Apr 30, 2014

ವಿವೇಕಾನಂದ ಶಿಲಾಸ್ಮಾರಕದ 'ಅದ್ಭುತ'ಗಾಥೆ - ಭಾಗ ೧

(ಕನ್ಯಾಕುಮಾರಿಯಲ್ಲಿನ 'ಸ್ವಾಮಿ ವಿವೇಕಾನಂದ ಶಿಲಾಸ್ಮಾರಕ'ದ ಅದ್ಭುತಗಾಥೆಯನ್ನು ಓದುವುದು, ಮನನ ಮಾಡುವುದು ಒಂದು ಪುಣ್ಯದ ಹಾಗೂ ಪ್ರೇರಣಾದಾಯಿ ಕೆಲಸವಾಗಿದ್ದು ಅದನ್ನು ನನ್ನ ಬ್ಲಾಗಿನಲ್ಲಿ ಶಾಶ್ವತವಾಗಿ ಇರಿಸಿಕೊಳ್ಳುವ ನಿಟ್ಟಿನಲ್ಲಿ ವರ್ಷದ ಹಿಂದೆ ಹೊಸದಿಗಂತದಲ್ಲಿ ಪ್ರಕಟವಾದ ದೇವೇಂದ್ರ ಸ್ವರೂಪ್ ರವರ ಲೇಖನಮಾಲೆಯನ್ನು ಸಂಕಲನಮಾಡಿ ಸಂಕ್ಷಿಪ್ತವಾಗಿ ಇಲ್ಲಿ ಬರೆದಿಟ್ಟುಕೊಳ್ಳುವ ಪ್ರಯತ್ನ)


1963ರಲ್ಲಿ ಸ್ವಾಮಿ ವಿವೇಕಾನಂದರ ಜನ್ಮಶತಾಬ್ದಿಯನ್ನು ವರ್ಷವಿಡೀ ಆಚರಿಸುವ ಯೋಜನೆಯನ್ನು ಆರಂಭಿಸಲಾಯಿತು. ಆಗ ತಮಿಳುನಾಡಿನಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಾಂತ ಪ್ರಚಾರಕರಾದ ದತ್ತಾಜಿ ಡಿಡೋಲ್ಕರ್ ರವರ ಪ್ರೇರಣೆಯಂತೆ ಸ್ವಾಮಿಜಿಯವರ ಪ್ರತಿಮೆಯನ್ನೂ ಸ್ಥಾಪಿಸುವ ವಿಚಾರವೂ ಮೂಡಿಬಂದಿತು. ಕನ್ಯಾಕುಮಾರಿಯ ಪ್ರತಿಷ್ಟಿತ ನಾಗರೀಕರ ಸ್ಥಾನೀಯ ಸಮಿತಿ ಕೂಡ ರಚಿತವಾಯಿತು. ರಾಮಕೃಷ್ಣ ಮಿಶನ್ ನ ಒಬ್ಬ ಪ್ರಭಾವಶಾಲಿ ಸನ್ಯಾಸಿ ಸ್ವಾಮಿ ಚಿದ್ಭಾವಾನಂದರೂ ಇದಕ್ಕೆ ಬೆಂಬಲವಾಗಿ ನಿಂತರು. ಆದರೆ ತಮಿಳುನಾಡಿನ ಹಿಂದೂಗಳ ಈ ಯೋಜನೆಯ ಅರಿವಾಗುತ್ತಲೇ ಕ್ಯಾಥೊಲಿಕ್ ಚರ್ಚ್ ಇದಕ್ಕೆ ವಿರುಧ್ಧವಾಗಿ ನಿಂತಿತು. ಅದಾಗಲೇ ತನ್ನ ಸುಧೀರ್ಘ ಪ್ರಯತ್ನದ ಫಲವಾಗಿ ಕನ್ಯಾಕುಮಾರಿ ಕ್ಷೇತ್ರದ ಬಹುಪಾಲು ಜನರನ್ನು ಕ್ರೈಸ್ತ ಮತಕ್ಕೆ ಮತಾಂತಿರಸಲಾಗಿತ್ತು. ಈ ಬಹುಸಂಖ್ಯಾತ ಜನರ ಬೆಂಬಲದಿಂದಾಗಿಯೇ ವಿವೇಕಾನಂದರ ಶಿಲೆಗೆ 'ಸಂತ ಜೇವಿಯರ್ ಶಿಲೆ' ಎಂದು ನಾಮಕರಣ ಮಾಡಿತು. 16ನೆಯ ಶತಮಾನದಲ್ಲಿ ಜೇವಿಯರ್ ಈ ಶಿಲೆಯ ಬಳಿ ಬಂದಿದ್ದರೆಂದು ವಾದಿಸಿತ್ತಲ್ಲದೆ ಅದರ ಮೇಲೆ ತನ್ನ ಹಕ್ಕನ್ನು ಸ್ಥಾಪಿಸಲು ಶಿಲೆಯ ಮೇಲೆ ತನ್ನ 'ಕ್ರಾಸ್' ಚಿಹ್ನೆಯ ಪ್ರತಿಮೆಯನ್ನೂ ಸ್ಥಾಪಿಸಿದರು. ಚರ್ಚ್ ನ ಪ್ರಭಾವದಿಂದಾಗಿ ಕನ್ಯಾಕುಮಾರಿಯ ಮತಾಂತರಿತ  ಕ್ರೈಸ್ತ ನಾವಿಕರು ಹಿಂದೂ ಕಾರ್ಯಕರ್ತರನ್ನು ಸಮುದ್ರತಟದಿಂದ ಶಿಲೆಯ ಬಳಿಗೆ ಕೊಂಡೊಯ್ಯಲು ನಿರಾಕರಿಸಿದರು. ಈ ಬಹಿಷ್ಕಾರವನ್ನು ಎದುರಿಸುವುದಕ್ಕಾಗಿ ಬಾಲನ್ ಹಾಗು ಲಕ್ಷ್ಮಣರಂತಹ ಅನೇಕ ವೀರನಾವಿಕ ಸ್ವಯಂಸೇವಕರು ಕನ್ಯಾಕುಮಾರಿಗೆ ಹೋಗಿ ತಲುಪಿದರು.


ತಮಿಳುನಾಡಿನ ಕಾಂಗ್ರೆಸ್ ಸರ್ಕಾರವು 1962 ರ ಅಕ್ಟೋಬರ್ 3 ರಂದು ಸೆಕ್ಷನ್ 144 ವಿಧಿಸುವುದರ ಮೂಲಕ ಸಾರ್ವಜನಿಕ ಆಂದೋಲನದ ಬಾಗಿಲುಗಳನ್ನೇ ಮುಚ್ಚಿತು. ತಮಿಳುನಾಡಿನಲ್ಲಿ ಆಗ ಕಾಂಗ್ರಸ್ ನ ಮುಖ್ಯಮಂತ್ರಿಯಾಗಿದ್ದ ಭಕ್ತವತ್ಸಲಂರವರು ಧಾರ್ಮಿಕ ಪ್ರವೃತ್ತಿ ಉಳ್ಳವರಾಗಿದ್ದರು. ಅವರು ಕಂಚಿ ಕಾಮಕೋಟಿ ಪೀಠದ ಪರಮಾಚಾರ್ಯರಾದ ಶ್ರೀ ಚಂದ್ರಶೇಖರ ಸರಸ್ವತಿ ಸ್ವಾಮಿಜಿಯವರ ಬಗ್ಗೆ ಅಗಾಧ ಶ್ರಧ್ಧೆ  ಉಳ್ಳವರಾಗಿದ್ದರು. ಆದರೂ ಕ್ರೈಸ್ತರ ವೋಟ್ ಬ್ಯಾಂಕ್ ಲಾಲಸೆಯಿಂದ ಸಂಕುಚಿತ ಪಕ್ಷಸ್ವಾರ್ಥಕ್ಕಾಗಿ ಅವರು ಚರ್ಚ್ ಗೆ ಅಸಮಾಧಾನ ಉಂಟುಮಾಡಲು ಸಿಧ್ಧರಿರಲಿಲ್ಲ. ಇಂತಹ ವಿಷಮ ಸ್ಥಿತಿಯನ್ನು ಸಮರ್ಥವಾಗಿ ಎದುರಿಸುವುದಕ್ಕಾಗಿ ದತ್ತಾಜಿ ಡಿಡೋಲ್ಕರ್ ರವರ ಪ್ರೇರಣೆಯಂತೆ 1963ರ ನವೆಂಬರ್ ನಲ್ಲಿ ಕನ್ಯಾಕುಮಾರಿಯ ಜಿಲ್ಲಾ ಸಮಿತಿಯನ್ನು ವಿಸ್ತರಿಸಿ ಕೇರಳದ ಮುಖ್ಯ ನಾಯರ್ ನೇತಾರರಾದ ಶ್ರೀ ಮನ್ಮಥ ಪದ್ಮನಾಭರ ಅಧ್ಯಕ್ಷತೆಯಲ್ಲಿ 'ಅಖಿಲ ಭಾರತ ವಿವೇಕಾನಂದ ಶಿಲಾಸ್ಮಾರಕ ಸಮಿತಿ'ಯನ್ನು ರಚಿಸಲಾಯಿತು. 

1963ರ ಜನವರಿ 13ರಿಂದ ಆರಂಭವಾಗಿ ಸ್ವಾಮಿ ವಿವೇಕಾನಂದರ ಜನ್ಮಶತಾಬ್ದಿ ವರ್ಷವು 1964ರ ಜನವರಿಯಲ್ಲಿ ಪೂರ್ಣಾಹುತಿಯೊಂದಿಗೆ ಆ ಬಂಡೆಗಲ್ಲಿನ ಮೇಲೆ ವಿವೇಕಾನಂದರ ಪ್ರತಿಮೆಯನ್ನು ತಾವು ಖಂಡಿತವಾಗಿಯೂ ನಿರ್ಮಿಸಲಿದ್ದೇವೆ ಎಂದು ಈ ಸಮಿತಿಯು ಆ ಸಂದರ್ಭದಲ್ಲೇ ಘೋಷಿಸಿತ್ತು. ಈ ಇಡೀ ಯೋಜನೆಯು 6 ಲಕ್ಷ ರೂಪಾಯಿಗಳ ಯೋಜನೆಯಾಗಿತ್ತು. ಇದಕ್ಕೆ ಸರ್ಕಾರವು ಸ್ವಾಮಿ ವಿವೇಕಾನಂದ ಸ್ಮಾರಕ ಹೆಸರಿನಲ್ಲಿ ಘೋಷಿಸುವಂತೆ ಮನವಿ ಮಾಡಿದ್ದರು. ಒಂದು ಶಿಲಾಲೇಖವನ್ನು ಅಲ್ಲಿ ಪ್ರತಿಷ್ಟಾಪನೆ ಮಾಡುವ ಬಗ್ಗೆಯೂ  ಮನವಿಯನ್ನಿತ್ತರು. ಮುಖ್ಯಮಂತ್ರಿ ಭಕ್ತವತ್ಸಲಂರವರು ಈ ಆಂದೋಲನದವರನ್ನು ಭ್ರಮಿತಗೊಳಿಸಲಿಕ್ಕಾಗಿ 'ವಿವೇಕಾನಂದ ಶಿಲಾ' ಎಂಬ ನಾಮಕರಣ ಒಪ್ಪಿಕೊಂಡರಲ್ಲದೆ ಶಿಲೆಯ ಮೇಲೆ ಸ್ವಾಮಿಜಿಯವರ ಆಗಮನ ಹಾಗು ಸಮಾಧಿಯ ಸತ್ಯದ ಘೋಷಣೆ ಮಾಡುವಂತಹ ಒಂದು ಶಿಲಾಲೇಖ ಸ್ಥಾಪನೆಗೂ ಅನುಮತಿ ನೀಡಿದರು. 

