Feb 26, 2009

'ವಿರಾಟ್ ಹಿಂದೂ ಸಮಾಜೋತ್ಸವ'ದ ಪರಿಣಾಮಗಳು.

ಈ ಸಮಾಜದಲ್ಲಿ ಕೆಲವು ಜನ, ಸಣ್ಣ ಸಣ್ಣ ಗುಂಪುಗಳನ್ನು ಕಟ್ಟಿಕೊಂಡು, ಆ ಮುಖಾಂತರ ಕೆಲವು ವಿಚಾರಗಳನ್ನ, ಕೆಲವು ಸಂಘಟನೆಗಳನ್ನ ಹಾಗೂ ಕೆಲವು ಸಮುದಾಯಗಳನ್ನ ವಿರೋಧಿಸುವ ತಮ್ಮ ಜೀವನದ 'ಒನ್ ಪಾಯಿಂಟ್' ಕಾರ್ಯಕ್ರಮದಡಿಯಲ್ಲಿ ಕೆಲಸ ಮಾಡುತ್ತಿದ್ದಾರೆ.

ಎರಡು ವರ್ಷಗಳ ಹಿಂದೆ, ಬಹುತೇಕ ರಾಜ್ಯದ ಎಲ್ಲ ತಾಲ್ಲೂಕು ಕೇಂದ್ರಗಳಲ್ಲೂ ಸಂಘಪರಿವಾರದ ಕಡೆಯಿಂದ ನಡೆದ 'ವಿರಾಟ್ ಹಿಂದೂ ಸಮಾಜೋತ್ಸವ'ದ ವಿರುದ್ಧವೂ ಅತ್ಯಂತ ಸಹಜವಾಗಿಯೇ ಕೆಲವು ಜನ ಪ್ರತಿಭಟನೆ ಮಾಡಿದ್ದುವು. ಆ ಮೂಲಕ ತಮ್ಮ 'ಪ್ರತಿಭಟನಾ ಹಕ್ಕ'ನ್ನು ಚಲಾಯಿಸಿದ್ದವು. ಆದರೆ ಇ ಕಾರ್ಯಕ್ರಮಗಳ ಕಾರಣದಿಂದ ಸಮಾಜದಲ್ಲುಂಟಾದ ಪರಿಣಾಮಗಳ ಕುರಿತು, ಯಾವ ಪ್ರತಿಭಟನಾಕಾರರಾಗಲೀ , ವಿಚಾರವಾದಿಗಲಾಗಲೀ ಚಿಂತನೆ ನಡೆಸುವ ಪ್ರಯತ್ನ ಮಾಡಲಿಲ್ಲ. ಸಮಾಜಕ್ಕೆ ಒಳಿತನ್ನು ಮಾಡುವ ಮನಸ್ಸಾಗಲೀ ಅಥವಾ ಒಳಿತು ಮಾಡುವವರ ಬಗೆಗೆ ಸಹ್ಯವಾಗಲೀ ಇದ್ದಂತಿಲ್ಲ!

ನಡೆದ ಎಲ್ಲ 'ಹಿಂದೂ ಸಮಾಜೋತ್ಸವ'ಗಳಲ್ಲಿ ಅತ್ಯಂತ ಮಹತ್ವದ ವಿಷಯವಾಗಿ ಅಸ್ಪೃಶ್ಯತೆಯನ್ನು ವಿರೋಧಿಸಲಾಯಿತು. ಸಮಾಜದಲ್ಲಿನ ನೂರಾರು ಮಠಾಧೀಷರನ್ನು ಒಂದೇ ವೇದಿಕೆಯಡಿ ಕರೆತಂದು, ಸಮಾಜದ ಎಲ್ಲ ಸಮುದಾಯಗಳಿಗೆ ಕರೆ ನೀಡಿಸಲಾಯಿತು. ಈ ಕಾರಣದಿಂದ 'ಹಿಂದೂ ಸಮಾಜ'ದ ಮೇಲೆ ನಂಬಿಕೆ ಇರುವ ಲಕ್ಷಾಂತರ ಮಂದಿಗೆ ಅಸ್ಪೃಶ್ಯತೆಯನ್ನು ದೂರಗೊಳಿಸುವ ಧೈರ್ಯ ಬಂತು. ಈ ಪರಿಣಾಮಗಳು ಸಾಕಷ್ಟು ಪ್ರಮಾಣದಲ್ಲಿ ಅಕ್ಷರಶಃ ಸಮಾಜದಲ್ಲಿ ಆಚರಣೆಗೆ ಬಂತು.

