ಅಮೆರಿಕಕ್ಕೆ ಬಂದು ಸಾಕಷ್ಟು ದಿನಗಳ ನಂತರ ಹೊರಗಡೆ ಹೋಗುವ ಅವಕಾಶ ದೊರೆಯಿತು. ಇರುವ 3 ದಿನಗಳ ರಜೆಗಳಿಗೆ ನನ್ನೆರಡು ರಜೆಗಳನ್ನು ಸೇರಿಸಿ 5 ದಿನಗಳ ಕಾಲ ನ್ಯೂಯಾರ್ಕ್, ಚಿಕಾಗೊ ಹಾಗು ಅಲ್ಬನಿಗಳನ್ನು ನೋಡುವ ಸಲುವಾಗಿ ನಿರ್ಧಾರ ಮಾಡಿದೆ. ಒಬ್ಬನೇ ಆಗಿದ್ದರಿಂದ ವಿಮಾನ, ರೈಲು, ಬಸ್ ಹಾಗು ಟ್ಯಾಕ್ಸಿ ಗಳ ಸಹಾಯದಿಂದ ಒಬ್ಬನೇ ಸಾಕಷ್ಟು ಸುತ್ತಾಡಿ ಬಂದೆ. ಈ 5 ದಿನಗಳ ಪ್ರವಾಸದ ಅನುಭವವನ್ನ ಬರೆದಿಟ್ಟುಕೊಳ್ಳುವಷ್ಟು ವಿಶೇಷವಾಗಿತ್ತು.
ಜುಲೈ 4ರ ಗುರುವಾರ ಬೆಳಿಗ್ಗೆ 8.20ಕ್ಕೆ ಹಾಲೆಂಡ್ ನಿಂದ ಅಮ್ ಟ್ರಾಕ್ ರೈಲಿನಲ್ಲಿ ಚಿಕಾಗೊವಿಗೆ ಹೋಗಿ ಅಲ್ಲಿ ನನ್ನೊಬ್ಬ ಸ್ನೇಹಿತನನ್ನು ಸೇರಿ, ಭಾರತೀಯ ಹೋಟೆಲಿನಲ್ಲಿ ಊಟ ಮಾಡಿ, ಮಿಚಿಗನ್ ಲೇಕ್ ಬಳಿ ಕೆಲ ಸಮಯ ಕಳೆದು ಸಂಜೆ 5.40ರ ಸ್ಪಿರಿಟ್ ಏರ್ಲೈನ್ಸ್ ನ ವಿಮಾನದಲ್ಲಿ ನ್ಯೂಯಾರ್ಕ್ ನ ಲಗಾರ್ಡಿಯಾ ಏರ್ಪೋರ್ಟ್ ಗೆ ಹೋಗಿ ಅಲ್ಲಿ ಆತ್ಮೀಯರೊಬ್ಬರ ಮನೆಯಲ್ಲಿ ಉಳಿದು, ಶುಕ್ರವಾರ, ಶನಿವಾರ ನ್ಯೂಯಾರ್ಕನ್ನು ನೋಡಿ ಭಾನುವಾರ ಬೆಳಿಗ್ಗೆ ಆಲ್ಬನಿಗೆ ಬಸ್ ನಲ್ಲಿ ಹೋಗಿ ಅಲ್ಲಿ ನಮ್ಮ ದೊಡ್ಡಪ್ಪನವರ ಮನೆಯಲ್ಲಿ 1 ದಿನ ತಂಗಿ, ಸೋಮವಾರ ಸಂಜೆ 5 ಗಂಟೆಯ ಯುನೈಟೆಡ್ ಏರ್ಲೈನ್ಸ್ ನಲ್ಲಿ ಕ್ಲೀವ್ ಲ್ಯಾಂಡ್ ಮುಖಾಂತರ ಗ್ರಾಂಡ್ ರಾಪಿಡ್ ಗೆ ಬಂದಿದ್ದು. ಇದಿಷ್ಟು ಸಂಕ್ಷಿಪ್ತ. ಇನ್ನು ಮುಂದೆ ವಿಶೇಷ.
