ಒಂದು ಭಾನುವಾರ ನನ್ನೊಬ್ಬ ಸಹೋದ್ಯೋಗಿಯ ಬೈಕ್ ಕೋರಮಂಗಲದ ಬಳಿ ಕೆಟ್ಟು ನಿಂತಿತು.
ಅವನಿಗಿರುವ ಮಾಹಿತಿಯ ಆಧಾರದ ಮೇಲೆ ಸಮಸ್ಯೆ ಕಠಿಣವಿರಬಹುದು ಎಂದೆನಿಸಿ ಅವತ್ತೇ ರಿಪೇರಿಗೆ ಕೊಡುವ
ಎಂದು ಹತ್ತಿರದಲ್ಲಿ ರಿಪೇರಿ ಅಂಗಡಿಯನ್ನು ಸಾಕಷ್ಟು ಹಡುಕಲು ಆಡುಗೋಡಿ ಪೊಲೀಸ್ ಠಾಣೆಯ ಬಳಿ ಒಬ್ಬ
ಮೆಕ್ಯಾನಿಕ್ ಕಾಣಿಸಿದ. ಸದ್ಯ ಭಾನುವಾರವಾದರೂ ಒಬ್ಬ ಸಿಕ್ಕಿದನಲ್ಲ ಎಂದು ಸಮಾಧಾನದೊಂದಿಗೆ ಗಾಡಿಯನ್ನು
ರಿಪೇರಿಗೆ ಬಿಟ್ಟ.
ಕೆಲ ಸಮಯದ ನಂತರ
ಆ ಮೆಕ್ಯಾನಿಕ್ ಫೋನ್ ಮಾಡಿ 'ಸರ್, ಎಂಜಿನ್
ನ ಹೊರಗಡೆ ಇರುವ ಕಾಯಿಲ್ ಹೋಗಿದೆ. 3500 ರೂಪಾಯಿ ಆಗುತ್ತೆ ರಿಪೇರಿಗೆ' ಅಂತ ಶಾಕ್ ಕೊಟ್ಟ...! ನನ್ನ ಸಹೋದ್ಯೋಗಿಯು ಕೆಲ
ಹೊತ್ತು ಯೋಚಿಸಿ, ಭಾನುವಾರವಾದ್ದರಿಂದ ಬೇರೆ ಯಾವುದೇ
ಮೆಕ್ಯಾನಿಕ್ ಅಂಗಡಿಗಳು ಕಾಣಿಸದೆ ಶೋರೂಂಗಳೂ ತೆಗೆದಿರದೇ ವಿಧಿಯಿಲ್ಲದೇ ಅವನ ಬಳಿಯೇ ರಿಪೇರಿಗೆ ಒಪ್ಪಿಗೆಯಿತ್ತು
ಬಂದ.
ಮಾರನೇ ದಿನ ಅಂದರೆ
ಸೋಮವಾರ ಹೊಸ ಪಾರ್ಟ್ಸ್ ಅನ್ನು ಹಾಕಿದ ಯಾವ ಮಾಹಿತಿಯೂ ನೀಡದೆ, ಹಳೆಯ ಪಾರ್ಟ್ಸ್ ಅನ್ನೂ ತೋರಿಸದೆ,
ಹೊಸ ಪಾರ್ಟ್ಸ್ ನ ರಶೀತಿಯನ್ನು ನೀಡದೆ ಗಾಡಿಯನ್ನು ರಿಪೇರಿ ಮಾಡಿ ಫೋನ್ ಮಾಡಿದಾಗ ಅನುಮಾನ ಬಂದು
ಷೋರೋಮ್ ಗೆ ಫೋನ್ ಮಾಡಿ ವಿಚಾರಿಸಿದಾಗ ಬೆಲೆ 1500 ರೂಪಾಯಿ
ಎಂದಾಗ ಮತ್ತೊಂದು ಶಾಕ್ ...!