ಮೆಲ್ವರ್ಗವೆಂಬ ವರ್ಗಕ್ಕೆ ಸೇರಿದ ಯುವಕನೊಬ್ಬ ಬೆಂಗಳೂರಿನಲ್ಲಿ ಮನೆಯೊಂದನ್ನು ಬಾಡಿಗೆಗೆ ಹುಡುಕುತ್ತಿದ್ದ. ಆದರೆ ಸಿಗುತ್ತಿದ್ದ ಎಲ್ಲ ಮನೆಯಅ ಸುತ್ತ-ಮುತ್ತ ತನ್ನ ಸಮುದಾಯದವರಿಲ್ಲ ಎಂಬ ಒಂದೇ ಕಾರಣಕ್ಕೆ ಆ ಎಲ್ಲ ಮನೆಗಳನ್ನು ತಿರಸ್ಕರಿಸಿದ್ದ. ಆದರೆ, 'ವಿರಾಟ್ ಹಿಂದೂ ಸಮಾಜೋತ್ಸವ'ದ ನಂತರ ಅದೇ ಯುವಕ ತಾನೆ ಸ್ವಯಂ ಪ್ರೇರಿತನಾಗಿ ತಾನು ತಿರಸ್ಕರಿಸಿದ ಮನೆಗಳಲ್ಲೊಂದನ್ನು ಆಯ್ಕೆ ಮಾಡಿಕೊಂಡು ಜೀವನ ನಡೆಸುತ್ತಿದ್ದಾನೆ.

ಬೆಂಗಳೂರು ನಗರದ ಪ್ರಮುಖ ಬಡಾವಣೆಯೊಂದರಲ್ಲಿ ವೈದಿಕ ಪರಂಪರೆಯಲ್ಲಿ ಬೆಳೆದ ಕುಟುಂಬವೊಂದು ತಿಂಗಳಲ್ಲಿ ಒಮ್ಮೆ, ತಮ್ಮನ್ನು ಯಾರು ದಲಿತರು ಎಂದು ಕರೆದುಕೊಳ್ಳುತ್ತಾರೋ ಅವರಂತಹವರಲ್ಲಿ ಒಬ್ಬರನ್ನು ಮನೆಗೆ ಕರೆದು ಭೋಜನವನ್ನು ಉಣಬಡಿಸುವ ಸಂಪ್ರದಾಯವನ್ನು ಪ್ರಾರಂಭಿಸುವ ಮಟ್ಟಿಗೆ 'ವಿರಾಟ್ ಹಿಂದೂ ಸಮಾಜೋತ್ಸವ' ಪರಿಣಾಮ ನೀಡಿದೆ!

ನಮ್ಮೂರಿನಲ್ಲಿ 'ಶೂದ್ರರ ಬೀದಿ', 'ಹೊಲೆಯರ ಬೀದಿ' ಎಂದು ಕರೆಯುತ್ತಿದ್ದ ಶಾಲಾ-ಕಾಲೇಜಿನ ಮಕ್ಕಳು 'ವಿರಾಟ್ ಹಿಂದೂ ಸಮಾಜೋತ್ಸವ'ದ ನಂತರ ಅವೆಲ್ಲವನ್ನೂ 'ರೈತರ ಬೀದಿ' ಎನ್ನಲು ಪ್ರಾರಂಭಿಸಿದ್ದಾರೆ. ಅಕಸ್ಮಾತ್ ತಮ್ಮ ತಂದೆ-ತಾಯಿ ಬಾಯಿ ತಪ್ಪಿ ಹೇಳಿದರೂ ಮಕ್ಕಳು ಅವರಿಗೆ 'ಬುದ್ಧಿ' ಹೇಳುತ್ತಾರೆ!