1. ವಿಮಾನದ ಟಿಕೆಟ್ ಬುಕ್ ಮಾಡುವಾಗ ಚಿಕಾಗೋವಿನಿಂದ ನ್ಯೂಯಾರ್ಕ್ ಗೆ ಟ್ರಾವೆಲ್ ಇನ್ಸೂರೆನ್ಸ್ ತೆಗೆದುಕೊಂಡಿದ್ದೆ. ಆದರೆ ಅಲ್ಬನಿಯಿಂದ ಗ್ರಾಂಡ್ ರಾಪಿಡ್ ಗೆ ತೆಗೆದುಕೊಂಡಿರಲಿಲ್ಲ. ವಿಮಾನ ತಡವಾದರೆ ಅಥವಾ ರದ್ದಾದರೆ ಕೆಲವು ಸೌಲಭ್ಯಗಳಿಗೆ ಸಹಾಯವಾಗುತ್ತದೆ ಎಂದು. ಆದರೆ ನಾನು ಯಾವುದಕ್ಕೆ ತೆಗೆದುಕೊಳ್ಳಲಿಲ್ಲವೋ ಅದೇ ವಿಮಾನ, ಪೂರಕವಲ್ಲದ ಹವಾಮಾನದ ಕಾರಣಕ್ಕೆ ತಡವಾಗಿ ಹೊರಟಿತು !
2. ಆಲ್ಬನಿಯಿಂದ ಗ್ರಾಂಡ್ ರಾಪಿಡ್ ಗೆ ಬರುವ ವಿಮಾನ ರಾತ್ರಿ 9 ಗಂಟೆಗೆ ತಲುಪುವುದಾಗಿತ್ತು. ಆದರೆ ಹವಾಮಾನ ವೈಪರೀತ್ಯದ ಕಾರಣಕ್ಕೆ ತಡವಾಗಿ ರಾತ್ರಿ 12ರ ಸುಮಾರಿಗೆ ತಲುಪಿ ಪಜೀತಿ ಮಾಡಿತು. ಆ ಹೊತ್ತಿನಲ್ಲಿ ಟ್ಯಾಕ್ಸಿಯಲ್ಲಿ ಹೋಗುವುದು ಬೇಡ ಎಂದು ಯೋಚಿಸಿ ಏರ್ಪೋರ್ಟ್ ಸ್ಟಾಫ್ ಒಬ್ಬರ ಬಳಿ ಹೋಗಿ 'ವಿಮಾನ ತಡವಾಗಿ ಬಂದಿದೆ. ಈ ಹೊತ್ತಿನಲ್ಲಿ ಟ್ಯಾಕ್ಸಿಯಲ್ಲಿ ಹೋಗುವ ಬದಲು ನಾಳೆ ಬೆಳಿಗ್ಗೆ ಹಾಲೆಂಡ್ ಗೆ ರೈಲಿನಲ್ಲಿ ಹೋಗುತ್ತೇನೆ. ಇಲ್ಲಿ ಏನೂ ತೊಂದರೆ ಇಲ್ಲದಿದ್ದರೆ ಈ ರಾತ್ರಿ ಏರ್ಪೋರ್ಟ್ ನಲ್ಲೆ ಉಳಿದುಕೊಳ್ಳುತ್ತೇನೆ ಎಂದು ಯೋಚಿಸುತ್ತಿದ್ದೇನೆ' ಎಂದು ಹೇಳಿದ್ದೆ ತಡ ಅಲ್ಲೇ ಇದ್ದ ಪೋಲೀಸಿನವರಿಗೆ ನನ್ನ ಪರಿಚಯಿಸಿ, ಏರ್ಪೋರ್ಟ್ ನಲ್ಲಿದ್ದ ಒಂದು ಕೊಠಡಿಗೆ ಕರೆದುಕೊಂಡು ಹೋಗಿ, ಯಾರೋ ಬಿಟ್ಟುಹೋಗಿದ್ದ ದಿಂಬನ್ನು ನನಗೆ ಕೊಟ್ಟು, ನಾಳೆ ಬೆಳಿಗ್ಗೆ ನನ್ನನ್ನು ಹತ್ತಿರದ ಬಸ್ ನಿಲ್ದಾಣಕ್ಕೆ ಕರೆದುಕೊಂಡು ಹೋಗಲು ಟ್ಯಾಕ್ಸಿಯನ್ನು ಬರಲು ಹೇಳಿ, ಅಲ್ಲಿಂದ ರೈಲ್ವೇ ನಿಲ್ದಾಣಕ್ಕೆ ಹೋಗಲು ಯಾವ ಬಸ್ ಹಿಡಿಯಬೇಕು, ಎಲ್ಲಿ ಇಳಿಯಬೇಕು ಎಂದೆಲ್ಲ ಗುರುತುಮಾಡಿ ಕೊಟ್ಟು, ಬಸ್ಸಿಗೆ ಬೇಕಾದ 1.50 ಡಾಲರ್ ಗಳನ್ನೂ ಕೈನಲ್ಲಿಟ್ಟು (ಬಸ್ ನಲ್ಲಿ ಚಿಲ್ಲರೆ ಕೊಡುವುದಿಲ್ಲ), ಎರಡು ಬಾಟಲಿ ನೀರನ್ನೂ ಕೊಟ್ಟು, ಟ್ಯಾಕ್ಸಿ ಡ್ರೈವರ್ ನಿಮ್ಮ ಮೊಬೈಲಿಗೆ ಕಾಲ್ ಮಾಡುತ್ತಾರೆ ಎಂದು ಹೇಳಿ, ಅಲ್ಲಿಯವರೆಗೂ ಆರಾಮಾಗಿ ನಿದ್ದೆ ಮಾಡಿ' ಎಂದು ಹೇಳಿ ಹೊರಟುಹೋದರು !
3. ಬೆಳಿಗ್ಗೆ 5ರ ಸುಮಾರಿಗೆ ಟ್ಯಾಕ್ಸಿ ಬಂದಿತು. ಸುಮಾರು 30-35 ವರ್ಷದ ಕರಿ ಹೆಂಗಸು. ಕಿಂಚಿತ್ ಭಯವೂ ಆಯಿತು. ಹೋಗದೇ ಇರಲಾಗುವುದಿಲ್ಲ. ದೇವರ ನೆನೆದು ಕಾರು ಹತ್ತಿದೆ. 5-6 ನಿಮಿಷದಲ್ಲೇ ಬಸ್ ನಿಲ್ದಾಣ ಬಂದಿತು. ಹಣವನ್ನು ಕೊಟ್ಟು ಇನ್ನೇನು ಹೊರಡುವಷ್ಟರಲ್ಲೇ ಆ ಹೆಂಗಸು 'ಒಬ್ಬರೇ ಇದ್ದೀರ, ಹುಷಾರು' ಎಂದು ಹೇಳಿದಾಗ ಹೇಗಾಗಿರಬೇಡ ನನಗೆ..! ನಾನು ಏನಕ್ಕೆ ಎಂದಿದ್ದಕ್ಕೆ 'ಸುತ್ತ ಮುತ್ತ ಯಾರೂ ಇಲ್ಲ. ಈ ಹೊತ್ತಿನಲ್ಲಿ ಸ್ವಲ್ಪ ಅಪಾಯ. ಹೆದರಬೇಡಿ' ಎಂದು ನನ್ನ ಭಯವನ್ನು ಇಮ್ಮಡಿ ಗೊಳಿಸಿದಳು. ಮೊದಲಿಗೆ ಇವಳ ಬಗ್ಗೆಯೇ ಹೆದರಿ ಈಗ ಇವಳಿಂದ ಬೇರೆಯವರ ಬಗ್ಗೆ ಭಯ...! 2 ನಿಮಿಷ ಅಲ್ಲೇ ಇದ್ದು, 'ಕ್ಷಮಿಸಿ, ನನಗೆ ಬೇರೆ ರಿಸೆರ್ವೆಶನ್ ಇದೆ. ನಾನು ಹೋಗಲೇಬೇಕು. ಇಲ್ಲದಿದ್ದರೆ ನಿಮ್ಮ ಬಸ್ ಬರುವವರೆಗೂ ಕಾಯುತ್ತಿದ್ದೆ. ಈ ಸ್ಪ್ರೇಯನ್ನು ತೆಗೆದುಕೊಳ್ಳಿ. ಯಾರಾದರೂ ತೊಂದರೆ ಮಾಡಲು ಬಂದರೆ ಅವರ ಮುಖಕ್ಕೆ ಇದನ್ನು ಬಳಸಿ' ಎಂದು ಹೇಳಿ ಹೋದಳು. ಹೆಚ್ಚಿದ ಅನುಮಾನ - ಆತಂಕ. ಆಮೇಲೆ ಬಂದವರೆಲ್ಲರ ಮೇಲೂ ಅನುಮಾನ. ಅದೃಷ್ಟವಶಾತ್ ಯಾರೂ ಏನೂ ತೊಂದರೆ ಮಾಡಲಿಲ್ಲ. ನಾನು ಹೊರಡಬೇಕಿದ್ದ ಬಸ್ ಬಂದಾಗಲೇ ನನಗೆ ಸಮಾಧಾನ.
4. ಇದಕ್ಕೆ ಕೆಲವು ದಿನಗಳ ಹಿಂದೆ ಇದೇ ರೀತಿಯ ಒಂದು ಅನುಭವವಾಗಿತ್ತು. ನನ್ನೊಬ್ಬ ಸಹೋದ್ಯೋಗಿಯ ಮಡದಿಯನ್ನು ಕರೆದುಕೊಂಡು ಬರಲು ನಾನು ಅವನ ಜತೆ ಗ್ರಾಂಡ್ ರಾಪಿಡ್ ಏರ್ಪೋರ್ಟ್ ಗೆ ಹೋಗಿದ್ದೆ. ಆ ದಿನವೂ ಆ ವಿಮಾನ ಬರೋಬ್ಬರಿ 3 ಗಂಟೆಗಳ ಕಾಲ ತಡವಾಗುವುದು ಖಚಿತವಾಗಿತ್ತು. ನಾನು ಬಂದದ್ದೂ ಅದೇ ವಿಮಾನ, ನಾನು ಬಂದಾಗಲೂ ತಡವಾಗಿತ್ತು. ಸಂಜೆ 9 ಗಂಟೆಗೇ ಹೋಗಿದ್ದ ನಾವು ಇನ್ನೂ 3 ಗಂಟೆಗಳ ಕಾಲ ಕಾಯಬೇಕಾಗಿತ್ತು. ಹೊಟ್ಟೆ ಬೇರೆ ಹಸಿಯುತ್ತಿತ್ತು. ಏರ್ಪೋರ್ಟ್ ಸ್ಟಾಫ್ ಬಳಿ ಹೋಗಿ 'ನಡೆದುಕೊಂಡು ಹೋಗುವ ಅಂತರದಲ್ಲಿ ಯಾವುದಾದರೂ ಹೋಟೆಲ್ ಇದೆಯಾ?' ಎಂದು ಕೇಳಿದ್ವಿ. ಅದಕ್ಕೆ ಅವರು ತುಂಬಾ ಸಂಕಟದಿಂದ ಇಲ್ಲಿ ಹತ್ತಿರದಲ್ಲಿ ಯಾವುದೂ ಇಲ್ಲ ಎಂದು ತುಂಬಾ ವಿಷಾದ ವ್ಯಕ್ತಪಡಿಸಿ ಕುಡಿಯುವುದಕ್ಕೆ ನೀರಿನ 2 ಬಾಟಲಿಗಳು, ತಿನ್ನಲು 2 ಎನರ್ಜಿ ಚಾಕೊಲೆಟ್ ಗಳನ್ನು ಕೊಟ್ಟು ಉಪಚರಿಸಿದರು!
ನಮ್ಮ ದೇಶದಲ್ಲಿ ಇವ್ಯಾವುವೂ ನಮಗೆ ಹೊಸದಲ್ಲ, ವಿಶೇಷವಲ್ಲ, ಮೋಡಿಯಲ್ಲ. ಆದರೆ ಇಂತಹ ದೇಶಗಳಲ್ಲಿ ಈ ಎಲ್ಲವೂ ಹೊಸದೇ. ಅದಕ್ಕೆ ಪ್ರವಾಸದ ಆನಂದಕ್ಕಿಂತ ಈ ವಿಶೇಷ ಅನುಭವದ ಮೋಡಿಯೇ ನನ್ನ ಮನಸ್ಸಿನಲ್ಲಿ ಅಚ್ಚುಳಿದಿದೆ.