ಆದರೆ ಆ ಶಿಲೆಯ ಮೇಲೆ ಯಾವುದೇ ಸ್ಮಾರಕ ನಿರ್ಮಾಣ ಮಾಡಬಾರದೆಂಬ ತಮ್ಮ ನಿರ್ಣಯವನ್ನು ಮಾತ್ರ ಬದಲಿಸಲೇ ಇಲ್ಲ. ಮುಖ್ಯಮಂತ್ರಿಯವರ ನಿರ್ಣಯಕ್ಕೆ ಮಣಿದು ಸ್ವಾಮಿ ಚಿದ್ಭಾವಾನಂದಜೀಯವರು ಶಿಲೆಯ ಎದುರುಗಡೆ ಮುಖ್ಯತಟದ ಮೇಲೆ ಕೇವಲ 15 x 15 ಅಡಿಗಳ ಪ್ರಮಾಣದಲ್ಲಿ ಧ್ಯಾನ ಮುದ್ರೆಯಲ್ಲಿ ಸ್ವಾಮಿ ವಿವೇಕಾನಂದರು ಕುಳಿತಿರುವಂತಹ ಹಾಗು ಕಬ್ಬಿಣದ ಸರಳುಗಳಿಂದಾವೃತವಾದ ಸ್ಮಾರಕವೊಂದನ್ನು ನಿರ್ಮಾಣ  ಮಾಡಲು ಒಪ್ಪಿಕೊಂಡರು.

ಇಂದಿಗೂ ಅಲ್ಲಿ ಈ ಸ್ಮಾರಕವನ್ನು ನೋಡಬಹುದು. ಇತ್ತ ಅಖಿಲ ಭಾರತೀಯ ವಿವೇಕಾನಂದ ಶಿಲಾ ಸ್ಮಾರಕ ಸಮಿತಿಯು ಮುಖ್ಯಮಂತ್ರಿಯವರ ಆಶ್ವಾಸನೆಯಂತೆ 1963ರ ಜನವರಿ 17ರಂದು ಆ ಬಂಡೆಗಲ್ಲಿನ ಮೇಲೆ ಶಿಲಾ ಸ್ಮಾರಕ ಸನದನ್ನು ಸ್ಥಾಪಿಸಿತ್ತು. ಆದರೆ 1963ರ ಮೇ 16ರಂದು ಇದನ್ನು ರಾತ್ರಿಯ ಸಮಯದಲ್ಲಿ ಮುರಿದು ಸಮುದ್ರಕ್ಕೆಸೆಯಲಾಗಿತ್ತು. ಇದರಿಂದಾಗಿ ಪರಿಸ್ಥಿತಿಯು ಉದ್ವಿಗ್ನಗೊಂಡಿತು. ಚರ್ಚ್ ಹಾಗು ತಮಿಳುನಾಡಿನ ಸರ್ಕಾರದ ಸಂಯುಕ್ತ ವಿರೋಧವನ್ನು ಸ್ಥಾನೀಯರ ಸಹಕಾರದೊಂದಿಗೆ ಎದುರಿಸುವುದು ಸ್ಮಾರಕ ಸಮಿತಿಗೆ ಬಹಳ ಕಠಿಣವಾಗಿತ್ತು. ಮುಖ್ಯಮಂತ್ರಿ ಭಕ್ತವತ್ಸಲಂ ಅಭಿಪ್ರಾಯದಂತೆ ಕೇಂದ್ರ ಸರ್ಕಾರವು ಕೂಡ ಶಿಲೆಯ ಮೇಲೆ ಯಾವುದೇ ಸ್ಮಾರಕ ನಿರ್ಮಿಸುವ ಪಕ್ಷದೊಂದಿಗೆ ಸಹಭಾಗಿಯಾಗುವುದಿಲ್ಲ. ತಮಿಳುನಾಡಿನ ಸರಕಾರವಂತೂ ಕೇಂದ್ರ ಸರ್ಕಾರದ ಸಹಕಾರವಿಲ್ಲದೆ ಏನೂ ಮಾಡುವಂತಿಲ್ಲ. ಈ ಸ್ಥಿತಿಯನ್ನು ನೋಡಿದಾಗ ಇನ್ನೀಗ ಈ ಸಮಸ್ಯೆಯು ಅಖಿಲ ಭಾರತೀಯ ಪ್ರಯತ್ನದಿಂದ ಮಾತ್ರ ಪರಿಹಾರವಾಗಬಹುದೆಂದು ದತ್ತಾಜಿಯವರಿಗೆ ಹಾಗು ಸಮಿತಿಯ ಸದಸ್ಯರಿಗೆ ಅನ್ನಿಸಿತು. ಆದರೆ ಈ ಅಖಿಲ ಭಾರತೀಯ ಪ್ರಯತ್ನ ಕಾರ್ಯಗಳ ನೇತೃತ್ವ ವಹಿಸುವವರಾರು? ಎಂಬ ಪ್ರಶ್ನೆ ಉದ್ಭವಿಸಿದಾಗ ಎಲ್ಲರ ದೃಷ್ಟಿಯೂ ರಾಷ್ಟ್ರೀಯ ಸ್ವಯಂಸೇವಕ ಸಂಘ ಹಾಗು ಸ್ವಾಮಿ ವಿವೇಕಾನಂದರಬಗ್ಗೆ ಅಗಾಧ ಶ್ರಧ್ಧೆಯನ್ನು ಹೊಂದಿದ್ದ ಆರೆಸ್ಸಸ್ ನ ಸರಸಂಘಚಾಲಕರಾದ ಪರಮ ಪೂಜನೀಯ ಗುರೂಜಿಯವರತ್ತಲೇ ನೆಟ್ಟಿತ್ತು. ಆದರೆ ವಿಧಿಯು ಮೊದಲಿನಿಂದಲೇ ಇದಕ್ಕೊಂದು ಆಧಾರ ಭೂಮಿಯನ್ನು ಸಿದ್ಧಗೊಳಿಸಲಾರಂಭಿಸಿತ್ತು !

1963ರ ಮಾರ್ಚ್ ನಲ್ಲಿ ಸಂಘದ ಒಬ್ಬ ಮುಖ್ಯ  ಕಾರ್ಯಕರ್ತರಾದ ಶ್ರೀ ಏಕನಾಥ ರಾನಡೆಯವರನ್ನು ಸರಕಾರ್ಯವಾಹ ಸ್ಥಾನದಿಂದ ಮುಕ್ತಗೊಳಿಸಿ ಅಖಿಲ ಭಾರತೀಯ ಬೌಧ್ಧಿಕ್ ಪ್ರಮುಖ್ ಜವಾಬ್ದಾರಿಯನ್ನು ಅವರಿಗೆ ವಹಿಸಲಾಯಿತು. ಮಾತ್ರವಲ್ಲ ಸ್ವಾಮಿ ವಿವೇಕಾನಂದರ ಜನ್ಮಶತಾಬ್ದಿ ವರ್ಷದ ಪ್ರಯುಕ್ತ ಸಂಘದ ಸಹಕಾರದ ರೂಪದಲ್ಲಿ ಅವರ ವಿಚಾರಗಳ ಒಂದು ಸಂಕಲನವನ್ನು ಸಿಧ್ಧಪಡಿಸುವ ಕೆಲಸವನ್ನು ಅವರಿಗೆ ನೀಡಲಾಯಿತು. ಈ ಕಾರ್ಯವು ರಾನಡೆಯವರಿಗೆ ಬಹಳ ಖುಷಿಯನ್ನು ನೀಡಿತ್ತು. ತಮ್ಮ ವಿದ್ಯಾರ್ಥಿ ಜೀವನದಲ್ಲಿ ವಿವೇಕಾನಂದರ ಬಗ್ಗೆ ಅವರು ಚೆನ್ನಾಗಿ ಓದಿ ತಿಳಿದುಕೊಂಡಿದ್ದರಲ್ಲದೆ ಅವರ ಮನಸ್ಸಿನ ಮೇಲೂ ಗಾಢವಾದ ಪ್ರಭಾವವನ್ನು ಬೀರಿತ್ತು. ಶ್ರೀಗುರೂಜಿಯವರಿಂದ ಈ ನಿರ್ದೇಶನವು ಬಂದೊಡನೆ ಏಕನಾಥರು ಹರ್ಷಚಿತ್ತರಾಗಿಯೇ ಅದನ್ನು ಸ್ವೀಕರಿಸಿದ್ದರಲ್ಲದೆ ಕೊಲ್ಕೊತ್ತಾಗೆ ಹೋಗಿ ವಿವೇಕಾನಂದರ ಅಧ್ಯಯನದಲ್ಲಿ ಮುಳುಗಿ ಬಿಟ್ಟರು! ನಾಲ್ಕೈದು ತಿಂಗಳುಗಳ ತನಕ ಶ್ರೀ ರಾಮಕೃಷ್ಣ ಮಿಶನ್ ನ ಬೇಲೂರು ಮಠದಲ್ಲಿದ್ದುಕೊಂಡು ಅವರ ಸಂಪೂರ್ಣ ಚಿಂತನೆಗಳನ್ನು, ವಾಣಿಗಳನ್ನು, ಮೂರು-ನಾಲ್ಕು ಸಲ ಪಾರಾಯಣ ಮಾಡಿದರು. ಚಿಂತನೆಗಳ ಮಂಥನದಿಂದ ಅವರು ಪಡೆದುಕೊಂಡ ಅನುಭವದ ಸಾರವನ್ನು ಇಂಗ್ಲಿಷ್ ನಲ್ಲಿ 'ರೈಸಿಂಗ್ ಕಾಲ್ ಟು ಹಿಂದೂ ನೇಶನ್' ಮತ್ತು ಹಿಂದಿಯಲ್ಲಿ 'ಉತ್ತಿಷ್ಥತ ಜಾಗ್ರತ್' ಎಂಬ ಶೀರ್ಷಿಕೆಗಳಿಂದ ಶೀರ್ಷಿಕೆಗಳಿಂದ ಪ್ರಕಟಿಸಲಾಗಿದೆ.


ಶಿಲಾಲೇಖವನ್ನು ಧ್ವಂಸಗೊಳಿಸಿದ ನಂತರ ಎಚ್ಚೆತ್ತುಕೊಂಡ ಶಿಲಾಸ್ಮಾರಕ ಸಮಿತಿಯ ಅನೇಕ ಪ್ರಮುಖರು ದತ್ತಾಜಿ ಡಿಡೋಲ್ಕರ್ ರವರೊಂದಿಗೆ ನಾಗಪುರದಲ್ಲಿ ಶ್ರೀಗುರೂಜಿಯವರನ್ನು ಭೇಟಿ ಮಾಡಿದರು. ಗುರೂಜಿಯವರ ಕಣ್ಣುಗಳು ಈ ಮಹಾನ್ ಸಮಸ್ಯೆಯ ನಿವಾರಣೆಗಾಗಿ ಯೋಗ್ಯ ಪಾತ್ರವೊಂದನ್ನು ಅರಸಲಾರಂಭಿಸಿದ್ದವು. ಆದರೆ ಇದು ಕೇವಲ ಸಂಯೋಗವಲ್ಲ, ನಿಯತಿಯ ಯೋಜನೆಯೂ ಆಗಿತ್ತೇನೋ ಎಂಬಂತೆ  ಇದೇ ಸಂದರ್ಭಕ್ಕೆ ಸರಿಯಾಗಿ ಅದು ಕಾರ್ಯನಿಮಿತ್ತ ಏಕನಾಥರನ್ನು ನಾಗಪುರಕ್ಕೆ ಬರುವಂತೆ ಮಾಡಿತು! ಏಕನಾಥರು ಅದೇ ದಿನ ಮಧ್ಯಾಹ್ನ ನಾಗಪುರದಿಂದ ಬೇರೆಡೆಗೆ ಹೋಗುವುದಿತ್ತು. ಆಗ ಶ್ರೀ ಗುರೂಜಿಯವರು ಏಕನಾಥರಿಗೆ ಶಿಲಾಸ್ಮಾರಕ ಸಮಿತಿಯವರ ಸಮಸ್ಯೆಯನ್ನು ತಿಳಿಸುತ್ತಾ "ನೀವು ಈ ಜವಾಬ್ದಾರಿಯನ್ನು ವಹಿಸಿಕೊಳ್ಳಲು ಸಿಧ್ಧರಿರುವಿರಾ?" ಎಂದು ಕೇಳಿದರಂತೆ. ಆದಾಗಲೇ ವಿವೇಕಾನಂದರಲ್ಲೇ ಮುಳುಗಿದ್ದ ಏಕನಾಥರು ಆ ಕೂಡಲೇ ಒಪ್ಪಿದರು. ಹಾಗು ಮೊತ್ತಮೊದಲಿಗೆ ಬೇಲೂರಿನ ಮಠಕ್ಕೆ ಬಂದು ರಾಮಕೃಷ್ಣ ಮಠದ ಅಂದಿನ ಅಧ್ಯಕ್ಷರಾಗಿದ್ದ ಸ್ವಾಮಿ ಮಾಧವಾನಂದರ ಆಶೀರ್ವಾದವನ್ನು ಬೇಡಿದರು. ಸ್ವಾಮಿ ಮಾಧವಾನಂದರೊಂದಿಗೆ ಅವರ ಸ್ನೇಹ ಬಹಳ ಹಳೆಯದು. 1963ರ ಜನವರಿ 17ರಂದು ವಿವೇಕಾನಂದರ ವಿಚಾರ ಸಂಕಲನಗಳ ಮೊದಲ ಪ್ರತಿಯನ್ನು ಸಹ ಏಕನಾಥರು ಮಾಧವಾನಂದರಿಗೇ ಅರ್ಪಿಸಿದ್ದರು. ಸ್ವಾಮಿ ಮಾಧವಾನಂದರು "ಇದು ಬಹಳ ಪುಣ್ಯದ ಕೆಲಸವಾಗಿದೆ, ನೀನಿದನ್ನು ವಹಿಸಿಕೊ. ನನ್ನ ಆಶೀರ್ವಾದವೇನು ಸ್ವತಃ ರಾಮಕೃಷ್ಣರ ಹಾಗು ವಿವೇಕಾನಂದರ ಆಶೀರ್ವಾದವೇ ಸದಾ ನಿನ್ನೊಂದಿಗಿರುತ್ತದೆ" ಎಂದರು. ಏಕನಾಥರ ಈ ಹೆಜ್ಜೆಯು ಬಹ ದೂರದರ್ಶಿತ್ವ ಪೂರ್ಣವಾಗಿತ್ತು. ರಾಮಕೃಷ್ಣ ಮಿಶನ್ ನ ಆಶೀರ್ವಾದ,  ಒಪ್ಪಿಗೆ ಪಡೆಯದೇ ಅವರು ಶಿಲಾಸ್ಮಾರಕ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಂಡರೆ, ಆಗೆಲ್ಲಾದರೂ ಪತ್ರಕರ್ತರು ಯಾರಾದರೂ  ರಾಮಕೃಷ್ಣ ಮಿಶನ್ ನವರಲ್ಲಿ ವಿಚಾರಿಸಿದರೆ ಅವರಿಗದರ ಅರಿವೇ ಇಲ್ಲವಾದರೆ ಆಗ ಅಭಿಯಾನದ ಪ್ರಾಮಾಣಿಕತೆಯ ಸಂದೇಹ ಮೂಡು ವಂತಾಗುತ್ತಿತ್ತು.

 ( ಮುಂದುವರೆಯುವುದು )