ತಾನು ಕೆಳವರ್ಗಕ್ಕೆ ಸೇರಿದವ ಎಂಬ ಒಂದೇ ಕಾರಣಕ್ಕೆ ಬೇರೆ ಜನರ ಜತೆ ಬೆರೆಯದಿದ್ದ ಒಬ್ಬ ಪ್ರಾಥಮಿಕ ಶಾಲಾ ವಿದ್ಯಾರ್ಥಿ 'ವಿರಾಟ್ ಹಿಂದೂ ಸಮಾಜೋತ್ಸವ'ದ ನಂತರ ತನ್ನ ಕೀಳರಿಮೆಯನ್ನು ಬಿಟ್ಟು, ಎಲ್ಲರ ಜತೆ ಮುಕ್ತ ಮನಸ್ಸಿನಿಂದ ಬೆರೆತು ಆಟವಾಡುತ್ತಿದ್ದಾನೆ!

ಈ ಎಲ್ಲ ಸತ್ಪರಿಣಾಮಗಳನ್ನು ಮುಕ್ತ ಮನಸ್ಸಿನಿಂದ ಸ್ವಾಗತಿಸುವ ತಾಕತ್ತು, ಪ್ರಾಮಾಣಿಕತೆ, ಸಮಾಜದ ಬಗೆಗೆ ನಿಷ್ಥೆಯಂತಹ ಗುಣಗಳು ತಥಾಕಥಿತ ಬುದ್ಧಿಜೀವಿಗಳಿಗೆ, ಪ್ರಗತಿಪರರಿಗೆ, ವಿಚಾರವಾದಿಗಳಿಗೆ, ಜಾತ್ಯಾತೀತವಾದಿಗಳಿಗಿದೆಯೇ?

Feb 20, 2009

ಬಿಜೆಪಿಗೆ 'ವೈಯಕ್ತಿಕ ಚಾರಿತ್ರ್ಯ'ದ ಕೊರತೆ

ದೇಶದ ಔನ್ನತ್ಯದ ಬಗೆಗೆ ಕಿಂಚಿತ್ತಾದರೂ ಕಳಕಳಿಯಿದ್ದರೆ, ದೇಶದ ಹಿತದೃಷ್ಟಿಯಿಂದ ಬಿಜೆಪಿಯ ಪ್ರತಿಯೊಬ್ಬ ಕಾರ್ಯಕರ್ತನೂ ತನ್ನ ವೈಯಕ್ತಿಕ ಚಾರಿತ್ರ್ಯದ ವಿಷಯದಲ್ಲಿ ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಇದೆ.

ಪ್ರಸ್ತುತ ರಾಜಕೀಯ ವ್ಯವಸ್ಥೆಯಲ್ಲಿ ಹಾಗು ಇರುವ ಹಲವಾರು ಪಕ್ಷಗಳಲ್ಲಿ, 'ರಾಷ್ಟ್ರೀಯ ಚಾರಿತ್ರ್ಯ'ದ ಕುರಿತಾಗಿ ಸಾಸಿವೆಕಾಳಿನಷ್ಟಾದರೂ ವಿಶ್ವಾಸ ಮೂಡಿಸಿರುವ ಬಿಜೆಪಿ, ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಅಧಿಕಾರದ ಚುಕ್ಕಾಣಿ ಹಿಡಿಯಲು ಸಾಧ್ಯವಾಗಿದೆ. ಆದರೆ ಬಿಜೆಪಿ ತನ್ನ ಅಭ್ಯರ್ಥಿಗಳಲ್ಲಿ, ತನ್ನ ಕಾರ್ಯಕರ್ತರಲ್ಲಿ ಉತ್ತಮ ಚಾರಿತ್ರ್ಯ ನಿರ್ಮಾಣ ಮಾಡುವಲ್ಲಿ ವಿಫಲವಾಗಿದೆ.

ಈಗಾಗಲೇ 'ದುಷ್ಶಾಸಕ' ಎಂದೇ ಪ್ರಸಿದ್ಧಿಯಾಗಿರುವ, ಶಾಸಕರ ಸ್ಥಾನಮಾನವನ್ನು ಮೂರು ಕಾಸಿಗೆ ಹರಾಜು ಹಾಕಿರುವ, ಬಿಜೆಪಿ ಶಾಸಕ ಸಂಪಂಗಿಯ ಹಗರಣ, ಸಮಾಜದಲ್ಲಿ ಶಾಸಕರಾದಿಯಾಗಿ ಪ್ರತಿಯೊಬ್ಬ ಮತದಾರನಿಗೂ ಎಚ್ಚರಿಕೆಯ ಸೂಚನೆ ನೀಡಿದೆ.