ಆಮೇಲೆ ನನಗೆ ವಿಷಯ
ಗೊತ್ತಾಗಿ ನಾನು ನನ್ನ ಕೆಲವು ಸ್ನೇಹಿತರ ಬಳಿ ಕೇಳಿದಾಗಲೂ ರಿಪೇರಿ ಖರ್ಚು 1500-2000 ವರೆಗೂ ಆಗಬಹುದು ಎಂದು ತಿಳಿದು
ವಿಚಾರಿಸಲು ಹೋಗಿ ಅವನು ಪ್ರತಿಕ್ರಿಯಿಸಿದ ರೀತಿ ನೋಡಿ ನನಗೆ ಖಚಿತವಾಯಿತು ಅವನು ಮಾಡಿರುವ ಮೋಸ. ಅವನ
ಮನ ಒಲಿಸಲು ಮಾಡಿದ
ಪ್ರಯತ್ನಗಳೆಲ್ಲ ವಿಫಲವಾದಮೇಲೆ ಇನ್ನೇನು ವಿಧಿಗೆ ಕೈ ಮುಗಿದು ಹೊರಡಬೇಕು ಎನ್ನುವಷ್ಟರಲ್ಲಿ 'ಯಾಕೆ ಪೋಲೀಸಿನವರಿಗೆ ಒಮ್ಮೆ ಹೇಳಬಾರದು' ಎಂದೆನಿಸಿತು. ನನ್ನ ಸಹೋದ್ಯೋಗಿಗೆ ನಂಬಿಕೆ ಇರದಿದ್ದರೂ, ಅಕಸ್ಮಾತ್ ಸಹಾಯವಾದರೂ ಅದೇ ಹಣವನ್ನ ಲಂಚವಾಗಿ ಕೊಡಬೇಕಾದ
ಪರಿಸ್ಥಿತಿ ಬರುತ್ತದೆಂದು ಹಿಂದೇಟು ಹಾಕಲು, ನಾನೇ ಬಲವಂತವಾಗಿ ಅಲ್ಲೇ ಇದ್ದ ಆಡುಗೋಡಿ ಠಾಣೆಗೆ ಕರೆದುಕೊಂಡು ಹೋದೆ. ಅಲ್ಲೇ ಇದ್ದ ಹೆಡ್ ಕಾನ್ ಸ್ಟೇಬಲ್
ರವರ ಬಳಿ ನಮ್ಮ ಸಮಸ್ಯೆಯನ್ನು ಹೇಳಿಕೊಂಡೆವು.
( ಸಾಂದರ್ಭಿಕ ಚಿತ್ರ )
ಹಣವನ್ನು ಕೊಟ್ಟು
ಗಾಡಿಯನ್ನು ಬಿಡಿಸಿಕೊಂಡು ಹೋಗಿ ನಂತರ ಸಹಾಯ ಕೇಳುತ್ತಿರುವುದಕ್ಕೆ ಮೊದಮೊದಲಿಗೆ ಅವರೂ ಕಷ್ಟ ಎಂದರೂ
ನಂತರ ಫೋನ್ ಮಾಡಿ ಅವನನ್ನು ಕರೆಸಿಕೊಂಡರು. ಅವನು ಬಂದವನೇ ಸ್ವಲ್ಪ ದರ್ಪ ತೋರಿ ತನಗೆ ಗೊತ್ತಿದ್ದವರ
ಹುಡುಕಲು ಪ್ರಯತ್ನಿಸಿದಾಗ ಇನ್ನು ಕೋಪಗೊಂಡ ಹೆಡ್
ಕಾನ್ ಸ್ಟೇಬಲ್ ಸಾಕಷ್ಟು ಬೈದು ಹೆದರಿಸಿ ನಮಗೆ ಕೊನೆಗೂ 1000 ರೂಪಾಯಿಗಳನ್ನು ಕೊಡಿಸಿದರು.
ಅಂದುಕೊಂಡ
ಹಾಗೆ ನಮ್ಮ ಮುಗ್ಧತೆ ಪ್ರದರ್ಶನವಾಗಿ ಹಾಗು ನಾವು ಮೋಸ ಹೋದವರಾದ್ದರಿಂದ ಪೋಲೀಸಿನವರು ನಮ್ಮಿಂದ ಏನನ್ನೂ
ಅಪೇಕ್ಷಿಸದೆ, ಇನ್ಮುಂದೆ ಮೋಸ ಹೋಗಬೇಡಿ ಎಂದು ಎಚ್ಚರಿಸಿ ನಮ್ಮನ್ನು ಬೀಳ್ಕೊಟ್ಟರು.