒಳ್ಳೆಯದು' ಎನಿಸಿದುದನ್ನು ಮಾಡಿದೆನಲ್ಲ ಎಂಬ ನನಗಾದ ಸಮಾಧಾನ ನನಗೆ 'ಒಳ್ಳೆಯ ಅನುಭವ'.


ಇನ್ಮುಂದೆ ನಾನು 'ಧೈರ್ಯ ಮಾಡುವುದು' ಸುಲಭವೆನಿಸಿದೆ. ಒಂದು ಕೈ ನೋಡಿಯೇಬಿಡುವ..!

2 comments:

  1. ಈ ಸಂಧರ್ಭಗಳಲ್ಲಿ ಆರಂಭಕಾರನಾಗಲೇ ಧೈರ್ಯ ಬೇಕು... ಮುಂದಿನದಕ್ಕೇನೂ ಬೇಡ... ಅಭಿನಂದನೆಗಳು ನಿಮಗೆ

    ReplyDelete
  2. Olle kelasavanne madiddeeri. Ee tarahada manobhaava beledaagale ondu shuchi samaja nodoke sigabahudu. abhinandane nimma prayatnakke.

    http://kavanarashi.blogspot.com
    nimage samaya iddaga idakkoo kannu hayisi.

    ReplyDelete