ಈ ಹಗರಣದಿಂದ ಪಾಠ ಕಲಿತು, ತುತ್ತತುದಿಯ ಕಾರ್ಯಕರ್ತನಿಂದ ಹಿಡಿದು ಪ್ರತಿಯೊಬ್ಬ ಅಧಿಕಾರಸ್ಥರವರೆಗಿನ ಎಲ್ಲರಲ್ಲೂ ಉತ್ತಮ 'ವೈಯಕ್ತಿಕ ಚಾರಿತ್ರ್ಯ'ದ ನಿರ್ಮಾಣಕ್ಕೆ ಪ್ರಥಮ ಆದ್ಯತೆ ನೀಡಿ ಹಾಗು ಆ ನಂತರ ಉತ್ತಮ 'ರಾಷ್ಟ್ರೀಯ ಚಾರಿತ್ರ್ಯ'ದ ನಿರ್ಮಾಣದ ಮುಖಾಂತರ, ಬಿಜೆಪಿ ಹಾಗು ಇತರ ಎಲ್ಲ ಪಕ್ಷಗಳೂ ತಮ್ಮ ಬಲವರ್ಧನೆಯ ಕಾರ್ಯದಲ್ಲಿ ತೊಡಗಬೇಕು. ಆಗ ಮಾತ್ರ ಪ್ರತಿಯೊಬ್ಬ ರಾಜಕೀಯ ವ್ಯಕಿಯೂ ಭವ್ಯ ಭಾರತದ ನಿರ್ಮಾಣದಲ್ಲಿ ತನ್ನದೇ ಆದ ಕೊಡುಗೆಯನ್ನು ನೀಡಲು ಸಾಧ್ಯ.

ಉತ್ತಮ 'ವೈಯಕ್ತಿಕ ಚಾರಿತ್ರ್ಯ'ದ ಅನುಪಸ್ಥಿತಿಯಲ್ಲಿ 'ರಾಷ್ಟ್ರೀಯ ಚಾರಿತ್ರ್ಯ' ಪೂರ್ಣ ಸದುದ್ದೇಶದಿಂದ ಕೂಡಿರುವುದಿಲ್ಲ.

Feb 11, 2009

ನರೇಂದ್ರ ಮೋದಿಯಂತಹ ವ್ಯಕ್ತಿ ಬಿಜೆಪಿಗೇ ಆದರ್ಶವಾಗಲಿಲ್ಲವಲ್ಲ!

ದೇಶದ ಅತ್ಯುತ್ತಮ ಮುಖ್ಯಮಂತ್ರಿ ಎಂದು ತಮ್ಮ ವಿರೋಧಿ ಸಮೂಹದಿಂದಲೇ ಸೈ ಎನಿಸಿಕೊಂಡ ನರೇಂದ್ರ ಮೋದಿಯವರು ಬಿಜೆಪಿಯ ಮುಖ್ಯಮತ್ರಿಯಾಗಿದ್ದರೂ, ಅವರಲ್ಲಿರುವಂತಹ ರಾಜ್ಯದ ಅಭಿವೃದ್ಧಿಯ ಕುರಿತಾದ ಕನಸುಗಳು ಹಾಗು ಅವುಗಳನ್ನು ಆಚರಣೆಗೆ ತರುವಲ್ಲಿರುವನತಹ ನಿಷ್ಠೆ ದೇಶದ ಇನ್ಯಾವ ಮುಖ್ಯಮಂತ್ರಿಗೂ ಇಲ್ಲದಿರುವುದು, ಅದರಲ್ಲೂ ಯಾವ ಬಿಜೆಪಿಯ ಮುಖ್ಯಮಂತ್ರಿಗೂ ಇಲ್ಲದಿರುವುದು ದುರದೃಷ್ಟಕರ!

ರಾಜ್ಯದ ಅಭಿವೃದ್ಧಿಗೆ ನಿಮ್ಮ ಸರ್ಕಾರ ಏನು ಮಾಡಿದೆ, ಆಶ್ವಾಸನೆಗಳನ್ನು ಹೊರತುಪಡಿಸಿ ಎಂದು ಮೋದಿಯವರನ್ನು ಕೇಳಿದರೆ, ಕನಿಷ್ಠ ೪ ಗಂಟೆಗಳ ಕಾಲ ನಿರರ್ಗಳ ವರದಿಯನ್ನು ನೀಡುತ್ತಾರೆ, ಅಗತ್ಯ ದಾಖಲೆಗಳ ಸಮೇತ. ಆದರೆ ಇನ್ಯಾವುದೇ ಬಿಜೆಪಿಯ ಮುಖ್ಯಮಂತ್ರಿಗಳನ್ನೇ ಕೇಳಿದರೂ ಅರ್ಧ ಗಂಟೆ ದಾಟುವುದಿಲ್ಲ, ಆಶ್ವಾಸನೆಗಳ ಸಮೇತ!

ನರೇಂದ್ರ ಮೋದಿಯವರನ್ನು ಹೊರತುಪಡಿಸಿ ಉಳಿದೆಲ್ಲ ಮುಖ್ಯಮಂತ್ರಿಗಳು ಮುಂದಿನ ಚುನಾವಣೆಗಳನ್ನು ಮನದಲ್ಲಿರಿಸಿಕೊಂಡು ಜನಾಕರ್ಷಣೆಯ ಕಾರ್ಯಕ್ರಮಗಳಿಗೆ ಒತ್ತು ನಿದುತ್ತಿದ್ದಾರೆಯೇ ಹೊರತು, ಅಭಿವೃದ್ಧಿಯ ಕನಸೂ ಯಾರಿಗೂ ಇಲ್ಲ.

ನರೇಂದ್ರ ಮೋದಿಯವರ ಕಛೇರಿಯಲ್ಲಿ ವಿಲೇವಾರಿಯಾಗದ ಕಡತಗಳು ಇದ್ದರೆ, ಬೇರೆಡೆ ಓಡಾಡಲಾಗದ ರೀತಿಯಲ್ಲಿ ಬರೇ ವಿಲೇವಾರಿಯಾಗದ ಕಡತಗಳಿಂದಲೇ ಕಛೇರಿಗಳು ತುಂಬಿರುತ್ತದೆ.

ಹಿಂದಿನ ಸರ್ಕಾರ ಗಬ್ಬೆಬ್ಬಿಸಿ ಹೋದುದನ್ನು ಸರಿಪಡಿಸಿ ಅಭಿವೃದ್ಧಿಯ ದಿಕ್ಕಿನಲ್ಲಿ ಸಾಗುವುದು ಕೊಂಚ ಸಮಯ ಹಿಡಿಯುತ್ತಾದರೂ, ಬರೇ ರಾಜ್ಯವನ್ನಾಳುವ ದೃಷ್ಟಿಕೋನ ಬಿಟ್ಟು ರಾಜ್ಯದ ಅಭಿವೃದ್ಧಿಯೆಡೆಗಿನ ಬಗೆಗೆ ತಮ್ಮ ನಿಷ್ಥೆ ತೋರಿಸುವಲ್ಲಿ ಉಳಿದ ಎಲ್ಲರು ವಿಫಲರಾಗಿದ್ದಾರೆ. ಬರೇ ಎರಡು ಜತೆ ಜುಬ್ಬಾ-ಪೈಜಾಮಗಳನ್ನುಇಟ್ಟುಕೊಂಡು ಜೀವನ ಸಾಗಿಸುವ ಜಾರ್ಜ್ ಫರ್ನಾಂಡಿಸ್ ರವರು, ನಿಮಿಷಕ್ಕೆರಡು ಸೂಟುಗಳನ್ನು ತೊಟ್ಟು ಕ್ಯಾಮೆರಾಗಳಿಗೆ ಪೋಸು ಕೊಡುವ ಇನ್ಯಾವ ಎನ್ ಡಿಎ ಯ ಇತರರಿಗೆ ಆದರ್ಶವಾಗುವುದೇ ಇಲ್ಲ!